×
Ad

ನ್ಯಾ.ಜಿ.ರೋಹಿಣಿ ಆಯೋಗದ ವರದಿ ಶೈತ್ಯಾಗಾರ ಸೇರಿತೇ?

ನ್ಯಾ.ಜಿ. ರೋಹಿಣಿ ಆಯೋಗವು ಸಂಕೀರ್ಣ ಸ್ವರೂಪದ ಮತ್ತು ರಾಜಕೀಯವಾಗಿ ಸೂಕ್ಷ್ಮವಾದ ವಿಷಯವನ್ನು ವಿಶ್ಲೇಷಿಸುವಲ್ಲಿ ಐತಿಹಾಸಿಕ ಕೆಲಸ ಮಾಡಿದೆ. ವರದಿಯು ಭಾರತ ಸಕಾರಾತ್ಮಕ ಕ್ರಮದ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಎತ್ತಿ ತೋರಿಸಿದೆ ಮತ್ತು ಅದನ್ನು ನಿವಾರಿಸಲು ಪ್ರಾಯೋಗಿಕ ಮಾರ್ಗಗಳನ್ನೂ ಸಹ ನೀಡಿದೆ. ಆದರೆ ಜುಲೈ 2023ರಲ್ಲಿ ವರದಿ ಸಲ್ಲಿಕೆ ಆಗಿದ್ದರೂ ಸರಕಾರವು ಇನ್ನೂ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿಲ್ಲ.

Update: 2025-06-01 12:23 IST

ನ್ಯಾಯಮೂರ್ತಿ ಜಿ. ರೋಹಿಣಿ ಆಯೋಗವನ್ನು ಅಕ್ಟೋಬರ್ 2, 2017 ರಂದು ರಚಿಸುವ ಉದ್ದೇಶ- ಮಂಡಲ್ ಆಯೋಗದ ವರದಿಯನ್ನು ಆಧರಿಸಿ ಮೀಸಲಾತಿ ನೀಡಿರುವಂಥ ಮತ್ತು ಏಕೈಕ ಗುಂಪಾಗಿರುವ ಹಿಂದುಳಿದ ವರ್ಗಗಳಲ್ಲಿರುವ ಜಾತಿಗಳನ್ನು ಕೇಂದ್ರ ಸರಕಾರ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಪಡೆದುಕೊಂಡಿರುವ ಪ್ರಾತಿನಿಧ್ಯದ ಆಧಾರದ ಮೇಲೆ ಉಪ ವರ್ಗೀಕರಿಸುವುದಾಗಿದೆ.

ಮಂಡಲ್ ಆಯೋಗವೇ ಏಕೆ ಉಪ ವರ್ಗೀಕರಣ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಸರ್ವೋಚ್ಚ ನ್ಯಾಯಾಲಯ ಎಂ.ಆರ್. ಬಾಲಾಜಿ v/s ಮೈಸೂರು ರಾಜ್ಯ ಪ್ರಕರಣದಲ್ಲಿ, ಡಾ.ನಾಗನಗೌಡ ಸಮಿತಿಯ ವರದಿ ಆಧರಿಸಿ, ಹಿಂದುಳಿದ ವರ್ಗಗಳನ್ನು ಎರಡು ಪ್ರವರ್ಗಗಳನ್ನಾಗಿ ವಿಂಗಡಿಸಿ ಜಾರಿ ಮಾಡಿದ್ದ ಮೀಸಲಾತಿಯನ್ನು (ಅಂದಿನ ಮೈಸೂರು ರಾಜ್ಯ) ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿ ಹಿಂದುಳಿದ ವರ್ಗಗಳನ್ನು ಅತಿ ಹೆಚ್ಚು ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ಎಂದು ವಿಂಗಡಣೆ ಮಾಡಲು ಸಾಂವಿಧಾನಿಕವಾಗಿ ಅವಕಾಶವಿಲ್ಲ ಎಂದು ಆಜ್ಞಾಪಿಸಿತ್ತು. ತತ್ಕಾರಣ ಮಂಡಲ್ ಆಯೋಗವು ತನ್ನ ವರದಿಯಲ್ಲಿ 2,633 ಜಾತಿಗಳನ್ನು ಏಕತ್ರಗೊಳಿಸಿ ಶೇ. 27ರಷ್ಟು ಮೀಸಲಾತಿ ಕೋಟಾ ನಿಗದಿ ಮಾಡಿತ್ತು. ಇಂದ್ರಾ ಸಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಂಡಲ್ ವರದಿಯ ಸಿಂಧುತ್ವವನ್ನು ಎತ್ತಿ ಹಿಡಿದ ನಂತರದಲ್ಲಿ ಅಂದರೆ 1993ರಲ್ಲಿ (1990 ಅಲ್ಲ) ವಾಸ್ತವವಾಗಿ ಕೇಂದ್ರ ಸರಕಾರದ ನೇಮಕಗಳಿಗೆ ಅಥವಾ ಹುದ್ದೆಗಳಿಗೆ ಅನ್ವಯಿಸುವ ಹಾಗೆ ಮೀಸಲಾತಿ ಜಾರಿಯಾಯಿತು. ಆದರೆ, ಇಂದ್ರಾ ಸಹಾನಿ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ, ಸಂವಿಧಾನದ 16(4) ನೇ ವಿಧಿಯ ಉದ್ದೇಶಗಳಿಗಾಗಿ ಹಿಂದುಳಿದ ವರ್ಗಗಳನ್ನು ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ವರ್ಗಗಳಾಗಿ ವರ್ಗೀಕರಿಸಲು ಯಾವುದೇ ಸಾಂವಿಧಾನಿಕ ನಿರ್ಬಂಧವಿಲ್ಲ ಎಂದಿತು. ಸಾಮಾಜಿಕ ಹಿಂದುಳಿದಿರುವಿಕೆಯ ಮಟ್ಟವನ್ನು ಆಧರಿಸಿದ ಅಂತರವಿರಬೇಕು ಎಂಬುದು ಮುಖ್ಯ. ಆದರೂ, ಅಂತಹ ವರ್ಗೀಕರಣದ ಸಂದರ್ಭದಲ್ಲಿ ವಿವಿಧ ಹಿಂದುಳಿದ ವರ್ಗಗಳ ನಡುವೆ ಸಮಾನ ಹಂಚಿಕೆಯನ್ನು ಖಚಿತ ಪಡಿಸಿಕೊಳ್ಳುವುದು ಸೂಕ್ತ. ಇಲ್ಲವೆಂದಾದಲ್ಲಿ ಒಂದೋ ಅಥವಾ ಎರಡೋ ಬಲಿಷ್ಠ ವರ್ಗಗಳು ಸಂಪೂರ್ಣ ಕೋಟಾವನ್ನು ಕಬಳಿಸಿ ಉಳಿದ ತಬ್ಬಲಿಗಳಂತಿರುವ ಹಿಂದುಳಿದ ವರ್ಗಗಳನ್ನು ಹೊರಗಿಡುತ್ತವೆ ಎಂದು ಸ್ಪಷ್ಟ ತೀರ್ಪು ನೀಡಿತ್ತು. ಆದರೆ ಕೇಂದ್ರ ಸರಕಾರ ಮಾತ್ರ ನ್ಯಾಯಾಲಯದ ತೀರ್ಪನ್ನು ಪಾಲಿಸದೆ, ನಿಸ್ಸೀಮ ನಿರ್ಲಕ್ಷ್ಯತನಕ್ಕೆ ಶರಣಾಯಿತು. ಸರಕಾರದ ಈ ನಕಾರಾತ್ಮಕ ಕ್ರಮದಿಂದ ಸವಲತ್ತು ಮತ್ತು ಪ್ರಯೋಜನಗಳಿಂದ ದೂರವೇ ಉಳಿದು ಅತಿ ಯಾತನೆಗೊಳಗಾದ ಜಾತಿಗಳೆಂದರೆ, ಅವು ಅತ್ಯಂತ ಅಸಹಾಯಕ ಹಿಂದುಳಿದ ಜಾತಿಗಳು. ಈ ಸವಲತ್ತು ಮತ್ತು ಪ್ರಯೋಜನಗಳ ಅಸಮಾನ ಹಂಚಿಕೆಯಿಂದಾಗಿ ಆ ವರ್ಗಗಳು ಅತೀವ ವೇದನೆಯಿಂದ ತಳಮಳಿಸಿದವು. ಹಾಗೆಯೇ ಒಂದು ಸುದ್ದಿ ಮೂಲವನ್ನು ನಂಬುವುದಾದರೆ ಉಪವರ್ಗೀಕರಣ ಮಾಡದಂತೆ ಆ ದಿನಗಳಲ್ಲಿ ತಡೆಗೋಡೆ ಒಡ್ಡಿದ್ದ ಉತ್ತರ ಪ್ರದೇಶದ ಪ್ರಬಲ ಹಿಂದುಳಿದ ಹಾಗೂ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜಾತಿಯೊಂದು ಕಾರಣವೆನ್ನಲಾಗಿತ್ತು. ಬಹುಶಃ ಕಾಂಗ್ರೆಸ್ ಸರಕಾರ, ರಾಜಕೀಯ ಕಾರಣಗಳಿಗಾಗಿ ಆ ಜಾತಿಯನ್ನು ಎದುರು ಹಾಕಿಕೊಳ್ಳಲು ಸಿದ್ಧವಿರಲಿಲ್ಲ. 2014ರಲ್ಲಿ ಭಾಜಪ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದ್ದಂತೆ, ಹಿಂದುಳಿದ ವರ್ಗಗಳನ್ನು ಉಪವರ್ಗೀಕರಣ ಮಾಡಲು ಉಮೇದು ತೋರಿತು. ಹಾಗೆ ತೋರಲು ಆ ಪ್ರಬಲ ಜಾತಿ ಭಾಜಪ ವಿರೋಧಿಯಾಗಿತ್ತು ಎಂಬುದು. ಕಾರಣ ಎಂಥದ್ದೇ ಇರಲಿ, ಭಾಜಪ ಸರಕಾರ ಹಿಂದುಳಿದ ವರ್ಗಗಳ ಹಿತರಕ್ಷಣೆಯಿಂದ ತೆಗೆದುಕೊಂಡ ಉಪಕ್ರಮ ಪಕ್ಷಾತೀತವಾಗಿ ಮೆಚ್ಚಬೇಕಾದುದೆ. ಅಜಮಾಸು 24 ವರ್ಷಗಳ ನಂತರ ಮೀಸಲಾತಿಗೊಳಪಟ್ಟಿದ್ದರೂ ಪ್ರಬಲ ಜಾತಿಗಳೊಡನೆ ಸೆಣಸಲಾಗದ ಅತಿ ಹಿಂದುಳಿದ ಜಾತಿಗಳಿಗೆ ತೆರೆದ ಭಾಗ್ಯದ ಬಾಗಿಲು ಇದಾಗಿದೆ!

ಭಾರತ ದೇಶವು ಹಲವಾರು ವೈವಿಧ್ಯಮಯ ಜನತೆ, ಅವರ ಸಂಖ್ಯೆ, ಭಿನ್ನ ಭಾಷೆ, ವಿವಿಧ ಧರ್ಮ, ಧರ್ಮದೊಳಗಿನ ಜಾತಿ ಮತ್ತು ಪಂಗಡಗಳಿಂದ ಕೂಡಿದೆ. ಈ ವೈವಿಧ್ಯದ ಮಧ್ಯೆ ಸಮಾನ ಅವಕಾಶಗಳ ಗುರಿ ಹೊಂದಲು ಕೇಂದ್ರ-ರಾಜ್ಯಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಭಾರತೀಯ ಸಂವಿಧಾನದ ಪ್ರಕಾರ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸರಕಾರ ಕ್ರಮ ವಹಿಸಿದೆ. ನಾಗರಿಕರಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವುಗಳಿಗೆ ಮೀಸಲಾತಿ ನೀಡಿದ್ದರೂ ಅವುಗಳನ್ನು ಒಂದೇ ಗುಂಪಿನಲ್ಲಿ ಇಟ್ಟಿರುವುದರಿಂದ ಜಾತಿ-ಜಾತಿಗಳ ನಡುವೆ ಹೆಣಗಲಾಗದ ದುರ್ಬಲ ಹಿಂದುಳಿದ ಜಾತಿಗಳು ಅವಕಾಶ ವಂಚಿತವಾಗಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನ ವಿಧಿ 340ರ ಅಡಿಯಲ್ಲಿ ರಾಷ್ಟ್ರಪತಿಗಳಿಂದ ನೇಮಕಗೊಂಡಿದ್ದ ನ್ಯಾ.ಜಿ. ರೋಹಿಣಿ ಆಯೋಗ ತನ್ನ ವರದಿಯನ್ನು ಸರಕಾರಕ್ಕೆ ಜುಲೈ 2023ರಂದು ಸಲ್ಲಿಸಿದೆ. ವರದಿ ಸಲ್ಲಿಸಲು ತೆಗೆದುಕೊಂಡು ಕಾಲ ಸುಮಾರು 6 ವರ್ಷಗಳು. ಇಷ್ಟೊಂದು ಸುದೀರ್ಘಕಾಲ ತೆಗೆದುಕೊಳ್ಳಲು ಖಂಡಿತ ಆಯೋಗ ಆಲಸ್ಯತನ ಹೊಂದಿರಲಿಲ್ಲ; ಬದಲಾಗಿ ಕೆಲವು ಅನಿವಾರ್ಯ ಸವಾಲುಗಳು ಎದುರಾದವು. ಅವುಗಳೆಂದರೆ- ಪ್ರಾಯೋಗಿಕ ದತ್ತಾಂಶದ ಕೊರತೆ-ಅನೇಕ ಸಮುದಾಯಗಳಿಗೆ ಕೇಂದ್ರ ಸರಕಾರಿ ಉದ್ಯೋಗ ಮತ್ತು ಪ್ರವೇಶಗಳಲ್ಲಿನ ಪ್ರಾತಿನಿಧ್ಯತೆಯೊಂದಿಗೆ ತುಲನಾತ್ಮಕ ಅಧ್ಯಯನ ಮಾಡಲು ಆ ಸಮುದಾಯಗಳ ಜನಸಂಖ್ಯೆಯ ಅಲಭ್ಯತೆ ಮುಂತಾದವು. ಹೀಗೆ ಎದುರಾದ ಹಲವು ಸವಾಲುಗಳನ್ನು ಆಯೋಗ ಹೇಗೋ ನಿಭಾಯಿಸಿ ತನ್ನ ನಿರ್ಣಯಗಳನ್ನು ಕಂಡುಕೊಂಡಿದೆ.

ಆಯೋಗದ ನಿರ್ಣಯಗಳು (ವರದಿಯಾದಂತೆ)

ಪೂರ್ಣ ವರದಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲವಾದರೂ ಮಾಧ್ಯಮ ವರದಿಗಳು ತಜ್ಞರ ಅಭಿಪ್ರಾಯಗಳೊಡನೆ ಹಲವಾರು ವಿವರಗಳು ಹೊರಹೊಮ್ಮಿವೆ. ಪ್ರಮುಖ ನಿರ್ಣಯಗಳು ಮತ್ತು ಸಲಹೆಗಳು ಇಂತಿವೆ:

1. ಮೀಸಲಾತಿಗೆ ಅನಗತ್ಯ ಪ್ರವೇಶ

ಕಡಿಮೆ ಸಂಖ್ಯೆಯ ಬಲಾಢ್ಯ ಒಬಿಸಿ ಸಮುದಾಯಗಳು ಶೇ. 27ರಷ್ಟು ಮೀಸಲಾತಿ ಪ್ರಯೋಜನಗಳಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿವೆ. ಉದಾಹರಣೆಗೆ ಕೆಲವು ಒಬಿಸಿ ಗುಂಪುಗಳು (ಯಾದವರು, ಕುರ್ಮಿಗಳು, ಜಾಟರು, ಗುಜ್ಜರು) ಶೇ. 42ರಿಂದ 50ಕ್ಕಿಂತ ಹೆಚ್ಚು ಭಾಗವನ್ನು ಉದಾಹರಿಸಿರುವ ಒಬಿಸಿ ಜಾತಿಗಳು ಉದ್ಯೋಗ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡಿವೆ.

2. ಹಿಂದೆ ಉಳಿದ ಅತ್ಯಂತ ಹಿಂದುಳಿದ ವರ್ಗಗಳು

ಗಮನಾರ್ಹ ಸಂಖ್ಯೆಯ ಒಬಿಸಿ ಸಮುದಾಯಗಳು ಸಾಮಾನ್ಯವಾಗಿ ಅತ್ಯಂತ ಹಿಂದುಳಿದ ವರ್ಗಗಳು ಎಂದು ಕರೆಯಲ್ಪಡುತ್ತವೆ. ಅವು ಸರಕಾರಿ ಉದ್ಯೋಗಗಳು ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಅಥವಾ ಯಾವುದೇ ಪ್ರಾತಿನಿಧ್ಯ ಪಡೆದಿಲ್ಲ.

3. ಉಪ ವರ್ಗೀಕರಿಸಲು ಶಿಫಾರಸು

ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಒಬಿಸಿ ಕೋಟಾ ವನ್ನು ಉಪ -ಕೋಟಾಗಳಾಗಿ (ಉದಾ: ಶೇ. 10 ಮತ್ತು ಶೇ. 7 ಅಥವಾ ಬೇರೆ ರೀತಿಯಲ್ಲಿ) ವಿಂಗಡಿಸಿ ಆಯೋಗವು ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.

4. ಹೊಸ ಪ್ರವರ್ಗಗಳ ಸೃಷ್ಟಿ

ಆಯೋಗವು ಒಬಿಸಿಗಳನ್ನು ಹೆಚ್ಚು ಹಿಂದುಳಿದ ವರ್ಗ ಮತ್ತು ಅತಿ ಹೆಚ್ಚು ಹಿಂದುಳಿದ ವರ್ಗಗಳಂತಹ ಗುಂಪುಗಳಾಗಿ ವರ್ಗೀಕರಿಸಲು ಸೂಚಿಸಿರಬಹುದು.

5. ದತ್ತಾಂಶ ಸಂಗ್ರಹ

ವಿವಿಧ ಸರಕಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಒಬಿಸಿಗಳು ಸಲ್ಲಿಸಬೇಕಾದ ಅರ್ಜಿ, ಅವುಗಳ ಆಯ್ಕೆ ಮತ್ತು ಪ್ರಯೋಜನಗಳನ್ನು ಗುರುತಿಸಲು ಕ್ರಿಯಾತ್ಮಕ ಮತ್ತು ನಿಖರವಾದ ದತ್ತಾಂಶವನ್ನು ಸಮೀಕ್ಷೆ ಮಾಡಲು ಆಯೋಗವು ಸೂಚಿಸಿದೆ.

ಆಯೋಗವೇನೋ ತನಗೆ ವಹಿಸಿದ ಜವಾಬ್ದಾರಿಯನ್ನು ಸಾಕಷ್ಟು ಮುತುವರ್ಜಿಯಿಂದ ನಿರ್ವಹಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ವರದಿ ಸ್ವೀಕರಿಸಿ, ವರ್ಷದ ಮೇಲೆ 9 ತಿಂಗಳು ಕಳೆದು ಹೋಗಿವೆ. ಆದರೆ ಸರಕಾರ ಮಾತ್ರ ಅನೂಹ್ಯ ಕಾರಣಗಳಿಂದ ಅನುಷ್ಠಾನಗೊಳಿಸದೆ ಕಾಲ ದೂಡುತ್ತಿದೆ.

ಮುಂದೂಡಲು ಇರಬಹುದಾದ ಕಾರಣಗಳು

1. ರಾಜಕೀಯ ಸೂಕ್ಷ್ಮತೆ

ಭಾರತದ ಅನೇಕ ರಾಜ್ಯಗಳಲ್ಲಿ ಒಬಿಸಿಗಳು ಗಮನಾರ್ಹ ಮತದಾರರ ನೆಲೆಯನ್ನು ಹೊಂದಿವೆ. ಉಪ ವರ್ಗೀಕರಣವನ್ನು ಜಾರಿಗೆ ತರುವುದರಿಂದ ಪ್ರಭಾವಿ ಸಮುದಾಯಗಳು ತಮಗಿರುವ ಪ್ರಸ್ತುತ ಮೀಸಲಾತಿಯ ಒಂದು ಪಾಲನ್ನು ಕಳೆದುಕೊಳ್ಳಬಹುದು. ರಾಜಕೀಯ ಹಿನ್ನಡೆಯ ಅಪಾಯ, ವಿಶೇಷವಾಗಿ ಪ್ರಬಲ ಒಬಿಸಿ ಗುಂಪುಗಳಿಂದ ವಿಷಯವು ಅತ್ಯಂತ ಸೂಕ್ಷ್ಮವಾಗಿದೆ.

2. ಜಾತಿ ಜನಗಣತಿ ಸಂಪರ್ಕ

ಬಿಹಾರದಲ್ಲಿ ಮತ್ತು ಕರ್ನಾಟಕದಲ್ಲಿ ಕಂಡುಬರುವಂತೆ ರಾಷ್ಟ್ರವ್ಯಾಪಿ ಜಾತಿ ಜನಗಣತಿಯನ್ನು ಮಾಡಬೇಕೆಂಬ ಒತ್ತಡವು ಸಮಾನಾಂತರ ಚರ್ಚೆಯನ್ನು ಸೃಷ್ಟಿಸಿದೆ. ನ್ಯಾ. ರೋಹಿಣಿ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ನಿರ್ಧರಿಸುವ ಮೊದಲು ಕೇಂದ್ರ ಸರಕಾರವು ಜಾತಿ ಜನಗಣತಿಯಿಂದ ಬರಬಹುದಾದ ಫಲಿತಾಂಶಕ್ಕಾಗಿ ಕಾಯುತ್ತಿರಬಹುದು.

ಸರಕಾರ ಏನು ಹೇಳುತ್ತಿದೆ?

ಇಲ್ಲಿಯವರೆಗೆ ಸರಕಾರವು ವರದಿಯ ಅನುಷ್ಠಾನದ ಬಗ್ಗೆ ಅಸ್ಪಷ್ಟ ಮತ್ತು ಬದ್ಧತೆ ಇಲ್ಲದ ಹೇಳಿಕೆಗಳನ್ನು ಮಾತ್ರ ನೀಡಿದೆ. ಸಂಸತ್ತಿನಲ್ಲಿ ವರದಿಯ ಸ್ಥಿತಿಯ ಕುರಿತ ಪ್ರಶ್ನೆಗಳು ಪರಿಗಣನೆಯಲ್ಲಿದೆ ಮತ್ತು ಅಧ್ಯಯನ ಮಾಡಲಾಗುತ್ತಿದೆ ಎಂಬಂತಹ ಪ್ರತಿಕ್ರಿಯೆಗಳು ಬಂದಿವೆ. ಎಪ್ರಿಲ್ 2024ರಲ್ಲಿ, ಹಿರಿಯ ಸಚಿವರೊಬ್ಬರು ಸರಕಾರವು ಸರಿಯಾದ ಸಮಯದಲ್ಲಿ ಸಮರ್ಪಕವಾಗಿ ಪರಿಗಣಿಸಿದ ಮತ್ತು ಸಮತೋಲಿತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂಬ ಸುಳಿವು ನೀಡಿದ್ದಾರೆ, ಈ ಸಚಿವರ ಮಾತಿನ ಮರ್ಮ ಚುನಾವಣಾ ನಂತರದ ಕ್ರಮವನ್ನು ಸೂಚಿಸುತ್ತದೆ.

ಅನುಷ್ಠಾನದ ಪರಿಣಾಮವೇನು?

ಅಂಚಿನಲ್ಲಿರುವ ಮತ್ತು ಅಲಕ್ಷಿತ ಒಬಿಸಿ ಸಮುದಾಯಗಳು ಉತ್ತಮ ಅವಕಾಶಗಳನ್ನು ಪಡೆಯುತ್ತವೆ. ರಾಜಕೀಯ ಒಳಗೊಳ್ಳುವಿಕೆ ಸಣ್ಣ ಮತ್ತು ಹಿಂದುಳಿದ ಗುಂಪುಗಳು ಹೆಚ್ಚು ಪ್ರಾತಿನಿಧ್ಯ ಪಡೆದು ಹಾಗೂ ರಾಜಕೀಯವಾಗಿ ಸಶಕ್ತವಾಗಿದ್ದೇವೆ ಎಂದಂದುಕೊಳ್ಳುತ್ತವೆ.

ನ್ಯಾ.ಜಿ. ರೋಹಿಣಿ ಆಯೋಗವು ಸಂಕೀರ್ಣ ಸ್ವರೂಪದ ಮತ್ತು ರಾಜಕೀಯವಾಗಿ ಸೂಕ್ಷ್ಮವಾದ ವಿಷಯವನ್ನು ವಿಶ್ಲೇಷಿಸುವಲ್ಲಿ ಐತಿಹಾಸಿಕ ಕೆಲಸ ಮಾಡಿದೆ. ವರದಿಯು ಭಾರತ ಸಕಾರಾತ್ಮಕ ಕ್ರಮದ ವ್ಯವಸ್ಥೆಯಲ್ಲಿನ ನಿರ್ಣಾಯಕ ಅಂತರವನ್ನು ಎತ್ತಿ ತೋರಿಸಿದೆ ಮತ್ತು ಅದನ್ನು ನಿವಾರಿಸಲು ಪ್ರಾಯೋಗಿಕ ಮಾರ್ಗಗಳನ್ನೂ ಸಹ ನೀಡಿದೆ. ಆದರೆ ಜುಲೈ 2023ರಲ್ಲಿ ವರದಿ ಸಲ್ಲಿಕೆ ಆಗಿದ್ದರೂ ಸರಕಾರವು ಇನ್ನೂ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿಲ್ಲ.

ಈ ವಿಳಂಬಕ್ಕೆ ಹೆಚ್ಚಾಗಿ ರಾಜಕೀಯ ಲೆಕ್ಕಾಚಾರಗಳು, ಚುನಾವಣಾ ಒತ್ತಡಗಳು ಮತ್ತು ಸಾಮಾಜಿಕ ಪ್ರತಿಕ್ರಿಯೆಯ ಭಯ ಕಾರಣವೆಂದು ಹೇಳಬಹುದು. ಅಧಿಕೃತ ಅನುಷ್ಠಾನಕ್ಕೆ ಯಾವುದೇ ಸಮಯ ನಿಗದಿಯಾಗಿಲ್ಲ. ಅನೇಕ ವೀಕ್ಷಕರು ನಿರೀಕ್ಷಿಸುವಂತೆ, ಚುನಾವಣೆ ನಂತರವೂ ಸರಕಾರ ಮುಂದುವರಿಯುವುದನ್ನು ಗಂಭೀರವಾಗಿ ಪರಿಗಣಿಸಿದ್ದಿರಬೇಕು.

ಈ ವರದಿಯ ಅನುಷ್ಠಾನವು ಭಾರತದ ಮೀಸಲಾತಿ ನೀತಿಯಲ್ಲಿ ಗುರುತರವಾದ ಪರಿವರ್ತನೆ ತರುವುದರಲ್ಲಿ ಸಂಶಯವಿಲ್ಲ. ಸಾಮಾಜಿಕ ಅಭಿವೃದ್ಧಿಗೆ ಹೆಚ್ಚು ಸಮತೋಲಿತ ಮತ್ತು ನ್ಯಾಯಯುತ ವಿಧಾನವನ್ನು ಜಾರಿಗೆ ತರುತ್ತದೆ. ಆದರೆ ಅದು ಕಾರ್ಯಗತಗೊಳ್ಳಲು ಬಲವಾದ ರಾಜಕೀಯ ಇಚ್ಛಾಶಕ್ತಿ, ಪಾರದರ್ಶಕ ಸಂವಾದ ಮತ್ತು ನಿರಂತರ ಸಾರ್ವಜನಿಕ ಒತ್ತಡದ ಅಗತ್ಯವಿದೆ.

ದೀರ್ಘಕಾಲ ನನೆಗುದಿಗೆ ಬಿದ್ದಿದ್ದ ಹಿಂದುಳಿದ ವರ್ಗಗಳ ಉಪ ವರ್ಗೀಕರಣದ ಬಗ್ಗೆ ಭಾಜಪ ಸರಕಾರವೇ ಆಸ್ಥೆ ವಹಿಸಿ ಆಯೋಗ ರಚಿಸಿರುವುದರಿಂದ ಪ್ರಸ್ತುತ ಅದೇ ಸರಕಾರವೇ ವರದಿ ಅನುಷ್ಠಾನಗೊಳಿಸುವ ಹೊಣೆಗಾರಿಕೆಯನ್ನು ಕೂಡಾ ಹೊತ್ತುಕೊಳ್ಳಬೇಕು. ಆದರೆ, ರಾಜಕೀಯ ಪರಿಣತರು ಹೇಳುವಂತೆ ಆ ಪಕ್ಷದ ರಾಜಕೀಯ ಮನಸ್ಸಿನ ಸ್ವಭಾವ ನಿಗೂಢವಾಗಿದೆ. ಎದುರು ಪಕ್ಷಗಳು ಪ್ರಬಲ ಒತ್ತಾಯ ತರುತ್ತಿವೆ ಎಂಬ ಏಕೈಕ ಕಾರಣದಿಂದ ಮಾಡಬೇಕಾದ ಕಾರ್ಯಾಚರಣೆಯನ್ನು ಅವುಗಳಿಗೆ ತಲೆಬಾಗಿ ಕೂಡಲೇ ಆಗಗೊಳಿಸುವುದಿಲ್ಲ. ಇದರಲ್ಲಿ ರಾಜಕೀಯ ತಂತ್ರಗಾರಿಕೆ ಮತ್ತು ಹಠಮಾರಿತನವೂ ಅಡಗಿದೆ. ಯಾವಾಗಲೂ ಅದು ತನಗೆ ಒದಗಿ ಬರುವ ರಾಜಕೀಯ ಅನುಕೂಲತೆ ಕುರಿತು ಗಮನಹರಿಸುತ್ತದೆ. ಅಂಥದ್ದನ್ನು ಅತ್ಯಂತ ಜಾಗರೂಕತೆಯಿಂದ ಕಾರ್ಯಗತಗೊಳಿಸುವ ಪರಿಪಾಠವಿಟ್ಟುಕೊಂಡಿರುವುದರಿಂದ, ಯಾವ ರಾಜಕೀಯ ಪಂಡಿತರು ಕೂಡ ಯಾವಾಗ ನ್ಯಾ.ಜಿ. ರೋಹಿಣಿ ವರದಿ ಅನುಷ್ಠಾನಕ್ಕೆ ಬರುತ್ತದೆ ಎಂಬುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆ ತನಕ ವರದಿ ಶೈತ್ಯಾಗಾರದಲ್ಲಿ ನಿದಿರಾದೇವಿಗೆ ಶರಣಾಗುವುದಷ್ಟೇ !

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎನ್. ಲಿಂಗಪ್ಪ

contributor

Similar News