ಜನಪದ ಕಲೆ, ಸಂಗೀತ ಎಂಬುದೇ ಉನ್ನತ ಶ್ರೇಣಿ!
ಹಾಗೆ ನೋಡಿದರೆ ಜನಪದ ಕಲೆ, ಹಾಡು, ನೃತ್ಯ, ಸಂಗೀತದಲ್ಲಿ ಎ,ಬಿ,ಸಿ ಶ್ರೇಣಿಗಳೆಂದು ಗುರುತಿಸುವುದು ಕಷ್ಟ. ಒಂದೇ ಪ್ರಕಾರದಲ್ಲಿ ಹಲವು ಧ್ವನಿ, ರಾಗ, ತಾಳ, ಸಂಯೋಜನೆಗಳೇ ಭಿನ್ನವಾಗಿರುತ್ತವೆ. ಉದಾ:ಬುರ‌್ರಕಥೆಯನ್ನು ಕುಳಿತು ಹಾಡುವವರಿದ್ದಾರೆ, ದರೋಜಿಯ ಬುರ‌್ರಕಥಾ ಈರಮ್ಮ ಹಾಡುತ್ತಿದ್ದುದು ಬಹುತೇಕವಾಗಿ ತಂಬೂರಿ, ಗಗ್ಗರಿ ಹಿಡಿದು. ಆಕೆ ಹಾಡತೊಡಗಿದರೆ ಎರಡು ರಾತ್ರಿ ಒಂದು ಹಗಲು ಕಳೆಯಬೇಕಿತ್ತು. ಅದೂ ಕುಮಾರರಾಮನ ಜನಪದ ಮಹಾಕಾವ್ಯ ಮುಗಿಯಲು. ಅಂತಹ ಶಕ್ತಿ ಮತ್ತು ಶ್ರಮ ಜನಪದ ಈರಮ್ಮನ ಕಾವ್ಯದಲ್ಲಿದೆ.
ಧಾರವಾಡ ಆಕಾಶವಾಣಿ ಕೇಂದ್ರದ ಬಸು ಬೇವಿನಗಿಡದ, ಶರಣಬಸವ ಚೌಳಿನ್ ಅವರ ಕಾಳಜಿ ಮತ್ತು ಪ್ರೀತಿಯಿಂದಾಗಿ ಒಮ್ಮೆ ಜನಪದ ಕಲಾವಿದರ ಆಡಿಷನ್ ಆಯ್ಕೆಯಲ್ಲಿ ನಾನು, ಹಿರಿಯ ಬರಹಗಾರ ಆನಂದ ಪಾಟೀಲರು ನಿರ್ಣಾಯಕರಾಗಿ ಪಾಲ್ಗೊಂಡಿದ್ದೆವು. 80-90ರ ಇಳಿವಯಸ್ಸಿನಲ್ಲೂ ರಿವಾಯತ್ ಪದಗಳನ್ನು ಏರು ನುಡಿಯಲ್ಲಿ ಹಾಡುವ, ದೊಡ್ಡಾಟದ ಮಾತುಗಳನ್ನು ಶಕ್ತಿಯುತವಾಗಿ ಆಡುವ ನಮ್ಮ ಗ್ರಾಮೀಣ ಕಲಾವಿದರನ್ನು ಕಂಡಾಗ ನಮಗೇ ದಿಗಿಲು ಮತ್ತು ನಾಚಿಕೆ. ಯಾಕೆಂದರೆ ನಾವು ಪರಿಭಾವಿಸುತ್ತಲೇ ಬಂದ ‘ಅಕ್ಷರವಂಚಿತರು’ ಅವರಲ್ಲ, ನಿಜವಾದ ಸಂಸ್ಕೃತಿಯ ಜ್ಞಾನವಂಚಿತರು ನಾವು ಎನಿಸಿತು. ಪರಂಪರೆಯ ಬೇರುಗಳನ್ನು ಕಡಿದುಕೊಂಡು ನಗರದಲ್ಲಿ ಹೂಫಲವ ತುಂಬಿಕೊಳ್ಳಲಾರದೆ ಹೆದ್ದಾರಿಯ ಮದ್ಯೆ ಪರಿತಪಿಸುವ ಗಿಡ ಕಂಟಿಗಳಂತೆ ನಲುಗುತ್ತಿರುವವರು ನಾವೇ ಎಂದೆನಿಸಿತು.
ನಮಗೆ ಅಧಿಕಾರ, ದರ್ಪ, ದೊಡ್ಡ ಸಂಬಳಗಳಿವೆ. ಆದರೆ ದೊಡ್ಡ ಮಾನವೀಯತೆ ಇಲ್ಲ. ಕಲಾವಿದರಿಗೆ ಮಾನವೀಯತೆ ಮತ್ತು ಜೀವನವನ್ನು ಆರಾಧಿಸುವ ನಿಸರ್ಗ ಪ್ರೀತಿ ಎರಡೂ ಇದೆ. ಬಹುತ್ವದ ಕಲೆಗಳ ಮೂಲಕ ಬದುಕುವ ಸಾಮರಸ್ಯದ ನೀತಿ ಅವರಿಗೆ ತಿಳಿದಿದೆ. ಅವರು ಮುಹರ‌್ರಂನ ರಿವಾಯತ್ ಪದಗಳನ್ನು ಹೇಳುವಾಗ, ಆಕಾಶವಾಣಿಗೆ ತಮ್ಮನ್ನು ಕರೆಸಿದ ಧನ್ಯತೆಯನ್ನು ಸೋಬಾನೆಯಲ್ಲಿ ತುಂಬಿಕೊಟ್ಟು ಹೊರಟಾಗ, ದಾಸರನ್ನು, ತತ್ವಪದಕಾರರನ್ನು, ಕಲ್ಯಾಣದ ಶರಣರನ್ನು ತಾತ್ವಿಕಗೊಳಿಸಿ ಹಾಡಿನ ಉಡಿಯಲ್ಲಿಟ್ಟು ನಿಂತಾಗ ಇವರ ಬಗೆಗೆ ನಮಗೆ ಸಹಜವಾದ ಅಭಿಮಾನ ಮತ್ತು ಗೌರವ ಹೆಚ್ಚುತ್ತದೆ. ವಿವಿಧ ಉಡುಗೆಗಳಲ್ಲಿದ್ದರೂ ನಿರ್ದಿಷ್ಟ ಬಣ್ಣಕ್ಕಾಗಿ ಬದುಕನ್ನು ಅಂದಗೆಡಿಸಿಕೊಳ್ಳದ ಜನ ನಮ್ಮ ಗ್ರಾಮೀಣ ಕಲಾವಿದರು.ಕರ್ನಾಟಕದ ಪ್ರಾದೇಶಿಕ ಸಂಸ್ಕೃತಿಯಲ್ಲೂ ಎಷ್ಟೊಂದು ವೈವಿಧ್ಯತೆಗಳಿವೆ. ಆ ವೈವಿಧ್ಯವನ್ನು ತೋರುವಲ್ಲಿ ಅವರಿಗಿರುವ ಶ್ರದ್ಧೆ ಅತೀ ಮುಖ್ಯ.
ಹಾಗೆ ನೋಡಿದರೆ ಜನಪದ ಕಲೆ, ಹಾಡು, ನೃತ್ಯ, ಸಂಗೀತದಲ್ಲಿ ಎ,ಬಿ,ಸಿ ಶ್ರೇಣಿಗಳೆಂದು ಗುರುತಿಸುವುದು ಕಷ್ಟ. ಒಂದೇ ಪ್ರಕಾರದಲ್ಲಿ ಹಲವು ಧ್ವನಿ, ರಾಗ, ತಾಳ, ಸಂಯೋಜನೆಗಳೇ ಭಿನ್ನವಾಗಿರುತ್ತವೆ. ಉದಾ:ಬುರ‌್ರಕಥೆಯನ್ನು ಕುಳಿತು ಹಾಡುವವರಿದ್ದಾರೆ, ದರೋಜಿಯ ಬುರ‌್ರಕಥಾ ಈರಮ್ಮ ಹಾಡುತ್ತಿದ್ದುದು ಬಹುತೇಕವಾಗಿ ತಂಬೂರಿ, ಗಗ್ಗರಿ ಹಿಡಿದು. ಆಕೆ ಹಾಡತೊಡಗಿದರೆ ಎರಡು ರಾತ್ರಿ ಒಂದು ಹಗಲು ಕಳೆಯಬೇಕಿತ್ತು. ಅದೂ ಕುಮಾರರಾಮನ ಜನಪದ ಮಹಾಕಾವ್ಯ ಮುಗಿಯಲು. ಅಂತಹ ಶಕ್ತಿ ಮತ್ತು ಶ್ರಮ ಜನಪದ ಈರಮ್ಮನ ಕಾವ್ಯದಲ್ಲಿದೆ. ಆಂಧ್ರ, ತೆಲಂಗಾಣದಲ್ಲಿ ನಮ್ಮ ದೊಡ್ಡಾಟ, ಸಣ್ಣಾಟಗಳ ಕುಣಿತದಂತೆ ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ಗಗ್ಗರಿ, ಬುಡ್ಗವಾದ್ಯ ನುಡಿಸುತ್ತಲೇ ನಾಟಕದ ಮಾತುಗಳಂತೆ ಸಂವಾದಿಸುವ, ಹೆಜ್ಜೆ ಹಾಕುವ ಕಥನದ ಗುಣ ಈ ಕಾವ್ಯಗಳಿಗಿದೆ. ಪರಂಪರೆ ಮತ್ತು ಆಧುನಿಕತೆಗಳೆರಡೂ ಸಮಕಾಲೀನವಾಗಿ ತೆರೆದುಕೊಳ್ಳುವ ವಿಧಾನದಲ್ಲೂ ಆಯಾ ಕಲೆಯ ಯಶಸ್ಸು ನಿಂತಿರುತ್ತದೆ. ಕರಾವಳಿಯ ಯಕ್ಷಗಾನ ಬರೀ ಕಲೆಯಲ್ಲ ಅದೊಂದು ಬದುಕಿನ ಆಚರಣೆಯೂ ಹೌದು. ಹೀಗಾಗಿ ಜನಪದ ಕಲಾಬದುಕಿನ ರೂಪಾಂತರಗಳೇ ಹಲವು ಉನ್ನತ ಶ್ರೇಣಿಗಳು!
ನಮಗಿಲ್ಲಿ ಖುಷಿಯಾದದ್ದು ಗ್ರಾಮೀಣ ಬದುಕಿನ ದ್ರವ್ಯವನ್ನು ಹೊತ್ತುಬಂದ ಕಲಾವಿದರನ್ನು ಕಂಡಾಗ. ದೊಡ್ಡಾಟ, ಸಣ್ಣಾಟ, ಭಜನೆ, ಗೀಗೀಪದ, ಸೋಬಾನೆ ಪದ, ಡೊಳ್ಳಿನ ಕೈಪೆಟ್ಟು, ಡೊಳ್ಳಿನ ನೃತ್ಯ, ರಿವಾಯತ್ ಪದ, ಕರಡಿ ಮಜಲು ಮತ್ತು ಲಂಬಾಣಿ ಹಾಡಿನೊಂದಿಗೆ ನೃತ್ಯ ಇದೆಲ್ಲವೂ ಕೇಂದ್ರದ ಸುಂದರ ಬಯಲು ವೇದಿಕೆಯಲ್ಲೇ ಪ್ರದರ್ಶನಗೊಂಡವು. ಬಹುಶ್ರುತ ಕಲಾವಿದರು ತಮ್ಮ ಬದುಕು ಮತ್ತು ಸಂಸ್ಕೃತಿಯ ಬಿಂಬವನ್ನು ಕೆಲವೇ ಕ್ಷಣ, ಸನ್ನಿವೇಶಗಳಲ್ಲಿ ನಮ್ಮೆದುರು ಇರಿಸಿದ್ದು. ನಾಂದಿ ಮತ್ತು ಮಂಗಲಕರ ಸನ್ನಿವೇಶಗಳ ನಡುವೆಯೂ ಚರಿತ್ರೆಯ ಪುನರ‌್ರಚನೆಗಳು ಅಭಿನಯಗೊಳ್ಳುತ್ತಲೇ ಇರುತ್ತವೆ. ಒಂದು ಸಾಂಪ್ರದಾಯಿಕ ಸೋಬಾನೆ ಪದವೆಂದರೂ ತನ್ನ ಹಾಡಿನೊಡಲಲ್ಲಿ ಕಲ್ಯಾಣ, ಕಲ್ಯಾಣದ ಬಸವಣ್ಣ, ಅಕ್ಕ, ಚೆನ್ನಯ್ಯ, ಹರಳಯ್ಯ, ಗುಂಡಯ್ಯ, ಮಾಚಯ್ಯರು ಬರುವುದುಂಟು.
ನಮ್ಮ ಆಕಾಶವಾಣಿಗಳೆಂದರೆ ನಿಜವಾದ ಅರ್ಥದಲ್ಲಿ ಜಾನಪದ ವಿಶ್ವವಿದ್ಯಾನಿಲಯವಿದ್ದಂತೆ. ಕಳೆದ ಹಲವು ದಶಕಗಳಿಂದ ಧಾರವಾಡ ಆಕಾಶವಾಣಿ ಕೇಂದ್ರ ಜನಪದ ಕಲೆ, ಸಂಸ್ಕೃತಿ, ನಾಟಕ, ರಂಗಭೂಮಿಯ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಆಕಾಶವಾಣಿ ಕೇಂದ್ರದಿಂದ ಗುರುತಿಸಿಕೊಂಡಿರುವ ಜನಪದ ಗಾಯಕರು, ಜನಪದ ವಾದ್ಯಕಲಾವಿದರು, ಅವರ ಕಲಾತಂಡಗಳು ನಾಡಿನ ಹಲವೆಡೆ ಹೆಸರು ಮಾಡಿವೆ. ಹೊರದೇಶದಲ್ಲಿಯೂ ಅವು ಪ್ರದರ್ಶನ ಕಂಡಿವೆ. ಗೌರವ, ಪುರಸ್ಕಾರಗಳೂ ದೊರಕಿವೆ. ಬಡತನ, ಆರ್ಥಿಕ ಸಂಕಷ್ಟಗಳ ನಡುವೆಯೂ ಪರಂಪರೆಯ ಬೇರನ್ನು ಮರೆಯದೆ ಜತನದಿಂದ ಉಳಿಸಿಕೊಂಡಿರುವ ಶ್ರಮಿಕ ಕಲೆಗಳಿಗೆ, ಜೀವಪರವಾದ ದನಿಗಳಿಗೆ ಸಮಕಾಲೀನ ಸಮಾಜವೂ ಅಲ್ಲಲ್ಲಿ ಸ್ಪಂದಿಸಬೇಕು.
ಜಾನಪದ ಜಾತ್ರೆ, ದಸರಾ ಉತ್ಸವ, ರಾಜಕೀಯ ಯಾತ್ರೆ, ವೇದಿಕೆಗಳಲ್ಲಂತೂ ಕಲಾವಿದರ ಕಷ್ಟ, ಪಡಿಪಾಟಲು ಹೇಳಲಾಗದು. ಭಾಗವಹಿಸುವ ಉಮೇದುವಾರಿಕೆ, ಸನ್ಮಾನ, ಪ್ರಮಾಣಪತ್ರ, ದಾರಿಖರ್ಚು ಇದನ್ನು ಬಿಟ್ಟರೆ ಅವರಿಗೆ ಹಲವೊಮ್ಮೆ ಬಯಲೇ ಆಲಯ. ಈ ಹಿಂದೆ ಮೈಸೂರು ದಸರಾದಲ್ಲಿ ಜನಪದ ಕಲಾವಿದರಿಗೆ ಸರಿಯಾದ ವಸತಿ ಸೌಕರ್ಯವಿಲ್ಲದೆ ಪ್ರತಿಭಟಿಸಿದ್ದೂ ಇದೆ. ಅವರಿಗೆ ಮಾಸಾಶನ, ಒಂದಿಷ್ಟು ಬದುಕಿನ ಭರವಸೆ, ಪರಂಪರಾಗತವಾಗಿ ಬಂದ ಜನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ, ಆ ಕುಟುಂಬದ ಮಕ್ಕಳಿಗೆ ಶಿಕ್ಷಣ,ಉದ್ಯೋಗದಲ್ಲಿ ಅವಕಾಶಗಳನ್ನು ಕಲ್ಪಿಸುವ ಕಾರ್ಯಗಳೂ ಸರಕಾರ, ಸಂಘ ಸಂಸ್ಥೆಗಳಿಂದ ನಡೆಯಬೇಕು. ಬದುಕಿಗೂ ಒಂದು ಭದ್ರತೆ ದೊರೆತು ಕಲೆ ಹೊಸ ಅರಿವಿನಲ್ಲಿ ಬೆಳೆದು ಬರುವ ಸಾಧ್ಯತೆಗಳಿಗಾಗಿ ನಾವು ಯೋಚಿಸಬೇಕಿದೆ.