×
Ad

ಭಾರತದ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದ್ವೇಷ ಮತ್ತು ಅಸಹಿಷ್ಣುತೆ

Update: 2025-08-31 10:31 IST

ಬುದ್ಧ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮತ್ತು ಜೋತಿಬಾ ಫುಲೆ ಅವರು ಪ್ರತಿಪಾದಿಸಿದ ಮೌಲ್ಯಗಳು ನಮ್ಮ ಸಮಾಜದಲ್ಲಿ ಜೀವಂತ ವಾಸ್ತವವಾದಾಗ ಮಾತ್ರ ಭಾರತದಲ್ಲಿ ನೈಜ ಸುಧಾರಣೆ ಸಾಧ್ಯ. ಜಾತಿ ತಾರತಮ್ಯ, ಕೋಮು ದ್ವೇಷ, ಲಿಂಗ ಅಸಮಾನತೆ ಮತ್ತು ಆರ್ಥಿಕ ಶೋಷಣೆಯನ್ನು ತೊಡೆದುಹಾಕಿ, ದೇಶದ ಎಲ್ಲ ಜನರ ಪರಂಪರೆಯ ಅರ್ಹ ವೈವಿಧ್ಯತೆಯನ್ನು ಆಚರಿಸಿದಾಗ, ಭಿನ್ನಾಭಿಪ್ರಾಯವನ್ನು ಗೌರವಿಸಿದಾಗ ಮತ್ತು ಅಂಚಿನಲ್ಲಿರುವವರಿಗೆ ಅಧಿಕಾರ ನೀಡಿದಾಗ ಮಾತ್ರ ದೇಶ ಮುಂದುವರಿಯಲು ಸಾಧ್ಯ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಒಂದು ಕಾಲದಲ್ಲಿ ಜಾತ್ಯತೀತ ಪ್ರಜಾಪ್ರಭುತ್ವದ ಮಾದರಿಯಾಗಿದ್ದ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿದೆ. ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆರೋಪಗಳ ಕಾರಣದಿಂದಾಗಿ, 2025 ರ ವರದಿಯಲ್ಲಿ ಭಾರತವನ್ನು ‘ಕ್ರಂಟಿ ಆಫ್ ಪರ್ಟಿಕ್ಯುಲರ್ ಕನ್ಸರ್ನ್’ ಎಂದು ಗೊತ್ತುಪಡಿಸಬೇಕೆಂದು ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾಷನಲ್ ರಿಲಿಜಿಯಸ್ ಫ್ರೀಡಮ್ ಸೂಚಿಸಿದೆ. ಭಾರತವು ಈ ಸಂಶೋಧನೆಗಳನ್ನು ತೀವ್ರವಾಗಿ ಆಕ್ಷೇಪಿಸಿ ಇದು ಪಕ್ಷಪಾತ ಮತ್ತು ರಾಜಕೀಯ ಪ್ರೇರಿತ ಎಂದು ಜರೆದಿದೆ. ಪ್ಯೂ ಸಂಶೋಧನಾ ಕೇಂದ್ರದ ವರದಿ, ‘ಭಾರತದಲ್ಲಿ ಧರ್ಮ: ಸಹಿಷ್ಣುತೆ ಮತ್ತು ಪ್ರತ್ಯೇಕತೆ’ (ಜೂನ್ 2021) ಬಗ್ಗೆ ಹಲವಾರು ವಿಮರ್ಶಾತ್ಮಕ ಲೇಖನಗಳ ಮೂಲಕ ದೇಶದಲ್ಲಿ ಹಿಂದೂ-ಮುಸ್ಲಿಮ್ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದೆ. ಆದರೂ ಸಮೀಕ್ಷೆಯು ಇತರ ನಾಲ್ಕು ಪ್ರಮುಖ ಧರ್ಮಗಳಾದ ಕ್ರಿಶ್ಚಿಯನ್, ಸಿಖ್, ಜೈನ ಮತ್ತು ಬೌದ್ಧ ಧರ್ಮಗಳಿಗೆ ಸಂಬಂಧಿಸಿದ ತುಲನಾತ್ಮಕ ದತ್ತಾಂಶವನ್ನು ಪ್ರಸ್ತುತಪಡಿಸುತ್ತದೆ. ಏತನ್ಮಧ್ಯೆ ಭಾರತದ ಸಾಮಾಜಿಕ ರಚನೆಯ ಮೇಲೆ ಹಿಂದುತ್ವ ರಾಜಕೀಯದ ಹೆಚ್ಚುತ್ತಿರುವ ಪ್ರಭಾವವೇ ಮೂಲವೆನ್ನುತ್ತಿದೆ ಈ ವರದಿ. ಇತ್ತೀಚಿನ ಜಾಗತಿಕ ಬಹು-ಆಯಾಮದ ಬಡತನ ಸೂಚ್ಯಂಕವು ಭಾರತದಲ್ಲಿ ಬಡತನದ ಗಮನಾರ್ಹ ಮುನ್ಸೂಚಕವಾಗಿ ಜಾತಿಯನ್ನು ಒಳಗೊಂಡಿದೆ. ಈ ಬಡತನದ ಅಳತೆಯ ಮಾಪನದ ವಿಧಾನವು ಸುಧಾರಣೆಯನ್ನು ಸೂಚಿಸುತ್ತದೆ; ಆದರೂ, ದಲಿತರು ಮತ್ತು ಆದಿವಾಸಿಗಳು, ಮಹಿಳೆಯರು ಅಸಮಾನವಾಗಿ ಬಡವರಾಗಿಯೇ ಉಳಿದಿದ್ದಾರೆ ಮತ್ತು ಮಹಿಳೆಯರು ಹಿಂದುಳಿಯುತ್ತಲೇ ಇದ್ದಾರೆ.

2025ರ ಮೇ ತಿಂಗಳ ಮಧ್ಯದಲ್ಲಿ, ಕೆ.ಆರ್. ಪೇಟೆ ತಾಲೂಕು ಕಟ್ಟೇರಘಟ್ಟ ಗ್ರಾಮದ 43 ವರ್ಷದ ಜಯಕುಮಾರ್ ಎಂಬ ದಲಿತ ವ್ಯಕ್ತಿಯ ಸುಟ್ಟ ದೇಹವು ಹುಲ್ಲಿನ ಬಣವೆಯಲ್ಲಿ ಪತ್ತೆಯಾಯಿತು. ಇದಕ್ಕೆ ಕಾರಣವಾದ ಘಟನೆಗಳು ಅಸ್ಪಷ್ಟವಾಗಿದ್ದವು ಮತ್ತು ಸ್ಥಳೀಯರ ಅನುಮಾನಕ್ಕೆ ಕಾರಣವಾಯಿತು. ಮೊನ್ನೆ ನಡೆದ ಚಳಿಗಾಲದ ಅಧಿವೇಶನದ ವಿಧಾನಸಭಾ ಕಲಾಪದಲ್ಲಿ ಮಾಜಿ ಮಂತ್ರಿ ಮತ್ತು ಹಾಲಿ ಶಾಸಕ ಜಿ.ಟಿ. ದೇವೇಗೌಡರವರು ಸದನದಲ್ಲಿಯೇ ದಲಿತರಿಗೆ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ನೀಡಬಾರದೆಂದು ಆಕ್ಷೇಪಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಸರಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಕೋಮುವಾದಿ ಶಕ್ತಿಗಳು, ರಾಜಕೀಯ ನಾಯಕರು ಬಹುದೊಡ್ಡ ಅಪರಾಧವೆಂಬಂತೆ ಬಿಂಬಿಸಿ ವಿರೋಧಿಸುತ್ತಿರುವುದನ್ನು ಗಮನಿಸಬಹುದು.

ಇತ್ತೀಚಿನ ವರ್ಷಗಳಲ್ಲಿ, ಭಾರತವು ಕೋಮು ಮತ್ತು ಜಾತಿ ಆಧಾರಿತ ಉದ್ವಿಗ್ನತೆಗಳಲ್ಲಿ ಆತಂಕಕಾರಿ ಏರಿಕೆಯನ್ನು ಕಂಡಿದೆ. ಹಲವಾರು ವಿವಾದಾತ್ಮಕ ನೀತಿಗಳು ಮತ್ತು ಹಿಂಸಾತ್ಮಕ ಘಟನೆಗಳು ದೇಶಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿವೆ. ಅಸ್ಸಾಮಿನಲ್ಲಿ ಮುಖ್ಯಮಂತ್ರಿ ನೇತೃತ್ವದ ತೆರವು ಕಾರ್ಯಾಚರಣೆಗಳು 50,000ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಿವೆ, ಅವರಲ್ಲಿ ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರು. ಮಾರ್ಚ್ 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರಕಾರವು ಮೀಸಲಾತಿ ಕೋಟಾಗಳ ತೀವ್ರ ಪುನರ್‌ರಚನೆಯನ್ನು ಕೈಗೊಂಡಾಗ ಸಮಾನಾಂತರ ವಿವಾದ ಭುಗಿಲೆದ್ದಿತು. ಮುಸ್ಲಿಮರಿಗೆ ಶೇ. 4 ಕೋಟಾವನ್ನು ರದ್ದುಗೊಳಿಸುವ ಮತ್ತು ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಂತಹ ಪ್ರಬಲ ಸಮುದಾಯಗಳಿಗೆ ಮರುಹಂಚಿಕೆ ಮಾಡುವ ನಿರ್ಧಾರವು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು, ಏತನ್ಮಧ್ಯೆ, ಹಲವಾರು ಕೋಮುವಾದಿ ಆಡಳಿತದ ರಾಜ್ಯಗಳಲ್ಲಿ, ಗುಂಪು ಹಿಂಸಾಚಾರ ಮತ್ತು ದ್ವೇಷ ಅಪರಾಧಗಳನ್ನು ಹೆಚ್ಚಿಸಿವೆ. 2015ರಿಂದ ಕನಿಷ್ಠ 50 ಹತ್ಯೆಗಳನ್ನು ಹ್ಯೂಮನ್ ರೈಟ್ಸ್ ವಾಚ್ ದಾಖಲಿಸಿದೆ. ಇವು ಹೆಚ್ಚಾಗಿ ದಲಿತರು ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. ನಕಲಿ ಗೋರಕ್ಷಕರು ಹೆಚ್ಚಾಗಿ ಮೂಲಭೂತ ಹಿಂದೂ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆ.

ಯುವ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ನಂತರ ಆಕೆ ಗಾಯಗಳಿಂದಾಗಿ ಸಾವನ್ನಪ್ಪಿದ 2020ರ ಹಾಥರಸ್ ಪ್ರಕರಣವು ಪೊಲೀಸರ ನಿರಾಸಕ್ತಿ ಮತ್ತು ಸಂವೇದನಾಶೀಲತೆಯನ್ನು ಬಹಿರಂಗಪಡಿಸಿತು. ಇದು ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು. ಅದೇ ವರ್ಷ, ರಾಜಕೀಯ ಪ್ರಚೋದನೆ ಮತ್ತು ದ್ವೇಷ ಭಾಷಣದಿಂದ ಪ್ರಚೋದಿಸಲ್ಪಟ್ಟ ದಿಲ್ಲಿ ಗಲಭೆ, 2019ರಲ್ಲಿ ತಮಿಳುನಾಡಿನ ಪೊನ್ಪರಪ್ಪಿಯಲ್ಲಿ ಇದೇ ರೀತಿಯ ಜಾತಿ ಆಧಾರಿತ ಹಿಂಸಾಚಾರ ಕಂಡುಬಂದಿತು. ಅಲ್ಲಿ ರಾಜಕೀಯ ಗುಂಪುಗಳೊಂದಿಗೆ ಹೊಂದಿಕೊಂಡಿದೆ ಎಂದು ಹೇಳಲಾದ ಮೇಲ್ಜಾತಿಯ ಗುಂಪೊಂದು ದಲಿತ ವಸಾಹತು ಮೇಲೆ ದಾಳಿ ಮಾಡಿ 16 ಜನರನ್ನು ಗಾಯಗೊಳಿಸಿತು ಮತ್ತು ಡಜನ್‌ಗಟ್ಟಲೆ ಮನೆಗಳನ್ನು ಸುಟ್ಟುಹಾಕಿತು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯಂತಹ ಪ್ರಮುಖ ನಾಯಕರು ಬಿಜೆಪಿ ಆಡಳಿತದಲ್ಲಿ ದಲಿತರು ಮತ್ತು ಮುಸ್ಲಿಮರು ಇಬ್ಬರೂ ಭಯದಲ್ಲಿ ಬದುಕುತ್ತಿದ್ದಾರೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ. ಆಡಳಿತ ಪಕ್ಷವು ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಸುಳ್ಳು ನ್ಯಾಯಾಂಗ ಪ್ರಕರಣಗಳನ್ನು ಬಳಸುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ವಿಗ್ರಹಗಳ ಧ್ವಂಸವನ್ನು ತಡೆಯುವಲ್ಲಿ ವಿಫಲವಾಗಿದೆ. 2014ರ ಆಗ್ರಾ ಮತಾಂತರ ಕೂಡ ಇದಕ್ಕೆ ಹೊರತಾಗಿಲ್ಲ. ಮಧ್ಯಪ್ರದೇಶದಲ್ಲಿ, 2023ರಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಬುಡಕಟ್ಟು ದಲಿತ ಯುವಕನ ಮೇಲೆ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುವ ವೀಡಿಯೊ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತು. ಒಟ್ಟಾರೆ ಈ ಬೆಳವಣಿಗೆಗಳು ವ್ಯವಸ್ಥಿತ ತಾರತಮ್ಯ, ಆಯ್ದ ಆಡಳಿತ ಮತ್ತು ಕೋಮು ಮತ್ತು ಜಾತಿ ಮತ್ತು ಧರ್ಮದ ಗೊಂದಲದ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತವೆ.

ಶತಮಾನಗಳಿಂದ, ದಕ್ಷಿಣ ಏಶ್ಯದ ದಲಿತರು ಮತ್ತು ಅಲ್ಪಸಂಖ್ಯಾತರು ತಾರತಮ್ಯ, ಅಂಚಿನಲ್ಲಿರುವಿಕೆ, ಕಳಂಕ, ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಿಂದ ಮತ್ತು ಹಿಂಸೆಯನ್ನು ಸಹಿಸಿಕೊಂಡಿದ್ದಾರೆ. ಪರಿಣಾಮವಾಗಿ ಸಾಮಾಜಿಕ ಶ್ರೇಣೀಕರಣದ ಅತ್ಯಂತ ಕೆಳಮಟ್ಟದಲ್ಲಿ ಅವರನ್ನು ಇರಿಸಲಾಗುತ್ತದೆ. ಇದು ದಲಿತ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ, ವಸತಿ, ಉದ್ಯೋಗ, ನ್ಯಾಯದ ಪ್ರವೇಶ ಮತ್ತು ರಾಜಕೀಯ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವಿಕೆ ಸೇರಿದಂತೆ ಜೀವನದ ವಿವಿಧ ಆಯಾಮಗಳ ಮೇಲೆ ಪ್ರಭಾವ ಬೀರುತ್ತಿದೆ.

ಅಂತರ್‌ರಾಷ್ಟ್ರೀಯ ದಲಿತ ಸಾಲಿಡಾರಿಟಿ ನೆಟ್‌ವರ್ಕ್ ಜಾಗತಿಕವಾಗಿ ಸುಮಾರು 260 ಮಿಲಿಯನ್ ದಲಿತರಿದ್ದಾರೆ ಎಂದು ಅಂದಾಜಿಸಿದೆ. ಭಾರತ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ಸೇರಿದಂತೆ ದಕ್ಷಿಣ ಏಶ್ಯದಲ್ಲಿ ದಲಿತರಿದ್ದಾರೆ. ಭಾರತವು ಹಿಂದೂ ಧರ್ಮ ಮತ್ತು ಬೌದ್ಧಧರ್ಮದಂತಹ ವಿಭಿನ್ನ ನಂಬಿಕೆಗಳು ಹುಟ್ಟಿಕೊಂಡ ಭೂಮಿಯಾಗಿದ್ದು, ಬಹಳ ಹಿಂದಿನಿಂದಲೂ ಪ್ರವರ್ಧಮಾನಕ್ಕೆ ಬಂದಿವೆ. ಧರ್ಮಪ್ರಚಾರಕ ಥಾಮಸ್ ಕ್ರಿ.ಶ. ಮೊದಲ ಶತಮಾನದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪರಿಚಯಿಸಿದರು ಮತ್ತು ಇಸ್ಲಾಮ್ 7ನೇ ಶತಮಾನದಲ್ಲಿ ಆಗಮಿಸಿತು ಎನ್ನಲಾಗಿದೆ. 1950ರ ಭಾರತೀಯ ಸಂವಿಧಾನವು ದೇಶವನ್ನು ಜಾತ್ಯತೀತ ಗಣರಾಜ್ಯವೆಂದು ಘೋಷಿಸಿತು, ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿತು. ಆದರೂ, ಧಾರ್ಮಿಕ ಅಸಹಿಷ್ಣುತೆ ಹೆಚ್ಚುತ್ತಿರುವುದು ಶೋಚನೀಯ.

ಅಸಹಿಷ್ಣುತೆ ಎಂಬುದು ದಲಿತರ ಪಾಲಿಗಂತೂ ಭಾರತೀಯ ಸಂದರ್ಭದಲ್ಲಿ ಅತೀ ಹೆಚ್ಚೇ ಎಂದು ಹೇಳಬಹುದು. ಹಳ್ಳಿಗಳಲ್ಲಿ ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಕುಡಿಯಲು ಬೇಕಾದ ನೀರನ್ನು ನಿಗದಿತ ಸ್ಥಳದಲ್ಲಿಯೇ ತೆಗೆದುಕೊಳ್ಳಬೇಕು, ಒಟ್ಟಾಗಿ ಮಕ್ಕಳು ಶಾಲೆಗಳಲ್ಲಿ ಊಟ ಮಾಡುವಂತಿಲ್ಲ, ಆಟವಾಡುವಂತಿಲ್ಲ, ಮೇಲ್ಜಾತಿ ಜನರ ಜೊತೆ ಮದುವೆ ಮಾಡುಕೊಳ್ಳುವಂತಿಲ್ಲ. ಸ್ವಾಂತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಾಂವಿಧಾನಿಕ ಅವಕಾಶಗಳಿದ್ದರೂ ದಲಿತರನ್ನು ಇನ್ನೂ ತುಚ್ಛವಾಗಿ ಕಾಣುವ ಈ ಸಮಾಜವನ್ನು ಹೇಗೆ, ಯಾರು ಮತ್ತು ಯಾವಾಗ ಸರಿಪಡಿಸುವುದು? ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಘೋಷಣೆ ಕೇವಲ ಹೆಸರಿಗಷ್ಟೆಯೇ? ಇದು ಕ್ರಿಯೆಯಾಗಿ ಪರಿವರ್ತಿಸುವುದು ಯಾವಾಗ?

ದಲಿತ ದಬ್ಬಾಳಿಕೆಯ ಬೇರುಗಳು ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯ ಮೂಲಕ್ಕೆ ಹೋಗುತ್ತವೆ. ಜಾತಿಯ ತತ್ವಶಾಸ್ತ್ರವು ಕ್ರಿ.ಪೂ. ಎರಡನೇ ಶತಮಾನದ ‘ಮನುಸ್ಮತಿ’ಯಲ್ಲಿ ಅಡಕವಾಗಿದೆ. ‘ಅಸ್ಪಶ್ಯ’ ಬಹಿಷ್ಕೃತ ಸಮುದಾಯಗಳು ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಜೀವನದಲ್ಲಿ ಸೇರುವುದನ್ನು ನಿಷೇಧಿಸಲಾಗಿತ್ತು ಮತ್ತು ಪ್ರಾಣಿ ವಧೆ ಮತ್ತು ಚರ್ಮದ ಕೆಲಸದಂತಹ ಮಾಲಿನ್ಯಕಾರಕವೆಂದು ಪರಿಗಣಿಸಲಾದ ಕೀಳು ಕೆಲಸಗಳಿಗೆ ಸೀಮಿತವಾಗಿತ್ತು. ಭಾರತಕ್ಕೆ ಇಸ್ಲಾಮ್ ಧರ್ಮದ ಆಗಮನದಿಂದಾಗಿ ಅನೇಕ ಕೆಳಜಾತಿ ಮತ್ತು ‘ಅಸ್ಪಶ್ಯ’ ಗುಂಪುಗಳು ವ್ಯಾಪಕವಾಗಿ ಮತಾಂತರಗೊಳ್ಳಲು ಆರಂಭಿಸಿದರು. ಮತ್ತು ಹತ್ತೊಂಭತ್ತನೇ ಶತಮಾನದ ಮಧ್ಯಭಾಗದಲ್ಲಿ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಮುಸ್ಲಿಮರಾಗಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಈಗ ದಲಿತರು ಎಂದು ಕರೆಯಲ್ಪಡುವ ಜನರ ಪರಿಸ್ಥಿತಿಯನ್ನು ಸುಧಾರಿಸಲು ಎರಡು ವಿಭಿನ್ನ ವಿಧಾನಗಳು ಹೊರಹೊಮ್ಮಿದವು. ಮೊದಲನೆಯದನ್ನು ಮಹಾತ್ಮಾ ಗಾಂಧಿಯವರು ಮುನ್ನಡೆಸಿದರು. ಅವರು ಸಾಂಪ್ರದಾಯಿಕ ಜಾತಿ ವ್ಯವಸ್ಥೆಯ ಅಂಶಗಳನ್ನು ಉಳಿಸಿಕೊಂಡು ದಲಿತರನ್ನು ‘ಹರಿಜನರು’ ಎಂದು ಕರೆಯುವ ಮೂಲಕ ‘ಅಸ್ಪಶ್ಯತೆ’ಯ ಅವಮಾನಕರ ಕಳಂಕ ಮತ್ತು ಅಭಿವ್ಯಕ್ತಿಗಳನ್ನು ತೆಗೆದುಹಾಕುವಲ್ಲಿ ನಂಬಿಕೆ ಇರಿಸಿದ್ದರು. ಇನ್ನೊಂದು ವಿಧಾನವನ್ನು ಡಾ.ಅಂಬೇಡ್ಕರ್ ನೇತೃತ್ವ ವಹಿಸಿದ್ದರು. ಸ್ವತಃ ಅಸ್ಪಶ್ಯತೆಯನ್ನು ಅನುಭವಿಸಿದ್ದ ಕಾರಣ ಜಾತಿ ವಿನಾಶವಲ್ಲದೆ ಅಸ್ಪಶ್ಯತೆಯನ್ನು ಹೋಗಲಾಡಿಸಲು ಸಾಧ್ಯವೇ ಇಲ್ಲ ಎಂಬ ಉಪಸಂಹಾರಕ್ಕೆ ಬಂದಿದ್ದರು. ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರಿಗೆ ನೀಡಲಾದ ಸ್ಥಾನಮಾನಕ್ಕೆ ಹೋಲುವ ಪ್ರತ್ಯೇಕ ಕಾನೂನು ಮತ್ತು ಸಾಂವಿಧಾನಿಕ ಮಾನ್ಯತೆಯನ್ನು ಕೋರಿದ ಅಸ್ಪಶ್ಯರ ಮುಖ್ಯ ವಕ್ತಾರರಾದರು. ಅಂಬೇಡ್ಕರ್‌ರವರ ಪ್ರಸ್ತಾವವನ್ನು ಗಾಂಧಿಯವರು ವಿರೋಧಿಸಿದರು ಮತ್ತು ಅಂಬೇಡ್ಕರ್ ಅಂತಿಮವಾಗಿ ಬೇಡಿಕೆಯನ್ನು ಕೈಬಿಟ್ಟರು. ಹಿಂದೂ ಮೌಲ್ಯಗಳನ್ನು ತಿರಸ್ಕರಿಸಿದ ನಂತರ, 1956ರಲ್ಲಿ ಅವರು ಬೌದ್ಧಧರ್ಮಕ್ಕೆ ಮತಾಂತರಗೊಂಡರು ಮತ್ತು ನಂತರ ಹೆಚ್ಚಿನ ಸಂಖ್ಯೆಯ ಅಸ್ಪಶ್ಯರು ಅವರನ್ನು ಅನುಸರಿಸಿದರು.

ಸ್ವಾತಂತ್ರ್ಯದ ನಂತರ, ಭಾರತೀಯ ಸಂವಿಧಾನವು ಕಾನೂನಿನಲ್ಲಿ ಅಸ್ಪಶ್ಯತೆಯನ್ನು ರದ್ದುಗೊಳಿಸಿತು. ಇಂದು ದಲಿತ ರಾಜಕೀಯವು ಹೆಚ್ಚಾಗಿ ಸಂವಿಧಾನದಡಿಯಲ್ಲಿ ಅವರಿಗೆ ನೀಡಲಾದ ದೃಢೀಕರಣ ಕ್ರಮದ ಪ್ರಯೋಜನಗಳನ್ನು (ಉದ್ಯೋಗ, ಶಿಕ್ಷಣ ಮತ್ತು ಚುನಾವಣಾ ಪ್ರಾತಿನಿಧ್ಯದಲ್ಲಿ) ನ್ಯಾಯಯುತವಾಗಿ ವಿತರಿಸುವುದರ ಸುತ್ತ ಕೇಂದ್ರೀಕೃತವಾಗಿದೆ. ಆದರೂ, ಸಂವಿಧಾನದಿಂದ ಪಡೆದ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955/1976 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989, ಅವುಗಳ ಅನುಷ್ಠಾನದಲ್ಲಿ ಹೆಚ್ಚಾಗಿ ವಿಫಲವಾಗಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಡೆಯಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಸಾಮಾಜಿಕ ನ್ಯಾಯಕ್ಕೆ ಮೇಲ್ಜಾತಿ ಮತ್ತು ವರ್ಗದ ಅಧಿಕಾರಿಗಳ ಬದ್ಧತೆಯ ಕೊರತೆ, ಅನುಷ್ಠಾನ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ವಿಶಾಲ ಆಧಾರಿತ ಹಕ್ಕುಗಳ ಗುಂಪುಗಳ ಅನುಪಸ್ಥಿತಿ ಮತ್ತು ದಲಿತರ ವಿರುದ್ಧದ ಅಪರಾಧಗಳ ಅಪರಾಧಿಗಳನ್ನು ನೇರವಾಗಿ ಶಿಕ್ಷಿಸಲು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಯೋಗದ (ಮಂಡಲ ಆಯೋಗ) ಕಡೆಯಿಂದ ಶಾಸನಬದ್ಧ ಅಧಿಕಾರದ ಕೊರತೆ ಸೇರಿದಂತೆ ಹಲವು ಕಾರಣಗಳಿವೆ. ದಲಿತರಿಗೆ ಸಂಬಂಧಿಸಿದಂತೆ ದೃಢೀಕರಣದ ಸರಕಾರದ ಕ್ರಮವು ಜಾತಿ ಮತ್ತು ಅಸ್ಪಶ್ಯತೆಯ ಅಮಾನವೀಯ ಪರಿಣಾಮಗಳಿಂದ ಅವರನ್ನು ಮುಕ್ತಗೊಳಿಸದೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಜಾತಿ ಮತ್ತು ಬಡತನವು ಬೇರ್ಪಡಿಸಲಾಗದಂತೆ ಒಂದಕ್ಕೊಂದು ಬೆಸೆದುಕೊಂಡಿವೆ ಮತ್ತು ದಲಿತರ ಸಾಮಾಜಿಕ-ಆರ್ಥಿಕ ಸಂಕಷ್ಟದ ಮೂಲದಲ್ಲಿವೆ.

ನೈಸರ್ಗಿಕ ವಿಕೋಪದ ಸಂದರ್ಭದಲ್ಲಿಯೂ ದಲಿತರು ಅನುಭವಿಸುವ ಸಾಮಾಜಿಕ ಬಹಿಷ್ಕಾರಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ 2004ರ ಡಿಸೆಂಬರ್ 26ರ ಸುನಾಮಿಯ ನಂತರದ ಘಟನೆಗಳು. ದಕ್ಷಿಣ ಭಾರತದ ತಮಿಳುನಾಡಿನ ದಲಿತರಿಗೆ ಸುನಾಮಿ ಗಣನೀಯ ಪ್ರಮಾಣದ ವಿನಾಶವನ್ನು ತಂದಿತು. 10,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು 6,50,000 ಜನರನ್ನು ಸ್ಥಳಾಂತರಿಸಲಾಯಿತು ಎಂದು ಅಂದಾಜಿಸಲಾಗಿದೆ. ಸುನಾಮಿಯ ನಂತರ ತಮಿಳುನಾಡಿನ ದಲಿತರು ಅತ್ಯಂತ ಕೆಟ್ಟ ರೀತಿಯ ತಾರತಮ್ಯ ಮತ್ತು ಅವಮಾನದಿಂದ ಬಳಲಬೇಕಾಯಿತು. ತಾತ್ಕಾಲಿಕ ಪರಿಹಾರ ಶಿಬಿರಗಳಿಂದಲೂ ದಲಿತರನ್ನು ಹೊರಗಿಡಲಾಯಿತು; ನೈಸರ್ಗಿಕ ವಿಕೋಪದ ಆ ಸಮಯದಲ್ಲಿಯೂ ‘ಅಸ್ಪಶ್ಯತೆ’ ಸಿಂಡ್ರೋಮ್ ಹಿಂದೂ ಮೇಲ್ಜಾತಿಯ ಮನಸ್ಥಿತಿಯನ್ನು ಪ್ರಾಬಲ್ಯಗೊಳಿಸಿತ್ತು. ದಲಿತರಿಗೆ ಒದಗಿಸಲಾದ ಸೀಮಿತ ಆಶ್ರಯವು ಕೂಡಾ ಸರಿಯಾದ ನೈರ್ಮಲ್ಯ ಅಥವಾ ಇತರ ಸೌಲಭ್ಯಗಳಿಲ್ಲದ ಸ್ಮಶಾನಗಳು ಅಥವಾ ಕಸದ ತೊಟ್ಟಿಗಳ ಬಳಿ ನಿರ್ಮಿಸಲ್ಪಟ್ಟು, ನಿಯಮಿತವಾದ ನೀರಿನ ಸರಬರಾಜನ್ನು ಸಿಗದಂತೆ ನೋಡಿಕೊಳ್ಳಲಾಯಿತು. ಜೊತೆಗೆ ನಂತರದ ದಿನಗಳಲ್ಲಿ ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಸುನಾಮಿಯಿಂದ ಹಾನಿಗೊಳಗಾದ ಎಲ್ಲರಿಗೂ ನೀರಿನ ಟ್ಯಾಂಕ್‌ಗಳನ್ನು ಅಳವಡಿಸಿದಾಗಲೂ ಜಾತಿಗ್ರಸ್ಥ ಹಿಂದೂ ಮೂಲಭೂತವಾದಿಗಳು ನಲ್ಲಿಗಳಲ್ಲಿ ನೀರನ್ನು ತೆಗೆದುಕೊಳ್ಳದಂತೆ ನೋಡಿಕೊಂಡರು, ಏಕೆಂದರೆ ದಲಿತರಿಂದ ನೀರಿನ ‘ಮಾಲಿನ್ಯ’ವನ್ನು ಅನುಭವಿ ಸಬೇಕಾಗುತ್ತದೆ ಎನ್ನುವ ಕಾರಣಕ್ಕೆ.

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೀಸಲಾತಿ ವ್ಯವಸ್ಥೆಯ ಹೊರತಾಗಿಯೂ ರಾಜಕೀಯವಾಗಿ ದಲಿತರು ಮುಖ್ಯವಾಹಿನಿಯ ಚರ್ಚೆಗಳಿಗೆ ಪ್ರವೇಶಿಸಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ, ದಲಿತರ ಪ್ರಾಥಮಿಕ ಬೇಡಿಕೆಗಳನ್ನು ನಿರ್ಲಕ್ಷಿಸುವುದರೊಂದಿಗೆ, ಸಾಮಾನ್ಯವಾಗಿ ಮೇಲ್ಜಾತಿಯ ಪುರುಷರು ಮುನ್ನಡೆಸುವ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ಕಾರ್ಯಸೂಚಿಯಲ್ಲಿ ದಲಿತ ಕಾರ್ಯಸೂಚಿಯನ್ನು ಸೇರಿಸಿಕೊಳ್ಳಲಾಗಿದೆ. ಬುದ್ಧ, ಗಾಂಧಿ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮತ್ತು ಜೋತಿಬಾ ಫುಲೆ ಅವರು ಪ್ರತಿಪಾದಿಸಿದ ಮೌಲ್ಯಗಳು ನಮ್ಮ ಸಮಾಜದಲ್ಲಿ ಜೀವಂತ ವಾಸ್ತವವಾದಾಗ ಮಾತ್ರ ಭಾರತದಲ್ಲಿ ನೈಜ ಸುಧಾರಣೆ ಸಾಧ್ಯ. ಜಾತಿ ತಾರತಮ್ಯ, ಕೋಮು ದ್ವೇಷ, ಲಿಂಗ ಅಸಮಾನತೆ ಮತ್ತು ಆರ್ಥಿಕ ಶೋಷಣೆಯನ್ನು ತೊಡೆದುಹಾಕಿ, ದೇಶದ ಎಲ್ಲ ಜನರ ಪರಂಪರೆಯ ಅರ್ಹ ವೈವಿಧ್ಯತೆಯನ್ನು ಆಚರಿಸಿದಾಗ, ಭಿನ್ನಾಭಿಪ್ರಾಯವನ್ನು ಗೌರವಿಸಿದಾಗ ಮತ್ತು ಅಂಚಿನಲ್ಲಿರುವವರಿಗೆ ಅಧಿಕಾರ ನೀಡಿದಾಗ ಮಾತ್ರ ದೇಶ ಮುಂದುವರಿಯಲು ಸಾಧ್ಯ. ಹಿಂಸಾಚಾರ ಭಾರತದ ಪ್ರಜಾಸತ್ತಾತ್ಮಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ನ್ಯಾಯದ ಬದ್ಧತೆಯ ಪ್ರಶ್ನೆಗಳ ಬಗ್ಗೆ ಎಂದಿಗಿಂತಲೂ ಇಂದಿನ ಯುವ ಮನಸ್ಸುಗಳು ಗಟ್ಟಿಯಾಗಿ ಮಾತನಾಡಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಶ್ರೀನಿವಾಸ ಡಿ. ಮಣಗಳ್ಳಿ

contributor

Similar News