×
Ad

ಬೀಳುವ ಹಂತದಲ್ಲಿ ಸರಕಾರಿ ಶಾಲೆ: ಆತಂಕದಲ್ಲಿ ವಿದ್ಯಾರ್ಥಿಗಳು

Update: 2025-06-22 22:14 IST

ಬೀದರ್: ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ್ ಗ್ರಾಮದ ಸರಕಾರಿ ಶಾಲೆ ಬೀಳುವ ಹಂತಕ್ಕೆ ತಲುಪಿದ್ದು, ಆ ಶಾಲೆಯ ವಿದ್ಯಾರ್ಥಿಗಳು ಆತಂಕದಲ್ಲಿಯೇ ಪಾಠ ಕಲಿಯುತ್ತಿದ್ದಾರೆ. ಶಿಕ್ಷಕರು ಕೂಡ ಭಯದಲ್ಲಿಯೇ ಪಾಠ ಮಾಡುತ್ತಿದ್ದಾರೆ.

ಏಳನೇ ತರಗತಿವರೆಗಿನ ಈ ಶಾಲೆಯಲ್ಲಿ 50ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇತ್ತೀಚೆಗೆ ಈ ಶಾಲೆಯ ಮುಖ್ಯ ಶಿಕ್ಷಕರು ನಿವೃತ್ತಿ ಹೊಂದಿದ್ದು, ಸದ್ಯಕ್ಕೆ ಶಾಲೆಯಲ್ಲಿ ಮೂವರು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ.

ಶಾಲೆಯ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಇವಾಗ ಮಳೆಗಾಲವಾದ್ದರಿಂದ ಶಾಲೆಯ ಗೋಡೆ, ಮೇಲ್ಛಾವಣಿ ಕುಸಿಯುವ ಭೀತಿ ಎದುರಾಗಿದೆ. ಶಾಲೆಯಲ್ಲಿ ಸುಮಾರು 8ರಿಂದ 10 ಕೋಣೆಗಳಿದ್ದು, ಇದರಲ್ಲಿ 5 ಕೋಣೆಗಳು ಬೀಳುವ ಹಂತಕ್ಕೆ ತಲುಪಿವೆ. ಒಂದು ಕೋಣೆಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಇನ್ನೊಂದು ಚಿಕ್ಕ ಕೋಣೆಯು ಕಾರ್ಯಾಲಯಕ್ಕೆ ಸೀಮಿತವಾಗಿದೆ. ಮತ್ತೊಂದು ಅಡುಗೆ ಕೋಣೆಯಾಗಿದ್ದು, ಅದು ಕೂಡ ಶಿಥಿಲಗೊಂಡಿದೆ. ಇನ್ನೆರಡು ಕೋಣೆಗಳಲ್ಲಿ ಒಂದು ಕೋಣೆ ಮಳೆ ಬಿದ್ದರೆ ಒಳಗಡೆ ನೀರು ಸೋರುತ್ತದೆ. ಇರುವ ಒಂದು ಕೋಣೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡಬೇಕಾಗಿದೆ.

ಕೆಲ ದಿನಗಳ ಹಿಂದೆ ಒಂದು ಹೊಸ ಕೋಣೆಯ ಕಟ್ಟಡ ಕೆಲಸ ಪ್ರಾರಂಭ ಮಾಡಲಾಗಿತ್ತು. ಆದರೆ ಆ ಕಟ್ಟಡದ ಕೆಲಸ ಅರ್ಧಕ್ಕೆ ನಿಂತಿದೆ. ಶಾಲೆಯ ಕಾರ್ಯಾಲಯ ಕೊಠಡಿಯ ಮುಂಭಾಗದಲ್ಲೇ ಗ್ರಾಮದ ಜನರು ಮದ್ಯಪಾನ ಮಾಡುತ್ತಾರೆ. ಆ ಮದ್ಯಪಾನ ಮಾಡಿ ಬಿಸಾಡಿರುವ ಬಾಟಲ್‌ಗಳು ನಾವು ಎತ್ತಿ ಬಿಸಾಡಬೇಕಾಗಿದೆ ಎಂದು ಅಲ್ಲಿನ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಯು ಕುಸಿಯುವ ಹಂತಕ್ಕೆ ತಲುಪಿದ್ದರಿಂದ ವಿದ್ಯಾರ್ಥಿ, ಪೋಷಕ ಮತ್ತು ಶಿಕ್ಷಕರಲ್ಲಿ ಆತಂಕ ಮನೆ ಮಾಡಿದೆ. ಇದರಿಂದಾಗಿ ಈ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎಂದು 3-4 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಶಾಲೆಯ ಮುಖ್ಯಗುರುಪತ್ರ ಬರೆದರೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ.

ಶಾಲೆಯು ಬೀಳುವ ಹಂತಕ್ಕೆ ತಲುಪಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಪಕ್ಕದ ಊರಲ್ಲಿರುವ ಖಾಸಗಿ ಶಾಲೆಗೆ ಸೇರುತ್ತಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಕ್ಕಳನ್ನು ಬೇರೆ ಊರಿನ ಖಾಸಗಿ ಶಾಲೆಗೆ ಕಳುಹಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ. ಊರಲ್ಲಿರುವ ಶಾಲಾ ಕಟ್ಟಡ ನೆಲಸಮಗೊಳಿಸಿ, ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

ನಮ್ಮ ಊರಿನ ಸರಕಾರಿ ಶಾಲೆಯು 4-5 ವರ್ಷದಿಂದ ಮಳೆಯಿಂದ ಸೋರುತ್ತಿರುವುದರಿಂದ ಗೋಡೆಗಳು ಬಿರುಕು ಬಿಟ್ಟಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬಂದು ನೋಡಿ ಹೋಗುತ್ತಾರೆಯೇ ವಿನಃ ಕೆಲಸ ಮಾಡುವುದಿಲ್ಲ. ಇವಾಗ ಎರಡು ಕೋಣೆ ಮಂಜೂರಾಗಿವೆ ಎಂದು ಹೇಳಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ರೀತಿಯ ಕೆಲಸ ಆಗಲಿಲ್ಲ. ಮಕ್ಕಳು ಜೀವ ಕೈಯಲ್ಲಿಟ್ಟುಕೊಂಡೇ ಶಾಲೆಯಲ್ಲಿ ಪಾಠ ಕೇಳುತ್ತಿದ್ದಾರೆ. ಒಂದು ವೇಳೆ ಈ ಶಾಲೆ ಬಿದ್ದು ಅನಾಹುತ ಸಂಭವಿಸಿದರೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐ ಅವರೇ ಅದಕ್ಕೆ ನೇರ ಹೊಣೆಗಾರರಾಗುತ್ತಾರೆ.

- ಲೊಕೇಶ ಕಾಂಬಳೆ, ರಾಚಪ್ಪಗೌಡಗಾಂವ್ ಗ್ರಾಮದ ನಿವಾಸಿ

ಆ ಶಾಲೆಯಲ್ಲಿ ಎರಡು ಕೋಣೆಗಳು ಉತ್ತಮ ಸ್ಥಿತಿಯಲ್ಲಿದೆ. ಚೆನ್ನಾಗಿರುವ ಕೋಣೆಯಲ್ಲಿಯೇ ಮಕ್ಕಳು ಕುಳಿತುಕೊಳ್ಳುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕೋಣೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿಲ್ಲ. ಶಿಥಿಲಗೊಂಡ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡಬಾರದು. ಒಂದು ವೇಳೆ ಆ ಕೋಣೆಯಲ್ಲಿ ಮಕ್ಕಳಿಗೆ ಪಾಠ ಮಾಡಿದರೆ ಮುಖ್ಯಗುರುವನ್ನು ಅಮಾನತು ಮಾಡಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಇವಾಗ ಆ ಊರಿನ ಶಾಲೆಗೆ ಎರಡು ಕೋಣೆಗಳು ಮಂಜೂರಾಗಿದ್ದು, ಹಳೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲಾಗುವುದು.

- ಸಲೀಂ ಪಾಷಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ, ಬೀದರ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಚಿತ್ರಸೇನ ವ್ಹಿ ಫುಲೆ

contributor

Similar News