×
Ad

‘ಡಿಜೆ ಬ್ಯಾನ್’ ತಮಟೆ, ಡೊಳ್ಳು ಸಹಿತ ಜಾನಪದ ಕಲಾವಿದರಿಗೆ ಹೆಚ್ಚಿದ ಬೇಡಿಕೆ

Update: 2025-09-01 07:26 IST

ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.31: ಪ್ರತಿ ಬಾರಿ ಗಣೇಶೋತ್ಸವ ಆಚರಣೆ ಸಂದರ್ಭದಲ್ಲಿ ಡಿಸ್ಕ್ ಜಾಕಿ (ಡಿಜೆ) ಹಾಗೂ ಸೌಂಡ್ ಸಿಸ್ಟಂ ಕುರಿತ ಚರ್ಚೆ ಮುನ್ನೆಲೆಗೆ ಬರುತ್ತದೆ. ಆದರೆ, ರಾಜ್ಯ ಸರಕಾರ ಈ ಬಾರಿ ರಾಜ್ಯದೆಲ್ಲೆಡೆ ಡಿಜೆ ನಿಷೇಧಿಸಿದ ಪರಿಣಾಮ ತಮಟೆ, ಡೊಳ್ಳು, ನಗಾರಿ ಸಹಿತ ಜಾನಪದ ಕಲಾವಿದರ ಆದಾಯ ದ್ವಿಗುಣವಾಗಿ ಅವರ ಜೇಬು ತುಂಬಿಸಿದಂತೆ ಆಗಿದೆ.

ಗೌರಿ-ಗಣೇಶ ಹಬ್ಬ, ಮೀಲಾದುನ್ನಬಿ ಮೆರವಣಿಗೆ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಡಿಜೆ (ಡಿಸ್ಕ್ ಜಾಕಿ) ಹಾಗೂ ಸೌಂಡ್ ಸಿಸ್ಟಂ ಬಳಕೆ ನಿರ್ಬಂಧಿಸಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದರಿಂದ ಗಣೇಶೋತ್ಸವ ಸಮಿತಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಜೊತೆಯಲ್ಲಿ ಜಾನಪದ, ತಮಟೆ, ಡೊಳ್ಳು ಕಲಾವಿದರ ತಂಡಗಳಿಗೆ ಮೊರೆ ಹೋದರು. ಅದರಂತೆ ಗಣೇಶ ಮೂರ್ತಿಗಳ ವಿಸರ್ಜನೆ ಸಂಭ್ರಮ ಮತ್ತಷ್ಟು ಮೆರುಗು ಕಂಡಿದ್ದು ಮಾತ್ರವಲ್ಲದೆ ಕಲಾವಿದರ ಆದಾಯವು ಹೆಚ್ಚಾಯಿತು.

ಪ್ರಮುಖವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೆಳಗಾವಿ, ಕಲಬುರಗಿ ಸೇರಿದಂತೆ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಈ ಬಾರಿ ಜಾನಪದ, ತಮಟೆ, ಡೊಳ್ಳು ಕಲಾವಿದರಿಗೆ ಬಿಡುವು ಇಲ್ಲದಷ್ಟು ಕಾರ್ಯಕ್ರಮ ನಿಗದಿ ಆಗಿವೆ. ಅದರಲ್ಲೂ ಪಂಚವಾದ್ಯ, ಡೊಳ್ಳು, ಝಾಂಜ್ ಮೇಳ, ತಮಟೆ ಬಾರಿಸುವವರ ಕೆಲಸ ಹೆಚ್ಚಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರಿನ ಪ್ರಮುಖ ತಮಟೆ ತಂಡಗಳಲ್ಲಿ ಒಂದಾದ ಚಿಕ್ಕಪೇಟೆಯ ತಮಟೆ ಮಾರಣ್ಣ, ‘ಬೆಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಡಿಜೆ(ಡಿಸ್ಕ್ ಜಾಕಿ) ಹಾಗೂ ಸೌಂಡ್ ಸಿಸ್ಟಂ ನಿಷೇಧಿಸಿದ್ದ ಹಿನ್ನೆಲೆ ನಮ್ಮ ತಮಟೆ ತಂಡಗಳಿಗೆ ಬೇಡಿಕೆ ಹೆಚ್ಚಾಯಿತು. ಗೌರಿ ಹಬ್ಬದ ದಿನದಂದೇ ಗಣೇಶ ಸಮಿತಿಗಳ ಪ್ರಮುಖರು ಮೊಬೈಲ್ ಕರೆ ಮಾಡಿ ಸಮಯವನ್ನು ನಿಗದಿ ಪಡಿಸಿಕೊಂಡು ಮುಂಗಡವಾಗಿ ಗೌರವಧನ ಪಾವತಿಸಿದರು. ಈ ರೀತಿ ಮೊದಲ ಬಾರಿ ಆಗಿದೆ’ ಎಂದು ಹೇಳಿದರು.

ಕಳೆದ ವರ್ಷ ಆರೇಳು ಮಂದಿ ತಮಟೆ ಕಲಾವಿದರಿಗೆ 4 ರಿಂದ 5 ಸಾವಿರ ರೂಪಾಯಿ ಪಾವತಿ ಮಾಡಲಾಯಿತು. ಆದರೆ, ಈ ಬಾರಿ 8 ರಿಂದ 10 ಸಾವಿರ ರೂಪಾಯಿ ಗೌರವ ಧನ ಸಿಕ್ಕಿದೆ. ಇದಕ್ಕೆ ಎಲ್ಲವೂ ಡಿಜೆ ಬ್ಯಾನ್ ಕಾರಣವೇ ಎನ್ನಬಹುದು ಎಂದು ಅವರು ನುಡಿದರು.

ಪಂಚವಾದ್ಯ ಕಲಾವಿದ ರಮೇಶ್ ಜಿಗಣಿ ಮಾತನಾಡಿ, ಈ ಬಾರಿ ಎಲ್ಲಿಯೂ ಡಿಜೆ ಶಬ್ದ ಕಂಡುಬರಲಿಲ್ಲ. ಇದರಿಂದ ಗಣೇಶ ಹಬ್ಬದ ಸಂಭ್ರಮ ಹಾಗೂ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ನಮ್ಮ ಜಾನಪದ ಕಲಾವಿದರ ತಂಡಗಳದ್ದೇ ಕಾರುಬಾರು. ಡಿಜೆ ಇದ್ದ ಕಾರಣದಿಂದ ನಮ್ಮನ್ನು ಯಾರು ಗುರುತಿಸುವವರೇ ಇರಲಿಲ್ಲ. ಒಂದಷ್ಟು ಪರಿಚಯಸ್ಥರು ಗಣೇಶೋತ್ಸವ ಕಾರ್ಯಕ್ರಮಗಳಿಗೆ ಕರೆಯುತ್ತಿದ್ದರು. ಆದರೆ, ಈ ಬಾರಿ ಡಿಜೆ ಬ್ಯಾನ್ ಆಗಿರುವ ಹಿನ್ನೆಲೆ ದೂರದ ಊರುಗಳಿಂದಲೂ ನಮಗೆ ಆಹ್ವಾನ ಬಂದಿತು ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರಿನ ಜಾನಪದ ಹಿರಿಯ ಕಲಾವಿದ ಭೀಮಣ್ಣ ಈ ಕುರಿತು ಪ್ರತಿಕ್ರಿಯಿಸಿ, ‘ರಾಜ್ಯ ಸರಕಾರ ಈ ಸಲ ಡಿಜೆ ಸದ್ದು ನಿಲ್ಲಿಸಿದ ಪರಿಣಾಮ ವಾಯು ಮಾಲಿನ್ಯಗೆ ತಡೆ ಮಾತ್ರವಲ್ಲದೆ, ನಮಗೂ ನೆಮ್ಮದಿ ತಂದಿದೆ. ಅನೇಕ ಗಣೇಶ ಸಮಿತಿಯ ಮುಖಂಡರು ನಮ್ಮನ್ನು ಸಂಪರ್ಕಿಸಿದಂತೆ ಆಗಿದೆ ಎಂದರು. ಅದರಲ್ಲೂ, ಜಾನಪದ ಸಿರಿಗೆಜ್ಜೆ ಕಲಾತಂಡದಿಂದ ನಂದಿ, ನವಿಲು, ಜಿರಾಫೆ, ಕವಾಡಿ ನೃತ್ಯ, ನಾದಸ್ವರ, ಕರಡಿ ಮಜಲು, ನಾಸಿಕ್ ಡೋಲು, ನಂದಿಕೋಲು, ಕೀಲು ಕುದುರೆ, ಬೊಂಬೆ ಕುಣಿತ, ವೀರಭದ್ರನ ಕುಣಿತ, ಡೊಳ್ಳುಕುಣಿತ, ಪೂಜಾ ಕುಣಿತ, ಸೋಮನ ಕುಣಿತದಂತಹ ಜನಪದ ಕಲಾತಂಡಗಳಿಗೆ ಕೆಲಸ ಸಿಕ್ಕಿದೆ. ಇವರೊಂದಿಗೆ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಗಣೇಶಮೂರ್ತಿಯ ಮೆರವಣಿಗೆ ನಡೆಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಟ್ಟಾರೆ, ಇತ್ತೀಚಿನ ವರ್ಷಗಳಲ್ಲಿ ಗಣೇಶ ವಿಸರ್ಜನೆ ಸಂದರ್ಭ ಯುವಜನ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಲು ಮತ್ತಷ್ಟು ಹುರುಪು ತುಂಬುವ ಸಾಧನವಾಗಿ ಡಿಜೆ ರೂಪುಗೊಂಡಿದೆ. ಹುರುಪು ತುಂಬುವುದು ಆ ಕ್ಷಣದ ಉನ್ಮಾದಕ್ಕೆ ಪ್ರೇರಣೆ ಆಗಬಹುದು. ಆದರೆ, ನಮ್ಮ ನಡುವೆಯೇ ಇರುವ ಅನೇಕ ಕಲಾವಿದರು ಡಿಜೆ ಬ್ಯಾನ್ ಅನ್ನು ಸ್ವಾಗತಿಸಿದ್ದಾರೆ. ಮತ್ತೊಂದೆಡೆ, ಈ ಡಿಜೆ ಶಬ್ದದಿಂದಾಗಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಲೆಕ್ಕವಿಲ್ಲ ಎಂಬುದೂ ಅಷ್ಟೇ ಸತ್ಯ.

ಡಿಜೆಯಿಂದ ಆರೋಗ್ಯಕ್ಕೆ ಹಾನಿ :

ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಲ್ಲಿ ಒಬ್ಬ ವ್ಯಕ್ತಿಯ ಕಿವಿಗಳು ಯಾವುದೇ ತೊಂದರೆಗಳಿಲ್ಲದೆ 70 ಡೆಸಿಬೆಲ್‌ವರೆಗೆ ಶಬ್ದವನ್ನು ಕಿವಿಗಳು ತಾಳಿಕೊಳ್ಳಬಹುದು. 85 ಡೆಸಿಬೆಲ್ ಮೀರಿದ ಶಬ್ದವು ಸತತವಾಗಿ 8 ಗಂಟೆಗಳನ್ನು ಮೀರಿದರೆ ಕಿವಿಗಳಿಗೆ ಸಮಸ್ಯೆ ಆಗುತ್ತದೆ. ಕಿವಿಯ ತಮಟೆ ಹರಿದು ಹೋಗುವ, ರಕ್ತಸ್ರಾವವಾಗಬಹುದು. ತಾತ್ಕಾಲಿಕ ಕಿವುಡುತನ, ಕಿವಿಗಳಲ್ಲಿ ಗುಂಯ್ ಗುಡುವಿಕೆ ಸೇರಿ ಇತರ ಸಮಸ್ಯೆಗಳು ಉಂಟಾಗಬಹುದು. ಡಿಜೆಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ 120 ಡೆಸಿಬೆಲ್‌ಗಿಂತ ಹೆಚ್ಚು ಶಬ್ದವನ್ನೇ ಇಡಬೇಕಾಗುತ್ತದೆ. ಶಬ್ದ ಮಾಲಿನ್ಯದ ಜೊತೆಗೆ ಕಿವಿಗಳ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ.

-ಡಾ.ನಾರಾಯಣ್, ಇಎನ್‌ಟಿ ತಜ್ಞ ವೈದ್ಯ

ಕೆಲಸ ಈ ಬಾರಿ ಹೆಚ್ಚಾಗಿತ್ತು :

ಈ ಹಿಂದೆ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಹಾಕುತ್ತಿದ್ದ ಪರಿಣಾಮ ತಮಟೆ ಶಬ್ದ ಕೇಳಿಸುವುದಿಲ್ಲ ಎಂದು ನಮ್ಮನ್ನು ಆಹ್ವಾನ ನೀಡುತ್ತಿರಲಿಲ್ಲ. ಆದರೆ, ಈ ಬಾರಿ ಡಿಜೆ ಬ್ಯಾನ್ ಆದ ಕಾರಣ ನಮಗೆ ಕೆಲಸ ಹೆಚ್ಚಾಗಿ ಸಿಕ್ಕಿತ್ತು. ಬೆಂಗಳೂರಿನಲ್ಲಿರುವ ಎಲ್ಲ ತಮಟೆ ತಂಡಗಳಿಗೂ ಕೆಲಸ ಸಿಕ್ಕಿದಂತೆ ಆಯಿತು. ಗೌರವ ಧನವೂ ದುಪ್ಪಟ್ಟು ದೊರೆಯಿತು ಎಂದರೂ ತಪ್ಪಾಗುವುದಿಲ್ಲ ಎಂದು ಶಾಂತಿನಗರದ ತಮಟೆ ಕಲಾವಿದ ರಾಕಿ ರಾಕೇಶ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್ ದಳಸನೂರು

contributor

Similar News