×
Ad

ಹಿಂದುಳಿದ ವರ್ಗಗಳ ಏಕೀಕರಣ

ತೆಲುಗು ದೇಶಂ ಪಕ್ಷವು ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಸಮುದಾಯದ ಮತಗಳ ಬಹು ಭಾಗವನ್ನು ಕ್ರೋಡೀಕರಿಸಿದ ಖ್ಯಾತಿಯನ್ನು ಹೊಂದಿತ್ತು. ತೆಲಂಗಾಣ ರಚನೆಯ ನಂತರ ಈ ಮತಗಳು ಚದುರಿ ಹೋದವು. ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಹೆಚ್ಚಿನ ಸಂಖ್ಯೆ ಮತದಾರರು ವಹಿಸುವ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ, ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ಸಮುದಾಯವನ್ನು ಆಕರ್ಷಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿವೆ.

Update: 2025-03-02 11:52 IST

ತೆಲಂಗಾಣ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮತ್ತು ಜಾತಿಗಳ ಸ್ಥಿತಿ-ಗತಿಗಳನ್ನು ನಿರ್ಣಯಿಸಲು ಸಮಗ್ರ ಕುಟುಂಬ ಸಮೀಕ್ಷೆಯನ್ನು ನಡೆಸಿದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದವರಲ್ಲಿ ತನ್ನ ನೆಲೆಯನ್ನು ಬಲಪಡಿಸುವ ಸವಾಲಿನ ಕೆಲಸವನ್ನು ಕಾಂಗ್ರೆಸ್ ಸರಕಾರ ಎದುರಿಸುತ್ತಿದೆ.

ಸುಮಾರು ಎರಡು ತಿಂಗಳ ಕಾಲ ನಡೆದ ಸಮೀಕ್ಷೆಯ ಪ್ರಕಾರ ಹಿಂದುಳಿದ ವರ್ಗಗಳ ಜನಸಂಖ್ಯೆಯು ಶೇ. 56.33ರಷ್ಟಿದೆ. 94,261 ಗಣತಿ ಬ್ಲಾಕ್‌ಗಳಲ್ಲಿ ತಲಾ 150 ಮನೆಗಳನ್ನು, 1.03 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ಒಳಗೊಂಡ ಸಮೀಕ್ಷೆಯು, ರಾಜ್ಯದ 3.7 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳು ಶೇ. 17.43 ಮತ್ತು ಪರಿಶಿಷ್ಟ ಪಂಗಡಗಳು 10.4 ರಷ್ಟಿವೆ ಎಂದು ಹೇಳುತ್ತದೆ. ಉಳಿದ ಶೇ. 15.79ರಷ್ಟು ಇತರ ಜಾತಿಗಳು ಒಳಗೊಂಡಿವೆ.

ಸಮೀಕ್ಷೆಯ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿದಾಗ ಭಾರತ ರಾಷ್ಟ್ರ ಸಮಿತಿ ಮತ್ತು ಭಾರತೀಯ ಜನತಾ ಪಕ್ಷಗಳು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿ ಶಾಸಕಿ ಪಾಯಲ್ ಶಂಕರ್ ಅವರು, ಧಾರ್ಮಿಕ ಆಧಾರದ ಮೇಲೆ ಹಿಂದುಳಿದ ವರ್ಗಗಳನ್ನು ವರ್ಗೀಕರಿಸಲು ಇದು ಸಾಂವಿಧಾನಿಕವಾಗಿ ಮಾನ್ಯವಾಗಿದೆಯೇ ಎಂದು ಆಶ್ಚರ್ಯಪಟ್ಟರು. (ಶೇ.46.25 ಹಿಂದೂ ಸಮುದಾಯದಲ್ಲಿನ ಹಿಂದುಳಿದ ವರ್ಗಗಳು ಮತ್ತು 10.08ರಷ್ಟು ಮುಸ್ಲಿಮ್ ಸಮುದಾಯದಲ್ಲಿನ ಹಿಂದುಳಿದ ವರ್ಗಗಳು). ಸಮೀಕ್ಷೆಯ ವರದಿಯನ್ನು 2014ರಲ್ಲಿ ಒಂದೇ ದಿನದಲ್ಲಿ ಹಿಂದಿನ ಬಿಆರ್‌ಎಸ್ ಸರಕಾರ (ಆಗ ತೆಲಂಗಾಣ ರಾಷ್ಟ್ರ ಸಮಿತಿ ಸರಕಾರ ಎಂದು ಕರೆಯಲಾಗುತ್ತಿತ್ತು) ನಡೆಸಿದ ಮನೆ- ಮನೆ ಅಧ್ಯಯನದ ಸಮಗ್ರ ಕುಟುಂಬ ಸಮೀಕ್ಷೆಯೊಂದಿಗೆ ಹೋಲಿಸಿದಾಗ, ಬಿಆರ್‌ಎಸ್ ಸದಸ್ಯರು ತಗಾದೆ ಮಾಡಿ, ಇತರ ಜಾತಿಗಳ ಸಂಖ್ಯೆಯಲ್ಲಿನ ಏರಿಕೆ ಆಗಿರುವುದು ಮತ್ತು ಹಿಂದುಳಿದ ವರ್ಗಗಳಲ್ಲಿ ಕುಸಿತವಾಗಿರುವುದನ್ನು ಸರಕಾರದ ಗಮನಕ್ಕೆ ತಂದು, ಸಮೀಕ್ಷೆಯನ್ನು ಟೀಕಿಸಿದರು.

ಹಿಂದಿನ ಸರಕಾರದ ಸಮೀಕ್ಷೆಗೆ ಯಾವುದೇ ಪಾವಿತ್ರ್ಯವಿಲ್ಲ ಎಂದು ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ. ಏಕೆಂದರೆ ಅದನ್ನು ವಿಧಾನಸಭೆಯಲ್ಲಿ ಮಂಡಿಸಿರಲಿಲ್ಲ ಮತ್ತು ಸಚಿವ ಸಂಪುಟವೂ ಅನುಮೋದಿಸಿರಲಿಲ್ಲ. ಈ ಸಮೀಕ್ಷೆಯು ಕೇವಲ ದತ್ತಾಂಶ ಸಂಗ್ರಹದ ಕಸರತ್ತಲ್ಲ, ಬದಲಾಗಿ ಸಾಮಾಜಿಕ ನ್ಯಾಯದಲ್ಲಿ ಒಂದು ಕ್ರಾಂತಿಯೇ ಆಗಿದ್ದು, ಅತ್ಯಂತ ದುರ್ಬಲ ವರ್ಗಗಳು ಅರ್ಹವಾದ ಪ್ರಯೋಜನಗಳನ್ನು ಸರಕಾರದಿಂದ ಪಡೆಯುವುದನ್ನು ಖಚಿತಪಡಿಸುತ್ತದೆ.

ಸಮೀಕ್ಷೆಯ ಫಲಿತಾಂಶಗಳ ನಂತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.42ರಷ್ಟು ಮೀಸಲಾತಿ ನೀಡಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿಪಾದಿಸಿದರು ಮತ್ತು ವಿರೋಧ ಪಕ್ಷಗಳು ಅದೇ ಸಂಖ್ಯೆಯ ಸ್ಥಾನಗಳನ್ನು ಹಂಚಿಕೆ ಮಾಡಲು ಸವಾಲು ಹಾಕಿದರು.

ಇದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಮೀಸಲಾತಿ ಜಾರಿಗೆ ತರಲು ಸಾಧ್ಯವೇ ಎಂಬ ಪ್ರಶ್ನೆಗಳನ್ನು ಮತ್ತೊಮ್ಮೆ ಹುಟ್ಟುಹಾಕುತ್ತದೆ. ನಿವೃತ್ತ ಅಧಿಕಾರಿ ಬುಸಾನಿ ವೆಂಕಟೇಶ್ವರಲು ನೇತೃತ್ವದ ಸಮರ್ಪಿತ ಆಯೋಗವು ಸರ್ವೋಚ್ಚ ನ್ಯಾಯಾಲಯ ನಿಗದಿಪಡಿಸಿದ ಶೇ. 50ರ ಮಿತಿಯನ್ನು ಮೀರದೆ ಕನಿಷ್ಠ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲಾತಿಯನ್ನು ಒದಗಿಸುವ ವಿಧಾನವನ್ನು ತೋರಿಸಿದೆ ಎಂದು ಹೇಳಲಾಗುತ್ತದೆ.

ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ, ಆಯೋಗವು 12,751 ಗ್ರಾಮ ಪಂಚಾಯತ್‌ಗಳಲ್ಲಿ 2,458 ಗ್ರಾಮ ಪಂಚಾಯತ್‌ಗಳನ್ನು ಚುನಾವಣೆಗೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದೆ. ಅವುಗಳಲ್ಲಿ 1,281 ಏಜೆನ್ಸಿ ಪ್ರದೇಶಗಳಲ್ಲಿರುವವುಗಳನ್ನು ಸೇರಿಸಿ ಮತ್ತು ಶೇ.100ರಷ್ಟು ಪರಿಶಿಷ್ಟ ಪಂಗಡಗಳ ಜನಸಂಖ್ಯೆಯನ್ನು ಹೊಂದಿರುವ 1,177 ಗ್ರಾಮ ಪಂಚಾಯತ್‌ಗಳನ್ನು, 10,293 ಗ್ರಾಮ ಪಂಚಾಯತ್‌ಗಳನ್ನು ಬಿಟ್ಟು, ಸಾಂವಿಧಾನಿಕ ಆದೇಶಕ್ಕೆ ಅನುಗುಣವಾಗಿ ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ.ಇವುಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ 688 ಮತ್ತು ಪರಿಶಿಷ್ಟ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ 2,113 ಅನ್ನು ನೀಡಲಾಗಿದೆ. ಈ ಪಂಚಾಯತ್‌ಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ. 42ರಷ್ಟು ಕೋಟಾವನ್ನು ಸರಕಾರವು ನೀಡಿರುವ ಭರವಸೆಯಂತೆ, 4,200 ಅನ್ನು ಈ ಸಮುದಾಯಗಳಿಗೆ ಪ್ರತ್ಯೇಕವಾಗಿ ಹಂಚಿಕೆ ಮಾಡಬಹುದು.

ವಾರ್ಡುಗಳು, ಗ್ರಾಮ ಪಂಚಾಯತ್‌ಗಳು, ಮಂಡಲ ಪರಿಷತ್ ಪ್ರಾದೇಶಿಕ ಕ್ಷೇತ್ರಗಳು, ಮಂಡಲ ಪ್ರಜಾಪರಿಷತ್ ಅಧ್ಯಕ್ಷರು, ಜಿಲ್ಲಾ ಪರಿಷತ್ ಪ್ರಾದೇಶಿಕ ಕ್ಷೇತ್ರಗಳು, ಜಿಲ್ಲಾ ಪರಿಷತ್ ಅಧ್ಯಕ್ಷರುಗಳಿಗೆ ಮೀಸಲಾತಿಯನ್ನು ಅಂತಿಮಗೊಳಿಸಬೇಕು ಎಂದು ಆಯೋಗ ಸೂಚಿಸಿದೆ. ಕಾನೂನು ತೊಡಕುಗಳಿಗೆ ಅವಕಾಶವಿಲ್ಲದ ಕಾರಣ ಆಯಾ ಗ್ರಾಮ ಪಂಚಾಯತ್‌ಗಳಲ್ಲಿನ ಹಿಂದುಳಿದ ವರ್ಗಗಳ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಅಂತಿಮಗೊಳಿಸಬಹುದು.

ಈ ಸಮೀಕ್ಷೆಯನ್ನು ಕೆಲವರು ಸರಕಾರವು ಹಿಂದುಳಿದ ವರ್ಗಗಳನ್ನು ಓಲೈಸಲು ಕೈಗೊಂಡಿರುವ ಒಂದು ಪ್ರಮುಖ ಉಪಕ್ರಮವೆಂದು ಪರಿಗಣಿಸುತ್ತಿದ್ದಾರೆ. ತೆಲುಗು ದೇಶಂ ಪಕ್ಷವು ಹಿಂದಿನ ಅವಿಭಜಿತ ಆಂಧ್ರಪ್ರದೇಶದಲ್ಲಿ ಸಮುದಾಯದ ಮತಗಳ ಬಹು ಭಾಗವನ್ನು ಕ್ರೋಡೀಕರಿಸಿದ ಖ್ಯಾತಿಯನ್ನು ಹೊಂದಿತ್ತು. ತೆಲಂಗಾಣ ರಚನೆಯ ನಂತರ ಈ ಮತಗಳು ಚದುರಿ ಹೋದವು. ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಹೆಚ್ಚಿನ ಸಂಖ್ಯೆ ಮತದಾರರು ವಹಿಸುವ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ, ಎಲ್ಲಾ ರಾಜಕೀಯ ಪಕ್ಷಗಳು ಹಿಂದುಳಿದ ಸಮುದಾಯವನ್ನು ಆಕರ್ಷಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿವೆ. ಕಾಂಗ್ರೆಸ್ ಪಕ್ಷವು ಸಾಕ್ಷ್ಯಾಧಾರಿತ ನೀತಿಗಳನ್ನು ರೂಪಿಸುವ ಉದ್ದೇಶಗಳನ್ನು ಬಹಿರಂಗಪಡಿಸಿದ್ದರೂ, ಬಿಜೆಪಿ ಮಾತ್ರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಮತ್ತು ಸಂಸದ ಈತಲ ರಾಜೇಂದ್ರ ಅವರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಬಿಂಬಿಸುತ್ತಿದೆ. ಆದರೂ, ಸಮಗ್ರ ಕುಟುಂಬ ಸಮೀಕ್ಷೆಯನ್ನು ನಡೆಸಿದ ನಂತರ ಹಿಂದುಳಿದ ವರ್ಗಗಳ ದತ್ತಾಂಶಗಳಿದ್ದರೂ, ಬಿಆರ್‌ಎಸ್ ಪಕ್ಷ ಯಾವುದೇ ಉಪಕ್ರಮಗಳನ್ನು ಘೋಷಿಸಿಲ್ಲ ಮತ್ತು ಈ ಸಮುದಾಯದ ಮತಗಳನ್ನು ಸೆಳೆಯಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಬೇಕಾಗುತ್ತದೆ.

(ಕೃಪೆ: ದಿ ಹಿಂದೂ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ. ರಾಜೀವ್

contributor

Contributor - ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ

contributor

Similar News