×
Ad

ಹಣ್ಣುಗಳ ರಾಜ ಮಾವಿನ ಬೆಲೆ ಕುಸಿತ: ತೀವ್ರ ಸಂಕಷ್ಟದಲ್ಲಿ ಬೆಳೆಗಾರರು

Update: 2025-06-16 12:45 IST

ಸಾಂದರ್ಭಿಕ ಚಿತ್ರ PC: istockphoto

ಹೊಸಕೋಟೆ: ಹಣ್ಣುಗಳ ರಾಜ ಮಾವಿನ ದರ ಪಾತಾಳ ತಲುಪಿದೆ. ಬೆಳೆಗಾರರೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ, ಜೂನ್ ತಿಂಗಳು ಬಂತೆಂದರೆ ಎಲ್ಲೆಡೆ ಮಾವಿನ ಹಣ್ಣಿನ ಘಮಲು ಜೋರಾಗಿರುತ್ತದೆ. ಆದರೆ, ಹಣ್ಣು ಫಸಲು ಇದೆ ಆದರೆ ಬೆಲೆ ಇಲ್ಲ ಇದರಿಂದ ಗ್ರಾಹಕರಿಗೆ ಅನುಕೂಲವಾದರೆ, ಬೆಳೆಗಾರರು, ಹಣ್ಣಿನ ವ್ಯಾಪಾರಿಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ.

ವರ್ಷದ ಬೆಳೆಯಾದ ಮಾವನ್ನು ಪ್ರತಿ ಮರಕ್ಕೆ ಇಳುವರಿ ಆಧಾರದ ಮೇಲೆ 2-5 ಸಾವಿರ ರೂ.ವರೆಗೆ ಗುತ್ತಿಗೆ ಆಧಾರದಲ್ಲಿ ವ್ಯಾಪಾರಸ್ಥರು ಖರೀದಿಸುತ್ತಾರೆ. ಪ್ರಾರಂಭದಲ್ಲಿ ಉತ್ತಮ ಬೆಲೆ ಇತ್ತು. ಕಳೆದ 3 ವಾರಗಳಿಂದ ಬೆಲೆ ದಿಢೀರ್ ಕುಸಿತವಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಉಪ್ಪಿನಕಾಯಿ, ಜ್ಯೂಸ್ ಕಾರ್ಖಾನೆಗಳಲ್ಲಿ ಬೇಡಿಕೆಯು ಸಹ ಕಡಿಮೆಯಾಗಿದೆ. ಕಾಯಿಗಳನ್ನು ಕೀಳುವ ಕೂಲಿಯೂ ಸಿಗುತ್ತಿಲ್ಲ. ಕೆಲವೆಡೆ ಕಳೆದ ವರ್ಷ ಮರಗಳನ್ನು ಕೇಳಲು ಹೊರರಾಜ್ಯಗಳಿಂದ ವ್ಯಾಪಾರಿಗಳು ಬರುತ್ತಿದ್ದರು. ಆದರೆ, ಈ ಬಾರಿ ಯಾರೂ ರಾಜ್ಯದತ್ತ ಬಂದಿಲ್ಲ ಎನ್ನುತ್ತಾರೆ ಮಾವು ಬೆಳೆಗಾರರು.

ರೋಗಬಾಧೆಯಿಂದಲೂ ಮರಗಳಿಗೆ ಹಾನಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5.374 ಹೆಕ್ಟೇರ್ ಮಾವಿನ ಹಣ್ಣಿನ ಪ್ರದೇಶವನ್ನು ಹೊಂದಿದೆ. ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗದಿದ್ದರೂ ರೈತರು ಮಾವು ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಯಾವ ಮಾವಿನ ತೋಟಕ್ಕೆ ಹೋದರೂ ಮರದ ತುಂಬಾ ಕಾಯಿ, ಮಾವಿನ ಮರಗಳಲ್ಲಿ ಕಂಡು ಬರುತ್ತಿದೆ. ಮಾರುಕಟ್ಟೆಯಲ್ಲಿ 3 ಕೆ.ಜಿ. 100 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಕೆಲವರು 2 ಕೆ.ಜಿ ಮಾವಿನ ಹಣ್ಣಿಗೆ ನೂರು ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಲಾಭದ ನಿರೀಕ್ಷೆಯಲ್ಲಿದ್ದ ಮಾವು ಬೆಳೆದ ರೈತ ಕಂಗಲಾಗಿದ್ದಾನೆ.

3ಲಕ್ಷ ರೂ.ಗಳಿಗೆ ಮಾವಿನ ತೋಟವೊಂದನ್ನು ಗುತ್ತಿಗೆಪಡೆದಿದ್ದು ಪ್ರಾರಂಭದಲ್ಲಿ ಸ್ವಲ್ಪ ಹಣ್ಣು ಕಟಾವು ಮಾಡಲಾಗಿತ್ತು. ಉಳಿದ ಹಣ್ಣನ್ನು ಕಟಾವು ಮಾಡುವಷ್ಟರಲ್ಲಿಯೇ ಬೆಲೆ ಕುಸಿತವಾಗಿದೆ. ಇದರಿಂದ ಕೂಲಿ ಸಾಗಾಟ ವೆಚ್ಚವೂ ಸಿಗುವುದಿಲ್ಲ ಎಂದು ಗಿಡದಲ್ಲೇ ಬಿಡಲಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 1 ಕೆ.ಜಿಗೆ 15 ರಿಂದ 20 ರೂ. ಇದೆ. ನಮ್ಮ ಕೂಲಿ ಸಾಲಕ್ಕೆ ಬಡ್ಡಿ ಕೂಡ ದೊರೆಯದಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಇದರಿಂದ ಸಾಲದ ಸುಳಿಗೆ ಸಿಲುಕುವಂತಾಗಿದೆ. ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾಗಿದೆ.

ಈ ಬಾರಿ ವರ್ತಕರು ಮಾರುಕಟ್ಟೆಯತ್ತ ಮುಖ ಮಾಡಿಲ್ಲ. ಅಲ್ಲದೆ ಏಕಕಾಲಕ್ಕೆ ಉತ್ಪನ್ನ ಮಾರುಕಟ್ಟೆಗೆ ಬಂದಿರುವುದರಿಂದ ಮಾವಿನಹಣ್ಣು ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಬಾದಾಮಿ ಮಾವು ಬೆಳೆದ ಬೆಳೆಗಾರರಿಗೆ ಕಹಿಯಾಗುತ್ತಿದೆ. ಈ ವರ್ಷ ಬಾದಾಮಿ ಹೆಣ್ಣಿಗೆ ಬೇಡಿಕೆ ಕುಸಿದಿದ್ದು, ಕಾಯಿ ಬೆಲೆ 100 ರೂ. ಗಡಿ ದಾಟಿಲ್ಲ ಈ ಬಾರಿ ರಸ ಪುರಿ ಮಾವಿನಾದರೂ ಬಾದಾ ಮಿಯನ್ನು ಹಿಂದಿಕ್ಕಿದ್ದು ಬೆಲೆಕುಸಿತದ ನಡುವೆಯೂ ಬೆಳೆಗಾರರಿಗೆ ಬಂಪರ್ ಕೊಡುಗೆ ನೀಡುತ್ತಿದೆ.

ಈ ವರ್ಷ ಸಂಪೂರ್ಣವಾಗಿ ಮಾವಿನ ಹಣ್ಣಿನ ಬೆಲೆ ಕುಸಿದಿದೆ. ಮಾವು ಬೆಲೆ ಯಾವಾಗಲೂ ಏರಿಕೆ ಇರುತ್ತಿತ್ತು. ಲಾಭದ ನಿರೀಕ್ಷೆಯಲ್ಲಿ ಮಾವಿನ ಹಣ್ಣು ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ.

-ಮಿಠಾಯಿ ಭಾಷಾ, ವ್ಯಾಪಾರಿ, ಹೊಸಕೋಟೆ

ಮಾವು ಇಳುವರಿ ಚೆನ್ನಾಗಿ ಬಂದಿದ್ದರೂ ಬೆಲೆ ಕುಸಿತದಿಂದ ಸಾಕಷ್ಟು ಸಮಸ್ಯೆಗಳನ್ನು ರೈತರು ಎದುರಿಸುವಂತೆ ಆಗಿದೆ. ರೈತರ ಪರಿಸ್ಥಿತಿ ಗಂಭೀರವಾಗಿದೆ. ಸರಕಾರಗಳು ರೈತರಿಗೆ ಅನುಕೂಲವಾಗಲು ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು.

-ಹರೀಶ್, ಮಾವು ಬೆಳೆಗಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಾರಾಯಣ ಸ್ವಾಮಿ ಸಿ.ಎಸ್

contributor

Similar News