ಹೆಜಮಾಡಿಯ ಕನ್ನಡ ಶಾಲೆಯಿಂದ ಅಮೆರಿಕದಲ್ಲಿ ಐಟಿ ನಾಯಕತ್ವದವರೆಗೆ; ಅಮೆರಿಕದ ಬಾರ್ನ್ಸ್ ಏರೋಸ್ಪೇಸ್ CIO ಇಮ್ತಿಯಾಝ್ ಇಕ್ಬಾಲ್ ಅವರ ಸ್ಪೂರ್ತಿದಾಯಕ ಪಯಣ
PC: siliconindia
ಮಂಗಳೂರು : ಹೆಜಮಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ಒಂದು ತರಗತಿಯಲ್ಲಿ ಮೊಳಕೆಯೊಡೆದ ಕನಸು, ಇಂದು ಅಮೆರಿಕದ ಜಾಗತಿಕ ಏರೋಸ್ಪೇಸ್ ಸಂಸ್ಥೆಯಲ್ಲಿ ನನಸಾಗಿದೆ. ಸೀಮಿತ ಆದಾಯದ ಕುಟುಂಬ, ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಾಗಿದ್ದ ದಿನಗಳು ಮತ್ತು ಸಣ್ಣ ಹಳ್ಳಿಯ ವಾತಾವರಣ. ಇವೆಲ್ಲವನ್ನೂ ದಾಟಿ, ಶಿಕ್ಷಣದ ಮೇಲಿನ ಅಚಲ ನಂಬಿಕೆ ಮತ್ತು ನಿರಂತರ ಪರಿಶ್ರಮದ ಮೂಲಕ ಮುಂದೆ ಸಾಗಿದವರು ಇಮ್ತಿಯಾಝ್ ಇಕ್ಬಾಲ್. ಅವರ ಬದುಕಿನ ಪಯಣ ಕೇವಲ ವೈಯಕ್ತಿಕ ಸಾಧನೆಯ ಕಥೆಯಲ್ಲ; ಅದು ಕನ್ನಡ ಮಾಧ್ಯಮ ಹಾಗೂ ಹಳ್ಳಿ ಹಿನ್ನೆಲೆ ಜಾಗತಿಕ ವೇದಿಕೆಯಲ್ಲಿ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸ್ಪೂರ್ತಿದಾಯಕ ಪಯಣ.
ಉಡುಪಿ ಜಿಲ್ಲೆಯ ಹೆಜಮಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಇಮ್ತಿಯಾಝ್ ಇಕ್ಬಾಲ್ ಇಂದು ಅಮೆರಿಕದ ಜಾಗತಿಕ ಏರೋಸ್ಪೇಸ್ ಸಂಸ್ಥೆಯೊಂದರ ಮುಖ್ಯ ಮಾಹಿತಿ ಅಧಿಕಾರಿ (CIO).
ಹೆಜಮಾಡಿಯಂತಹ ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರು, ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಐವರು ಸಹೋದರಿಯರಿರುವ ದೊಡ್ಡ ಕುಟುಂಬದಲ್ಲಿ, ಚಿಕ್ಕ ಮನೆಯಲ್ಲಿ ಅವರ ಬಾಲ್ಯ ಕಳೆಯಿತು. ತಂದೆ ಟ್ರಕ್ ಚಾಲಕ; ತಾಯಿ ಮಣಿ ತಯಾರಿಸುವ ಕೆಲಸ ಮಾಡುತ್ತಿದ್ದರು. ಆದಾಯ ಸೀಮಿತವಾಗಿದ್ದರೂ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಕುಟುಂಬ ಯಾವತ್ತೂ ರಾಜಿಮಾಡಲಿಲ್ಲ.
ಇಮ್ತಿಯಾಝ್ ಅವರ ಹೆತ್ತವರಿಗೆ ಶಿಕ್ಷಣವೇ ಬದುಕನ್ನು ಬದಲಾಯಿಸಬಲ್ಲ ಏಕೈಕ ದಾರಿ ಎಂಬ ಅಚಲ ನಿರ್ಧಾರವಿತ್ತು.
ಅದನ್ನೇ ಮಕ್ಕಳಿಗೆ ಹೇಳಿ ಕೊಟ್ಟಿದ್ದರು.ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ಬಗ್ಗೆ ನಿಜವಾದ ಕಾಳಜಿ ಹೊಂದಿದ್ದ ಕೆಲ ಅಪರೂಪದ ಶಿಕ್ಷಕರ ಮಾರ್ಗದರ್ಶನ ಇಮ್ತಿಯಾಝ್ ಅವರಿಗೆ ದೊರಕಿತು. ಅವರ ಬೋಧನೆ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ; ಜೀವನದ ದಿಕ್ಕನ್ನೇ ರೂಪಿಸುವಂತಿತ್ತು. ಆ ಪ್ರಭಾವವೇ ಇಮ್ತಿಯಾಝ್ ಅವರಲ್ಲಿ ಶಿಸ್ತು, ಪರಿಶ್ರಮ ಮತ್ತು ಕಲಿಕೆಯ ಮೇಲಿನ ಅಚಲ ನಂಬಿಕೆಯನ್ನು ಬೆಳೆಸಿತು.
ಪ್ರೌಢಶಾಲೆಯ ನಂತರ, ಪಕ್ಕದ ಮುಲ್ಕಿಯ ವಿಜಯ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣಕ್ಕೆ ಸೇರಿದಾಗ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು. ಕನ್ನಡ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮಕ್ಕೆ ಒಮ್ಮೆಲೇ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ. ಈ ಬದಲಾವಣೆ ಸುಲಭವಿರಲಿಲ್ಲ. ಮೊದಲ ವರ್ಷ ಪಠ್ಯಪುಸ್ತಕಗಳ ಪ್ರತಿಯೊಂದು ಸಾಲನ್ನು ಅರ್ಥಮಾಡಿಕೊಳ್ಳಲು ನಿಯಮಿತವಾಗಿ ನಿಘಂಟು ನೋಡಿಕೊಂಡೇ ಇರಬೇಕಿತ್ತು. ಆವರೆಗೂ ಕನ್ನಡ ಮಾಧ್ಯಮದಲ್ಲೇ ಓದಿದ್ದ ಇಮ್ತಿಯಾಝ್ ಇಕ್ಬಾಲ್ ಅವರಿಗೆ ಒಂದೇ ವಿಷಯವನ್ನು ಅರ್ಥೈಸಿಕೊಳ್ಳಲು ಇಂಗ್ಲಿಷ್ ಮಾಧ್ಯಮ ಹಿನ್ನೆಲೆಯ ವಿದ್ಯಾರ್ಥಿಗಳಿಗಿಂತ ಹೆಚ್ಚಿನ ಶ್ರಮ ಬೇಕಾಗುತ್ತಿತ್ತು. ಆತ್ಮವಿಶ್ವಾಸ ಕುಸಿಯುವ ಕ್ಷಣಗಳೂ ಎದುರಾದವು. ಆದರೆ ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ. ಜಾಗತಿಕ ಭಾಷೆಯಾಗಿ ಇಂಗ್ಲಿಷ್ ನ ಬೆಳವಣಿಗೆಯಾಗುತ್ತಿರುವ ಬಗ್ಗೆ ಅಧ್ಯಾಪಕರು ಹೇಳಿದ ಕಿವಿಮಾತುಗಳು ಆತ್ಮವಿಶ್ವಾಸ ತುಂಬಿದವು.
ಪಿಯುಸಿಯ ಎರಡನೇ ವರ್ಷದ ಹೊತ್ತಿಗೆ, ಇಂಗ್ಲಿಷ್ ಭಾಷೆಯ ಮೇಲಿನ ಭಯ ನಿಧಾನವಾಗಿ ಆತ್ಮವಿಶ್ವಾಸವಾಗಿ ಬದಲಾಯಿತು. ಈ ಹಂತದಲ್ಲಿ ಅವರು ದೌರ್ಬಲ್ಯವನ್ನು ಮರೆಮಾಚುವುದಕ್ಕಿಂತ ಅದನ್ನು ಗುರುತಿಸಿ ಎದುರಿಸಿದರೆ ಮುಂದಿನ ದಾರಿ ತೆರೆದುಕೊಳ್ಳುತ್ತದೆ ಎಂಬ ಪಾಠ ಕಲಿತರು. ಕಾಲೇಜಿನಲ್ಲಿ ಶಿಕ್ಷಕರು ಉದ್ದೇಶಪೂರ್ವಕವಾಗಿ ಇಂಗ್ಲಿಷ್ ನಲ್ಲೇ ಸಂವಹನ ನಡೆಸುತ್ತಿದ್ದರು. ಆ ಒತ್ತಡವೇ ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆಯನ್ನು ಸ್ವೀಕರಿಸಲು ನೆರವಾಯಿತು ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.
ಪಿಯುಸಿಯ ನಂತರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದ ಅವರು, ಅತ್ಯುನ್ನತ ಪಲಿತಾಂಶ ಗಳಿಸಿದರು. ಪದವಿ ಪಡೆದ ತಕ್ಷಣ, ಅವರು NITK ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಆದರೆ ಅವರ ದೃಷ್ಟಿ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಉದ್ಯಮ ಕ್ಷೇತ್ರದತ್ತವೂ ಅವರ ದೃಷ್ಟಿ ನೆಟ್ಟಿತ್ತು.
ಅದರ ಭಾಗವಾಗಿ ಒಮಾನ್ ನ ಮಸ್ಕತ್‌ಗೆ ತೆರಳಿ ಸೌದ್ ಬಹ್ವಾನ್ ಗ್ರೂಪ್‌ನಲ್ಲಿ ವೃತ್ತಿ ಆರಂಭಿಸಿದರು. ಅಲ್ಲಿ ಸಾಫ್ಟ್ ವೇರ್ ಇಂಜಿನಿಯರಿಂಗ್ ನಿಂದ ಹಿಡಿದು ಯೋಜನಾ ನಿರ್ವಹಣೆವರೆಗೆ ವಿವಿಧ ಹುದ್ದೆಗಳನ್ನು ಕಾರ್ಯನಿರ್ವಹಿಸಿದರು. ನಂತರ ದುಬೈಗೆ ತೆರಳಿ HSBC ಬ್ಯಾಂಕ್ ನಲ್ಲಿ ಹಿರಿಯ ಐಟಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
1998ರಲ್ಲಿ ಅಮೆರಿಕದಿಂದ ಬಂದ ಅವಕಾಶ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಅಮೆರಿಕಕ್ಕೆ ತೆರಳಿದ ಅವರು ಸ್ವಿಝರ್‌ಲ್ಯಾಂಡ್ ಮೂಲದ ಸುಗಂಧ ಉದ್ಯಮ ಗಿವಾಡಾನ್ ಕಂಪೆನಿಯಲ್ಲಿ ಐಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ನಂತರ ಯುಕೆ ಮೂಲದ ವೈದ್ಯಕೀಯ ಸಾಧನಗಳ ಕಂಪೆನಿಯಾದ ಸ್ಮಿತ್ ಮತ್ತು ನೆಫ್ಯೂನಲ್ಲಿ ಐಟಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದರು. ಇದೇ ಅವಧಿಯಲ್ಲಿ ಓಹಿಯೋದ ಸಿನ್ಸಿನಾಟಿಯಲ್ಲಿರುವ ಕ್ಸೇವಿಯರ್ ವಿಶ್ವವಿದ್ಯಾಲಯದಿಂದ ಇಂಟರ್ನ್ಯಾಷನಲ್ ಬಿಸಿನೆಸ್ ನಲ್ಲಿ MBA ಪದವಿಯನ್ನು ಪಡೆದರು.
ಮುಂದೆ ಕಾರ್ನಿಂಗ್ ಲೈಫ್ ಸೈನ್ಸಸ್‌ನಲ್ಲಿ ಮುಖ್ಯ ಮಾಹಿತಿ ಅಧಿಕಾರಿ (CIO) ಹುದ್ದೆ ವಹಿಸಿಕೊಂಡ ಅವರು, ನಂತರ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಮರ್ಕ್ಯುರಿ ಕಂಪೆನಿಯಲ್ಲಿ ಸುಮಾರು ಐದು ವರ್ಷಗಳ ಕಾಲ CIO ಆಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಅವರು ಬಾರ್ನ್ಸ್ ಏರೋಸ್ಪೇಸ್ ಸಂಸ್ಥೆಯ ಮುಖ್ಯ ಮಾಹಿತಿ ಅಧಿಕಾರಿ ಆಗಿದ್ದು, ವಿಮಾನ ಎಂಜಿನ್ ಭಾಗಗಳ ತಯಾರಿಕೆ ಹಾಗೂ ಜಾಗತಿಕ ಪೂರೈಕೆ ವ್ಯವಸ್ಥೆಗಳ ತಂತ್ರಜ್ಞಾನ ನೇತೃತ್ವ ಅವರ ಹೊಣೆಗಾರಿಕೆಯ ಕೇಂದ್ರವಾಗಿದೆ.
ಮಂಗಳೂರೊಂದು 'ಮಿನಿ ಜಗತ್ತು'
ಪ್ರಪಂಚದ ಅನೇಕ ದೇಶಗಳು ಮತ್ತು ನಗರಗಳಲ್ಲಿ ಕೆಲಸ ಮಾಡಿದ ಅನುಭವದ ಬಳಿಕವೂ, ಮಂಗಳೂರು ಹಾಗೂ ಕರಾವಳಿ ಕರ್ನಾಟಕವನ್ನು ವಿದ್ಯಾರ್ಥಿಗಳು ಬೆಳೆಯಲು ವಿಶ್ವದ ಅತ್ಯುತ್ತಮ ಪ್ರದೇಶಗಳಲ್ಲೊಂದು ಎಂದು ಇಮ್ತಿಯಾಝ್ ಇಕ್ಬಾಲ್ ಅಭಿಪ್ರಾಯಪಡುತ್ತಾರೆ. ಇಲ್ಲಿ ಶಿಕ್ಷಣವು ಕೇವಲ ಶಾಲೆ–ಕಾಲೇಜುಗಳಿಗೆ ಸೀಮಿತವಾಗಿಲ್ಲ; ಅದು ದೈನಂದಿನ ಸಂಭಾಷಣೆಯ ಭಾಗವಾಗಿದೆ. ಇದೇ ಈ ಪ್ರದೇಶದ ಅತಿದೊಡ್ಡ ಶಕ್ತಿ ಎಂದು ಅವರು ಹೇಳುತ್ತಾರೆ.
1970ರ ದಶಕದಲ್ಲಿ ಅವರು ಬೆಳೆಯುತ್ತಿದ್ದ ಕಾಲಕ್ಕೆ ಹೋಲಿಸಿದರೆ, ಇಂದು ಶಿಕ್ಷಣಕ್ಕೆ ಹೆಚ್ಚಿನ ಅವಕಾಶಗಳು, ಆರೋಗ್ಯ ಸೇವೆಗಳ ಸುಧಾರಣೆ ಮತ್ತು ಜೀವನಮಟ್ಟದ ಏರಿಕೆ ಕಂಡು ಬರುತ್ತದೆ. ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ವಾತಾವರಣವು ಮಂಗಳೂರಿನ ಜನರನ್ನು ಜಾಗತಿಕ ವೇದಿಕೆಗೆ ಸಹಜವಾಗಿ ಸಿದ್ಧಪಡಿಸುತ್ತದೆ ಎಂದು ಅವರು ಹೇಳುತ್ತಾರೆ.
ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಮಹತ್ವದ ಕೊರತೆ ಇನ್ನೂ ಉಳಿದಿದೆ ಎಂದು ಅವರು ಸೂಚಿಸುತ್ತಾರೆ. ಸೇವಾ ವಲಯ, ಐಟಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದರೂ, ಕೈಗಾರಿಕಾ ಮತ್ತು ಉತ್ಪಾದನಾ ಅಭಿವೃದ್ಧಿ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದು ಮಂಗಳೂರಿಗೆ ಮಾತ್ರವಲ್ಲ; ಭಾರತದಾದ್ಯಂತ ವ್ಯಾಪಕವಾಗಿ ಕಂಡುಬರುವ ಸಮಸ್ಯೆಯಾಗಿದೆ ಎಂದು ಅವರು ಇಮ್ತಿಯಾಝ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಈ ಪ್ರದೇಶದ ಭವಿಷ್ಯವನ್ನು ಬಲಪಡಿಸಬೇಕಾದರೆ, ಉತ್ಪಾದನಾ ಕೈಗಾರಿಕೆಗಳನ್ನು ಇಲ್ಲಿಗೆ ಆಕರ್ಷಿಸುವ ಅಗತ್ಯವಿದೆ ಎಂದು ಅವರು ಉಲ್ಲೇಖಿಸಿದರು. ಒಂದೇ ಉತ್ಪನ್ನದ ಮೇಲೆ ಕೇಂದ್ರೀಕರಿಸಿ, ಸ್ಥಳೀಯ ಜನರಿಗೆ ಉದ್ಯೋಗ ಒದಗಿಸುತ್ತಾ, ಜಾಗತಿಕ ಮಾರುಕಟ್ಟೆಗೆ ಪೂರೈಕೆ ಮಾಡುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕಂಪೆನಿಗಳೂ ಇಡೀ ಪ್ರದೇಶದ ಆರ್ಥಿಕ ಮಟ್ಟವನ್ನು ಮೇಲಕ್ಕೆತ್ತಬಲ್ಲವು ಎಂದು ಇಮ್ತಿಯಾಝ್ ಇಕ್ಬಾಲ್ ಸಲಹೆ ನೀಡಿದರು.
AI ಬಗ್ಗೆ ಭಯ ಬೇಡ, ಅದೊಂದು ಹೊಸ ಅವಕಾಶ
ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್‌ನ್ನು ಭಯಪಡುವ ಪ್ರವೃತ್ತಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಮ್ತಿಯಾಝ್ ಇಕ್ಬಾಲ್ ಅವರ ನಿಲುವು ಭಿನ್ನವಾಗಿದೆ. AI ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕವನ್ನು ಅವರು ಅತಿರೇಕವೆಂದು ನೋಡುತ್ತಾರೆ. ತಂತ್ರಜ್ಞಾನವು ಮಾನವ ಶ್ರಮವನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ; ಬದಲಾಗಿ ಮಾನವರು ತಮ್ಮ ಸಮಯ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚು ಮೌಲ್ಯಯುತ ಕಾರ್ಯಗಳಿಗೆ ಬಳಸಲು ಅವಕಾಶ ಮಾಡಿಕೊಡುತ್ತದೆ ಎಂಬುದು ಅವರ ಅಭಿಪ್ರಾಯ.
1970ರ ದಶಕದಿಂದ ಇಂದಿನವರೆಗೆ ಜಾಗತಿಕ ಆರ್ಥಿಕತೆಯ ಬೆಳವಣಿಗೆಯನ್ನು ಗಮನಿಸಿದರೆ, ತಂತ್ರಜ್ಞಾನವೇ ಆ ಬೆಳವಣಿಗೆಯ ಪ್ರಮುಖ ವಾಹಕ ಎಂದು ಅವರು ಹೇಳುತ್ತಾರೆ. ಯಂತ್ರಗಳು ಪುನರಾವರ್ತಿತ ಮತ್ತು ಸರಳ ಕೆಲಸಗಳನ್ನು ನಿರ್ವಹಿಸಿದಾಗ, ಮಾನವರು ಸೃಜನಶೀಲತೆ ಮತ್ತು ಮಾನವೀಯ ತೀರ್ಪು ಅಗತ್ಯವಿರುವ ಕ್ಷೇತ್ರಗಳಲ್ಲಿ ತಮ್ಮ ಶಕ್ತಿಯನ್ನು ಬಳಸಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.
ಈ ಹಿನ್ನೆಲೆಯಲ್ಲೇ, ಯುವಜನರು ಕೃತಕ ಬುದ್ಧಿಮತ್ತೆಯನ್ನು ಎದುರಾಳಿಯಾಗಿ ಅಲ್ಲ, ಸಾಧನವಾಗಿ ನೋಡಬೇಕು ಎಂದು ಅವರು ಸಲಹೆ ನೀಡುತ್ತಾರೆ. “ಯಂತ್ರದಿಂದ ಮಾಡಬಹುದಾದ ಕೆಲಸವನ್ನು ಯಂತ್ರಕ್ಕೆ ಬಿಡಿ; ಯಂತ್ರದಿಂದ ಸಾಧ್ಯವಾಗದ ಮಾನವ ತೀರ್ಮಾನ ಮತ್ತು ಚಿಂತನೆಯ ಅಗತ್ಯವಿರುವ ಕ್ಷೇತ್ರಗಳಲ್ಲಿ ನಿಮ್ಮ ಶಕ್ತಿಯನ್ನು ಹೂಡಿ” ಎಂಬುದು ಅವರ ಸ್ಪಷ್ಟೋಕ್ತಿ.
ಭಾಷಾ ಮಾಧ್ಯಮದ ಹಿಂಜರಿಕೆ ಬೇಡ
ಕನ್ನಡ ಮಾಧ್ಯಮ ಅಥವಾ ಪ್ರಾದೇಶಿಕ ಭಾಷಾ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಕಡಿಮೆ ಮಟ್ಟದವರೆಂದು ಕಾಣುವ ಪ್ರವೃತ್ತಿಯನ್ನು ಇಮ್ತಿಯಾಝ್ ಇಕ್ಬಾಲ್ ಸ್ಪಷ್ಟವಾಗಿ ತಳ್ಳಿಹಾಕುತ್ತಾರೆ. ಅವರ ಪ್ರಕಾರ, ಭಾಷೆಗೆ ಯಶಸ್ಸಿನ ಅಡೆತಡೆಯಲ್ಲ; ಅದು ವ್ಯಕ್ತಿಯ ಶಕ್ತಿಯಾಗಬಹುದು.
ಕನ್ನಡ ಮಾಧ್ಯಮದಲ್ಲಿ ಓದಿರುವುದನ್ನು ದೌರ್ಬಲ್ಯವೆಂದು ಎಂದಿಗೂ ನೋಡಬಾರದು ಎಂದು ಅವರು ಹೇಳುತ್ತಾರೆ. ಭಾಷೆ ಕೇವಲ ಸಂವಹನದ ಸಾಧನ; ಒಬ್ಬ ವಿದ್ಯಾರ್ಥಿ ಯಾವ ಭಾಷಾ ಮಾಧ್ಯಮದಿಂದ ಬಂದಿದ್ದಾನೆ ಎಂಬುದು ಮುಖ್ಯವಲ್ಲ ಎಂಬುದು ಅವರ ಅಭಿಪ್ರಾಯ.
ತಾವು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿ, ನಂತರ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾದ ಅನುಭವವನ್ನು ನೆನಪಿಸಿಕೊಂಡು ಮಾತನಾಡುವ ಅವರು, ಪ್ರಾರಂಭದಲ್ಲಿ ಅದು ಕಷ್ಟಕರವಾಗಿದ್ದರೂ, ಆ ಹೋರಾಟವೇ ತಮ್ಮ ದೃಢಸಂಕಲ್ಪವನ್ನು ಗಟ್ಟಿಗೊಳಿಸಿತು ಎಂದು ಹೇಳುತ್ತಾರೆ. ತಮ್ಮ ದೌರ್ಬಲ್ಯವನ್ನು ಗುರುತಿಸಿ ಅದನ್ನು ಎದುರಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಅವರು ಒತ್ತಿ ಹೇಳುತ್ತಾರೆ.
ಬಹುಭಾಷಾ ಪರಿಸರದಲ್ಲಿ ಬೆಳೆಯುವುದೇ ಒಂದು ದೊಡ್ಡ ಬಲ ಎಂದು ಅವರು ನಂಬುತ್ತಾರೆ. ಕರಾವಳಿ ಕರ್ನಾಟಕದಂತಹ ಪ್ರದೇಶಗಳಲ್ಲಿ ಮಕ್ಕಳು ಸಹಜವಾಗಿಯೇ ಕನ್ನಡ, ತುಳು, ಕೊಂಕಣಿ, ಬ್ಯಾರಿ ಸೇರಿದಂತೆ ಹಲವು ಭಾಷೆಗಳಲ್ಲಿ ಮಾತನಾಡುತ್ತಾ ಬೆಳೆಯುತ್ತಾರೆ. ಇದು ಕೇವಲ ಭಾಷಾ ಕೌಶಲ್ಯವಲ್ಲ; ಇದು ವಿಭಿನ್ನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ರೂಪಿಸುತ್ತದೆ. ಜಾಗತಿಕ ವೇದಿಕೆಯಲ್ಲಿ ಯಶಸ್ವಿಯಾಗಲು ಈ ಗುಣ ಬಹಳ ಮುಖ್ಯ ಎಂದು ಇಮ್ತಿಯಾಝ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಇಮ್ತಿಯಾಝ್ ಇಕ್ಬಾಲ್ ಅವರ ಮಾತಿನಲ್ಲಿ, ಜೀವನದಲ್ಲಿ ಮುಖ್ಯವಾದುದು ನೀವು ಯಾವ ಭಾಷೆಯಲ್ಲಿ ಓದಿದ್ದೀರಿ ಎಂಬುದಲ್ಲ; ನೀವು ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಿದ್ದೀರೋ ಅದು. ಗಮ್ಯಸ್ಥಾನದ ಸ್ಪಷ್ಟತೆ ಇದ್ದರೆ, ಭಾಷೆ, ಮಾಧ್ಯಮ ಮತ್ತು ಪರಿಸ್ಥಿತಿಗಳು ಅಡೆತಡೆಗಳಾಗಿ ಅಲ್ಲ, ಕಲಿಕೆಯ ಹಂತಗಳಾಗಿ ರೂಪುಗೊಳ್ಳುತ್ತವೆ.
ನಿಮ್ಮ ಹಿನ್ನೆಲೆಯ ಬಗ್ಗೆ ಕೀಳರಿಮೆಯಿಂದ ನೋಡುವ ಅಗತ್ಯವಿಲ್ಲ. ಅದು ನಿಮ್ಮ ಶಕ್ತಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು, ಗುರಿಯ ಮೇಲೆ ದೃಢವಾಗಿ ಗಮನಹರಿಸಿದರೆ, ಪ್ರಾದೇಶಿಕ ಭಾಷಾ ಶಾಲೆಯೂ ಜಾಗತಿಕ ವೇದಿಕೆಗೆ ಹೋಗುವ ದಾರಿಯಾಗಬಹುದು ಎಂದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅವರು ಯಶಸ್ಸಿನ ಸಂದೇಶ ನೀಡುತ್ತಾರೆ.