ದೇಶಪ್ರೇಮದ ಉತ್ಕಟ ನಿದರ್ಶನ ಮೌಲಾನಾ ಅಬುಲ್ ಕಲಾಂ ಆಝಾದ್
ಇಂದು ರಾಷ್ಟ್ರೀಯಶಿಕ್ಷಣ ದಿನಾಚರಣೆ
ಅದು ಸ್ವಾತಂತ್ರ್ಯ ಹೋರಾಟದ ಉತ್ತುಂಗದ ಸಮಯ. ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷ್ ಸರಕಾರ ಬಂಧಿಸಿ ಜೈಲಿನಲ್ಲಿಟ್ಟು ಹೋರಾಟವನ್ನು ದಮನಿಸಲು ಆರಂಭಿಸಿತ್ತು. ಅಗ್ರಗಣ್ಯ ನಾಯಕರನ್ನು ಬಂಧಿಸುವ ಮೂಲಕ ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಬ್ರಿಟಿಷ್ ಸರಕಾರ ಮಾಡುತ್ತಿತ್ತು. ಮೌಲಾನಾ ಅಬುಲ್ ಕಲಾಂ ಆಝಾದ್ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯ ನಾಯಕರಾಗಿದ್ದರು. ಅವರನ್ನು ಬಂಧಿಸಿದ ಬ್ರಿಟಿಷ್ ಸರಕಾರ ಅಹ್ಮದ್ ನಗರದ ಕಾರಾಗೃಹದಲ್ಲಿರಿಸಿತು. ಈ ನಡುವೆ ಮೌಲಾನಾ ಆಝಾದರ ಪತ್ನಿ ಝುಲೇಖಾ ಬೇಗಂ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬಾಲ್ಯದಲ್ಲೇ ವಿವಾಹ ಬಂಧನಕ್ಕೆ ಒಳಗಾಗಿದ್ದ ಝುಲೇಖಾ ಬೇಗಂ ಜೀವನದಲ್ಲಿ ಸುಖ ಅನುಭವಿಸಿದವರಲ್ಲ. ಪತಿ ಆಝಾದ್ ಲೇಖನ, ಪತ್ರಿಕೆ, ಕಾಂಗ್ರೆಸ್ ಸಂಘಟನೆ, ಅಧಿವೇಶನ, ಭಾಷಣ, ಜನ ಸಂಘಟನೆ, ಸ್ವಾತಂತ್ರ್ಯ ಹೋರಾಟದಲ್ಲೇ ಮುಳುಗಿ ಹೋಗಿದ್ದರು. ದಾಂಪತ್ಯ ಜೀವನದ ರಸನಿಮಿಷಗಳಿಗಿಂತಲೂ ಅವರಿಗೆ ಭಾರತದ ಸ್ವಾತಂತ್ರ್ಯವೇ ಮುಖ್ಯವಾಗಿತ್ತು. ವಿದ್ಯಾವಂತ ಕುಟುಂಬ, ಪ್ರತಿಷ್ಠಿತ ಕುಟುಂಬದ ಸೊಸೆಯಾಗಿದ್ದರೂ ಜೀವನದಲ್ಲಿ ಬಹುಪಾಲು ತ್ಯಾಗವನ್ನೇ ಮಾಡಿಕೊಂಡು ಬಂದ ಝುಲೇಖಾ ಬೇಗಂ ಅನಾರೋಗ್ಯದಿಂದ ಮರಣ ಹೊಂದಿದರು. ಪತ್ನಿಯು ಇಹಲೋಕ ತ್ಯಜಿಸುವಾಗ ಪತಿ ಆಝಾದ್ ನಾಲ್ಕು ಕೋಣೆಯ ನಡುವೆ ಬಂದಿಯಾಗಿದ್ದರು. ಪ್ರೀತಿಯ ಮಡದಿ ಕೊನೆಯುಸಿರೆಳೆದ ಸುದ್ದಿ ಬ್ರಿಟಿಷ್ ಅಧಿಕಾರಿಗಳ ಮೂಲಕ ಆಝಾದರಿಗೆ ತಲುಪಿತು. ಆದರೆ ಹೋರಾಟಗಾರರನ್ನು ಅಷ್ಟು ಸುಲಭದಲ್ಲಿ ಬಿಡುಗಡೆ ಮಾಡುತ್ತಿರಲಿಲ್ಲ. ಮುಂದೆ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟರೆ ಜೈಲಿನಿಂದ ಬಿಡುಗಡೆ ಹೊಂದಲು ಮತ್ತು ಪತ್ನಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿತ್ತು. ಆದರೆ ಈ ಅಪ್ರತಿಮ ದೇಶಪ್ರೇಮಿ ಬ್ರಿಟಿಷ್ ಸರಕಾರಕ್ಕೆ ಮುಚ್ಚಳಿಕೆ ಬರೆದುಕೊಡಲು ಸಿದ್ಧ್ದರಿರಲಿಲ್ಲ. ಆದುದರಿಂದ ಅವರಿಗೆ ತನ್ನ ಜೀವನ ಸಂಗಾತಿಯ ಮುಖವನ್ನು ಕಟ್ಟಕಡೆಯದಾಗಿ ನೋಡುವ ಅವಕಾಶ ಸಿಗಲಿಲ್ಲ. ಬದುಕಿನ ಅತ್ಯಂತ ಕ್ಲಿಷ್ಟ ಕಾಲದಲ್ಲೂ ದೇಶದ ಸ್ವಾತಂತ್ರ್ಯಕ್ಕಾಗಿ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಸರಿಸದ ಅಬುಲ್ ಕಲಾಂ ಆಝಾದ್‌ರ ಜೀವನವೇ ಒಂದು ಯಶೋಗಾಥೆ.
ಬಹಳ ದಿನಗಳ ನಂತರ ಜೈಲಿನಿಂದ ಸಾಮಾನ್ಯವಾಗಿ ಬಿಡುಗಡೆಗೊಂಡ ಮೇಲೆ ತನ್ನ ಪತ್ನಿಯ ಸಮಾಧಿಯನ್ನು ಸಂದರ್ಶಿಸಿ ಕಣ್ಣಂಚಿನಲ್ಲಿ ಕಣ್ಣೀರ ಹನಿಗಳನ್ನು ಸುರಿಸಿ ತನ್ನ ಜೀವನ ಸಂಗಾತಿಗೆ ವಿದಾಯ ಹೇಳಿದ ಮೌಲಾನಾ ಆಝಾದರು ಗಾಂಧೀಜಿಯ ನಂತರದ ಸಾಲಿನ ಅಪ್ಪಟ ಹೋರಾಟಗಾರರು.
ಸ್ವಾತಂತ್ರ್ಯಹೋರಾಟದ ಹಾದಿಯಲ್ಲಿ ಅಂದಿನ ಮಹನೀಯರು ಕಳೆದುಕೊಂಡದ್ದು ಕೇವಲ ಅವರ ಯೌವನವನ್ನು ಮಾತ್ರವಲ್ಲ, ಬದಲಾಗಿ ಸಂಪೂರ್ಣ ಜೀವನವನ್ನು. ದೇಶಪ್ರೇಮ ಅಂದು ಚರ್ಚಾ ವಿಷಯವಾಗಿರಲಿಲ್ಲ, ಬದಲಾಗಿ ಸ್ವಾತಂತ್ರ್ಯ ಹೋರಾಟಗಾರರ ಜೀವನಕ್ರಮದಲ್ಲೇ ದೇಶಪ್ರೇಮ ಅಡಕವಾಗಿತ್ತು. ಸಾಮಾನ್ಯವಾಗಿ ಮಕ್ಕಳು ಆಟವಾಡುವ ವಯಸ್ಸಿನಲ್ಲಿ ಬಾಲಕ ಆಝಾದರು ‘ನಯಾರಂಗ್- ಎ - ಆಲಂ’ ಎಂಬ ಒಂದು ಪತ್ರಿಕೆಯನ್ನೇ ಆರಂಭಿಸಿದ್ದರು. ಆಗ ಅವರ ವಯಸ್ಸು ಕೇವಲ ಹನ್ನೆರಡು. ನಂತರದ ದಿನಗಳಲ್ಲಿ ತನ್ನ ಯೌವನದ ಕಾಲದಲ್ಲಿ ‘ಅಲ್ ಹಿಲಾಲ್’ ಎಂಬ ಪತ್ರಿಕೆಯನ್ನು ಆರಂಭಿಸಿ ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಅಣಿಗೊಳಿಸಿದರು. ಇಂದಿನ ಹಾಗೇ ಅಂದು ಕೂಡಾ ಜನರಲ್ಲಿ ತಪ್ಪು ಕಲ್ಪನೆಗಳನ್ನು ಹರಡಿ ಹೋರಾಟದ ದಿಕ್ಕು ಮತ್ತು ದೆಸೆಯನ್ನು ಬದಲಿಸುವ ಪ್ರಯತ್ನ ನಡೆಯುತ್ತಿತ್ತು. ಗಾಂಧೀಜಿಯ ನೇತೃತ್ವದಲ್ಲಿ ದೇಶವ್ಯಾಪಿ ಬೃಹತ್ ಆಂದೋಲನಗಳನ್ನು ಸಂಘಟಿಸುವಾಗ ಅದಕ್ಕೆ ಹಿನ್ನಡೆಯುಂಟು ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿತ್ತು. ಧರ್ಮದ ಆಧಾರದಲ್ಲಿ ಕೂಡಾ ಜನ ಸಂಘಟನೆಯನ್ನು ವಿಮುಖಗೊಳಿಸುವ ಪ್ರಯತ್ನ ಸಾಗುತ್ತಲೇ ಇತ್ತು. ಆದರೆ ಗಾಂಧೀಜಿಯ ನೇತೃತ್ವದ ಹೋರಾಟಕ್ಕೆ ಹೆಗಲಿಗೆ ಹೆಗಲು ಕೊಟ್ಟು ಆ ಹೋರಾಟಗಳನ್ನು ಯಶಸ್ವಿಗೊಳಿಸಲು ಮೌಲಾನಾ ಆಝಾದರು ಪಟ್ಟ ಶ್ರಮ ಅಪಾರವಾದುದು. ಹಿಂದೂ-ಮುಸ್ಲಿಮ್ ಐಕ್ಯಕ್ಕಾಗಿ ಗಟ್ಟಿಯಾದ ಬೆಸುಗೆಯನ್ನು ಹಾಕಿ ಜಿನ್ನಾರ ಹುನ್ನಾರಕ್ಕೆ ಭಾರತದ ಬಹುತೇಕ ಮುಸ್ಲಿಮರು ಬೀಳದ ಹಾಗೇ ನೋಡಿಕೊಂಡ ಕೀರ್ತಿ ಆಝಾದರಿಗೆ ಸಲ್ಲುತ್ತದೆ. ಪ್ರತ್ಯೇಕ ದೇಶದ ಬೇಡಿಕೆಯಲ್ಲಿ ವಿಶಾಲ ಭಾರತದ ಬಹುತೇಕ ಮುಸ್ಲಿಮರು ಇಲ್ಲ ಎಂಬ ವಾಸ್ತವಿಕತೆಯನ್ನು ದೇಶಕ್ಕೆ ಗಟ್ಟಿಯಾಗಿ ಸಾರಿದ ಅಗ್ರಗಣ್ಯ ರಾಷ್ಟ್ರನಾಯಕ ಈ ಮೌಲಾನಾ ಆಝಾದರು ಎಂಬುದು ಹಗಲಿನಷ್ಟೇ ಸತ್ಯ.
ಸ್ವತಂತ್ರ ಭಾರತದ ಮೊದಲ ಸಂಪುಟದಲ್ಲಿ ಶಿಕ್ಷಣದಂತಹ ಅತೀ ಮಹತ್ವದ ಇಲಾಖೆಯ ಹೊಣೆಗಾರಿಕೆ ಆಝಾದರ ಹೆಗಲಿಗೇರಿತು. ಇದು ಅವರ ಅರ್ಹತೆಯನ್ನು ಪರಿಗಣಿಸಿ ನೀಡಿದ ಇಲಾಖೆಯಾಗಿತ್ತು. ಶೈಕ್ಷಣಿಕವಾಗಿ ಭಾರೀ ದೊಡ್ಡ ಸವಾಲು ಸ್ವತಂತ್ರ ಭಾರತದ ಮುಂದಿತ್ತು. ಬಡತನ, ರಾಜ್ಯಗಳ ಪುನರ್‌ವಿಂಗಡಣೆ, ಸಂಸ್ಥಾನಗಳ ವಿಲೀನ, ಕೃಷಿ- ಕೈಗಾರಿಕೆಗಳ ಸಮತೋಲನ ಮೊದಲಾದ ಬೃಹತ್ ಸವಾಲುಗಳ ನಡುವೆ ಸಾಕ್ಷರತೆಯೇ ಇಲ್ಲದ ಬಹುದೊಡ್ಡ ಜನಸಂಖ್ಯೆ, ಶಿಕ್ಷಣ ಸಾರ್ವತ್ರೀಕರಣದ ಸವಾಲು, ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಕೊರತೆ ಇವೇ ಮೊದಲಾದ ಬಹುಮುಖಿ ಸವಾಲುಗಳನ್ನು ಏಕಕಾಲದಲ್ಲಿ ನಿಭಾಯಿಸಬೇಕಾದ ಅನಿವಾರ್ಯ ಅಂದು ಸೃಷ್ಟಿಯಾಗಿತ್ತು. ಇಂತಹ ಸವಾಲುಗಳನ್ನು ನಿಭಾಯಿಸಬಹುದಾದ ಓರ್ವ ಮಾಂತ್ರಿಕನ ಅವಶ್ಯಕತೆ ಅಂದು ಭಾರತ ಸರಕಾರಕ್ಕೆ ಇತ್ತು. ಒಂದು ಕಡೆ ಸಂಸ್ಥಾನಗಳ ವಿಲೀನ ಮತ್ತು ರಾಜ್ಯಗಳ ಪುನರ್‌ವಿಂಗಡನೆಯ ಅತೀ ಸೂಕ್ಷ್ಮ ಮತ್ತು ಅಷ್ಟೇ ನಾಜೂಕಿನ ಸವಾಲುಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ನಿಭಾಯಿಸಿದರೆ ಮತ್ತೊಂದೆಡೆ ಭಾರತದ ಶೈಕ್ಷಣಿಕ ವ್ಯವಸ್ಥೆಗೆ ಭದ್ರ ಬುನಾದಿಯನ್ನು ಆಝಾದರು ಹಾಕಿದರು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ), ಪ್ರೌಢ ಶಿಕ್ಷಣ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ಖರಗ್ಪುರದ ಉನ್ನತ ತಾಂತ್ರಿಕ ಶಿಕ್ಷಣ ಕೇಂದ್ರಗಳನ್ನು ಆಝಾದರ ದೂರದೃಷ್ಟಿಯ ಪರಿಣಾಮವಾಗಿ ತೆರೆಯಲಾಯಿತು. ಅಂದು ಆಝಾದರು ನೆಟ್ಟ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ಅದರ ಫಲಗಳು ಜಗತ್ತಿನಾದ್ಯಂತ ಪಸರಿಸಿರುವುದು ಮಾತ್ರವಲ್ಲ, ಭಾರತದ ಕೀರ್ತಿಯನ್ನು ಕೂಡಾ ಎತ್ತರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಬಹುಭಾಷಾ ಪಂಡಿತ, ಮಹಾನ್ ಮೇಧಾವಿ, ಎದೆಗುಂದದ ಸ್ವಾತಂತ್ರ್ಯ ಹೋರಾಟಗಾರ, ಭಾರತಕ್ಕಾಗಿ ತನ್ನ ಬಹುತೇಕ ಬದುಕನ್ನು ಸವೆಸಿದ ಶೈಕ್ಷಣಿಕ ಬಲವರ್ಧನೆಯ ರೂವಾರಿ 1888 ನವೆಂಬರ್ 11ರಂದು ಸೌದಿ ಅರೇಬಿಯದ ಮಕ್ಕಾದಲ್ಲಿ ಜನಿಸಿದ್ದರು. ಭಾರತದಿಂದ ವಲಸೆ ಹೋಗಿದ್ದ ಖೈರುದ್ದೀನ್ ಮತ್ತು ಆಲಿಯಾ ದಂಪತಿಯ ಪುತ್ರ ಈ ಅಬುಲ್ ಕಲಾಂ ಮತ್ತೆ ತನ್ನ ತಂದೆತಾಯಿಯೊಂದಿಗೆ ಭಾರತಕ್ಕೆ ಮರಳಿ ಮಾತೃಭೂಮಿಗಾಗಿ ತನ್ನ ಬದುಕನ್ನು ಮುಡಿಪಾಗಿಸಿ ಇಲ್ಲೇ ಮಣ್ಣಾಗಿ ಹೋದ ನೈಜ ಕತೆ ನಮ್ಮ ಇಂದಿನ ಪೀಳಿಗೆಗೆ ಎಷ್ಟು ತಿಳಿದಿದೆ?. ತಿಳಿಯಪಡಿಸಲು ಅವರ ಜೀವನಕಥನಗಳನ್ನು ನಾವು ಎಷ್ಟು ಪಾಠಪುಸ್ತಕಗಳಲ್ಲಿ ಅಳವಡಿಸಿದ್ದೇವೆ? ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಅವರನ್ನು ನೆನಪು ಮಾಡುವ ಕಾರ್ಯಕ್ರಮ ದೇಶಾದ್ಯಂತ ಏಕಕಾಲದಲ್ಲಿ ನಡೆದರೆ ಅದು ಅವರಿಗೆ ಕೊಡುವ ಕನಿಷ್ಠ ಗೌರವ.