ಶಾಪಿಂಗ್ ಮಾರ್ಟ್ ಫ್ರಾಂಚೈಸಿ ನೀಡುವ ಆಮಿಷವೊಡ್ಡಿ ಬಹುಕೋಟಿ ರೂ. ವಂಚನೆ
► ಹಲವು ರಾಜ್ಯಗಳಲ್ಲಿ ಪ್ರಕರಣ ದಾಖಲು ► ಇ ಸ್ಟೋರ್ ಇಂಡಿಯಾ, ವೇದಿಕ್ ಆಯುರ್ ಹೆಲ್ತ್ ಕ್ಯೂರ್ ಹೆಸರಲ್ಲಿ 2 ಸಾವಿರ ಕೋಟಿ ರೂ.ವಂಚನೆ ಆರೋಪ
ಕಲಬುರಗಿ : ಆಕ್ಸಿಸ್ ಇ ಕಾರ್ಪ್ ಸಲ್ಯೂಶನ್ ಪ್ರೈವೆಟ್ ಲಿಮಿಟೆಡ್, ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಆ್ಯಂಡ್ ರಿಟೈಲ್ ಪ್ರೈವೆಟ್ ಲಿಮಿಟೆಡ್ ಮತ್ತು ಇ ಸ್ಟೋರ್ ಇಂಡಿಯಾ ಶಾಪಿಂಗ್ ಮಾರ್ಟ್ ಸೇರಿ ಹಲವು ಫ್ರಾಂಚೈಸಿ ನೀಡುವುದಾಗಿ ಸಣ್ಣ ಉದ್ಯಮಿಗಳಿಂದ ಬಹುಕೋಟಿ ರೂ.ಹೂಡಿಕೆ ಪಡೆದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಸೆನ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ದಿಲ್ಲಿಯ ನೋಯಿಡಾದ ಫೈಜಾನ್ ಖಾನ್ ಮತ್ತು ಈತನ ಪತ್ನಿ ನಜ್ಮಾ ಖಾನ್, ವ್ಯವಸ್ಥಾಪಕ ಮುಖೇಶ್ ಕುಮಾರ್ ತ್ಯಾಗಿ, ಉರುಜ್ ಅಲಿ ಖಾನ್, ಶಂಶಾದ್ ಅಹ್ಮದ್, ಕರ್ನಾಟಕದ ವಿಜಯಪುರದ ಸೋಮಣ್ಣ ಹೆರಳಗಿ, ಸುರೇಶ್, ಬೆಂಗಳೂರಿನ ಶಿವಲಿಂಗಮೂರ್ತಿ, ಪ್ರಭು ಎಚ್.ಮಠ, ಮುಂಬೈಯ ಅನಿಲ್ ಜಾಧವ್, ಸಂಜನಾ, ವಿನಾಯಕ್ ಕೃಷ್ಣ ರಾವತ್, ಪದ್ಮಾವತಿ ವಿ ರಾವತ್, ಆನಂದ ತಾವಡೆ, ಜಫೀರ್, ಓಂಕಾರ್ ವಿರುದ್ಧ ದಿಲ್ಲಿ, ಹೈದರಾಬಾದ್, ಕರ್ನಾಟಕ, ಮಹಾರಾಷ್ಟ್ರ ಒಳಗೊಂಡಂತೆ ವಿವಿಧ ರಾಜ್ಯಗಳ ಸೆನ್ ಪೊಲೀಸ್ ಠಾಣೆಗಳಲ್ಲಿ ವಿವಿಧ ಸಕ್ಷನ್‌ಗಳಡಿಲ್ಲಿಪ್ರೈಜ್ ಚೀಟ್ಸ್ ಮತ್ತು ಮನಿ ಸರ್ಕ್ಯೂಲೇಷನ್ ಸ್ಕೀಮ್ ರದ್ದು ಕಾಯ್ದೆ 1978ರಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪ್ರಮುಖ ಆರೋಪಿಗಳು ವಿದೇಶದಲ್ಲಿ ತಲೆ ಮರೆಸಿಕೊಂಡಿರುವುದಾಗಿ ನೊಂದ ಉದ್ಯಮಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ :
2018ರಲ್ಲಿ ದಿಲ್ಲಿಯ ನೋಯಿಡಾದಲ್ಲಿ ಫೈಜಾನ್ ಖಾನ್ ಇತರರು ಸೇರಿ ಆಕ್ಸಿಸ್ ಇ ಕಾರ್ಪ್ ಸಲ್ಯೂಶನ್ ಪ್ರೈವೆಟ್ ಲಿಮಿಟೆಡ್, ವೇದಿಕ್ ಆಯುರ್ ಹೆಲ್ತ್ ಕ್ಯೂರ್ ಮತ್ತು ಇ ಸ್ಟೋರ್ ಇಂಡಿಯಾ ಎಂಬ ಬ್ರಾಂಡ್ ಕಂಪೆನಿಯನ್ನು ಸ್ಥಾಪಿಸಿ, ಇ ಸ್ಟೋರ್ ಇಂಡಿಯಾ ಗ್ರೋಸರಿ (ಗ್ರಹ ಬಳಕೆ) ಶಾಪಿಂಗ್ ಮಾರ್ಟ್ ಆರಂಭಿಸಿದ್ದರು. ಸಣ್ಣ ಉದ್ಯಮಿಗಳಿಂದ ಮಾರ್ಟ್ ಫ್ರಾಂಚೈಸಿಗೆ ತಲಾ 25, 30 ಲಕ್ಷ ರೂ. ಹೂಡಿಕೆ ಪಡೆದು, ಹೂಡಿಕೆದಾರರಿಗೆ ಪ್ರತಿ ತಿಂಗಳಿಗೆ 1 ಲಕ್ಷ ರೂ. ರಿಟರ್ನ್‌ನಂತೆ 36 ತಿಂಗಳವರೆಗೆ ಪಾವತಿಸುವುದು ಮತ್ತು ಪ್ರತಿ ತಿಂಗಳ ವಹಿವಾಟಿನಲ್ಲಿ ಶೇ. 5 ರಷ್ಟು ಲಾಭ ನೀಡುವುದಾಗಿ ಕರಾರುಗಳನ್ನು ಮಾಡಿ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಹೊಸದಿಲ್ಲಿ ಸೇರಿದಂತೆ ಹಲವು ರಾಜ್ಯಗಳ ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲಿ 300ಕ್ಕೂ ಹೆಚ್ಚು ಸ್ಟೋರ್‌ಗಳನ್ನು ತೆರೆಯಿತು.
ಇದರೊಂದಿಗೆ ವೇದಾ ಮಾರ್ಟ್ ಗಾಗಿ 11 ಲಕ್ಷ ರೂ. ಹೂಡಿಕೆಗೆ 50 ಸಾವಿರ ರೂ. ಪ್ರತಿ ತಿಂಗಳಂತೆ 30 ತಿಂಗಳ ರಿಟರ್ನ್, ಹೆಲ್ತ್ ಕ್ಯೂರ್ ಹೆಸರಲ್ಲಿ 5 ಲಕ್ಷ ರೂ. ಹೂಡಿಕೆಗೆ ಪ್ರತಿ ತಿಂಗಳು 30 ಸಾವಿರ ರೂ.ಯಂತೆ 30 ತಿಂಗಳು ರಿಟರ್ನ್. ವೇದಾ ಪಾಯಿಂಟ್‌ನಲ್ಲಿ ಒಂದೂವರೆ ಲಕ್ಷ ರೂ. ಹೂಡಿಕೆಗೆ, 11 ಸಾವಿರ ರೂ. ತಿಂಗಳಂತೆ 30 ತಿಂಗಳ ರೀಟರ್ನ್, ಫ್ಯಾಮಿಲಿ ಹೆಲ್ತ್ ಪ್ಯಾಕೇಜ್ 8,991ರೂ. ಹೂಡಿಕೆಗೆ 30 ತಿಂಗಳಲ್ಲಿ 29,700 ರೂ.ಲಾಭ ನೀಡುವುದು ಸೇರಿದಂತೆ ಚೈನ್ ಲಿಂಕ್ ಗ್ರಾಹಕರ ಕಮಿಷನ್ ಸ್ಕೀಮ್‌ಗಳಂತೆ ಹಲವು ಅಮಿಷಗಳನ್ನು ನೀಡುವ ಸ್ಕೀಮ್‌ಗಳ ಮೂಲಕ 5 ಸಾವಿರಕ್ಕೂ ಹೆಚ್ಚು ಜನರಿಂದ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹೂಡಿಕೆ ಪಡೆದು ವಂಚನೆ ಮಾಡಿದ್ದಾರೆ ಎಂದು ಯಾದಗಿರಿ ಜಿಲ್ಲೆಯ ಮುಜಾಹಿದ್ ಪಟೇಲ್ ತಿಳಿಸಿದ್ದಾರೆ.
ಕರ್ನಾಟದಲ್ಲಿ 20ಕ್ಕೂ ಹೆಚ್ಚು ಪ್ರಕರಣ: ಬೆಂಗಳೂರು, ಚಿಕ್ಕಬಳ್ಳಾಪುರ, ಕೆಂಗೇರಿ, ಕಲಬುರಗಿ, ಯಾದಗಿರಿ ಶಹಾಪುರ, ದೇವದುರ್ಗ, ಬಾಗಲಕೋಟೆ, ಹುಬ್ಬಳ್ಳಿ ಧಾರವಾಡ, ಮೈಸೂರು, ಬಳ್ಳಾರಿ, ಬೆಳಗಾವಿ, ಗದಗ, ಉತ್ತರ ಕನ್ನಡ, ತುಮಕೂರು, ರಾಯಚೂರು, ಸೇರಿದಂತೆ ವಿವಿಧೆಡೆ ಆಕ್ಸಿಸ್ ಇ ಕಾರ್ಪ್ ಸಲ್ಯೂಶನ್ ಪ್ರೈವೆಟ್ ಲಿಮಿಟೆಡ್, ವೇದಿಕ್ ಆಯುರ್ ಕ್ಯೂರ್ ಹೆಲ್ತ್ ಮತ್ತು ಆಂಡ್ ರಿಟೈಲ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ, ಇ ಸ್ಟೋರ್ ಇಂಡಿಯಾ ಬ್ರಾಂಡ್ ನ ಮುಖ್ಯಸ್ಥ ಫೈಜಾನ್ ಅಹ್ಮದ್ ಖಾನ್ ಮತ್ತು ಇತರರ ವಿರುದ್ಧ 2023 ರಿಂದ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿವೆ. ಈವರೆಗೆ ಸರಕಾರ ನ್ಯಾಯಯುತವಾಗಿ ತನಿಖೆ ನಡೆಸಿಲ್ಲ. ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಹಣ ಕಳೆದುಕೊಂಡ ಸಣ್ಣ ಉದ್ಯಮಿಗಳು ಬೇಸರ ಹೊರಹಾಕಿದ್ದಾರೆ.
ಓರ್ವ ಆತ್ಮಹತ್ಯೆ :
ಬಾಗಲಕೋಟೆ ಲವಳೇಶ್ವರನ ಮೋತಿಲಾಲ್ ಎಂಬವರು ಸಾಲ ಮಾಡಿ ಸ್ವತಃ ಮತ್ತು ಪರಿಚಯಸ್ಥರಿಂದ 5 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿಸಿದ್ದರು. ತನಗೆ ಆಗಿರುವ ವಂಚನೆಗೆ ಮನನೊಂದು ಎರಡು ವರ್ಷಗಳ ಹಿಂದೆ ಮೋತಿಲಾಲ್ ರಾಥೋಡ್ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೋತಿಲಾಲ್ ಪತ್ನಿ ಬಂಗಾರಿ ರಾಥೋಡ್ ತಿಳಿಸಿದ್ದಾರೆ.
ಮತ್ತೆ ಮೋಸಕ್ಕೆ ಮುಂದಾದ ವಂಚಕರು :
2022ರ ನಂತರ ವಂಚಕರಾದ ಫೈಜಾನ್ ಖಾನ್ ಯೂಟ್ಯೂಬ್ ಮೂಲಕ ಪ್ರತ್ಯಕ್ಷವಾಗಿ, ಇ ಸ್ಟೋರ್ ಇಂಡಿಯಾ ಮಾರ್ಟ್ ನಷ್ಟ ಅನುಭವಿಸಿದೆ. ನಂಬಿದ ಗ್ರಾಹಕರ ನಷ್ಟವನ್ನು ಸರಿದೂಗಿಸಲು ಅಕ್ರೆಡಾಯಿ ಸೂಪರ್ ಮಾರ್ಟ್ ತಂದಿದ್ದೇವೆ ಎಂದಿದ್ದಾರೆ. ದಿಲ್ಲಿಯಲ್ಲಿ ನಾಲ್ಕು ಮಾರ್ಟ್ ಆರಂಭಿಸಿದ್ದೇವೆ ಎಂದಿದ್ದ. ಎರಡು ತಿಂಗಳಲ್ಲೇ ಮಾರ್ಟ್ ಬಂದ್ ಮಾಡಿದ್ದರು. ನಂತರ ಸ್ಮಾರ್ಟ್ ಬಿಜ್ಜ್ 24, ಲಿಮ್ಕಾ ಕ್ರಿಪ್ಟೋ ಕರೆನ್ಸಿ ಕಾಯಿನ್ಸ್, ಜಿಡಿಎಸ್ ಕಾಯಿನ್ಸ್ ಕ್ರಿಪ್ಟೋ ಕಾಯಿನ್ಸ್ ಖರೀದಿಸಿ ಆಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳುವ ಅವಕಾಶ ಇದಾಗಿದೆ ಎಂದು ಆಮಿಷವೊಡ್ಡೊಲಾಯಿತು. ವಂಚಕರು ಒಂದಲ್ಲ ಒಂದು ರೀತಿಯಲ್ಲಿ ದೇಶದಲ್ಲಿ ತಮ್ಮ ವಂಚನೆ ಜಾಲವನ್ನು ಮುಂದುವರಿಸಿದ್ದಾರೆ. ಇವರನ್ನು ಮಟ್ಟಹಾಕದೇ ಇದ್ದಲ್ಲಿ ತಮ್ಮ ವಂಚನೆ ಜಾಲದ ಮೂಲಕ ಲಕ್ಷಾಂತರ ಜನರಿಗೆ ವಂಚಿಸುವ ಸಾಧ್ಯತೆ ಇದೆ. ತಕ್ಷಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇವರನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ವಂಚನೆಗೊಳಾಗಾದ ಕರ್ನಾಟಕ ಮೂಲದ ಸಣ್ಣ ಉದ್ಯಮಿಗಳು ಆಗ್ರಹಿಸಿದ್ದಾರೆ.
ಇ ಸ್ಟೋರ್ ಇಂಡಿಯಾ ಬ್ರಾಂಡ್‌ನ ಮತ್ತು ಆಯುರ್ ಕ್ಯೂರ್ ಹೆಲ್ತ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ದೇಶಾದ್ಯಂತ ಶಾಪಿಂಗ್ ಮಾರ್ಟ್ ಫ್ರಾಂಚೈಸಿ ನೀಡುವುದಾಗಿ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ವಂಚನೆ ಮಾಡಿದೆ. ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್, ಐಜಿ, ಡಿಐಜಿ ಅವರ ಗಮನಕ್ಕೆ ಈ ವಂಚನೆಯ ಮಾಹಿತಿ ನೀಡಲಾಗಿದ್ದು, ಒಂದೂವರೆ ವರ್ಷದಿಂದ ಸಿಐಡಿ ತನಿಖೆ ನಡೆಸುತ್ತಿದೆ. ಆದರೆ ಸಿಐಡಿಯ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿಯೂ ಬಹುಕೋಟಿ ರೂ.ವಂಚನೆಯ ಕುರಿತು ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ತೀವ್ರಗತಿ ತನಿಖೆಗಾಗಿ ಸಿಬಿಐಗೆ ವಹಿಸಿ ವಂಚನೆಗೆ ಒಳಗಾದ ಸಾವಿರಾರು ಜನರಿಗೆ ನ್ಯಾಯ ಒದಗಿಸಬೇಕು.
- ಪ್ರದೀಪ್, ಚಿಕ್ಕಬಳ್ಳಾಪುರ, ವಂಚನೆಗೆ ಒಳಗಾದ ಉದ್ಯಮಿ.