×
Ad

ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣ: ತನಿಖೆಯಿಲ್ಲದೆ ದೋಷಾರೋಪ ನ್ಯಾಯಸಮ್ಮತವೇ?

Update: 2025-08-03 09:54 IST

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪ್ರಕರಣವು ಕೇವಲ ಒಬ್ಬ ವ್ಯಕ್ತಿಯ ಸುತ್ತಲಿನ ವಿವಾದವಲ್ಲ. ಇದು ಭಾರತದ ನ್ಯಾಯಾಂಗದ ಆತ್ಮಸಾಕ್ಷಿಯನ್ನು ಪರೀಕ್ಷೆಗೊಡ್ಡುವ ಪ್ರಕರಣ. ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಹೇಳಿದಂತೆ, ‘‘ಪದಚ್ಯುತಿಯಂತಹ ಗಂಭೀರ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಏಕೆಂದರೆ ಇದು ಕೇವಲ ಸಂಬಂಧಪಟ್ಟ ನ್ಯಾಯಾಧೀಶರು ಮತ್ತು ಅವರ ಕುಟುಂಬದ ಮೇಲೆ ಮಾತ್ರವಲ್ಲ, ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.’’

ಇತ್ತೀಚೆಗೆ, ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಸುತ್ತಲಿನ ವಿವಾದವು ಭಾರತದ ನ್ಯಾಯಾಂಗ ಮತ್ತು ಸಾಂವಿಧಾನಿಕ ವಲಯಗಳಲ್ಲಿ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಆಂತರಿಕ ವಿಚಾರಣಾ ಸಮಿತಿಯ ವರದಿಯೊಂದನ್ನು ಆಧರಿಸಿ, ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಈ ವರದಿಯ ಕಾನೂನಾತ್ಮಕ ಸಿಂಧುತ್ವ, ಅದರಲ್ಲಿನ ಲೋಪದೋಷಗಳು ಮತ್ತು ಮುಖ್ಯವಾಗಿ, ಯಾವುದೇ ಪೊಲೀಸ್ ತನಿಖೆಯಿಲ್ಲದೆ ಸಂಸತ್ತು ಈ ವಿಷಯವನ್ನು ಕೈಗೆತ್ತಿಕೊಳ್ಳುವುದರ ಔಚಿತ್ಯದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಈ ಸಂಕೀರ್ಣ ವಿಷಯದ ಕುರಿತು ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ತಮ್ಮ ಯೂಟ್ಯೂಬ್ ಕಾರ್ಯಕ್ರಮ ‘@dilsewithkapilsibal’ ನಲ್ಲಿ ಆಯೋಜಿಸಿದ್ದ ಚರ್ಚೆಯು ಅತ್ಯಂತ ಮಹತ್ವದ್ದಾಗಿದೆ. ಈ ಚರ್ಚೆಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಮತ್ತು ಸಂಜಯ್ ಕಿಶನ್ ಕೌಲ್ ಹಾಗೂ ದಿಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರಂತಹ ಶ್ರೇಷ್ಠ ಕಾನೂನು ತಜ್ಞರು ಭಾಗವಹಿಸಿ, ಪ್ರಕರಣದ ಪ್ರತಿಯೊಂದು ಆಯಾಮವನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದಾರೆ. ಈ ಚರ್ಚೆಯಲ್ಲಿ ಅವರು ಎತ್ತಿದ ಅಂಶಗಳು, ನ್ಯಾಯಾಂಗದ ಸ್ವಾತಂತ್ರ್ಯ, ನ್ಯಾಯದಾನ ಪ್ರಕ್ರಿಯೆ ಮತ್ತು ಸಾಂವಿಧಾನಿಕ ತತ್ವಗಳ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡುತ್ತದೆ.

ಆಂತರಿಕ ವಿಚಾರಣಾ ವರದಿಯ ಕಾನೂನಾತ್ಮಕ ದೌರ್ಬಲ್ಯ

ಚರ್ಚೆಯ ಕೇಂದ್ರಬಿಂದುವಾಗಿದ್ದುದು ಆಂತರಿಕ ವಿಚಾರಣಾ ವರದಿಯ ಸಿಂಧುತ್ವ. ನ್ಯಾಯಮೂರ್ತಿ ವರ್ಮಾ ಅವರ ನಿವಾಸದ ಹೊರಗಿನ ಔಟ್‌ಹೌಸ್‌ನಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದು, ಅವರನ್ನು ಪದಚ್ಯುತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ. ಆದರೆ, ಈ ತೀರ್ಮಾನಕ್ಕೆ ಬರಲು ಅನುಸರಿಸಿದ ಪ್ರಕ್ರಿಯೆಯು ಕಾನೂನಿನ ದೃಷ್ಟಿಯಲ್ಲಿ ದೋಷಪೂರಿತವಾಗಿದೆ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಜ್ಞರು ಒಕ್ಕೊರಲಿನಿಂದ ಅಭಿಪ್ರಾಯಪಟ್ಟರು.

ಹೊಣೆಗಾರಿಕೆಯ ತಪ್ಪು ವರ್ಗಾವಣೆ

ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಅತ್ಯಂತ ಪ್ರಮುಖವಾದ ಕಾನೂನಾತ್ಮಕ ಅಂಶವನ್ನು ಪ್ರಸ್ತಾಪಿಸಿದರು. ವರದಿಯು, ಆ ಹಣ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸುವ ಹೊರೆಯನ್ನು ನ್ಯಾಯಮೂರ್ತಿ ವರ್ಮಾ ಅವರ ಮೇಲೆ ಹಾಕಿದೆ. ಆದರೆ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ಒಂದು ಸ್ಥಳದ ಮೇಲೆ ‘ವಿಶೇಷ ಸ್ವಾಧೀನ’ (exclusive possession) ಹೊಂದಿದ್ದಾಗ ಮಾತ್ರ ಈ ರೀತಿಯ ಹೊಣೆಗಾರಿಕೆಯನ್ನು ಹೊರಿಸಬಹುದು. ನ್ಯಾಯಮೂರ್ತಿಗಳ ನಿವಾಸವು ವಿಶಾಲವಾಗಿದ್ದು, ಹಿಂಭಾಗದಲ್ಲಿ ಅನೇಕ ಸಿಬ್ಬಂದಿ ಕ್ವಾರ್ಟರ್ಸ್‌ಗಳಿವೆ. ಅಲ್ಲಿಗೆ ನಿರಂತರವಾಗಿ ಜನರು ಓಡಾಡುತ್ತಾರೆ. ಹೀಗಿರುವಾಗ, ಆ ಔಟ್‌ಹೌಸ್ ಮೇಲೆ ನ್ಯಾಯಮೂರ್ತಿಗಳಿಗೆ ವಿಶೇಷ ಸ್ವಾಧೀನವಿತ್ತು ಎಂದು ಹೇಳಲಾಗುವುದಿಲ್ಲ. ಹಾಗಾಗಿ, ಯಾವುದೇ ಸರಿಯಾದ ತನಿಖೆಯಿಲ್ಲದೆ ಅವರ ಮೇಲೆ ಆರೋಪದ ಹೊರೆಯನ್ನು ಹಾಕುವುದು ಕಾನೂನಿಗೆ ವಿರುದ್ಧವಾದದ್ದು ಎಂದು ಅವರು ವಾದಿಸಿದ್ದಾರೆ.

ಸಾಕ್ಷ್ಯಾಧಾರಗಳ ಕೊರತೆ

ಇಡೀ ಪ್ರಕರಣವು ಕೇವಲ ಒಂದು ವೀಡಿಯೊವನ್ನು ಆಧರಿಸಿದೆ. ಆದರೆ, ಆ ವೀಡಿಯೊದ ನಂತರ ನಡೆದ ಘಟನೆಗಳು ಹಲವಾರು ಅನುಮಾನಗಳನ್ನು ಹುಟ್ಟುಹಾಕುತ್ತವೆ.

ಹಣ ಎಲ್ಲಿ ಹೋಯಿತು? ವೀಡಿಯೊದಲ್ಲಿ ಕಂಡ ಹಣ, ಮರುದಿನ ಬೆಳಗ್ಗೆ ನ್ಯಾಯಮೂರ್ತಿ ವರ್ಮಾ ಅವರು ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪ್ರಧಾನ ಕಾರ್ಯದರ್ಶಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿರಲಿಲ್ಲ. ಒಂದೇ ಒಂದು ನೋಟು ಕೂಡ ಪತ್ತೆಯಾಗಲಿಲ್ಲ. ಹಾಗಾದರೆ ಆ ಹಣ ಎಲ್ಲಿಗೆ ಹೋಯಿತು?

ಸಿಸಿಟಿವಿ ನಿಗೂಢತೆ

ನ್ಯಾಯಮೂರ್ತಿಗಳ ನಿವಾಸದ ಭದ್ರತೆಯನ್ನು ನೋಡಿಕೊಳ್ಳುವ ಸಿಆರ್‌ಪಿಎಫ್ ನಿರ್ವಹಿಸುವ ಸಿಸಿಟಿವಿ ಕ್ಯಾಮರಾಗಳು ಘಟನೆಯ ಸಮಯದಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂಬುದು ಅತ್ಯಂತ ಗಂಭೀರವಾದ ಭದ್ರತಾ ಲೋಪ. ‘‘ಸಿಸಿಟಿವಿ ಯಾವಾಗ ಕೆಲಸ ಮಾಡುವುದನ್ನು ನಿಲ್ಲಿಸಿತು? ಏಕೆ ನಿಲ್ಲಿಸಿತು? ಇದಕ್ಕೆ ಯಾರು ಹೊಣೆ?’’ ಎಂಬ ಪ್ರಶ್ನೆಗಳನ್ನು ಚರ್ಚೆಯಲ್ಲಿ ಎತ್ತಲಾಯಿತು. ಸಿಸಿಟಿವಿ ಇಲ್ಲದ ಕಾರಣ ಆ ರಾತ್ರಿ ಅಲ್ಲಿಗೆ ಯಾರು ಬಂದರು, ಯಾರು ಹೋದರು, ಏನು ತೆಗೆದುಕೊಂಡು ಹೋದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.

ಕಪಿಲ್ ಸಿಬಲ್ ಅವರು, ‘‘ಒಂದೇ ಒಂದು ಕರೆನ್ಸಿ ನೋಟು ಸಿಕ್ಕಿದ್ದರೂ, ಅದರ ಸರಣಿ ಸಂಖ್ಯೆಯ ಮೂಲಕ ಅದರ ಮೂಲವನ್ನು ಪತ್ತೆಹಚ್ಚಬಹುದಿತ್ತು. ಆದರೆ ಇಲ್ಲಿ ಯಾವುದೇ ಭೌತಿಕ ಸಾಕ್ಷ್ಯವನ್ನು ಸಂರಕ್ಷಿಸಲಾಗಿಲ್ಲ’’ ಎಂದು ವಿಷಾದಿಸಿದರು. ನ್ಯಾಯಮೂರ್ತಿ ಮದನ್ ಲೋಕೂರ್, ‘‘ಆ ಹಣ ಎಲ್ಲಿಂದ ಬಂತು? ಎಲ್ಲಿಗೆ ಹೋಯಿತು? ಅವು ಅಸಲಿ ನೋಟುಗಳೇ ಅಥವಾ ನಕಲಿ ನೋಟುಗಳೇ? ಈ ಇಡೀ ಪ್ರಕರಣವು ಉತ್ತರಗಳಿಗಿಂತ ಹೆಚ್ಚು ಪ್ರಶ್ನೆಗಳನ್ನೇ ಹುಟ್ಟುಹಾಕಿದೆ. ಸತ್ಯ ಏನು ಎಂಬುದು ಯಾರಿಗೂ ತಿಳಿದಿಲ್ಲ. ಇದಕ್ಕಾಗಿಯೇ ಒಂದು ತನಿಖೆ ಅತ್ಯಗತ್ಯ’’ ಎಂದು ಹೇಳಿದರು.

ಸಾಂವಿಧಾನಿಕ ಬಿಕ್ಕಟ್ಟು: ಮುಖ್ಯ ನ್ಯಾಯಮೂರ್ತಿಗಳ ಕ್ರಮದ ಔಚಿತ್ಯ

ಈ ಪ್ರಕರಣವು ಕೇವಲ ಕಾನೂನಾತ್ಮಕ ಸಮಸ್ಯೆಯಾಗಿ ಉಳಿದಿಲ್ಲ, ಅದೊಂದು ಗಂಭೀರ ಸಾಂವಿಧಾನಿಕ ಪ್ರಶ್ನೆಯನ್ನೂ ಎತ್ತಿದೆ. ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಆಂತರಿಕ ವಿಚಾರಣಾ ವರದಿಯನ್ನು ನೇರವಾಗಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಕಳುಹಿಸಿದ್ದರ ಬಗ್ಗೆ ಚರ್ಚೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಕಪಿಲ್ ಸಿಬಲ್ ಅವರ ಪ್ರಕಾರ, ‘‘ಸಂವಿಧಾನವು ನ್ಯಾಯಾಧೀಶರ ಪದಚ್ಯುತಿ ಪ್ರಕ್ರಿಯೆಯನ್ನು (impeachment) ಆರಂಭಿಸುವ ಅಧಿಕಾರವನ್ನು ಸಂಸತ್ ಸದಸ್ಯರಿಗೆ ವೈಯಕ್ತಿಕವಾಗಿ ನೀಡಿದೆಯೇ ಹೊರತು, ಸರಕಾರಕ್ಕಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕಾಗಲಿ ನೀಡಿಲ್ಲ. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲು ಮಾಡಿದ ವ್ಯವಸ್ಥೆ. ಆದರೆ, ಮುಖ್ಯ ನ್ಯಾಯಮೂರ್ತಿಗಳು ಈ ವರದಿಯನ್ನು ಸರಕಾರಕ್ಕೆ ಕಳುಹಿಸುವ ಮೂಲಕ, ಸಂಪೂರ್ಣವಾಗಿ ಸಾಂವಿಧಾನಿಕವಾಗಿರಬೇಕಾದ ಪ್ರಕ್ರಿಯೆಯನ್ನು ರಾಜಕೀಯಗೊಳಿಸಿದ್ದಾರೆ. ಈಗ ಸಿಜೆಐ ಅವರೇ ವರದಿ ಕಳುಹಿಸಿರುವುದರಿಂದ, ಅದನ್ನು ನಂಬದಿರಲು ಯಾರಿಗೆ ಸಾಧ್ಯ? ಎಂಬಂತಾಗಿ, ಸರಕಾರವು ಪದಚ್ಯುತಿ ನಿರ್ಣಯವನ್ನು ಮಂಡಿಸಲು ಒತ್ತಡಕ್ಕೆ ಸಿಲುಕಿದಂತೆ ಭಾಸವಾಗುತ್ತಿದೆ.’’

ಈ ವಾದಕ್ಕೆ ಧ್ವನಿಗೂಡಿಸಿದ ನ್ಯಾಯಮೂರ್ತಿ ಲೋಕೂರ್, ಈ ಕ್ರಮವು ನ್ಯಾಯಾಂಗದ ಮೇಲಿನ ನಂಬಿಕೆಗೆ ಧಕ್ಕೆ ತರಬಹುದು ಎಂದರು. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು, ‘‘ಮುಖ್ಯ ನ್ಯಾಯಮೂರ್ತಿಗಳು ತಮ್ಮ ನಿವೃತ್ತಿಯ ಅಂಚಿನಲ್ಲಿದ್ದ ಕಾರಣ, ಹೆಚ್ಚು ಸಮಯಾವಕಾಶವಿಲ್ಲದೆ ಈ ನಿರ್ಧಾರವನ್ನು ತೆಗೆದುಕೊಂಡಿರಬಹುದು’’ ಎಂಬ ಸಾಧ್ಯತೆಯನ್ನು ಮುಂದಿಟ್ಟರು. ಆದರೆ, ಈ ಕ್ರಮವು ಸಾಂವಿಧಾನಿಕವಾಗಿ ಸರಿಯಲ್ಲ ಎಂಬ ಬಗ್ಗೆ ಎಲ್ಲರ ಸಹಮತವಿತ್ತು.

ಪೊಲೀಸರ ವೈಫಲ್ಯ ಮತ್ತು ತನಿಖೆಯ ಅನಿವಾರ್ಯತೆ

ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮಧ್ಯರಾತ್ರಿ ಸುಮಾರು 12:00ರಿಂದ 1:50 ರವರೆಗೆ, ಅಂದರೆ ಸುಮಾರು ಎರಡು ಗಂಟೆಗಳ ಕಾಲ ಇದ್ದರು. ಆದರೂ, ಅವರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸದಿರುವುದು ಆಶ್ಚರ್ಯಕರ.

ನ್ಯಾಯಮೂರ್ತಿ ಕೌಲ್ ಅವರ ಪ್ರಕಾರ, ವೀರಸ್ವಾಮಿ ಪ್ರಕರಣದ ತೀರ್ಪಿನ ಪ್ರಕಾರ ಹಾಲಿ ನ್ಯಾಯಾಧೀಶರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೂರ್ವಾನುಮತಿ ಬೇಕಾಗುತ್ತದೆ. ಈ ಕಾರಣದಿಂದಾಗಿ ಪೊಲೀಸರು ಹಿಂಜರಿದಿರಬಹುದು. ಆದರೆ, ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲೋಕೂರ್, ‘‘ವೀರಸ್ವಾಮಿ ತೀರ್ಪು ಕೇವಲ ನ್ಯಾಯಾಧೀಶರನ್ನು ಹೆಸರಿಸಲು ಅನುಮತಿ ಕೇಳುತ್ತದೆ. ಪೊಲೀಸರು, ನ್ಯಾಯಮೂರ್ತಿ ವರ್ಮಾ ಅವರನ್ನು ಹೆಸರಿಸದೆ ‘ಅಪರಿಚಿತ ವ್ಯಕ್ತಿಗಳ’ ವಿರುದ್ಧ ‘ಶೂನ್ಯ ಎಫ್‌ಐಆರ್’ ದಾಖಲಿಸಬಹುದಿತ್ತು. ಅಪಾರ ಪ್ರಮಾಣದ ಹಣ ಮತ್ತು ನಿಗೂಢ ಬೆಂಕಿಯ ಬಗ್ಗೆ ತನಿಖೆ ಆರಂಭಿಸಲು ಇದು ಸಾಕಾಗಿತ್ತು’’ ಎಂದು ಸ್ಪಷ್ಟಪಡಿಸಿದರು.

ನ್ಯಾಯಮೂರ್ತಿ ಗುಪ್ತಾ, ‘‘ಕನಿಷ್ಠಪಕ್ಷ ಪೊಲೀಸರು ಒಂದು ‘ಪಂಚನಾಮೆ’ ಮಾಡಿ, ಘಟನಾ ಸ್ಥಳದ ವಿವರಗಳನ್ನು ಮತ್ತು ಸಿಕ್ಕ ಸಾಕ್ಷ್ಯಗಳನ್ನು ದಾಖಲಿಸಬೇಕಿತ್ತು. ಅದನ್ನೂ ಮಾಡಲಾಗಿಲ್ಲ. ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಪ್ರಕಾರ, ಇಂತಹ ಸಂದರ್ಭಗಳಲ್ಲಿ ಸಂಪೂರ್ಣ ವೀಡಿಯೊಗ್ರಫಿ ಕಡ್ಡಾಯ. ಆದರೆ ಇಲ್ಲಿ ಆಯ್ದ ವೀಡಿಯೊ ಹೊರತುಪಡಿಸಿ, ಯಾವುದೇ ಅಧಿಕೃತ ದಾಖಲಾತಿ ಇಲ್ಲ. ಸಿಸಿಟಿವಿ ಇಲ್ಲದ ಸಮಯದಲ್ಲಿ, ಹೊರಗಿನವರು (ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ) ಸ್ಥಳದಲ್ಲಿದ್ದರು. ಆ ಹಣವನ್ನು ಯಾರು ಬೇಕಾದರೂ ತೆಗೆದುಕೊಂಡು ಹೋಗಿರಬಹುದು’’ ಎಂದು ವಿವರಿಸಿದರು.

ಮುಂದಿನ ದಾರಿ ಏನು?

ಚರ್ಚೆಯ ಅಂತಿಮ ಘಟ್ಟದಲ್ಲಿ, ಈ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು.

ಸಂಸತ್ತಿನ ಇಕ್ಕಟ್ಟು: ಯಾವುದೇ ಪೊಲೀಸ್ ತನಿಖೆಯಿಲ್ಲದೆ, ಕಾನೂನಾತ್ಮಕ ಸಿಂಧುತ್ವವಿಲ್ಲದ, ವಿವಾದಿತ ಸತ್ಯಾಂಶಗಳನ್ನೊಳಗೊಂಡ ವರದಿಯ ಆಧಾರದ ಮೇಲೆ ಸಂಸತ್ತು ಹೇಗೆ ಮುಂದುವರಿಯಲು ಸಾಧ್ಯ ಎಂಬುದು ಮುಖ್ಯ ಪ್ರಶ್ನೆ. ಕಪಿಲ್ ಸಿಬಲ್ ಹೇಳುವಂತೆ, ‘‘ಒಬ್ಬ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು, ಸಾಕ್ಷ್ಯವು ಅತ್ಯುನ್ನತ ಗುಣಮಟ್ಟದ್ದಾಗಿರಬೇಕು ಮತ್ತು ನಿರ್ವಿವಾದವಾಗಿರಬೇಕು.’’ ಆದರೆ ಇಲ್ಲಿ, ಒಬ್ಬ ಸಾಮಾನ್ಯ ಸರಕಾರಿ ನೌಕರನ ಇಲಾಖಾ ವಿಚಾರಣೆಯಲ್ಲಿ ಸಿಗುವ ಕನಿಷ್ಠ ಹಕ್ಕುಗಳಾದ ಅಡ್ಡ-ಪರಿಶೀಲನೆಯ ಅವಕಾಶ ಕೂಡ ನ್ಯಾಯಮೂರ್ತಿಗಳಿಗೆ ಸಿಕ್ಕಿಲ್ಲ.

ಪಕ್ಷಪಾತದ ಆರೋಪ: ಕಪಿಲ್ ಸಿಬಲ್ ಅವರು, ನ್ಯಾಯಮೂರ್ತಿ ಶೇಖರ್ ಯಾದವ್ ಅವರ ದ್ವೇಷ ಭಾಷಣದ ಪ್ರಕರಣವನ್ನು ಉಲ್ಲೇಖಿಸಿ, ಅಲ್ಲಿ ಆರೋಪವು ನಿರ್ವಿವಾದವಾಗಿದ್ದರೂ ಆರು ತಿಂಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಇಲ್ಲಿ ತರಾತುರಿಯಲ್ಲಿ ಕ್ರಮಕ್ಕೆ ಮುಂದಾಗುತ್ತಿರುವುದು ಸರಕಾರದ ಪಕ್ಷಪಾತವನ್ನು ತೋರಿಸುತ್ತದೆಯೇ? ಎಂಬ ಪ್ರಶ್ನೆಯನ್ನು ಎತ್ತಿದರು.

ಪರಿಹಾರ-ವಿಶೇಷ ತನಿಖಾ ತಂಡ (ಎಸ್‌ಐಟಿ):

ಚರ್ಚೆಯಲ್ಲಿದ್ದ ಎಲ್ಲಾ ತಜ್ಞರು ಒಪ್ಪಿದ ಏಕೈಕ ಪರಿಹಾರವೆಂದರೆ, ತಕ್ಷಣವೇ ಒಂದು ನಿಷ್ಪಕ್ಷ ಮತ್ತು ವೈಜ್ಞಾನಿಕ ತನಿಖೆ ನಡೆಸುವುದು. ನ್ಯಾಯಮೂರ್ತಿ ಲೋಕೂರ್ ಹೇಳುವಂತೆ, ಭಾರತದ ಮುಖ್ಯ ನ್ಯಾಯಮೂರ್ತಿಗಳು ಈಗಲೂ ತಮ್ಮ ಪ್ರಧಾನ ಕಾರ್ಯದರ್ಶಿಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬಹುದು. ಇದು ಭ್ರಷ್ಟಾಚಾರದ ಪ್ರಕರಣವಾದ್ದರಿಂದ ಸಿಬಿಐ ಅಧಿಕಾರಿಗಳನ್ನೂ ತನಿಖೆಗೆ ಸೇರಿಸಬಬಹುದು.

ನ್ಯಾಯಮೂರ್ತಿ ಕೌಲ್ ಮತ್ತು ಗುಪ್ತಾ, ಈ ಪ್ರಕರಣದ ಆಳವನ್ನು ತಲುಪಲು ಒಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದೇ ಅತ್ಯುತ್ತಮ ಮಾರ್ಗ ಎಂದು ಅಭಿಪ್ರಾಯಪಟ್ಟರು.

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪ್ರಕರಣವು ಕೇವಲ ಒಬ್ಬ ವ್ಯಕ್ತಿಯ ಸುತ್ತಲಿನ ವಿವಾದವಲ್ಲ. ಇದು ಭಾರತದ ನ್ಯಾಯಾಂಗದ ಆತ್ಮಸಾಕ್ಷಿಯನ್ನು ಪರೀಕ್ಷೆಗೊಡ್ಡುವ ಪ್ರಕರಣ. ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಹೇಳಿದಂತೆ, ‘‘ಪದಚ್ಯುತಿಯಂತಹ ಗಂಭೀರ ಪ್ರಕ್ರಿಯೆಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ಏಕೆಂದರೆ ಇದು ಕೇವಲ ಸಂಬಂಧಪಟ್ಟ ನ್ಯಾಯಾಧೀಶರು ಮತ್ತು ಅವರ ಕುಟುಂಬದ ಮೇಲೆ ಮಾತ್ರವಲ್ಲ, ಇಡೀ ನ್ಯಾಯಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.’’

ಸತ್ಯವನ್ನು ಪತ್ತೆಹಚ್ಚಲು ಯಾವುದೇ ವೈಜ್ಞಾನಿಕ ತನಿಖೆ ನಡೆಸದೆ, ಕಾನೂನಿನ ಮೂಲಭೂತ ತತ್ವಗಳನ್ನು ಗಾಳಿಗೆ ತೂರಿ, ಕೇವಲ ಅನುಮಾನಗಳು ಮತ್ತು ಪ್ರತಿಕೂಲ ತೀರ್ಮಾನಗಳ (adverse inferences) ಮೇಲೆ ಆಧಾರಿತವಾದ ಆಂತರಿಕ ವರದಿಯನ್ನು ಹಿಡಿದುಕೊಂಡು ಒಬ್ಬ ಹೈಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಗೊಳಿಸಲು ಹೊರಡುವುದು ನ್ಯಾಯದಾನ ಪ್ರಕ್ರಿಯೆಯ ಅಣಕವಾಗುತ್ತದೆ. ‘ಹಣ ಎಲ್ಲಿಂದ ಬಂತು, ಯಾರು ತಂದರು, ಬೆಂಕಿ ಹೇಗೆ ಹತ್ತಿಕೊಂಡಿತು, ಸಿಸಿಟಿವಿ ಏಕೆ ಕೆಲಸ ಮಾಡಲಿಲ್ಲ?’ - ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ, ಯಾವುದೇ ಕ್ರಮವು ದುಡುಕಿನ ಮತ್ತು ಅನ್ಯಾಯದ ನಡೆಯಾಗುತ್ತದೆ. ನ್ಯಾಯಮೂರ್ತಿ ಲೋಕೂರ್ ಅವರು ತಮಾಷೆಯಾಗಿ ‘‘ಇದನ್ನು ಷರ್ಲಾಕ್ ಹೋಮ್ಸ್ ಗೆ ವಹಿಸಬೇಕು’’ ಎಂದು ಹೇಳಿದ್ದು, ಪ್ರಕರಣದ ನಿಗೂಢತೆಯನ್ನು ಸೂಚಿಸುತ್ತದೆ.

ಆದ್ದರಿಂದ, ಸಂಸತ್ತು ಅಥವಾ ಸರಕಾರವು ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ, ಸತ್ಯಾಂಶವನ್ನು ಹೊರತರಬೇಕು. ತನಿಖೆಯಿಲ್ಲದ ದೋಷಾರೋಪವು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಎಸಗುವ ದೊಡ್ಡ ಅಪಚಾರವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿಹಾಲ್ ಮುಹಮ್ಮದ್

contributor

Similar News