ಭಾರತದ ಸಮತೋಲಿತ ವಿದೇಶಾಂಗ ನೀತಿ ಈಗ ಸಂಪೂರ್ಣವಾಗಿ ಹಾಳಾಗಿದ್ದು ಹೇಗೆ?
ವಿದೇಶಾಂಗ ನೀತಿ ರಾಜತಾಂತ್ರಿಕ ತಿಳುವಳಿಕೆ, ಸಮತೋಲನ ಮತ್ತು ಸೈದ್ಧಾಂತಿಕ ಪಾರದರ್ಶಕತೆಯ ಮೇಲೆ ನಡೆಯುತ್ತದೆ. ಭಾರತದಲ್ಲಿ ಇಸ್ರೇಲಿ ರಾಯಭಾರ ಕಚೇರಿಯನ್ನು ತೆರೆಯುವುದು ರಾಜತಾಂತ್ರಿಕ ತಿಳುವಳಿಕೆಯ ವಿಷಯವಾಗಿತ್ತು. ವ್ಯಾಪಾರದಲ್ಲಿ, ಇಸ್ರೇಲ್ ಮತ್ತು ಇರಾನ್ ಎರಡರೊಂದಿಗೂ ವ್ಯಾಪಾರ ಸಂಬಂಧಗಳನ್ನು ಬೆಳೆಸುವುದು ಸಮತೋಲನದ ವಿಷಯವಾಗಿತ್ತು. ಮಾನವ ಹಕ್ಕುಗಳ ತತ್ವದ ಮೇಲೆ ಅನೇಕ ಸಂದರ್ಭಗಳಲ್ಲಿ ಇಸ್ರೇಲ್ ವಿರುದ್ಧ ನಿಲ್ಲುವುದು ಸೈದ್ಧಾಂತಿಕ ಪಾರದರ್ಶಕತೆಯಾಗಿತ್ತು. ಆದರೆ ಈಗ ನಾವು ಈ ಮೂರೂ ರಂಗಗಳಲ್ಲಿ ದುರ್ಬಲವಾಗಿ ಕಾಣುತ್ತಿದ್ದೇವೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ, ಸೈದ್ಧಾಂತಿಕ ಪಾರದರ್ಶಕತೆಯ ಕೊರತೆ.
ವಿದೇಶಾಂಗ ನೀತಿಯನ್ನು ರಾಜತಾಂತ್ರಿಕ ತಿಳುವಳಿಕೆ, ಸಮತೋಲನ ಮತ್ತು ಪಾರದರ್ಶಕತೆಯಿಂದ ರೂಪಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ವಿದೇಶಾಂಗ ನೀತಿ ಒಂದು ಘಟನೆ ಮತ್ತು ಐಟಿ ಕೋಶದ ಅಭಿಯಾನದಂತಾಗಿದೆ.
ಇಸ್ರೇಲ್‌ನೊಂದಿಗಿನ ಭಾರತದ ಸಂಬಂಧಗಳು ಉತ್ತಮವಾಗಿರಬೇಕು. ಅದು ವಿದೇಶಾಂಗ ನೀತಿ. ಆದರೆ ಅನಗತ್ಯ ತಪ್ಪುಗಳನ್ನು ಮಾಡಿದಾಗ, ಉಳಿದ ಸ್ನೇಹಿತರು ದೂರ ಹೋಗುತ್ತಾರೆ. ಭಾರತ ಮಾಡಿದ್ದು ಇದನ್ನೇ.
ಇಸ್ರೇಲ್‌ನ ರಕ್ಷಣಾ ಒಪ್ಪಂದಗಳಿಗೆ ನಾವು ಹಲವು ಬಾರಿ ರಾಷ್ಟ್ರೀಯತೆಯ ಟ್ಯಾಗ್ ನೀಡಿದ್ದೇವೆ. ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ವಿರುದ್ಧ ಮತ ಚಲಾಯಿಸುವಾಗ ನಾವು ಹಲವು ಬಾರಿ ಮೌನವಾಗಿದ್ದೇವೆ. ನಮ್ಮ ಅಲಿಪ್ತ ಮತ್ತು ಸಮತೋಲಿತ ವಿದೇಶಾಂಗ ನೀತಿ ಈಗ ಸಂಪೂರ್ಣವಾಗಿ ಹಾಳಾಗಿದೆ.
ಭಾರತದ ವಿದೇಶಾಂಗ ನೀತಿ ಯಾವಾಗಲೂ ನೈತಿಕ ಮಾನದಂಡಗಳೊಂದಿಗೆ ಮಾನವ ಹಕ್ಕುಗಳ ಪರವಾಗಿ ಮಾತನಾಡುವ ನೀತಿಯಾಗಿದೆ. ಅದು ನಾವು ತುಳಿತಕ್ಕೊಳಗಾದವರ ಜೊತೆ ನಿಲ್ಲುತ್ತೇವೆ ಎಂಬ ಚಿಂತನೆಯನ್ನು ಆಧರಿಸಿದೆ. ಆದರೆ ಈಗ ಬಹುಶಃ ಚಿತ್ರ ಬದಲಾಗಿದೆ.
ಒಂದು ಕಡೆ ಇರಾನ್ ಇತಿಹಾಸ, ಸಂಸ್ಕೃತಿ ಮತ್ತು ಭೌಗೋಳಿಕತೆಯ ಮೂರು ಹಂತಗಳಲ್ಲಿ ಭಾರತದ ಹಳೆಯ ಮತ್ತು ಆಳವಾದ ಪಾಲುದಾರ. ಮತ್ತೊಂದೆಡೆ ತಂತ್ರಜ್ಞಾನ, ಶಸ್ತ್ರಾಸ್ತ್ರಗಳು ಮತ್ತು ಗೂಢಚರ್ಯೆ ಕಾರಣಕ್ಕಾಗಿ ಇಸ್ರೇಲ್, ಇತ್ತೀಚಿನ ದಿನಗಳಲ್ಲಿ ನಮ್ಮ ಮೊದಲ ಆಯ್ಕೆಯಂತೆ ಕಾಣುತ್ತದೆ.ಆದರೆ ಸಮಸ್ಯೆಯೆಂದರೆ ಇಸ್ರೇಲ್‌ನೊಂದಿಗೆ ನಿಲ್ಲುವ ಆತುರದಲ್ಲಿ, ಭಾರತ ಒಂದು ಕಾಲದಲ್ಲಿ ತನ್ನ ವಿದೇಶಾಂಗ ನೀತಿಯ ಗುರುತಾಗಿದ್ದ ಎಲ್ಲವನ್ನೂ ನಿಧಾನವಾಗಿ ಕಳೆದುಕೊಳ್ಳುತ್ತಿದೆ.
ಪ್ರಶ್ನೆ, ಭಾರತ ಇಸ್ರೇಲ್‌ನೊಂದಿಗೆ ಸ್ನೇಹ ಬೆಳೆಸಬೇಕೇ ಅಥವಾ ಬೇಡವೇ ಎಂಬುದಲ್ಲ. ಮೋದಿ ವಿದೇಶಾಂಗ ನೀತಿ ಹಿಂದುತ್ವ ರಾಷ್ಟ್ರೀಯತೆಯ ಮೂಲಕ ಇಸ್ರೇಲ್ ಅನ್ನು ನೋಡುತ್ತಿದೆಯೇ? ಎಂಬುದು. ಗಾಂಧಿ ಮತ್ತು ನೆಹರೂ ಯುಗದಲ್ಲಿ ಪ್ರಾರಂಭವಾದ ಈ ಸಂಬಂಧ ಈಗ ಎಲ್ಲಿಗೆ ತಲುಪಿದೆ?
1897ರಲ್ಲಿ ಆಸ್ಟ್ರಿಯನ್ ಯಹೂದಿ ನಾಯಕ ಥಿಯೋಡರ್ ಹೆರ್ಝಲ್ ಜಿಯೋನಿಸಂ ಎಂಬ ರಾಜಕೀಯ ಚಳವಳಿ ಪ್ರಾರಂಭಿಸಿದರು. ಜಿಯೋನಿಸಂ ಎಂದರೆ ಯಹೂದಿಗಳಿಗೆ ಪ್ರತ್ಯೇಕ ದೇಶವನ್ನು ಪಡೆಯುವ ಚಳವಳಿ. ಈ ಬೇಡಿಕೆಯ ಹಿಂದಿನ ಕಾರಣವಾಗಿದ್ದುದು ಯುರೋಪಿನಲ್ಲಿ ಶತಮಾನಗಳಿಂದ ಯಹೂದಿಗಳು ಎದುರಿಸುತ್ತಿದ್ದ ತಾರತಮ್ಯ ಮತ್ತು ಹಿಂಸಾಚಾರ.
ಯಹೂದಿಗಳು ತಮ್ಮದೇ ಆದ ಭೂಮಿ, ತಮ್ಮದೇ ಆದ ಸರಕಾರ ಮತ್ತು ತಮ್ಮದೇ ಆದ ಸೈನ್ಯವನ್ನು ಹೊಂದುವವರೆಗೆ ಸುರಕ್ಷಿತವಾಗಿರುವುದಿಲ್ಲ ಎಂದು ಥಿಯೋಡರ್ ಹೆರ್ಝಲ್ ಹೇಳಿದ್ದರು. ಇದಕ್ಕಾಗಿ ಅವರು ಆರಿಸಿಕೊಂಡ ಸ್ಥಳ ಫೆಲೆಸ್ತೀನ್.
ಫೆಲೆಸ್ತೀನ್ ಆ ಸಮಯದಲ್ಲಿ ಅರಬ್ ಪ್ರಾಬಲ್ಯದ ಪ್ರದೇಶವಾಗಿತ್ತು ಮತ್ತು ತುರ್ಕಿಯಾದ ಒಟ್ಟೋಮನ್ ಸಾಮ್ರಾಜ್ಯದ ನಿಯಂತ್ರಣದಲ್ಲಿತ್ತು. ಒಟ್ಟೋಮನ್ ಸಾಮ್ರಾಜ್ಯ ಇಸ್ಲಾಮಿಕ್ ಶಕ್ತಿಯಾಗಿತ್ತು. ಅದರ ಆಳ್ವಿಕೆ ಅರಬ್ ಪ್ರಪಂಚದಿಂದ ಉತ್ತರ ಆಫ್ರಿಕಾ ಮತ್ತು ಆಗ್ನೇಯ ಯುರೋಪ್‌ಗೆ ವಿಸ್ತರಿಸಿತು. ಈ ಕಾರಣಕ್ಕಾಗಿ, ಯುರೋಪಿನ ಯಹೂದಿಗಳಲ್ಲಿ ಹರಡುತ್ತಿದ್ದ ಜಿಯೋನಿಸಂ ಸಿದ್ಧಾಂತ ಇನ್ನೂ ಫೆಲೆಸ್ತೀನ್‌ನಿಂದ ದೂರವಿತ್ತು.
20ನೇ ಶತಮಾನ ಪ್ರಾರಂಭವಾಗಿ ಒಂದು ದಶಕದ ನಂತರ ಮೊದಲ ಮಹಾಯುದ್ಧ ಶುರುವಾಯಿತು. ಈ ಯುದ್ಧದಲ್ಲಿ, ಎರಡು ದೊಡ್ಡ ಗುಂಪುಗಳು ಮುಖಾಮುಖಿಯಾಗಿದ್ದವು.
ಒಂದು ಕಡೆ ಬ್ರಿಟನ್, ಫ್ರಾನ್ಸ್ ಮತ್ತು ರಶ್ಯ. ಇನ್ನೊಂದು ಕಡೆ ಜರ್ಮನಿ, ಆಸ್ಟ್ರಿಯಾ, ಹಂಗೇರಿ ಮತ್ತು ಒಟ್ಟೋಮನ್ ಸಾಮ್ರಾಜ್ಯ. ಒಟ್ಟೋಮನ್ ಸಾಮ್ರಾಜ್ಯ ಜರ್ಮನಿಯನ್ನು ಬೆಂಬಲಿಸಿತು ಮತ್ತು ಈ ನಿರ್ಧಾರಕ್ಕಾಗಿ ಭಾರೀ ಬೆಲೆ ತೆರಬೇಕಾಯಿತು.
ಬ್ರಿಟನ್ ಈ ಅವಕಾಶವನ್ನು ಬಳಸಿಕೊಂಡಿತು. ಇದು ಅರಬರು ಒಟ್ಟೋಮನ್ನರ ವಿರುದ್ಧ ದಂಗೆ ಎದ್ದರೆ, ಅವರಿಗೆ ಸ್ವಾತಂತ್ರ್ಯ ಮತ್ತು ಪ್ರತಿಯಾಗಿ ತಮ್ಮದೇ ಆದ ರಾಷ್ಟ್ರ ಸಿಗುತ್ತದೆ ಎಂದು ಪ್ರಚೋದಿಸಿತು.
1915-16ರಲ್ಲಿ ಮಕ್ಕಾ ಗವರ್ನರ್ ಷರೀಫ್ ಹುಸೇನ್ ಮತ್ತು ಬ್ರಿಟಿಷ್ ಅಧಿಕಾರಿ ಮೆಕ್‌ಮಹಾನ್ ನಡುವೆ ರಹಸ್ಯ ಒಪ್ಪಂದವಾಯಿತು.
ಬ್ರಿಟನ್ ಅರಬರಿಂದ ಮಾತ್ರವಲ್ಲದೆ ಯಹೂದಿಗಳಿಂದಲೂ ಸವಾಲುಗಳನ್ನು ಎದುರಿಸುತ್ತಿತ್ತು. 1917ರಲ್ಲಿ, ಬ್ರಿಟನ್ ಬಾಲ್ಫೋರ್ ಘೋಷಣೆ ಎಂಬ ಪತ್ರ ಬಿಡುಗಡೆ ಮಾಡಿತು.
ಫೆಲೆಸ್ತೀನ್‌ನಲ್ಲಿ ಯಹೂದಿಗಳಿಗಾಗಿ ಒಂದು ರಾಷ್ಟ್ರ ಸ್ಥಾಪಿಸುವುದನ್ನು ಬ್ರಿಟಿಷ್ ಸರಕಾರ ಬೆಂಬಲಿಸುತ್ತದೆ ಎಂದು ಅದು ಹೇಳಿತ್ತು. ಅಂದರೆ ಅರಬರಿಗೆ ಸ್ವತಂತ್ರ ರಾಷ್ಟ್ರ ಮತ್ತು ಯಹೂದಿಗಳಿಗೆ ಹೊಸ ಯಹೂದಿ ರಾಷ್ಟ್ರ ಎಂಬ ವಿಭಿನ್ನ ಭರವಸೆಗಳನ್ನು ಒಂದೇ ನೆಲದಲ್ಲಿ ನೀಡಲಾಯಿತು.
1918ರಲ್ಲಿ ಯುದ್ಧ ಕೊನೆಗೊಂಡಾಗ, ಒಟ್ಟೋಮನ್ ಸಾಮ್ರಾಜ್ಯ ವಿಭಜನೆಯಾಯಿತು.
ಫೆಲೆಸ್ತೀನ್, ಜೋರ್ಡಾನ್ ಮತ್ತು ಇರಾಕ್ ಅನ್ನು ಬ್ರಿಟನ್ ಆಕ್ರಮಿಸಿಕೊಂಡಿತು. ಸಿರಿಯಾ ಮತ್ತು ಲೆಬನಾನ್‌ನ ಮೇಲೆ ಫ್ರಾನ್ಸ್ ಹಿಡಿತ ಸಾಧಿಸಿತು. ಈ ಆಕ್ರಮಣಗಳಿಗೆ ಅಂತರ್‌ರಾಷ್ಟ್ರೀಯ ಮನ್ನಣೆ ನೀಡಲು, ನಂತರ ಯುನೈಟೆಡ್ ನೇಷನ್ಸ್ ಆಗಿ ಮಾರ್ಪಟ್ಟ ಲೀಗ್ ಆಫ್ ನೇಷನ್ಸ್, ಇವುಗಳನ್ನು ಬ್ರಿಟಿಷ್ ಮತ್ತು ಫ್ರೆಂಚ್ ನಿಯಂತ್ರಣಕ್ಕೆ ಹಸ್ತಾಂತರಿಸಿತು. ಫೆಲೆಸ್ತೀನ್ ಮೇಲೆ ಬ್ರಿಟನ್‌ನ ನೇರ ಆಳ್ವಿಕೆ ಆರಂಭವಾಯಿತು.
ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಯಹೂದಿಗಳು ಯುರೋಪ್‌ನಿಂದ ಫೆಲೆಸ್ತೀನ್‌ಗೆ ವಲಸೆ ಹೋಗಲು ಪ್ರಾರಂಭಿಸಿದರು. ಹೆಚ್ಚುತ್ತಿರುವ ಯಹೂದಿಗಳ ಸಂಖ್ಯೆ ಮತ್ತು ಭೂಮಿ ಖರೀದಿಸುವ ಪ್ರಕ್ರಿಯೆ ಸ್ಥಳೀಯ ಫೆಲೆಸ್ತೀನಿಯರಲ್ಲಿ ಅಸಮಾಧಾನ ಮತ್ತು ಅಭದ್ರತೆ ಉಂಟುಮಾಡಿತು. ಈ ಅವಧಿಯಲ್ಲಿ, ಯಹೂದಿಗಳು ಮತ್ತು ಅರಬರ ನಡುವಿನ ಸಂಘರ್ಷಕ್ಕೆ ಅಡಿಪಾಯ ಹಾಕಲಾಯಿತು. ಸಂಘರ್ಷ ಎಷ್ಟು ತೀವ್ರವಾಗಿತ್ತೆಂದರೆ ಪ್ರಪಂಚದಾದ್ಯಂತ ಪ್ರತಿಕ್ರಿಯೆಗಳು ಬಂದವು.
ಬ್ರಿಟಿಷ್ ಗುಲಾಮಗಿರಿಯ ವಿರುದ್ಧ ಹೋರಾಡುತ್ತಿದ್ದ ಭಾರತ ಫೆಲೆಸ್ತೀನ್‌ನಲ್ಲಿ ನೆಲೆಸುವ ಯಹೂದಿಗಳ ವಿರುದ್ಧವಾಗಿತ್ತು.
ಮಹಾತ್ಮಾ ಗಾಂಧಿಯವರು 1938ರಲ್ಲಿ ತಮ್ಮ ಪತ್ರಿಕೆ ‘ಹರಿಜನ್’ನಲ್ಲಿ ಹಿಂದೂಸ್ತಾನ್ ಭಾರತೀಯರಿಗೆ ಸೇರಿದಂತೆಯೇ ಫೆಲೆಸ್ತೀನ್ ಫೆಲೆಸ್ತೀನಿಯರಿಗೆ ಸೇರಿದೆ ಎಂದು ಬರೆದಿದ್ದಾರೆ. ಯಹೂದಿಗಳ ನೋವು ಅರ್ಥವಾಗುವಂತಹದ್ದಾಗಿದೆ ಎಂದು ಅವರು ಹೇಳುತ್ತಿದ್ದರು. ಆದರೆ ಅದರ ಪರಿಹಾರ ಬೇರೆಯವರ ಹಕ್ಕುಗಳನ್ನು ಆಕ್ರಮಿಸಿಕೊಳ್ಳುವುದಲ್ಲ ಎಂದಿದ್ದರು.
ಧರ್ಮದ ಆಧಾರದ ಮೇಲೆ ದೇಶ ರಚಿಸುವುದು ಅಪಾಯಕಾರಿ ಎಂಬುದು ಗಾಂಧೀಜಿಯವರ ಚಿಂತನೆಯಾಗಿತ್ತು. ಏಕೆಂದರೆ ಅದು ವಿಭಜನೆ ಮತ್ತು ದ್ವೇಷವನ್ನು ಉತ್ತೇಜಿಸುತ್ತದೆ.
ಫೆಲೆಸ್ತೀನ್ ಮತ್ತು ಭಾರತದ ನಡುವಿನ ಸಂಬಂಧಗಳು ಇಲ್ಲಿಯೇ ಪ್ರಾರಂಭವಾದವು.
ಸ್ವಲ್ಪ ಸಮಯದ ನಂತರ, ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಈ ಅವಧಿಯಲ್ಲಿ ಯಹೂದಿಗಳ ಅತಿದೊಡ್ಡ ಹತ್ಯಾಕಾಂಡ ನಡೆಯಿತು. ಹಿಟ್ಲರನ ನಾಝಿ ಸೈನ್ಯ 60 ಲಕ್ಷಕ್ಕೂ ಹೆಚ್ಚು ಯಹೂದಿಗಳನ್ನು ಕೊಂದಿತು. ಇದರಿಂದಾಗಿ ಪ್ರಪಂಚದಾದ್ಯಂತ ಯಹೂದಿಗಳ ಬಗ್ಗೆ ಸಹಾನುಭೂತಿ ಮೂಡಿತು.
ಯಹೂದಿಗಳು ಸಹ ಪ್ರತ್ಯೇಕ ದೇಶದ ಬೇಡಿಕೆ ಮುಂದಿಟ್ಟರು.
ಎರಡನೆಯ ಮಹಾಯುದ್ಧ ಕೊನೆಗೊಂಡು ಎರಡು ವರ್ಷಗಳ ನಂತರ, 1947ರಲ್ಲಿ, ವಿಶ್ವಸಂಸ್ಥೆ ಒಂದು ನಿರ್ಣಯ ಅಂಗೀಕರಿಸಿತು. ಫೆಲೆಸ್ತೀನ್ ಅನ್ನು ಎರಡು ಭಾಗಗಳಾಗಿ ವಿಭಜಿಸುವ ಪ್ರಸ್ತಾಪ ಅದಾಗಿತ್ತು. ಒಂದು ಭಾಗ ಯಹೂದಿಗಳಿಗೆ ಮತ್ತು ಇನ್ನೊಂದು ಭಾಗ ಅರಬರಿಗೆ ಎಂಬ ಆ ಪ್ರಸ್ತಾಪದ ವಿರುದ್ಧ ಭಾರತ ಮತ ಚಲಾಯಿಸಿತು. ಆ ಹೊತ್ತಿಗೆ, ಭಾರತ ಸ್ವತಂತ್ರವಾಗಿ, ನೆಹರೂ ಭಾರತದ ಪ್ರಧಾನಿಯಾಗಿದ್ದರು. ಈ ವಿಭಜನೆಯನ್ನು ತಿರಸ್ಕರಿಸಿದ 13 ದೇಶಗಳಲ್ಲಿ ಭಾರತವೂ ಸೇರಿತ್ತು.
ಅಂದು ಭಾರತ ಬೆದರಿಕೆಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಯಹೂದಿಗಳಿಗೋಸ್ಕರ ಫೆಲೆಸ್ತೀನಿಯರನ್ನು ಶಿಕ್ಷಿಸಬಾರದು ಎಂಬ ಗಾಂಧೀಜಿಯವರ ಚಿಂತನೆ ಭಾರತದ ಈ ನಿಲುವಿಗೆ ಕಾರಣವಾಗಿತ್ತು.ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಹೋರಾಡುತ್ತಿರುವ ದೇಶಗಳನ್ನು ಭಾರತ ಬೆಂಬಲಿಸಬೇಕು ಎಂದು ನೆಹರೂ ನಂಬಿದ್ದರು.
ಇದರ ನಂತರ 1949ರಲ್ಲಿ ಇಸ್ರೇಲ್‌ಗೆ ವಿಶ್ವಸಂಸ್ಥೆಯ ಸದಸ್ಯತ್ವ ನೀಡುವ ಪ್ರಶ್ನೆ ಬಂದಾಗ, ಭಾರತವೂ ಅದರ ವಿರುದ್ಧ ಮತ ಚಲಾಯಿಸಿತು. ಆದರೂ, 1950ರಲ್ಲಿ ಇಸ್ರೇಲ್ ಅನ್ನು ಒಂದು ದೇಶವೆಂದು ಭಾರತ ಗುರುತಿಸಿತು. ಆದರೆ ಅದು ಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಲು ಹೋಗಲಿಲ್ಲ.
ಮತ್ತೊಂದೆಡೆ, 1950ರಲ್ಲಿ ಭಾರತ ಮತ್ತು ಇರಾನ್ ಒಂದು ಒಪ್ಪಂದಕ್ಕೆ ಸಹಿ ಹಾಕಿದವು. ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದಕ್ಕೆ ಬದ್ಧವಾದವು. ಈ ಒಪ್ಪಂದ ಎರಡು ದೇಶಗಳ ನಡುವಿನ ಸಂಬಂಧಗಳಿಗೆ ಬಲವಾದ ಅಡಿಪಾಯ ಹಾಕಿತು.
ಈ ಅವಧಿಯಲ್ಲಿ ಭಾರತದ ನೀತಿ ಬಹಳ ಸ್ಪಷ್ಟವಾಗಿತ್ತು. ಫೆಲೆಸ್ತೀನ್‌ಗೆ ಬೆಂಬಲ, ಇಸ್ರೇಲ್‌ನಿಂದ ದೂರ ಮತ್ತು ಇರಾನ್‌ನೊಂದಿಗಿನ ಸ್ನೇಹ ಎಂಬುದು ಆಗಿನ ನೀತಿಯಾಗಿತ್ತು. ಅದರಲ್ಲಿ ನ್ಯಾಯ, ಸ್ವಾತಂತ್ರ್ಯ ಮತ್ತು ವಸಾಹತುಶಾಹಿ ಶೋಷಣೆಯ ವಿರುದ್ಧದ ಹೋರಾಟ ಸೇರಿತ್ತು.
ನೆಹರೂ ನಂತರ, ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ತಮ್ಮ ಅಲ್ಪಾವಧಿಯಲ್ಲಿ ಈ ನೀತಿಯನ್ನು ಉಳಿಸಿಕೊಂಡರು.
ಇಂದಿರಾ ಗಾಂಧಿ ಫೆಲೆಸ್ತೀನ್‌ಗೆ ಮಾತ್ರ ಸೀಮಿತವಾಗದೆ, ಅಗತ್ಯವಿದ್ದಾಗ ಇಸ್ರೇಲ್‌ನೊಂದಿಗೆ ಮಾತನಾಡಿದರು.
1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತ ಇಸ್ರೇಲ್‌ನಿಂದ ಸಹಾಯ ಪಡೆಯಿತು. ಏಕೆಂದರೆ ಪಾಕಿಸ್ತಾನ ಇಸ್ರೇಲ್‌ಗೆ ಶತ್ರು ರಾಷ್ಟ್ರವಾಗಿತ್ತು. ಆದರೂ, ಇದೆಲ್ಲವೂ ತೆರೆಮರೆಯಲ್ಲಿ ಸಂಭವಿಸಿತು ಮತ್ತು ಅದನ್ನು ರಾಜತಾಂತ್ರಿಕತೆಯ ಭಾಗವಾಗಿ ಮಾಡಲಾಗಿರಲಿಲ್ಲ.
ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡಾಗ, ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದ ಜನತಾ ಪಕ್ಷದ ಸರಕಾರ ಬಂತು.
1977ರ ಮಾರ್ಚ್ 24ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ವಾಜಪೇಯಿ ಒಂದು ಹೇಳಿಕೆ ನೀಡಿದರು. ಇಸ್ರೇಲ್ ತಾನು ಆಕ್ರಮಿಸಿಕೊಂಡಿರುವ ಅರಬರ ಭೂಮಿಯನ್ನು ಖಾಲಿ ಮಾಡಬೇಕಾಗುತ್ತದೆ ಎಂಬ ಆ ಹೇಳಿಕೆ ಆ ಸಮಯದಲ್ಲಿ ಭಾರತದ ಫೆಲೆಸ್ತೀನ್ ಪರ ನೀತಿಯನ್ನು ಪ್ರತಿಬಿಂಬಿಸುತ್ತದೆ. ಅದಕ್ಕಾಗಿಯೇ ಸರಕಾರ ಇರಾನ್‌ನೊಂದಿಗೆ ಸಂಬಂಧವನ್ನು ಗಾಢಗೊಳಿಸಿತು. 1979ರಲ್ಲಿ ಇಸ್ಲಾಮಿಕ್ ಕ್ರಾಂತಿಯ ನಂತರ ಪಾಶ್ಚಿಮಾತ್ಯ ದೇಶಗಳು ಇರಾನ್‌ನಿಂದ ದೂರವಾದಾಗ, ಭಾರತ ಇರಾನನ್ನು ಬೆಂಬಲಿಸಿತು. ಭಾರತ ಇರಾನಿನ ತೈಲದ ಪ್ರಮುಖ ಆಮದುದಾರ ದೇಶವಾಗಿತ್ತು. ಎರಡೂ ದೇಶಗಳು ವ್ಯಾಪಾರವನ್ನು ಹೆಚ್ಚಿಸಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದವು.
1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದಾಗ, ಅವರು ಫೆಲೆಸ್ತೀನ್ ವಿಮೋಚನಾ ಸಂಸ್ಥೆಗೆ ಭಾರತದಲ್ಲಿ ಕಚೇರಿ ತೆರೆಯಲು ಅವಕಾಶ ಮಾಡಿಕೊಟ್ಟರು. ಆ ಸಮಯದಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಿತ್ತು. 1981ರಲ್ಲಿ ಇಂದಿರಾ ಗಾಂಧಿ ಕೂಡ ಫೆಲೆಸ್ತೀನ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಪಿಎಲ್‌ಒ ನಾಯಕ ಯಾಸಿರ್ ಅರಫಾತ್ ಅವರನ್ನು ಭೇಟಿಯಾದರು ಮತ್ತು ಫೆಲೆಸ್ತೀನ್ ಹಕ್ಕುಗಳ ವಿಷಯವನ್ನು ಬಲವಾಗಿ ಎತ್ತಿದರು.
ವಿಶ್ವಸಂಸ್ಥೆಯಲ್ಲೂ ಭಾರತದ ನಿಲುವು ಹಾಗೆಯೇ ಇತ್ತು. ಇಂದಿರಾ ಅವರ ಅಧಿಕಾರಾವಧಿಯಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳು ಮತ್ತು ಆಕ್ರಮಣದ ವಿರುದ್ಧದ ಹಲವಾರು ನಿರ್ಣಯಗಳ ಪರವಾಗಿ ಭಾರತ ಮತ ಚಲಾಯಿಸಿತು. ಇಂದಿರಾ ಗಾಂಧಿಯವರ ನಂತರ, ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿಯೂ ಈ ಸಂಬಂಧಗಳು ಹಾಗೆಯೇ ಇದ್ದವು. ಆದರೆ 1990ರ ದಶಕದ ಆರಂಭದಲ್ಲಿ ಒಂದು ದೊಡ್ಡ ಘಟನೆ ಸಂಭವಿಸಿತು.
1991ರಲ್ಲಿ ಸೋವಿಯತ್ ಒಕ್ಕೂಟ ಮುರಿದುಹೋಯಿತು. ಅಮೆರಿಕ ಏಕೈಕ ಸೂಪರ್ ಪವರ್ ಆಯಿತು. ಇಸ್ರೇಲ್ ಅದರ ನಿಕಟ ಪಾಲುದಾರ ದೇಶವಾಗಿತ್ತು. ಆದ್ದರಿಂದ ಭಾರತ ಅಂತಿಮವಾಗಿ 1992ರಲ್ಲಿ ಇಸ್ರೇಲ್‌ನೊಂದಿಗೆ ಅಧಿಕೃತವಾಗಿ ರಾಜತಾಂತ್ರಿಕ ಸಂಬಂಧಗಳನ್ನು ಬೆಳೆಸಿತು. ಆನಂತರವೂ ಅರ್ಧ ದಶಕದವರೆಗೆ ಇಸ್ರೇಲ್ ಮತ್ತು ಭಾರತದ ನಡುವೆ ವಿಶೇಷ ನಿಕಟತೆ ಇರಲಿಲ್ಲ.
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾದಾಗ, ದೇಶದ ವಿದೇಶಾಂಗ ನೀತಿಯಲ್ಲಿ ಹೊಸ ತಿರುವು ಬಂತು. ಅಲ್ಲಿಯವರೆಗೆ ಭಾರತದ ಮುಕ್ತ ಮಿತ್ರರಾಷ್ಟ್ರವಾಗಿರದ ಇಸ್ರೇಲ್ ಕ್ರಮೇಣ ಹತ್ತಿರ ಬರಲು ಪ್ರಾರಂಭಿಸಿತು.
ವಾಜಪೇಯಿ ಅವರು ಹೈಫನೇಶನ್ ನೀತಿ ಪ್ರಾರಂಭಿಸಿದ್ದರು. ಅಂದರೆ, ಇಸ್ರೇಲ್ ಮತ್ತು ಫೆಲೆಸ್ತೀನ್ ಅನ್ನು ಪರಸ್ಪರ ವಿರುದ್ಧವಾಗಿ ನೋಡದೆ ಪ್ರತ್ಯೇಕವಾಗಿ ನೋಡುವುದು. ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವು ಕೂಡ ಬದಲಾಗಲು ಪ್ರಾರಂಭಿಸಿತು.
ವಾಜಪೇಯಿ ಅವರ ಕಾಲದಲ್ಲಿ ಭಾರತ ಕೆಲವು ಇಸ್ರೇಲ್ ವಿರೋಧಿ ಪ್ರಸ್ತಾಪಗಳ ಮೇಲೆ ಮತ ಚಲಾಯಿಸುವುದರಿಂದ ದೂರವಿರಲು ಪ್ರಾರಂಭಿಸಿತು. ಆದರೆ ಆ ಹೊತ್ತಿನಲ್ಲೂ ಭಾರತ ಇರಾನ್‌ನೊಂದಿಗಿನ ತನ್ನ ಸಂಬಂಧವನ್ನು ಉತ್ತಮವಾಗಿಯೇ ಇರಿಸಿಕೊಂಡಿತ್ತು.
2001ರಲ್ಲಿ ವಾಜಪೇಯಿ ಇರಾನ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಇರಾನ್ ಅಧ್ಯಕ್ಷ ಮುಹಮ್ಮದ್ ಖಾತಮಿ ಅವರೊಂದಿಗೆ ಟೆಹರಾನ್ ಘೋಷಣೆಗೆ ಸಹಿ ಹಾಕಿದರು. ಈ ಒಪ್ಪಂದದಲ್ಲಿ, ಎರಡೂ ದೇಶಗಳು ಇಂಧನ, ವ್ಯಾಪಾರ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಸಹಕಾರ ಹೆಚ್ಚಿಸುವ ಬಗ್ಗೆ ಮಾತನಾಡಿದ್ದವು.
ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿರುವುದರಿಂದ ಇರಾನ್‌ನ ತೈಲ ಮತ್ತು ಅನಿಲ ಭಾರತಕ್ಕೆ ಬಹಳ ಮುಖ್ಯವಾಗಿತ್ತು. ಅಲ್ಲದೆ, ಭಾರತ ಮಧ್ಯ ಏಶ್ಯವನ್ನು ತಲುಪಲು ಇರಾನ್ ಮಾರ್ಗವಾಗಿತ್ತು. ಏಕೆಂದರೆ ಪಾಕಿಸ್ತಾನ ತನ್ನ ದಾರಿ ಬಿಟ್ಟುಕೊಡಲು ಸಿದ್ಧವಾಗಿರಲಿಲ್ಲ.
ಇದರ ನಂತರ 2003ರಲ್ಲಿ ಒಂದು ಐತಿಹಾಸಿಕ ಘಟನೆ ಸಂಭವಿಸಿತು. ಈ ಬಾರಿ ಇಸ್ರೇಲ್ ಪ್ರಧಾನಿ ಏರಿಯಲ್ ಶರೋನ್ ಭಾರತಕ್ಕೆ ಬಂದರು. ಇದು ಇಸ್ರೇಲ್ ಪ್ರಧಾನಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿತ್ತು. ಈ ಭೇಟಿಯ ಸಮಯದಲ್ಲಿ, ಎರಡೂ ದೇಶಗಳು ರಕ್ಷಣೆ, ತಂತ್ರಜ್ಞಾನ ಮತ್ತು ಗುಪ್ತಚರ ಹಂಚಿಕೆಯ ಬಗ್ಗೆ ಮಾತನಾಡಿದ್ದವು. ಇಸ್ರೇಲ್ ಮತ್ತು ಇರಾನ್ ಜೊತೆಗಿನ ಸ್ನೇಹ ಹಾಗೆಯೇ ಉಳಿಯುವಂತೆ ನೋಡಿಕೊಳ್ಳಲಾಯಿತು.
ಅದೇ ವರ್ಷದಲ್ಲಿ, ವಾಜಪೇಯಿ ಅವರು ಚಾಬಹಾರ್ ಬಂದರನ್ನು ಅಭಿವೃದ್ಧಿಪಡಿಸಲು ಇರಾನ್ ಜೊತೆ ಮಾತುಕತೆಗಳನ್ನು ಪ್ರಾರಂಭಿಸಿದರು. ಈಗ ಭಾರತ ಎರಡೂ ದೇಶಗಳಿಗೆ ಹತ್ತಿರವಾಗಿತ್ತು. ಎರಡೂ ದೇಶಗಳೊಂದಿಗಿನ ಭಾರತದ ನಿಕಟತೆ ಭವಿಷ್ಯದಲ್ಲಿ ಭಾರತ, ಈ ಸಂಬಂಧಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತು.
2004ರಲ್ಲಿ ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾದಾಗ, ಇಸ್ರೇಲ್ ಜೊತೆಗಿನ ಭಾರತದ ವ್ಯಾಪಾರ ಮತ್ತಷ್ಟು ಹೆಚ್ಚಾಯಿತು. ಸುಮಾರು 10 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಲಾಯಿತು.ಆದರೆ ಇಸ್ರೇಲ್‌ನೊಂದಿಗಿನ ಸ್ನೇಹವನ್ನು ದೊಡ್ಡ ವಿಷಯವನ್ನಾಗಿ ಮಾಡಲಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವು ಸಹ ಫೆಲೆಸ್ತೀನ್ ಪರ ದೃಢವಾಗಿತ್ತು.
2006ರಲ್ಲಿ ಇಸ್ರೇಲ್ ಲೆಬನಾನ್ ಮೇಲೆ ದಾಳಿ ಮಾಡಿದಾಗ, ಭಾರತ ಅದನ್ನು ಖಂಡಿಸಿತು. ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳನ್ನು ತನಿಖೆ ಮಾಡಲು 2008-2009ರಲ್ಲಿ ಗೋಲ್ಡ್‌ಸ್ಟೋನ್ ವರದಿ ಬಂದಾಗ, ಭಾರತ ಅದನ್ನು ಬೆಂಬಲಿಸಿತು. 2010ರಲ್ಲಿ ಗಾಝಾಗೆ ಹೋಗುತ್ತಿದ್ದ ಪರಿಹಾರ ಹಡಗಿನ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಭಾರತ ಮತ್ತೆ ಇಸ್ರೇಲ್ ಅನ್ನು ದೂಷಿಸಿತು.
2008 ಮತ್ತು 2011ರಲ್ಲಿ ಮನಮೋಹನ್ ಸಿಂಗ್ ಫೆಲೆಸ್ತೀನ್ ನಾಯಕ ಮಹಮೂದ್ ಅಬ್ಬಾಸ್ ಅವರನ್ನು ಭೇಟಿಯಾದರು. ಅಲ್ಲಿನ ಶಾಲೆ, ಆಸ್ಪತ್ರೆಗಳಿಗೆ ಹಣವನ್ನು ನೀಡಲಾಯಿತು. 2012ರಲ್ಲಿ ಫೆಲೆಸ್ತೀನ್‌ಗೆ ಸದಸ್ಯನಲ್ಲದ ವೀಕ್ಷಕ ಸ್ಥಾನಮಾನ ನೀಡುವ ಪ್ರಸ್ತಾಪ ವಿಶ್ವಸಂಸ್ಥೆಯಲ್ಲಿ ಬಂದಾಗ ಭಾರತ ತಕ್ಷಣ ಒಪ್ಪಿಕೊಂಡಿತು.
ಭಾರತ ಇಸ್ರೇಲ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನವನ್ನು ತೆಗೆದುಕೊಳ್ಳುತ್ತಲೇ ಇತ್ತು. ಆದರೆ ಅರಬ್ ದೇಶಗಳು ಮತ್ತು ಇರಾನ್ ಕೋಪಗೊಳ್ಳುವುದನ್ನು ತಪ್ಪಿಸಿತು. ಇರಾನ್‌ನಿಂದ ತೈಲ ಬರುತ್ತಲೇ ಇತ್ತು. ಚಾಬಹಾರ್ ಬಂದರಿನ ಮಾತುಕತೆಗಳು ನಡೆಯುತ್ತಲೇ ಇದ್ದವು.
ಅದರ ನಂತರ 2014ರಲ್ಲಿ ನರೇಂದ್ರ ಮೋದಿ ಭಾರತದಲ್ಲಿ ಅಧಿಕಾರ ವಹಿಸಿಕೊಂಡರು. ಅವರು ವಿದೇಶಾಂಗ ನೀತಿಗೆ ಹೊಸ ಬಣ್ಣ ನೀಡಿದರು.
2016ರಲ್ಲಿ, ನರೇಂದ್ರ ಮೋದಿ ಇರಾನ್‌ಗೆ ಹೋಗಿ ಚಾಬಹಾರ್ ಒಪ್ಪಂದವನ್ನು ದೃಢಪಡಿಸಿದರು.
ಆದರೆ ಮುಂದಿನ ವರ್ಷವೇ ಕಥೆ ಸಂಪೂರ್ಣವಾಗಿ ಬದಲಾಯಿತು.
2017ರಲ್ಲಿ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದರು. ಅವರು ಇಸ್ರೇಲ್ ನೆಲದಲ್ಲಿ ಕಾಲಿಟ್ಟ ಮೊದಲ ಭಾರತೀಯ ಪ್ರಧಾನಿ. ಅಲ್ಲಿ, ಬೆಂಜಮಿನ್ ನೆತನ್ಯಾಹು ಮೋದಿಗೆ ಅದ್ದೂರಿ ಸ್ವಾಗತ ನೀಡಿದರು.
ಈ ಸಮಯದಲ್ಲಿ ಬಿಜೆಪಿ ಬೆಂಬಲಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮೋದಿಯವರ ಬಿಜೆಪಿ ಮತ್ತು ಇಸ್ರೇಲ್ ಸರಕಾರದ ನಡುವೆ ಸೈದ್ಧಾಂತಿಕ ಹೋಲಿಕೆ ಇದೆ ಎಂದು ತೋರಿಸಿದವು. ಈ ಹಿಂದೆ ಭಾರತದ ಗುಪ್ತ ಪಾಲುದಾರ ದೇಶವಾಗಿದ್ದ ಇಸ್ರೇಲ್, ಈಗ ಭಾರತದ ಬಹಿರಂಗ ಮಿತ್ರರಾಷ್ಟ್ರವಾಯಿತು. ಎರಡೂ ದೇಶಗಳ ನಡುವಿನ ನಿಕಟತೆ ಹಿಂದೆಂದಿಗಿಂತಲೂ ಹೆಚ್ಚಾಯಿತು.
2018ರಲ್ಲಿ ಮೋದಿ ಫೆಲೆಸ್ತೀನ್‌ಗೂ ಭೇಟಿ ನೀಡಿದ್ದರು. ಅಲ್ಲಿ ಅವರು ಮಹಮೂದ್ ಅಬ್ಬಾಸ್ ಅವರನ್ನು ಭೇಟಿಯಾಗಿ 50 ಮಿಲಿಯನ್ ಡಾಲರ್ ನೆರವು ನೀಡಿದರು.
ಆದರೆ ಸತ್ಯವೆಂದರೆ, ಇಸ್ರೇಲ್ ಈಗ ಭಾರತದ ಆದ್ಯತೆಯಾಗಿತ್ತು. ಇದು ವಿಶ್ವಸಂಸ್ಥೆಯಲ್ಲಿ ಭಾರತದ ವರ್ತನೆಯಿಂದ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಹಿಂದೆ ಭಾರತ ಇಸ್ರೇಲ್ ಅನ್ನು ಟೀಕಿಸುವ ಪ್ರತಿಯೊಂದು ನಿರ್ಣಯವನ್ನು ಬೆಂಬಲಿಸುತ್ತಿತ್ತು. ಆದರೆ ಮೋದಿ ಕಾಲದಲ್ಲಿ ಭಾರತ ಹಲವು ಬಾರಿ ತಟಸ್ಥವಾಗಿರಲು ನಿರ್ಧರಿಸಿತು.
2023ರಲ್ಲಿ ಗಾಝಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದಾಗ, ವಿಶ್ವಸಂಸ್ಥೆಯಲ್ಲಿ ಕದನ ವಿರಾಮ ಪ್ರಸ್ತಾಪ ಬಂತು. ಭಾರತ ಮತ ಚಲಾಯಿಸಲಿಲ್ಲ ಅಥವಾ ವಿರೋಧಿಸಲಿಲ್ಲ. ಬದಲಿಗೆ, ಮೌನವಾಗಿತ್ತು. 2024ರಲ್ಲಿ ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕ್ರಮಗಳನ್ನು ಖಂಡಿಸುವ ಪ್ರಸ್ತಾಪ ಬಂದಾಗಲೂ ಭಾರತ ಮತ್ತೆ ಮತದಾನದಿಂದ ದೂರವಿತ್ತು.
ಮೋದಿ ಇಸ್ರೇಲ್‌ನೊಂದಿಗೆ ಸ್ನೇಹ ಬೆಳೆಸಿದಾಗ, ಅದನ್ನು ಭಾರತದ ವಿದೇಶಾಂಗ ನೀತಿಯಲ್ಲಿ ಭರವಸೆಯ ಕಿರಣ ಎಂದು ದೇಶದಲ್ಲಿ ಬಣ್ಣಿಸಲಾಯಿತು. ಆದರೆ ಇದು ಕೆಲವು ಹಳೆಯ ಮಿತ್ರರಾಷ್ಟ್ರಗಳನ್ನು ಕಾಡಲು ಪ್ರಾರಂಭಿಸಿತು. ವಿಶೇಷವಾಗಿ ಇರಾನ್ ವಿಶ್ವಾಸ ಕಳೆದುಕೊಳ್ಳಲು ಪ್ರಾರಂಭಿಸಿತು.
ಸರಕಾರದ ನೀತಿಗಳು ಭಾರತವನ್ನು ಇಸ್ರೇಲ್‌ಗೆ ಹತ್ತಿರವಾಗಿಸಿದಾಗ, ಭಾರತ ಪ್ರಪಂಚದ ಅನೇಕ ಭಾಗಗಳಲ್ಲಿ ಏಕಾಂಗಿಯಾಗತೊಡಗಿತು. ತೈಲ ಮತ್ತು ವ್ಯಾಪಾರದ ವಿಷಯದಲ್ಲಿ ಭಾರತಕ್ಕೆ ಮುಖ್ಯವಾಗಿದ್ದ ಅರಬ್ ರಾಷ್ಟ್ರಗಳು ಈಗ ಭಾರತದ ತಟಸ್ಥತೆಯನ್ನು ಅನುಮಾನದಿಂದ ನೋಡಲಾರಂಭಿಸಿದವು.
90 ಲಕ್ಷ ಭಾರತೀಯರು ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಹಣ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದರೆ ಇಸ್ರೇಲ್‌ನತ್ತ ಒಲವು ಈ ದೇಶಗಳಲ್ಲಿ ಭಾರತದ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತದೆ.
ಈ ಹಿಂದೆ ಭಾರತಕ್ಕೆ ತೈಲ ಮತ್ತು ಅನಿಲದ ದೊಡ್ಡ ಮೂಲವಾಗಿದ್ದ ಇರಾನ್, ಈಗ ನಿಧಾನವಾಗಿ ಚೀನಾದ ಕಡೆಗೆ ಸಾಗಲು ಪ್ರಾರಂಭಿಸಿದೆ. 2021ರಲ್ಲಿ ಇರಾನ್ ಮತ್ತು ಚೀನಾ 25 ವರ್ಷಗಳ 400 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದವು. ಇದರಲ್ಲಿ ಇರಾನ್‌ನ ತೈಲ ಮತ್ತು ಮೂಲಸೌಕರ್ಯದಲ್ಲಿ ಚೀನಾ ಭಾರೀ ಹೂಡಿಕೆಗಳ ಭರವಸೆ ನೀಡಿತು.
ಭಾರತದಿಂದ ಇರಾನ್‌ನಂತಹ ದೇಶಗಳು ದೂರವಾಗುತ್ತಿರುವುದಕ್ಕೆ ಒಂದು ಕಾರಣವೆಂದರೆ, ಭಾರತದಲ್ಲಿ ಈಗ ವ್ಯಾಪಕವಾಗಿ ಹರಡಿರುವ ಇಸ್ಲಾಮೋಫೋಬಿಯಾ.
2025ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಸಮಯದಲ್ಲಿ, ನಿವೃತ್ತ ಮೇಜರ್ ಗೌರವ್ ಆರ್ಯ ತಮ್ಮ ಯೂಟ್ಯೂಬ್ ಚಾನೆಲ್ ಚಾಣಕ್ಯ ಡೈಲಾಗ್ಸ್‌ನಲ್ಲಿ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರು. ಇದು ಇರಾನ್ ಕೋಪಕ್ಕೆ ಕಾರಣವಾಯಿತು. ಹೊಸದಿಲ್ಲಿಯಲ್ಲಿರುವ ಇರಾನ್ ರಾಯಭಾರ ಕಚೇರಿ ಇದನ್ನು ಪ್ರಶ್ನಿಸಿತು.
ನಂತರ, ಟೆಹರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಗೌರವ್ ಆರ್ಯ ಒಬ್ಬ ಖಾಸಗಿ ವ್ಯಕ್ತಿ ಮತ್ತು ಅವರ ಹೇಳಿಕೆಗಳು ಭಾರತ ಸರಕಾರದ ಅಧಿಕೃತ ನೀತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕಾಯಿತು.
ವಿದೇಶಾಂಗ ನೀತಿ ರಾಜತಾಂತ್ರಿಕ ತಿಳುವಳಿಕೆ, ಸಮತೋಲನ ಮತ್ತು ಸೈದ್ಧಾಂತಿಕ ಪಾರದರ್ಶಕತೆಯ ಮೇಲೆ ನಡೆಯುತ್ತದೆ. ಭಾರತದಲ್ಲಿ ಇಸ್ರೇಲಿ ರಾಯಭಾರ ಕಚೇರಿಯನ್ನು ತೆರೆಯುವುದು ರಾಜತಾಂತ್ರಿಕ ತಿಳುವಳಿಕೆಯ ವಿಷಯವಾಗಿತ್ತು. ವ್ಯಾಪಾರದಲ್ಲಿ, ಇಸ್ರೇಲ್ ಮತ್ತು ಇರಾನ್ ಎರಡರೊಂದಿಗೂ ವ್ಯಾಪಾರ ಸಂಬಂಧಗಳನ್ನು ಬೆಳೆಸುವುದು ಸಮತೋಲನದ ವಿಷಯವಾಗಿತ್ತು. ಮಾನವ ಹಕ್ಕುಗಳ ತತ್ವದ ಮೇಲೆ ಅನೇಕ ಸಂದರ್ಭಗಳಲ್ಲಿ ಇಸ್ರೇಲ್ ವಿರುದ್ಧ ನಿಲ್ಲುವುದು ಸೈದ್ಧಾಂತಿಕ ಪಾರದರ್ಶಕತೆಯಾಗಿತ್ತು. ಆದರೆ ಈಗ ನಾವು ಈ ಮೂರೂ ರಂಗಗಳಲ್ಲಿ ದುರ್ಬಲವಾಗಿ ಕಾಣುತ್ತಿದ್ದೇವೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ, ಸೈದ್ಧಾಂತಿಕ ಪಾರದರ್ಶಕತೆಯ ಕೊರತೆ.
ಇಸ್ರೇಲ್ ಮುಸ್ಲಿಮರನ್ನು ವಿರೋಧಿಸುತ್ತದೆ ಎಂಬ ಕಾರಣಕ್ಕಾಗಿ ಭಾರತದ ಬಲಪಂಥೀಯ ಗುಂಪುಗಳು ಇಸ್ರೇಲ್ ಅನ್ನು ಬೆಂಬಲಿಸುತ್ತಿವೆಯೇ? ನಮ್ಮ ದೇಶದಲ್ಲಿ ಹೊತ್ತಿಕೊಂಡಿರುವ ಕೋಮುವಾದದ ಬೆಂಕಿಯಿಂದಾಗಿ ವಿದೇಶಗಳೊಂದಿಗಿನ ನಮ್ಮ ಸಂಬಂಧಗಳು ಹದಗೆಡುತ್ತಿವೆಯೇ? ದಶಕಗಳಿಂದ ಭಾರತ ಜತನದಿಂದ ಕಾಪಾಡಿಕೊಂಡು ಬಂದಿರುವ ಅಂತರ್‌ರಾಷ್ಟ್ರೀಯ ಸಂಬಂಧಗಳನ್ನು ಇಲ್ಲಿನ ಮತಾಂಧ ರಾಜಕೀಯಕ್ಕಾಗಿ ಬಲಿಕೊಡಲು ಸಾಧ್ಯವೇ? ಅದರಿಂದ ಕೊನೆಗೆ ನಷ್ಟವಾಗುವುದು ಯಾರಿಗೆ?
ಈ ಬಗ್ಗೆ ಯೋಚಿಸುವವರು ಯಾರು?