ಬೋನಿಗೆ ಬೀಳದ ಚಿರತೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ರಾಯಚೂರು: ರಾಯಚೂರು ತಾಲೂಕಿನ ಡಿ.ರಾಂಪೂರ(ಡೊಂಗರಾಂಪೂರು) ಗ್ರಾಮದ ಪರಮೇಶ್ವರ ಬೆಟ್ಟದ ಮೇಲೆ ಮೇ ತಿಂಗಳ ಆರಂಭದಲ್ಲಿ ಚಿರತೆ ಕಾಣಿಸಿಕೊಂಡು ಅರಣ್ಯ ಇಲಾಖೆಯ ಬೋನಿಗೆ ಇದುವರೆಗೆ ಸೆರೆಯಾಗದೇ ಗ್ರಾಮದ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತ ವಾಸವಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಜೂನ್ ಮೊದಲನೆ ವಾರ ಡಿ.ರಾಂಪೂರ ಗ್ರಾಮದಲ್ಲಿ ಚಿರತೆ ಕಾಣಿಸಿದಾಗ ವಲಯ ಅಥವಾ ಅರಣ್ಯ ಅಧಿಕಾರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಆರಂಭದಲ್ಲಿ ಒಂದು ಬೋನು ಹಾಕಿ ಗ್ರಾಮದಲ್ಲಿ ರಾತ್ರಿ ವೇಳೆ ಓಡಾಡದಂತೆ ಎಚ್ಚರಿಕೆ ನೀಡಿ ಹೋಗಿದ್ದರು. ಬಳಿಕ ಬೋನಿನಲ್ಲಿ ಚಿರತೆ ಸೆರೆಯಾಗದ ಕಾರಣ ಬೆಟ್ಟದ ಎರಡು ಬದಿಯಲ್ಲಿ ಬೋನು ಹಾಕಿ ಚಲನ ವಲನದ ಮೇಲೆ ನಿಗಾ ಇಡಲು ಸಿಸಿ ಕ್ಯಾಮರಾ ಅಳವಡಿಸಿ ಹೋಗಿದ್ದರು. ಆದರೆ ಇದಾಗಿ ಒಂದು ತಿಂಗಳಾದರೂ ಇದುವರೆಗೆ ಚಿರತೆ ಬೋನಿಗೆ ಸೆರೆಯಾಗಿಲ್ಲ. ಅರಣ್ಯ ಇಲಾಖೆಯ ನಿಧಾನಗತಿಯ ಕಾರ್ಯಾಚರಣೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹೊರವಲಯದಲ್ಲಿ ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿರುವ ಅನೇಕ ನವಿಲುಗಳನ್ನು ತಿಂದು ಹಾಕಿ ಇದೀಗ ಗ್ರಾಮದೊಳಗೆ ಪ್ರವೇಶಿಸಲು ಆರಂಭಿಸಿದೆ. ಬೆಟ್ಟದ ಬಂಡೆಗಲ್ಲಿನ ಮೇಲೆ ಪ್ರಾಣಿ ಮಾಂಸ ಹಾಗೂ ಪಕ್ಷಿಗಳನ್ನು ತಿಂದಿರುವ ಕುರುಹು ಕಂಡು ಬಂದಿದೆ. ಗ್ರಾಮದ ಸುತ್ತ ಚಿರತೆ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಹೀಗಾಗಿ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಗ್ರಾಮದ ಜನ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಸಂಜೆ ನಂತರ ರಾಯಚೂರು ನಗರಕ್ಕೆ ಬಂದು ಹೋಗಲು ಜನ ಹಿಂಜರಿಯುತ್ತಿದ್ದಾರೆ.
ಗ್ರಾಮದ ಅಂಚಿನಲ್ಲಿರುವ ಕಾವಲಿ ಅಶೋಕ ಅವರ ಮನೆಯ ಕೊಟ್ಟಿಗೆಯಲ್ಲಿ ಮೂರು ದನಗಳನ್ನು ಕಟ್ಟಲಾಗುತ್ತಿದೆ. ದನಗಳ ವಾಸನೆಯ ಜಾಡು ಹಿಡಿದು ಚಿರತೆ ಬಾಗಿಲವರೆಗೂ ಬಂದು ಹೋಗಿದೆ.
ಬೆಟ್ಟ, ನದಿ ದಂಡೆಯಲ್ಲಿ ಹೊಲಗದ್ದೆಗಳಿದ್ದು ಕೃಷಿ ಚಟುವಟಿಕೆ ಮಾಡಲು, ರಾತ್ರಿ ವೇಳೆ ಪಂಪ್ ಸೆಟ್ ಹಾಕಲು ರೈತರು ಭಯಭೀತರಾಗಿದ್ದಾರೆ.
ಚಿರತೆಯ ಹೆಜ್ಜೆ ಗುರುತುಗಳನ್ನು ಮೊಬೈಲ್ ಕ್ಯಾಮರಾದಲ್ಲಿ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ಹೋಗಿ ತೋರಿಸಲಾಗಿದೆ. 15 ದಿನಗಳ ಹಿಂದೆ ದನಗಳಿಗೆ ಮೇವು ತರಲು ಹೊಲಗಳಿಗೆ ಹೋಗುವ ಮೊದಲು ಗ್ರಾಮಸ್ಥರು ಡ್ರೋನ್ ಕ್ಯಾಮರಾದಿಂದ ಬೆಟ್ಟದ ಮೇಲೆ ವೀಕ್ಷಣೆ ಮಾಡಿದಾಗ ಚಿರತೆ ಬಂಡೆಗಲ್ಲಿನ ಮೇಲೆ ಕುಳಿತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಡ್ರೋನ್ ಶಬ್ದಕ್ಕೆ ಬಂಡೆಗಲ್ಲಿನ ಮಧ್ಯೆ ಓಡಿ ಹೋಗಿದೆ.
ಮೇ20ರಂದು ಡಿ.ರಾಂಪುರದ ಬೆಟ್ಟದಲ್ಲಿ ಚಿರತೆ ಬಂದಿರುವುದು ದೃಢಪಟ್ಟಿದೆೆ. ಎರಡೂವರೆ ಮೂರು ವರ್ಷದ ಚಿರತೆ ಪರಮೇಶ್ವರ ಬೆಟ್ಟದಲ್ಲಿ ಬಂಡೆಗಲ್ಲಿನ ಮಧ್ಯೆ ನೆಲೆಯೂರಿರುವ ಶಂಕೆ ಇದೆ. 15 ದಿನಗಳ ಹಿಂದೆ ಡ್ರೋನ್ ಕ್ಯಾಮರಾ ನೆರವಿನಿಂದಲೂ ಚಿರತೆಯನ್ನು ಗುರುತಿಸಲಾಗಿದೆ. ಗ್ರಾಮಸ್ಥರಿಗೆ ರಾತ್ರಿ ವೇಳೆ ಓಡಾಡದಂತೆ ಹಾಗೂ ಜಾನುವಾರುಗಳನ್ನು ಬಿಡದಂತೆ ಡಂಗೂರ ಸಾರಲಾಗಿದೆ. ಅಲ್ಲದೇ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಬೆಟ್ಟದಲ್ಲಿ ಚಿರತೆಗೆ ಬೇಕಾಗುವ ಆಹಾರ ಸಿಗುವ ಕಾರಣ ಬೋನಿನ ಬಳಿ ಸುಳಿಯುತ್ತಿಲ್ಲ, ಸೆರೆ ಹಿಡಿಯಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ.
-ರಾಜೇಶ ನಾಯಕ, ರಾಯಚೂರು ತಾಲೂಕು ವಲಯ ಅರಣ್ಯ ಅಧಿಕಾರಿ
ಅರಣ್ಯ ಇಲಾಖೆಯ ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿ ತಿಂಗಳಾದರೂ ಇದುವರೆಗೆ ಸೆರೆಯಾಗಿಲ್ಲ, ಕೇವಲ ಎರಡು ಬೋನು ಹಾಕಿ ಕಾಟಾಚಾರಕ್ಕೆ ಸಿಬ್ಬಂದಿ ನೇಮಕ ಮಾಡಿದರೆ ಸಾಲದು, ಚಿರತೆ ಬೋನಿಗೆ ಯಾಕೆ ಬೀಳುತ್ತಿಲ್ಲ ಎಂಬ ಬಗ್ಗೆ ಆಲೋಚಿಸಿ ಬೇರೆ ಮಾರ್ಗ ಕಂಡು ಹಿಡಿಯಬೇಕು. ನವಿಲು,ನಾಯಿಗಳನ್ನು ತಿಂದು ಮುಗಿಸಿದ ಚಿರತೆ ಮುಂದೆ ದನಕರುಗಳು ಹಾಗೂ ಮಾನವರ ಮೇಲೆ ದಾಳಿ ಮಾಡಲೂಬಹುದು, ಪ್ರಾಣ ಹಾನಿ ಸಂಭವಿಸುವ ಮುಂಚೆ ಅರಣ್ಯ ಇಲಾಖೆಯವರು ಕಾರ್ಯಾಚರಣೆ ಚುರುಕುಗೊಳಿಸಬೇಕು.
-ರಂಗನಾಥಗೌಡ ಪೊಲೀಸ್ ಪಾಟೀಲ್, ರೈತ ಮುಖಂಡ.