ನೀತಿ ಆಯೋಗದ ಮಾನವ ಬಂಡವಾಳ ಕ್ರಾಂತಿ
Photo credit: PTI
ಭಾರತದಂತಹ ವಿಶಾಲ ಮತ್ತು ವೈವಿಧ್ಯಮಯ ದೇಶದಲ್ಲಿ, ಪ್ರಗತಿಯ ನಿಜವಾದ ಅಳತೆಯು ಜಿಡಿಪಿ ಸಂಖ್ಯೆಗಳು ಅಥವಾ ಮೂಲಸೌಕರ್ಯ ಸಾಧನೆಗಳಲ್ಲಿ ಇರುವುದಿಲ್ಲ, ಬದಲಾಗಿ ಒಂದು ರಾಷ್ಟ್ರವು ತನ್ನ ಜನರನ್ನು ಎಷ್ಟು ಚೆನ್ನಾಗಿ ಸಲಹುತ್ತದೆ ಎಂಬುದರಲ್ಲಿರುತ್ತದೆ. ಮಾನವ ಬಂಡವಾಳ - ಶಿಕ್ಷಣ, ಕೌಶಲ್ಯ, ಆರೋಗ್ಯ ಮತ್ತು ಉತ್ಪಾದಕತೆ - ಕೇವಲ ಆರ್ಥಿಕ ಆಸ್ತಿಯಲ್ಲ, ನೈತಿಕವಾಗಿಯೂ ಮಹತ್ವದ್ದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಭಾರತದ ಪ್ರಮುಖ ನೀತಿ ಚಿಂತಕರ ಚಾವಡಿಯಾದ ನೀತಿ ಆಯೋಗದ ನೇತೃತ್ವದಲ್ಲಿ ಶಾಂತ ಆದರೆ ಅಸಾಧಾರಣ ಕ್ರಾಂತಿಯೊಂದು ರೂಪುಗೊಂಡಿದೆ, ದೇಶವು ತನ್ನ ಅತ್ಯಮೂಲ್ಯ ಸಂಪನ್ಮೂಲವಾದ ತನ್ನ ನಾಗರಿಕರಲ್ಲಿ ಹೇಗೆ ಹೂಡಿಕೆ ಮಾಡುತ್ತದೆ ಎಂಬುದನ್ನು ಮರುರೂಪಿಸಿದೆ.
ಜನಸಂಖ್ಯೆಯ ಶೇ.65 ಕ್ಕಿಂತ ಹೆಚ್ಚು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ದೇಶದಲ್ಲಿ, ಜನಸಂಖ್ಯಾ ಲಾಭಾಂಶವು ತಲೆಮಾರಿಗೊಮ್ಮೆ ಮಾತ್ರ ದೊರೆಯುವ ಅವಕಾಶವಾಗಿದೆ. ಆದರೆ ಈ ಯುವ ಜನಸಂಖ್ಯೆಯ ಬೃಹತ್ ಪ್ರಮಾಣವು ಅಗಾಧವಾದ ಜವಾಬ್ದಾರಿಯನ್ನೂ ನೀಡುತ್ತದೆ. ಯುವ ಶಕ್ತಿಯನ್ನು ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಒಂದು ಶಕ್ತಿಯಾಗಿ ಪರಿವರ್ತಿಸುವಲ್ಲಿ ಸವಾಲುಗಳಿವೆ. ಇಂತಹ ಸಂದರ್ಭದಲ್ಲಿ ಇಂದಿನ ಪ್ರಗತಿಗೆ ಮಾತ್ರವಲ್ಲದೆ ನಾಳಿನ ಸಮೃದ್ಧಿಗಾಗಿ ಒಂದು ಮುನ್ನೋಟವನ್ನು ರೂಪಿಸುವ ಮೂಲಕ ನೀತಿ ಆಯೋಗವು ದೂರದೃಷ್ಟಿಯ ವೇಗವರ್ಧಕವಾಗಿ ಹೊರಹೊಮ್ಮಿದೆ.
ಕಳೆದ ದಶಕದಲ್ಲಿ, ನೀತಿ ಆಯೋಗವು ಚಿಂತಕರ ಚಾವಡಿಯಿಂದ ಸುಧಾರಣಾವಾದಿ ಎಂಜಿನ್ ಮತ್ತು ಅನುಷ್ಠಾನ ಪಾಲುದಾರನಾಗಿ ವಿಕಸನಗೊಂಡಿದೆ, ದತ್ತಾಂಶ, ಸಹಯೋಗ ಮತ್ತು ಮಾನವ ಕೇಂದ್ರಿತ ವಿನ್ಯಾಸದಿಂದ ಬೆಂಬಲಿತವಾದ ದಿಟ್ಟ ವಿಚಾರಗಳಿಗೆ ಹೆಸರುವಾಸಿಯಾಗಿದೆ. ಇದು ನೀತಿ ನಿರೂಪಣೆಯನ್ನು ಟಾಪ್ ಡೌನ್ (ಮೇಲಿನಿಂದ ಕೆಳಕ್ಕೆ) ಪ್ರಕ್ರಿಯೆಯಿಂದ ರಾಜ್ಯಗಳು, ಖಾಸಗಿ ವಲಯ, ಜಾಗತಿಕ ಸಂಸ್ಥೆಗಳು ಮತ್ತು ನಾಗರಿಕ ಸಮಾಜದೊಂದಿಗೆ ಸಹ-ಸೃಷ್ಟಿಯ ಡೈನಾಮಿಕ್ ಪ್ರಕ್ರಿಯೆಯಾಗಿ ಪರಿವರ್ತಿಸಿದೆ. ಇದರ ಶಕ್ತಿಯು ಯೋಜನೆಯನ್ನು ರೂಪಿಸುವುದರಲ್ಲಿ ಮಾತ್ರವಲ್ಲ, ಆಲಿಸುವುದು ಮತ್ತು ಆ ಒಳನೋಟಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿಯೂ ಇದೆ.
ಮಾನವ ಬಂಡವಾಳದ ಮೂಲಾಧಾರವಾದ ಶಿಕ್ಷಣವನ್ನು ನೀತಿ ಆಯೋಗದ ಮಾರ್ಗದರ್ಶನದಲ್ಲಿ ಸಂಪೂರ್ಣವಾಗಿ ಮರುರೂಪಿಸಲಾಗಿದೆ. ಪ್ರವೇಶ ಮಾತ್ರ ಸಾಕಾಗುವುದಿಲ್ಲ ಎಂದು ಗುರುತಿಸಿ, ನೀತಿ ಆಯೋಗವು ಗುಣಮಟ್ಟ ಮತ್ತು ಸಮಾನತೆಗೆ ಒತ್ತು ನೀಡಿತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 - ಮೌಖಿಕ ಕಲಿಕೆಯಿಂದ ವಿಮರ್ಶಾತ್ಮಕ ಚಿಂತನೆ, ನಮ್ಯತೆ ಮತ್ತು ವೃತ್ತಿ ಸಂಯೋಜನೆಗೆ ಪರಿವರ್ತನೆಯ ಹೊಸ ಯುಗಕ್ಕೆ ನಾಂದಿ ಹಾಡಿತು. ಇದು ಆರಂಭಿಕ ಬಾಲ್ಯದ ಶಿಕ್ಷಣ, ಮಾತೃಭಾಷೆಯಲ್ಲಿ ಕಲಿಕೆ ಮತ್ತು ವಿಷಯಗಳ ನಡುವಿನ ಸರಾಗ ಪರಿವರ್ತನೆಗಳನ್ನು ಒತ್ತಿಹೇಳಿತು. ಅಟಲ್ ಇನ್ನೋವೇಶನ್ ಮಿಷನ್ ನಂತಹ ಉಪಕ್ರಮಗಳ ಮೂಲಕ, ಇದು ದೇಶಾದ್ಯಂತ 10,000 ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ ಗಳಲ್ಲಿ ನಾವೀನ್ಯತೆಯನ್ನು ಪೋಷಿಸುವ ಮೂಲಕ ಹೊಣೆಗಾರಿಕೆ ಮತ್ತು ಕಲ್ಪನೆ ಎರಡನ್ನೂ ಖಚಿತಪಡಿಸಿತು.
21 ನೇ ಶತಮಾನಕ್ಕೆ ಭಾರತದ ಯುವಜನರನ್ನು ಕೌಶಲ್ಯಗೊಳಿಸುವುದು ಅದರ ಧ್ಯೇಯದ ಮತ್ತೊಂದು ಆಧಾರಸ್ತಂಭವಾಗಿದೆ. ಕೌಶಲ್ಯ ಭಾರತ ಮಿಷನ್ ಅನ್ನು ಬೆಂಬಲಿಸುವುದರಿಂದ ಹಿಡಿದು, ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಮೂಲಕ ಹಿಂದುಳಿದ ಜಿಲ್ಲೆಗಳ ಹೃದಯಭಾಗದಲ್ಲಿ ವೃತ್ತಿಪರ ಕಾರ್ಯಕ್ರಮಗಳಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವವರೆಗೆ, ನೀತಿ ಆಯೋಗವು ತರಗತಿ ಮತ್ತು ವೃತ್ತಿಜೀವನದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ. ಕೌಶಲ್ಯ ಭಾರತ ಮಿಷನ್ ಅಡಿಯಲ್ಲಿ, 1.5 ಕೋಟಿಗೂ ಹೆಚ್ಚು ಯುವಜನರಿಗೆ ತಂತ್ರಜ್ಞಾನ, ಕೈಗಾರಿಕಾ ಸಂಪರ್ಕಗಳು ಮತ್ತು ಬೇಡಿಕೆ-ಆಧಾರಿತ ಕೋರ್ಸ್ ಗಳನ್ನು ಸಂಯೋಜಿಸುವ ಉಪಕ್ರಮಗಳ ಮೂಲಕ ತರಬೇತಿ ನೀಡಲಾಗಿದೆ. ಇದು ಕೇವಲ ತರಬೇತಿಗಾಗಿ ತರಬೇತಿಯನ್ನು ನೀಡಲಿಲ್ಲ - ಇದು ಪ್ರಾದೇಶಿಕ ಅಗತ್ಯಗಳನ್ನು ನಿರ್ಣಯಿಸಿತು ಮತ್ತು ಭಾರತದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಯುವಜನರಿಗೆ ನಿಜವಾದ ಆರ್ಥಿಕ ಬಾಗಿಲುಗಳನ್ನು ತೆರೆಯುವ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿತು.
ಸಮಾನಾಂತರವಾಗಿ, ಇದು ಕ್ರಿಯಾತ್ಮಕವಾದ, ಎಲ್ಲರನ್ನೂ ಒಳಗೊಂಡ ಕಾರ್ಮಿಕ ಮಾರುಕಟ್ಟೆಯನ್ನು ಬೆಂಬಲಿಸಿತು. ಇದು 44 ಕೇಂದ್ರ ಕಾರ್ಮಿಕ ಕಾನೂನುಗಳನ್ನು ನಾಲ್ಕು ಸರಳೀಕೃತ ಸಂಹಿತೆಗಳಾಗಿ - ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು ಮತ್ತು ಔದ್ಯೋಗಿಕ ಸುರಕ್ಷತೆ - ತರ್ಕಬದ್ಧಗೊಳಿಸುವುದನ್ನು ಬೆಂಬಲಿಸಿತು. ಈ ಸುಧಾರಣೆಗಳು ಉದ್ಯೋಗದಾತರ ನಮ್ಯತೆಯನ್ನು ಕಾರ್ಮಿಕರ ರಕ್ಷಣೆಯೊಂದಿಗೆ ಸಮತೋಲನಗೊಳಿಸಿದವು, ವಿಶೇಷವಾಗಿ ಭಾರತದ ಬಹುಪಾಲು ಉದ್ಯೋಗಿಗಳನ್ನು ಹೊಂದಿರುವ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಪ್ರಯೋಜನವನ್ನು ನೀಡಿತು. ಅನುಸರಣೆಯನ್ನು ಸರಳೀಕರಿಸುವ ಮೂಲಕ ಮತ್ತು ಔಪಚಾರಿಕೀಕರಣವನ್ನು ಪ್ರೋತ್ಸಾಹಿಸುವ ಮೂಲಕ, ಕೆಲಸದ ಸ್ಥಳವು ಹೆಚ್ಚು ಉತ್ಪಾದಕವಾಗುವುದಲ್ಲದೆ, ಹೆಚ್ಚು ಮಾನವೀಯವಾಯಿತು.
ಸಾಮಾನ್ಯವಾಗಿ ವೆಚ್ಚವೆಂದು ಪರಿಗಣಿಸಲಾಗುವ ಆರೋಗ್ಯ ರಕ್ಷಣೆಯನ್ನು ಹೂಡಿಕೆ ಎಂದು ಮರು ವ್ಯಾಖ್ಯಾನಿಸಲಾಯಿತು. ನೀತಿ ಆಯೋಗವು ಪ್ರತಿಕ್ರಿಯಾತ್ಮಕ ಚಿಕಿತ್ಸೆಯಿಂದ ಸಕ್ರಿಯ ಯೋಗಕ್ಷೇಮಕ್ಕೆ ಬದಲಾವಣೆಯನ್ನು ತರಲು ಸಹಾಯ ಮಾಡಿತು. ನೀತಿ ಆಯೋಗವು ಬೆಂಬಲಿಸಿದ ಮತ್ತು ಮೇಲ್ವಿಚಾರಣೆ ಮಾಡಿದ ಆಯುಷ್ಮಾನ್ ಭಾರತ್ ಯೋಜನೆಯು 50 ಕೋಟಿಗೂ ಹೆಚ್ಚು ಭಾರತೀಯರಿಗೆ ಆರೋಗ್ಯ ವಿಮೆಯನ್ನು ಒದಗಿಸಿತು, ಹಾಗೆಯೇ 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಪ್ರಾಥಮಿಕ ಆರೈಕೆಯನ್ನು ತಳಮಟ್ಟದವರೆಗೆ ತಲುಪಿಸಿದವು. ಪೌಷ್ಠಿಕಾಂಶ, ತಾಯಂದಿರು ಮತ್ತು ಮಕ್ಕಳ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳ ಮೇಲೆ ಕೇಂದ್ರೀಕರಿಸಿದ ಕಾರ್ಯಕ್ರಮಗಳು ರೋಗಿಗಳನ್ನು ಗುಣಪಡಿಸುವುದು ಮಾತ್ರವಲ್ಲದೆ ಜನರನ್ನು ಆರೋಗ್ಯವಾಗಿಡುವ ಗುರಿಯನ್ನು ಹೊಂದಿವೆ. ಕೋವಿಡ್ -19 ಸಾಂಕ್ರಾಮಿಕ ರೋಗವು ಭಾರತದ ಆರೋಗ್ಯ ವ್ಯವಸ್ಥೆಯನ್ನು ಅಭೂತಪೂರ್ವ ಪರೀಕ್ಷೆಗೆ ಒಳಪಡಿಸಿತು. ಈ ಬಿಕ್ಕಟ್ಟಿನಲ್ಲಿ, ನೀತಿ ಆಯೋಗವು ಆರೋಗ್ಯ ಸಚಿವಾಲಯ ಮತ್ತು ಐಸಿಎಂಅರ್ ನೊಂದಿಗೆ ಸೋಂಕಿನ ಮಾದರಿಗಳನ್ನು ರೂಪಿಸಲು, ವೈದ್ಯಕೀಯ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಟೆಲಿಮೆಡಿಸಿನ್ ಗಾಗಿ ಇ-ಸಂಜೀವಿನಿಯಂತಹ ವೇದಿಕೆಗಳನ್ನು ಪ್ರಾರಂಭಿಸಲು ದೃಢನಿಶ್ಚಯದಿಂದ ಕೆಲಸ ಮಾಡಿತು. ಅದರ ಸಾಂಕ್ರಾಮಿಕ ನಂತರದ ದೃಷ್ಟಿಕೋನವು ಚೇತರಿಕೆಯನ್ನು ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ ನಿರ್ವಹಣಾ ಸಿಬ್ಬಂದಿ ಮತ್ತು ಆಧುನಿಕ ಡಿಜಿಟಲ್ ಆರೋಗ್ಯ ಮೂಲಸೌಕರ್ಯಗಳಿಗೆ ಸಿದ್ಧತೆಯನ್ನು ಒತ್ತಿಹೇಳಿತು.
ಈ ವಲಯಗಳನ್ನು ಮೀರಿ, ನೀತಿ ಆಯೋಗವು ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ದಾರಿದೀಪವಾಗಿದೆ. ಸ್ಟಾರ್ಟ್-ಅಪ್ ಇಂಡಿಯಾ, ಸ್ಟ್ಯಾಂಡ್-ಅಪ್ ಇಂಡಿಯಾ ಮತ್ತು ಅಟಲ್ ಇನ್ನೋವೇಶನ್ ಮಿಷನ್ ನಂತಹ ವಿಚಾರಗಳು ಅಭಿವೃದ್ಧಿ ಹೊಂದಲು ಫಲವತ್ತಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿವೆ. ಫಿನ್ಟೆಕ್, ಎಡ್ಟೆಕ್, ಅಗ್ರೋಟೆಕ್, ಹೆಲ್ತ್ಟೆಕ್ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಸಾವಿರಾರು ನವೋದ್ಯಮಗಳು ಇಂದು ಅಭಿವೃದ್ಧಿ ಹೊಂದುತ್ತಿವೆ, ಏಕೆಂದರೆ ಅವು ನಿರ್ಣಾಯಕ ಹಂತಗಳಲ್ಲಿ ನೀತಿ ಬೆಂಬಲ, ಇನ್ಕ್ಯುಬೇಷನ್ ಮತ್ತು ಮಾರ್ಗದರ್ಶನವನ್ನು ಪಡೆದಿವೆ. ಇವು ಕೇವಲ ವ್ಯವಹಾರಗಳಲ್ಲ; ಇವು ಉದ್ಯೋಗ ಸೃಷ್ಟಿಕರ್ತರು ಮತ್ತು ಸಮಸ್ಯೆ ಪರಿಹಾರಕರೂ ಆಗಿದ್ದು, ದೃಢ ಮತ್ತು ಸ್ವಾವಲಂಬಿ ಭಾರತಕ್ಕೆ ಕೊಡುಗೆ ನೀಡುತ್ತಿವೆ.
ಬಹುಶಃ ನೀತಿ ಆಯೋಗದ ದೊಡ್ಡ ಸಾಧನೆಯೆಂದರೆ ಅದು ಪುರಾವೆ ಆಧಾರಿತ ನೀತಿ ನಿರೂಪಣೆಯ ಸಂಸ್ಕೃತಿಯನ್ನು ಸಾಂಸ್ಥಿಕಗೊಳಿಸಿರುವುದು. ಬಿಗ್ ಡೇಟಾ, ಕೃತಕ ಬುದ್ಧಿಮತ್ತೆ, ನೈಜ-ಸಮಯದ ಡ್ಯಾಶ್ ಬೋರ್ಡ್ ಮತ್ತು ಕಠಿಣ ಮೇಲ್ವಿಚಾರಣಾ ಚೌಕಟ್ಟುಗಳನ್ನು ಬಳಸಿಕೊಳ್ಳುವ ಮೂಲಕ, ನೀತಿಗಳು ಹೊಂದಿಕೊಳ್ಳುವಂತೆ, ಜವಾಬ್ದಾರಿಯುತವಾಗಿರುವಂತೆ ಮತ್ತು ವಾಸ್ತವಗಳಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುತ್ತದೆ. ಭಾರತದ ಮೊದಲ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕವನ್ನು ಬಿಡುಗಡೆ ಮಾಡುವುದಾಗಲಿ, ಕಾರ್ಯಕ್ಷಮತೆಯ ನಿಯತಾಂಕಗಳ ಕುರಿತು ರಾಜ್ಯಗಳಿಗೆ ಮಾರ್ಗದರ್ಶನ ನೀಡುವುದಾಗಲಿ ಅಥವಾ ನೀತಿ ನಿರೂಪಣೆಗಾಗಿ ನಡವಳಿಕೆಯ ಒಳನೋಟಗಳನ್ನು ಬಳಸುವುದಾಗಲಿ, ನೀತಿ ಆಯೋಗವು ವೈಜ್ಞಾನಿಕ ಚಿಂತನೆಯನ್ನು ಆಡಳಿತದ ಕೇಂದ್ರಭಾಗಕ್ಕೆ ತಂದಿದೆ.
ಸಚಿವಾಲಯಗಳು ಮತ್ತು ವಲಯಗಳಲ್ಲಿ ಸಮನ್ವಯ ಸಾಧಿಸುವ ಅದರ ಸಾಮರ್ಥ್ಯವು ನೀತಿ ಆಯೋಗವನ್ನು ಸಲಹಾ ಸಂಸ್ಥೆಗಿಂತ ಹೆಚ್ಚಿನದನ್ನಾಗಿ ಮಾಡಿತು - ಅದು ಅಭಿವೃದ್ಧಿಯ ಆತ್ಮಸಾಕ್ಷಿಯ ರಕ್ಷಕವಾಯಿತು. ಇದು ಕಾರ್ಯಕ್ಷಮತೆ ಆಧಾರಿತ ಶ್ರೇಯಾಂಕಗಳ ಮೂಲಕ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸಿತು, ವಂಚಿತರ ಧ್ವನಿಯನ್ನು ಕೇಳಲು ನಾಗರಿಕ ಸಮಾಜದೊಂದಿಗೆ ನಿಕಟವಾಗಿ ಕೆಲಸ ಮಾಡಿತು ಮತ್ತು ದೇಶಕ್ಕೆ ಉತ್ತಮ ಅಭ್ಯಾಸಗಳನ್ನು ತರಲು ಜಾಗತಿಕ ಪಾಲುದಾರರನ್ನು ತೊಡಗಿಸಿಕೊಂಡಿತು. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಏರುತ್ತಿರುವ ಶ್ರೇಯಾಂಕ ಮತ್ತು ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಯುನೆಸ್ಕೋದಂತಹ ಸಂಸ್ಥೆಗಳಿಂದ ಪಡೆದ ಪ್ರಶಂಸೆಗಳು ಈ ಪ್ರಯತ್ನದ ಜಾಗತಿಕ ಮನ್ನಣೆಯನ್ನು ಪ್ರತಿಬಿಂಬಿಸುತ್ತವೆ.
ನೀತಿ ಆಯೋಗವು ಕೇವಲ ಗುರಿಗಳನ್ನು ಸಾಧಿಸುವುದಕ್ಕಿಂತ ಹೆಚ್ಚಾಗಿ ಸುಸ್ಥಿರ, ಎಲ್ಲರನ್ನೂ ಒಳಗೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಗಮನಹರಿಸಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅದರ ಬದ್ಧತೆಯು ಪ್ರತಿಯೊಂದು ಉಪಕ್ರಮದಲ್ಲೂ - ಶುದ್ಧ ಇಂಧನ ಪರಿವರ್ತನೆಯಿಂದ ಹಸಿರು ಚಲನಶೀಲತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಿಂದ ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆಯವರೆಗೆ – ಸ್ಪಷ್ಟವಾಗಿದೆ.
ಜ್ಞಾನ ಆರ್ಥಿಕತೆಯಾಗಿ ಭಾರತದ ಹೊರಹೊಮ್ಮುವಿಕೆ ಇನ್ನು ಮುಂದೆ ದೂರದ ಕನಸಲ್ಲ - ಇದು ಪ್ರಗತಿಯಲ್ಲಿದೆ, ಜನರನ್ನು ದೇಶದ ದೊಡ್ಡ ಆಸ್ತಿ ಎಂದು ಪರಿಗಣಿಸುವ ನೀತಿಗಳು ಇದನ್ನು ಮುನ್ನಡೆಸುತ್ತವೆ. ನೀತಿ ಆಯೋಗವು ಅಭಿವೃದ್ಧಿಯ ಬಗ್ಗೆ ಚರ್ಚೆಯನ್ನು ಹೆಚ್ಚಿಸಿದೆ, ನಿಜವಾದ ಪ್ರಗತಿಯನ್ನು ಎತ್ತರದ ಕಟ್ಟಡಗಳು ಅಥವಾ ದೊಡ್ಡ ಕಾರ್ಖಾನೆಗಳಿಂದ ಅಳೆಯಲಾಗುವುದಿಲ್ಲ, ಆದರೆ ಜನರ ಶಕ್ತಿ, ಆರೋಗ್ಯ ಮತ್ತು ಘನತೆಯಿಂದ ಅಳೆಯಲಾಗುತ್ತದೆ ಎಂದು ನಮಗೆ ನೆನಪಿಸುತ್ತದೆ. ಹಾಗೆ ಮಾಡುವುದರಿಂದ, ಇದು ಕೇವಲ ಚಿಂತಕರ ಚಾವಡಿಗಿಂತ ಹೆಚ್ಚಿನದಾಗಿದೆ. ಇದು ಯುವ, ಮಹತ್ವಾಕಾಂಕ್ಷೆಯ ಭಾರತದ - ಕನಸು ಕಾಣುವ, ಧೈರ್ಯ ಮಾಡುವ ಮತ್ತು ಸಾಧಿಸುವ ಭಾರತ - ಹೃದಯ ಬಡಿತವಾಗಿದೆ. ಈ ಕಥೆಯ ಹೃದಯಭಾಗದಲ್ಲಿ ನೀವು ಜನರಲ್ಲಿ ಹೂಡಿಕೆ ಮಾಡಿದಾಗ, ನೀವು ಉತ್ತಮ ಆರ್ಥಿಕತೆಯನ್ನು ಮಾತ್ರವಲ್ಲ, ಉತ್ತಮ ರಾಷ್ಟ್ರವನ್ನು ನಿರ್ಮಿಸುತ್ತೀರಿ ಎಂಬ ಸ್ಪಷ್ಟ ನಂಬಿಕೆ ಇದೆ.
-ರಾವ್ ಇಂದರಜಿತ್ ಸಿಂಗ್
ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ;
ಯೋಜನೆ ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ); ಮತ್ತು ಸಂಸ್ಕೃತಿ ರಾಜ್ಯ ಸಚಿವರು