ಹುಲಿ ದಾಳಿ ಭೀತಿಯಲ್ಲಿದ್ದ ರೈತರಿಗೆ ಅರಣ್ಯ ಸಿಬ್ಬಂದಿಯ ಅಭಯ
ಚಾಮರಾಜನಗರ : ಹುಲಿ ದಾಳಿಯ ಭೀತಿಯಲ್ಲಿರುವ ಕೃಷಿಕರಿಗೆ ರಕ್ಷಣೆ ನೀಡಲು ಅರಣ್ಯ ಇಲಾಖೆಯು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದು, ಕೃಷಿಕರಲ್ಲಿದ್ದ ಭೀತಿಗೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಗೋವಿಂದವಾಡಿ (ಕಲ್ಪುರ) ಗ್ರಾಮದ ಸುತ್ತ ಮುತ್ತಲಿನ ಜಮೀನುಗಳಲ್ಲಿ ಕೃಷಿಕರು ತಮ್ಮ ಕಾಯಕ ಮಾಡಲು ಜಮೀನಿಗೆ ತೆರಳಲು ಹಿಂದೇಟು ಹಾಕುತ್ತಿದ್ದರು. ಗ್ರಾಮದ ಆಸುಪಾಸಿನ ಜಮೀನಿನ ಬಳಿ ಹುಲಿ ಸುಳಿದಾಟದಿಂದ ಜಾನುವಾರುಗಳು ಬಲಿಯಾಗಿತ್ತು.
ಇದೀಗ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು, ಕೃಷಿ ಕಾಯಕ ಮಾಡಲು ಹಿಂದೇಟು ಹಾಕುತ್ತಿರುವವರ ಜಮೀನಿನಲ್ಲಿ ರೈತರಿಗೆ ರಕ್ಷಣೆ ನೀಡುತ್ತಿದ್ದು, ಈ ಮೂಲಕ ಉಳುಮೆ, ಕಳೆ ಕೀಳುವ, ಕೊಯ್ಲು, ನೀರು ಹಾಯಿಸುವುದು ಸೇರಿದಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಅಭಯ ನೀಡಿದೆ.
ಚಾಮರಾಜನಗರ ತಾಲೂಕಿನ ಗೋವಿಂದವಾಡಿ (ಕಲ್ಪುರ) ಗ್ರಾಮ ಸೇರಿದಂತೆ ಸುತ್ತಮುತ್ತಲಲ್ಲಿ ಹುಲಿ ಉಪಟಳ ಹೆಚ್ಚಾಗಿದೆ. ಜಮೀನುಗಳಿಗೆ ಹೋಗಲು ಹೆದರುತ್ತಿರುವ ರೈತರಿಗೆ ಅರಣ್ಯ ಇಲಾಖೆ ಭದ್ರತೆ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಭದ್ರತೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅ.18ರಂದು ಗ್ರಾಮದ ರೈತ ಕುಮಾರ್ ಸಾಕಿದ್ದ ಎರಡು ಹಸುಗಳ ಮೇಲೆ ವನ್ಯಜೀವಿ ದಾಳಿ ಮಾಡಿತ್ತು.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಹೆಡೆಯಾಲ ವನ್ಯಜೀವಿ ವಲಯದಲ್ಲಿ 10 ದಿನಗಳ ಅಂತರದಲ್ಲಿ ಹುಲಿ ದಾಳಿ ಮತ್ತು ಪ್ರಾಣ ಹಾನಿಯಾಗಿತ್ತು. ಇದರಿಂದಾಗಿ ಗ್ರಾಮದ ರೈತರು ಜಮೀನುಗಳಿಗೆ ತೆರಳು ಭಯ ಪಡುವಂತಾಯಿತು. ಹುಲಿ ಭಯಕ್ಕೆ ವ್ಯವಸಾಯ ನಡೆಯದಂತಾಗುವ ಆತಂಕ ಶುರುವಾಯಿತು.
ಈ ಹಿನ್ನೆಲೆಯಲ್ಲಿ ಭಯದಲ್ಲಿರುವ ರೈತರಿಗೆ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಿಬ್ಬಂದಿ ಭದ್ರತೆ ಒದಗಿಸಲು ಪ್ರಾರಂಭಿಸಿದ್ದಾರೆ.
ಹುಲಿ ದಾಳಿಯ ಭೀತಿಯಲ್ಲಿದ್ದ ರೈತರಿಗೆ ಅರಣ್ಯ ಸಿಬ್ಬಂದಿ ಭದ್ರತೆ ನೀಡುತ್ತಿದ್ದಾರೆ. ಆದರೆ ಹುಲಿ ಭಯಕ್ಕೆ ಕೂಲಿಕಾರರು ಜಮೀನುಗಳಿಗೆ ಕೆಲಸಕ್ಕೆ ಬರುತ್ತಿಲ್ಲ. ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು.
-ಮಹೇಶ್, ಕಲ್ಪುರ ರೈತ
ಚಾಮರಾಜನಗರ ತಾಲೂಕಿನ ಕಲ್ಪುರ ಗ್ರಾಮದಲ್ಲಿ ಜಮೀನಿಗೆ ತೆರಳಲು ಭಯಪಡುತ್ತಿರುವ ರೈತರಿಗೆ ಅರಣ್ಯ ಸಿಬ್ಬಂದಿಯಿಂದ ಭದ್ರತೆ ನೀಡಲಾಗುತ್ತಿದೆ. ಉಗನೇದಹುಂಡಿ ಗ್ರಾಮದಲ್ಲಿ ಹಸುವಿನ ಮೇಲೆ ದಾಳಿ ಮಾಡಿದೆ. ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ.
-ಮಂಜುನಾಥ್, ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸಹಾಯಕ ಅರಣ್ಯಾಧಿಕಾರಿ