×
Ad

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮ: ದ.ಕ.ದಲ್ಲಿ ಅರ್ಜಿ ಸಲ್ಲಿಸಿದ ಶೇ.5ರಷ್ಟು ಫಲಾನುಭವಿಗಳಿಗೂ ತಲುಪದ ಸೌಲಭ್ಯ

Update: 2025-07-25 11:50 IST

ಮಂಗಳೂರು: ರಾಜ್ಯದಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಕಡುಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿರುವವರ ಪೈಕಿ ದ.ಕ. ಜಿಲ್ಲೆಯಲ್ಲಿ ಕೇವಲ ಶೇ 4.66ರಷ್ಟು ಮಂದಿಗೆ ಮಾತ್ರ ವಿವಿಧ ಯೋಜನೆಗಳ ನೆರವು ದೊರೆತಿರುವ ವಿಚಾರ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಕಡುಬಡವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮತ್ತು ಅವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವುದು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಸುಧಾರಿಸುವ ಉದ್ದೇಶದಿಂದ 1986ರಲ್ಲಿ ಸ್ಥಾಪಿತ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ 24,341 ಮಂದಿ ಅರ್ಜಿ ಸಲ್ಲಿಸಿದ್ದರು. ವಿವಿಧ ಯೋಜನೆಗಳಡಿ 12.08 ಕೋಟಿ ರೂ. ಅನುದಾನದಲ್ಲಿ ಇದೀಗ 1,123 ಮಂದಿ ಸೌಲಭ್ಯ ಪಡೆಯುವ ಅವಕಾಶ ಪಡೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದೆ ಎಂಬ ವಿಪಕ್ಷಗಳ ಆರೋಪ ಇದ್ದರೂ, ವಾಸ್ತವವಾಗಿ ಆ ರೀತಿ ಇಲ್ಲ ಎನ್ನುವುದು ಈ ಅಂಕಿ ಅಂಶಗಳನ್ನು ನೋಡಿದಾಗ ಗೊತ್ತಾಗುತ್ತದೆ.

ನಿಗಮದ ಯೋಜನೆಗಳಾದ ಅರಿವು, ಅರಿವು ನವೀಕರಣ, ಅರಿವು ವಿದೇಶ ಸಾಲ ಯೋಜನೆಗೆ ಆರಂಭದಲ್ಲಿ ಭೌತಿಕ ಗುರಿ ಇರಲಿಲ್ಲ. ಶ್ರಮ ಶಕ್ತಿ, ಶ್ರಮ ಶಕ್ತಿ ವಿಶೇಷ ಮಹಿಳಾ, ಸ್ವಾವಲಂಭಿ ಸಾರಥಿ ಯೋಜನೆ, ವಿವೇಚನಾ ಕೋಟ, ವೃತ್ತಿ ಪ್ರೋತ್ಸಾಹ, ಸಮುದಾಯ ಆಧಾರಿತ ತರಬೇತಿ ಯೋಜನೆ ಮತ್ತು ನೇರ ಸಾಲ ಯೋಜನೆಯಲ್ಲಿ 364 ಮಂದಿಗೆ ಭೌತಿಕ 4,93,50,000 ರೂ. ಅನುದಾನ ನಿಗದಿಪಡಿಸಲಾಗಿತ್ತು. ಅರ್ಜಿಯ ಮಹಾಪೂರ ಬಂದ ಹಿನ್ನೆಲೆಯಲ್ಲಿ ಅರ್ಜಿಯ ವಿಲೇವಾರಿ ಮಾಡುವುದು ಹೇಗೆ? ಎಂಬ ಕಠಿಣ ಸವಾಲು ಅಧಿಕಾರಿಗಳಿಗೆ ಎದುರಾಗಿತ್ತು. ‘ವಾರ್ತಾಭಾರತಿ’ ಈ ಸಮಸ್ಯೆಯ ಬಗ್ಗೆ ಸರಕಾರದ ಗಮನ ಸೆಳೆದಿತ್ತು. ದ.ಕ. ಜಿಲ್ಲಾ ಅಧಿಕಾರಿಗಳು ಕೂಡಾ ಕೇಂದ್ರ ಕಚೇರಿಗೆ ಹೆಚ್ಚಿನ ಅನುದಾನಕ್ಕಾಗಿ ಪ್ರಸ್ತಾವ ಕಳಿಸಿದರು. ಇಲಾಖೆಯ ಸಚಿವರು ಮುತುವರ್ಜಿ ವಹಿಸಿ ಅನುದಾನ ಮೂರು ಪಟ್ಟು ಜಾಸ್ತಿ ಒದಗಿಸಿಕೊಟ್ಟರೂ ಬೇಡಿಕೆ ಈಡೇರಿಲ್ಲ. 2024-25ನೇ ಸಾಲಿನಲ್ಲಿ ಹೆಚ್ಚುವರಿ ಅನುದಾನ ದೊರೆತಿರುವ ಹಿನ್ನೆಲೆಯಲ್ಲಿ 2025-26ನೇ ಸಾಲಿನಲ್ಲಿ ಅನುದಾನಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ. ಹೀಗಾದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಬಹುದು.

ದ.ಕ. ಉಳಿದ ಜಿಲ್ಲೆಗಳಂತಲ್ಲ. ಶೈಕ್ಷಣಿಕವಾಗಿ ಮುಂದುವರಿ ದಿರುವ ಈ ಜಿಲ್ಲೆಯಲ್ಲಿ ‘ಅರಿವು’ ವಿದೇಶಿ ಶಿಕ್ಷಣ ಸಾಲ ಯೋಜನೆಗೆ ಹೆಚ್ಚು ಬೇಡಿಕೆ ಇದೆ.

ಶ್ರಮ ಶಕ್ತಿ 18,251 ಅರ್ಜಿ: ಶ್ರಮ ಶಕ್ತಿ ಯೋಜನೆಗೆ 18,251 ಅರ್ಜಿ ಸಲ್ಲಿಕೆಯಾಗಿತ್ತು. ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರಿಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ರೂ.50,000 ಸಾಲ ಸೌಲಭ್ಯವನ್ನು ಕಲ್ಪಿಸುವ ಈ ಯೋಜನೆಯಲ್ಲಿ 114 ಮಂದಿಗೆ 57 ಲಕ್ಷ ರೂ. ನೀಡಲಾಗಿದೆ. ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಲ್ಲಿ 495 ಮಂದಿ ಅರ್ಜಿ ಸಲ್ಲಿಸಿದ್ದರು. 63 ಮಂದಿ 31.50 ಲಕ್ಷ ರೂ. ನೆರವು ಗಿಟ್ಟಿಸಿಕೊಂಡಿದ್ದಾರೆ.

ಸ್ವಾವಲಂಬಿ ಸಾರಥಿ: ನಿರುದ್ಯೋಗಿಗಳಿಗೆ ಟ್ಯಾಕ್ಸಿ ಅಥವಾ ಕಾರು ಖರೀದಿಸಲು ಸಬ್ಸಿಡಿ ನೀಡುವ ಸ್ವಾವಲಂಬಿ ಸಾರಥಿ ಮತ್ತು ವಿವೇಚನಾ ಕೋಟಾ ಯೋಜನೆಗೆ ಜಿಲ್ಲೆಯಲ್ಲಿ ಒಟ್ಟು 2,025 ಅರ್ಜಿ ಸಲ್ಲಿಕೆಯಾಗಿತ್ತು. ಸ್ವಾವಲಂಬಿ ಸಾರಥಿ ಯೋಜನೆ ಯಲ್ಲಿ 58 ಮಂದಿಗೆ 1.74 ಕೋಟಿ ರೂ. ಮತ್ತು ವಿವೇಚನಾ ಕೋಟಾದಲ್ಲಿ 9 ಮಂದಿಗೆ 27 ಲಕ್ಷ ರೂ. ಸಾಲ ಸೌಲಭ್ಯ ಸಿಕ್ಕಿದೆ.

ವೃತ್ತಿ ಪ್ರೋತ್ಸಾಹ ಯೋಜನೆಯಲ್ಲಿ ಸಲ್ಲಿಕೆಯಾದ ಅರ್ಜಿಗಳು 2,290. ತಲಾ 1 ಲಕ್ಷ ರೂ.ನಂತೆ 114 ಮಂದಿ 1.14 ಕೋಟಿ ರೂ. ಸಾಲದ ನೆರವಿಗೆ ಆಯ್ಕೆಯಾಗಿದ್ದಾರೆ. ವ್ಯಾಪಾರ, ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ನೇರ ಸಾಲವನ್ನು ಒದಗಿಸುವ ನೇರ ಸಾಲ ಯೋಜನೆಗೆ 10 ಮಂದಿ ಅರ್ಜಿ ಸಲ್ಲಿಸಿದ್ದಾರೆ. 90 ಲಕ್ಷ ರೂ. ನೆರವು ಪಡೆಯಲು 6 ಮಂದಿ ಅರ್ಹತೆ ಪಡೆದಿದ್ದಾರೆ.

‘ಅರಿವಿ’ಗೆ ಹೆಚ್ಚಿದ ಬೇಡಿಕೆ: ವೃತ್ತಿಪರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅರಿವು ಯೋಜನೆಗೆ 404 ಅರ್ಜಿಗಳು ಸಲ್ಲಿಕೆಯಾಗಿತ್ತು. 167 ಮಂದಿಗೆ ಲಭ್ಯ ಅನುದಾನ 64.92 ಲಕ್ಷ ರೂ. ಕೆಇಎ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ಬಿಡುಗಡೆಯಾಗಿದೆ.

ಶಿಕ್ಷಣ ಸಾಲ ‘ಅರಿವು’ ನವೀಕರಣಕ್ಕೆ 763 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 551 ಮಂದಿಗೆ 4,40,03,000 ರೂ. ನೆರವು ಬಿಡುಗಡೆಯಾಗಿದೆ. ಅರಿವು ವಿದೇಶಿ ಸಾಲ ಯೋಜನೆಯಲ್ಲಿ 68 ಮಂದಿ ಅರ್ಜಿ ಸಲ್ಲಿಸಿದ್ದಾರೆ. 22 ಮಂದಿ 2.10 ಕೋಟಿ ರೂ. ಸಾಲ ಸೌಲಭ್ಯ ಪಡೆಯುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಸಾಲ ದೊರಕಲು ಅರ್ಜಿದಾರರ ಮನೆಯನ್ನು ಸಾಲಕ್ಕೆ ಗ್ಯಾರಂಟಿ ಆಗಿ ಒದಗಿಸಬೇಕಾಗುತ್ತದೆ.

ಗಂಗಾ ಕಲ್ಯಾಣ ಯೋಜನೆಯಲ್ಲಿ ಅನುದಾನವೇ ಇಲ್ಲ: ಇದು ಸಣ್ಣ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗುವ ಯೋಜನೆ. ಆದರೆ 2024-25ನೇ ಸಾಲಿನಲ್ಲಿ ದ.ಕ. ಜಿಲ್ಲೆಗೆ ಇಲಾಖೆಯಿಂದ ಒಂದು ಕೊಳವೆ ಬಾವಿ ಕೊರೆಯಲು ಕೂಡಾ ಅನುದಾನ ಬಂದಿಲ್ಲ. ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರಕಾರವು ರೂ.3.75 ಲಕ್ಷಗಳನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಿರುತ್ತದೆ ಮತ್ತು ಇತರೆ ಜಿಲ್ಲೆಗಳಿಗೆ ರೂ.2.25 ಲಕ್ಷಗಳನ್ನು ನೀಡಲಾಗುತ್ತದೆ ಎನ್ನುವುದು ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಮಾಹಿತಿ. ಗಂಗಾಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿಗಾಗಿ ಅರ್ಜಿ ಸಲ್ಲಿಸಲು ಅದೆಷ್ಟೊ ಮಂದಿ ಫಲಾನುಭವಿಗಳು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಅಲ್ಪಸಂಖ್ಯಾತರ ಇಲಾಖೆಯ ವಿವಿಧ ಯೋಜನೆಗಳಿಗೆ ರಾಜ್ಯದ ಬೇರೆ ಜಿಲ್ಲೆಗಳಿಗಿಂತ ದ.ಕ. ಜಿಲ್ಲೆಯಲ್ಲಿ ಬೇಡಿಕೆ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಗೆ ಎರಡು ಪಟ್ಟು ಜಾಸ್ತಿ ಅನುದಾನ ಸಿಕ್ಕಿದ್ದರೂ, ಬೇಡಿಕೆ ಈಡೇರಿಸಲು ಸಾಧ್ಯವಾಗಲಿಲ್ಲ. ಮುಂದಿನ ಸಾಲಿಗೆ ಇನ್ನಷ್ಟು ಅನುದಾನಕ್ಕೆ ಪ್ರಯತ್ನಿಸಲಾಗುವುದು.

-ಯಶೋಧರ, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದ.ಕ. ಜಿಲ್ಲೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹಿಂ ಅಡ್ಕಸ್ಥಳ

contributor

Similar News