×
Ad

ಕಲಬುರಗಿ: ಕಲ್ಯಾಣ ಕರ್ನಾಟಕದ 11 ನೀರಾವರಿ ಜಲಾಶಯಗಳು ಭರ್ತಿ

ನೀರಾವರಿ ಯೋಜನೆಗಳ ಸಕ್ರಿಯಗೊಳಿಸಲು ಸಮಿತಿ ರಚನೆಗೆ ಆಗ್ರಹ

Update: 2025-09-16 14:50 IST

ಕಲಬುರಗಿ: ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶವೆಂದೇ ಕರೆಯಲ್ಪಡುವ ಯಾದಗಿರಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ರೈತರ ಹೊಲಗಳಿಗೆ ಕರ್ನಾಟಕ ನೀರಾವರಿ ಇಲಾಖೆಯಿಂದ ಸಮರ್ಪಕ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತವೆ. ಮೂರು ಜಿಲ್ಲೆಗಳಲ್ಲಿನ 11 ಮಧ್ಯಮ ಜಲಾಶಯಗಳ ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.

ಯಾದಗಿರ ಜಿಲ್ಲೆಯ ಹತ್ತಿಕುಣಿ, ಸೌದಾಗರ್ 2 ಜಲಾಶಯಗಳ ನೀರಿನ ಸಂಗ್ರಹದ ಸಾಮರ್ಥ್ಯ 0.639 ಟಿಎಂಸಿ ಇದೆ. ಇವುಗಳಿಂದ ಒಟ್ಟು 8,801.88 ಎಕರೆಯಷ್ಟು ನೀರಾವರಿಯಾಗಬೇಕು. ಬೀದರ್ ಜಿಲ್ಲೆಯಲ್ಲಿರುವ 3 ಜಲಾಶಯಗಳಾದ ಕಾರಂಜಾ ಡ್ಯಾಮ್, ಹುಮನಬಾದ್‌ನ ಮುಲ್ಲಾಮಾರಿ ಮೇಲ್ದಂಡೆ, ಬಸವಕಲ್ಯಾಣ ತಾಲೂಕಿನ ಚುಳಕಿನಾಲಾ ಡ್ಯಾಮ್ ನ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 9.378 ಟಿಎಂಸಿ ಇದೆ. ಇವುಗಳಿಂದ ಒಟ್ಟು 73,965.99 ಎಕರೆಯಷ್ಟು ನೀರಾವರಿಯಾಗಬೇಕು. ಕಲಬುರಗಿ ಜಿಲ್ಲೆಯ ಆಳಂದನ ಅಮರಜಾ, ಚಿತ್ತಾಪುರ ತಾಲೂಕಿನ ಬೆಣ್ಣೆತೋರಾ, ಅಫ್ಝಲ್‌ಪುರದ ಭೀಮಾ ಎಲ್‌ಐಎಸ್, ಕಲಬುರಗಿಯ ಗಂಡೋರಿನಾಲಾ, ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಹಾಗೂ ಕೇಳಮುಲ್ಲಾಮಾರಿ 6 ಜಲಾಶಯಗಳಿವೆ. ಒಟ್ಟು 1,67, 294.78 ಎಕರೆಯಷ್ಟು ನೀರಾವರಿಯಾಗಬೇಕು.

ಜಲಾಶಯಗಳಲ್ಲಿ ನೀರಿದೆ. ಕಾಲುವೆಗಳಿವೆ, ಆದರೆ ರೈತರ ಹೊಲಗಳಿಗೆ ನೀರಿಲ್ಲ. ನೀರಾವರಿ ಇಲಾಖೆ ಇಲ್ಲಿವರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳುತ್ತದೆ. ಇದು ಅಪ್ಪಟ ಸುಳ್ಳು. ಯಾವುದೇ ಡಿಸ್ಟ್ರಿಬ್ಯೂಟರ್‌ನಿಂದ ನೀರು ಬಿಟ್ಟಿಲ್ಲ ಎಂದು ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಆರೋಪಿಸಿದ್ದಾರೆ. ಅಲ್ಲದೇ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಪ್ರತಿ ವರ್ಷ ಡ್ಯಾಂಗಳಿಂದ ನೀರು ಬೀಡುತ್ತಾರೆ. ವಾಸ್ತವದಲ್ಲಿ ಸಣ್ಣ ಕಾಲುವೆಗಳಿಗೆ ನೀರು ಹಾದು ಹೋಗುತ್ತಿಲ್ಲ. ಹೊಲಗಳಿಗೆ ತಲುಪಿಸುವ ಸಣ್ಣ ಕಾಲುವೆಗಳಲ್ಲಿ ನೀರು ಮತ್ತು ನಿರ್ವಹಣೆ ಇಲ್ಲದೆ ಬಹುತೇಕ ಮುಚ್ಚಿ ಹೋಗಿವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ನೀರು ಬಿಟ್ಟಿದ್ದರೆ ಎಷ್ಟು ನೀರು ಬಿಡಲಾಗಿದೆ, ಎಷ್ಟು ಎಕರೆಗೆ ನೀರು ಬಿಡಲಾಗಿದೆ? ಎಷ್ಟು ರೈತರಿಗೆ ಇದರಿಂದ ಉಪಯೋಗ ಆಗಿದೆ?. ಈ ನೀರಾವರಿಯಿಂದ ಎಷ್ಟು ಹಣ ತೆರಿಗೆ ರೂಪದಲ್ಲಿ ಬಂದಿದೆ? ಎಂಬುದನ್ನು ಸ್ಪಷ್ಟಪಡಿಸಬೇಕು.

-ಭೀಮಾಶೆಟ್ಟಿ ಮುಕ್ಕಾ,ಭೀಮಾ ಮಿಷನ್ ಅಧ್ಯಕ್ಷ ಕಲಬುರಗಿ

ಕಾರಂಜಾ ಜಲಾಶಯದಿಂದ 100 ಕಾಲುವೆಗಳ ಮೂಲಕ 81 ಹಳ್ಳಿ, ಮುಲ್ಲಾಮಾರಿ ಮೇಲ್ದಂಡೆಯ 21 ಹಳ್ಳಿ, ಭೀಮಾ ಏತ ನೀರಾವರಿಯಿಂದ 47 ನೀರು ಬಳಕೆದಾರರ ಸಂಘಗಳಿಗೆ. ಬೆಣ್ಣೆತೋರಾದಿಂದ 70 ಕಾಲುವೆಗಳ ಮೂಲಕ 47 ಹಳ್ಳಿಗಳಿಗೆ, ಚಿಂಚೋಳಿಯ ಮುಲ್ಲಾಮಾರಿಯಿಂದ 25 ಹಳ್ಳಿ, ಗೊಂಡೋರಿನಾಲಾದಿಂದ 26 ಹಳ್ಳಿಗೆ. ಆಳಂದನ ಅಮರ್ಜಾ ಜಲಾಶಯದಿಂದ ಕೇಂದ್ರ ವಿವಿ ಸಹಿತ 6 ಗ್ರಾಮಗಳಿಗೆ ನೀರು ಬೀಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಮಾಹಿತಿ ನೀಡಿದ್ದಾರೆ.

ಜಲಾಶಯಗಳು ಭರ್ತಿಯಾಗಿವೆ. ಪ್ರತಿವರ್ಷ ರೈತರ ಅನುಕೂಲಕ್ಕೆ ತಕ್ಕಂತೆ ನೀರು ಜಲಾಶಯಗಳಿಂದ ನವೆಂಬರ್ ತಿಂಗಳಲ್ಲಿ ಬಿಡಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ.

-ಸೂರ್ಯಕಾಂತ್ ಮಾಲೆ, ಅಧಿಕಾರಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಲಬುರಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ

contributor

Similar News