ಅಲೆಮಾರಿ ಜನಾಂಗಕ್ಕಿಲ್ಲ ವಿದ್ಯುತ್, ನೀರಿನ ಸೌಲಭ್ಯ
ರಾಯಚೂರು : ನಾಗರಿಕರಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ ಹಾಗೂ ಮೂಲ ಸೌಕರ್ಯ ಕಲ್ಪಿಸುವುದು ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ಜವಾಬ್ದಾರಿ. ಆದರೆ ಜಿಲ್ಲಾ ಕೇಂದ್ರದ ಬಡಾವಣೆಯೊಂದರಲ್ಲಿ ಜನರೇ ನೀರು ಖರೀದಿಸಿ, ವಿದ್ಯುತ್‌ಗಾಗಿ ದುಬಾರಿ ವೆಚ್ಚ ಭರಿಸುವ ಮೂಲಕ ಹರಸಾಹಸ ಪಡುತ್ತಿದ್ದಾರೆ.
ರಾಯಚೂರು ನಗರ ವ್ಯಾಪ್ತಿಯ ವಾರ್ಡ್ ನಂಬರ್ 23ರ ಗದ್ವಾಲ್ ರಸ್ತೆಯ ಮಡ್ಡಿಪೇಟೆ ಬಡಾವಣೆಗೆ ಹೊಂದಿಕೊಂಡ ಜಮುಲಮ್ಮ ಬೆಟ್ಟಕ್ಕೆ ತಾಗಿಕೊಂಡಿರುವ ಚನ್ನದಾಸರ ಅಲೆಮಾರಿ ಜನಾಂಗದ ಕಾಲನಿಯಲ್ಲಿ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಇಲ್ಲದೇ ಕಷ್ಟಪಡುತ್ತಿದ್ದಾರೆ.
ತತ್ವಪದ ಹಾಡುವ, ಬಯಲಾಟ ಕಟ್ಟಿಕೊಂಡ ಪ್ರದರ್ಶನ ಮಾಡುವ, ಬಣ್ಣ ಬಳಿಯುವ, ವಿವಿಧ ಸಾಮಾನುಗಳನ್ನು ಮಾರುವ, ಏಕತಾರಿ ಹಿಡಿದು ಭಿಕ್ಷೆ ಬೇಡುವ ಪರಿಶಿಷ್ಟ ಜಾತಿಗೆ ಸೇರಿದ ಅಲೆಮಾರಿ ಜನಾಂಗದ ಸುಮಾರು 100ಕ್ಕೂ ಹೆಚ್ಚು ಕುಟುಂಬಗಳು ಈ ಕಾಲನಿಯಲ್ಲಿ ವಾಸವಾಗಿದ್ದಾರೆ. ಶಾಸಕ ಡಾ.ಶಿವರಾಜ ಪಾಟೀಲರ ಕಾಳಜಿಯಿಂದ ಅಲೆಮಾರಿ ಅಭಿವೃದ್ಧಿ ನಿಗಮದ ಧನಸಹಾಯದಿಂದ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ 2 ವರ್ಷಗಳಾದರೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ ಹಾಗೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ತಮ್ಮ ಸ್ವಂತ ಹಣದಲ್ಲಿ ಟ್ಯಾಂಕರ್ ನೀರು ತರಿಸಿಕೊಂಡು ಕುಡಿಯಲು ಹಾಗೂ ಇತರ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ವಾರಕ್ಕೆ ಎರೆಡು ಬಾರಿ ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಾರೆ.
ವಿದ್ಯುತ್ ಇಲ್ಲದೆ ಪರದಾಟ: ಚೆನ್ನದಾಸರ ಕಾಲನಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಇಲ್ಲಿನ ನಿವಾಸಿಗಳು ಜೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಿ ಎರಡು ವರ್ಷಗಳಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸುಮಾರು ಎರಡು ಕಿ.ಮೀ. ದೂರದ ಜವಾಹರ ನಗರದ ವಿದ್ಯುತ್ ಉಪ ಕೇಂದ್ರದ ಕಂಬಗಳಿಂದ ತಮ್ಮ ಮನೆಗಳಿಗೆ ಬಲ್ಲಿಸ್‌ಗಳನ್ನು ನೆಟ್ಟು ಸರ್ವಿಸ್ ವಯರ್‌ಗಳನ್ನು ಹಾಕಿ ತಾತ್ಕಾಲಿಕವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಇದಕ್ಕೆ ದುಬಾರಿ ವಿದ್ಯುತ್ ಶುಲ್ಕ ಪಾವತಿಸುತ್ತಿದ್ದಾರೆ. ಕೆಲವೊಮ್ಮೆ ದನಕರುಗಳು ಬಲ್ಲಿಸ್‌ಗಳಿಗಿಂದ ತಮ್ಮ ಮೈ ಉಜ್ಜುತ್ತಾ ಅದನ್ನು ಬೀಳಿಸಿ ವಿದ್ಯುತ್ ಸಂಪರ್ಕ ಹಾನಿಗೊಳಿಸುತ್ತಿವೆ ಎಂದು ಇಲ್ಲಿನ ನಿವಾಸಿಗಳ ಅಳಲು ತೋಡಿಕೊಳ್ಳುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕವಿಲ್ಲದ ಕಾರಣ ಅನೇಕರು ಸುಸಜ್ಜಿತ ವಾಗಿ ಕಟ್ಟಿದ ಮನೆಯನ್ನು ಖಾಲಿ ಮಾಡಿ ಬೇರೆಡೆ ವಾಸವಾಗಿದ್ದಾರೆ.
ವಿದ್ಯುತ್, ನೀರಿನ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ. ನಿರ್ಲಕ್ಷ್ಯ ಮುಂದುವರಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ.
-ನಾರಾಯಣ, ಸ್ಥಳೀಯ ನಿವಾಸಿ
ಎರಡು ವರ್ಷಗಳಿಂದ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ನೀರು ಪಡೆಯುತ್ತಿದ್ದೇವೆ. ಚುನಾವಣೆ ಬಂದಾಗ ನಮ್ಮ ಮತ ಪಡೆಯಲು ಮನೆಗಳನ್ನು ಹುಡುಕಿಕೊಂಡು ಬರುವ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು ಈಗ ನಮ್ಮ ಗೋಳು ಕೇಳಲು ಬರುತ್ತಿಲ್ಲ. ನಮ್ಮ ಮತ ಬೇಕು. ಆದರೆ ಹಕ್ಕುನೀಡಲು ತಯಾರಿಲ್ಲ.
- ಮಹಾದೇವಿ, ಸ್ಥಳೀಯ ನಿವಾಸಿ
ಗುಡ್ಡದ ಮೇಲೆ ಮನೆಗಳಿರುವುದರಿಂದ ವಿಷ ಜಂತುಗಳ ಹಾವಳಿ ಹೆಚ್ಚಾಗಿದೆ. ನಮ್ಮ ಸಮಸ್ಯೆಗಳು ಕಂಡು ಸಂಬಂಧಿಕರು ಬರುತ್ತಿಲ್ಲ. ಅಲ್ಲದೇ ನಮ್ಮ ಮಕ್ಕಳಿಗೆ ವೈವಾಹಿಕ ಸಂಬಂಧಗಳೂ ಕೂಡಿ ಬರುತ್ತಿಲ್ಲ.
-ಲಕ್ಷ್ಮೀ, ಕಾಲನಿ ನಿವಾಸಿ