ಭಾರತದಲ್ಲಿ ಅಸಮಾನ ಶಿಕ್ಷಣ ವ್ಯವಸ್ಥೆ ಕೊನೆಯಾಗಲಿ
ವಿದ್ಯೆ/ಜ್ಞಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ ಅದನ್ನು ಸಮಾನವಾಗಿ ನೀಡುವಲ್ಲಿ ನಮ್ಮ ಸರಕಾರಗಳು ವಿಫಲವಾಗಿವೆ. ಉನ್ನತ ಶಿಕ್ಷಣ ವಿದ್ಯಾರ್ಥಿಗಳ/ಪೋಷಕರ ಆಯ್ಕೆಯಾಗಿರುವುದರಿಂದ ಅದನ್ನು ಅವರು ಯಾವುದೇ ಕಾಲೇಜು/ವಿಶ್ವವಿದ್ಯಾನಿಲಯಗಳಲ್ಲಿ ಕಲಿಯಲು ಅವಕಾಶ ಇರಬೇಕು. ಉನ್ನತ ಶಿಕ್ಷಣ ಕೂಡಾ ಎಲ್ಲರಿಗೂ ಸಂಪೂರ್ಣ ಉಚಿತವಾಗಿರಬೇಕು. ಭಾರತ ಜ್ಞಾನಿಗಳ ದೇಶವಾಗದೆ ‘ವಿಶ್ವಗುರು’ ಆಗಲು ಹೇಗೆ ಸಾಧ್ಯ?
2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಭಾರತವನ್ನು ಒಂದು ಅಭಿವೃದ್ಧಿ ಹೊಂದಿದ ದೇಶ ಮಾಡಲು ಕೇಂದ್ರ ಸರಕಾರವು 2023-24ರ ಆಯವ್ಯಯದಲ್ಲಿ ವಿಕಸಿತ ಭಾರತ @ 2047 ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಯು ಆರ್ಥಿಕ ಸಮೃದ್ಧಿ, ಸಾಮಾಜಿಕ ಪ್ರಗತಿ, ಪರಿಸರ ಸುಸ್ಥಿರತೆ ಮತ್ತು ಪರಿಣಾಮಕಾರಿ ಆಡಳಿತದಂತಹ ಅಭಿವೃದ್ಧಿಯ ವಿವಿಧ ಅಂಶಗಳನ್ನು ಒಳಗೊಂಡಿದೆ. ಆದರೆ ವಾಸ್ತವದಲ್ಲಿ ಯಾವುದೇ ಒಂದು ದೇಶ ಎಲ್ಲರನ್ನು ಒಳಗೊಂಡ ಅಭಿವೃದ್ಧಿ (Inclusive Development) ಹೊಂದಲು ಮೊದಲು ಅಲ್ಲಿ ಸಾರ್ವತ್ರಿಕ ಜ್ಞಾನ ಕ್ರಾಂತಿ ಆಗಬೇಕು. ಅಂದರೆ ಎಲ್ಲರಿಗೂ ಉಚಿತ, ಕಡ್ಡಾಯ ಮತ್ತು ಮುಖ್ಯವಾಗಿ ಸಮಾನವಾಗಿ ಶಿಕ್ಷಣ ಸಿಗಬೇಕು. ಯಾವ ದೇಶದಲ್ಲಿ ಶಿಕ್ಷಣ ಉಚಿತ, ಕಡ್ಡಾಯ ಮತ್ತು ಸಮಾನವಾಗಿ ಸಿಗುವುದಿಲ್ಲವೋ ಆ ದೇಶದಲ್ಲಿ ಸಹಜವಾಗಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೆಚ್ಚು ಇರುತ್ತದೆ. ಭಾರತದಲ್ಲಿ ಇದನ್ನು ನಾವು ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದಾಗಿದೆ.
ಸ್ವಾತಂತ್ರ್ಯಾನಂತರ ಭಾರತದಲ್ಲಿ ಬೇರೆ ಬೇರೆ ಕ್ರಾಂತಿಗಳಾದವು. ಆದರೆ ಮುಖ್ಯವಾಗಿ ಆಗಬೇಕಿದ್ದ ಜ್ಞಾನ ಕ್ರಾಂತಿಯೇ ಆಗಲಿಲ್ಲ. ಭಾರತದ ಪುನರುಜ್ಜೀವನದ ಸಮಯದಲ್ಲೇ ಆಗಬೇಕಿದ್ದ ಸಾರ್ವತ್ರಿಕ ಜ್ಞಾನ ಕ್ರಾಂತಿ ಇವತ್ತಿಗೂ ಆಗಲೇ ಇಲ್ಲ. ಆದರೆ ಯುರೋಪ್ ದೇಶಗಳಲ್ಲಿ ಇದು 14ನೇ ಶತಮಾನದಲ್ಲೇ ಆಗಿದ್ದನ್ನು ನಾವು ಗಮನಿಸಬಹುದು. ಭಾರತದ ಸಂವಿಧಾನದ ವಿಧಿ 21-ಎ ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ತಿಳಿಸಿದೆ. ಆದರೆ ಅದು ಕೇವಲ ಸರಕಾರಿ ಶಾಲೆಗಳಲ್ಲಿ ಮಾತ್ರವಿದೆ. ಭಾರತದಲ್ಲಿ ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಅದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತಕ್ಕೆ ಬರುತ್ತದೆ. ಇದರಿಂದ ಭಾರತದಲ್ಲಿ ಎರಡು ರೀತಿಯ ಪಠ್ಯಕ್ರಮದ ಶಿಕ್ಷಣ ವ್ಯವಸ್ಥೆಯ ಜೊತೆ ಖಾಸಗಿ ಶಿಕ್ಷಣ ವ್ಯವಸ್ಥೆಯೂ ಜಾರಿಯಲ್ಲಿರುವುದರಿಂದ ಏಕ ರೂಪದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಭಾರತದಲ್ಲಿ ಬಡವರಿಗೆ, ಮಧ್ಯಮ ವರ್ಗದವರಿಗೆ ಮತ್ತು ಶ್ರೀಮಂತರಿಗೆ ಅವರ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಬೇರೆ ಬೇರೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅದಕ್ಕೆ ಖ್ಯಾತ ಅರ್ಥಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಗುನ್ನಾರ್ ಮಿರ್ಡಾಲ್ ಅವರು ಭಾರತದ ಅಸಮಾನ ಶಿಕ್ಷಣ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ತತ್ವಜ್ಞಾನಿ ಪ್ಲೇಟೋ ಶಿಕ್ಷಣದ ಮಹತ್ವ ಕುರಿತು ಹೀಗೆ ಹೇಳಿದ್ದಾರೆ: ‘‘ಮನುಷ್ಯನು ಶಿಕ್ಷಣವನ್ನು ನಿರ್ಲಕ್ಷಿಸಿದರೆ, ಅವನು ತನ್ನ ಜೀವನದ ಕೊನೆಯವರೆಗೂ ಕುಂಟನಾಗಿ ನಡೆಯುತ್ತಾನೆ’’. ಇತ್ತೀಚೆಗೆ ನಮ್ಮ ಸರಕಾರಗಳು ತಮ್ಮ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳಲು ಹಂತಹಂತವಾಗಿ ಶಿಕ್ಷಣವನ್ನು ಖಾಸಗೀಕರಣ ಮಾಡಲು ಹೊರಟಿವೆ. ಇದರಿಂದ ಸರಕಾರಗಳು ಶಿಕ್ಷಣದ ಮೇಲೆ ಮಾಡುವ ವೆಚ್ಚ ಕಡಿಮೆಯಾಗುತ್ತಿದೆ. ಪ್ರಸಕ್ತ ಭಾರತದಲ್ಲಿ ಶಿಕ್ಷಣಕ್ಕಾಗಿ ಜಿಡಿಪಿಯ ಶೇ. 3ಕ್ಕಿಂತ ಕಡಿಮೆ ವೆಚ್ಚ ಮಾಡಲಾಗುತ್ತಿದೆ. ಆದರೆ ಕೊಠಾರಿ ಆಯೋಗ (ರಾಷ್ಟ್ರೀಯ ಶಿಕ್ಷಣ ಆಯೋಗ 1964-1966) ‘ರಾಷ್ಟ್ರದ ಭವಿಷ್ಯಕ್ಕಾಗಿ ಶಿಕ್ಷಣವು ಅತ್ಯಂತ ಪ್ರಮುಖ ಹೂಡಿಕೆಯಾಗಿದೆ’ ಮತ್ತು ‘ದೇಶವು ತನ್ನ ರಾಷ್ಟ್ರೀಯ ಆದಾಯದ ಕನಿಷ್ಠ ಶೇ. 6ರಷ್ಟು ಶಿಕ್ಷಣದ ಮೇಲೆ ನಿಯೋಜಿಸಬೇಕು’ ಎಂದು ಹೇಳಿದೆ. ಶಿಕ್ಷಣದ ಮೇಲಿನ ವೆಚ್ಚವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ, ಉತ್ಪಾದಕತೆಯನ್ನು ಹೆಚ್ಚಿಸುವ, ವೈಯಕ್ತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಮತ್ತು ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡುವ ಹೂಡಿಕೆಯಾಗಿದೆ ಎಂದು ಈ ಆಯೋಗ ಹೇಳಿದೆ. ಆರ್ಥಿಕ ಸಿದ್ಧಾಂತದ ಪ್ರಕಾರ, ಶಿಕ್ಷಣವು ಸರಕಾರದ ದುಬಾರಿ ವೆಚ್ಚವನ್ನು ಪ್ರತಿನಿಧಿಸುವ ಒಂದು ಬಳಕೆಯ ರೂಪವಲ್ಲ. ಬದಲಿಗೆ ಅದು ಮಾನವ ಬಂಡವಾಳ ಮೌಲ್ಯವನ್ನು ಸುಧಾರಿಸುವ ಹೂಡಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ದೇಶದ ಒಟ್ಟಾರೆ ಉತ್ಪಾದಕತೆ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.
ಶಿಕ್ಷಣದ ಖಾಸಗೀಕರಣ ಹೆಚ್ಚಾದಂತೆ ಶಿಕ್ಷಣವು ಸಂಪೂರ್ಣ ವ್ಯಾಪಾರದ ಸರಕಾಗುತ್ತದೆ. ಹಣ ಇದ್ದವರ ಮಕ್ಕಳು ಉತ್ತಮವಾದ ಶಿಕ್ಷಣ ಪಡೆಯುತ್ತಾರೆ. ಬಡವರ ಮಕ್ಕಳು ಸರಿಯಾಗಿ ಶಿಕ್ಷಣ ಪಡೆಯದೆ ಬಡತನದ ಬಲೆಯಲ್ಲಿ ಸಿಲುಕಿ ಬಡವರಾಗಿಯೇ ಉಳಿಯುತ್ತಿದ್ದಾರೆ. ಈಗ ಭಾರತದಲ್ಲಿ ಬಡತನದ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ. ಆದರೆ ಹೆಚ್ಚಿದ ಜನಸಂಖ್ಯೆಯಲ್ಲಿ ನಿರಪೇಕ್ಷ ಬಡವರ ಸಂಖ್ಯೆ ಕಡಿಮೆಯಾಗಿಲ್ಲ. ಇದರಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇನ್ನೂ ಹೆಚ್ಚಾಗುತ್ತಿದೆ. ಭಾರತದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕರೆ ಇಲ್ಲಿ ಎಲ್ಲರೂ ವಿಜ್ಞಾನಿಗಳೇ. ಸಮಾನ ಶಿಕ್ಷಣ ಸಿಗದ ಕಾರಣ ಬಹುತೇಕ ಜನರು ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ನಮಗೆ ಸರಕಾರಿ ನೌಕರಿ ಬೇಕು, ಆದರೆ ನಮ್ಮ ಮಕ್ಕಳಿಗೆ ಸರಕಾರಿ ಶಾಲೆ ಬೇಡ. ಇವತ್ತು ಬಹುತೇಕ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಅದೇ ಖಾಸಗಿ ಶಾಲೆಯ ಅರೆಕಾಲಿಕ ಶಿಕ್ಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುತ್ತಾರೆ. ಇದು ಎಂತಹ ವಿಪರ್ಯಾಸ? ಇಲ್ಲಿ ಯಾರು ಪ್ರತಿಭಾವಂತ ಶಿಕ್ಷಕರು? 2011ರ ಜನಗಣತಿಯಂತೆ ಭಾರತದ ಸಾಕ್ಷರತೆಯ ಪ್ರಮಾಣ ಶೇ. 74ರಷ್ಟಿದೆ. ಈಗ ಶೇ. 80ಕ್ಕಿಂತ ಹೆಚ್ಚು ಸಾಕ್ಷರತೆ ಇದ್ದರೂ ಅವರಲ್ಲಿ ಸಮಾಜದ ವಾಸ್ತವತೆಯ ಬಗ್ಗೆ ವಿಮರ್ಶಾತ್ಮಕ ಮನೋಭಾವ, ಚಿಂತನೆ ಮತ್ತು ಸಂಶೋಧನೆಯ ಸಾಮರ್ಥ್ಯ ಹೊಂದಿದ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಪ್ರಸ್ತಾವಿಸುವ ಅಥವಾ ಹುಡುಕುವ ಜ್ಞಾನಿಗಳ ಅಥವಾ ಬುದ್ಧಿಜೀವಿಗಳ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇದೆ.
ಭಾರತದಲ್ಲಿ ಸಾರ್ವತ್ರಿಕ ಅಭಿವೃದ್ಧಿಗೆ ಸಾರ್ವತ್ರಿಕ ಜ್ಞಾನಕ್ರಾಂತಿ ಆಗಲೇಬೇಕು. ಅದಕ್ಕಾಗಿ ಭಾರತದಲ್ಲಿ ಮೂಲಭೂತ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು. ಆಗ ಎಲ್ಲರಿಗೂ ಸಮಾನ ಶಿಕ್ಷಣ ಸಿಗುತ್ತದೆ. ಅದರಿಂದ ಜ್ಞಾನ, ಆದಾಯ ಹೆಚ್ಚಾಗಿ ಅವರ ಆರೋಗ್ಯ ಉತ್ತಮವಾಗುತ್ತದೆ. ಯಾವಾಗ ಒಬ್ಬ ವ್ಯಕ್ತಿಯ ಜ್ಞಾನ, ಆದಾಯ ಹೆಚ್ಚಾಗಿ ಅವನ ಆರೋಗ್ಯ ಉತ್ತಮವಾಗಿ ಇರುತ್ತವೆಯೋ, ಆಗ ಆ ವ್ಯಕ್ತಿಯ ಜೀವನ ಮಟ್ಟ ಸುಧಾರಿಸಿದೆ ಎಂದು ಅರ್ಥ. ಇದನ್ನೇ ‘ಮಾನವ ಅಭಿವೃದ್ಧಿ’ ಎಂದು ಕರೆಯಲಾಗುತ್ತದೆ. ಒಂದು ದೇಶದಲ್ಲಿ ಮಾನವ ಅಭಿವೃದ್ಧಿ ಸಾರ್ವತ್ರಿಕವಾಗಿ ಆಗಬೇಕು ಹೊರತು ವೈಯಕ್ತಿಕವಾಗಿ ಅಲ್ಲ. ವೈಯಕ್ತಿಕವಾಗಿ ಆದರೆ ಅಲ್ಲಿ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕಾಗಿ ಭಾರತ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಇನ್ನೂ 132ನೇ ಸ್ಥಾನದಲ್ಲಿದೆ. ಕೇವಲ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮಾತ್ರವಲ್ಲ ಬಡತನ, ನಿರುದ್ಯೋಗ, ಹಸಿವು, ಅಸಮಾನತೆ ಹೀಗೆ ಎಲ್ಲಾ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಬಹಳ ಹಿಂದೆ ಇದೆ. ಇದಕ್ಕೆ ಮುಖ್ಯ ಕಾರಣ ವೈಯಕ್ತಿಕ ಅಭಿವೃದ್ಧಿ. ಆರ್ಥಿಕ ಅಭಿವೃದ್ಧಿ ಎಂದರೆ ಕೇವಲ ಭಾರತವನ್ನು 3ನೇ ದೊಡ್ಡ ಆರ್ಥಿಕತೆ ಮಾಡುವುದಲ್ಲ, ಜಿಡಿಪಿಯನ್ನು ಹೆಚ್ಚಿಸುವುದಲ್ಲ, ದೊಡ್ಡ ದೊಡ್ಡ ರಸ್ತೆಗಳು, ಕಟ್ಟಡಗಳನ್ನು ನಿರ್ಮಿಸುವುದಲ್ಲ. ವಾಸ್ತವದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಎಂದರೆ ಎಲ್ಲಾ ಜನರ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಅವರ ಜೀವನ ಮಟ್ಟವನ್ನು ಸುಧಾರಿಸುವುದಾಗಿದೆ. ಇದು ಕೇವಲ ಸಾರ್ವತ್ರಿಕ ಜ್ಞಾನ ಕ್ರಾಂತಿ ಆದಾಗ ಮಾತ್ರ ಸಾಧ್ಯ. ಇಲ್ಲದಿದ್ದರೆ ಅಸಮಾನ ಆರ್ಥಿಕ ಅಭಿವೃದ್ಧಿಗೆ ಅರ್ಥವಿಲ್ಲ.
ಭಾರತದಲ್ಲಿ ಮೂಲಭೂತ ಶಿಕ್ಷಣ ರಾಷ್ಟ್ರೀಕರಣವಾಗಬೇಕು. ಯಾವುದೇ ಖಾಸಗಿ ಸಂಸ್ಥೆಗಳಿಗೆ ಮೂಲಭೂತ ಶಿಕ್ಷಣ ನೀಡುವ ಹಕ್ಕು ಅಥವಾ ಅವಕಾಶ ಇರಬಾರದು. ಭಾರತದಲ್ಲಿ ಮೂಲಭೂತ ಶಿಕ್ಷಣವನ್ನು ಸಮವರ್ತಿ ಪಟ್ಟಿಯಿಂದ ಕೇಂದ್ರ ಪಟ್ಟಿಗೆ ಸೇರಿಸಬೇಕು. ಯಾವಾಗ ಮೂಲಭೂತ ಶಿಕ್ಷಣ ರಾಷ್ಟ್ರೀಕರಣವಾಗುತ್ತದೆಯೋ ಆಗ ಏಕ ರೂಪದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುತ್ತದೆ. ಆಗ ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರಿಗೂ ತಮ್ಮ ಪ್ರಾದೇಶಿಕ ಭಾಷೆಯನ್ನು ಹೊರತುಪಡಿಸಿ ಉಳಿದ ವಿಷಯಗಳ ಪಠ್ಯಕ್ರಮ ಮತ್ತು ಕಲಿಕೆಯ ಗುಣಮಟ್ಟ ಒಂದೇ ಆಗುತ್ತದೆ. ಎಲ್ಲಾ ಶಾಲೆಗಳು ಸರಕಾರಿ ಶಾಲೆಗಳಾಗುತ್ತವೆ. ಆಗ ಎಲ್ಲಾ ಮಕ್ಕಳು ಕೇವಲ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಾರೆ. ಇದರ ಜೊತೆಗೆ ಮಕ್ಕಳಿಗೆ ಸಂಸ್ಕಾರ ಮತ್ತು ನೈತಿಕತೆ ಬೋಧಿಸುವ ಒಂದು ವಿಷಯವನ್ನು ಕಡ್ಡಾಯವಾಗಿ ಕಲಿಸಬೇಕು.
ಭಾರತದಲ್ಲಿ ಮೂಲಭೂತ ಶಿಕ್ಷಣ ಪೋಷಕರ ಆರ್ಥಿಕ ಶಕ್ತಿಯ ಮೇಲೆ ಸಿಗಬಾರದು.ಅದು ಎಲ್ಲಾ ಮಕ್ಕಳಿಗೂ ಉಚಿತ ಕಡ್ಡಾಯ ಮತ್ತು ಸಮಾನವಾಗಿ ಸಿಗಬೇಕು. ಒಬ್ಬ ಅನಾಥ ಮಗು ಕೂಡ ಸಮಾನ ಶಿಕ್ಷಣದಿಂದ ಹೊರಗುಳಿಯಬಾರದು. ಭಾರತದಲ್ಲಿ ಮೂಲಭೂತ ಶಿಕ್ಷಣ ಪಡೆಯುವಲ್ಲಿ ಬಡವ ಶ್ರೀಮಂತರೆಂಬ ಭೇದ ಭಾವ ಇರಬಾರದು. ಇದ್ದರೆ ಅದು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಅಸಮಾನತೆಯ ಭಾವನೆಯನ್ನು ಬೆಳೆಸುತ್ತದೆ, ಮುಂದೆ ಅದನ್ನೇ ಬೆಳೆಸುತ್ತದೆ. ವ್ಯಾಪಾರೀಕರಣದ ಶಿಕ್ಷಣ ವ್ಯವಸ್ಥೆಯುಲ್ಲಿ ಮಕ್ಕಳು ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಮೌಲ್ಯಗಳನ್ನು ಕಲಿಯಲು ಸಾಧ್ಯವಿಲ್ಲ. ನಮ್ಮ ಶಿಕ್ಷಣ ನಮಗೆ ಜೀವನದ ಮೌಲ್ಯಗಳನ್ನು ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಕಲಿಸದಿದ್ದರೆ ಆ ಶಿಕ್ಷಣ ವ್ಯರ್ಥ.
ಬಹುತೇಕ ಮುಂದುವರಿದ ದೇಶಗಳಲ್ಲಿ ಮೂಲಭೂತ ಶಿಕ್ಷಣವನ್ನು ಉಚಿತ, ಕಡ್ಡಾಯ ಮತ್ತು ಸಮಾನವಾಗಿ ನೀಡಲಾಗುತ್ತದೆ. ಅದರ ಜೊತೆಗೆ ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ, ಸಾಮಾಜಿಕ ಜವಾಬ್ದಾರಿ ಮತ್ತು ಜೀವನದಲ್ಲಿ ಏನು ಮಾಡಬಾರದೆಂಬ ನೀತಿಯ ಪಾಠಗಳನ್ನು ಕಡ್ಡಾಯವಾಗಿ ಮೂಲಭೂತ ಶಿಕ್ಷಣದ ಹಂತದಲ್ಲೇ ಕಲಿಸಲಾಗುತ್ತದೆ. ಭಾರತದಲ್ಲಿ ಕೂಡ ಇಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುವುದು ಬಹಳ ಅವಶ್ಯವಿದೆ. ಭಾರತದಲ್ಲಿ ಮೂಲಭೂತ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವುದನ್ನು ಶ್ರೀಮಂತ ಪೋಷಕರು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದವರು ವಿರೋಧಿಸಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಇದು ಬಹಳ ಅವಶ್ಯವಿದೆ. ಹಿಂದೆ ಭಾರತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಉದಾಹರಣೆಯಿದೆ. ಹಾಗಾಗಿ ಈಗ ಮೂಲಭೂತ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವುದು ಅಸಾಧ್ಯವಲ್ಲ. ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು.
ಭಾರತದಲ್ಲಿ ಯಾವಾಗ ಒಬ್ಬ ಪ್ರಧಾನಿಯ ಮಗ ಮತ್ತು ಒಬ್ಬ ಕೂಲಿ ಕಾರ್ಮಿಕನ ಮಗ ಇಬ್ಬರಿಗೂ ಉಚಿತ, ಕಡ್ಡಾಯ ಮತ್ತು ಸಮಾನ ಶಿಕ್ಷಣ ಒಂದೇ ಶಾಲೆಯಲ್ಲಿ ಸಿಗತ್ತದೆಯೋ, ಆವಾಗ ಈ ದೇಶದಲ್ಲಿ ಖಂಡಿತವಾಗಿ ಜ್ಞಾನಕ್ರಾಂತಿ ಆಗುತ್ತದೆ. ವಿದ್ಯೆ/ಜ್ಞಾನ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ ಅದನ್ನು ಸಮಾನವಾಗಿ ನೀಡುವಲ್ಲಿ ನಮ್ಮ ಸರಕಾರಗಳು ವಿಫಲವಾಗಿವೆ. ಉನ್ನತ ಶಿಕ್ಷಣ ವಿದ್ಯಾರ್ಥಿಗಳ/ಪೋಷಕರ ಆಯ್ಕೆಯಾಗಿರುವುದರಿಂದ ಅದನ್ನು ಅವರು ಯಾವುದೇ ಕಾಲೇಜು/ವಿಶ್ವವಿದ್ಯಾನಿಲಯಗಳಲ್ಲಿ ಕಲಿಯಲು ಅವಕಾಶ ಇರಬೇಕು. ಉನ್ನತ ಶಿಕ್ಷಣ ಕೂಡಾ ಎಲ್ಲರಿಗೂ ಸಂಪೂರ್ಣ ಉಚಿತವಾಗಿರಬೇಕು. ಭಾರತ ಜ್ಞಾನಿಗಳ ದೇಶವಾಗದೆ ‘ವಿಶ್ವಗುರು’ ಆಗಲು ಹೇಗೆ ಸಾಧ್ಯ?