×
Ad

ಎನ್‌ಡಿಎ ಪಾಲುದಾರನಾದ ಚು. ಆಯೋಗ

ಬಿಹಾರ: ಯಾರ ಗೆಲುವು?

Update: 2025-11-17 12:56 IST

ಚಿತ್ರಣ 1: ಬಿಜೆಪಿ, ಜೆಡಿಯು, ಎಲ್‌ಜೆಪಿ, ಎಚ್‌ಎಎಂ ಮೈತ್ರಿಯ ಎನ್‌ಡಿಎ ‘ಮುಖ್ಯಮಂತ್ರಿ ಮಹಿಳಾ ಯೋಜನಾ’ ಹೆಸರಿನಲ್ಲಿ ಕುಟುಂಬದ ಒಬ್ಬ ಮಹಿಳೆಗೆ ರೂ.10,000 ನೇರ ನಗದು ಕೊಡಲಾಗುತ್ತದೆ, ಅದನ್ನು ಬಳಸಿಕೊಂಡು ವ್ಯಾಪಾರ ಪ್ರಾರಂಬಿಸಬಹುದು ಎನ್ನುವ ಗ್ಯಾರಂಟಿ ಯೋಜನೆ ಪ್ರಕಟಿಸಿತು ಮತ್ತು 75 ಲಕ್ಷ ಮಹಿಳೆಯರ ಖಾತೆಗೆ ಆ ಮೊತ್ತವನ್ನು ವರ್ಗಾಯಿಸಿತು.(ಇದಾಗಿ ಎರಡು ದಿನಗಳ ನಂತರ ಚುನಾವಣಾ ಆಯೋಗವು ಬಿಹಾರ ರಾಜ್ಯದ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿತು. ಮೇಲಿನ ಆಶ್ವಾಸನೆಯು ಚುನಾವಣಾ ನೀತಿಸಂಹಿತೆ ಅಡಿಯಲ್ಲಿ ಬರದಂತೆ ತಂತ್ರ ರೂಪಿಸಲಾಯಿತು. ಆರಂಭದಿಂದಲೂ ಆಯೋಗವು ಎನ್‌ಡಿಎ ಮೈತ್ರಿಯ ಭಾಗವಾಗಿಯೇ ಕಾರ್ಯನಿರ್ವಹಿಸಿತು)

ಚಿತ್ರಣ 2: ಬಿಹಾರದ ಶೇ.36ರಷ್ಟಿರುವ ಇಬಿಸಿ(ಅತಿ ಹಿಂದುಳಿದ ಜಾತಿಗಳು) ಸಮುದಾಯಗಳಾದ ಕ್ಷೌರಿಕರು, ಬೆಸ್ತರು(ಮಲ್ಲಾಹ್, ಸಹಾನಿ, ನಿಶಾದ್, ಕೇವತ್), ಲೋಹರ್(ಕಮ್ಮಾರರು), ತೇಲಿ(ಗಾಣಿಗರು), ನೋನಿಯಾ, ಕಹಾರ್, ಪ್ರಜಾಪತಿ, ಕಾನು ಮುಂತಾದವರು ಕಳೆದ ಇಪ್ಪತ್ತು ವರ್ಷಗಳಿಂದ ನಿತೀಶ್ ಕುಮಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಎಪ್ಪತ್ತರ ದಶಕದಲ್ಲಿ ಸಮಾಜವಾದಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಪ್ರಾರಂಭಿಸಿದ ಇಬಿಸಿ ಸೋಷಿಯಲ್ ಇಂಜಿನಿಯರಿಂಗ್‌ನ ಫಾರ್ಮುಲಾವನ್ನು ನಿತೀಶ್ ಅವರು ತಮ್ಮದೇ ರೀತಿಯಲ್ಲಿ ಬಳಸಿಕೊಂಡರು. ಆದರೆ ಲಾಲು ಪ್ರಸಾದ್ ಯಾದವ್ ನಂತರ ತೇಜಸ್ವಿ ಆವರು ಶೇ.15ರಷ್ಟಿರುವ ಯಾದವ ಮತ್ತು ಮುಸ್ಲಿಮ್ ಸಮುದಾಯಗಳ ‘ವೈ-ಎಂ’ ರಾಜಕಾರಣಕ್ಕೆ ಜೋತು ಬಿದ್ದರು, ಇಬಿಸಿ ಸೋಷಿಯಲ್ ಇಂಜಿನಿಯರಿಂಗನ್ನ್ನು ನಿರ್ಲಕ್ಷಿಸಿದರು. ಇದು ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ. ನಿತೀಶ್ ಕುಮಾರ್ ಅವರ ಜೆಡಿಯು ಗೆಲುವಿಗೆ ಮುಖ್ಯ ಪಾತ್ರ ವಹಿಸಿದೆ.

ಚಿತ್ರಣ 3: ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವವೇ ಇರಲಿಲ್ಲ. ಪ್ರಭಾವಶಾಲಿ ಸ್ಥಳೀಯ ನಾಯಕರ, ಕಾರ್ಯಕರ್ತರ, ಸಂಘಟನೆಯ ಕೊರತೆಯಿತ್ತು. ಆದರೂ ಸಹ ರಾಹುಲ್ ಗಾಂಧಿಯವರ ವರ್ಚಸ್ಸು ಮತ್ತು ಎಸ್‌ಐಆರ್ ವಿರುದ್ಧದ ಅಭೂತಪೂರ್ವ ಅಭಿಯಾನ ಮಾಡಿ 61 ಕ್ಷೇತ್ರಗಳಲ್ಲಿ ಸ್ಪರ್ಧಿಸಿತು. ದಯನೀಯವಾಗಿ ಸೋತಿತು ಮತ್ತು ಆರ್‌ಜೆಡಿಗೂ ನಷ್ಟವನ್ನುಂಟು ಮಾಡಿತು. ರಾಗಾ ಅವರ ‘ವೋಟ್ ಚೋರಿ’ ಕಥನ ಚುನಾವಣಾ ಪೂರ್ವದಲ್ಲಿ ಯಶಸ್ಸು ಕಂಡರೂ ಸಹ ಅದು ಚುನಾವಣಾ ವಿಷಯವಾಗಲಿಲ್ಲ. ಮತದಾರರ ಮೇಲೆ ನಿರ್ಣಾಯಕ ಪರಿಣಾಮ ಬೀರಲಿಲ್ಲ. ಕಾಂಗ್ರೆಸ್ ಈ ‘ಮತಗಳ್ಳ’ ನೆರೇಶನ್‌ನ್ನು ಮಾತ್ರ ನೆಚ್ಚಿಕೊಂಡು ಮಿಕ್ಕ ಪ್ರಮುಖ ವಿಷಯಗಳಾದ ನಿರುದ್ಯೋಗ, ಸಾಮಾಜಿಕ ನ್ಯಾಯ, ಬಡತನ ಮುಂತಾದವುಗಳನ್ನು ನಿರ್ಲಕ್ಷಿಸಿತು. ಇದು ಸಹ ಅವರ ಹೀನಾಯ ಸೋಲಿಗೆ ಕಾರಣವಾಯಿತು.

ಚಿತ್ರಣ 4: ಚುನಾವಣಾ ಆಯೋಗವು ಎನ್‌ಡಿಎ ಮೈತ್ರಿಯ ಪಾಲುದಾರರಂತೆ ಕಾರ್ಯ ನಿರ್ವಹಿಸಿತು. ಅದರ ಎಸ್‌ಐಆರ್ (ಮತದಾರರ ವಿಶೇಷ ತೀವ್ರ ಪರಿಷ್ಕರಣೆ) ವಿವಾದದ ಸ್ವರೂಪ ಪಡೆದುಕೊಂಡಿತು. ಆರಂಭದಲ್ಲಿ 61 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಯಿತು. ಸುಪ್ರೀಂಕೋರ್ಟ್ ವಿಚಾರಣೆಯ ನಂತರ 21 ಲಕ್ಷ ಮತದಾರರನ್ನು ಸೇರಿಸಲಾಯಿತು, ನಂತರ 3.66 ಲಕ್ಷ ಮತದಾರರನ್ನು ತೆಗೆದು ಹಾಕಲಾಯಿತು. ಇವರೆಲ್ಲಾ ಯಾರು, ಏನು ಎನ್ನುವ ಪಾರದರ್ಶಕತೆ ಇಲ್ಲದಂತಾಯಿತು. ಪಟ್ಟಿಯಿಂದ ಕೈ ಬಿಟ್ಟವರಲ್ಲಿ ಬಹುತೇಕರು ಆರ್‌ಜೆಡಿ ಮತ್ತು ಇಂಡಿಯಾ ಒಕ್ಕೂಟದ ಬೆಂಬಲಿಗರಾಗಿದ್ದರು. ಆಯೋಗದ ಈ ವಿವಾದಾತ್ಮಕ ನಡೆಯು ಎನ್‌ಡಿಎ ಮೈತ್ರಿಕೂಟದ ಗೆಲುವಿಗೆ ಮುಖ್ಯ ಕಾರಣವಾಗಿದೆ. ಉದಾಹರಣೆಗೆ 11 ಕ್ಷೇತ್ರಗಳಲ್ಲಿ ಎಸ್‌ಐಆರ್ ಮೂಲಕ ತೆಗೆದು ಹಾಕಲಾದ ಮತದಾರರ ಸಂಖ್ಯೆಯು ಅಭ್ಯರ್ಥಿಯ ಗೆಲುವಿನ ಅಂತರಕ್ಕಿಂತ ಹೆಚ್ಚಾಗಿದೆ. ಇದರ ವಿವರಗಳು ಗೊತ್ತಾಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ. ಶ್ರೀಪಾದ ಭಟ್

contributor

Similar News