ನೆಲದ ಮರೆಯ ನಿಧಾನದಂತೆ
‘‘ನನ್ನ ಜೀವನವೇ ನನ್ನ ಸಂದೇಶ’’ ಎಂಬ ಗಾಂಧೀಜಿಯವರ ಮಾತು, ಇಂದಿಗೂ ಸಾರ್ವಜನಿಕ ಜೀವನದಲ್ಲಿ ಇರುವಂತಹ ವ್ಯಕ್ತಿಗಳ ಬದುಕು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ಸೂಚಿಸುತ್ತದೆ ಮತ್ತು ಅದಕ್ಕೆ ಸಾಕ್ಷಿಯಾಗಿಯೂ ಸಹ ನಿಲ್ಲುತ್ತದೆ. ಸಾರ್ವಜನಿಕ ಜೀವನದಲ್ಲಿ ಇರಲು ಬಯಸುವ ಎಲ್ಲರೂ ಕೂಡಾ ಒಂದಷ್ಟು ಹೊಣೆಗಾರಿಕೆಯನ್ನು ಹೊಂದಿರಬೇಕಾಗುತ್ತದೆ ಮತ್ತು ಕಾಲ ಬೇಡಿದ ಹೊಣೆಗಾರಿಕೆಯ ನಿರ್ವಹಣೆಯೂ ಕೂಡಾ ಮುಂದಿನ ಇತಿಹಾಸ ಎಂಬುದು ನನ್ನ ಬಲವಾದ ನಂಬಿಕೆ.
ಎಲ್ಲರಿಗೂ ತಿಳಿದಂತೆ 2013 ರಿದ 2018 ರ ವರೆಗೆ ಆಡಳಿತ ನಡೆಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಹಸಿವು ಮುಕ್ತ ಕರ್ನಾಟಕದ ಕನಸನ್ನು ಹೊತ್ತ ಅನ್ನಭಾಗ್ಯ ಯೋಜನೆಯ ಮೂಲಕ ಆರಂಭಗೊಂಡು, ಕೊನೆಗೆ ನುಡಿದಂತೆ ನಡೆದ ಸರಕಾರ ಎಂದು ಹೆಸರು ಪಡೆಯುವಲ್ಲಿ ಯಶಸ್ವಿಯಾಯಿತು. ಬಹುತೇಕ 160 ಕ್ಕೂ ಹೆಚ್ಚಿನ ಭರವಸೆಗಳನ್ನು ಈ ವೇಳೆ ಈಡೇರಿಸಲಾಯಿತು. ಅಂತೆಯೇ 2023ರ ವೇಳೆಗೆ ಅಭೂತಪೂರ್ವ ಜನ ಬೆಂಬಲ ಪಡೆದು ಮತ್ತೊಮ್ಮೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿತು.
ಆದರೆ ಎರಡನೇ ಬಾರಿ ಕೊರೋನ ನಂತರದಲ್ಲಿ ಉಂಟಾದ ಆರ್ಥಿಕ ಸಂಕಷ್ಟಗಳು ಮತ್ತು ಬದುಕಿನ ಮೇಲೆ ಭರವಸೆ ಇಲ್ಲದಂತಹ ಬದುಕಿನ ಪ್ರಶ್ನೆ ಮತ್ತು ಬಿಜೆಪಿಗರ ನಿರಾಶಾದಾಯಕವಾದ ಆಡಳಿತದ ಕಾರಣಕ್ಕೆ ಸೃಷ್ಟಿಯಾದ ನಿರೀಕ್ಷೆಯ ಭಾರದ ಸಂದರ್ಭದಲ್ಲಿ ಸರಕಾರ ಆಡಳಿತಕ್ಕೆ ಬಂತು.
ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳನ್ನು ನಮ್ಮ ಜನರು ಪುರಸ್ಕರಿಸಿದ್ದರಿಂದಲೇ ದೊಡ್ಡ ಬಹುಮತ ಬರಲು ಕಾರಣವಾಯಿತು. ಹೀಗೆ ದೊರೆತ ಪುರಸ್ಕಾರ ಮತ್ತು ಕೊರೋನ ಸಂದರ್ಭದಲ್ಲಿ ಜನರು ಅನುಭವಿಸಿದ ಕಷ್ಟವನ್ನು ನೋಡಿದರೆ ಮೊದಲು ಅವರ ಬದುಕಿಗೆ ಸಹಾಯ ಮಾಡಬೇಕೆಂಬ ಉದ್ದೇಶ ಸರಕಾರದ್ದಾಗಿತ್ತು. ಹೀಗಾಗಿಯೇ ಜನರಿಗೆ ಕನಿಷ್ಠ ಬದುಕನ್ನು ಭದ್ರಪಡಿಸುವುದಕ್ಕೆ ಪೂರಕವಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆಯುವ ಕೆಲಸವನ್ನು ನಮ್ಮ ಸರಕಾರ ಮಾಡಿತು.
ಜನ ಸಾಮಾನ್ಯರ ಮೂಕ ಅಳಲಿನಲ್ಲಿ ಪ್ರಭುತ್ವವನ್ನು ಬೀಳಿಸುವ ಶಕ್ತಿಯಿದೆ. ಹೀಗಾಗಿಯೇ ಕೊರೋನ ಸಂದರ್ಭದ ಕೆಟ್ಟ ನಿರ್ವಹಣೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಉಂಟಾದಂತಹ ಈ ಮೂಕ ಅಳುವನ್ನು ಹೋಗಲಾಡಿಸುವುದು ಸರಕಾರದ ಆದ್ಯ ಕರ್ತವ್ಯವಾಗಿತ್ತು. ಹೀಗಾಗಿಯೇ ಕಾಂಗ್ರೆಸ್‌ನ ಗ್ಯಾರಂಟಿಗಳು ಕೇವಲ ಚುನಾವಣಾ ಘೋಷಣೆಗಳಾಗಿ ಕೆಲಸ ಮಾಡದೇ ಜನರ ಮೂಕ ಅಳುವಿನ ಕಣ್ಣೀರನ್ನು ಒರೆಸುವ ಕೆಲಸ ಮಾಡಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ.
ಗ್ಯಾರಂಟಿ ಯೋಜನೆಗಳಿಂದ ಸರಕಾರಕ್ಕೆ ತೊಂದರೆಯಾಗಿದೆ, ಬೊಕ್ಕಸ ಖಾಲಿಯಾಗಿದೆ ಎಂಬ ಇತ್ಯಾದಿ ಮಾತುಗಳನ್ನು ಹೆಚ್ಚಾಗಿ ಹರಿಬಿಡಲಾಗುತ್ತಿದೆ. ಆದರೆ ಈ ಅಸೂಯೆಯ ಮಾತಿನ ನಡುವೆ ಜನರ ಕಣ್ಣೀರನ್ನು ಒರೆಸಬೇಕೆಂಬ ಪ್ರಾಮಾಣಿಕ ಪ್ರಯತ್ನ ಮತ್ತು ಸರಕಾರದ ನುಡಿದಂತೆ ನಡೆಯುವ ಬದ್ಧತೆಯ ಹೆಜ್ಜೆಗಳು ಮರೆಯಾಗುತ್ತಿದೆ. ಬದುಕಿನ ಪ್ರಜ್ಞೆ ಇಲ್ಲದ ಈ ನಡೆ ನಿಜಕ್ಕೂ ಅಕ್ಷಮ್ಯ.
ಇನ್ನು SಅSP/ಖಿSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡದ್ದಕ್ಕೆ ಬಹಳಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಸರಕಾರ ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೇಲೆ ಹೇಳಿದ ಸಂಕಷ್ಟಕರ ಬದುಕಿನ ಸಂದರ್ಭದಲ್ಲಿ ಕೆಲವು ಉಪಯುಕ್ತ ಯೋಜನೆಗಳ ಮೂಲಕ ಅತಿ ಹೆಚ್ಚು ಜನಸಂಖ್ಯೆಯುಳ್ಳ ಮತ್ತು ಕನಿಷ್ಠ ಭೂಮಿಯೂ ಇಲ್ಲದ ಸ್ಥಿತಿಯಲ್ಲಿ ಇರುವ ಹಿಂದುಳಿದವರು, ಪರಿಶಿಷ್ಟ ಸಮುದಾಯವರು ಮತ್ತು ಅಲ್ಪಸಂಖ್ಯಾತರ ಬದುಕಿಗೆ ನೇರವಾಗಿ ಸಹಾಯ ಮಾಡುವುದು ಯಾವ ರೀತಿಯ ದ್ರೋಹ ಎಂಬುದು ನನಗೆ ಈವರೆಗೂ ಅರ್ಥವಾಗಿಲ್ಲ. ಹೀಗಾಗಿ ಇಲ್ಲಿ ವಿಮರ್ಶೆ ಮಾಡುವ ಮಂದಿ ಸರಿಯಾದ ಪದವನ್ನು ಬಳಸುವುದು ಹೆಚ್ಚು ಸಮಂಜಸ ಎಂದು ನನಗೆ ಅನಿಸುತ್ತದೆ.
ಪರಿಶಿಷ್ಟ ಸಮುದಾಯಗಳ ಏಳಿಗೆಗಾಗಿ, ಅವರ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಖರ್ಚು ಮಾಡಬೇಕೆಂಬ ಕಾಯ್ದೆಯನ್ನು ಮಾಡಿದ ಯಾವುದಾದರೂ ಒಂದು ಸರಕಾರ ಇದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಇಷ್ಟೇ ಅಲ್ಲದೆ ಪರಿಶಿಷ್ಟರಿಗೆ ಭಡ್ತಿ ಮೀಸಲಾತಿ ಕಾಯ್ದೆ, ಗುತ್ತಿಗೆ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿರುವ ಸರಕಾರವು 2023 ರಲ್ಲಿ ಅಸ್ತಿತ್ವಕ್ಕೆ ಬಂದ ನಂತರ SCSP/TSP ಕಾಯ್ದೆಯೊಳಗೆ ಇದ್ದ 7 ಡಿ ನಿಯಮವನ್ನು ರದ್ದುಪಡಿಸಿದೆ. ಇನ್ನು ಪಿಟಿಸಿಎಲ್ ಕಾಯ್ದೆಯಡಿ ಹಲವು ಬದಲಾವಣೆಯನ್ನು ಪುರಸ್ಕರಿಸಿರುವ ಸರಕಾರವು, ಪಿಟಿಸಿಎಲ್ ಪ್ರಕರಣಗಳನ್ನು ಬಗೆಹರಿಸಲು ಸೂಕ್ತವಾದ ಕಾನೂನು ವ್ಯವಸ್ಥೆಯನ್ನು ಸಿದ್ಧಪಡಿಸುವ ಬದ್ಧತೆ ತೋರಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಗೆ ಒಂದರಂತೆ ಡಿಸಿಆರ್ ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿರುವ ಸರ್ಕಾರವು ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳು ಕ್ಷಿಪ್ರ ಅವಧಿಯಲ್ಲಿ ಇತ್ಯರ್ಥಗೊಳಿಸಬೇಕೆಂದು ಆದೇಶ ಹೊರಡಿಸಿದೆ. ಇವೆಲ್ಲವೂ ಪರಿಶಿಷ್ಟರ ಪರವಾದ ಸರಕಾರದ ನಿಲುವುಗಳೆಂದೇ ನನ್ನ ಭಾವನೆ.
ಇನ್ನು 2019 ರಿಂದ 2023 ರ ತನಕ ಅಂದರೆ ಹಿಂದಿನ ಸರಕಾರದ ಅವಧಿಯಲ್ಲಿ SCSP/TSP ಯೋಜನೆಯಡಿ ಹಂಚಿಕೆಯಾಗಿರುವ ಅನುದಾನದ ಪ್ರಮಾಣವು ಸರಾಸರಿ ರೂ. 27,612.03 ಕೋಟಿಗಳಾದರೆ 2023 ರಿಂದ 2025 ರ ಅವಧಿಯ ನಡುವೆ ಹಂಚಿಕೆಯಾದ ಸರಾಸರಿ ಅನುದಾನದ ಪ್ರಮಾಣವು ರೂ. 37,648.72 ಕೋಟಿಗಳಾಗಿದೆ. ಇನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚಿನ ಪರಿಶಿಷ್ಟ ಸಮುದಾಯಗಳಿಗೆ 7,235 ಎಕರೆಗಳಷ್ಟು ಭೂಮಿಯನ್ನು ‘‘ ಭೂ ಒಡೆತನ ಯೋಜನೆಯಡಿ’’ ನೀಡಲಾಗಿದೆ. ಭೂಮಿಯು ಘನತೆಯ ಸಂಕೇತವಾಗಿರುವ ಕಾರಣ ಮುಂದಿನ ದಿನಗಳಿಗೆ ಭೂಮಿಯ ಲಭ್ಯತೆಯನ್ನು ನೋಡಿಕೊಂಡು ಹೆಚ್ಚು ಮಂದಿ ಪರಿಶಿಷ್ಟರಿಗೆ ಭೂ ಒಡೆತನ ಕಲ್ಪಿಸುವ ಇರಾದೆ ಇದೆ.
2013ರಿಂದ 2018ರವರೆಗೆ ಮತ್ತು 2023 ರಿಂದ 2025 ರ ಅವಧಿಯ ನಡುವೆ ಪರಿಶಿಷ್ಟ ಸಮುದಾಯಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸುಮಾರು 51,401 ಬೋರ್ ವೆಲ್ ಗಳ ಸೌಲಭ್ಯವನ್ನು ನೀಡಲಾಗಿದ್ದು, ಬಿಜೆಪಿ ಅವಧಿಯಲ್ಲಿ ಇದರ ಸಂಖ್ಯೆ ಕೇವಲ 14,416 ಮಾತ್ರವೇ ಎಂಬ ಸಂಗತಿಯನ್ನು ನಾವು ತಿಳಿಯಬೇಕು.
ವಿದೇಶಗಳಲ್ಲಿ ಪರಿಶಿಷ್ಟ ಸಮುದಾಯದ ಮಕ್ಕಳು ಹೆಚ್ಚಾಗಿ ಓದಬೇಕೆಂದು ಪ್ರಬುದ್ಧ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಶಿಕ್ಷಣವು ಪರಿಶಿಷ್ಟ ವರ್ಗದವರ ಬದುಕಲ್ಲಿ ಹೆಚ್ಚು ಬದಲಾವಣೆ ತರುವ ಶಕ್ತಿಯಾಗಿರುವ ಕಾರಣ ದುರ್ಬಲ ವರ್ಗಗಳ ಮಕ್ಕಳಿಗೆ ವಿವಿಧ ಕಾರಣಗಳ ಅಡಿಯಲ್ಲಿ ನಮ್ಮ ವಸತಿ ನಿಲಯಗಳಲ್ಲಿ ನೇರ ಪ್ರವೇಶಾತಿಯನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ವಿದ್ಯಾರ್ಥಿ ವೇತನದ ಪ್ರಮಾಣವನ್ನೂ ಸಹ ಹೆಚ್ಚಳ ಮಾಡಲಾಗಿದೆ.
ಮುಖ್ಯವಾಗಿ ಇದೀಗ ಚರ್ಚೆಯ ಕೇಂದ್ರವಾಗಿರುವ ಗ್ಯಾರಂಟಿ ಯೋಜನೆಗಳಿಗೆ SಅSP/ಖಿSP ಯೋಜನೆಯ ಹಣವನ್ನು ವಿನಿಯೋಗಿಸಲಾಗಿದೆ ಎಂಬ ಮಾತನ್ನು ಆರೋಪ ಮಾಡುವ ಧಾಟಿಯಲ್ಲಿ ಆಡಲಾಗುತ್ತಿದೆ. ಆರೋಪ ಮಾಡಲು ಇಲ್ಲಿ ಯಾವುದೇ ಹುರುಳಿಲ್ಲ ಏಕೆಂದರೆ, ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಯುವ ನಿಧಿ ಯೋಜನೆಯೊಂದರಲ್ಲೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಸುಮಾರು 56,88,822 ರಷ್ಟು ಜನರಿದ್ದು ಶಕ್ತಿ ಮತ್ತು ಗೃಹಜ್ಯೋತಿ ಯೋಜನೆಯಡಿ ಇರುವ ಪರಿಶಿಷ್ಟ ಸಮುದಾಯಗಳ ಫಲಾನುಭವಿಗಳ ಸಂಖ್ಯೆಯೂ ಸಹ ಹಲವು ಲಕ್ಷಗಳಷ್ಟಿದೆ. ಹೀಗಾಗಿ ಆರೋಪದ ಕನ್ನಡಕವನ್ನು ತೆಗೆದಿಟ್ಟು ಸಹ ಜನರ ಬದುಕನ್ನು ಸಂವೇದನೆಯಿಂದ ನೋಡುವ ಅಗತ್ಯವಿದೆ.
ಹೌದು, ರಾಜ್ಯದಲ್ಲಿ ಜನಸಂಖ್ಯಾವಾರು ಅತ್ಯಂತ ಹೆಚ್ಚಾಗಿರುವ ಪರಿಶಿಷ್ಟ ಸಮುದಾಯಗಳ ನಿರೀಕ್ಷೆಯು ಸಹಜವಾಗಿ ಹೆಚ್ಚಾಗಿದೆ. ಈ ನಿರೀಕ್ಷೆಯು ಸಾರ್ವಕಾಲಿಕ. ಆದರೆ ಇದೇ ಸಮುದಾಯದ ಜನರ ಬದುಕಿಗೆ ಕನಿಷ್ಠ ಆದಾಯದ ಮೂಲಕ ಅನುಕೂಲ ಮಾಡಿ ಕೊಡಲು ಮತ್ತು ಅವರಿಗೆ ಇಲಾಖೆಯ ಯೋಜನೆಗಳನ್ನು ತಲುಪಿಸಲು ಸರಕಾರವು ಪ್ರಾಮಾಣಿಕವಾಗಿ ಮಾಡುತ್ತಿರುವ ಪ್ರಯತ್ನಗಳು ಗೌಣವಾದರೆ, ಅದಕ್ಕೇನಾದರೂ ಅರ್ಥವಿದೆಯೇ ?
ಕೇಂದ್ರ ಸರಕಾರದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರಿಯಾ ಯೋಜನೆಯಡಿಯಲ್ಲಿ 2024-25 ನೇ ಸಾಲಿನಲ್ಲಿ ಒಟ್ಟು 2,46,236 ಕೋಟಿಗಳಷ್ಟು ಹಣವನ್ನು ನಿಗದಿ ಮಾಡಿದ್ದು 2025-26 ನೇ ಸಾಲಿನಲ್ಲಿ 2,97,728 ಕೋಟಿಗಳಷ್ಟು ಹಣವನ್ನು ನಿಗದಿಪಡಿಸಲಾಗಿದೆ.
2011 ರ ಜನಗಣತಿಯ ಅಂಕಿ ಅಂಶದ ಪ್ರಕಾರವೇ ಹೋಗುವುದಾದರೆ ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ ಜನರ ಪ್ರಮಾಣ 16.6ಶೇ. ದಷ್ಟಿದ್ದು ಪರಿಶಿಷ್ಟ ಪಂಗಡಗಳ ಜನರ ಪ್ರಮಾಣ 8.6ಶೇ. ದಷ್ಟಿದೆ ( ಒಟ್ಟು 25.2 ಶೇ.) ಹೀಗಿದ್ದಾಗಲೂ ಸಹ ಕೇಂದ್ರ ಪರಿಶಿಷ್ಟ ಜಾತಿ ಮತ್ತು ಪಂಗಡದ ಕ್ರಿಯಾ ಯೋಜನೆಯಡಿಯಲ್ಲಿ ಸರಾಸರಿ 5.5ಶೇ. ದಷ್ಟು ಮಾತ್ರವೇ ಅನುದಾನವನ್ನು ನಿಗದಿ ಪಡಿಸಲಾಗಿದೆ.
ಹೀಗೆ ನಿಗದಿ ಪಡಿಸಿದ ಕ್ರಿಯಾ ಯೋಜನೆಯ ಅತಿ ಕಡಿಮೆ ಹಣವು ಪರಿಶಿಷ್ಟ ಜಾತಿ ಮತ್ತು ವರ್ಗದ ಸಮುದಾಯಗಳಿಗೆ ಖರ್ಚಾಗುತ್ತಿದೆಯೇ ಎಂದು ಗಮನಿಸಿದರೆ ಅಲ್ಲಿಯೂ ಸಹ ದೊಡ್ಡ ದ್ರೋಹವನ್ನೇ ಮಾಡಲಾಗುತ್ತಿದೆ. ಕಾರಣ ನಿಗದಿಯಾಗಿದ್ದ ಕ್ರಿಯಾ ಯೋಜನೆಯ ಒಟ್ಟು ಅನುದಾನದಲ್ಲಿ ಹಂಚಿಕೆಯಾದ 1,38,362.52 ಕೋಟಿಗಳ ಪೈಕಿ ಕೇವಲ 6ಶೇ. ದಷ್ಟು ಹಣವನ್ನು ಮಾತ್ರವೇ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗಿದ್ದು ಉಳಿದ 94ಶೇ. ದಷ್ಟು ಹಣವನ್ನು ಸಾಮಾನ್ಯ ಯೋಜನೆಗಳಿಗೆ (Deemed Expenditure) ನೀಡಲಾಗಿದೆ.
ಅತಿ ಹೆಚ್ಚಿನ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ನೀಡಿರುವ ಅನುದಾನವೇ ಕಡಿಮೆ. ಅದರಲ್ಲಿಯೂ ಇಂತಹ ದ್ರೋಹ ಕೇಂದ್ರ ಸರಕಾರದಿಂದ ಜರುಗುತ್ತಿದೆ. ಸಾಲದು ಎಂಬಂತೆ ಕಲ್ಪಿಸಿರುವ ಸಾಸಿವೆ ಕಾಳಿನಷ್ಟು ಅನುದಾನದಲ್ಲೂ ಸಹ ಕರ್ನಾಟಕಕ್ಕೆ ಕೇಂದ್ರದಿಂದ ನೀಡಬೇಕಾದ ಅನುದಾನವನ್ನು ಇನ್ನೂ ಒದಗಿಸಿಲ್ಲ. ಹೀಗಾಗಿ ನಮ್ಮ ವಿರುದ್ಧ ಹೋರಾಟ ಮಾಡುವ ಘೋಷಣೆ ಮಾಡಿರುವ ರಾಜ್ಯ ಬಿಜೆಪಿಯವರು ಮೊದಲು ತಮ್ಮ ಸಂಸದರು ಮತ್ತು ಶಾಸಕರನ್ನು ಕರೆದುಕೊಂಡು ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹೋರಾಟ ಮಾಡುವುದು ಸೂಕ್ತ.
ಕೊನೆಯದಾಗಿ,
ಅತಿ ಹೆಚ್ಚಿನ ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಹೀಗಿರುವಾಗ ಯಾವುದು ಅನ್ಯಾಯ ಮತ್ತು ದ್ರೋಹ ಎಂಬುದನ್ನು ನಾವು ಮೊದಲು ಗುರುತಿಸಬೇಕು. ಅತಿ ಮುಖ್ಯವಾಗಿ ಯಾವ ಕಾರಣಗಳಿಗಾಗಿ ನಮ್ಮ ಹೋರಾಟ ಇರಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಇರಬೇಕು ಎಂಬ ಅಗತ್ಯವಾದ ಪ್ರಜ್ಞೆಯು ಸಹ ನಮ್ಮ ಸಮುದಾಯಗಳಿಗೆ ಒಳಿತನ್ನು ಮಾಡಬಲ್ಲದು.