8 ವರ್ಷಗಳಿಂದ ಬಗೆಹರಿಯದ ಪೌರಕಾರ್ಮಿಕರ ವಸತಿ ಸಮಸ್ಯೆ
ಸಕಲೇಶಪುರ, ನ.4: ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರಕಾರ್ಮಿಕರ ವಸತಿ ಪರಿಸ್ಥಿತಿಗೆ ಸಕಲೇಶಪುರ ಜನತೆ ನಾಚಿಕೆ ಪಡುವಂತಾಗಿದೆ.
ಸಕಲೇಶಪುರವನ್ನು ಸುಂದರವಾಗಿ ಇಡುವ ಈ ಪೌರ ಕಾರ್ಮಿಕರು ತಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ವಾಸಿಸಲಾಗದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. 8 ವರ್ಷಗಳ ಹಿಂದೆ ಹೊಸಮನೆ ನಿರ್ಮಾಣದ ಹಿನ್ನೆಲೆಯಲ್ಲಿ ವಾಸವಿದ್ದ ಮನೆ ಒಡೆದು ಹಾಕಿ ಅವರನ್ನು ಬೀದಿಪಾಲು ಮಾಡಲಾಗಿದೆ. ಪ್ಲಾಸ್ಟಿಕ್ ಹಾಗೂ ಸಿಮೆಂಟ್ ಶೀಟ್‌ಗಳನ್ನು ಕಟ್ಟಿಕೊಂಡು ಗುಡಿಸಲು ರೀತಿಯ ಆಶ್ರಯದಲ್ಲಿ ವಾಸಿಸುತ್ತಿರುವ ಪೌರಕಾರ್ಮಿಕರು ಮಳೆಗಾಲದಲ್ಲಿ ನೆನೆಯುತ್ತಾ, ಚಳಿಗಾಲದಲ್ಲಿ ನಡುಗುತ್ತಾ, ಬೇಸಿಗೆಯ ಉರಿ ಬಿಸಿಯಿಂದ ನರಳುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಸಹಿತ ಜನಪ್ರತಿನಿಧಿಗಳು ಈ ವಿಷಯದ ಕುರಿತು ಗಂಭೀರವಾಗಿ ಸ್ಪಂದಿಸದಿರುವುದು ಸಮಸ್ಯೆ ನೆನೆಗುದಿಗೆ ಬೀಳಲು ಕಾರಣವಾಗಿದೆ.
ಮನೆ ಸಮಸ್ಯೆ ಹಿನ್ನೆಲೆ:ಸುಮಾರು 45 ಕುಟುಂಬಗಳು 200 ಕ್ಕೂ ಹೆಚ್ಚು ಜನರು ಕಿಷ್ಕಂಧೆಯಿಂದ 8 ವರ್ಷಗಳ ಹಿಂದೆ ಪಟ್ಟಣದ ಕುಶಾಲನಗರ ಬಡಾವಣೆಯ ಪೌರಕಾರ್ಮಿಕರ ಕಾಲನಿಯಲ್ಲಿ ನೆಲೆಸಿದ್ದರು.
ಮನೆಗಳು ಶಿಥಿಲವಾಗಿದ್ದವು ಕುಟುಂಬಗಳ ಸದಸ್ಯರ ಸಂಖ್ಯೆಯೂ ಹೆಚ್ಚಾಗಿತ್ತು.ವಸತಿ ಸಮಸ್ಯೆಯನ್ನು ಬಗೆಹರಿಸಿಕೊಡಿ ಎಂದು ಇಲ್ಲಿಯ ಪೌರಕಾರ್ಮಿಕರು ಕಂಡ ಕಂಡವರ ಬಳಿ ಬೇಡಿಕೊಂಡರು. ಇವರು ವಾಸಿಸುತ್ತಿದ್ದ ಮನೆಗಳನ್ನು ಕೆಡವಿ ಕೊಳಚೆ ನಿರ್ಮೂಲನ ಮಂಡಳಿಯಿಂದ ವಸತಿ ಯೋಜನೆ ಘೋಷಿಸಲಾಯಿತು.
8 ವರ್ಷಗಳು ಕಳೆದರೂ, ಮನೆಗಳನ್ನು ಪೂರ್ಣಗೊಳಿಸಲಿಲ್ಲ. ಈಗಾಗಲೇ ನಿರ್ಮಿಸಲಾಗಿರುವ ಮನೆಗಳು ಕಾಮಗಾರಿ ಕಳಪೆಯಾಗಿದ್ದು, ಕಟ್ಟಡ ಸೋರುತಿದೆ. ಈ ಪ್ರದೇಶಕ್ಕೆ ಯಾವುದೇ ಮೂಲಭೂತ ಸಮಸ್ಯೆಗಳನ್ನು ಕಲ್ಪಿಸಿಲ್ಲ.
ಅನೇಕ ಸಂಘ ಸಂಸ್ಥೆಗಳಲ್ಲಿ ಸಣ್ಣಪುಟ್ಟ ಸಾಲ ಪಡೆದಿರುವ ಕಾರಣ ಇವರಿಗೆ ಬ್ಯಾಂಕುಗಳು ಸಾಲ ನೀಡಲು ಮುಂದಾಗುತ್ತಿಲ್ಲ.ಸರಕಾರದ ಯಾವುದೇ ಯೋಜನೆಯ ಮೂಲಕ ಇವರು ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳೂ ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯ ತೊರುತ್ತಿರುವುದು ಪೌರಕಾರ್ಮಿಕರ ವಸತಿ ಸಮಸ್ಯೆ ನೀಗದಿರಲು ಪ್ರಮುಖ ಕಾರಣವಾಗಿದೆ.
ಪೌರ ಕಾರ್ಮಿಕರ ಸಮಸ್ಯೆ ದೀರ್ಘ ಅವಧಿಯಲ್ಲಿ ಬಗೆಹರಿಯದಿರುವುದು, ಎಲ್ಲರೂ ತಲೆತಗ್ಗಿಸುವ ವಿಚಾರ. ಒಂದು ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪದೇ ಪದೇ ಹೇಳಿ ಸಾಕಾಗಿದೆ ಆದರೆ ಪರಿಹಾರ ಮಾತ್ರ ಸಾಧ್ಯವಾಗುತ್ತಿಲ್ಲ.
-ನವೀನ್ ಸದಾ, ಹಾಸನ ಜಿಲ್ಲಾ ಜಾಗೃತಿ ಸಮಿತಿ ಸದಸ್ಯಸಕಲೇಶಪುರ
ಮೂಲ ಸೌಕರ್ಯಗಳ ಸಮಸ್ಯೆ ನಿವಾರಣೆ ಮಾಡಲು ಸರಕಾರಕ್ಕೆ 1 ಕೋಟಿ 47 ಲಕ್ಷ ರೂ.ಯ ಪ್ರಸ್ತಾವ ಸಲ್ಲಿಸಲಾಗಿದೆ. 66 ಕಿ.ವ್ಯಾ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ 11,59,686 ರೂ. ಮೊತ್ತದ ಗುತ್ತಿಗೆ ಕರೆಯಲಾಗಿದೆ. ಹಂತ ಹಂತವಾಗಿ ಕಾಮಗಾರಿ ಮುಗಿಸಿ ಪೌರ ಕಾರ್ಮಿಕರ ಮನೆಗಳನ್ನು ಅವರ ಕುಟುಂಬಕ್ಕೆ ನೀಡಲಾಗುವುದು.
-ಮಹದೇವಪ್ಪ,ಅಧಿಕಾರಿಗಳು, ಕೊಳಚೆ ನಿರ್ಮೂಲನ ಮಂಡಳಿ ಹಾಸನ
ನಮ್ಮ ವಸತಿ ಸಮಸ್ಯೆ ಬಗ್ಗೆ ಹರಿಸುವಂತೆ 20 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಾವು ವಾಸವಿದ್ದ ಮನೆಗಳನ್ನು ನೆಲಸಮ ಮಾಡಲಾಯಿತು. ಹೊಸ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ನಮ್ಮನ್ನು ಮನುಷ್ಯರಂತೆ ಯಾರು ಕಾಣುತ್ತಿಲ್ಲ. ಇದೇ ನಮ್ಮ ದುರಂತ.
-ನಂಜಯ್ಯ, ಆದಿ ದ್ರಾವಿಡ ಸಂಘದ ಮುಖಂಡ
ಬರೆದು ಬರೆದು ಸಾಕಾಗಿದೆ
ಪೌರಕಾರ್ಮಿಕರ ವಸತಿ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಸರಕಾರದ ಗಮನ ಸೆಳೆಯಲು ಸಾಕಷ್ಟು ಪತ್ರಗಳನ್ನು ಬರೆದಿದ್ದೇವೆ. ಎಮ್ಮೆ ಚರ್ಮದ ಅಧಿಕಾರಿಗಳು ಕಿವುಡರಾಗಿರುವ ಜನಪ್ರತಿನಿಧಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಪತ್ರಕರ್ತರಾದ ನಾವು ಬೇಸತ್ತು ಹೋಗಿದ್ದೇವೆ. ಇವರ ಸ್ಥಿತಿ ನೋಡಿದರೆ ಮರುಕ ಹುಟ್ಟುತ್ತದೆ.
-ಜೈ ಭೀಮ್ ಮಂಜು ,ಅಧ್ಯಕ್ಷರು ತಾಲೂಕು ಸಂಘ ಸಕಲೇಶಪುರ