ಕೈಗಾರಿಕೆಗಳ ಸ್ಥಾಪನೆಯ ನಿರೀಕ್ಷೆಯಲ್ಲಿ ಗುಡಿಬಂಡೆ ತಾಲೂಕಿನ ಜನತೆ
ಗುಡಿಬಂಡೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಭಿವೃದ್ದಿ ಕಾಮಗಾರಿ ಸಹಿತ ಕೈಗಾರಿಕೆಗಳನ್ನು ಸ್ಥಾಪಿಸಲು ಘೋಷಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ ಗುಡಿಬಂಡೆ ತಾಲೂಕಿನ ಜನ.
ಜೂ.19ರಂದು ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ಈಗಾಗಲೇ ಸಿದ್ಧತೆಗಳು ನಡೆದಿವೆ. ನಂಜುಂಡಪ್ಪವರದಿಯ ಪ್ರಕಾರ ಗುಡಿಬಂಡೆ ತಾಲೂಕು ಅತಿ ಹಿಂದುಳಿದ ತಾಲೂಕು ಎಂದು ಘೋಷಿಸಲಾಗಿದೆ.
ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಯ ಅಗತ್ಯವಿದೆ. ಕೆಎಸ್ಸಾರ್ಟಿಸಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಿದ್ದರೂ ಇನ್ನೂ ಘಟಕ ಸ್ಥಾಪನೆ ಆಗಿಲ್ಲ. ಅಲ್ಲದೇ ತಾಲೂಕಿನ ಪ್ರವಾಸಿ ತಾಣಗಳ ಅಭಿವೃದ್ಧಿಯೂ ಆಗಿಲ್ಲ. ಈ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುದಾನವನ್ನು ಬಿಡುಗಡೆ ಮಾಡುತ್ತಾರೋ ಇಲ್ಲವೋ ನೋಡಬೇಕಾಗಿದೆ.
ಜಿಲ್ಲೆಯ ಜನರ ಆದಾಯ ವೃದ್ಧಿಸಲು ಸಣ್ಣ, ಅತಿ ಸಣ್ಣ, ಗುಡಿ ಕೈಗಾರಿಕೆಗಳು, ಕೈಗಾರಿಕೆಗಳು ಅಗತ್ಯ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಘೋಷಿಸಿದರೇ ಬಡವರ ಅಭಿವೃದ್ದಿಗೆ ಸಹಕಾರಿಯಾಗುವಂತಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ತಾಲೂಕಿನ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಶಾಸಕ ಎಸ್‌ಎನ್ ಸುಬ್ಬಾರೆಡ್ಡಿ 150ರಿಂದ 200 ಕೋಟಿ ರೂ.ಗಳ ಬೇಡಿಕೆಯ ಮನವಿಯನ್ನು ಸರಕಾರಕ್ಕೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರಕಾರ ಇದನ್ನು ಘೋಷಿಸುತ್ತದೆ ಎಂಬ ಭರವಸೆ ಇದೆ.
-ಎಚ್.ಪಿ. ಲಕ್ಷ್ಮೀನಾರಾಯಣ, ಕೆಡಿಪಿ ಸದಸ್ಯ
ಗುಡಿಬಂಡೆ ತಾಲೂಕಿನಲ್ಲಿ ಕೈಗಾರಿಕೆಗ ಸ್ಥಾಪನೆ ಆಗಬೇಕು. ಈ ಮೂಲಕ ತಾಲೂಕಿನ ಜನ ಉದ್ಯೋಗಕ್ಕಾಗಿ ಬೇರೆ ಜಿಲ್ಲೆಗೆ ಹೋಗುವುದನ್ನು ತಡೆಯಬೇಕು. ಇಡೀ ತಾಲೂಕಿನ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ. ಘೋಷಿಸಬೇಕು.
-ಹಂಪಸಂದ್ರ ವೆಂಕಟರಾಜು, ಸಿಪಿಐಎಂ ತಾಲೂಕು ಕಾರ್ಯದರ್ಶಿ