ಪ್ರಭುತ್ವದ ದುರ್ದಾಳಿ ಮತ್ತು ಕಾರ್ಮಿಕರ ಸಂಕಟಗಳು
ಕಾರ್ಮಿಕರ ಸ್ವಾತಂತ್ರ್ಯ
ಬಡತನ ಉಲ್ಬಣಗೊಂಡು ಕಾರ್ಮಿಕರು ಬೀದಿಪಾಲಾಗುವಂತಹ ನೀತಿಗಳನ್ನು ಕಾರ್ಮಿಕರ ಕಾಯ್ದೆಗಳ ತಿದ್ದುಪಡಿಗಳನ್ನು ಮಾಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪೆನಿಗಳ ಸೇವಕರನ್ನಾಗಿ ಮಾಡಲು ಕೇಂದ್ರ ಸರಕಾರವು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಿದೆ. ಈ ಸಂಹಿತೆಗಳ ಅಪಾಯವನ್ನು ಕಾರ್ಮಿಕವರ್ಗವು ಮನಗಾಣುತ್ತಿದೆ.
ಭಾರತದಲ್ಲಿ ಊಳಿಗಮಾನ್ಯ ವ್ಯವಸ್ಥೆಯು ಸಂಪೂರ್ಣ ನಾಶವಾಗಿ ಬಂಡವಾಳಶಾಹಿ ಅಭಿವೃದ್ಧಿಯಾಗಲಿಲ್ಲ. ಭಾರತದಲ್ಲಿ ಆಧುನಿಕ ಕಾರ್ಮಿಕ ವಿಭಾಗವು ರೆಲ್ವೆ ನಿರ್ಮಾಣದಲ್ಲಿ ಮೊಳಕೆಯೊಡೆಯಿತು. ಇದಕ್ಕೆ ಪೂರಕವಾಗಿ ಕಲ್ಲಿದ್ದಲು ಆವಿಷ್ಕಾರವಾಗಿ ಮೊದಲಿಗೆ ಬಳಕೆಗೆ ಬಂದಿದ್ದು 1770ರ ಹೊತ್ತಿಗೆ. ಸಂಪರ್ಕ ಸಾಧನೆಗಾಗಿ ರೈಲ್ವೆ, ಹಡಗು, ಸಾರಿಗೆ ಮಾರ್ಗ ಸ್ಥಾಪನೆಯಾಯಿತು. ಆಮದು, ರಫ್ತು ಹೆಚ್ಚಳವಾಗಿ ಅಗತ್ಯಕ್ಕೆ ಪೂರಕವಾಗಿ ಅಕ್ಕಿ ಹಿಟ್ಟಿನ ಗಿರಣಿ, ಪ್ಯಾಕಿಂಗ್ ಮನೆಗಳು, ಹತ್ತಿ ಒತ್ತುವ ಮತ್ತು ಜಿನ್ನಿಂಗ್ ಸಂಸ್ಥೆಗಳು, ಉದ್ಯಮಗಳು ಬೆಳೆದವು. ಭಾರತ ಕಾರ್ಮಿಕರು ಪರಂಪರಾಗತ ರೀತಿ ರಿವಾಜುಗಳೊಂದಿಗೆ ಆಧುನಿಕ ಕೈಗಾರಿಕೆಗಳಲ್ಲಿ ಪ್ರವೇಶಿಸಿ ಆಧುನಿಕ ಕಾರ್ಮಿಕರಾದರು. ಕಾರ್ಮಿಕ ವರ್ಗವು ಭಾರತದ ಬಂಡವಾಳಶಾಹಿ ಅಭಿವೃದ್ಧಿಯ ಉತ್ಪನ್ನವಾಗಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿಯು ಭಾರತದ ಸಾಂಪ್ರದಾಯಿಕ ಸ್ವಾವಲಂಬಿ ಸಮಾಜಗಳ ಉತ್ಪಾದನಾ ವ್ಯವಸ್ಥೆಯನ್ನು ಸಂಪೂರ್ಣ ನಾಶ ಮಾಡಿತು. ಹಳೆಯ ಆರ್ಥಿಕ ವ್ಯವಸ್ಥೆ ಮತ್ತು ಸಾಮಾಜಿಕ ಶ್ರಮ ವಿಭಜನೆಗಳು ಏಕಕಾಲದಲ್ಲಿ ಚೂರುಚೂರಾದವು. 18ನೇ ಶತಮಾನದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯು ಭಾರತದ ಸಂಪತ್ತನ್ನು ಅಗಾಧವಾಗಿ ಲೂಟಿಗೈದಿದೆ. ವಸಾಹತುಶಾಹಿಯು ಭಾರತದ ಕಾರ್ಮಿಕರನ್ನು ಸುಧಾರಣಾವಾದಿ ಸಿದ್ಧಾಂತ ಹೇಳುತ್ತ ಕ್ರಮೇಣ ಅವರನ್ನು ಭಾರತೀಯ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆಯತ್ತ ತಳ್ಳಿತು. ಮತ್ತು ಕಾರ್ಮಿಕ ವರ್ಗವನ್ನು ಕ್ರಾಂತಿಕಾರಕ ಹೋರಾಟದಿಂದ ದೂರವಿರಿಸಲು ಪ್ರಯತ್ನಿಸಿತು.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಕಾರ್ಮಿಕ ವರ್ಗವು ಅತ್ಯಂತ ಪರಿಣಾಮಕಾರಿ ಪಾತ್ರವಹಿಸಿದೆ. ವಾಣಿಜ್ಯ ನಗರಿಗಳಾದ ಮುಂಬೈ, ಕೋಲ್ಕತಾ, ಮದ್ರಾಸ್ ನಗರಗಳಲ್ಲಿ ಆರ್ಥಿಕ ರಾಜಕೀಯ ಚಟುವಟಿಕೆಗಳು ಬೆಳೆದುಬಂದವು. ಮದ್ರಾಸ್‌ನ ಸರಕಾರಿ ಮುದ್ರಣಾಲಯ, ಬಾಂಬೆಯ ಗಿರಣಿ ಕಾರ್ಮಿಕರು, ಅಹ್ಮದಾಬಾದ್‌ನಲ್ಲಿ ಕಾರ್ಮಿಕರ ಆಂದೋಲನಗಳು ಭುಗಿಲೆದ್ದವು. ರೈತ ಕಾರ್ಮಿಕರ ಸಖ್ಯತೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಹೋರಾಟಗಳು ಚಿಮ್ಮಿದವು. ಕಾನ್ಪುರದ ಜವಳಿ ಕಾರ್ಮಿಕರು, ಬಂಗಾಳದ ಸೆಣಬು ಗಿರಣಿ ಕಾರ್ಮಿಕರು, ಕಾಟನ್ ಮಿಲ್, ರೈಲ್ವೆ ಕಾರ್ಮಿಕರು ಹೀಗೆ ಕಾರ್ಮಿಕರ ವರ್ಗವು ಸ್ವಾತಂತ್ರ್ಯಪೂರ್ವದಲ್ಲಿಯೇ ಚಳವಳಿಯಲ್ಲಿ ಧುಮುಕಿದರು. ಕಾರ್ಮಿಕರ ಹೋರಾಟಗಳು ವಸಾಹತುಶಾಹಿಗಳ ಆತಂಕಕ್ಕೆ ಕಾರಣವಾಯಿತು. ಕಾರ್ಮಿಕ ವರ್ಗದಲ್ಲಿ ರಾಜಕೀಯ ಪ್ರಜ್ಞೆ ಮೊಳಕೆಯೊಡೆದು ಸ್ವಾತಂತ್ರ್ಯ ಪಡೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು. ಈ ಹೋರಾಟದ ಕಿಚ್ಚಿನಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯು ತಲ್ಲಣಿಸಿತು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯುವಲ್ಲಿ ಕಾರ್ಮಿಕರು ಮಹತ್ವದ ಪಾತ್ರ ನಿರ್ವಹಿಸಿದ್ದು ಚರಿತ್ರೆಯಲ್ಲಿ ದಾಖಲಾಗಿದೆ.
ಪ್ರಸಕ್ತ ಸಂದರ್ಭದಲ್ಲಿ ಕಾರ್ಮಿಕರ ಪರಿಸ್ಥಿತಿ
ಶ್ರಮಿಕರ ಬೆವರಿನಲ್ಲಿ ಲೋಕವು ಅರಳಿದೆ. ಜಗತ್ತಿನ ಸಮಗ್ರ ಅಭಿವೃದ್ಧಿಗೆ ಶ್ರಮಿಕರು ಕಾರಣ. ಪ್ರಭುತ್ವವು ಮತ್ತು ಬಂಡವಾಳಶಾಹಿಯು ಶ್ರಮಿಕರ ಶ್ರಮದಿಂದ ಸಂಪತ್ತು ವೃದ್ಧಿಸಿಕೊಂಡು ಕಾರ್ಮಿಕರನ್ನು ಬಳಸಿ ಬಿಸಾಡುವ ಧೋರಣೆಯನ್ನು ಜಾರಿಗೊಳಿಸಿದೆ. ಸರಕಾರಿ ಇಲಾಖೆಗಳಲ್ಲಿಯೂ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ತಂದು ಉದ್ಯೋಗ ಭದ್ರತೆಗೆ ಸಂಚಕಾರ ಬಂದಿದೆ. ಸಂಘಟಿತ, ಅಸಂಘಟಿತ ಕಾರ್ಮಿಕರು, ಸಾರ್ವಜನಿಕ, ಖಾಸಗಿ, ಕೈಗಾರಿಕೆ, ಸೇವಾ ವಲಯಗಳು, ಕಟ್ಟಡ ಕಾರ್ಮಿಕರು, ಜಲವಿದ್ಯುತ್ ಮತ್ತಿತರ ಮೂಲಸೌಕರ್ಯಗಳಲ್ಲಿನ ಕಾರ್ಮಿಕರು, ಯೋಜನೆ ಕಾರ್ಮಿಕರು, ಬೀಡಿ, ಟೆಂಡ ಎಲೆ ಬೆಳೆಗಾರರು, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರು, ಅನ್ವೇಷಣೆ, ಗಣಿಗಾರಿಕೆ, ಸಾರಿಗೆ, ತೈಲ, ಅನಿಲ, ಕಲ್ಲಿದ್ದಲು ಗಣಿವಿಭಾಗದ ಕಾರ್ಮಿಕರು, ಮೀನುಗಾರಿಕೆ, ಬೀದಿ ಮಾರಾಟಗಾರರು, ಗೃಹಬಳಕೆಯ ಕಾರ್ಮಿಕರು, ಕಾರ್ಪೆಂಟ್, ನೇಯ್ಗೆ, ಅಗ್ನಿಶಾಮಕ, ಪ್ಲಾಂಟೇಷನ್, ಕೃಷಿ ಕಾರ್ಮಿಕರು, ಗಿಗ್ ಕಾರ್ಮಿಕರು, ಐಟಿ, ಐಟಿಎಸ್ ನೌಕರರು, ಬ್ಯಾಂಕ್, ವಿಮೆ ನೌಕರರು, ರಾಜ್ಯ, ಕೇಂದ್ರ ಸರಕಾರಿ ನೌಕರರು, ರಕ್ಷಣಾ, ಟೆಲಿಕಾಂ ಅಂಚೆ ನೌಕರರು, ಬಂದರು ಮತ್ತು ಡಾಕ್ ಕಾರ್ಮಿಕರು, ಸಾರಿಗೆ ಕಾರ್ಮಿಕರೊಂದಿಗೆ ರಸ್ತೆ, ಜಲ, ವಾಯು, ರೆಲ್ವೆ ಸಾರಿಗೆ ನೌಕರರು, ಆರೋಗ್ಯ ಮತ್ತು ಶಿಕ್ಷಣ ವಲಯ ನೌಕರರು, ಕಲೆ, ಸಂಸ್ಕೃತಿ, ವಿಜ್ಞಾನ ಕ್ಷೇತ್ರದಲ್ಲಿ ತೊಡಗಿದವರು, ಮುದ್ರಣ ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ಮಾಡುವವರು ಹೀಗೆ ಬದುಕಿನ ಸಮಸ್ತ ಆಯಾಮದ ಕಾರ್ಮಿಕ ಸಮುದಾಯವೇ ಉತ್ಪಾದನೆಯ ಮೂಲಶಕ್ತಿ. ಆದರೆ ಈ ಮೂಲ ಶಕ್ತಿಯು ಎಲ್ಲ ರೀತಿಯ ಮೂಲಭೂತ ಹಕ್ಕುಗಳಿಂದ ವಂಚಿತವಾಗಿದೆ. ಬಡತನ ಉಲ್ಬಣಗೊಂಡು ಕಾರ್ಮಿಕರು ಬೀದಿಪಾಲಾಗುವಂತಹ ನೀತಿಗಳನ್ನು ಕಾರ್ಮಿಕರ ಕಾಯ್ದೆಗಳ ತಿದ್ದುಪಡಿಗಳನ್ನು ಮಾಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪೆನಿಗಳ ಸೇವಕರನ್ನಾಗಿ ಮಾಡಲು ಕೇಂದ್ರ ಸರಕಾರವು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಸಿದೆ. ಈ ಸಂಹಿತೆಗಳ ಅಪಾಯವನ್ನು ಕಾರ್ಮಿಕವರ್ಗವು ಮನಗಾಣುತ್ತಿದೆ.
ಅಸಂಘಟಿತ, ಸ್ಕೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತಂದು ರೂ.600 ಒಂದು ದಿನದ ವೇತನವಾಗಿ ನಿಗದಿಸಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಸರಕಾರವು ತಿರಸ್ಕರಿಸಿದೆ. ರೂ.187 ಕೂಲಿಯನ್ನು ನಿರ್ದಿಷ್ಟಗೊಳಿಸಿದೆ. ಇದರಿಂದ ವೇತನ ಹೆಚ್ಚಳಕ್ಕೆ ತಡೆಯಾಗಲಿದೆ. ಭಾರತದ ಶೇ. 70 ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಬಾರದೆಂಬ ನಿಯಮಗಳನ್ನು ಚಾಲ್ತಿಯಲ್ಲಿ ತರಲಾಗಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು. ಕಾರ್ಖಾನೆಯ ಮಾಲಕರು ಯಾವಾಗ ಬೇಕಾದರೂ ಕಾರ್ಖಾನೆ ಮುಚ್ಚುವ, ತೆರೆಯುವ ಸ್ವಾತಂತ್ರ್ಯ ಕೊಡಲಾಗಿದೆ. ಮುಷ್ಕರವು ಕಾರ್ಮಿಕರ ಹಕ್ಕಾಗಿದೆ. ಆದರೆ ಈಗ ಮುಷ್ಕರ ಮಾಡುವ ಹಾಗಿಲ್ಲ.
ಮುಷ್ಕರವನ್ನು ಕಾನೂನು ಬಾಹಿರವಾಗಿಸಲಾಗಿದೆ. ಮುಷ್ಕರದಲ್ಲಿ ತೊಡಗಿದರೆ ಶಿಕ್ಷೆ, ಸಂಘದ ನೋಂದಣಿ ರದ್ದುಗೊಳಿಸುವ ಅಂಶಗಳನ್ನು ಸಂಹಿತೆಯಲ್ಲಿ ತರಲಾಗಿದೆ. ಕಾರ್ಮಿಕರ ಸಂಘದ ನೋಂದಣಿಯ ಅಧಿಕಾರವನ್ನು ಮಾಲಕರ ಮರ್ಜಿಗೆ ಬಿಡಲಾಗಿದೆ. ಕಾರ್ಮಿಕರ ವೆಚ್ಚ ಉಳಿಸಲು ತ್ಯಾಗ ಬಲಿದಾನದಿಂದ ಪಡೆದುಕೊಂಡ 8 ಗಂಟೆಯ ದುಡಿಮೆಯನ್ನು 12 ಗಂಟೆಗೆ ಹೆಚ್ಚಿಸಲಾಗಿದೆ. ಓಟಿಯನ್ನು ಮೂರು ತಿಂಗಳಲ್ಲಿ 50 ಗಂಟೆಯಿಂದ 125 ಗಂಟೆಗೆ ಏರಿಸಲು ಅನುಮತಿಸಬೇಕೆಂದು ಸಂಹಿತೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರಿಂದ ಕಾರ್ಮಿಕರ ಆರೋಗ್ಯವು ಸಂಪೂರ್ಣ ಹದಗೆಡಲಿದೆ. ನಿವೃತ್ತಿಯಾದ ಕಾರ್ಮಿಕರಿಗೆ ರೂ. 9000 ವೇತನದ ಬದಲಿಗೆ ಇಎಸ್‌ಐ ಮತ್ತು ಪಿಎಫ್‌ನ ಸ್ವಾತಂತ್ರ್ಯವನ್ನು ಮಾಲಕರಿಗೆ ನೀಡಿ, ನಿಧಿಗಳ ನಿರ್ವಹಣೆಯ ಅಧಿಕಾರ ಕಾರ್ಯಾಂಗಕ್ಕೆ ನೀಡಿದೆ. ಇಎಸ್‌ಐ, ಪಿಎಫ್ ಗುತ್ತಿಗೆ ಕಾರ್ಮಿಕರ, ಕಟ್ಟಡ ಕಾರ್ಮಿಕರ ಕನಿಷ್ಠ ವೇತನದ ಎಲ್ಲಾ ತ್ರಿಪಕ್ಷೀಯ ಸೂತ್ರಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಮಾಲಕರಿಗೆ ನೀಡಿದೆ. ಕಾರ್ಮಿಕರನ್ನು ಪ್ರತಿನಿಧಿಸುವ ಎಲ್ಲ ವ್ಯವಸ್ಥೆಗಳಿಗೆ ತಿಲಾಂಜಲಿ ನೀಡಿದೆ.
ಕಾರ್ಮಿಕರ ಮುಷ್ಕರವನ್ನು ಸಂಘಟಿತ ಅಪರಾಧವೆನ್ನುವ ಸರಕಾರವು ಬಾಯ್ಲರ್ ಕಾಯ್ದೆ, ಅರಣ್ಯ ಕಾಯ್ದೆ, ರಬ್ಬರ್ ಕಾಯ್ದೆ ಹಲವಾರು ಔಷಧವಲಯಗಳಿಗೆ ಸಂಬಂಧಿಸಿದ 180 ಅಪರಾಧಗಳಿಂದ ಮಾಲಕರನ್ನು ಮುಕ್ತಗೊಳಿಸಿದೆ.
ನಿವ್ವಳ ಮೌಲ್ಯವರ್ಧನೆಯಲ್ಲಿ 2020ರಲ್ಲಿ ಕಾರ್ಮಿಕರ ವೇತನ ಪಾಲು ಶೇ.18.9 ಇದ್ದು 2023ಕ್ಕೆ ಶೇ.15.9ಕ್ಕೆ ಇಳಿಸಲಾಗಿದೆ. ಮಾಲಕರ ಪಾಲು ಶೇ.38.7ರಿಂದ ಶೇ.51.9ಕ್ಕೆ ಏರಿಸಲಾಗಿದೆ. ಸರಕಾರದ ಒಡೆತನದಲ್ಲಿದ್ದ ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್, ಡೀಸೆೆಲ್, ಗ್ಯಾಸನ್ನು ಉತ್ಪಾದಿಸುವ ಘಟಕಗಳು, ಮಿಲಿಟರಿಗೆ ಅಗತ್ಯ ಪರಿಕರಗಳನ್ನು ಉತ್ಪಾದಿಸುವ ಕಾರ್ಖಾನೆಗಳು, ವಿಮಾನ, ರೈಲ್ವೆ, ಬಸ್‌ಗಳ ಉಪಕರಣಗಳನ್ನು ಉತ್ಪಾದಿಸುವ ಸಾರ್ವಜನಿಕ ಕಾರ್ಖಾನೆಗಳು, ಸ್ಟೀಲ್, ಉಕ್ಕು, ಕಲ್ಲಿದ್ದಲು ಉತ್ಪಾದನೆಯ ಕಾರ್ಖಾನೆಗಳು, ಬ್ಯಾಂಕ್, ಎಲ್‌ಐಸಿಯಂತಹ ಆರ್ಥಿಕ ಸೇವೆಗಳನ್ನು ಖಾಸಗೀಕರಿಸಿ ವಿದೇಶಿ ಬಂಡವಾಳಕ್ಕೆ ಅವಕಾಶ ನೀಡಲಾಗಿದೆ. ಕಾರ್ಪೊರೇಟ್ ಬಂಡವಾಳಗಾರರ ಮಿಗುತಾಯ ಮೌಲ್ಯವನ್ನು ಹೆಚ್ಚಿಸಲು ದೇಶದ ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರ ಬೆನ್ನುಮೂಳೆ ಮುರಿಯಲಾಗುತ್ತಿದೆ. ತೆರಿಗೆ ಭಾರ ಮತ್ತು ಬೆಲೆಯೇರಿಕೆಯಿಂದಲೂ ಕಾರ್ಮಿಕರನ್ನು ಬಡತನದ ಕೂಪಕ್ಕೆ ತಳ್ಳಲಾಗುತ್ತಿದೆ. ಸಾರ್ವಜನಿಕ ಉದ್ದಿಮೆ, ನಿಗಮ ಮತ್ತು ಇಲಾಖೆಗಳನ್ನು ಖಾಸಗೀಕರಿಸುವ ಯೋಜನೆ ತರಲಾಗಿದೆ. ಮಹಿಳಾ ಕಾರ್ಮಿಕರಿಗೆ ಇರುವ ಕಾಯ್ದೆಪ್ರಕಾರದ ಸೌಲಭ್ಯಗಳನ್ನು ರದ್ದುಗೊಳಿಸಲಾಗಿದೆ. ಹಾಗೆ ನೋಡಿದರೆ ಕಾರ್ಮಿಕರಲ್ಲಿ ವೇತನರಹಿತ ಗೃಹ ಕಾರ್ಮಿಕಳು ಎಂದರೆ ಅದು ಮಹಿಳೆ. ಅವಳ ವಿಮೋಚನೆಯೂ ಒಟ್ಟು ಶ್ರಮಿಕರ ವಿಮೋಚನೆಯೊಂದಿಗೆ ಬೆಸೆದುಕೊಂಡಿದೆ.
ಗ್ರಾಮೀಣ ಪ್ರದೇಶದಲ್ಲಿ ನೂರು ದಿನಗಳ ನರೇಗಾ ಉದ್ಯೋಗಾವಕಾಶವನ್ನು ಕಳೆಯಲು ಹೊರಟಿದೆ ಸರಕಾರ. ಉದ್ಯೋಗ ಖಾತ್ರಿ ಕಾಯ್ದೆಗೆ ಪತೀ ವರ್ಷ ಕೊಡಬೇಕಾದ ಬಜೆಟ್‌ನಲ್ಲಿ ಸಂಪೂರ್ಣ ಕಡಿತ ಮಾಡುತ್ತ ಉದ್ಯೋಗವು ಜನತೆಗೆ ದೊರೆಯದಂತಹ ತಾಂತ್ರಿಕ ಅಡ್ಡಿಗಳನ್ನು ಸೃಷ್ಟಿಸಲಾಗಿದೆ. ಅರ್ಥಾತ್ ನರೇಗಾದ ಕತ್ತು ಹಿಸುಕಲು ಹೊರಟಿದೆ.
ದೇಶದ ಸಂಪತ್ತು ಸೃಷ್ಟಿಸಿದ್ದು ಕಾರ್ಮಿಕರು. ಆದರೆ ಬಡತನ ಕಾರ್ಮಿಕರಿಗೆ ಮತ್ತು ಸಂಪತ್ತು ಮಾಲಕರಿಗೆ ಎಂಬಂತಾಗಿದೆ. ದೇಶದ ಶೇ. 10 ಜನರ ಕೈಯಲ್ಲಿ ಒಟ್ಟು ಆದಾಯದ ಶೇ.72 ಮತ್ತು ಶೇ. 1 ಶ್ರೀಮಂತರ ಕೈಯಲ್ಲಿ ಶೇ.40.5 ಸಂಪತ್ತು ಇದೆ. ದೇಶದ ತಳಹಂತದ ಒಟ್ಟು ಶೇ. 50 ಜನರ ಕೈಯಲ್ಲಿ ಒಟ್ಟು ಸಂಪತ್ತಿನ ಶೇ. 3 ಮಾತ್ರ ಇದೆ. ಕೇವಲ 21 ಭಾರತೀಯ ಕೋಟ್ಯಧಿಪತಿಗಳು ದೇಶದ ಶೇ. 70 ಜನರಿಗೆ ಸಲ್ಲಬೇಕಾದ ಸಂಪತ್ತನ್ನು ತಮ್ಮ ಕೈವಶವಾಗಿಸಿಕೊಂಡಿದ್ದಾರೆ. ಈಚೆಗಿನ ಅಂಕಿಸಂಖ್ಯೆಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇ.20 ಜನರಿಗೆ ಸಲ್ಲಬೇಕಾದ ಆದಾಯವು ಕೇವಲ 5 ಜನ ಕಾರ್ಪೊರೇಟ್‌ಗಳ ಹತ್ತಿರವಿದೆ. ಬಂಡವಾಳದ ಅಸಮಾನ ಹಂಚಿಕೆ ಎಂದರೆ ಇದೇ ಆಗಿದೆ. ನಿರುದ್ಯೋಗ, ಹಸಿವು, ಬಡತನದಲ್ಲಿ ಭಾರತದ ಶ್ರಮಿಕರು ನರಳುವಂತೆ ಮಾಡಲಾಗಿದೆ. ಜೀವನಾವಶ್ಯಕ ವಸ್ತುಗಳ ಮೇಲೆ ವಿಪರೀತ ತೆರಿಗೆ ಜಿಎಸ್‌ಟಿ ಹೇರಲಾಗಿದೆ. ಇದನ್ನೆಲ್ಲ ಪ್ರಶ್ನಿಸಬಾರದೆಂದು ಭಾವನಾತ್ಮಕ ಸಂಗತಿಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಅತ್ಯಾಚಾರ, ದೌರ್ಜನ್ಯ, ಜಾತಿತಾರತಮ್ಯ, ಕೊಲೆ, ಸುಲಿಗೆ ಹೆಚ್ಚಳಗೊಳಿಸುತ್ತ ಸಮಾಜದಲ್ಲಿ ಭಯೋತ್ಪಾದನೆಯನ್ನು ಬೆಳೆಸಲಾಗುತ್ತಿದೆ.
ಕಾರ್ಮಿಕ ಶ್ರಮವನ್ನು ಬಿಟ್ಟಿಯಾಗಿ ಲೂಟಿಗೈಯಲು ಪ್ರಭುತ್ವ ಮತ್ತು ಕಾರ್ಪೊರೇಟ್‌ಗಳು ಒಟ್ಟಾಗಿ ಸೇರಿ ಹೆಣೆದ ಸಂಚೆಂದರೆ ಅದು ಕೋಮುವಾದ. ಕಾರ್ಮಿಕ ವರ್ಗವು ಸಮಪಾಲು ಪಡೆಯದಂತೆ ಮನಸ್ಥಿತಿ ರೂಪಿಸುವಲ್ಲಿ ಬಂಡವಾಳಶಾಹಿಯು ಅನುಸರಿಸಿದ ತಂತ್ರವೆಂದರೆ ಭಾರತೀಯ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆ ಗಟ್ಟಿಗೊಳಿಸಿದ್ದು. ಈಗ ಕಾರ್ಪೊರೇಟ್ ಮತ್ತು ಪ್ರಭುತ್ವ ಎರಡೂ ಸೇರಿ ಭಾರತೀಯ ಸಂಸ್ಕೃತಿ ಹೆಸರಿನಲ್ಲಿ ಕೋಮುವಿಭಜನೆಯ ಷಡ್ಯಂತ್ರ ಹೆಣೆದು ಕಾರ್ಮಿಕ ಶಕ್ತಿಯನ್ನು ಒಡೆದು ಆಳಲು ಹವಣಿಸುತಿವೆ. ಆದ್ದರಿಂದ ಕಾರ್ಮಿಕ ಚಳವಳಿಗಳು ಮತ್ತೆ ಸ್ವಾತಂತ್ರ್ಯ ಪೂರ್ವದಲ್ಲಿನಂತೆ ಐಕ್ಯತೆಯಿಂದ ಭುಗಿಲೇಳಬೇಕಿದೆ. ಏಕೆಂದರೆ ಎಲ್ಲ ಸಂಪತ್ತಿನ ಸೃಷ್ಟಿಕರ್ತರು ಶ್ರಮಿಕರೇ ಆಗಿದ್ದಾರೆ. ಸಂಪತ್ತಿನಲ್ಲಿ ಕಾರ್ಮಿಕರದೇ ಪಾಲಿದೆ. ಹಕ್ಕಿದೆ.