ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತವಾಗಿರುವ ಬಿಟ್ಟಿ ಚಾಕರಿ!
ಬಿಟ್ಟಿ ಚಾಕರಿಯ ಅಡಿಯಲ್ಲಿ ಬದುಕುತ್ತಿರುವ ಕುಟುಂಬಗಳು ಸಾಮಾನ್ಯವಾಗಿ ಭೂಹೀನರು. ಇವರು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಮಾಲಕರ ಮನೆಗಳಲ್ಲಿ ಹಲವಾರು ಕೆಲಸಗಳನ್ನು ಮಾಡಬೇಕಾಗುತ್ತದೆ. ಮನೆಯ ಆವರಣದಲ್ಲಿ ಸೆಗಣಿ ಬಳಿಯುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದು ಹಾಗೂ ದನಕರುಗಳ ಆರೈಕೆ ಮಾಡುವುದು, ಹೆಂಡಿ ಕಸ ಎತ್ತುವುದು, ದವಸ ಧಾನ್ಯ ಹಸನು ಮಾಡುವುದು, ಕಟ್ಟಿಗೆ ಒಡೆಯುವುದು ಮುಂತಾದ ದುಡಿಮೆಗಳು ಇವರ ಹಂಚಿಕೆಯ ಕೆಲಸ. ಈ ಕೆಲಸಗಳೆಲ್ಲವೂ ಪಾವತಿ ಇಲ್ಲದೆ ನಡೆಯುತ್ತದೆ.
ತಂತ್ರಜ್ಞಾನ, ಶಿಕ್ಷಣ, ಮಾಹಿತಿ ತಂತ್ರಜ್ಞಾನ ಕೇಂದ್ರಗಳು, ಉತ್ತಮ ಆಡಳಿತ ವ್ಯವಸ್ಥೆ-ಇವುಗಳನ್ನು ಹೆಮ್ಮೆಪಡುವ ಕರ್ನಾಟಕದ ಇತಿಹಾಸದೊಳಗೆ ಒಂದು ಕತ್ತಲೆ ಅಧ್ಯಾಯ ಅಡಗಿದೆ. ಅದು ಬಿಟ್ಟಿ ಚಾಕರಿ. ಶತಮಾನಗಳ ಕಾಲ ದಲಿತರು ಮತ್ತು ಆದಿವಾಸಿಗಳನ್ನು ಬಾಧಿಸಿದ್ದ ಈ ಉಚಿತ ಕಟ್ಟುಬಾಳ್ವೆ, ಸಾಮಾಜಿಕ ಅನ್ಯಾಯದ ಜೀವಂತ ಸಾಕ್ಷಿಯಾಗಿದೆ. ಬಿಟ್ಟಿ ಎಂದರೆ ಉಚಿತ, ಚಾಕರಿ ಎಂದರೆ ಸೇವೆ. ಎರಡೂ ಸೇರಿ, ಯಾವುದಕ್ಕೂ ಸಂಬಳವಿಲ್ಲದ ಸೇವೆ. ಆದರೆ, ಇದು ಸ್ವಯಂ ಪ್ರೇರಿತ ಸೇವೆಯಲ್ಲ; ಬಲವಂತವಾಗಿ ಹೇರಲಾದ ಕಟ್ಟುಬಾಳ್ವೆ. ಜಾತಿ ನಿಯಮಗಳು, ಆರ್ಥಿಕ ಅವಲಂಬನೆ ಹಾಗೂ ಸಾಮಾಜಿಕ ಭಯವೇ ಇದರ ಆಧಾರ. ಮೈಸೂರು ಸಂಸ್ಥಾನದ ಕಾಲದ ದಾಖಲೆಗಳು, ಬ್ರಿಟಿಷರ ಆಡಳಿತ ವರದಿಗಳು, ಹಾಗೂ ಮೊದಲಿನ ಜನಾಂಗ ಅಧ್ಯಯನಗಳು-ಎಲ್ಲವೂ ಬಿಟ್ಟಿ ಚಾಕರಿಯನ್ನು ಒಂದು ಗ್ರಾಮ ಆಡಳಿತ ಪದ್ಧತಿ ಎಂದು ದಾಖಲಿಸಿವೆ. ಬ್ರಿಟಿಷರು ಸಹ ಇದರಿಂದ ಅಪ್ರತ್ಯಕ್ಷ ಲಾಭ ಪಡೆದರು. ಗ್ರಾಮಸ್ಥರಿಂದ ಉಚಿತ ಸೇವೆ ಪಡೆದು ಪೊಲೀಸ್, ಆದಾಯ, ರಸ್ತೆ ಹಾಗೂ ನೀರಾವರಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು. ಹೀಗಾಗಿ, ಬಿಟ್ಟಿ ಚಾಕರಿ 20ನೇ ಶತಮಾನದ ಮಧ್ಯಭಾಗದವರೆಗೂ ಗ್ರಾಮೀಣ ಸಮಾಜದಲ್ಲಿ ಬೇರೂರಿತ್ತು. 2015ರಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಮೂರು ಜಿಲ್ಲೆಗಳಲ್ಲಿ ನಡೆದ ಅಧ್ಯಯನವು ಈ ಪದ್ಧತಿಯ ಆಧುನಿಕ ರೂಪವನ್ನು ಬಯಲಿಗೆಳೆದು ತೋರಿಸಿತು. ಸಮೀಕ್ಷೆಗೆ ಒಳಪಟ್ಟ ಕಾರ್ಮಿಕರಲ್ಲಿ ಶೇ. 33.4 ಜನ ಬಿಟ್ಟಿ ಚಾಕರಿ ಕಾರ್ಮಿಕರು, ಅವರಲ್ಲಿ ಶೇ. 30.5 ಜನರನ್ನು ಬಲವಂತವಾಗಿ ಕೆಲಸಕ್ಕೆ ತಳ್ಳಲಾಗಿದೆ ಎಂಬ ಶಂಕೆ ವ್ಯಕ್ತವಾಯಿತು. ರಾಷ್ಟ್ರ ಮಟ್ಟದಲ್ಲಿ 3 ಲಕ್ಷಕ್ಕೂ ಹೆಚ್ಚು ಬಿಟ್ಟಿ ಚಾಕರಿ ಕಾರ್ಮಿಕರು ಇದ್ದಾರೆಂದು ಅಂದಾಜಿಸಲಾಗಿದೆ. ಕಾರ್ಮಿಕ ಸಚಿವಾಲಯದ ವರದಿ ಪ್ರಕಾರ, ಭಾರತದಲ್ಲಿ 20 ಲಕ್ಷದಿಂದ 50 ಲಕ್ಷದವರೆಗೆ ಜನರು ಸಾಲದ ಬಂಧನದಲ್ಲಿ ಬದುಕುತ್ತಿದ್ದಾರೆ. ಬಿಟ್ಟಿ ಚಾಕರಿಗೆ ಇದೇ ಮುಖ್ಯ ಕಾರಣ. ಕೇವಲ ಅಂಕಿ ಅಂಶವಲ್ಲ, ಇದು ಅನೇಕರ ಬದುಕಿನ ಕಹಿ ವಾಸ್ತವ.
ಕರ್ನಾಟಕದಲ್ಲಿ ಕಾನೂನುಬದ್ಧವಾಗಿ ಬಿಟ್ಟಿ ಚಾಕರಿ ನಿರ್ಮೂಲಗೊಂಡಿದೆ ಎಂಬುದನ್ನು ಪಠ್ಯಪುಸ್ತಕಗಳು ಹೇಳುತ್ತವೆ. ಆದರೆ ವಾಸ್ತವದಲ್ಲಿ ಕೆಲವು ಗ್ರಾಮಗಳಲ್ಲಿ ಇನ್ನೂ ಬಿಟ್ಟಿ ಚಾಕರಿ ಪದ್ಧತಿ ಜೀವಂತವಾಗಿದೆ. ವಿಶೇಷವಾಗಿ ಬೀದರ್ ಜಿಲ್ಲೆ ಈ ಆಚರಣೆಯ ಪ್ರಮುಖ ಕೇಂದ್ರವಾಗಿದೆ. ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿಯೂ ಇದರ ಆಳವಾದ ಗುರುತುಗಳು ಕಾಣಸಿಗುತ್ತವೆ. ಆದರೆ ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ಪದ್ಧತಿ ಬಹಳ ಮಟ್ಟಿಗೆ ಕಡಿಮೆಯಾಗಿರುವುದನ್ನು ವರದಿಗಳು ಗಮನಿಸಿದೆ. ಬಿಟ್ಟಿ ಚಾಕರಿಯ ಅಡಿಯಲ್ಲಿ ಬದುಕುತ್ತಿರುವ ಕುಟುಂಬಗಳು ಸಾಮಾನ್ಯವಾಗಿ ಭೂಹೀನರು. ಇವರು ಪ್ರತಿದಿನ ಬೆಳಗ್ಗೆ ಅಥವಾ ಸಂಜೆ ಮಾಲಕರ ಮನೆಗಳಲ್ಲಿ ಹಲವಾರು ಕೆಲಸಗಳನ್ನು ಮಾಡಬೇಕಾಗುತ್ತದೆ. ಮನೆಯ ಆವರಣದಲ್ಲಿ ಸೆಗಣಿ ಬಳಿಯುವುದು, ಕೊಟ್ಟಿಗೆ ಸ್ವಚ್ಛಗೊಳಿಸುವುದು ಹಾಗೂ ದನಕರುಗಳ ಆರೈಕೆ ಮಾಡುವುದು, ಹೆಂಡಿ ಕಸ ಎತ್ತುವುದು, ದವಸ ಧಾನ್ಯ ಹಸನು ಮಾಡುವುದು, ಕಟ್ಟಿಗೆ ಒಡೆಯುವುದು ಮುಂತಾದ ದುಡಿಮೆಗಳು ಇವರ ಹಂಚಿಕೆಯ ಕೆಲಸ. ಈ ಕೆಲಸಗಳೆಲ್ಲವೂ ಪಾವತಿ ಇಲ್ಲದೆ ನಡೆಯುತ್ತದೆ. ಕೆಲವೊಮ್ಮೆ ದಿನವಿಡೀ ಊರಿನ ಅನೇಕ ಮನೆಗಳಲ್ಲಿ ಹೀಗೆಯೇ ಉಚಿತವಾಗಿ ಶ್ರಮ ಒದಗಿಸುತ್ತಾರೆ. ಸಾಮಾನ್ಯ ದಿನಗಳಷ್ಟೇ ಅಲ್ಲ, ಹಬ್ಬ-ಹರಿದಿನಗಳಲ್ಲಿ ಹಾಗೂ ಕುಟುಂಬ ಸಮಾರಂಭಗಳಲ್ಲಿ ಇವರ ಮೇಲಿನ ಹೊರೆ ಇನ್ನಷ್ಟು ಹೆಚ್ಚುತ್ತದೆ. ಮದುವೆ-ನಿಶ್ಚಿತಾರ್ಥ ಸಂದರ್ಭಗಳಲ್ಲಿ ಧಣಿಗಳ ಮನೆ ಅಲಂಕರಿಸುವುದು, ಊಟದ ಎಲೆ ತೆಗೆಯುವುದು, ಪಾತ್ರೆ ತೊಳೆಯುವುದು ಇವರ ಜವಾಬ್ದಾರಿ. ಜಾತ್ರೆಗಳಲ್ಲಿ ದೇವರ ಸೇವೆಗೆ ಹಲಗಿ ಬಾರಿಸುವುದು, ಮಾಲಕರ ಕೊಟ್ಟಿಗೆಗೆ ಸುಣ್ಣ-ಬಣ್ಣ ಬಳಿಯುವುದು, ದೀಪಾವಳಿ ಮತ್ತು ಯುಗಾದಿ ಸಂದರ್ಭಗಳಲ್ಲಿ ಅಡಿಗಳನ್ನು ತಿರುವಿ ಹಾಕುವುದು, ನಾಗರ ಪಂಚಮಿಯಲ್ಲಿ ಬಾರಕೋಲು ತಯಾರಿಸುವುದು-ಇವೆಲ್ಲವನ್ನು ದಲಿತ ಕುಟುಂಬ ಸೇವೆಗೆ ಹುಟ್ಟಿದವರು ಎಂಬ ನಂಬಿಕೆಯಿಂದಲೇ ಮಾಡಿಸುತ್ತಾರೆ.
ಗ್ರಾಮದಲ್ಲಿ ಯಾರಾದರೂ ಸಾವಿಗೀಡಾದರೆ ಬಿಟ್ಟಿ ಚಾಕರಿ ಮಾಡುವ ಕುಟುಂಬಗಳಿಗೆ ಮತ್ತಷ್ಟು ಹೊಣೆಗಾರಿಕೆ ಒತ್ತಲ್ಪಡುತ್ತದೆ. ಹಲಗಿ ಬಾರಿಸುವುದು, ಪಂಜು ಹಿಡಿಯುವುದು, ಶವ ಇಟ್ಟ ಜಾಗವನ್ನು ಸ್ವಚ್ಛಗೊಳಿಸುವುದು, ಸಂತಾಪ ಸೂಚಿಸಲು ಬರುವ ಅತಿಥಿಗಳಿಗೆ ಸತ್ಕಾರ ಮಾಡುವುದು ಇವರ ಪಾಲಾಗುತ್ತದೆ. ಶೋಕದ ದಿನಗಳಲ್ಲಿ ಅವರು ಬೇರೆಡೆ ಕೆಲಸಕ್ಕೆ ಹೋಗಲು ಅವಕಾಶವಿಲ್ಲ. ಹೀಗಾಗಿ ಅವರ ದಿನನಿತ್ಯದ ಆದಾಯ ನಿಂತುಹೋಗುತ್ತದೆ. ಇಷ್ಟೇ ಅಲ್ಲ, ಭೂಮಾಲಕರ ಹಸು ಅಥವಾ ಎಮ್ಮೆ ಸತ್ತರೆ, ಅವನ್ನು ಊರ ಹೊರಗೆ ಸಾಗಿಸಿ ಚರ್ಮ ಬಿಡಿಸುವ ಕೆಲಸವೂ ಇವರ ಮೇಲೆಯೇ ಹೊರಿಸಲಾಗುತ್ತದೆ. ಈ ಶ್ರಮಕ್ಕೆ ದೊರೆಯುವ ಪಾವತಿ ಶೋಷಣೆಯ ಸಂಕೇತವೇ ಸರಿ. ಕೆಲವೆಡೆ ಕೇವಲ ಚಹಾ ಅಥವಾ ಒಂದೆರಡು ತಂಗು ರೊಟ್ಟಿ, ವರ್ಷಕ್ಕೆ ಒಂದು ದನಕ್ಕೆ ಒಂದು ಚೀಲ ಜೋಳ, ಹಬ್ಬ-ಹರಿದಿನಗಳಲ್ಲಿ ಗೋಧಿ, ಶೇಂಗಾ, ಬೇಳೆ, ಬೆಲ್ಲ. ಬೀದರ್‌ನ ಕೆಲವು ಗ್ರಾಮಗಳಲ್ಲಿ ದವಸದ ಬದಲು ಕೇವಲ ರೂ. 1,000 ನೀಡಲಾಗುತ್ತದೆ. ಕೆಲವೆಡೆ ಹಳೆ ಪಾತ್ರೆ-ಬಟ್ಟೆಗಳನ್ನು ದಾನ ಮಾಡುವುದೇ ಪಾವತಿ. ಇದು ನಿಜವಾದ ಸಂಬಳವಲ್ಲ; ಬದಲಿಗೆ ದಾಸ್ಯವನ್ನು ಮುಂದುವರಿಸಲು ಬಳಸುವ ಕೃತಕ ದಾನ.
ಈ ವ್ಯವಸ್ಥೆ ಕೇವಲ ಆರ್ಥಿಕ ಶೋಷಣೆಯಲ್ಲ, ಅದು ಸಾಮಾಜಿಕ ಬಲವಂತ ಕೂಡ ಹೌದು. ಸೇವೆಗೆ ಹುಟ್ಟಿದವರು ಎಂಬ ಕುತಂತ್ರದ ಕಲ್ಪನೆಯ ಮೂಲಕ ಶೋಷಕರಿಗೆ ಅನುಕೂಲವಾಗುವಂತೆ ಈ ಪದ್ಧತಿ ಮುಂದುವರಿಯುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ, ಮಹಿಳೆಯರು ಎರಡು ಪಟ್ಟು ದುಡಿಮೆ ಮಾಡಬೇಕಾಗುತ್ತದೆ, ತಲೆಮಾರುಗಳಿಂದ ಬಡತನ ಸುತ್ತುತ್ತಲೇ ಇರುತ್ತದೆ. ಹೀಗೆ ನೋಡಿದರೆ, ಕರ್ನಾಟಕದ ಕೃಷಿ ಸಮಾಜದಲ್ಲಿ ಜಾತಿಯೇ ಉದ್ಯೋಗವನ್ನು ನಿರ್ಧರಿಸುತ್ತಿತ್ತು. ದಲಿತ ಸಮುದಾಯಗಳು ಭೂಮಾಲಕರಿಗೂ ಮತ್ತು ಸರಕಾರಿ ನೌಕರರಿಗೂ ಸೇವೆ ಮಾಡಲು ಬಾಧ್ಯರಾಗಿದ್ದರು. ನಿರಾಕರಣೆ ಎಂದರೆ ನೀರಿನ ಮೂಲಗಳ ನಿರ್ಬಂಧ, ಮನೆಗಳಿಂದ ಹೊರಹಾಕುವುದು ಅಥವಾ ಹಿಂಸಾಚಾರ. ಬಿಟ್ಟಿ ಚಾಕರಿಯು ತಲೆಮಾರುಗಳಿಂದ ಸೇವೆಗೆ ಹುಟ್ಟಿದವರು ಎಂಬ ಕಳಂಕ ತಂದುಕೊಟ್ಟಿತು. ಮಹಿಳೆಯರು ಎರಡು ಹಂತದ ದೌರ್ಜನ್ಯ ಅನುಭವಿಸಿದರು. ಹೊಲದಲ್ಲಿ ದುಡಿಮೆ ಮತ್ತು ಭೂಮಾಲಕರ ಮನೆಗಳಲ್ಲಿ ಲೈಂಗಿಕ ಶೋಷಣೆ. ಮಕ್ಕಳ ಶಿಕ್ಷಣಕ್ಕೆ ಅವಕಾಶವೇ ಇರಲಿಲ್ಲ. ಶಾಲೆ ಬಿಟ್ಟು ಉಚಿತ ಕೆಲಸ ಮಾಡುವುದರಿಂದ ಬಡತನ ತಲೆಮಾರುಗಳಿಂದ ಮುಂದುವರಿಯಿತು. ಬಿಟ್ಟಿ ಚಾಕರಿಯನ್ನು ನಿರಾಕರಿಸಿದ ಕೆಲ ಕುಟುಂಬಗಳ ಮೇಲೆ ಊರಿನಲ್ಲಿ ಬಹಿಷ್ಕಾರ ಹಾಕಿದ ಘಟನೆಗಳೂ ದಾಖಲಾಗಿವೆ. ಇದರ ಅರ್ಥ, ಅವರು ಊರಿನ ನೀರು, ಬೆಳೆಗಾರಿಕೆ, ಸಾರ್ವಜನಿಕ ಸೌಲಭ್ಯಗಳಿಂದ ಸಂಪೂರ್ಣವಾಗಿ ದೂರವಾಗಬೇಕಾಗುತ್ತದೆ. ಹೀಗಾಗಿ ಹೆಚ್ಚಿನವರು ಬಲವಂತವಾಗಿ ಈ ಪದ್ಧತಿಯನ್ನು ಅನುಸರಿಸಲೇಬೇಕಾಗುತ್ತದೆ. ಬಿಟ್ಟಿ ಚಾಕರಿಯ ಮೂಲವೇ ಜಾತಿ ವ್ಯವಸ್ಥೆ. ಈ ಪದ್ಧತಿ ಸಂಪೂರ್ಣವಾಗಿ ದಲಿತರನ್ನೇ ಶೋಷಿಸುತ್ತದೆ. ಅವರು ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಬಯಸಿದರೂ, ಭಯ ಮತ್ತು ಸಾಂಪ್ರದಾಯಿಕ ಬಲವಂತದ ಕಾರಣದಿಂದ ಮುಕ್ತಿ ಹೊಂದಲು ಸಾಧ್ಯವಾಗುತ್ತಿಲ್ಲ.
ಕೆಲವೊಮ್ಮೆ ಸಾಲ ತಲೆಮಾರುಗಳಿಂದ ಮುಂದುವರಿಯುತ್ತದೆ. ಹೀಗಾಗಿ, ಕಾನೂನು ಬದಲಾವಣೆ ಸಾಕಾಗುವುದಿಲ್ಲ; ಸಮಾಜದ ಮನೋಭಾವದ ಬದಲಾವಣೆ ಅಗತ್ಯ. ಬಿಟ್ಟಿ ಚಾಕರಿಯ ಕಾರ್ಮಿಕರನ್ನು ಪತ್ತೆಹಚ್ಚಿ ಕಾನೂನು ಜಾರಿ ಕಟ್ಟುನಿಟ್ಟಾಗಬೇಕು. ಕೇವಲ ಬಿಡುಗಡೆ ಸಾಕಾಗುವುದಿಲ್ಲ; ಅವರಿಗೆ ವಾಸಸ್ಥಳ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಒದಗಿಸಬೇಕು. ಗ್ರಾಮ ಪಂಚಾಯತ್‌ಗಳಲ್ಲಿ ದಲಿತ-ಆದಿವಾಸಿ ನಾಯಕತ್ವವನ್ನು ಬೆಳೆಸಬೇಕು. ಶಾಲೆ-ವಿಶ್ವವಿದ್ಯಾನಿಲಯಗಳಲ್ಲಿ ಜಾತಿ ಆಧಾರಿತ ಶೋಷಣೆಯ ಇತಿಹಾಸ ಬೋಧಿಸಬೇಕು. ಬಿಟ್ಟಿ ಚಾಕರಿ ಕಾನೂನು ಪ್ರಕಾರ ಇತಿಹಾಸದ ಭಾಗವಾದರೂ, ಅದರ ಗಾಯಗಳು ಇನ್ನೂ ವರ್ತಮಾನದಲ್ಲಿವೆ. ಕರ್ನಾಟಕ ನಿಜವಾದ ಅಭಿವೃದ್ಧಿ ಸಾಧಿಸಬೇಕೆಂದರೆ ಕೇವಲ ಆರ್ಥಿಕ ಬೆಳವಣಿಗೆಯಷ್ಟೇ ಸಾಕಾಗುವುದಿಲ್ಲ; ಜಾತಿ ಆಧಾರಿತ ಶೋಷಣೆಯಿಂದ ಎಷ್ಟು ದೂರ ಹೋಗಿದೆ ಎನ್ನುವುದೇ ನಿಜವಾದ ಅಳತೆ. ಸಾಮಾಜಿಕ ನ್ಯಾಯ ಅಂತಿಮ ಸಾಧನೆ ಅಲ್ಲ; ಅದು ನಿರಂತರ ಜವಾಬ್ದಾರಿ. ಈ ಇತಿಹಾಸವನ್ನು ಸ್ಮರಿಸಿ ಅದರ ಗಾಯಗಳನ್ನು ಶಮನಗೊಳಿಸಿದಾಗ ಮಾತ್ರ, ಮತ್ತೆ ಯಾವ ಸಮುದಾಯವೂ ಸಂಪ್ರದಾಯದ ಹೆಸರಿನಲ್ಲಿ ಉಚಿತ ಸೇವೆಗೆ ಬಾಧ್ಯವಾಗುವುದಿಲ್ಲ.