ಕಸಿ ಕಟ್ಟಿ ವಿದೇಶಿ ತಳಿಯ ಹಣ್ಣು ಹಂಪಲು ಬೆಳೆ!
ಮಂಗಳೂರು: ಕರಾವಳಿಯ ಜನಪ್ರಿಯ ಹಣ್ಣು ಹಂಪಲುಗಳಲ್ಲಿ ಒಂದಾಗಿರುವ ಮಾವು, ಹಲಸು ಸಾಮಾನ್ಯವಾಗಿ ದೊಡ್ಡ ಮರಗಳಾಗಿ ಬೆಳೆಯುವ ಹಣ್ಣು ಹಂಪಲು ತಳಿಗಳು. ಹೈಬ್ರೀಡ್ ಆಗಿ ಮರಗಳಲ್ಲಿ ಬೆಳೆಯುವ ಹಣ್ಣು ಹಂಪಲುಗಳನ್ನು ಸಣ್ಣ ಅಥವಾ ಆಳೆತ್ತರದ ಮರಗಿಡಗಳಾಗಿಯೂ ಬೋನ್ಸಾಯ್ ಮಾದರಿಯಲ್ಲಿ ಕಸಿ ಕಟ್ಟಿ ಬೆಳೆಸಲಾಗುತ್ತದೆ. ಇಂತಹ ಪ್ರಯೋಗಗಳ ನಡುವೆ ಮಂಗಳೂರಿನ ಗಾಳಿಪಟ ಕಲಾವಿದ, ಪರಿಸರ ಪ್ರೇಮಿಯೊಬ್ಬರು ವಿದೇಶಿ ತಳಿಯ ಮಾವು, ಹಲಸಿನ ಕೊಂಬೆಗಳನ್ನು ಕಸಿ ಕಟ್ಟಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರ್ವೇಶ್ ರಾವ್ ಮೂಲತಃ ಚಿತ್ರ ಕಲಾವಿದ. ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವದ ಮೂಲಕ ಖ್ಯಾತಿ ಪಡೆದಿರುವ ಇವರು, ವಿದೇಶದಿಂದ ಮಾವು, ಹಲಸು ಸೇರಿದಂತೆ ಹಣ್ಣು ಹಂಪಲುಗಳ ಕೊಂಬೆಗಳನ್ನು ತಂದು ಅವುಗಳನ್ನು ಕಸಿ ಕಟ್ಟಿ ಗ್ರೋ ಬ್ಯಾಗ್‌ಗಳಲ್ಲಿ ಬೆಳೆಸಿ, ಫಲ ಪಡೆಯುತ್ತಿದ್ದಾರೆ.
ಕೂಳೂರಿನಲ್ಲಿರುವ ತಮ್ಮ ನರ್ಸರಿಯಲ್ಲಿ ಈ ಪ್ರಯೋಗ ನಡೆಸುತ್ತಿರುವ ಸರ್ವೇಶ್ ರಾವ್, ಮಾವು, ಹಲಸು, ಸಪೋಟ, ಬಾಳೆ, ಮ್ಯಾಂಗೋಸ್ಟಿನ್, ರಾಂಬುಟಾನ್, ಅವಕಾಡೊ ಹಣ್ಣು ಸಹಿತ ವಿವಿಧ ತಳಿಯ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ.
ಇಲ್ಲಿನ ಮಣ್ಣು, ಹವಾಮಾನದಿಂದಾಗಿ ಕರಾವಳಿಯ ಮಣ್ಣಿನಲ್ಲಿ ವಿದೇಶಿ ತಳಿಯ ಹಣ್ಣುಹಂಪಲು ಗಿಡಗಳು ಬದುಕುವುದು ಕಷ್ಟ. ಆದರೆ ಸರ್ವೇಶ್ ರಾವ್‌ಅವರ ಕಸಿ ಪ್ರಯೋಗ ಫಲ ನೀಡಿದೆ. ಇಲ್ಲಿನ ಮಣ್ಣು, ಹವಾಗುಣಕ್ಕೆ ಹೊಂದಿಕೊಳ್ಳುವ ವಿದೇಶಿ ತಳಿಗಳ ಕೊಂಬೆಗಳನ್ನು ತರುವ ಸರ್ವೇಶ್ ರಾವ್, ಅವುಗಳನ್ನು ತಮ್ಮ ನರ್ಸರಿಯಲ್ಲಿ ಕಸಿ ಕಟ್ಟಿ ಬೆಳೆಸಿ ಫಲ ಬಂದ ಬಳಿಕ ಅವುಗಳ ರುಚಿ, ಆಕಾರ ಇವೆಲ್ಲವನ್ನೂ ಪರಿಗಣಿಸಿ ಮತ್ತೆ ಅದೇರೀತಿ ಕಸಿಕಟ್ಟಿ ಆಸಕ್ತರಿಗೆ ಗಿಡಗಳನ್ನು ಮಾರಾಟ ಮಾಡುತ್ತಾರೆ.
ಸರ್ವೇಶ್‌ರ ನರ್ಸರಿಯಲ್ಲಿ ವಿಯೆಟ್ನಾಂ, ಮಲೇಶ್ಯದ ಹಲಸು, ಥಾಯ್ಲೆಂಡ್‌ನ ಮಾವು ಫಲ ನೀಡಿದೆ. ಅವುಗಳ ರುಚಿ ಮತ್ತು ಭಿನ್ನ ಆಕೃತಿಯೂ ಮಂಗಳೂರಿಗರಿಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಜಿಲ್ಲೆಯ ಹಣ್ಣು ಹಂಪಲು ಕೃಷಿ ಆಸಕ್ತರನ್ನು ಸೆಳೆಯುತ್ತಿದೆ. ಆಸಕ್ತರಿಗೆ ಈ ಗಿಡಗಳನ್ನು ಮಾರಾಟ ಮಾಡುತ್ತಿದ್ದಾರೆ.
ಗ್ರೋ ಬ್ಯಾಗ್‌ಗಳಲ್ಲೇ ಈ ಹಣ್ಣು ಹಂಪಲುಗಳನ್ನು ಇವರು ಬೆಳೆಸುತ್ತಿದ್ದು, ಇವರ ಸಂಗ್ರಹದಲ್ಲಿ ಥೈಲ್ಯಾಂಡ್‌ನ ಒಂಭತ್ತು ಜಾತಿಯ ಮಾವಿನ ಗಿಡಗಳಿವೆ. ರೆನೋಸರಸ್, ಮಾಚನೊಕ್, ನಾಮ್ ಡಾಕ್ ಮೈ ನಾಮ್ ಡಾಕ್ ಮೈ ಪರ್ಪಲ್, ರೆಡ್ ಐವರಿ, ಮಾಂಕುಶಿ ಹೆಸರಿನ ಮಾವಿನ ಗಿಡಗಳಲ್ಲಿ ಈಗಾಗಲೇ ನಾಲ್ಕೈದು ಜಾತಿಯ ಗಿಡಗಳಲ್ಲಿ ಫಲ ಬಂದಿವೆ.
ಕಳೆದ ಸುಮಾರು ಒಂಭತ್ತು ವರ್ಷಗಳಿಂದ ನರ್ಸರಿಯಲ್ಲಿ ಈ ರೀತಿ ವಿದೇಶಿ ಹಾಗೂ ದೇಶಿಯ ವಿವಿಧ ಜಾತಿಯ ಹಣ್ಣು ಹಂಪಲುಗಳ ಗಿಡಗಳನ್ನು ಕಸಿ ಕಟ್ಟಿ ಮಾರಾಟವೂ ಮಾಡುತ್ತಿರುವ ಸರ್ವೇಶ್ ರಾವ್‌ರ ನರ್ಸರಿಯಲ್ಲಿ ಮಾವಿನ 80ಕ್ಕೂ ಅಧಿಕ ಹಾಗೂ ಹಲಸಿನ 25ಕ್ಕೂ ಅಧಿಕ ತಳಿಗಳ ಗಿಡಗಳಿವೆ.
ದುಬಾರಿ ಮಾವಿನಹಣ್ಣಾಗಿ ಗುರುತಿಸಲ್ಪಟ್ಟಿರುವ ಜಪಾನಿನ ಮಿಯಾಝಕಿ ಮಾವಿನ ಗಿಡವೂ ಸರ್ವೇಶ್ ರಾವ್‌ರ ಸಂಗ್ರಹದಲ್ಲಿದೆ. ‘‘ಗಿಡ ನೆಟ್ಟ ಹಲವು ವರ್ಷಗಳಾಗಿವೆ. ಆದರೆ ಇನ್ನೂ ಫಲ ನೀಡಿಲ್ಲ. ಹಾಗಾಗಿ ಈವರೆಗೂ ಇದರ ಗಿಡವನ್ನು ಯಾರಿಗೂ ಮಾರಾಟ ಮಾಡಿಲ್ಲ’’ ಎನ್ನುತ್ತಾರೆ ಸರ್ವೇಶ್.
ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ರಾಷ್ಟ್ರಗಳಲ್ಲಿ ನಡೆಯುವ ಗಾಳಿಪಟ ಉತ್ಸವ ನನ್ನ ಕೃಷಿ ಆಸಕ್ತಿಗೂ ವರದಾನವಾಯಿತು. ಉತ್ಸವಕ್ಕೆ ತೆರಳುವ ಸಂದರ್ಭ ಅಲ್ಲಿ ಒಂದೆರಡು ದಿನ ಹೆಚ್ಚು ಉಳಿದುಕೊಂಡು ಅಲ್ಲಿನ ಕೃಷಿ ತೋಟ, ನರ್ಸರಿಗಳಿಗೆ ಭೇಟಿ ನೀಡಿ, ಅಲ್ಲಿನ ವಿಶೇಷ ಹಣ್ಣುಗಳ ಮರಗಳ ಕೊಂಬೆಗಳನ್ನು ಖರೀದಿಸಿ ತರುತ್ತೇನೆ. ಇಲ್ಲಿ ಅದನ್ನು ಕಸಿ ಮಾಡಿ ಫಲ ಪಡೆದು ಬಳಿಕ ಆ ಮರ ಅಥವಾ ಗಿಡಗಳಿಂದ ಕಸಿ ಕಟ್ಟಿ ಇತರ ಆಸಕ್ತರಿಗೂ ಮಾರಾಟ ಮಾಡುತ್ತಿದ್ದೇನೆ.
-ಸರ್ವೇಶ್ ರಾವ್