×
Ad

ಭಾರತೀಯ ಸಿನೆಮಾ ಮತ್ತು ಸಾಮಾಜಿಕ ಪಿಡುಗು -ಒಂದು ಜಿಜ್ಞಾಸೆ

Update: 2025-08-06 12:52 IST

ಶತಮಾನದ ಇತಿಹಾಸ ಇರುವ ಭಾರತೀಯ ಸಿನೆಮಾ ಒಟ್ಟಾರೆಯಾಗಿ ಸಾಮಾಜಿಕ ಪಿಡುಗುಗಳನ್ನು ಅದೆಷ್ಟರ ಮಟ್ಟಿಗೆ ಪ್ರದರ್ಶಿಸಿ ಬೆಳೆಸುತ್ತಿದೆ ಎಂಬ ಪ್ರಶ್ನೆ ಇಂದು ನಿನ್ನೆಯದ್ದಲ್ಲ, ಬಹುಶಃ ಮೊದಲ ಸಿನೆಮಾದಿಂದಲೇ ಇದು ಆರಂಭವಾಗಿರಲೂಬಹುದು. ಆದರೆ ಕನ್ನಡದ ತಾಜಾ ಹಿಟ್ ‘ಸು ಫ್ರಂ ಸೋ’ ದಲ್ಲಿನ ವಿಪರೀತ ಕುಡಿತದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಈ ಪ್ರಶ್ನೆ ಜ್ವಲಂತವಾಗಿದ್ದು ಆ ಸಿನೆಮಾದ ಅದ್ಭುತ ಗೆಲುವಿನ ಜತೆಗೆ ಇದಕ್ಕೂ ಉತ್ತರ ಕಂಡುಕೊಳ್ಳುವ ತುರ್ತು ಅಗತ್ಯ ಈಗ ನಮ್ಮೆದುರಿಗಿದೆ.

ಭಾರತೀಯ ಅಥವಾ ಜಾಗತಿಕ ಸಿನೆಮಾಗಳಲ್ಲಿ ಬರುವ ಯಾವುದೇ ಸಾಮಾಜಿಕ ಪಿಡುಗುಗಳು ಮೂಲತಃ ಸಿನೆಮಾದವರು ತಾವಾಗಿ ತಯಾರಿ ಮಾಡಿದ್ದಲ್ಲ ಬದಲಾಗಿ ಸಮಾಜದೊಳಗಿಂದಲೇ ಹೆಕ್ಕಿಕೊಂಡದ್ದು ಎಂಬ ಮಾತು ಬಹಳ ಕಾಲದಿಂದಲೂ ನಮ್ಮ ನಡುವೆ ಇದೆ. ಮೇಲ್ನೋಟಕ್ಕೆ ಇದು ಹೌದೆಂದರೂ ಅವುಗಳ ವ್ಯಾಪ್ತಿಯನ್ನು ತಮಗೆ ಬೇಕಾದಂತೆ ವಿಸ್ತರಿಸುವ ಕೆಲಸ ಇದೇ ಸಿನೆಮಾ ಮಂದಿಯಿಂದ ನಡೆದದ್ದು ಎಂಬುದು ಸಹ ಅಷ್ಟೇ ನಿಜ. ಕಥೆ ಮತ್ತು ಸಹಜತೆಗೆ ಪೂರಕ ಎಂಬ ಕಾರಣದಿಂದ ಮತ್ತು ಕೆಲವು ನಿರ್ದಿಷ್ಟ ರೀತಿಯ ಸಾಮಾಜಿಕ ಪಿಡುಗಿನ ವೈಭವೀಕರಣದಿಂದ ಪ್ರೇಕ್ಷಕರನ್ನು ಸುಲಭವಾಗಿ ತನ್ನೆಡೆಗೆ ಸೆಳೆಯುವ ಅಥವಾ ಮೂರ್ಖರನ್ನಾಗಿ ಮಾಡುವ ತಂತ್ರವಾಗಿ ನಮ್ಮ ನಡುವಿನ, ಇಂದು ಸಹ ವೈಪರೀತ್ಯದ ಹಾದಿಯಲ್ಲಿರುವ ಅನೇಕ ಸಾಮಾಜಿಕ ಪಿಡುಗುಗಳನ್ನು (ಡ್ರಗ್ಸ್, ಭಯೋತ್ಪಾದನೆ, ಕೋಮುವಾದ, ಮಾನವ ಹಕ್ಕುಗಳ ಉಲ್ಲಂಘನೆ, ಜಾತಿ ಧರ್ಮ ಭಾಷೆಯ ಭೇದ ಭಾವ, ಹೊಸದಾಗಿ ಸೇರ್ಪಡೆಯಾಗಿರುವ ರಾಜಕೀಯ ಅಜೆಂಡಾಗಳ ಪ್ರತಿಪಾದನೆ) ಸಿನೆಮಾಗಳು ತಮ್ಮ ಸರಕನ್ನಾಗಿ ಮಾಡುತ್ತಿರುವುದು ಖಂಡಿತ ನಿಜ.

ಸರಿಸುಮಾರು 70-80ರ ದಶಕಗಳ ಹಿಂದಿನ ಸಿನೆಮಾಗಳು ಬಹುಶಃ ಸಿಗರೇಟನ್ನು ಯೌವನತ್ವದ ಸಂಕೇತವಾಗಿ ತೋರ್ಪಡಿಸಿ ಅದರ ಮಾರುಕಟ್ಟೆ ವಿಸ್ತರಣೆಗೆ ಪರೋಕ್ಷ ಬೆಂಬಲ ನೀಡಿದ್ದು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಬಹುದು. ಅದಕ್ಕೂ ಮೊದಲು ಭಾರತೀಯ ಸಿನೆಮಾಗಳು ಲೈಂಗಿಕತೆಗೆ ಸುಪ್ತವಾಗಿ ಬೆಂಬಲಿಸಿ ತನ್ನ ಮಾರುಕಟ್ಟೆ ವಿಸ್ತರಣೆಗೆ ಸುಲಭದ ದಾರಿ ಕಂಡುಕೊಂಡದ್ದು ಸಹ ಒಪ್ಪಬೇಕಾದ್ದೆ. ಇದೇ ನಿಟ್ಟಿನಲ್ಲಿ ಸಮಾಜದೊಳಗೆ ಸುಪ್ತವಾಗಿ ಇದ್ದರೂ, ಮನೆ ಮನಗಳಿಂದ ಬಹಳ ದೂರವಿದ್ದ ಕುಡಿತವನ್ನು ಹಂತ ಹಂತವಾಗಿ ಡೈನಿಂಗ್ ಟೇಬಲ್‌ನ ಮಧ್ಯೆ ತಂದು ನಿಲ್ಲಿಸಿದ ಅಪಕೀರ್ತಿಯಲ್ಲಿ ಸಿನೆಮಾಗಳ ಪಾತ್ರವೂ ಇದೆ ನಿಜ. ಸಿನೆಮಾಗಳಲ್ಲಿ ರೌಡಿಸಂ, ಅಂಡರ್ ವರ್ಲ್ಡ್ ಉಂಟು ಮಾಡಿದ ಪ್ರಭಾವವಂತೂ ಪ್ರತೀ ಊರಿಗೂ ಹಬ್ಬಿದ್ದು ಒಂದು ಕಾಲಘಟ್ಟದ ವಿಪರ್ಯಾಸವೇ ಸರಿ.

ಆದರೆ ಕಳೆದ ಸರಿಸುಮಾರು ಒಂದೂವರೆ ಎರಡು ದಶಕಗಳಿಂದ ಬದಲಾದ ಸನ್ನಿವೇಶದಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವ ಮತ್ತು ಬಹುತೇಕ ಬದಲಾವಣೆ ಹೊಂದಿದ ಕೌಟುಂಬಿಕ ಮತ್ತು ಸಾಮಾಜಿಕ ಜೀವನ ಶೈಲಿಯಲ್ಲಿ ಸಿನೆಮಾ ಮಾಧ್ಯಮವೇ ಎರಡನೇ ಸ್ಥಾನ ತಲುಪಿರುವಾಗ ಇಂತಹ ಯಾವುದೇ ಸಾಮಾಜಿಕ ಪಿಡುಗುಗಳನ್ನು ಸಿನೆಮಾವೇ ತೋರಿಸಬೇಕಾದ ಅನಿವಾರ್ಯತೆ ಇಲ್ಲದೆ ಇರುವಾಗ ಕೇವಲ ಸಿನೆಮಾಗಳಿಂದ ಮಾತ್ರ ಇದು ಬೆಳೆಯಬಲ್ಲುದು ಎಂಬುದು ಸುಳ್ಳು. ಬದಲಾಗಿ ಕೆಲವೊಮ್ಮೆ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಇವುಗಳ ದುಷ್ಪರಿಣಾಮಗಳ ಬಗ್ಗೆಯೂ ಇದು ಬೆಳಕು ಚೆಲ್ಲಿ ಎಚ್ಚರಿಸಲೂಬಹುದು. ವಸ್ತುಸ್ಥಿತಿ ಹೀಗಿರುವಾಗ ಸಿನೆಮಾದೊಳಗಿನ ಸಂದರ್ಭವನ್ನು ಅದರೊಳಗಿನ ಯಾವುದೇ ಸಾಮಾಜಿಕ ಪಿಡುಗುಗಳ ದುರಂತವನ್ನು ಸ್ವತಃ ಅರ್ಥೈಸಿ ಅವುಗಳಿಗೆ ಬಲಿಬೀಳದಂತೆ ಬಹಳಷ್ಟು ಸಹಜವಾಗಿ ನೋಡಬೇಕಾದ ಅಗತ್ಯ ಈಗ ನಮ್ಮ ಮುಂದಿದೆ. ಇದಕ್ಕೆ ಬೇಕಾದ ಪೂರಕ ಸಿದ್ಧತೆಯನ್ನು ನಮ್ಮ ನಡುವಿನ ಶಿಕ್ಷಣ ವ್ಯವಸ್ಥೆಯೂ ಸೇರಿದಂತೆ ಜಾಗೃತ ಸಮಾಜ, ಕಾನೂನು ಮತ್ತು ಸರಕಾರಗಳು ಒಟ್ಟಾಗಿ ಮಾಡಬೇಕಾಗಿದೆ, ಸಿನೆಮಾ ಮಂದಿಗಳಿಗಿಂತಲೂ ಹೆಚ್ಚಾಗಿ. ಆಗ ಮಾತ್ರ ಸಿನೆಮಾದೊಳಗೆ ವಿಪರೀತ ಕುಡಿತವಿದ್ದರೂ ಸಮುದಾಯದೊಳಗೆ ಅದು ಹತೋಟಿಗೆ ಬರಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Similar News