ಭಾರತದ ಅರ್ಥವ್ಯವಸ್ಥೆ: ಯೋಜನಾ ಆಯೋಗದಿಂದ ‘ಚಿಂತಕರ ಚಾವಡಿ’ಯತ್ತ
ನೀತಿ ಆಯೋಗವೆಂಬ ಸಲಹಾ ಸಂಸ್ಥೆ (2014ರಿಂದ)
ಹಿಂದಿನ ಯೋಜನಾ ಆಯೋಗವನ್ನು ಪಳೆಯುಳಿಕೆ ಎಂದು ಬಿಂಬಿಸಿದ ಮೋದಿ ಸರಕಾರವು ತನ್ನ ರಾಜಪತ್ರದಲ್ಲಿ ಮತ್ತು ನೀತಿ ಆಯೋಗದ ದಾಖಲೆಗಳಲ್ಲಿ ಯೋಜನೆಗಳ ಮೂಲಕ ಭಾರತವು ಮಾಡಿದ ಆರ್ಥಿಕ ಸಾಧನೆಯನ್ನು ಹೆಸರಿಸಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಸ್ಥಾಪಿಸಿದ ನೀತಿ ಆಯೋಗವು ತನ್ನ ಅಸ್ತಿತ್ವದ 11 ವರ್ಷಗಳಲ್ಲಿ ಏನು ಕೊಡುಗೆ ನೀಡಿದೆ ಎಂಬುದರ ಮೌಲ್ಯಮಾಪನ ಮಾಡಿದರೆ ದೇಶದ ಗಂಭೀರ ಸವಾಲುಗಳನ್ನು ಎದುರಿಸುವ ದಾರಿಯನ್ನು ತೋರಿಸುವಲ್ಲಿ ಅದು ಶಕ್ತವಾಗಿಲ್ಲ ಎಂಬುದು ಕಟು ವಾಸ್ತವ. ಅದರ ಕುರಿತು ಆಯೋಗವೂ ಕೇಂದ್ರ ಸರಕಾರವೂ ಆತ್ಮಾವಲೋಕನವನ್ನು ಮಾಡಬೇಕು.
ಭಾಗ - 2
ಯೋಜನಾ ಆಯೋಗದ ವಿಸರ್ಜನೆ ಮತ್ತು ನೀತಿ ಆಯೋಗದ ಸ್ಥಾಪನೆ
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಹೊಸತರಲ್ಲಿ ರಾಷ್ಟ್ರೀಯ ಯೋಜನಾ ಆಯೋಗವನ್ನು ಔಪಚಾರಿಕವಾಗಿ ವಿಸರ್ಜಿಸಿದರು. ಅದರ ಸ್ಥಾನದಲ್ಲಿ ತಮ್ಮ ಸಚಿವ ಸಂಪುಟದ ನಿರ್ಣಯದ ಮೂಲಕ ಹೊಸತೊಂದು ಸಂಸ್ಥೆಯನ್ನು ರಚಿಸಿದರು. ಇದರ ಪೂರ್ತಿ ಹೆಸರು ಇಂಗ್ಲಿಷಿನಲ್ಲಿ National Institution for Transforming India. ಅದರಲ್ಲಿನ ಮುಖ್ಯ ನಾಲ್ಕು ಪದಗಳ ಮೊದಲ ಅಕ್ಷರಗಳನ್ನು ಜೋಡಿಸಿ NITI ಎಂಬ ಇಂಗ್ಲಿಷ್ ಪದವನ್ನು ಟಂಕಿಸಿ ನೀತಿ ಆಯೋಗವೆಂಬ ಹೆಸರು ಬಳಕೆಗೆ ತರಲಾಯಿತು.
ಜನವರಿ 2015ರ ಕೇಂದ್ರ ಸರಕಾರದ ರಾಜಪತ್ರವು ಯೋಜನಾ ಆಯೋಗದ ವಿಸರ್ಜನೆ ಮತ್ತು ನೀತಿ ಆಯೋಗದ ಸ್ಥಾಪನೆಯನ್ನು ಪ್ರಕಟಿಸಿತ್ತು. ರಾಜಪತ್ರದ ಪ್ರಕಾರ ನೀತಿ ಆಯೋಗದ ಉದ್ದೇಶಗಳು 13 ಇವೆ. ಅವುಗಳ ಸಾರಾಂಶ ಹೀಗಿದೆ:
ನೀತಿ ಆಯೋಗದ ಕೇಂದ್ರ ಬಿಂದು ಪ್ರಧಾನ ಮಂತ್ರಿ ಹಾಗೂ ಅವರ ಕಾರ್ಯಾಲಯ. ಹಾಗಾಗಿ ರಾಜಪತ್ರದಲ್ಲಿ ಹೇಳಲಾದ ಮೊದಲ ಉದ್ದೇಶವೇ ಪ್ರಧಾನ ಮಂತ್ರಿಯವರು ನೀಡುವ ರಾಷ್ಟ್ರೀಯ ಕಾರ್ಯಸೂಚಿಗೆ ಹೊಂದುವಂತೆ ಅಭಿವೃದ್ಧಿಯ ಆದ್ಯತೆಗಳು, ರಂಗಗಳು ಮತ್ತು ಮಾರ್ಗಗಳ ಕುರಿತಾದ ಮುನ್ನೋಟವನ್ನು ರಚಿಸುವುದು. ಉದ್ದೇಶಗಳ ಪಟ್ಟಿಯ ಕೊನೆಯಲ್ಲಿ ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವ ಕಾರ್ಯವಿದೆ. ಇವುಗಳಲ್ಲದೆ, ಸಹಕಾರಾತ್ಮಕ ಒಕ್ಕೂಟ ವ್ಯವಸ್ಥೆಯ ಬೆಳವಣಿಗೆ, ರಾಷ್ಟ್ರೀಯ ಸುರಕ್ಷತೆ, ಅಭಿವೃದ್ಧಿಯಿಂದ ವಂಚಿತರಾದವರ ಬಗ್ಗೆ ಗಮನ, ಉದ್ಯಮಶೀಲತೆಗೆ ಪ್ರೋತ್ಸಾಹ, ಗ್ರಾಮೀಣ ಯೋಜನೆಗಳು ಮತ್ತು ಉತ್ತಮ ಆಡಳಿತ-ಮುಂತಾದ ವಿಷಯಗಳು ಪಟ್ಟಿಯಲ್ಲಿವೆ.
ನೀತಿ ಆಯೋಗದ ಸಾರಥ್ಯ
ದೇಶದ ಪ್ರಧಾನಿ ನೀತಿ ಆಯೋಗದ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಸರಕಾರವು ನೇಮಿಸಿದ ಪೂರ್ಣಕಾಲಿಕ ಉಪಾಧ್ಯಕ್ಷರು, ಓರ್ವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ರಾಜ್ಯಗಳ ಮುಖ್ಯಮಂತ್ರಿಗಳು, ಉಪರಾಜ್ಯಪಾಲರು, ತಜ್ಞರೂ ಸೇರಿದಂತೆ ಅನೇಕ ಸದಸ್ಯರನ್ನು ಮಂಡಳಿ ಒಳಗೊಂಡಿದೆ.
ಆಯೋಗ ಸ್ಥಾಪನೆಯಾದ ಮೊದಲ ಎರಡು ವರ್ಷ ಖ್ಯಾತ ಅರ್ಥಶಾಸ್ತ್ರಜ್ಞ ಗುಜರಾತ್ ಮೂಲದ ಅರವಿಂದ ಪಣಗಾರಿಯ ಉಪಾಧ್ಯಕ್ಷರಾಗಿದ್ದರು. ಅವರು ಆಗಸ್ಟ್ 2017ರಲ್ಲಿ ಅವಧಿಯ ಮೊದಲೇ ಪದತ್ಯಾಗ ಮಾಡಿ ತನ್ನ ಮಾತೃಸಂಸ್ಥೆ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ಮರಳಿದರು. (ಮೋದಿಯವರ ಮೊದಲನೆಯ ಕಾರ್ಯಾವಧಿಯಲ್ಲಿ ರಿಸರ್ವ್ ಬ್ಯಾಂಕಿನ ಇಬ್ಬರು ಗವರ್ನರ್‌ಗಳು, ಓರ್ವ ಉಪಗವರ್ನರ್ ಮತ್ತು ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷರು ಪದತ್ಯಾಗ ಮಾಡಿದ್ದರು ಇಲ್ಲವೇ ಅವರನ್ನು ಮುಂದಿನ ಅವಧಿಗೆ ಮರುನೇಮಿಸಿರಲಿಲ್ಲ ಎಂಬುದು ಗಮನಾರ್ಹ.) ಪಣಗಾರಿಯರ ಸ್ಥಾನಕ್ಕೆ ರಾಜೀವ್ ಕುಮಾರ್‌ರನ್ನು ಸೆಪ್ಟಂಬರ್ 2017ರಿಂದ ಎಪ್ರಿಲ್ 2022ರ ತನಕ ನೇಮಿಸಲಾಯಿತು. ಮೇ 2022ರಿಂದ ಸುಮನ್ ಬೆರಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಇವರೆಲ್ಲ ಅರ್ಥಶಾಸ್ತ್ರದಲ್ಲಿ ಖ್ಯಾತನಾಮರು.
ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಫೆಬ್ರವರಿ 2023ರಿಂದ ಬಿ.ವಿ.ಆರ್. ಸುಬ್ರಹ್ಮಣ್ಯಂ ಅಧಿಕಾರದಲ್ಲಿದ್ದಾರೆ, ಅವರ ಮೊದಲು ಅಮಿತಾಭ್ ಕಾಂತರು (ಫೆಬ್ರವರಿ, 2016 ಜೂನ್, 2022) ಮತ್ತು 2015ರಿಂದ 2016ರ ಅವಧಿಗೆ ಸಿಂಧುಶ್ರೀ ಖುಲ್ಲರ್ ಈ ಹುದ್ದೆಯಲ್ಲಿದ್ದರು. ಅವರೆಲ್ಲರೂ ಮಾಜಿ ಐಎಎಸ್ ಅಧಿಕಾರಿಗಳು.
ನೀತಿ ಆಯೋಗದ ಕಾರ್ಯಕ್ಷಮತೆ
2025 ಜನವರಿಗೆ ನೀತಿ ಆಯೋಗ ಸ್ಥಾಪನೆಗೊಂಡು ಒಂದು ದಶಕವೇ ಕಳೆದಿದೆ. ಸಂಸ್ಥೆಯ ಕಾರ್ಯವೈಖರಿ ಹೇಗೆ? ಮತ್ತು ಈ ಅವಧಿಯಲ್ಲಿ ಅದರ ಸಾಧನೆಗಳೇನು? ಈ ಪ್ರಶ್ನೆಗಳು ಚಿಂತನಾರ್ಹ.
ಹಿಂದಿನ ಯೋಜನಾ ಆಯೋಗಕ್ಕಿಂತ ಭಿನ್ನವಾದ ರೀತಿಯಲ್ಲಿ ನೀತಿ ಆಯೋಗದ ವ್ಯವಹಾರವು ನಡೆಯುತ್ತದೆ. ತನ್ನ ಜಾಲತಾಣದಲ್ಲಿ ಹೇಳಿಕೊಂಡಂತೆ ಆಯೋಗವು ಒಂದು ಚಿಂತಕರ ಚಾವಡಿ (Think Tank)-ಅಂದರೆ ಸರಕಾರಕ್ಕೆ ಸಲಹೆಗಳನ್ನು ನೀಡುವುದು ಅದರ ಪ್ರಮುಖ ಕೆಲಸ. ಇದರ ಜೊತೆಗೆ ನೀತಿ ಆಯೋಗವು ತನ್ನ ವಿವಿಧ ವಿಭಾಗಗಳ ಮೂಲಕ ದೇಶದ ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಹೊಂದಿದೆ.
ನೀತಿ ಆಯೋಗದ ಕಾರ್ಯವೈಖರಿಯ ಬಗ್ಗೆ ಅನೇಕ ತಜ್ಞರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರ ಪ್ರಮುಖ ಕೊರತೆ ಎಂದರೆ ಅದು ಸ್ವಾಯತ್ತೆ ಇಲ್ಲದ ಒಂದು ಸಂಸ್ಥೆ. ಪ್ರಧಾನಿ ಮೋದಿಯವರ ಯೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸುವುದಷ್ಟೆ ಅದರ ಕೆಲಸ ಎನ್ನಲಾಗುತ್ತದೆ. ಅದರ ಶಿಫಾರಸುಗಳು ಹೃಸ್ವಾವಧಿಯ ನೀತಿಯನ್ನು ರೂಪಿಸುವುದಕ್ಕೆ ಸೀಮಿತವಾಗಿವೆ ಮತ್ತು ಕೇಂದ್ರ ಸರಕಾರದ ಆದ್ಯತೆಗಳಿಗೆ ಪ್ರಾಶಸ್ತ್ಯ ನೀಡುತ್ತವೆ. ವಿವಿಧತೆಯೇ ಜೀವಾಳವಾಗಿರುವ ಒಂದು ದೇಶದಲ್ಲಿ ಓರ್ವ ವ್ಯಕ್ತಿ ಕೇಂದ್ರೀಕೃತ ನೀತಿಗಳು ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗುವುದು ಅಸಾಧ್ಯ.
ಎರಡನೆಯ ಕೊರತೆ ಎಂದರೆ, ದೇಶದ ಅರ್ಥವ್ಯವಸ್ಥೆಯ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರುವ ವಾರ್ಷಿಕ ಮುಂಗಡಪತ್ರವನ್ನು ತಯಾರಿಸುವಲ್ಲಿ ನೀತಿ ಆಯೋಗದ ಪಾತ್ರ ಗೌಣವಾಗಿದೆ. ಬದಲಾದ ಇಂದಿನ ಪರಿಸ್ಥಿತಿಯಲ್ಲಿ, ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಸರಕಾರದ ವಿವಿಧ ಮಂತ್ರಾಲಯಗಳ ಸಮಾನತೆಯು ಹಿಂದೆ ಸರಿದು, ಪ್ರಧಾನ ಮಂತ್ರಿಗಳ ಕಾರ್ಯಾಲಯವೇ (ಪಿಎಂಒ) ಸರ್ವೋಪರಿಯಾಗಿದೆ. ಹಣಕಾಸು ಸಚಿವಾಲಯವೂ ಬಹುತೇಕ ತನ್ನ ವೃತ್ತಿಪರತೆ ಮತ್ತು ಸ್ವಾಯತ್ತೆಯನ್ನು ಪಿಎಂಒಗೆ ಒತ್ತೆಯಿಟ್ಟಿದೆ.
ಇನ್ನೂ ಒಂದು ಕೊರತೆ ಎಂದರೆ ನೀತಿ ಆಯೋಗವಾಗಲಿ, ಕೇಂದ್ರ ಸರಕಾರವಾಗಲಿ ದೀರ್ಘಾವಧಿಯ ಅಭಿವೃದ್ಧಿಯ ಯೋಜನೆಗಳ ಬಗ್ಗೆ ತಲೆ ಹಾಕುತ್ತಿಲ್ಲ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಆರ್ಥಿಕತೆ ವಿಶ್ವದಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರಲಿದೆ, ದೇಶವು ಸ್ವತಂತ್ರವಾದ 100 ವರ್ಷಗಳಲ್ಲಿ ಅಂದರೆ 2047ರಲ್ಲಿ ವಿಕಸಿತ ಭಾರತವಾಗಲಿದೆ ಮುಂತಾದ ಘೋಷಣೆಗಳು ಸದಾ ಚಲಾವಣೆಯಲ್ಲಿ ಕೇಳಿಬರುತ್ತವೆ. ಆದರೆ ಅವುಗಳನ್ನು ಸಾಧಿಸುವ ನಿರ್ದಿಷ್ಟವಾದ ಕಾರ್ಯಪ್ರಣಾಳಿಕೆ ಯಾವುದು ಎಂಬುದರ ಬಗ್ಗೆ ಚಿಂತಕರ ಚಾವಡಿಯ ಕೊಡುಗೆ ಸ್ಪಷ್ಟವಿಲ್ಲ.
ಪ್ರಧಾನ ಮಂತ್ರಿಯವರು ಸೂಚಿಸಿದ ಕಾರ್ಯಕ್ರಮಗಳಿಗೆ ನೀತಿ ಆಯೋಗವು ರೂಪರೇಷೆಯನ್ನು ನೀಡಬೇಕು. ತಾನಾಗಿ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ದೇಶದ ಆರ್ಥಿಕ ಪ್ರಗತಿ ಎಷ್ಟು ಆಗಬೇಕು, ಅದನ್ನು ಸಾಧಿಸಲು ಯಾವ ತಂತ್ರಗಾರಿಕೆಯನ್ನು ಹೆಣೆಯಬೇಕು, ಯಾವ ಯಾವ ರಂಗಕ್ಕೆ ಆದ್ಯತೆ ನೀಡಬೇಕು, ಸಾಮಾಜಿಕ ನ್ಯಾಯ ದೊರಕಿಸಲು ಮಾರ್ಗಗಳೇನು, ಪ್ರಾದೇಶಿಕ ಅಸಮತೋಲನದ ನಿವಾರಣೆ ಹೇಗೆ, ಅಗತ್ಯದ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದು ಹೇಗೆ ಮುಂತಾದ ವಿಷಯಗಳ ಬಗ್ಗೆ ಯೋಜನೆಗಳನ್ನು ರೂಪಿಸುವ ಬಾಧ್ಯತೆ ನೀತಿ ಆಯೋಗಕ್ಕೆ ಇಲ್ಲ.
ಪಿಎಂಒ ಕೇಂದ್ರಿತ ಸಂಸ್ಥೆಯಾಗಿರುವಾಗ ನೀತಿ ಆಯೋಗದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳ ಪಾತ್ರ ಏನು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಏಳುತ್ತದೆ. ರಾಜ್ಯಗಳ ಅಭಿವೃದ್ಧಿ, ವಿಶೇಷ ಸಮಸ್ಯೆಗಳಿಗೆ ದೀರ್ಘಾವಧಿಯ ಸಹಾಯ ಮತ್ತು ಪ್ರಾಕೃತಿಕ ವಿಕೋಪಗಳಿಗೆ ಪರಿಹಾರ ಯೋಜನೆಗಳು-ಇವುಗಳ ಕುರಿತಾದ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರ ಹಾಗೂ ನೀತಿ ಆಯೋಗವು ಅನುಸರಿಸುತ್ತಿರುವ ಧೋರಣೆಗಳ ಬಗ್ಗೆಯೂ ಅನೇಕ ರಾಜ್ಯಗಳು ಅಸಮಾಧಾನವನ್ನು ಹೊರಹಾಕಿವೆ. ಆಯೋಗದ ಆಡಳಿತ ಮಂಡಳಿಯ ಸಭೆಯಿಂದ ಹಲವು ಬಾರಿ ರಾಜ್ಯಗಳ ಮುಖ್ಯಮಂತ್ರಿಗಳು ಹೊರಗೆ ಉಳಿದಿದ್ದಾರೆ.
ನೀತಿ ಆಯೋಗಕ್ಕೆ ಹೋಲಿಸಿದರೆ, ಹಿಂದಿನ ಯೋಜನಾ ಆಯೋಗದ ಕಾರ್ಯವೈಖರಿ ಮತ್ತು ಗುರಿಗಳು ಸ್ಪಷ್ಟವಾಗಿದ್ದವು, ಪ್ರಗತಿಗೆ ಅಗತ್ಯವಾದ ನಿರ್ದಿಷ್ಟ ಯೋಜನೆಗಳನ್ನು ನಿರೂಪಿಸಿ ವಿಸ್ತೃತ ಚರ್ಚೆಗೆ ಒಳಪಡಿಸಿ ಅನುಷ್ಠಾನಗೊಳಿಸುವುದು ಅದರ ಜವಾಬ್ದಾರಿಯಾಗಿತ್ತು. ಯೋಜನಾ ಆಯೋಗದ ಅಧ್ಯಕ್ಷರ ನೆಲೆಯಲ್ಲಿ ಪ್ರಧಾನ ಮಂತ್ರಿಯ ಪಾತ್ರ ಔಪಚಾರಿಕವಾಗಿತ್ತು.
ಆರ್ಥಿಕ ಬಿಕ್ಕಟ್ಟುಗಳು ಮತ್ತು ನೀತಿ ಆಯೋಗದ ಪ್ರತಿಕ್ರಿಯೆಗಳು
ಕೆಲವು ಗಂಭೀರ ಬೆಳವಣಿಗೆಗಳು ಮತ್ತು ಸರಕಾರದ ನಿರ್ಧಾರಗಳಿಂದಾಗಿ ಉಂಟಾದ ಆರ್ಥಿಕ ಸಮಸ್ಯೆಗಳ ಕುರಿತಂತೆಯೂ ನೀತಿ ಆಯೋಗವು ತಟಸ್ಥವಾಗಿತ್ತು.
2016ರಲ್ಲಿ ಪ್ರಧಾನಿಯವರು ಏಕಪಕ್ಷೀಯವಾಗಿ ಘೋಷಿಸಿದ ನೋಟು ರದ್ದತಿಯು ಅರ್ಥವ್ಯವಸ್ಥೆಯ ಮೇಲೆ ಮಾರಕ ಹೊಡೆತವನ್ನು ನೀಡಿತ್ತು ಎಂಬುದು ಸರ್ವವಿದಿತ. ಆರ್ಥಿಕ ಸಲಹಾ ಸಂಸ್ಥೆಯಾಗಿರುವ ಚಿಂತಕರ ಚಾವಡಿ ಈ ಬಗ್ಗೆ ಏನು ಸಲಹೆ ನೀಡಿತ್ತು? ಅದರಿಂದಾದ ಹಾನಿಯನ್ನು ಸರಿಪಡಿಸುವಲ್ಲಿ ಏನು ಕಾರ್ಯಕ್ರಮವನ್ನು ಶಿಫಾರಸು ಮಾಡಿತ್ತು?
2017ರಲ್ಲಿ ಜಾರಿಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಕಾನೂನು ಸಾವಿರಾರು ಸಣ್ಣ ಉದ್ದಿಮೆಗಳ ಮುಳುಗಡೆಗೆ ಕಾರಣವಾಗಿತ್ತು. ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾದರು. ಜಿಎಸ್‌ಟಿ ತೆರಿಗೆಗಳ ದರದ ಬಗೆಗೂ ಅನೇಕ ದೂರುಗಳು ಬಂದಿದ್ದವು. ದೇಶದ ಆರ್ಥಿಕ ಪ್ರಗತಿ ಕಾರ್ಯಕ್ರಮಗಳಿಗೆ ಅಗತ್ಯವಾದ ಸಂಪನ್ಮೂಲಗಳ ಜೋಡಣೆಯ ಮೇಲೆ ಮತ್ತು ಆರ್ಥಿಕತೆಯ ಮೇಲೆ ಮಾರಕ ಹೊಡೆತ ನೀಡಿದ ತೆರಿಗೆ ನೀತಿಯ ಬಗ್ಗೆ ನೀತಿ ಆಯೋಗವೇಕೆ ಮೌನವಾಗಿತ್ತು?
ಕೋವಿಡ್ ಮಹಾಮಾರಿ ಹರಡುತ್ತಿದ್ದಾಗ 2020ರ ಮಾರ್ಚ್ ತಿಂಗಳಲ್ಲಿ ಕೇವಲ ನಾಲ್ಕು ಗಂಟೆಗಳ ಸೂಚನೆ ನೀಡಿ ದೇಶದಾದ್ಯಂತ ಲಾಕ್‌ಡೌನ್ ಹೇರಿ ಇಡೀ ದೇಶದ ಆರ್ಥಿಕತೆಗೆ ಮಾರಣಾಂತಿಕ ಆಘಾತವನ್ನು ಮೋದಿ ಸರಕಾರವು ನೀಡಿತು. ಲಕ್ಷಾಂತರ ಕೂಲಿ ಕಾರ್ಮಿಕರು ಬದುಕುವ ದಾರಿ ಕಳಕೊಂಡು ಮರುವಲಸೆ ಹೋದರು. ಸರಕಾರದ ನಿರ್ಧಾರದ ಪರಿಣಾಮಗಳನ್ನು ನೀತಿ ಆಯೋಗದ ಜೊತೆ ಪ್ರಧಾನಿ ಚರ್ಚಿಸಿದರೇ? ಲಾಕ್‌ಡೌನ್ ಬಳಿಕ ದೇಶದ ಆರ್ಥಿಕ ಚೇತರಿಕೆಗೆ ನೀತಿ ಆಯೋಗವು ಸೂಚಿಸಿದ ಮಾರ್ಗಗಳೇನು?
ದೇಶದ ಹಣಕಾಸು ರಂಗವು ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸುವುದು ಮಾತ್ರವಲ್ಲದೆ ಹಣಕಾಸಿನ ಸಹಾಯ ಯಾರಿಗೆ ಅತೀ ಅಗತ್ಯವೋ ಅವರಿಗೆ ಸುಲಭದಲ್ಲಿ ಅದನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ಭೂಮಿಕೆಯನ್ನು ಫಲಪ್ರದವಾಗಿ ನಿಭಾಯಿಸಲು ಬ್ಯಾಂಕುಗಳು ಸಾರ್ವಜನಿಕ ಹತೋಟಿಯಲ್ಲಿಯೇ ಇರಬೇಕು. ಆದರೆ ನೀತಿ ಆಯೋಗವು ಇತ್ತೀಚೆಗಷ್ಟೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳನ್ನು ಮತ್ತೆ ವಿಲೀನಗೊಳಿಸಿ ಆರೋಗ್ಯಕರ ಸ್ಪರ್ಧೆಯ ಬದಲು ಏಕಸ್ವಾಮ್ಯಕ್ಕೆ ಪ್ರೋತ್ಸಾಹ ನೀಡಿ ಕಾಲಕ್ರಮೇಣ ಖಾಸಗಿ ರಂಗಕ್ಕೆ ಅವುಗಳ ಸ್ವಾಮ್ಯವನ್ನು ಹಸ್ತಾಂತರಿಸುವ ಸಲಹೆಯನ್ನು ಕೊಟ್ಟಿದೆ.
ಈ ಪ್ರಕ್ರಿಯೆಯು ಎರಡು ವಿಧದಲ್ಲಿ ನಮ್ಮ ಅರ್ಥವ್ಯವಸ್ಥೆಗೆ ಹೊಡೆತ ನೀಡಬಲ್ಲುದು. ಬ್ಯಾಂಕುಗಳು ದೊಡ್ಡದಾದಾಗ ಅವುಗಳು ದಿವಾಳಿಯಾಗುವ ಸಂದರ್ಭದಲ್ಲಿ ಸಂಭವಿಸುವ ಹಾನಿ ಅಪಾರ. ದೊಡ್ಡ ಬ್ಯಾಂಕಿನ ದಿವಾಳಿಯು ಆರ್ಥಿಕ ಅಭದ್ರತೆಯನ್ನು ಹುಟ್ಟುಹಾಕಬಹುದು. ಎರಡನೆಯದಾಗಿ ಲಾಭದಾಯಕತೆಯೇ ಗುರಿಯಾಗುವ ಹಣಕಾಸು ಸಂಸ್ಥೆಗಳು ಸಮಾಜದಲ್ಲಿರುವ ವಂಚಿತ ವರ್ಗಗಳ, ನವೋದ್ದಿಮೆಗಳ, ಸಣ್ಣ ಕೃಷಿಕರ, ಸ್ವಯಂ ಉದ್ಯೋಗಿಗಳ ಹಣಕಾಸು ಬೇಡಿಕೆಗಳನ್ನು ಪುರಸ್ಕರಿಸಲು ಹಿಂದೇಟು ಹಾಕಬಹುದು. ಇವೆರಡು ದೇಶದ ಆರ್ಥಿಕತೆಯ ಮುನ್ನಡೆಗೆ ಹಾನಿಯನ್ನು ಉಂಟುಮಾಡಬಹುದು. ನೀತಿ ಆಯೋಗದ ಶಿಫಾರಸುಗಳು ಈ ದೃಷ್ಟಿಯಿಂದ ಪ್ರಶ್ನಾರ್ಹ.
ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಚಿಂತನೆ ಹಾಗೂ ಅಭಿವೃದ್ಧಿಯ ಪರಿಕಲ್ಪನೆಗಳು ವಾಸ್ತವದ ನಿಖರವಾದ ಅರಿವು ಆಳವಾದ ಮನನ ಮತ್ತು ಮುಕ್ತಮನಸ್ಸಿನ ಚರ್ಚೆಗಳ ಮೂಲಕ ಹೊರಹೊಮ್ಮಬೇಕು, ಯಾವುದೇ ಪೂರ್ವಗ್ರಹದಿಂದ ಮುಕ್ತವಾಗಿರಬೇಕು. ನೀತಿ ಆಯೋಗದ ರಚನೆಯ ಹಿನ್ನೆಲೆ ಮತ್ತು ಅದರ ಕಾರ್ಯವೈಖರಿ ಈ ಮೂಲ ತತ್ವಕ್ಕೆ ವಿರುದ್ಧವಾಗಿದೆ. ಹಿಂದಿನ ಯೋಜನಾ ಆಯೋಗವನ್ನು ಪಳೆಯುಳಿಕೆ ಎಂದು ಬಿಂಬಿಸಿದ ಮೋದಿ ಸರಕಾರವು ತನ್ನ ರಾಜಪತ್ರದಲ್ಲಿ ಮತ್ತು ನೀತಿ ಆಯೋಗದ ದಾಖಲೆಗಳಲ್ಲಿ ಯೋಜನೆಗಳ ಮೂಲಕ ಭಾರತವು ಮಾಡಿದ ಆರ್ಥಿಕ ಸಾಧನೆಯನ್ನು ಹೆಸರಿಸಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಸ್ಥಾಪಿಸಿದ ನೀತಿ ಆಯೋಗವು ತನ್ನ ಅಸ್ತಿತ್ವದ 11 ವರ್ಷಗಳಲ್ಲಿ ಏನು ಕೊಡುಗೆ ನೀಡಿದೆ ಎಂಬುದರ ಮೌಲ್ಯಮಾಪನ ಮಾಡಿದರೆ ದೇಶದ ಗಂಭೀರ ಸವಾಲುಗಳನ್ನು ಎದುರಿಸುವ ದಾರಿಯನ್ನು ತೋರಿಸುವಲ್ಲಿ ಅದು ಶಕ್ತವಾಗಿಲ್ಲ ಎಂಬುದು ಕಟು ವಾಸ್ತವ. ಅದರ ಕುರಿತು ಆಯೋಗವೂ ಕೇಂದ್ರ ಸರಕಾರವೂ ಆತ್ಮಾವಲೋಕನವನ್ನು ಮಾಡಬೇಕು.