×
Ad

ಹಾಲ್ನೊರೆಯಂತೆ ಭೋರ್ಗರೆಯುವ ಕಾರವಾರದ ಗೋಲಾರಿ ಫಾಲ್ಸ್

Update: 2025-06-09 11:46 IST

ಕಾರವಾರ: ಕಾರವಾರ ತಾಲೂಕೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ಫಾಲ್ಸ್‌ಗಳಿದ್ದು ತೋಡೂರಿನ ಗೋಲಾರಿ ಫಾಲ್ಸ್ ಜನರನ್ನು ಆಕರ್ಷಿಸುವ ಜಲಧಾರೆಗಳಲ್ಲಿ ಒಂದಾಗಿದೆ.

ಉತ್ತರ ಕನ್ನಡ ಜಿಲ್ಲೆ ಜಲಪಾತಗಳ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಳೆಗಾಲದಲ್ಲಿ ಹುಟ್ಟುವ ಅದೆಷ್ಟೋ ಜಲಪಾತಗಳು ಇನ್ನೂ ಬೆಳಕಿಗೆ ಬಂದಿಲ್ಲ. ದಟ್ಟ ಅರಣ್ಯ ಪ್ರದೇಶದಲ್ಲಿ ಇರುವ ಜಲಪಾತಗಳ ಬಳಿ ಜನ ತಲುಪಲಾಗದ ಸ್ಥಿತಿಯಲ್ಲೂ ಇವೆ. ದೂರದ ಬೆಟ್ಟದಲ್ಲಿ ಹಾಲಿನ ನೊರೆಯಂತೆ ಧುಮುಕುವ ಗೋಲಾರಿ ಜಲಪಾತವನ್ನು ಕಂಡು ಚಾರಣಿಗರು ಸ್ಥಳಕ್ಕೆ ತೆರಳಿ ಖುಷಿಪಡುತ್ತಿದ್ದಾರೆ.

ಕಾರವಾರದಿಂದ ಕೇವಲ 17 ಕಿ.ಮೀ. ದೂರದಲ್ಲಿರುವ ತೋಡೂರ ಗ್ರಾಮದ ಅರಣ್ಯ ಪ್ರದೇಶದಲ್ಲಿರುವ ಗೋಲಾರಿ ಫಾಲ್ಸ್‌ಗೆ ತೆರಳಬೇಕಾದರೆ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ. ವಾಹನಗಳ ಮೂಲಕ ಸಾಗಬೇಕು. ಸರಿಸುಮಾರು ಎರಡು ಕಿ.ಮೀ. ಅರಣ್ಯ ಪ್ರದೇಶದಲ್ಲಿ ನಡೆದು ಸಾಗಬೇಕು.

ಕಾನನದ ಮಧ್ಯದಿಂದ ಕಲ್ಲು ಬಂಡೆಗಳನ್ನು ಹತ್ತಿ, ಹಳ್ಳಗಳನ್ನು ದಾಟುತ್ತಾ, ಗಿಡ ಗಂಟಿಗಳ ಮೂಲಕ ನುಸುಳುತ್ತಾ ಸಾಗಿ ಜಲಪಾತದ ಬಳಿ ತಲುಪಿದಾಗ ಯಾವುದೋ ಒಂದು ರೀತಿಯ ರೋಮಾಂಚನದ ಅನುಭವ ನೀಡುತ್ತದೆ. ಗೋಲಾರಿ ಜಲಪಾತ ಕಂಡ ಜನ ಮೈ ಮರೆತು ಜಲ ಕ್ರೀಡೆಯಲ್ಲಿ ಮಗ್ನರಾಗುವುದು ಸಾಮಾನ್ಯ. ಮುಂಜಾನೆ ಇಲ್ಲಿಗೆ ಬರುವ ಫಾಲ್ಸ್ ಹಾಗೂ ಚಾರಣ ಪ್ರಿಯರು ಊಟ ತಿಂಡಿ ತಂದು ಫಾಲ್ಸ್‌ನ ಸೌಂದರ್ಯವನ್ನು ಸವಿಯುತ್ತಾರೆ. ಉಕ್ಕಿ ಹರಿಯುವ ಗೋಲಾರಿ ಫಾಲ್ಸ್ ನೋಡಲು ದೂರದ ಪ್ರದೇಶಗಳಿಂದಲೂ ಜನರು ಆಗಮಿಸುತ್ತಾರೆ.

ಅರಣ್ಯದಿಂದ ಧುಮುಕುವ ಗೋಲಾರಿ ಫಾಲ್ಸ್‌ನಲ್ಲಿ ಮಳೆಗಾಲ, ಚಳಿಗಾಲ ಸೇರಿದಂತೆ ಬೇಸಿಗೆಯ ಕೊನೆವರೆಗೂ ನೀರು ಇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಬೆಟ್ಟದ ತುದಿಯಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಗೋಲಾರಿ ಜಲಪಾತದ ಬಳಿ ಜನ ಜಾತ್ರೆಯೇ ಸೇರುತ್ತದೆ. ಇದು ದಟ್ಟ ಅರಣ್ಯ ಪ್ರದೇಶದಲ್ಲಿದ್ದರೂ ಪ್ರವಾಸಿಗರು, ಚಾರಣ ಪ್ರಿಯರ ಪಾಲಿಗೆ ಉತ್ತಮ ಸ್ಥಳವಾಗಿದೆ.

ಗೋಲಾರಿಯ ಮೇಲ್ಭಾಗದಲ್ಲೂ ಅತ್ಯಾಕರ್ಷಕ ಜಲಪಾತಗಳಿವೆ. ಆದರೆ ಮೇಲಿನ ಜಲಪಾತಗಳನ್ನು ವೀಕ್ಷಣೆ ಮಾಡಬೇಕು ಎಂದು ಜಾರುವ ಕಲ್ಲುಬಂಡೆಗಳನ್ನು ಹಿಡಿದು ಹತ್ತಿದರೆ ಅನೇಕ ಜಲಪಾತಗಳನ್ನು ನೋಡಬಹುದಾಗಿದೆ. ಗೋಲಾರಿ ಫಾಲ್ಸ್ ವೀಕ್ಷಣೆಗೆ ಎಷ್ಟು ಸೌಂದರ್ಯವೋ ಅಷ್ಟೇ ಅಪಾಯಕಾರಿ. ಬಂಡೆಕಲ್ಲುಗಳ ಮೇಲೆ ಹತ್ತಿಳಿಯುವಾಗ ಹೆಚ್ಚಿ ನ ಜಾಗೃತೆವಹಿಸದಿದ್ದರೆ ಅಪಾಯ ಖಚಿತ.

ಫಾಲ್ಸ್‌ಗೆ ತೆರಳಲು ನಿರ್ಬಂಧ :

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ ತಿಂಗಳ ಆರಂಭದಿಂದಲೇ ಅತಿ ಹೆಚ್ಚು ಮಳೆಯಾಗಿದೆ. ಇದರಿಂದ ಇಲ್ಲಿನ ಫಾಲ್ಸ್‌ಗಳು ಅಪಾಯದ ಅಂಚಿಗೆ ತಲುಪುತ್ತಿವೆ. ಈ ಕಾರಣದಿಂದ ಜಿಲ್ಲಾಡಳಿತ ಜಿಲ್ಲೆಯ ಯಾವುದೇ ಜಲಪಾತ, ಕಡಲತೀರಕ್ಕೆ ಪ್ರವಾಸಿಗರು ತೆರಳುವುದನ್ನು ನಿರ್ಬಂಧ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶ್ರೀನಿವಾಸ ಬಾಡ್ಕರ್

contributor

Similar News