ಈ ಶಂಕಾಸ್ಪದ ಪ್ರಕರಣಗಳಲ್ಲಿನ ಮತದಾರರು ನಿಜಕ್ಕೂ ನಕಲಿಯಾಗಿದ್ದರೆ ಚುನಾವಣಾ ಫಲಿತಾಂಶಗಳ ಮೇಲೆ ಬೀರುವ ಪರಿಣಾಮವೇನು?
ಒಂದೇ ವಿಧಾನಸಭಾ ಕ್ಷೇತ್ರದೊಳಗೆ ಒಂದೇ ಹೆಸರು ಮತ್ತು ಸಂಬಂಧಿಕರ ಹೆಸರು ಹೊಂದಿರುವ ಜನರು ಎರಡು ಬಾರಿ ಮತದಾರರ ಪಟ್ಟಿಗಳಲ್ಲಿ ದಾಖಲಾಗಿರುವ ಒಟ್ಟು 1,87,643 ಪ್ರಕರಣಗಳು ಬಿಹಾರದ 39 ವಿಧಾನಸಭಾ ಕ್ಷೇತ್ರಗಳಲ್ಲಿ ಕಂಡುಬಂದಿವೆ ಎಂದು ‘reporters collective.in’ ವರದಿ ಮಾಡಿದೆ.
ಈ ಪೈಕಿ 1.02 ಲಕ್ಷ ಪ್ರಕರಣಗಳಲ್ಲಿ ಎರಡು ಮತದಾರರ ಗುರುತಿನ ಚೀಟಿಗಳು ಒಂದೇ ಹೆಸರು ಹೊಂದಿದ್ದು, ಕೇವಲ ಐದು ವರ್ಷಗಳವರೆಗಿನ ವಯಸ್ಸಿನ ವ್ಯತ್ಯಾಸವನ್ನು ದಾಖಲಿಸಿವೆ.
25,862 ಪ್ರಕರಣಗಳಲ್ಲಿ ಜನರು ಎರಡು ಸಲ ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದು, ಅವರ ಹೆಸರುಗಳು, ಸಂಬಂಧಿಕರ ಹೆಸರುಗಳು ಮತ್ತು ವಯಸ್ಸಿನ ಪುರಾವೆಗಳು ತಾಳೆಯಾಗುತ್ತವೆ ಎಂದು ‘reporters collective.in’ನಲ್ಲಿ ಆಯುಷಿ ಕರ್, ವಿಷ್ಣು ನಾರಾಯಣ್, ಗಾಯತ್ರಿ ಸಪ್ರು ಮತ್ತು ಹರ್ಷಿತಾ ಮನ್ವಾನಿ ಅವರ ತನಿಖಾ ವರದಿ ಉಲ್ಲೇಖಿಸಿದೆ.
39 ಕ್ಷೇತ್ರಗಳಲ್ಲಿನ ಈ ಶಂಕಾಸ್ಪದ ಪ್ರಕರಣಗಳು ಒಟ್ಟು 3.76 ಲಕ್ಷ ಮತಗಳನ್ನು ಹೊಂದಿವೆ. ಇವುಗಳಲ್ಲಿ ಕೆಲವು ನಿಜಕ್ಕೂ ನಕಲಿಯಾಗಿದ್ದರೆ ಅವು ಕ್ಷೇತ್ರಗಳಲ್ಲಿನ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮವನ್ನು ಬೀರುವ ಸಾಮರ್ಥ್ಯವನ್ನು ಹೊಂದಿವೆ.
ಚುನಾವಣಾ ಆಯೋಗವು ಬಿಹಾರದಲ್ಲಿ ವಿವಾದಾತ್ಮಕ 30 ದಿನಗಳ ವಿಶೇಷ ತೀವ್ರ ಪರಿಷ್ಕರಣೆ ಅಂದರೆ ಎಸ್‌ಐಆರ್ ಬಳಿಕ ಕರಡು ಮತದಾರರ ಪಟ್ಟಿಗಳಲ್ಲಿ ಈ ಶಂಕಾಸ್ಪದ ಮತದಾರರನ್ನು ಸೇರಿಸಿದೆ.
ಕರಡು ಪಟ್ಟಿಗಳನ್ನು ಪ್ರಕಟಿಸುವ ಮುನ್ನ ಆಯೋಗವು ಏಳು ಲಕ್ಷಕ್ಕೂ ಅಧಿಕ ನಕಲು ನಮೂದುಗಳು ಅಥವಾ ಶೇ.0.89ರಷ್ಟು ಮತದಾರರನ್ನು ತಾನು ಪಟ್ಟಿಗಳಿಂದ ಕೈಬಿಟ್ಟಿರುವುದಾಗಿ ಹೇಳಿಕೊಂಡಿತ್ತು. ಈ ಶಂಕಾಸ್ಪದ ಮತದಾರರು ಈಗಲೂ ಆಯೋಗದ ಕರಡು ಪಟ್ಟಿಗಳಲ್ಲಿ ಉಳಿದುಕೊಂಡಿರುವುದನ್ನು ‘reporters collective.in’ತನಿಖಾ ವರದಿ ಕಂಡುಕೊಂಡಿದೆ.
ಈ ಪೈಕಿ 16,375 ಪ್ರಕರಣಗಳು ಅತ್ಯಂತ ಹೆಚ್ಚಿನ ಆತಂಕವನ್ನು ಸೃಷ್ಟಿಸಿದ್ದು, ಇವುಗಳನ್ನು ಪತ್ತೆ ಹಚ್ಚುವುದು ಆಯೋಗಕ್ಕೆ ಸುಲಭವಾಗಬೇಕಿತ್ತು.
ಈ ಪ್ರಕರಣಗಳಲ್ಲಿ ನಕಲುಗಳು ಪರಸ್ಪರ ಯಥಾಪ್ರತಿಗಳಾಗಿವೆ. ಹೆಸರುಗಳು, ಸಂಬಂಧಿಕರ ಹೆಸರುಗಳು ಮತ್ತು ವಯಸ್ಸು ಸಂಪೂರ್ಣವಾಗಿ ತಾಳೆಯಾಗುತ್ತಿವೆ ಮತ್ತು ವಿಳಾಸಗಳು ಒಂದೇ ಆಗಿವೆ ಅಥವಾ ಕೆಲವೇ ಕಿ.ಮೀ. ಅಂತರದಲ್ಲಿವೆ.
‘ರಿಪೋರ್ಟರ್ಸ್ ಕಲೆಕ್ಟಿವ್’ ಆ.29ರಂದು ಪ್ರಕಟಿಸಿದ ವರದಿಯಲ್ಲಿ ಕೇವಲ 15 ವಿಧಾನಸಭಾ ಕ್ಷೇತ್ರಗಳಲ್ಲಿ ಇಂತಹ ಶಂಕಾಸ್ಪದ ಪ್ರಕರಣಗಳನ್ನು ಬಹಿರಂಗಪಡಿಸಿತ್ತು.
ಆ.31ರಂದು ಆಯೋಗವು ಈ ವರದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿತ್ತು. ಅದು ‘ರಿಪೋರ್ಟರ್ಸ್ ಕಲೆಕ್ಟಿವ್’ ವರದಿಯಲ್ಲಿನ ವಾಸ್ತವಾಂಶಗಳು, ಅಂಕಿಅಂಶಗಳು ಮತ್ತು ಪ್ರತಿಪಾದನೆಗಳನ್ನು ನಿರಾಕರಿಸಿರಲಿಲ್ಲ ಮತ್ತು ‘ರಿಪೋರ್ಟರ್ಸ್ ಕಲೆಕ್ಟಿವ್’ ವರದಿಗಳು ಹೆಕ್ಕಿ ತೆಗೆದಿರುವ ದತ್ತಾಂಶಗಳನ್ನು ಆಧರಿಸಿದೆ ಎಂದು ಹೇಳಿತ್ತು.
ವಾಸ್ತವದಲ್ಲಿ ‘ರಿಪೋರ್ಟರ್ಸ್ ಕಲೆಕ್ಟಿವ್’ ಮತ್ತು ಅದರ ದತ್ತಾಂಶ ವಿಶ್ಲೇಷಕರು ಆಯೋಗವು ಮತದಾರರ ಪಟ್ಟಿಗಳಲ್ಲಿ ನಕಲು ನಮೂದುಗಳನ್ನು ತೆಗೆಯಲು ತನ್ನ ERONET 2.0 ಸಾಫ್ಟ್‌ವೇರ್‌ನಲ್ಲಿ ಅನುಸರಿಸಬೇಕಿದ್ದ ಕಾರ್ಯವಿಧಾನವನ್ನು ಅನುಕರಣೆ ಮಾಡಿದ್ದರು.
ನಮ್ಮ ಹಿಂದಿನ ವರದಿಗೆ ನಾವು ಬದ್ಧರಾಗಿದ್ದೇವೆ ಮತ್ತು ಈ ತನಿಖಾ ವರದಿಯಲ್ಲಿ ಇನ್ನೂ 24 ವಿಧಾನಸಭಾ ಕ್ಷೇತ್ರಗಳನ್ನು ವಿಶ್ಲೇಷಿಸಿದ್ದೇವೆ. ಎಲ್ಲ 39 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಗಳನ್ನು ಅಧ್ಯಯನ ಮಾಡುವಾಗ ನಾವು ಆಳವಾದ ವಿಚಾರಣೆಯನ್ನು ನಡೆಸಿದ್ದೇವೆ. ಶಂಕಾಸ್ಪದ 1.88 ಲಕ್ಷ ಮತದಾರರ ಕುರಿತು ಹೆಚ್ಚು ವಿವರವಾದ ಚಿತ್ರಣವನ್ನು ನೀಡಲು ನಾವು ಹೆಚ್ಚುವರಿ ಮಾನದಂಡಗಳಿಗಾಗಿ ದತ್ತಾಂಶಗಳನ್ನು ಇನ್ನಷ್ಟು ವರ್ಗೀಕರಿಸಿದ್ದೇವೆ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ.
‘ರಿಪೋರ್ಟರ್ಸ್ ಕಲೆಕ್ಟಿವ್’ ಸ್ವತಂತ್ರ ದತ್ತಾಂಶ ವಿಶ್ಲೇಷಕರ ತಂಡದ ಸಹಯೋಗದೊಂದಿಗೆ ಈ ಕರಡು ಮತದಾರರ ಪಟ್ಟಿಗಳನ್ನು ಪರಿಶೀಲಿಸಿದೆ.
ಆಯೋಗವು ಬಿಹಾರದ ಕರಡು ಮತದಾರರ ಪಟ್ಟಿಗಳನ್ನು ಯಂತ್ರ ಓದಲು ಸಾಧ್ಯವಾಗದಂತೆ ಮಾಡುವ ಮೂಲಕ ಅವುಗಳನ್ನು ಸುಲಭವಾಗಿ ವಿಶ್ಲೇಷಿಸುವುದನ್ನು ತಡೆದಿತ್ತು.
‘ರಿಪೋರ್ಟರ್ಸ್ ಕಲೆಕ್ಟಿವ್’ನ ದತ್ತಾಂಶ ವಿಶ್ಲೇಷಕರ ತಂಡವು ಒಂದು ವಿಧಾನಸಭಾ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಶಂಕಾಸ್ಪದ ನಕಲು ಪ್ರಕರಣಗಳನ್ನು ಪತ್ತೆ ಹಚ್ಚಲು ಈ ತಡೆಗೋಡೆಯನ್ನು ಭೇದಿಸಿತ್ತು.
ಇವು ಗುರುತುಗಳಾಗಿರಬಹುದು ಮತ್ತು ಆಯೋಗದ ಸಿಬ್ಬಂದಿ ಎಣಿಕೆ ಅವಧಿಯಲ್ಲಿ ತುಲನಾತ್ಮಕವಾಗಿ ಸುಲಭವಾಗಿ ಪರಿಶೀಲಿಸಿರಬಹುದು ಎಂಬ ಕಾರಣದಲ್ಲಿ ಈ ತಂಡ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಮಾನಾಸ್ಪದ ನಮೂದುಗಳತ್ತ ನಿರ್ದಿಷ್ಟವಾಗಿ ಗಮನ ಹರಿಸಿತ್ತು.
ಈ ಶಂಕಾಸ್ಪದ ಪ್ರಕರಣಗಳು ಸಂಪೂರ್ಣವಾಗಿ ಪರಂಪರಾಗತ ನೋಂದಣಿಗಳೇ ಅಥವಾ ಅವುಗಳಲ್ಲಿ ಕೆಲವು ಎರಡು ಬಾರಿ ದಾಖಲಾಗಿರುವ ಹೊಸ ಮತದಾರರೇ ಎನ್ನುವುದನ್ನು ನಾವು ನಿರ್ಧರಿಸಲಾಗುವುದಿಲ್ಲ. ಇದು ಹಿಂದಿನ ಎಲ್ಲ ಮತದಾರರ ದಾಖಲೆಗಳನ್ನು ಹೊಂದಿರುವ ಚುನಾವಣಾ ಆಯೋಗವು ಮಾತ್ರ ಉತ್ತರಿಸಬಹುದಾದ ಪ್ರಶ್ನೆಯಾಗಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಕಾನೂನುಬಾಹಿರವಾಗಿರುವ ಸ್ಪಷ್ಟ ನಕಲಿ ನಮೂದುಗಳು ಅಥವಾ ಒಂದು ಕ್ಷೇತ್ರದಲ್ಲಿ ಎರಡು ಸಲ ಮತದಾರರ ನೋಂದಣಿಯನ್ನು ಹುಡುಕಲು ಈ ದತ್ತಾಂಶಗಳನ್ನು ಇನ್ನಷ್ಟು ಪರಿಷ್ಕರಿಸಿದ್ದೆವು ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ.
ಅಂಜಲಿ ಕುಮಾರ್ ಅವರಂತಹ ಪ್ರಕರಣಗಳನ್ನು ನಾವು ನಮ್ಮ ಹಿಂದಿನ ವರದಿಯಲ್ಲೂ ಉಲ್ಲೇಖಿಸಿದ್ದೆವು. ತ್ರಿವೇಣಿಗಂಜ್ ವಿಧಾನಸಭಾ ಕ್ಷೇತ್ರದ ನಿವಾಸಿ ಅಂಜಲಿ ಎರಡು ಮತದಾರರ ಗುರುತಿನ ಚೀಟಿ(ಐಡಿ)ಗಳನ್ನು ಹೊಂದಿದ್ದರು. ಅವೆರಡೂ ಚೀಟಿಗಳಲ್ಲಿ ಅವರ ಮತ್ತು ಅವರ ಗಂಡನ ಹೆಸರು ಮತ್ತು ವಿಳಾಸ ಒಂದೇ ಆಗಿದ್ದವು. ನಾವು ಅವರ ಎರಡು ಐಡಿಗಳನ್ನು ಎತ್ತಿ ತೋರಿಸಿದ ಬಳಿಕ ಆಯೋಗವು ತಾನು ಅವರ ನಕಲು ಐಡಿಗಳನ್ನು ಪರಿಶೀಲಿಸುತ್ತಿದ್ದೇನೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿತ್ತು.
ವಿಪರ್ಯಾಸವೆಂದರೆ ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖೆಯನ್ನು ‘ಊಹಾತ್ಮಕ’ ಎಂದು ತಳ್ಳಿ ಹಾಕಿದ್ದ ಆಯೋಗವು ತನ್ನ ‘ಎಕ್ಸ್’ ಪೋಸ್ಟ್ ನಲ್ಲಿ ನಕಲು ಐಡಿಗಳ ಅಸ್ತಿತ್ವವನ್ನು ಒಪ್ಪಿಕೊಂಡಿತ್ತು ಎಂದು ವರದಿ ಹೇಳಿದೆ.
ವಿಪರ್ಯಾಸವೆಂದರೆ ರಿಪೋರ್ಟರ್ಸ್ ಕಲೆಕ್ಟಿವ್‌ನ ತನಿಖೆಯನ್ನು ‘ಊಹಾತ್ಮಕ’ ಎಂದು ತಳ್ಳಿ ಹಾಕಿದ್ದ ಆಯೋಗವು ತನ್ನ ‘ಎಕ್ಸ್’ ಪೋಸ್ಟ್‌ನಲ್ಲಿ ನಕಲು ಐಡಿಗಳ ಅಸ್ತಿತ್ವವನ್ನು ಒಪ್ಪಿಕೊಂಡಿತ್ತು ಎಂದು ವರದಿ ಹೇಳಿದೆ.
39 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಗಳ ಕುರಿತ ವ್ಯಾಪಕ ತನಿಖೆಯಲ್ಲಿ ಒಂದೇ ರೀತಿಯ ಮತದಾರರ ಗುರುತಿನ ಚೀಟಿ ವಿವರಗಳನ್ನು ಹೊಂದಿರುವ ವ್ಯಕ್ತಿಗಳು ಒಂದೇ ವಿಳಾಸದಲ್ಲಿ ಅಥವಾ ಸಮೀಪದ ಮತಗಟ್ಟೆಗಳಲ್ಲಿ ಎರಡು ಸಲ ನೋಂದಾಯಿಸಿಕೊಂಡಿರುವ 16,375 ಪ್ರಕರಣಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪತ್ತೆ ಹಚ್ಚಿದೆ.
25,862 ಡಬಲ್ ವೋಟರ್ ಐಡಿ ಪ್ರಕರಣಗಳಲ್ಲಿ ವಿಳಾಸಗಳ ಹೊರತು ಇತರ ಎಲ್ಲ ವಿವರಗಳು ತಾಳೆಯಾಗಿವೆ. ಇವು ಚುನಾವಣಾ ಆಯೋಗವು ಸಾಫ್ಟ್ ವೇರ್ ಪ್ರೊಗ್ರಾಂ ಬಳಸಿಕೊಂಡು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದ ನಕಲಿ ಮತದಾರರ ಪ್ರಕರಣಗಳಾಗಿವೆ.
1.02 ಲಕ್ಷ ಪ್ರಕರಣಗಳಲ್ಲಿ ಹೆಸರು, ಪೋಷಕರ ಹೆಸರು ಒಂದೇ ಆಗಿರುವ ವ್ಯಕ್ತಿಗಳನ್ನು ಆಯೋಗವು ಎರಡು ಬಾರಿ ನೋಂದಾಯಿಸಿಕೊಂಡಿದ್ದು, ವಯಸ್ಸಿನಲ್ಲಿ ಕೇವಲ ಐದು ವರ್ಷದವರೆಗಿನ ವ್ಯತ್ಯಾಸವಿದೆ. ಈ ಪ್ರಕರಣಗಳಲ್ಲಿ ಮತದಾರರು ಎರಡೂ ಐಡಿಗಳನ್ನು ಬಳಸಿಕೊಂಡು ಎರಡು ಸಲ ಮತಗಳನ್ನು ಚಲಾಯಿಸಬಹುದು, ಏಕೆಂದರೆ ಮತಗಟ್ಟೆ ಅಧಿಕಾರಿಗೆ ವಯಸ್ಸಿನ ಆಧಾರದಲ್ಲಿ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
40,781 ಪ್ರಕರಣಗಳಲ್ಲಿ ಎರಡು ಮತದಾರರ ಐಡಿಗಳಲ್ಲಿ 6ರಿಂದ 10 ವರ್ಷಗಳ ವ್ಯತ್ಯಾಸ ಮತ್ತು 45,774 ಪ್ರಕರಣಗಳಲ್ಲಿ ನಕಲಿ ನಮೂದುಗಳ ನಡುವೆ 10 ವರ್ಷಗಳಿಗೂ ಹೆಚ್ಚಿನ ವ್ಯತ್ಯಾಸಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಪತ್ತೆ ಹಚ್ಚಿದೆ.
ಈ ನಕಲುಗಳನ್ನು ತಳಮಟ್ಟದಲ್ಲಿ ಊರ್ಜಿತಗೊಳಿಸುವ ಸಾಮರ್ಥ್ಯ ಚುನಾವಣಾ ಆಯೋಗಕ್ಕೆ ಮಾತ್ರ ಇದೆ.
ಎಸ್‌ಐಆರ್ ಸಮಯದಲ್ಲಿ ತಾನು ಈಗಾಗಲೇ ಇದನ್ನು ಮಾಡಿರುವುದಾಗಿ ಅದು ಹೇಳಿಕೊಂಡಿದೆ.
ತೀಕ್ಷ್ಣವಾದ ವಿಶ್ಲೇಷಣೆಯು ಆಯೋಗವು ತಪ್ಪಿಸಿಕೊಂಡಿರುವ ಇಂತಹ ಸಾವಿರಾರು ಪ್ರಕರಣಗಳನ್ನು ತೋರಿಸಿದೆ. ತಳಮಟ್ಟದಲ್ಲಿ ಡೇಟಾ ವಿಶ್ಲೇಷಣೆಯನ್ನು ಪರಿಶೀಲಿಸಲು ರಿಪೋರ್ಟರ್ಸ್ ಕಲೆಕ್ಟಿವ್ ತಂಡದ ಸದಸ್ಯರೋರ್ವರು ಜಾಲೆ ವಿಧಾನಸಭಾ ಕ್ಷೇತ್ರಕ್ಕೆ ತೆರಳಿದ್ದರು. ಅಲ್ಲಿ ಅವರು ಕಾಂಗ್ರೆಸ್‌ನ ಬೂತ್ ಮಟ್ಟದ ಏಜೆಂಟ್ ಖಯ್ಯಾಂ ಅವರನ್ನು ಭೇಟಿಯಾಗಿದ್ದರು. ಅವರು ತಳಮಟ್ಟದಲ್ಲಿ ವಂಚನೆಯ ಸ್ಪಷ್ಟ ಪ್ರಕರಣಗಳೆಂದು ಹೇಳಿಕೊಂಡಿದ್ದನ್ನು ದಾಖಲಿಸುತ್ತಿದ್ದರು.
‘‘ನನ್ನ ಪಕ್ಷದ ವಿಧಾನಸಭಾ ಅಭ್ಯರ್ಥಿಯ ಕೋರಿಕೆ ಮೇರೆಗೆ ನನ್ನ ಸ್ವಂತ ಮತ್ತು ಹತ್ತಿರದ ಬೂತ್‌ಗಳಲ್ಲಿ ಅನೇಕ ಹೆಸರುಗಳು ವಿಭಿನ್ನ ಎಪಿಕ್ ನಂಬರ್‌ಗಳೊಂದಿಗೆ ದಾಖಲಾಗಿರುವುದನ್ನು ನಾನು ಪತ್ತೆ ಹಚ್ಚಿದ್ದೇನೆ. ಆದರೂ ನಾನು ಜನರನ್ನು ಪ್ರಶ್ನಿಸಿದಾಗ ಅವರು ತೃಪ್ತಿಕರ ಉತ್ತರಗಳನ್ನು ನೀಡುತ್ತಿಲ್ಲ’’ ಎಂದು ಅವರು ತಿಳಿಸಿದರು.
ನಮ್ಮ ಹಿಂದಿನ ವರದಿಗಳನ್ನು ಪ್ರಕಟಿಸುವ ಮುನ್ನ ಪುನರಾವರ್ತಿತ ವಿವರವಾದ ಪ್ರಶ್ನಾವಳಿಗಳಿಗೆ ಚುನಾವಣಾ ಆಯೋಗದ ಕೇಂದ್ರ ಕಚೇರಿ ಮತ್ತು ಅದರ ಬಿಹಾರದ ಕಚೇರಿಯು ಪ್ರತಿಕ್ರಿಯಿಸಿಲ್ಲವಾದರೂ ಬಿಹಾರ ಮುಖ್ಯ ಚುನಾವಣಾಧಿಕಾರಿ(ಸಿಇಒ)ಗಳು ಎಕ್ಸ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿರುವ 67,826 ಶಂಕಾಸ್ಪದ ನಕಲುಗಳ ಸಂಖ್ಯೆಯು ಹೆಕ್ಕಿ ತೆಗೆಯಲಾದ ದತ್ತಾಂಶಗಳು ಮತ್ತು ಹೆಸರು, ಸಂಬಂಧಿ ಮತ್ತು ವಯಸ್ಸಿನ ಸಂಯೋಜನೆಗಳ ವ್ಯಕ್ತಿನಿಷ್ಠ ಹೊಂದಾಣಿಕೆಯನ್ನು ಆಧರಿಸಿದೆ. ದಾಖಲೆಗಳ ಮತ್ತು ಕ್ಷೇತ್ರ ಪರಿಶೀಲನೆ ಇಲ್ಲದೆ ಈ ನಕಲುಗಳನ್ನು ನಿರ್ಣಾಯಕವಾಗಿ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ರಿಪೋರ್ಟರ್ಸ್ ಕಲೆಕ್ಟಿವ್ ಉಲ್ಲೇಖಿಸಿದೆ.
ಬಿಹಾರದಲ್ಲಿ, ವಿಶೇಷವಾಗಿ ಗ್ರಾಮೀಣ ಕ್ಷೇತ್ರಗಳಲ್ಲಿ ಹಲವಾರು ವ್ಯಕ್ತಿಗಳು ಒಂದೇ ರೀತಿಯ ಹೆಸರುಗಳು, ಪೋಷಕರ ಹೆಸರುಗಳು ಮತ್ತು ಒಂದೇ ವಯಸ್ಸನ್ನು ಸಹ ಹಂಚಿಕೊಳ್ಳುವುದು ಸಾಮಾನ್ಯವಾಗಿದೆ ಎಂದು ಬಿಹಾರ ಸಿಇಒ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತನಿಖಾ ವರದಿಯ ಪ್ರಕಟಣೆಗೆ ಮುನ್ನ ’ರಿಪೋರ್ಟರ್ಸ್ ಕಲೆಕ್ಟಿವ್’ ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದ್ದು, ಅದಿನ್ನೂ ಉತ್ತರಿಸಬೇಕಿದೆ.
ಎಸ್‌ಐಆರ್ ಸಮಯದಲ್ಲಿ ನಕಲುಗಳನ್ನು ತೆಗೆದುಹಾಕುವ ಪ್ರಕ್ರಿಯೆ ತೃಪ್ತಿಕರವಾಗಿ ನಡೆದಿದೆ ಎಂದು ಬಿಹಾರ ಸಿಇಒ ನಂಬಿದ್ದಾರೆಯೇ ಎನ್ನುವುದನ್ನು ನಾವು ಸ್ಪಷ್ಟವಾಗಿ ಪ್ರಶ್ನಿಸಿದ್ದೇವೆ. ಮೊದಲ ಹಂತದ ಎಸ್‌ಐಆರ್ ಪೂರ್ಣಗೊಂಡ ಬಳಿಕ ಕರಡು ಮತದಾರರ ಪಟ್ಟಿಗಳನ್ನು ಪ್ರಕಟಿಸುವ ಮುನ್ನ ಜು.27ರಂದು ಆಯೋಗವು ಮತದಾರರ ಪಟ್ಟಿಯಿಂದ ಏಳು ಲಕ್ಷ ನಕಲುಗಳನ್ನು ತೆಗೆದುಹಾಕಿರುವುದಾಗಿ ಹೇಳಿಕೆಯನ್ನು ನೀಡಿತ್ತು. ನಕಲುಗಳನ್ನು ತೆಗೆದುಹಾಕಲು ಅನುಸರಿಸಿದ್ದ ಕಾರ್ಯವಿಧಾನದ ವಿವರಗಳನ್ನು ನೀಡುವಂತೆ ನಾವು ಹಿಂದೆ ಆಯೋಗವನ್ನು ಕೇಳಿದ್ದೆವು. ಅದಕ್ಕೆ ಅದು ಉತ್ತರಿಸಿರಲಿಲ್ಲ. ಅದಕ್ಕೂ ಮುನ್ನ ನಾವು ಎಸ್‌ಐಆರ್‌ನ್ನು ನಿರ್ಧರಿಸಲು ಆಂತರಿಕವಾಗಿ ಅಥವಾ ಕೇಂದ್ರ ಸರಕಾರದೊಂದಿಗೆ ನಡೆಸಿದ ಚರ್ಚೆಗಳ ಎಲ್ಲ ದಾಖಲೆಗಳು, ಕಡತಗಳು ಮತ್ತು ಪತ್ರವ್ಯವಹಾರವನ್ನು ಬಹಿರಂಗಗೊಳಿಸುವಂತೆಯೂ ಆರ್‌ಟಿಐ ಅಡಿ ಆಯೋಗವನ್ನು ಕೋರಿದ್ದೆವು. ಇದಕ್ಕೆ ಉತ್ತರವಾಗಿ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಅಸ್ತಿತ್ವದಲ್ಲಿರದ ಪುಟದ ಡೆಡ್‌ಲಿಂಕ್‌ನ್ನು ನಮಗೆ ಕಳುಹಿಸಿತ್ತು ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ಹೇಳಿದೆ.
ನಮ್ಮ ಈ ಹಿಂದಿನ ತನಿಖೆಗಳು ಬಿಹಾರ ಎಸ್‌ಐಆರ್‌ನಲ್ಲಿ ಹಲವಾರು ನ್ಯೂನತೆಗಳನ್ನು ಬಹಿರಂಗಗೊಳಿಸಿದ್ದವು. ನೆರೆಯ ಉತ್ತರ ಪ್ರದೇಶದ ಮತದಾರರ ಪಟ್ಟಿ ಮತ್ತು ಬಿಹಾರದ ಗಡಿ ಕ್ಷೇತ್ರವಾದ ವಾಲ್ಮೀಕಿ ನಗರದ ಕರಡು ಮತದಾರರ ಪಟ್ಟಿಗಳಲ್ಲಿ ಏಕಕಾಲದಲ್ಲಿ 5,000ಕ್ಕೂ ಅಧಿಕ ಮತದಾರರನ್ನು ಸೇರಿಸಿದ್ದನ್ನು ನಾವು ಬೆಟ್ಟು ಮಾಡಿದ್ದೆವು. ಆಯೋಗವು ಕೇವಲ ಮೂರು ಕ್ಷೇತ್ರಗಳಲ್ಲಿ 80,000 ಮತದಾರರನ್ನು ನಕಲಿ ಮತ್ತು ತಪ್ಪು ವಿಳಾಸಗಳಲ್ಲಿ ಒಟ್ಟುಗೂಡಿಸಿ ನೋಂದಾಯಿಸಿಕೊಂಡಿದೆ ಎನ್ನುವುದನ್ನೂ ನಾವು ಬಯಲಿಗೆಳೆದಿದ್ದವು. ಆಯೋಗವು ಆ.31ರ ತನ್ನ ಹೇಳಿಕೆಯಲ್ಲಿ ಈ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ ಎಂದು ‘ರಿಪೋರ್ಟರ್ಸ್ ಕಲೆಕ್ಟಿವ್’ ವರದಿ ಹೇಳಿದೆ.
ನಕಲಿ ಮತದಾರರ ಬಗ್ಗೆ ರಿಪೋರ್ಟರ್ಸ್ ಕಲೆಕ್ಟಿವ್ ನ ವರದಿಗಳ ಕುರಿತು ಆಯೋಗವು ಅಂತಿಮ ಪಟ್ಟಿಯು ಪ್ರಕಟಗೊಳ್ಳುವವರೆಗೆ ಕರಡು ಪಟ್ಟಿಯು ನಿರಂತರ ಪರಿಶೀಲನೆ, ಆಕ್ಷೇಪಗಳು ಮತ್ತು ಶಾಸನಬದ್ಧ ತಿದ್ದುಪಡಿಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.
ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮೊದಲೇ ಅದು ನಕಲುಗಳನ್ನು ತೆಗೆದುಹಾಕುವ ತನ್ನದೇ ಆದ ಶಾಸನಬದ್ಧ ಕಾರ್ಯವಿಧಾನಗಳನ್ನು ಕೈಬಿಟ್ಟಿದೆ.
ಈ ನಡುವೆ ಎಸ್‌ಐಆರ್ ಸಮಯದಲ್ಲಿ ಏಳು ಲಕ್ಷ ನಕಲಿ ಮತದಾರರನ್ನು ಅಳಿಸಲು ತಾನು ಅನುಸರಿಸಿದ್ದ ಕಾರ್ಯವಿಧಾನದ ವಿವರಗಳನ್ನು ಅದು ಒದಗಿಸಿಲ್ಲ.