×
Ad

ಸಿಜೆಐ ಬಿ.ಆರ್. ಗವಾಯಿ ಬಿಚ್ಚಿಟ್ಟ ದೇಶದ ಇಂದಿನ ವಾಸ್ತವ ಸ್ಥಿತಿಯನ್ನು ಸುಧಾರಿಸಲು ಸಾಧ್ಯವೇ?

ಭಾರತದ ಎರಡನೇ ದಲಿತ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಗವಾಯಿ ಅವರು ಜಾತಿ ಮತ್ತು ಸಾಂವಿಧಾನಿಕತೆ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ದಲಿತ ಸಮುದಾಯದ ಪ್ರಗತಿಯ ಪ್ರಬಲ ಸಂಕೇತ. ಆ ಸಮುದಾಯ ಕೂಡ ಅಧಿಕಾರ ಮತ್ತು ಪ್ರಭಾವದ ಅತ್ಯುನ್ನತ ಹಂತಗಳನ್ನು ತಲುಪಬಹುದು ಎಂಬುದಕ್ಕೆ ಅದು ನಿದರ್ಶನ. ಆದರೂ, ದಲಿತ ಸಮುದಾಯದೆದುರಿನ ನಿರಂತರ ಸವಾಲುಗಳ ಬಗ್ಗೆಯೂ ಅವರ ಮಾತುಗಳಲ್ಲಿ ಒಂದು ಎಚ್ಚರಿಕೆ ಇದೆ. ಸಾಂವಿಧಾನಿಕ ಖಾತರಿ ಮತ್ತು ವೈಯಕ್ತಿಕ ಯಶಸ್ಸಿನ ಹೊರತಾಗಿಯೂ, ವ್ಯವಸ್ಥಿತ ಅಸಮಾನತೆಗಳು ಉಳಿದುಕೊಂಡಿವೆ. ಗಣನೀಯ ಸಮಾನತೆ ಸಾಧಿಸಲು ಹೆಚ್ಚಿನ ಕೆಲಸಗಳು ಇನ್ನೂ ನಡೆಯಬೇಕಾಗಿದೆ ಎಂಬುದರ ಕಡೆಗೆ ಅವರು ಗಮನ ಸೆಳೆದಂತಿದೆ.

Update: 2025-06-13 10:41 IST

ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ತಮ್ಮ ಭಾಷಣದಲ್ಲಿ ಜಾತಿ ವ್ಯವಸ್ಥೆ ಕುರಿತ ಕ್ರೂರ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಅವರು ತಮ್ಮ ಭಾಷಣವನ್ನು ಆರಂಭಿಸಿದ ರೀತಿಯೇ ವಿಶಿಷ್ಟವಾಗಿತ್ತು.

‘‘ಹಲವು ದಶಕಗಳ ಹಿಂದೆ ಭಾರತದ ಲಕ್ಷಾಂತರ ನಾಗರಿಕರನ್ನು ಅಸ್ಪಶ್ಯರು ಎಂದು ಕರೆಯಲಾಗುತ್ತಿತ್ತು. ಅವರನ್ನು ಅಶುದ್ಧರು ಎಂದು ಹೇಳಲಾಯಿತು. ಅವರು ಮುಖ್ಯವಾಹಿನಿಗೆ ಸೇರಿದವರಲ್ಲ ಎಂದು ಹೇಳಲಾಗಿತ್ತು. ಅವರು ತಮಗಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಇಂದು ನಾವು ಇಲ್ಲಿದ್ದೇವೆ. ಅದೇ ಜನರಿಗೆ ಸೇರಿದ ವ್ಯಕ್ತಿಯೊಬ್ಬರು ದೇಶದ ನ್ಯಾಯಾಂಗದಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆದು ಈಗ ಇಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದಾರೆ’’ ಎಂದು ಅವರು ಹೇಳಿದರು.

ಸಿಜೆಐ ಗವಾಯಿ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುವಾಗ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಅವರ ‘ಕ್ಯಾನ್ ದಿ ಸಬಲ್ಟರ್ನ್ ಸ್ಪೀಕ್’ ಅಂದರೆ ‘ತಳಮಟ್ಟದವರು ಮಾತನಾಡಬಹುದೇ?’ ಎಂಬ ಕೃತಿಯನ್ನು ಉಲ್ಲೇಖಿಸಿದರು.

‘‘ಅದಕ್ಕೆ ನಾನು ನನ್ನದೇ ಉದಾಹರಣೆಯನ್ನು ನೀಡುತ್ತೇನೆ. ಹೌದು, ತಳಮಟ್ಟದವರು ಮಾತನಾಡಬಲ್ಲರು ಮತ್ತು ಅವರು ಎಲ್ಲಾ ಸಮಯದಲ್ಲೂ ಮಾತನಾಡುತ್ತಲೇ ಇದ್ದಾರೆ. ಪ್ರಶ್ನೆ, ಇನ್ನು ಮುಂದೆ ಅವರು ಮಾತನಾಡಬಲ್ಲರೇ ಎಂಬುದಲ್ಲ. ಆದರೆ ಸಮಾಜ ನಿಜವಾಗಿಯೂ ಅವರ ಮಾತನ್ನು ಆಲಿಸುತ್ತಿದೆಯೇ ಎಂಬುದು ಈಗಿನ ಪ್ರಶ್ನೆ’’ ಎಂದು ಸಿಜೆಐ ಗವಾಯಿ ಹೇಳಿದರು.

ದೇಶದ ಸಂವಿಧಾನವನ್ನು ಹೊಗಳುತ್ತ ಅವರು, ಭಾರತದ ಸಂವಿಧಾನ ಇದನ್ನೇ ಮಾಡಿದೆ ಎಂದರು.

‘‘ಅವರು ಭಾರತದ ಜನರಿಗೆ ಸೇರಿದ್ದಾರೆ. ಅವರು ತಮಗಾಗಿ ಮಾತನಾಡಬಲ್ಲರು. ಸಮಾಜ ಮತ್ತು ಅಧಿಕಾರದ ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗೆ ಸಮಾನ ಸ್ಥಾನವಿದೆ ಎಂಬುದನ್ನು ಸಂವಿಧಾನ ಹೇಳಿತ್ತು’’ ಎಂದು ಗವಾಯಿ’’ ಹೇಳಿದರು.

‘‘ಭಾರತದ ಅತ್ಯಂತ ದುರ್ಬಲ ನಾಗರಿಕರಿಗೆ, ಸಂವಿಧಾನ ಕೇವಲ ಕಾನೂನು ಸನ್ನದು ಅಥವಾ ರಾಜಕೀಯ ಚೌಕಟ್ಟು ಅಲ್ಲ. ಅದು ಭಾವನೆ, ಜೀವಸೆಲೆ, ಶಾಯಿಯಲ್ಲಿ ಕೆತ್ತಿದ ಶಾಂತ ಕ್ರಾಂತಿ’’ ಎಂದರು.

‘‘ಮುನ್ಸಿಪಲ್ ಶಾಲೆಯಿಂದ ಭಾರತದ ಮುಖ್ಯ ನ್ಯಾಯಾಧೀಶರ ಹುದ್ದೆಯವರೆಗಿನ ನನ್ನ ಪ್ರಯಾಣದಲ್ಲಿ ದೇಶದ ಸಂವಿಧಾನ ಮಾರ್ಗದರ್ಶಕ ಶಕ್ತಿಯಾಗಿದೆ’’ ಎಂದು ಗವಾಯಿ ಅವರು ಹೇಳಿದರು.

‘‘ಸಂವಿಧಾನ ಒಂದು ಸಾಮಾಜಿಕ ದಾಖಲೆಯಾಗಿದೆ. ಅದು ಜಾತಿ, ಬಡತನ, ಹೊರಗಿಡುವಿಕೆ ಮತ್ತು ಅನ್ಯಾಯದ ಕ್ರೂರ ಸತ್ಯಗಳಿಂದ ತನ್ನ ನೋಟವನ್ನು ತಪ್ಪಿಸುವುದಿಲ್ಲ. ಆಳವಾದ ಅಸಮಾನತೆಯಿಂದ ಕೂಡಿರುವ ನೆಲದಲ್ಲಿ ಎಲ್ಲರೂ ಸಮಾನರು ಎಂದು ಅದು ಸೋಗು ಹಾಕುವುದಿಲ್ಲ. ಬದಲಾಗಿ, ಅದು ಮಧ್ಯಪ್ರವೇಶಿಸಲು, ಮರಳಿ ಬರೆಯಲು, ಅಧಿಕಾರವನ್ನು ಮರು ಮಾಪನ ಮಾಡಲು ಮತ್ತು ಘನತೆಯನ್ನು ಮರುಸ್ಥಾಪಿಸಲು ಧೈರ್ಯ ಮಾಡುತ್ತದೆ’’ ಎಂದರು.

ಸಂವಿಧಾನಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಸಿಜೆಐ ಶ್ಲಾಘಿಸಿದ್ದಾರೆ. ಅಸಮಾನ ಸಮಾಜದಲ್ಲಿ, ಅಧಿಕಾರವನ್ನು ಸಂಸ್ಥೆಗಳ ನಡುವೆ ಮಾತ್ರವಲ್ಲದೆ ಸಮುದಾಯಗಳ ನಡುವೆಯೂ ವಿಭಜಿಸದ ಹೊರತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ನಂಬಿದ್ದರು ಎಂದು ಗವಾಯಿ ಹೇಳಿದ್ದಾರೆ.

ಪ್ರಾತಿನಿಧ್ಯವೆಂಬುದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ಮಾತ್ರವಲ್ಲದೆ, ಶತಮಾನಗಳಿಂದ ಯಾರಿಗೆ ಪಾಲು ನಿರಾಕರಿಸಲಾಗಿತ್ತೋ ಆ ಸಾಮಾಜಿಕ ಗುಂಪುಗಳ ನಡುವೆಯೂ ಅಧಿಕಾರದ ಮರುವಿತರಣೆ ಮಾಡುವ ಒಂದು ಕಾರ್ಯವಿಧಾನವಾಗಿತ್ತು ಎಂದು ಸಿಜೆಐ ವಿವರಿಸಿದರು.

ಈ ಕಾರಣಕ್ಕಾಗಿಯೇ ಡಾ. ಅಂಬೇಡ್ಕರ್ ಅವರು ನವೆಂಬರ್ 25, 1949ರಂದು ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲಿ ‘ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು’ ಎಂದಿದ್ದರು ಎಂಬುದನ್ನು ಗವಾಯಿ ನೆನೆದರು.

ತನ್ನ ತಳದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದ ಹೊರತು ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಜೀವನದ ತತ್ವಗಳಾಗಿ ಗುರುತಿಸುವ ಜೀವನ ವಿಧಾನ ಎಂಬ ಅಂಬೇಡ್ಕರ್ ಮಾತನ್ನು ಗವಾಯಿ ಉಲ್ಲೇಖಿಸಿದ್ದಾರೆ.

ತುಳಿತಕ್ಕೊಳಗಾದವರ ಜೀವನ ವಿಧಿಲಿಖಿತವಾದ ಆಕಸ್ಮಿಕವಲ್ಲ. ಅದು ನ್ಯಾಯಕ್ಕೆ ಅರ್ಹವಾದ, ಪ್ರಾತಿನಿಧ್ಯ, ಅವಕಾಶ ಮತ್ತು ಧ್ವನಿಗೆ ಅರ್ಹವಾದದ್ದಾಗಿದೆ ಎಂಬುದು ಸಂವಿಧಾನದ ತಿರುಳಾಗಿದೆ ಎಂದು ಗವಾಯಿ ಅವರು ಹೇಳಿದ್ದಾರೆ.

ಸಿಜೆಐ ಗವಾಯಿ ಅವರ ಭಾಷಣ, ಜಾತಿ ವ್ಯವಸ್ಥೆಯ ಐತಿಹಾಸಿಕ ಅನ್ಯಾಯಗಳು ಮತ್ತು ಭಾರತೀಯ ಸಂವಿಧಾನದ ಪರಿವರ್ತನಾ ಸಾಮರ್ಥ್ಯವನ್ನು ಸಶಕ್ತವಾಗಿ ಎತ್ತಿ ತೋರಿಸುತ್ತದೆ.

ಭಾರತ ಜಾತಿ ತಾರತಮ್ಯದ ವಿರುದ್ಧ ಸಾಂವಿಧಾನಿಕ ನಿಬಂಧನೆಗಳನ್ನು ಹೊಂದಿರುವ ಪ್ರಜಾಪ್ರಭುತ್ವವಾಗಿದ್ದರೂ, ಜಾತಿ ಆಧಾರಿತ ಅಸಮಾನತೆಗಳು ನಿಂತಿಲ್ಲ. ಅದು ಅನೇಕರ ಘನತೆ, ಅವಕಾಶ ಮತ್ತು ಧ್ವನಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂಬುದರ ಸೂಚನೆ ಅವರ ಮಾತುಗಳಲ್ಲಿದೆ.

ಅಸ್ಪಶ್ಯತೆ ಕಾನೂನುಬಾಹಿರವಾಗಿದ್ದರೂ, ಇಂದಿಗೂ, ವಿವಿಧ ರೂಪಗಳಲ್ಲಿ ಅನೇಕ ಕಡೆಗಳಲ್ಲಿ ಆಚರಣೆಯಲ್ಲಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳ ಕುರಿತ ದತ್ತಾಂಶವನ್ನು ಸಂಗ್ರಹಿಸುತ್ತದೆ. 2024ರ ಅದರ ವರದಿ, ಹಿಂದಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಗಮನಾರ್ಹ ಸಂಖ್ಯೆಯ ದೌರ್ಜನ್ಯಗಳ ಬಗ್ಗೆ ಹೇಳುತ್ತದೆ.

ಸರಕಾರಿ ದತ್ತಾಂಶಗಳ ಪ್ರಕಾರ, 2022ರಲ್ಲಿ ಪರಿಶಿಷ್ಟ ಜಾತಿಗಳ ವಿರುದ್ಧ 45,935 ಅಪರಾಧ ಪ್ರಕರಣಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ 8,862 ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಸಂಖ್ಯೆಗಳು ತಾರತಮ್ಯ ಮತ್ತು ಹಿಂಸಾಚಾರ ಎಷ್ಟು ದೊಡ್ಡ ಪ್ರಮಾಣದಲ್ಲಿದೆ ಎಂಬ ಕಟು ಸತ್ಯವನ್ನೇ ಹೇಳುತ್ತಿವೆ.

ಆಗಸ್ಟ್ 2024ರಲ್ಲಿ ನಡೆದ ಅಧ್ಯಯನವೊಂದು, ದಲಿತ ಸಮುದಾಯದ ಉದ್ಯಮಿಗಳು ಇತರ ಸಮುದಾಯಗಳ ಉದ್ಯಮಿಗಳಿಗಿಂತ 15ರಿಂದ 18 ಶೇ. ಕಡಿಮೆ ಗಳಿಸುತ್ತಾರೆ ಎಂಬುದನ್ನು ಹೇಳುತ್ತದೆ. ಆರ್ಥಿಕ ಅವಕಾಶಗಳು ಮತ್ತು ಪರಿಣಾಮಗಳ ಮೇಲೆಯೂ ಜಾತಿ ಪ್ರಭಾವ ಬೀರುತ್ತಲೇ ಇದೆ ಎಂಬುದನ್ನು ಇದು ಸೂಚಿಸುತ್ತದೆ.

ಏಶ್ಯ ದಲಿತ್ ಪೀಪಲ್ಸ್ ಅಸೆಂಬ್ಲಿ-2024 ಕೂಡಾ ಆರ್ಥಿಕ ನ್ಯಾಯದ ಬಗ್ಗೆ ಹೇಳಿದೆ. ಅದು ಈಗಿನ ಆರ್ಥಿಕ ಬಿಕ್ಕಟ್ಟುಗಳು, ಹವಾಮಾನ ಬದಲಾವಣೆ ಮತ್ತು ಆರೋಗ್ಯ ಕ್ಷೇತ್ರದ ಅಸಮರ್ಪಕ ಸನ್ನಿವೇಶಗಳೆಲ್ಲವೂ ದಲಿತ ಸಮುದಾಯಗಳ ಮೇಲೆ ಬೀರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಶಿಕ್ಷಣದಲ್ಲಿ ಸುಧಾರಣೆಗಳು ಕಂಡುಬಂದಿದ್ದರೂ, ಅಸಮಾನತೆಗಳು ತಪ್ಪಿಲ್ಲ.

2011ರ ಜನಗಣತಿ ಪ್ರಕಾರ, ದಲಿತರಲ್ಲಿ ಸಾಕ್ಷರತಾ ಪ್ರಮಾಣ ಶೇ. 66.1ರಷ್ಟಿದ್ದು, ರಾಷ್ಟ್ರೀಯ ಸರಾಸರಿಯಾಗಿರುವ ಶೇ. 73ಕ್ಕಿಂತ ಕಡಿಮೆಯಾಗಿದೆ.

ಶಾಲೆಯಿಂದ ಹೊರಗುಳಿಯುವ ಮಕ್ಕಳಲ್ಲಿ ಸುಮಾರು ಶೇ. 60 ದಲಿತ ಮಕ್ಕಳು ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ. ಇದು ದಲಿತ ಸಮುದಾಯಗಳಿಗೆ ಶೈಕ್ಷಣಿಕ ಅವಕಾಶ ಸಿಗುವಲ್ಲಿ ಮತ್ತು ಶಿಕ್ಷಣ ಪೂರ್ಣಗೊಳಿಸುವಲ್ಲಿ ಗಮನಾರ್ಹ ಮಟ್ಟದ ಅಡೆತಡೆಗಳಿವೆ ಎಂಬುದನ್ನೇ ಸೂಚಿಸುತ್ತದೆ.

ಅಂಚಿನಲ್ಲಿರುವ ಸಮುದಾಯಗಳನ್ನು, ವಿಶೇಷವಾಗಿ ದಲಿತರು ಮತ್ತು ಆದಿವಾಸಿಗಳನ್ನು ಪ್ರತಿನಿಧಿಸುವ ಮತ್ತು ಸಬಲೀಕರಣಗೊಳಿಸುವ ಸಂವಿಧಾನದ ಮೂಲಭೂತ ಬದ್ಧತೆಯ ಬಗ್ಗೆ ಸಿಜೆಐ ಹೇಳಿದ್ದಾರೆ.

‘‘ಇತರರು ಆಲಿಸಲು ಬಯಸದವರ ಹೃದಯಬಡಿತವನ್ನು ಸಂವಿಧಾನ ತನ್ನೊಳಗೆ ಹೊಂದಿದೆ’’ ಎಂಬ ಅವರ ಹೇಳಿಕೆ ಈ ಅರ್ಥದ್ದಾಗಿದೆ.

ಸಂವಿಧಾನ ಸಾಮಾಜಿಕ ನ್ಯಾಯದ ಸಾಧನವಾಗಿದೆ. ಅದಕ್ಕಾಗಿಯೇ ಅದನ್ನು ರೂಪಿಸಲಾಗಿದೆ. ಹೊರಗಿಡಲಾದವರನ್ನು ಮತ್ತು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಅದು ಯತ್ನಿಸುತ್ತಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಮತ್ತು ತಾರತಮ್ಯದ ವಿರುದ್ಧ ಕಾನೂನು ರಕ್ಷಣೆಗಳ ಮೂಲಕ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಪ್ರಯತ್ನಗಳು ನಡೆದಿವೆ. ಆದರೂ, ಜಾತಿ ಆಧರಿತ ಹಿಂಸೆ, ಆರ್ಥಿಕ ಅಸಮಾನತೆಗಳು ಮತ್ತು ಶೈಕ್ಷಣಿಕ ಅಂತರಗಳು ಇದ್ದೇ ಇವೆ ಎಂಬುದನ್ನು ಅಂಕಿಅಂಶಗಳು ಹೇಳುತ್ತವೆ.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒಳಗೊಂಡ ಸಂಪೂರ್ಣ ಸಾಮಾಜಿಕ ಪ್ರಜಾಪ್ರಭುತ್ವದ ದೃಷ್ಟಿಕೋನ ಅನೇಕರ ಪಾಲಿಗೆ ಈಗಲೂ ಕನಸಾಗಿಯೇ ಉಳಿದಿದೆ. ಪ್ರಗತಿ ಸಾಧಿಸಲಾಗಿದ್ದರೂ, ಜಾತಿ, ಬಡತನ, ಹೊರಗಿಡುವಿಕೆ ಮತ್ತು ಅನ್ಯಾಯದ ಕ್ರೂರ ಸತ್ಯಗಳು ಇನ್ನೂ ಉಳಿದಿವೆ.

ಭಾರತದ ಎರಡನೇ ದಲಿತ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಗವಾಯಿ ಅವರು ಜಾತಿ ಮತ್ತು ಸಾಂವಿಧಾನಿಕತೆ ಬಗ್ಗೆ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ದಲಿತ ಸಮುದಾಯದ ಪ್ರಗತಿಯ ಪ್ರಬಲ ಸಂಕೇತ.

ಆ ಸಮುದಾಯ ಕೂಡ ಅಧಿಕಾರ ಮತ್ತು ಪ್ರಭಾವದ ಅತ್ಯುನ್ನತ ಹಂತಗಳನ್ನು ತಲುಪಬಹುದು ಎಂಬುದಕ್ಕೆ ಅದು ನಿದರ್ಶನ.

ಆದರೂ, ದಲಿತ ಸಮುದಾಯದೆದುರಿನ ನಿರಂತರ ಸವಾಲುಗಳ ಬಗ್ಗೆಯೂ ಅವರ ಮಾತುಗಳಲ್ಲಿ ಒಂದು ಎಚ್ಚರಿಕೆ ಇದೆ.

ಸಾಂವಿಧಾನಿಕ ಖಾತರಿ ಮತ್ತು ವೈಯಕ್ತಿಕ ಯಶಸ್ಸಿನ ಹೊರತಾಗಿಯೂ, ವ್ಯವಸ್ಥಿತ ಅಸಮಾನತೆಗಳು ಉಳಿದುಕೊಂಡಿವೆ.

ಗಣನೀಯ ಸಮಾನತೆ ಸಾಧಿಸಲು ಹೆಚ್ಚಿನ ಕೆಲಸಗಳು ಇನ್ನೂ ನಡೆಯಬೇಕಾಗಿದೆ ಎಂಬುದರ ಕಡೆಗೆ ಅವರು ಗಮನ ಸೆಳೆದಂತಿದೆ.

ಸಂವಿಧಾನವನ್ನು ಅವರು ‘‘ಶಾಯಿಯಲ್ಲಿ ಕೆತ್ತಿದ ಶಾಂತ ಕ್ರಾಂತಿ’’ ಎಂದು ಕರೆದಿದ್ದಾರೆ.

ಅದು ಜಾತಿ ಶ್ರೇಣಿಗಳನ್ನು ಕೆಡಹುವ ಗುರಿಯೊಂದಿಗಿನ ಅದರ ಮೂಲಭೂತ ತತ್ವಗಳು ಮತ್ತು ಕಾನೂನು ಚೌಕಟ್ಟಿನ ಕುರಿತ ಮಾತಾಗಿದೆ. ಹಾಗಿದ್ದೂ, ಈ ಸಾಮಾಜಿಕ ರಚನೆಯಲ್ಲಿ ಸಂವಿಧಾನದ ಈ ತತ್ವಗಳ ಅನುಷ್ಠಾನ ದೀರ್ಘ ಮತ್ತು ಪ್ರಯಾಸಕರ ಪ್ರಕ್ರಿಯೆಯಾಗಿದೆ. ಅದಕ್ಕೆ ಆಗಾಗ ಪ್ರತಿರೋಧವೂ ಎದುರಾಗುತ್ತದೆ.

ಜಾತಿ ಆಧರಿತ ಹಿಂಸಾಚಾರ ಹೆಚ್ಚಲು ಶತಮಾನಗಳಿಂದ ಬೇರುಬಿಟ್ಟಿರುವ ಜಾತಿ ಪೂರ್ವಾಗ್ರಹ ಮತ್ತು ತಾರತಮ್ಯ ಒಂದು ಕಾರಣವಾಗಿದೆ.

ಅಂಚಿನಲ್ಲಿರುವ ಸಮುದಾಯಗಳಿಂದ ಹಕ್ಕುಗಳ ಬೇಡಿಕೆ ವ್ಯಕ್ತವಾಗುವುದು ತಮ್ಮ ಸಾಂಪ್ರದಾಯಿಕ ಅಧಿಕಾರಕ್ಕೆ ಬೆದರಿಕೆ ಎಂದು ಪ್ರಬಲ ಜಾತಿ ಗುಂಪುಗಳು ಆತಂಕಗೊಳ್ಳುವುದು ಕೂಡ ಹಿಂಸಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಂಥ ಕಾನೂನುಗಳು ಅಸ್ತಿತ್ವದಲ್ಲಿದ್ದರೂ, ಅವುಗಳ ಜಾರಿಯಲ್ಲಿನ ಸಮಸ್ಯೆಗಳು ಹಿಂಸಾಚಾರಕ್ಕೆ ಕಾರಣವಾಗಬಹುದು.

ಆರ್ಥಿಕ ಸ್ಪರ್ಧೆ, ಭೂ ವಿವಾದಗಳು ಮತ್ತು ರಾಜಕೀಯ ಅಧಿಕಾರ ಕೂಡ ಹಿಂಸಾಚಾರದ ಕಾರಣಗಳಾಗಿವೆ. ಹೋರಾಟಗಳು ಸಾಮಾನ್ಯವಾಗಿ ಜಾತಿ ಗುರುತುಗಳೊಂದಿಗೆ ವ್ಯಕ್ತವಾಗಿ, ಉದ್ವಿಗ್ನತೆ ಹೆಚ್ಚಿಸುವುದು ಕೂಡ ಹಿಂಸಾಚಾರಕ್ಕೆ ಎಡೆ ಮಾಡಿಕೊಡುತ್ತದೆ.

ಸಾಂವಿಧಾನಿಕ ನಿಬಂಧನೆಗಳು ಶಾಸಕಾಂಗ ಸಂಸ್ಥೆಗಳಲ್ಲಿ ಮೀಸಲಾತಿ ಮೂಲಕ ಪ್ರಾತಿನಿಧ್ಯ ಖಚಿತಪಡಿಸುತ್ತವೆಂಬುದೇನೋ ನಿಜ. ಆದರೂ, ಅಧಿಕಾರದಲ್ಲಿ ಪೂರ್ಣ ಪ್ರಾತಿನಿಧ್ಯದ ವಾಸ್ತವ ಅಷ್ಟು ಸರಳವಾಗಿಲ್ಲ.

543 ಸ್ಥಾನಗಳನ್ನು ಹೊಂದಿರುವ ಲೋಕಸಭೆಯಲ್ಲಿ 84 ಸ್ಥಾನಗಳು ಪರಿಶಿಷ್ಟ ಜಾತಿಗಳಿಗೆ ಮತ್ತು 47 ಸ್ಥಾನಗಳು ಪರಿಶಿಷ್ಟ ಪಂಗಡಗಳಿಗೆ ಮೀಸಲಾಗಿವೆ. ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರೀತಿಯ ಕೋಟಾಗಳು ಅಸ್ತಿತ್ವದಲ್ಲಿವೆ. ಇದು ಸಂಖ್ಯಾತ್ಮಕ ಉಪಸ್ಥಿತಿಯನ್ನು ಖಚಿತಪಡಿಸುತ್ತದೆ.

ಇಂಡಿಯಾ ಜಸ್ಟಿಸ್ ರಿಪೋರ್ಟ್ 2025, ನ್ಯಾಯಾಂಗದಲ್ಲಿನ ಪ್ರಾತಿನಿಧ್ಯದಲ್ಲಿರುವ ದೊಡ್ಡ ಅಂತರವನ್ನು ಎತ್ತಿ ತೋರಿಸುತ್ತದೆ.

ಎಪ್ರಿಲ್ 2025ರ ಹೊತ್ತಿಗೆ, ಹೈಕೋರ್ಟ್ ನ್ಯಾಯಾಧೀಶರಲ್ಲಿ ಕೇವಲ ಶೇ. 3 ಮಾತ್ರ ಎಸ್‌ಸಿ, ಎಸ್‌ಟಿ ಸಮುದಾಯದವರು.

2018ರಿಂದ ನೇಮಕಗೊಂಡ 698 ಹೈಕೋರ್ಟ್ ನ್ಯಾಯಾಧೀಶರಲ್ಲಿ, ಕೇವಲ 22 ಜನರು ಎಸ್‌ಸಿ ಮತ್ತು 15 ಎಸ್‌ಟಿ ಸಮುದಾಯಗಳಿಂದ ಬಂದವರು. ಇದು ಉನ್ನತ ನ್ಯಾಯಾಂಗ ಹುದ್ದೆಗಳಲ್ಲಿ ಇನ್ನೂ ಹೆಚ್ಚಾಗಿ ಮೇಲ್ಜಾತಿಗಳದ್ದೇ ಪ್ರಾಬಲ್ಯ ಇರುವುದನ್ನು ಹೇಳುತ್ತದೆ.

ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಗಳು ಅಸ್ತಿತ್ವದಲ್ಲಿದ್ದರೂ, ಉನ್ನತ ಅಧಿಕಾರಶಾಹಿ ಹುದ್ದೆಗಳಲ್ಲಿ, ಅಂಚಿನಲ್ಲಿರುವ ಸಮುದಾಯಗಳ ಪ್ರಾತಿನಿಧ್ಯ ಈಗಲೂ ತೀರಾ ಕಡಿಮೆ.

ಹೆಚ್ಚಿನ ರಾಜ್ಯಗಳಲ್ಲಿ, ಜಾತಿ ಆಧರಿತ ಪ್ರಾತಿನಿಧ್ಯ ಕೆಳ ಶ್ರೇಣಿಗಳಿಗೆ ಸೀಮಿತವಾಗಿದೆ. ಆದರೆ ಉನ್ನತ ಹುದ್ದೆಗಳು ಮೇಲ್ಜಾತಿಯವರ ಕೈಯಲ್ಲೇ ಇವೆ.

ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ತಾರತಮ್ಯದ ರೂಢಿಗಳನ್ನು ತೆಗೆದುಹಾಕುವ ಮತ್ತು ಸಮಾನತೆಯ ಅಗತ್ಯವನ್ನು ಹೇಳುವ ಮಹತ್ವದ ತೀರ್ಪುಗಳನ್ನು ನೀಡಿವೆ. ಆದರೂ, ಕೆಲವೊಮ್ಮೆ ಅಜಾಗರೂಕತೆಯಿಂದ ನ್ಯಾಯಾಂಗ ಜಾತಿ ಶ್ರೇಣೀಕೃತ ವ್ಯವಸ್ಥೆಗಳಿಗೆ ಕಾರಣವಾಗಬಹುದು ಎಂಬ ಟೀಕೆಗಳಿವೆ.

ಉನ್ನತ ನ್ಯಾಯಾಂಗದಲ್ಲಿಯೇ ದಲಿತರ ಪ್ರಾತಿನಿಧ್ಯ ಅತ್ಯಂತ ಕಡಿಮೆಯಿದೆ ಎಂಬುದನ್ನು ಗಮನಿಸಬೇಕು. ಇದು ಜಾತಿ ಸಂಬಂಧಿತ ಸಮಸ್ಯೆಗಳ ಕುರಿತಂತೆ ನ್ಯಾಯಾಂಗದ ನಿಲುವುಗಳ ಮೇಲೆ ಪರಿಣಾಮ ಬೀರುತ್ತದೆ.

ಅಲ್ಲದೆ, ನ್ಯಾಯಾಂಗ ಪ್ರಕ್ರಿಯೆ ಅಂಚಿನಲ್ಲಿರುವ ಸಮುದಾಯಗಳಿಗೆ ಕೈಗೆಟುಕದೇ ಇದ್ದರೆ, ಅದು ಅಧಿಕಾರ ಅಸಮತೋಲನ ಮತ್ತೂ ಉಳಿದುಬಿಡಲು ಕಾರಣವಾಗಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಿನಯ್ ಕೆ.

contributor

Similar News