ಒಳ ಮೀಸಲಾತಿ; ಸ್ಪೃಶ್ಯ - ಅಸ್ಪೃಶ್ಯ ಪದಬಳಕೆಯ ವಿವಾದ
ಸುಪ್ರೀಂಕೋರ್ಟ್‌ನ ಒಳ ಮೀಸಲಾತಿ ತೀರ್ಪು ಪರಿಶಿಷ್ಟ ಜಾತಿಗಳೊಳಗಿನ ಸಮಾನ ಹಂಚಿಕೆಗೆ ದಾರಿ ತೆರೆದಿದ್ದು, ಸಾಮಾಜಿಕ ನ್ಯಾಯದತ್ತ ಪ್ರಗತಿಪರ ಹೆಜ್ಜೆಯಾಗಿದೆ. ಆದರೆ ಇದೇ ಸಮಯದಲ್ಲಿ, ಸಂವಿಧಾನವೇ ರದ್ದುಪಡಿಸಿದ ‘ಸ್ಪಶ್ಯ-ಅಸ್ಪಶ್ಯ’ ಎಂಬ ಕಳಂಕಿತ ಪದಗಳನ್ನು ಮತ್ತೆ ಪರಿಚಯಿಸುವುದು ಅಪಾಯಕಾರಿ. ಧಾರ್ಮಿಕ ಕಳಂಕದಿಂದ ‘ಅಸ್ಪಶ್ಯರು’ ಎಂದೂ, ವಸಾಹತು ಕಾನೂನಿನಿಂದ ‘ಅಪರಾಧಿ ಬುಡಕಟ್ಟುಗಳು’ ಎಂದೂ ಬಿಂಬಿಸಲ್ಪಟ್ಟ ಎಲ್ಲಾ ಸಮುದಾಯಗಳು ಒಂದೇ ರೀತಿಯ ಸಾಂವಿಧಾನಿಕ ರಕ್ಷಣೆಯನ್ನು ಮತ್ತು ಮಾನವ ಘನತೆಯನ್ನು ಹೊಂದಿವೆ.
ಒಳ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದಂತೆ ಭಾರತದ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪು ಐತಿಹಾಸಿಕ ಬದಲಾವಣೆಗೆ ನಾಂದಿ ಹಾಡಿದೆ.
ಇದಕ್ಕೆ ಕರ್ನಾಟಕ ಸರಕಾರವು ತ್ವರಿತವಾಗಿ ಸ್ಪಂದಿಸಿ, ಕೇವಲ ಒಂದು ವರ್ಷ ಇಪ್ಪತ್ತಾರು ದಿನಗಳಲ್ಲಿ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗದಿಂದ ವರದಿ ಪಡೆದು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತಂದಿದೆ ಹಾಗೂ ಈ ಬಗ್ಗೆ ಶಾಶ್ವತ ಆಯೋಗವನ್ನು ರಚಿಸಿದೆ.
ಒಳ ಮೀಸಲಾತಿಯ ತತ್ವವು ಸಾಂವಿಧಾನಿಕವಾಗಿ ಈಗ ಮಾನ್ಯವಾಗಿದೆ. ಇದು ನೈತಿಕವಾಗಿ ಸಮರ್ಥನೀಯವಾಗಿದ್ದರೂ, ಆಯೋಗದ ವರದಿಯಲ್ಲಿ ವಿಶೇಷವಾಗಿ ಬಳಸಲಾದ ‘ಸ್ಪಶ್ಯ’ ಮತ್ತು ‘ಅಸ್ಪಶ್ಯ’ ಎಂಬ ಪದಗಳು ಗಂಭೀರ ಕಳವಳಗಳನ್ನು ಉಂಟುಮಾಡಿವೆ.
ಐತಿಹಾಸಿಕ ದೃಷ್ಟಿಕೋನದಿಂದ ನೋಡುವುದಾದರೆ ಭಾರತದಲ್ಲಿ ಸಮುದಾಯಗಳನ್ನು ಹೊರಗಿಡುವಿಕೆಯ ಇತಿಹಾಸವು ಮೇಲ್ವರ್ಗ ಮತ್ತು ಅಧಿಕಾರದ ಶಕ್ತಿಗಳನ್ನು ಅವಲಂಬಿಸಿ ವಿಭಿನ್ನ ರೂಪಗಳನ್ನು ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಮಾದಿಗ ಮತ್ತು ಹೊಲೆಯ ಸಮುದಾಯಗಳನ್ನು ಸಾಂಪ್ರದಾಯಿಕವಾಗಿ ಹಿಂದೂ ವರ್ಣ-ಜಾತಿ ಕ್ರಮದಲ್ಲಿ ‘ಅಸ್ಪಶ್ಯರು’ ಎಂದು ಪರಿಗಣಿಸಲಾಗಿತ್ತು. ಚರ್ಮದ ಕೆಲಸ, ಮಲಹೊರುವ, ಸತ್ತ ಪ್ರಾಣಿಗಳನ್ನು ಒಪ್ಪಮಾಡುವಂಥ ಕೀಳುಮಟ್ಟದ ಅನೈರ್ಮಲ್ಯ ಕಾಯಕಕ್ಕೆ ಸೀಮಿತವಾದ ಮತ್ತು ಜೀತದಂಥ ಗುಲಾಮಚಾಕರಿ ಹಾಗೂ ಕೃಷಿ ಕಾರ್ಮಿಕರಾಗಿ ಬದುಕಬೇಕಾದ ಈ ಸಮುದಾಯಗಳ ಸಂಬಂಧವು ಅವರನ್ನು ಧಾರ್ಮಿಕವಾಗಿ ಅಶುದ್ಧರು ಎಂದು ಬ್ರಾಂಡ್ ಮಾಡಲು ಮತ್ತು ಸಮಾಜದ ಮುಖ್ಯವಾಹಿನಿಯಿಂದ ವ್ಯವಸ್ಥಿತವಾಗಿ ಹೊರಗಿಡಲು ಕಾರಣವಾಯಿತು.
ಅಂತೆಯೇ ಬಂಜಾರ, ಭೋವಿ, ಕೊರಚ, ಕೊರಮ ಮತ್ತು ಇತರ ಅಲೆಮಾರಿ ಅಥವಾ ಅರೆ ಅಲೆಮಾರಿ ಗುಂಪುಗಳು ವಿಭಿನ್ನ ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದರು. ಅವರನ್ನು ಪ್ರಾಥಮಿಕವಾಗಿ ‘ಅಸ್ಪಶ್ಯರು’ ಎಂದು ಲೇಬಲ್ ಮಾಡಲಾಗಿಲ್ಲ. ಏಕೆಂದರೆ, ನಾಗರಿಕ ಸಮಾಜದ ಮುಖ್ಯವಾಹಿನಿಗೆ ಬರದೇ ಅವರು ಪ್ರತ್ಯೇಕವಾಗಿಯೇ ಬದುಕು ನಡೆಸಿದರು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ, ಅವರನ್ನು 1871ರ ಕುಖ್ಯಾತ ಕ್ರಿಮಿನಲ್ ಟ್ರೈಬ್ಸ್ ಆಕ್ಟ್ ಅಡಿಯಲ್ಲಿ ತಂದು ‘ಆನುವಂಶಿಕ ಅಪರಾಧಿಗಳು’ ಎಂದು ವರ್ಗೀಕರಿಸಲಾಯಿತು. ಇದು ಧಾರ್ಮಿಕ ಶುದ್ಧತೆಯ ಕಾರಣದಿಂದ ಹೊರಗಿಡುವ ಶುದ್ಧತೆಯಾಗಿರದೆ ವಸಾಹತುಶಾಹಿಯ ಕಣ್ಗಾವಲು ಮತ್ತು ಆಡಳಿತಾತ್ಮಕ ನಿಯಂತ್ರಣದ ಉದ್ದೇಶದಿಂದ ಜಾರಿಯಾದ ವ್ಯವಸ್ಥೆಯಾಗಿತ್ತು.
ಹೀಗಾಗಿ, ಜಾತಿ ವ್ಯವಸ್ಥೆಯ ಶುದ್ಧತೆ-ಮಾಲಿನ್ಯ ಸಿದ್ಧಾಂತದ ಅಡಿಯಲ್ಲಿ ಮಾದಿಗ, ಹೊಲೆಯರಂಥ ಸಮುದಾಯಗಳನ್ನು ಧಾರ್ಮಿಕ ಕಾರಣಗಳಿಂದ ‘ಅಸ್ಪಶ್ಯರು’ ಎಂದು ಸಮಾಜದಿಂದ ಹೊರಗಿಟ್ಟರೆ, ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇನ್ನಿತರ ಜಾತಿಗಳನ್ನು ಅಂಚಿನಲ್ಲಿರಿಸಲಾಯಿತು. ಈ ಎರಡೂ ಗುಂಪುಗಳು ಘನತೆಯಿಂದ ಬದುಕಲು ಮತ್ತು ನಾಗರಿಕ ಸಮಾಜದಲ್ಲಿ ಬೆರೆಯಲು ಅವಕಾಶ ನೀಡಲಿಲ್ಲ. ವಸಾಹತುಶಾಹಿಗಳು ‘ಆನುವಂಶಿಕ ಅಪರಾಧಿಗಳು’ ಎಂದು ಆಡಳಿತಾತ್ಮಕವಾಗಿ ಮುದ್ರೆ ಒತ್ತಿದರು. ಎರಡೂ ಸಂದರ್ಭಗಳಲ್ಲಿ ಫಲ ಒಂದೇ ಆಗಿತ್ತು - ಮೇಲ್ವರ್ಗ ಮತ್ತು ವಸಾಹತುಶಾಹಿಗಳಿಂದ ಇವರಿಗೆ ಘನತೆಯಿಂದ ಬದುಕುವ ಅವಕಾಶವಿರಲಿಲ್ಲ, ನಾಗರಿಕ ಸಮಾಜದಲ್ಲಿ ಬೆರೆಯುವ ಹಕ್ಕನ್ನು ಕಳೆದುಕೊಂಡರು. ಆದರೆ ಹೊರಗಿಡುವಿಕೆಯ ತರ್ಕ ಮಾತ್ರ ವಿಭಿನ್ನ: ಒಂದು ಕಡೆ ಧಾರ್ಮಿಕ ಕಳಂಕ, ಇನ್ನೊಂದು ಕಡೆ ಅಪರಾಧೀಕರಣದ ಕಳಂಕ.
ಇದನ್ನು ಅರ್ಥಮಾಡಿಕೊಳ್ಳಲು ಇತಿಹಾಸವನ್ನು ನೆನಪಿಸಿಕೊಳ್ಳಬೇಕು. ಬಂಜಾರ, ಭೋವಿ ಇನ್ನಿತರ ಹಲವಾರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವ ಕ್ರಮವು 1918-19ರಲ್ಲಿ ಪ್ರಾರಂಭವಾಯಿತು. ಇದು ಅಂದಿನ ಮೈಸೂರು ರಾಜ್ಯದ ಮಿಲ್ಲರ್ ಆಯೋಗದ ಶಿಫಾರಸುಗಳಲ್ಲಿ ಬೇರೂರಿದೆ. ಇದಕ್ಕೆ ಮಾನದಂಡವಾದ ಅಂಶಗಳೆಂದರೆ, ಅಸ್ಪಶ್ಯತೆ, ಅವಮಾನಕರ ವೃತ್ತಿಗಳು, ಬಡತನ ಮತ್ತು ಅನಕ್ಷರತೆ. ಇವುಗಳನ್ನು ಎದುರಿಸುತ್ತಿರುವ ಸಮುದಾಯಗಳನ್ನು ‘ದುರ್ಬಲ ವರ್ಗಗಳು’ ಎಂದು ಆಯೋಗ ಗುರುತಿಸಿತು. ಇದೇ ಚೌಕಟ್ಟನ್ನು ವಸಾಹತುಶಾಹಿ ತನ್ನ 1935ರ ಕಾಯ್ದೆಯಡಿಯಲ್ಲಿ ಪರಿಶಿಷ್ಟ ಜಾತಿ ಎಂಬ ಪಟ್ಟಿಯನ್ನು ರೂಪಿಸಿತು.
ಸ್ವಾತಂತ್ರ್ಯದ ನಂತರ, 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶವು, ಈ ಪಟ್ಟಿಗೆ ಶಾಶ್ವತ ಕಾನೂನಿನ ಆಧಾರವನ್ನು ನೀಡಿದೆ. ಇಲ್ಲಿಯೂ ಸಹ ಅದೇ ಮಾನದಂಡಗಳನ್ನು ಇಂದಿನವರೆಗೂ ಸ್ಥಿರವಾಗಿ ಉಳಿಸಿಕೊಳ್ಳಲಾಗಿದೆ. ಹಾಗಾಗಿ, ಬಂಜಾರರು, ಭೋವಿಗಳು ಮತ್ತು ಸಂಬಂಧಿತ ಸಮುದಾಯಗಳು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ.
ಮೂಲಭೂತವಾಗಿ, ಈ ಸಮುದಾಯಗಳ ಸೇರ್ಪಡೆಯು ಆಕಸ್ಮಿಕವಲ್ಲ. ಈ ಮೊದಲು ಮಿಲ್ಲರ್ ಆಯೋಗದಿಂದ, ನಂತರ ಬ್ರಿಟಿಷ್ ಕಾನೂನಿನಿಂದ ಮತ್ತು ಅಂತಿಮವಾಗಿ ಭಾರತದ ಸಂವಿಧಾನದಿಂದ - ಈ ಸಮುದಾಯಗಳು ಸಾಂವಿಧಾನಿಕ ರಕ್ಷಣೆಗೆ ಅಗತ್ಯವಿರುವ ಎಲ್ಲ ಮಾನದಂಡಗಳ ಪರಧಿಯೊಳಗೆ ಬರುತ್ತವೆ ಎಂಬುದು ಸ್ಪಷ್ಟವಾಗಿದೆ.
ಮಾನವ ದೃಷ್ಟಿಕೋನದಿಂದ ನೋಡಿದರೆ, ಯಾವುದೇ ಸಮುದಾಯವನ್ನು ‘ಸ್ಪಶ್ಯ’ ಅಥವಾ ‘ಅಸ್ಪಶ್ಯ’ ಎಂದು ಕರೆಯುವುದು ಅಮಾನವೀಯ. ಇದು ನಿಜವಾದ ಮೌಲ್ಯವಲ್ಲ, ಬಲವಂತದ ಸಾಮಾಜಿಕ ಕಲ್ಪನೆಯಾಗಿದೆ. ಜಾತಿ ಕಳಂಕ ಮತ್ತು ವಸಾಹತುಶಾಹಿಯ ಕಾನೂನುಗಳು ಈ ಸಮುದಾಯಗಳನ್ನು ಘನತೆಯಿಂದ ಬದುಕಲು, ಶಿಕ್ಷಣ ಪಡೆಯಲು ಮತ್ತು ಭೂಸ್ವಾಮ್ಯದಿಂದ ವಂಚಿಸಿವೆ. ಆದರೆ, ಎಲ್ಲರೂ ಒಂದೇ ರೀತಿಯ ಮಾನವೀಯತೆಯನ್ನು ಹಂಚಿಕೊಳ್ಳುತ್ತಾರೆ ಎಂದು ಮಾನವತಾವಾದ ನಮಗೆ ನೆನಪಿಸುತ್ತದೆ. ಕಳಂಕ ಬದಲಾಗಬಹುದು, ಆದರೆ ಮೌಲ್ಯದಲ್ಲಿ ವ್ಯತ್ಯಾಸವಿರುವುದಿಲ್ಲ. ಯಾರೂ ಹುಟ್ಟಿನಿಂದಲೇ ‘ಅಸ್ಪಶ್ಯ’ ಅಥವಾ ‘ಅಪರಾಧಿ’ ಅಲ್ಲ ಎಂಬುದನ್ನು ವಿಜ್ಞಾನವೇ ಸಾಬೀತುಪಡಿಸುತ್ತದೆ. ಇವು ಸಮಾಜ ನಿರ್ಮಿಸಿದ ಕಲ್ಪನೆಗಳೇ ಹೊರತು ನೈಸರ್ಗಿಕ ಸತ್ಯಗಳಲ್ಲ.
ಜೊತೆಗೆ, ಭಾರತದ ಸಂವಿಧಾನವು, ವಿಧಿ 17ರ ಮೂಲಕ, ಅಸ್ಪಶ್ಯತೆಯನ್ನು ಮತ್ತು ಅದರ ಎಲ್ಲಾ ರೂಪಗಳಲ್ಲಿ ರದ್ದುಗೊಳಿಸಿದೆ. ಇದು ಕಾನೂನುಬಾಹಿರ ಮಾತ್ರವಲ್ಲದೆ ಶಿಕ್ಷಾರ್ಹ ಎಂದು ಘೋಷಿಸಿದೆ. ಅಧಿಕೃತ ಆಯೋಗಗಳು ಈ ಪರಿಭಾಷೆಯನ್ನು ಪುನರುಜ್ಜೀವನಗೊಳಿಸುವುದು ಸಾಂವಿಧಾನಿಕ ಆದೇಶಕ್ಕೆ ವಿರುದ್ಧವಾಗಿದೆ. ಭಾರತದ ಸಂವಿಧಾನವು ಅಸ್ಪಶ್ಯತೆಗೆ ಅವಕಾಶ ನೀಡುವುದಿಲ್ಲ. ಅದು ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಂವಿಧಾನದ 14ನೇ ವಿಧಿಯಲ್ಲಿ ಸಮಾನತೆಯನ್ನು ಖಾತರಿಪಡಿಸುತ್ತದೆ; 15ನೇ ವಿಧಿಯಲ್ಲಿ ತಾರತಮ್ಯವನ್ನು ನಿಷೇಧಿಸುತ್ತದೆ; 21ನೇ ವಿಧಿಯಲ್ಲಿ ಮಾನವ ಘನತೆಯನ್ನು ರಕ್ಷಿಸುತ್ತದೆ.
ಕರ್ನಾಟಕ ರಾಜ್ಯ v/s ಅಪ್ಪ ಬಾಲು ಇಂಗಳೆ (1995) ಪ್ರಕರಣದಲ್ಲಿ, ಸ್ವತಂತ್ರ ಭಾರತದಲ್ಲಿ ಅಸ್ಪಶ್ಯತೆಗೆ ಸ್ಥಾನವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮೀಸಲಾತಿಗಳ ಉಪವರ್ಗೀಕರಣದ ನೆಪದಲ್ಲಿಯೂ ಸಹ, ಅಂತಹ ಅಸಾಂವಿಧಾನಿಕ ವರ್ಗಗಳನ್ನು ಮರುಪರಿಚಯಿಸುವ ಅಧಿಕಾರ ಯಾವುದೇ ಆಯೋಗ ಅಥವಾ ರಾಜ್ಯ ಸಂಸ್ಥೆಗೆ ಇಲ್ಲ. ಈ ಎಲ್ಲ ಅರಿವು ನ್ಯಾ. ಎ.ಜೆ. ಸದಾಶಿವ ಆಯೋಗ ಮತ್ತು ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗಗಳಿಗೆ ಇದ್ದರೂ, ತಮ್ಮ ವರದಿಗಳಲ್ಲಿ ಪರಿಶಿಷ್ಟ ಜಾತಿಗಳನ್ನು ವರ್ಗೀಕರಿಸುವಾಗ ‘ಸ್ಪಶ್ಯ’ ಮತ್ತು ‘ಅಸ್ಪಶ್ಯ’ ಪದಗಳನ್ನು ಪುನಃ ಪರಿಚಯಿಸಿರುವುದು ಯಾಕೆ? ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜೊತೆಗೆ, ಸಮಾಜವು ಗುಣಪಡಿಸಲು ಹೆಣಗಾಡಿದ ಗಾಯವನ್ನು ಮತ್ತೆ ಏಕೆ ಪರಿಚಯಿಸುತ್ತಿದೆ? ಇದರ ಹಿಂದಿನ ಉದ್ದೇಶವಾದರೂ ಏನು ಎಂಬುದು ಪ್ರಜ್ಞಾವಂತರನ್ನು ಕಾಡತೊಡಗಿದೆ.
‘ಸ್ಪಶ್ಯ’ ಮತ್ತು ‘ಅಸ್ಪಶ್ಯ’ ಈ ಪದಗಳು ಕೇವಲ ವಿವರಣೆಗಳಲ್ಲ. ಅವು ಶತಮಾನಗಳ ಅವಮಾನ ಮತ್ತು ನೋವನ್ನು ಹೊತ್ತಿವೆ. ಈ ಪದಗಳನ್ನು ಮತ್ತೆ ಬಳಸಲು ಪ್ರಾರಂಭಿಸಿದರೆ, ಅದೇ ಅನ್ಯಾಯವನ್ನು ಹೊಸ ರೂಪದಲ್ಲಿ ಪುನರಾವರ್ತಿಸುವುದಾಗಿದೆ. ಅದರಲ್ಲೂ, ಅಧಿಕೃತ ವರದಿಗಳಲ್ಲಿ ಬಳಸಿದಾಗ, ಅವು ತಾರತಮ್ಯವನ್ನು ಕಾನೂನುಬದ್ಧಗೊಳಿಸುವ, ಪರಿಶಿಷ್ಟ ಜಾತಿಗಳಲ್ಲಿ ಹೊಸ ಶ್ರೇಣಿಗಳನ್ನು ಸೃಷ್ಟಿಸುವ ಮತ್ತು ಬಂಜಾರ ಮತ್ತು ಭೋವಿಯಂತಹ ಇನ್ನಿತರ ಸಮುದಾಯಗಳ ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪ್ರಶ್ನಿಸುವ ಪ್ರಯತ್ನಗಳಂತಹ ವಿಭಜಕ ಕಾರ್ಯಸೂಚಿಗಳಿಗೆ ದಾರಿ ಮಾಡಿಕೊಡುವ ಅಪಾಯವನ್ನುಂಟುಮಾಡುತ್ತವೆ.
ಮಾದಿಗ ಸಮುದಾಯವು ತನ್ನ ನ್ಯಾಯಯುತ ಪಾಲಿಗೆ ಹಕ್ಕೊತ್ತಾಯ ಮಂಡಿಸಿದ್ದು ಸರಿ. ಆದರೆ ಪ್ರಬಲ ಶಕ್ತಿಗಳು ಅವರನ್ನು ‘ಸ್ಪಶ್ಯ’ ಮತ್ತು ‘ಅಸ್ಪಶ್ಯ’ ಎಂಬ ರಾಜಕೀಯ ಚದುರಂಗದಾಟದಲ್ಲಿ ಸಿಲುಕಿಸಿ, ದಲಿತ ಏಕತೆಯನ್ನು ದುರ್ಬಲಗೊಳಿಸುತ್ತಿರುವುದು ದುರದೃಷ್ಟಕರ. ಎಸ್.ಸಿ. ಪಟ್ಟಿಯಲ್ಲಿ ಕೇವಲ ನೇರ ಅಸ್ಪಶ್ಯತೆಯುಳ್ಳವರನ್ನೇ ಉಳಿಸಬೇಕು ಎಂಬ ಕಲ್ಪನೆ, ಕಾನೂನು ಹಾಗೂ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಇಂತಹ ಬೇಡಿಕೆಗಳು ಸಮಾಜದ ಏಕತೆಯನ್ನು ಹಾಳುಮಾಡುತ್ತವೆ. ಇದು ಹಳೆಯ ಗಾಯಗಳನ್ನು ಮತ್ತೆ ಕೆದಕುವುದರೊಂದಿಗೆ ಸಮುದಾಯಗಳನ್ನು ವಿಭಜಿಸಿ ಪರಸ್ಪರ ಅವಿಶ್ವಾಸವನ್ನು ಬಿತ್ತುತ್ತದೆ. ಸಾಮಾಜಿಕ ನ್ಯಾಯದ ನಿಜವಾದ ಭವಿಷ್ಯವು ಸಮಾನತೆ, ಘನತೆ ಮತ್ತು ಭ್ರಾತೃತ್ವದ ಮೌಲ್ಯಗಳಲ್ಲಿ ನೆಲೆಸಿರಬೇಕೇ ವಿನಃ ವಿಭಜನೆಯಲ್ಲಿ ಅಲ್ಲ.
ಇನ್ನೂ ಹೆಚ್ಚು ಕಳವಳಕಾರಿ ಸಂಗತಿಯೆಂದರೆ ನ್ಯಾಯಾಂಗ ಆಯೋಗಗಳು, ಸಂವಿಧಾನದ ರಕ್ಷಕರು ಸಂವಿಧಾನದ 17ನೇ ವಿಧಿಯ ಅಡಿಯಲ್ಲಿ ರದ್ದುಗೊಂಡ ಅಸಾಂವಿಧಾನಿಕ ಪದಗಳನ್ನು ಬಳಸಿದ್ದಾರೆ. ಇದು ಸಾಮಾಜಿಕ ನ್ಯಾಯವಾಗಿ ಕಂಡುಬರುವುದಿಲ್ಲ. ಬದಲಿಗೆ ಇಂಥ ನಡೆ ದಲಿತರನ್ನು ವಿಭಜಿಸುವುದು ಮತ್ತು ಅವರಿಗೆ ದೊರೆಯುವ ಪ್ರಯೋಜನಗಳನ್ನು ನಿಯಂತ್ರಿಸುವ ಮೂಲಕ ಅವರನ್ನು ಮತ್ತೆ ಅಧಃಪತನಕ್ಕೆ ತಳ್ಳುವ ಒಂದು ರಾಜಕೀಯ ಆಟವಾಗಿದೆ.
ಸುಪ್ರೀಂಕೋರ್ಟ್‌ನ ಒಳ ಮೀಸಲಾತಿ ತೀರ್ಪು ಪರಿಶಿಷ್ಟ ಜಾತಿಗಳೊಳಗಿನ ಸಮಾನ ಹಂಚಿಕೆಗೆ ದಾರಿ ತೆರೆದಿದ್ದು, ಸಾಮಾಜಿಕ ನ್ಯಾಯದತ್ತ ಪ್ರಗತಿಪರ ಹೆಜ್ಜೆಯಾಗಿದೆ. ಆದರೆ ಇದೇ ಸಮಯದಲ್ಲಿ, ಸಂವಿಧಾನವೇ ರದ್ದುಪಡಿಸಿದ ‘ಸ್ಪಶ್ಯ-ಅಸ್ಪಶ್ಯ’ ಎಂಬ ಕಳಂಕಿತ ಪದಗಳನ್ನು ಮತ್ತೆ ಪರಿಚಯಿಸುವುದು ಅಪಾಯಕಾರಿ. ಧಾರ್ಮಿಕ ಕಳಂಕದಿಂದ ‘ಅಸ್ಪಶ್ಯರು’ ಎಂದೂ, ವಸಾಹತು ಕಾನೂನಿನಿಂದ ‘ಅಪರಾಧಿ ಬುಡಕಟ್ಟುಗಳು’ ಎಂದೂ ಬಿಂಬಿಸಲ್ಪಟ್ಟ ಎಲ್ಲಾ ಸಮುದಾಯಗಳು ಒಂದೇ ರೀತಿಯ ಸಾಂವಿಧಾನಿಕ ರಕ್ಷಣೆಯನ್ನು ಮತ್ತು ಮಾನವ ಘನತೆಯನ್ನು ಹೊಂದಿವೆ.
ಸಾಮಾಜಿಕ ನ್ಯಾಯದ ನಿಜವಾದ ಭವಿಷ್ಯವು ಹಳೆಯ ಗಾಯಗಳನ್ನು ಎತ್ತಿ ತೋರಿಸುವುದಲ್ಲ, ಬದಲಿಗೆ ಸಮಾನತೆ, ಘನತೆ ಮತ್ತು ಭ್ರಾತೃತ್ವದ ಮೌಲ್ಯಗಳಲ್ಲಿ ಹೊಸ ನೀತಿಗಳನ್ನು ನಿರ್ಮಿಸುವುದರಲ್ಲಿದೆ. ಆದ್ದರಿಂದ, ಕರ್ನಾಟಕ ಸರಕಾರವು ತಕ್ಷಣವೇ ತನ್ನ ಎಲ್ಲಾ ಅಧಿಕೃತ ವರದಿಗಳಿಂದ ‘ಸ್ಪಶ್ಯ-ಅಸ್ಪಶ್ಯ’ ಪದಗಳನ್ನು ಹಿಂದೆಗೆದು, ಆಯೋಗಗಳ ವರದಿಗಳು ಈ ಪದಗಳನ್ನು ಮುಂದಿನ ಚರ್ಚೆಗಳಲ್ಲಿ ಬಳಸುವುದಿಲ್ಲವೆಂಬ ಸ್ಪಷ್ಟೀಕರಣ ನೀಡುವುದು ಅತ್ಯವಶ್ಯಕ.