×
Ad

ಕೃಷಿ, ಕೋಳಿ ಸಾಕಣೆಯಲ್ಲಿ ಯಶಸ್ಸು ಕಂಡ ಪತ್ರಕರ್ತ ನಾಗೇಶ್

Update: 2025-05-05 14:50 IST

ಮಂಡ್ಯ: ಹತ್ತಾರು ಎಕರೆ ಜಮೀನಿನಲ್ಲಿ ಕೃಷಿ ಮಾಡಿ ಆದಾಯ ಕಾಣದೆ ಸಾಲದಲ್ಲಿ ಮುಳುಗಿ ನಷ್ಟ ಅನುಭವಿಸುತ್ತಿರುವ ರೈತರ ನಡುವೆ ಪತ್ರಕರ್ತ ನಾಗೇಶ್ ರಾಗಿಮುದ್ದನಹಳ್ಳಿ ಅವರು, ಕೇವಲ 14 ಗುಂಟೆ ಜಮೀನಿನಲ್ಲಿ ನಾನಾ ಬಗೆಯ ಹಣ್ಣಿನ ಮರ, ಹೂವಿನ ಗಿಡ ಬೆಳೆದು ಅದಾಯ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಪಾಂಡವಪುರ ತಾಲೂಕು ರಾಗಿಮುದ್ದನಹಳ್ಳಿಯ ಪತ್ರಕರ್ತ ನಾಗೇಶ್, ಮಳೆಯಾಶ್ರಿತ 14 ಗುಂಟೆ ಭೂಮಿಯಲ್ಲಿ 35 ವಿಧದ 200 ಮರಗಳನ್ನು ಬೆಳೆದಿದ್ದಾರೆ. ಜತೆಗೆ ನಾಟಿ ಕೋಳಿಗಳನ್ನೂ ಸಾಕುತ್ತಿದ್ದು, ಅವುಗಳೂ ಆದಾಯ ತಂದುಕೊಡುತ್ತಿವೆ. ಅಲ್ಲಿಯೇ ಒಂದು ಪುಟ್ಟ ಮನೆ ನಿರ್ಮಿಸಿದ್ದಾರೆ. ನೀರಿನ ಇಂಗುಗುಂಡಿ, ಎರೆಹುಳುವಿನ ತೊಟ್ಟಿ, ಒಂದು ಕೊಳವೆಬಾವಿ ಇದೆ.

ಕೋವಿಡ್ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದ ಕಾಲವದು. ಮಹಾಮಾರಿಗೆ ಹೆದರಿ ಎಲ್ಲರೂ ಮನೆ ಸೇರಿಕೊಂಡಿದ್ದರು. ಆದರೆ, ನಾಗೇಶ್ ಅವರಿಗೆ ಸುಮ್ಮನೆ ಮನೆಯಲ್ಲಿ ಕೂರುವುದು ಹೇಗೆ ಎಂದು ಚಡಪಡಿಕೆ ಶುರುವಾ ಯಿತಂತೆ. ಮಳೆ ಬಿದ್ದಾಗ ರಾಗಿ, ಜೋಳ ಮಾತ್ರ ಬೆಳೆಯುತ್ತಿದ್ದ ತನ್ನ ಕೇವಲ 14 ಗುಂಟೆ ಜಮೀನಿನಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆ ಯುವ ನಿರ್ಧಾರ ಕೈಗೊಂಡರು.

ಅಂತೆಯೇ ಭೂಮಿ ಯಲ್ಲಿ ಒಂದು ಬೋರ್‌ವೆಲ್ ಕೊರೆಯಿಸಲಾಯಿತು. 580 ಅಡಿ ಕೊರೆದರೂ ನೀರು ಬರಲಿಲ್ಲ. ಆದರೆ, ಧೃತಿಗೆಡದ ಅವರು, ಬೋರ್‌ವೆಲ್ ಸುತ್ತ ಇಂಗುಗುಂಡಿ ನಿರ್ಮಿಸಿದರು. ಮಳೆ ಬಿದ್ದಾಗ ಜಮೀನು ಮತ್ತು ತಮ್ಮ ಮನೆಯ ಮೇಲಿಂದ ಹರಿದು ಬಂದ ನೀರು ಇಂಗುಗುಂಡಿಗೆ ಬಿದ್ದು, ಬೋರ್‌ವೆಲ್ ರಿಚಾರ್ಜ್ ಆಗತೊಡಗಿ ಬೋರ್‌ವೆಲ್‌ನಲ್ಲಿ ನೀರು ತುಂಬಿತು.

ಜಮೀನಿನ ಸುತ್ತ ಮುಳ್ಳಿನ ಬೇಲಿ ನಿರ್ಮಿಸಿದರು. ಮೊದಲು 104 ಅಡಿಕೆ ಗಿಡ, 12 ಬಾಳೆ ಗಿಡ, 15 ತೆಂಗಿನ ಗಿಡ ನೆಟ್ಟು ಹನಿ ನೀರಾವರಿ ಅಳವಡಿಸಿದರು. ಬಳಿಕ 4 ಏಲಕ್ಕಿ, 3 ಕರಿಮೆಣಸು, 2 ನಿಂಬೆ ಬೆಳೆ, ತಲಾ ಒಂದರಂತೆ ರಾಮಫಲ, ಲಕ್ಷ್ಮಣ ಫಲ, ಹನುಮ ಫಲ, ಸೀತಾಫಲ, ಹಿರಳೇಕಾಯಿ, ಮಾಮ, ಡ್ರಾಗನ್ ಫ್ರೂಟ್, ಫಲಾವ್ ಎಲೆ, ಕರಿಬೇವು, ನುಗ್ಗೆ, ಚಕ್ಕೆ, ಲವಂಗ, ದಾಳಿಂಬೆ, ಸೇಬು, ಕಿತ್ತಳೆ, ನೋನಿ, ಬಾದಾಮಿ, ಕಿವಿ ಫ್ರೂಟ್, ನೆಲ್ಲಿಕಾಯಿ, ಜಾಯಿ ಕಾಯಿ, 2 ನಿಂಬೆ, 3 ಕಾಫಿ, 2 ಬಟರ್ ಫ್ರೂಟ್, 2 ಸೀಬೆ, 3 ಪರಂಗಿ, 3 ವೀಳ್ಯದೆಲೆ, 2 ಅಮೃತ ಬಳ್ಳಿ, 10 ಕನಕಾಂಬರ, 5 ಗುಲಾಬಿ, 4 ದಾಸವಾಳ ಗಿಡಗಳನ್ನು ನೆಟ್ಟು ಇವೆಲ್ಲಕ್ಕೂ ಹನಿ ನೀರಾವರಿ ವ್ಯವಸ್ಥೆ ಮಾಡಿದರು.

ಎಲ್ಲ ಸಸಿ ಮತ್ತು ಗಿಡಗಳಿಗೂ ಸಾವಯವ ಗೊಬ್ಬರವನ್ನೇ ಬಳಸಿಕೊಂಡ ಬಂದ ನಾಗೇಶ್, ಒಂದಷ್ಟು ಎರೆಹುಳು ತಂದು ಮಣ್ಣಿಗೆ ಬಿಟ್ಟರು. ಎರೆಹುಳುಗಳು ಎರೆಗೊಬ್ಬರವನ್ನು ಕೊಡುತ್ತಾ ಬರುತ್ತಿವೆ. ಭೂಮಿ ಫಲವತ್ತಾಗುವುದರ ಜೊತೆಗೆ ಎರೆಗೊಬ್ಬರವು ಮಣ್ಣಿಗೆ ಸೇರಿಕೊಂಡು ಬೆಳೆಗಳು ಫಲವತ್ತಾಗಿ ಬೆಳೆಯಲು ಸಾಧ್ಯವಾಯಿತು. 5 ವರ್ಷದಿಂದ ಒಂದು ಹಿಡಿ ರಸಗೊಬ್ಬರವನ್ನೂ ಬಳಸಿಲ್ಲವಂತೆ. ಎರೆಗೊಬ್ಬರದಲ್ಲೇ ಬೆಳೆ ಹುಲುಸಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿವೆ.

ನೀರು, ಸಗಣಿ, ಗಂಜಲ, ದ್ವಿದಳ ಧಾನ್ಯ, ಬೆಲ್ಲಗಳಿಂದ ತಯಾರಿಸಿದ ಜೀವಾಮೃತವನ್ನು ಬೆಳೆಗಳ ಬೆಳವಣಿಗೆಗೆ ಹಾಕುವುದರ ಜೊತೆಗೆ ಡಿಕಂಪೋಸರ್ ವೇಸ್ಟ್, ಬೆಲ್ಲ ಮತ್ತು ನೀರಿನಿಂದ ತಯಾರಿಸಿದ ಔಷಧಿಯನ್ನು ಬೆಳೆಗಳಿಗೆ ಸಿಂಪಡಿಸಿ ರೋಗ ಬಾರದಂತೆ ನೋಡಿಕೊಳ್ಳುತ್ತಾರೆ. ಈ ಜಮೀನಿನಲ್ಲೇ ಒಂದು ಪುಟ್ಟದಾದ ಮನೆ ಮಾಡಿಕೊಂಡಿದ್ದಾರೆ.

ಜಮೀನಿನಲ್ಲಿ 50 ನಾಟಿಕೋಳಿಗಳನ್ನು ಸಾಕಿದ್ದಾರೆ. ಕೋಳಿಗೊಬ್ಬರವು ಬೆಳೆಗಳಿಗೆ ಅನುಕೂಲವಾಗಿದೆ. ಒಂದು ಕೋಳಿ ಮೊಟ್ಟೆಗೆ 15 ರೂ.ನಂತೆ ಮಾರಾಟ ಮಾಡುತ್ತಾರೆ. ಜಮೀನಿನಲ್ಲಿ ಒಂದು ಪೆಟ್ಟಿಗೆ ಇಟ್ಟು ಜೇನು ಸಾಕಣೆಗೂ ನಾಗೇಶ್ ಪ್ರಯತ್ನಿಸುತ್ತಿದ್ದಾರೆ. ಇಂಗುಗುಂಡಿ, ಬೋರ್‌ವೆಲ್ ರಿಚಾರ್ಜ್, ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಮೂಲಕ ಸರಕಾರದ ಸಹಾಯ ಧನವನ್ನು ಬಳಸಿಕೊಂಡಿದ್ದಾರೆ. ಈಗ ಸರಕಾರದ ಧನಸಹಾಯದಿಂದ ಮೇಕೆ ಸಾಕಣೆಗಾಗಿ ಶೆಡ್ ನಿರ್ಮಿಸುತ್ತಿದ್ದಾರೆ.

ಕೊರೋನ ಸಮಯದಲ್ಲಿ ಮನೆಯಲ್ಲೇ ಸುಮ್ಮನೇ ಕುಳಿತು ಬೇಜಾರಾಗುತ್ತಿತ್ತು. ಮಳೆ ಬಂದರೆ ಮಾತ್ರ ರಾಗಿ, ಜೋಳವನ್ನೋ ಕೊಡುತ್ತಿದ್ದ ಕೇವಲ 14 ಗುಂಟೆ ಭೂಮಿಯಲ್ಲಿ ಕೃಷಿಯನ್ನು ಆರಂಭಿಸಿ ಆ ಮೂಲಕ ಖುಷಿ ಕಾಣುವ ಯೋಚನೆ ಮಾಡಿದೆ. ಈಗ ನನ್ನ ಪುಟ್ಟ ತೋಟದಿಂದ ವರ್ಷಕ್ಕೆ ಸುಮಾರು 1.5 ಲಕ್ಷ ರೂ. ಆದಾಯ ಪಡೆಯುತ್ತಿದ್ದೇನೆ. ಮುಂದೆ ನಾಲ್ಕು ಮೇಕೆ ಹಾಗೂ ದೇಸಿ ತಳಿಯ ಮಲೆನಾಡು ಗಿಡ್ಡ ಹಸು ಸಾಕುವ ಪ್ರಯತ್ನ ಮಾಡುತ್ತಿದ್ದೇನೆ. ಇವೆಲ್ಲವುಗಳಿಂದ ಮತ್ತಷ್ಟು ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ಆದಾಯಕ್ಕಿಂತ ನನಗೆ ಕೃಷಿ ತುಂಬಾ ಖುಷಿ ತಂದುಕೊಟ್ಟಿದೆೆ.

-ನಾಗೇಶ್, ರಾಗಿಮುದ್ದನಹಳ್ಳಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕುಂಟನಹಳ್ಳಿ ಮಲ್ಲೇಶ

contributor

Similar News