×
Ad

ಅಲ್ಪಸಂಖ್ಯಾತರ ಇಲಾಖೆಯಿಂದ ಸರಳ ವಿವಾಹಕ್ಕೆ ಉತ್ತೇಜನ: ಪ್ರತೀ ಜೋಡಿಗೆ 50 ಸಾವಿರ ರೂ., ಆಯೋಜಕರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ

Update: 2025-11-06 14:37 IST

ಕಲಬುರಗಿ: ಮದುವೆಗಳಲ್ಲಿ ಸಾವಿರಾರು ರೂಪಾಯಿಗಳ ಆಹಾರ, ಸಡಗರದ ಹೂವಿನ ಅಲಂಕಾರಗಳು ಆಡಂಬರ ಅನಿವಾರ್ಯವೆಂಬ ಭಾವನೆ ಆರ್ಥಿಕ ಬಾಧೆಗೆ ಕಾರಣವಾಗುತ್ತಿದೆ. ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದ ನವ ಜೋಡಿಗಳು ಸಾಮೂಹಿಕ ವಿವಾಹ ಕೇಂದ್ರಗಳಲ್ಲಿ ಸರಳ ವಿವಾಹವಾಗುವ ಪ್ರತೀ ಜೋಡಿಗಳಿಗೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡುವುದಾಗಿ ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯ ತಿಳಿಸಿದೆ.

ಶಾದಿ ಭಾಗ್ಯ ಯೋಜನೆಯಲ್ಲಿ ಪ್ರತ್ಯೇಕ ಮದುವೆ ಆಗುತ್ತಿದ್ದ ನವ ವಧುವಿನ ಖಾತೆಗೆ 50 ಸಾವಿರ ರೂ. ಶಾದಿ ಭಾಗ್ಯ ಯೋಜನೆಯ ಹಣ ನೀಡಲಾಗುತ್ತಿತ್ತು. ಇದನ್ನು ರದ್ದು ಮಾಡಿದ ರಾಜ್ಯ ಸರಕಾರ ಇದೀಗ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಸಮುದಾಯದ ಆರ್ಥಿಕ ಹೊರೆ ತಗ್ಗಿಸುವ ಮಹದಾಸೆಯೊಂದಿಗೆ ಸರಳ ವಿವಾಹ ಯೋಜನೆ ಜಾರಿಗೆ ತಂದಿದೆ.

ಪ್ರತೀ ಜೋಡಿಗೆ 50 ಸಾವಿರ ರೂ. ಪ್ರೋತ್ಸಾಹ ನೀಡುತ್ತದೆ. ಸಾಮೂಹಿಕ ವಿವಾಹ ಆಯೋಜನೆ ಮಾಡುವ ವ್ಯಕ್ತಿ, ಸಂಘಟನೆ, ಸಂಘ, ಸಂಸ್ಥೆ, ಖಾಸಗಿ ಟ್ರಸ್ಟ್, ಸೊಸೈಟಿ, ಕಮಿಟಿ, ದೇವಸ್ಥಾನ, ಮಸೀದಿಯ ಕಮಿಟಿಗಳು ಸೇರಿದಂತೆ ಇತರ ಯಾರು ಬೇಕಾದರೂ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿ ಕನಿಷ್ಠ 5 ನವ ಜೋಡಿಗಳಿಗೆ ಸಾಮೂಹಿಕ ಮದುವೆ ಮಾಡಿಸುವ ಆಯೋಜಕರಿಗೆ ಪ್ರತೀ ಜೋಡಿಗೆ 5 ಸಾವಿರ ರೂ. ಖರ್ಚು ವೆಚ್ಚದ ರೂಪದಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಷರತ್ತು: 18 ವರ್ಷದಿಂದ 42 ವರ್ಷದೊಳಗಿನ ವಧು ಮತ್ತು 21 ವರ್ಷದಿಂದ 45 ವರ್ಷದೊಳಗಿನ ವರ ಆಗಿರಬೇಕು. ಮೊದಲನೇ ವಿವಾಹವಾಗುತ್ತಿರುವ ನವ ಜೋಡಿಯಾಗಿರಬೇಕು. ವಾರ್ಷಿಕ ಆದಾಯ 2.50 ಲಕ್ಷದಿಂದ 5 ಲಕ್ಷ ರೂ. ಮೀರತಕ್ಕದ್ದಲ್ಲ. ಜೀವನದಲ್ಲಿ ಒಮ್ಮೆ ಮತ್ತು ಕುಟುಂಬದಲ್ಲಿ ಒಬ್ಬರು ಮಾತ್ರ ಸೌಲಭ್ಯ ಪಡೆಯಬಹುದು. ಜೀವಂತ ಪತಿ, ಪತ್ನಿ ಇರುವವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ವಧು, ವರ ಮತ್ತು ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಆಯೋಜಕರು ಕನಿಷ್ಠ 7 ದಿನ ಮುಂಚಿತವಾಗಿ ಸ್ವಂತ ಜಿಲ್ಲೆಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ವಿವಾಹ ನಡೆದ ಮೂರು ತಿಂಗಳ ಒಳಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವಧು, ವರನ ಜಂಟಿ ಜಿಪಿಎಸ್ ಫೋಟೊಗಳು ನೀಡಬೇಕು. ಫಲಾನುಭವಿಗಳ ಪೈಕಿ ವಿಧವೆ ತಾಯಿಯ/ವಿಕಲಚೇತನ ಕುಟುಂಬಗಳಿಗೆ ಮೊದಲ ಆದ್ಯತೆ ಮೇರೆಗೆ ಸಹಾಯಧನ ಮಂಜೂರು ಪರಿಗಣಿಸುವುದು. ಅರ್ಹ ವಧು ವರನ ಜಂಟಿ ಬ್ಯಾಂಕ್ ಖಾತೆಯ ಹೆಸರಿಗೆ ಮಾತ್ರ ಪ್ರೋತ್ಸಾಹ ಧನದ ಹಣ ಜಮೆ ಮಾಡಲಾಗುತ್ತದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಸಂಗಮೇಶ್ವರ ತಿಳಿಸಿದ್ದಾರೆ.

2025-26ನೇ ಸಾಲಿನ ಜಿಲ್ಲಾವಾರು ಗುರಿ

ಬಾಗಲಕೋಟೆಗೆ 120, ಬೆಂಗಳೂರು ನಗರಕ್ಕೆ 500, ಬೆಂಗಳೂರು ಗ್ರಾಮಾಂತರ 50, ಬೆಳಗಾವಿ 300, ಬಳ್ಳಾರಿ 100, ಬೀದರ್ 180, ಚಾಮರಾಜನಗರ 40, ಚಿಕ್ಕಬಳ್ಳಾಪುರ 60, ಚಿಕ್ಕಮಗಳೂರು 50, ಚಿತ್ರದುರ್ಗ 100, ದಕ್ಷಿಣ ಕನ್ನಡ 250, ದಾವಣಗೆರೆ 150, ಧಾರವಾಡ 200, ಗದಗ 70, ಹಾಸನ 50, ಹಾವೇರಿ 200, ಕಲಬುರಗಿ 300, ಕೊಡಗು 40, ಕೋಲಾರ 120, ಕೊಪ್ಪಳ 100, ಮಂಡ್ಯ 40, ಮೈಸೂರು 150, ರಾಯಚೂರು 150, ರಾಮನಗರ 50, ಶಿವಮೊಗ್ಗ 80, ತುಮಕೂರು 150, ಉಡುಪಿ 50, ಉತ್ತರ ಕನ್ನಡ 100, ವಿಜಯನಗರ 100, ವಿಜಯಪುರ 150, ಯಾದಗಿರಿ 100. ಜಿಲ್ಲಾವಾರು ಫಲಾನುಭವಿಗಳ ಗುರಿ ನಿಗದಿಪಡಿಸಿದೆ.

ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೇ ಪ್ರತೀ ವರ್ಷ ಸಾಮೂಹಿಕ ವಿವಾಹ ಏರ್ಪಡಿಸಿ ಹಲವು ಜೋಡಿಗಳಿಗೆ ಸರಳ ವಿವಾಹ ಮಾಡುತ್ತಾ ಬಂದಿದ್ದೇವೆ. ವಧು ವರನಿಗೆ ಸಿಗುವ ಪ್ರೋತ್ಸಾಹ ತುಂಬಾ ಅಗತ್ಯ. ಮದುವೆಗೆ ಮುನ್ನ ಶೇ.50, ಮದುವೆಯ ನಂತರ ಶೇ.50 ಸಿಕ್ಕರೆ ಉತ್ತಮ.

-ವಹಾಜ್ ಬಾಬಾ, ಸಾಮೂಹಿಕ ವಿವಾಹದ ಆಯೋಜ, ಶೇಖ್ ರೋಜಾ ದರ್ಗಾದ ಮುಖ್ಯಸ್ಥ

ಸರಳ ವಿವಾಹಕ್ಕೆ ಉತ್ತೇಜನ ನೀಡುವ ರಾಜ್ಯ ಸರಕಾರದ ಮಹತ್ವದ ಯೋಜನೆಯ ಲಾಭವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯಬೇಕು. ಸಮಾಜದ ಮುಖಂಡರು, ವ್ಯಕ್ತಿಗಳು ಮುಂದೆ ಬಂದು ಇದರ ಲಾಭವನ್ನು ಸಮುದಾಯಕ್ಕೆ ತಲುಪಿಸಬೇಕು. ಮುಂದಾಳತ್ವ ವಹಿಸಿಕೊಂಡು ಅರ್ಜಿ ಸಲ್ಲಿಸುವ ವ್ಯಕ್ತಿಗಳಿಗೆ ಇಲಾಖೆ ಸ್ಪಂದಿಸುತ್ತದೆ. ಸರಳ ಮತ್ತು ಸಾಮೂಹಿಕ ವಿವಾಹಗಳು ಆರ್ಥಿಕತೆ ತಗ್ಗಿಸುತ್ತವೆ.

-ಸಂಗಮೇಶ್ವರ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಕಲಬುರಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಾಜಿದ್‌ ಅಲಿ

contributor

Similar News