‘‘ಲೋ, ಯಾವ ಜಾತಿಯವನೋ ನೀನು?’’
ಹಿಂದಿ ಮೂಲ: ಬಚ್ಚಾಲಾಲ್ ಉನ್ಮೇಶ್
ಕನ್ನಡಕ್ಕೆ : ರೂಹೀ ಸಾದಿಕ್
‘‘ಲೋ, ಯಾವ ಜಾತಿಯವನೋ ನೀನು?’’
ನಾನು ದಲಿತ, ಧಣಿಯೋರೇ.
‘‘ಹಾಗಲ್ಲ ಕಣೋ, ಯಾವ್ದ್ರಲ್ಲಿ ಬರ್ತೀಯಾ ನೀನು?’’
ನಿಮ್ಮ ಬೈಗಳಲ್ಲಿ ಬರ್ತೀನಿ
ನಾರುವ ನಾಲೆಯಲಿ ಬರ್ತೀನಿ
ನೀವು ಬದಿಗಿಟ್ಟ ಎಂಜಲು ಬಟ್ಟಲಲ್ಲಿ ಬರ್ತೀನಿ.
‘‘ಓಹ್. ಹಿಂದೂ ಧರ್ಮದಲ್ಲಿ ಬರ್ತಿ ಅಂದ್ಕೊಂಡಿದ್ದೆ.’’
ಬರ್ತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.
‘‘ಲೋ, ನೀನೇನ್ ತಿನ್ತೀಯಾ?’’
ದಲಿತರೆಲ್ಲಾ ತಿನ್ನೋದನ್ನೇ ನಾನೂ ತಿನ್ತೀನಿ ಧಣಿಯೋರೇ.
‘‘ಹಾಗಲ್ಲ ಕಣೋ, ಏನೇನೆಲ್ಲಾ ತಿನ್ತೀಯಾ?’’
ನಿಮ್ಮ ಪೆಟ್ಟು ತಿನ್ತೀನಿ
ಸಾಲದ ಸಂಕಟ ತಿನ್ತೀನಿ
ಒಮ್ಮೊಮ್ಮೆ ಉಪ್ಪು, ಒಮ್ಮೊಮ್ಮೆ ಉಪ್ಪಿನ್ಕಾಯಿ ತಿನ್ತೀನಿ
‘‘ಓಹ್. ಕೋಳಿ ತಿನ್ತೀಯಾ ಅಂದ್ಕೊಂಡಿದ್ದೆ.’’
ತಿನ್ತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.
‘‘ಲೋ, ನೀನೇನ್ ಕುಡೀತೀಯಾ?’’
ದಲಿತರೆಲ್ಲಾ ಕುಡಿಯೋದನ್ನೇ ನಾನೂ ಕುಡೀತೀನಿ ಧಣಿಯೋರೇ.
‘‘ಹಾಗಲ್ಲ ಕಣೋ, ಏನೇನೆಲ್ಲಾ ಕುಡೀತೀಯಾ?’’
ಅಸ್ಪಶ್ಯತೆಯ ಹಿಂಸೇನಾ ಕುಡೀತೀನಿ
ಭ್ರಮನಿರಸನದ ನೋವನ್ನಾ ನಿತ್ಯ ಕುಡೀತೀನಿ
ದೌರ್ಜನ್ಯದ ವೈಭವವನ್ನು ಕಣ್ಣಾರೆ ಕುಡೀತೀನಿ
‘‘ಓಹ್. ಮದ್ಯ ಕುಡೀತೀಯಾ ಅಂದ್ಕೊಂಡಿದ್ದೆ.’’
ಕುಡೀತೀನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.
‘‘ಲೋ, ಏನ್ ಸಿಕ್ಕಿದೆ ನಿನಗೆ?’’
ದಲಿತರಿಗೆಲ್ಲಾ ಸಿಗೋದೇ, ನನಗೂ ಸಿಕ್ಕಿದೆ ಧಣಿಯೋರೇ.
‘‘ಹಾಗಲ್ಲ ಕಣೋ, ಏನೆಲ್ಲಾ ಸಿಕ್ಕಿದೆ ನಿನಗೆ?’’
ಅಪಮಾನದ ಬದುಕು ಸಿಕ್ಕಿದೆ
ನೀವು ಬಿಟ್ಟ ಹೊಲಸೆಲ್ಲಾ ಸಿಕ್ಕಿದೆ,
ನಿಮ್ಮ ದಾಸ್ಯ ಮಾಡುವ ಭಾಗ್ಯ ಸಿಕ್ಕಿದೆ.
‘‘ಓಹ್. ಭರವಸೆಗಳು ಸಿಕ್ಕಿವೆ ಅಂದ್ಕೊಂಡಿದ್ದೆ.’’
ಸಿಕ್ಕಿವೆಯಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.
‘‘ಲೋ, ಏನೇನ್ ಮಾಡಿದೆ, ನೀನು?’’
ದಲಿತರೆಲ್ಲಾ ಮಾಡುವುದನ್ನೇ ನಾನೂ ಮಾಡಿದೆ ಧಣಿಯೋರೇ.
‘‘ಹಾಗಲ್ಲ ಕಣೋ, ಏನೇನೆಲ್ಲಾ ಮಾಡಿದೆ ನೀನು?’’
ನೂರುದಿನ ಕೆರೆಯ ಕೆಸರಲ್ಲಿ ದುಡಿದಿದ್ದೆ
ಬೆಳಗಿಂದ ಸಂಜೆಯವರೆಗೂ ಬೆವರಲ್ಲಿ ಮಿಂದಿದ್ದೆ
ಹಾದುಹೋಗುವ ಎಲ್ಲ ಧಣಿಗಳ ಕಾಲಿಗೆರಗಿದ್ದೆ.
‘‘ಓಹ್. ಲಾಭದ ಕೆಲಸವೇನಾದರೂ ಮಾಡಿದೆ ಅಂದ್ಕೊಂಡಿದ್ದೆ.’’
ಮಾಡಿದೆನಲ್ಲಾ ಧಣಿಯೋರೇ, ನಿಮ್ಮ ಚುನಾವಣೆಯ ಕಾಲದಲ್ಲಿ.