×
Ad

ಕೊಡಗಿನಲ್ಲಿ ಬಟರ್‌ಫ್ರೂಟ್ ಬೀಜಕ್ಕೆ ಭಾರೀ ಬೇಡಿಕೆ

Update: 2025-07-28 14:11 IST

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ಬಟರ್‌ಫ್ರೂಟ್(ಬೆಣ್ಣೆಹಣ್ಣು) ಬೆಳೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೀಗ ಜಿಲ್ಲೆಯಲ್ಲಿ ಬಟರ್‌ಫ್ರೂಟ್ ಗಿಂತ ಅದರ ಬೀಜಕ್ಕೆ ಹೆಚ್ಚು ಬೇಡಿಕೆ ಬಂದಿದೆ.

ವ್ಯಾಪಾರಿಗಳು ಇದೀಗ ಬಟರ್ ಫ್ರೂಟ್ ವ್ಯಾಪಾರದೊಂದಿಗೆ ಅದರ ಬೀಜದ ವ್ಯಾಪಾರಕ್ಕೂ ತೊಡಗಿ ಒಳ್ಳೆಯ ಲಾಭಗಳಿಸುತ್ತಿದ್ದಾರೆ. ಒಂದು ಬಟರ್ ಫ್ರೂಟ್ ಬೀಜ 6 ರಿಂದ 8ರೂ.ವರೆಗೆ ಮಾರಾಟವಾಗುತ್ತಿದೆ.

ಕಸಿ ಮಾಡಿರುವ ಗಿಡಗಳಿಗೆ ಬೇಡಿಕೆ: ಕಸಿ ಮಾಡಿರುವ ವಿವಿಧ ಬಟರ್ ಫ್ರೂಟ್ ತಳಿಗಳು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ರಾಜ್ಯಗಳಿಗೆ ಕೊಡಗು ಜಿಲ್ಲೆಯಿಂದ ಸರಬರಾಜಾಗುತ್ತಿದೆ. ಕಸಿ ಮಾಡಿರುವ ಬಟರ್ ಫ್ರೂಟ್‌ಗಿಡಗಳು 100 ರಿಂದ 150 ರೂ.ಗಳವರೆಗೆ ಮಾರಾಟವಾಗುತ್ತಿವೆ. ಹೊರ ರಾಜ್ಯಕ್ಕೆ ವಾರ್ಷಿಕವಾಗಿ ಲಕ್ಷಾಂತರ ಗಿಡಗಳು ಸರಬರಾಜಾಗುತ್ತಿದೆ.

ಯಾರಿಗೂ ಬೇಡದೆ ತೋಟದಲ್ಲಿ ಕೊಳೆತು ಬಿದ್ದಿದ್ದ ಬಟರ್ ಫ್ರೂಟ್ ಬೀಜಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ನರ್ಸರಿ ಕೃಷಿಯಲ್ಲಿ ತೊಡಗಿಕೊಂಡಿರುವವರು ಬೆಣ್ಣೆ ಹಣ್ಣು ಬೆಳೆದಿರುವವರಿಂದ ಬೀಜಗಳನ್ನು ಖರೀದಿಸುತ್ತಿದ್ದಾರೆ. ಅದಲ್ಲದೇ ಬಟರ್ ಫ್ರೂಟ್ ಕೊಯ್ಲಿನ ಸಂದರ್ಭದಲ್ಲಿ ವ್ಯಾಪಾರಿಗಳು 2ರಿಂದ 3 ರೂ.ಗಳಿಗೆ ಬಟರ್ ಫ್ರೂಟ್ ಬೀಜಗಳನ್ನು ಖರೀದಿಸಿ 6 ರಿಂದ 8 ರೂ.ವರೆಗೆ ನರ್ಸರಿ ಮಾಡುವವರಿಗೆ ಮಾರಾಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಬಟರ್ ಫ್ರೂಟ್‌ಗೆ ಬೇಡಿಕೆ ಹೆಚ್ಚಾದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಬಟರ್ ಫ್ರೂಟ್ ಗಿಡಗಳ ನರ್ಸರಿ ಕೂಡ ಹೆಚ್ಚಾಗಿದೆ. ಮನೆಯ ಹಿಂಭಾಗದ ಸಣ್ಣ ಭಾಗದಲ್ಲೂ ಬಟರ್ ಫ್ರೂಟ್ ಕಸಿ ಮಾಡಿರುವ ಗಿಡಗಳನ್ನು ಬೆಳೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಇದೀಗ ಬಟರ್ ಫ್ರೂಟ್ ಬೀಜಕ್ಕೆ ಹೆಚ್ಚು ಬೇಡಿಕೆ ಇದೆ. ಬಹುತೇಕ ಭಾಗಗಳಲ್ಲಿ ಬಟರ್ ಫ್ರೂಟ್ ಗಿಡಗಳ ನರ್ಸರಿಗಳು ಹೆಚ್ಚಳವಾಗುತ್ತಿದೆ. ಕಸಿ ಮಾಡುವ ಗಿಡಗಳಿಗೆ ಬಟರ್ ಫ್ರೂಟ್ ಬೀಜ ಬೇಕು. ನರ್ಸರಿ ಮಾಡುವವರು ಕಸಿ ಮಾಡಿರುವ ಗಿಡಗಳನ್ನು ಹೆಚ್ಚಾಗಿ ತಯಾರಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಬಟರ್ ಫ್ರೂಟ್ ವ್ಯಾಪಾರಿಗಳು ಇರುವುದರಿಂದ ಬೀಜ ಸಿಗುವುದು ಕಡಿಮೆಯಾಗಿದೆ. ಹಣ್ಣಾಗಿರುವ ಬಟರ್ ಫ್ರೂಟ್‌ಗಳಿಂದ ಬೀಜ ತೆಗೆದು ಇದೀಗ ಮಾರಾಟ ಮಾಡುತ್ತಿದ್ದೇವೆ.

-ರಂಶೀದ್ ಅಮ್ಮತ್ತಿ, ಬಟರ್ ಫ್ರೂಟ್ ವ್ಯಾಪಾರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಂ. ಇಸ್ಮಾಯಿಲ್ ಕಂಡಕರೆ

contributor

Similar News