ಮುಳ್ಳಯ್ಯನಗಿರಿ ಬೆಟ್ಟ: ಸಂರಕ್ಷಿತ ಮೀಸಲು ಪ್ರದೇಶವಾಗಿ ಸದ್ಯದಲ್ಲೇ ಘೋಷಣೆ
ಕರ್ನಾಟಕದ ಅತಿ ಎತ್ತರದ ಶಿಖರ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನ ಗಿರಿ ಬೆಟ್ಟ ಸಂರಕ್ಷಿತ ಮೀಸಲು ಅರಣ್ಯ ಎಂದು ಸದ್ಯದಲ್ಲೇ ಘೋಷಣೆಯಾಗಲಿದೆ.
ಮುಳ್ಳಯ್ಯನ ಗಿರಿ ಬೆಟ್ಟವು ಬಾಬಾ ಬುಡನ್ ಗಿರಿ ಮತ್ತು ಚಂದ್ರದ್ರೋಣ ಬೆಟ್ಟಗಳ ಶ್ರೇಣಿಯ ಭಾಗವಾಗಿದೆ. ಸಮುದ್ರ ಮಟ್ಟದಿಂದ 1930 ಮೀಟರ್ ಎತ್ತರದಲ್ಲಿದೆ. ಇದು ಪ್ರವಾಸಿಗರ ಸ್ವರ್ಗ. ಈ ನಿಸರ್ಗ ಸೌಂದರ್ಯದ ಬೆಟ್ಟವನ್ನು ರಕ್ಷಿಸಲು ಸರ್ಕಾರ ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಿ ಅರಣ್ಯ ನಾಶ ಮತ್ತು ರೆಸಾರ್ಟ್ ಹೆಸರಿನಲ್ಲಿ ನಡೆಯುವ ಅಕ್ರಮ ಒತ್ತುವರಿ ತಡೆಯಲು ಕಂದಾಯ ಇಲಾಖೆಯ ಮಾಲೀಕತ್ವದಲ್ಲಿ ಇರುವ ಸುಮಾರು 6500 ಎಕರೆ ಪ್ರದೇಶವನ್ನು ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಲಿದೆ.
ಸಂರಕ್ಷಿತ ಮೀಸಲು ಪ್ರದೇಶದಲ್ಲಿ ಯಾವುದೇ ಖಾಸಗಿ ಒಡೆತನದ ಭೂಮಿ ಇರುವುದಿಲ್ಲ. ಖಾಸಗಿ ಒಡೆತನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಕಂದಾಯ ಭೂಮಿಯಲ್ಲಿ ಯಾವುದೇ ಸಂರಕ್ಷಿತ ಮೀಸಲು ಪ್ರದೇಶ ವಿರುದ್ದವಾದ ಚಟುವಟಿಕೆ ನಡೆಸಲು ಅವಕಾಶ ಇಲ್ಲ.
ಸಂರಕ್ಷಿತ ಮೀಸಲು ಕಾನೂನು ರಾಜ್ಯ ಸರ್ಕಾರದ ಕಾಯ್ದೆಗೆ ಒಳಪಡಲಿದೆ. ಈ ಕಾಯ್ದೆ ರಾಷ್ಟ್ರೀಯ ಉದ್ಯಾನವನದ ಅಥವಾ ಮೀಸಲು ಅರಣ್ಯದಂತಹ ಕಠಿಣ ಕಾಯ್ದೆ, ಕಾನೂನು ಹೊಂದಿರುವುದಿಲ್ಲ.ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಇರುವ ಭೂಮಿ ಮಾತ್ರ ಸಂರಕ್ಷಿತ ಮೀಸಲು ಪ್ರದೇಶದ ವ್ಯಾಪ್ತಿಗೆ ಒಳಪಡಲಿದೆ. ಭಾರತದ ಪಶ್ಚಿಮ ಘಟ್ಟಗಳ ಅಮೂಲ್ಯವಾದ ಈ ಬೆಟ್ಟ,ಅರಣ್ಯ ಮತ್ತು ಪರಿಸರವನ್ನು ಉಳಿಸುವುದೇ ಸರ್ಕಾರದ ಈ ತೀರ್ಮಾನಕ್ಕೆ ಕಾರಣ.
ಇಲ್ಲಿರುವ ಯಾವುದೇ ಧಾರ್ಮಿಕ ಮತ್ತು ಪ್ರಕೃತಿ ಸೌಂದರ್ಯದ ದೃಶ್ಯ ವೈಭವ ವೀಕ್ಷಿಸಲು ಯಾವುದೇ ಅಡೆತಡೆ ಇರುವುದಿಲ್ಲ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರದ ಸಂರಕ್ಷಣೆ ತುರ್ತು ಅಗತ್ಯವಾಗಿದ್ದು, ಸರ್ಕಾರವು ಮುಳ್ಳಯ್ಯನ ಗಿರಿ ಬೆಟ್ಟವನ್ನು ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಣೆ ಮಾಡಲು ಸಿದ್ದತೆ ಮಾಡಿಕೊಂಡಿರುವುದು ಸ್ವಾಗತರ್ಹ.