ಶಿಥಿಲಾವಸ್ಥೆಯಲ್ಲಿ ಹುಪಳಾ ಗ್ರಾಮದ ಸರಕಾರಿ ಶಾಲೆ; ಪ್ರಾಣ ಭಯದಲ್ಲೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಬೀದರ್: ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳು ಪ್ರಾಣ ಭೀತಿಯಿಂದ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಶಾಲೆಯಲ್ಲಿ 80 ವಿದ್ಯಾರ್ಥಿಗಳಿದ್ದಾರೆ. ಮರಾಠಿ ಮಾಧ್ಯಮಕ್ಕೆ ಇಬ್ಬರು ಹಾಗೂ ಕನ್ನಡ ಮಾಧ್ಯಮಕ್ಕೆ 4 ಮಂದಿ ಸಹಿತ ಒಟ್ಟು 6 ಮಂದಿ ಶಿಕ್ಷಕ, ಶಿಕ್ಷಕಿಯರಿದ್ದಾರೆ.
ಈ ಶಾಲೆಯಲ್ಲಿ ಸುಮಾರು 6 ರಿಂದ 7 ಕೋಣೆಗಳಿದ್ದು, ಎಲ್ಲ ಕೋಣೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಛಾವಣಿಯು ಅಲ್ಲಲ್ಲಿ ಕುಸಿದು ಒಳಗಡೆ ಇರುವ ಕೊಳೆತ ಕಬ್ಬಿಣದ ತುಂಡುಗಳು ಕಾಣುತ್ತಿವೆ. ಶಾಲೆಯ ಪಿಲ್ಲರ್‌ಗಳ ಪ್ಲಾಸ್ಟರ್ ಬಿದ್ದಿದ್ದು, ಶಾಲೆ ಇಂದೋ, ನಾಳೆಯೋ ಬೀಳಬಹುದಾದ ಆತಂಕ ಗ್ರಾಮಸ್ಥರಲ್ಲಿದೆ.
ಇಂತಹ ಸ್ಥಿತಿಯಲ್ಲಿರುವ ಕೋಣೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಆತಂಕದಲ್ಲಿಯೇ ಪಾಠ ಕೇಳುತ್ತಿದ್ದಾರೆ. ಹಾಗೆಯೇ ಶಿಕ್ಷಕ, ಶಿಕ್ಷಕಿಯರು ಕೂಡ ಪ್ರಾಣ ಭಯದಲ್ಲಿಯೇ ಪಾಠ ಮಾಡುತ್ತಿದ್ದಾರೆ.
ಪಾಳು ಬಿದ್ದ ಕೋಣೆಯೇ ಶೌಚಾಲಯ: ಇಲ್ಲಿ ಪಾಳು ಬಿದ್ದ ಚಿಕ್ಕ ಕೋಣೆಯೇ ಮಕ್ಕಳಿಗೆ ಶೌಚಾಲಯವಾಗಿದೆ. ಈ ಶೌಚಾಲಯದಲ್ಲಿ ಮಕ್ಕಳ ಎತ್ತರಕ್ಕೆ ಹುಲ್ಲು ಬೆಳೆದು ನಿಂತಿದೆ. ಅಲ್ಲೇ ಮಕ್ಕಳು ಶೌಚ ಮಾಡಬೇಕು. ಚಿಕ್ಕ ಮಕ್ಕಳು ಹೊರಗಡೆ ಬಯಲಿಗೆ ಹೋಗಿ ಶೌಚ ಮಾಡುತ್ತಾರೆ. ಕೆಲವು ವಿದ್ಯಾರ್ಥಿಗಳ ಮನೆ ಹತ್ತಿರ ಇರುವುದರಿಂದ ಅವರು ಶೌಚಕ್ಕಾಗಿ ಮನೆಗೆ ಹೋಗುತ್ತಾರೆ. ಇನ್ನೊಂದು ಚಿಕ್ಕ ಶೌಚಾಲಯವಿದ್ದು, ಅದನ್ನು ಶಿಕ್ಷಕ ಮತ್ತು ಶಿಕ್ಷಕಿಯರು ಉಪಯೋಗಿಸುತ್ತಿದ್ದಾರೆ.
‘ಕೆಲವು ದಿನಗಳ ಹಿಂದೆ ಶೌಚಾಲಯದ ಕೋಣೆಗೆ ಹಾವು ಬಂದಿತ್ತು. ನಮಗೆ ಬೇರೆ ಬೇರೆ ಶೌಚಾಲಯದ ವ್ಯವಸ್ಥೆ ಇಲ್ಲದೆ ಇದನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ. ನಮಗಂತೂ ತುಂಬಾ ತೊಂದರೆಯಾಗುತ್ತಿದೆ’ ಎಂದು ವಿದ್ಯಾರ್ಥಿನಿಯರು ನೋವು ತೋಡಿಕೊಂಡಿದ್ದಾರೆ.
‘ಈ ಶಾಲೆಗೆ ಸ್ವಂತ ನೀರಿನ ವ್ಯವಸ್ಥೆ ಇಲ್ಲ. ಹಾಗಾಗಿ ಊರಲ್ಲಿದ್ದ ನೀರಿನ ಟ್ಯಾಂಕ್‌ಗೆ ಒಂದು ಚಿಕ್ಕ ಪೈಪ್ ಹಾಕಿ ಈ ಶಾಲೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಶಾಲೆಗೆ ಕುಡಿಯುವ ನೀರು ಸಾಗಿಸುವ ಪೈಪ್ ಚರಂಡಿಯಲ್ಲಿ ಎಸೆಯಲಾಗಿದೆ.
ಆ ಪೈಪ್ ಅಲ್ಲಲ್ಲಿ ಒಡೆದಿದೆ. ಇದರಿಂದಾಗಿ ಚರಂಡಿಯಲ್ಲಿನ ಕೊಳೆತ ನೀರು ಆ ಪೈಪ್ ಮೂಲಕ ಶಾಲೆಗೆ ಸಾಗುತ್ತವೆ. ಈ ನೀರನ್ನೇ ಶಾಲೆಯ ಮಕ್ಕಳು ಕುಡಿಯುತ್ತಿದ್ದಾರೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲೆಗೆ ಕಲುಷಿತ ನೀರು ಬರುತ್ತಿದ್ದು, ಮಕ್ಕಳು ಅದನ್ನೇ ಕುಡಿಯುತ್ತಿದ್ದಾರೆ. ಶಾಲೆಯ ಗೋಡೆಗಳು ಯಾವಾಗ ಬೀಳುತ್ತದೆ ಗೊತ್ತಿಲ್ಲ. ಶಾಲೆ ಬಿದ್ದು ಮಕ್ಕಳಿಗೆ ಏನಾದರೂ ಅನಾಹುತವಾದರೆ ಯಾರು ಹೊಣೆ?.
-ಜ್ಯೋತಿ, ವಿದ್ಯಾರ್ಥಿಯ ಪೋಷಕಿ
ಶಾಲೆಯ ಕೋಣೆಗಳನ್ನು ನೆಲಸಮಗೊಳಿಸಲು ಪಿಡಬ್ಲ್ಯೂಡಿ ಅವರಿಗೆ ಸೂಚಿಸಲಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಬಾರದು ಎಂದು ಶಿಕ್ಷಕರಿಗೆ ತಿಳಿಸಲಾಗಿದೆ. ಹುಪಳಾ ಗ್ರಾಮದ ಶಾಲೆಯ ಬಗ್ಗೆ ಬಿಆರ್‌ಸಿ ಅವರನ್ನು ಕಳುಹಿಸಿ ವರದಿ ತರಿಸಿಕೊಳ್ಳುತ್ತೇನೆ.
-ಸಿ.ಜಿ.ಹಳ್ಳದ್, ಶಿಕ್ಷಣಾಧಿಕಾರಿ ಭಾಲ್ಕಿ ಕ್ಷೇತ್ರ
ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯಗುರು ಹಾಗೂ ಶಿಕ್ಷಕರೆಲ್ಲರೂ ಬರುತ್ತಾರೆ. ಆದರೆ ಬೀಳುವ ಪರಿಸ್ಥಿತಿಯಲ್ಲಿರುವ ಇಂತಹ ಶಾಲೆಯಲ್ಲಿ ಯಾರೂ ಪ್ರವೇಶ ಪಡೆಯುವುದಿಲ್ಲ. ಶಾಲೆ ಬಿದ್ದರೆ ದೊಡ್ಡ ಅನಾಹುತವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಹೊಸ ಶಾಲಾ ಕಟ್ಟಡ ಕಟ್ಟಬೇಕು.
-ಅಮರ್, ಹುಪಳಾ ಗ್ರಾಪಂ ಸದಸ್ಯ