ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!
ಇವರು ಕ್ಷಮೆ ಕೇಳಲಿಲ್ಲ; ಅಷ್ಟೇ ಅಲ್ಲ, ಸಮಸಮಾಜದ ಕನಸು ಕಂಡು ಅದಕ್ಕಾಗಿ ದುಡಿದರು. ಕೋಮು ಧ್ರುವೀಕರಣವನ್ನು ನಖಶಿಕಾಂತ ವಿರೋಧಿಸಿದರು.
ಕೋಮು ಧ್ರುವೀಕರಣ ಅಂದರೆ..? ಅದೇ ಹಿಂದೂ ಶ್ರೇಷ್ಠತೆಯ ಸ್ಥಾನ-ಮಾನ, ಮುಸ್ಲಿಮ್ ದ್ವೇಷ ಇತ್ಯಾದಿ!!
ಭಾಗ - 2
ಬಿಜೊಯ್ ಕುಮಾರ್ ಸಿನ್ಹಾ
ಬಿಜೊಯ್ ಕುಮಾರ್ ಸಿನ್ಹಾ, ಭಗತ್ ಸಿಂಗ್ ಅವರ ಸಂಗಾತಿಗಳಲ್ಲೊಬ್ಬರು. 1909ರ ಜನವರಿ 17ರಂದು ಸಿನ್ಹಾ ಜನಿಸಿದರು. ಅವರ ಸಹೋದರ ರಾಜ್ ಕುಮಾರ್ ಸಿನ್ಹಾ ಕೂಡಾ ಕ್ರಾಂತಿಕಾರಿ. ಕ್ರಾಂತಿಕಾರಿ ಸಂಘಟನೆಗೆ ಅಜೊಯ್ ಘೋಷ್ ಸಿನ್ಹಾ ಅವರನ್ನು ಕರೆತಂದರು. 1924ರಲ್ಲಿ ಮನೆಯಲ್ಲಿ ಮದುವೆ ಮಾಡುತ್ತಾರೆ ಎಂದು ಗೊತ್ತಾಗಿ ಅದರಿಂದ ತಪ್ಪಿಸಿಕೊಳ್ಳಲು ಸಿನ್ಹಾ ಮನೆ ಬಿಟ್ಟು ಓಡಿ ಬಿಡುತ್ತಾರೆ. ಆಗ ಸಂಘಟನೆಯ ಕಾರ್ಯ ನಿಮಿತ್ತ ಬಂದಿದ್ದ ಭಗತ್ ಸಿಂಗ್ ಪರಿಚಯವಾಗುತ್ತದೆ. ಸಿನ್ಹಾ ಒಮ್ಮೆ ಭಗತ್ ಸಿಂಗ್ ಅವರಲ್ಲಿ, ‘‘ನೀವ್ಯಾಕೆ ವಿವಾಹವಾಗುವುದಕ್ಕೆ ಮನಸ್ಸು ಮಾಡಿಲ್ಲ?’’ ಎಂದು ಕೇಳಿದರು. ಆಗ ಭಗತ್ ಸಿಂಗ್, ‘‘ಈ ದೇಶದ ವಿಧವೆಯರ ಸಂಖ್ಯೆ ಹೆಚ್ಚಿಸುವುದು ನನಗೆ ಮನಸ್ಸಿಲ್ಲ’’ ಎಂದಿದ್ದರು.
ಸಂಘಟನೆಯ ಮುಖವಾಣಿಗೆ ಭಗತ್ ಮತ್ತಿತರರು ಬರೆದ ಲೇಖನಗಳನ್ನು ಬಿಜೊಯ್ ಕುಮಾರ್ ಹೆಸರಿನಲ್ಲಿ ಪ್ರಕಟ ಮಾಡಲಾಗುತ್ತಿತ್ತು. 1927ರಲ್ಲಿ ಸಿನ್ಹಾ ಅವರನ್ನು ಸೋವಿಯೆತ್ ಒಕ್ಕೂಟದ ಬೆಂಬಲ ಗಳಿಸಲು ಮಾಸ್ಕೋಗೆ ಕಳಿಸುವ ತೀರ್ಮಾನ ಮಾಡಿದರೂ ಅದು ಕೈಗೂಡಲಿಲ್ಲ. ಆಗ ಸಿನ್ಹಾ ವಯಸ್ಸು 18!! ಬಾಂಬು ತಯಾರಿಯಲ್ಲಿ ತರಬೇತಿ ಪಡೆದ ಮೊದಲಿಗರಲ್ಲಿ ಸಿನ್ಹಾ ಕೂಡಾ ಒಬ್ಬರು.
ಕಾಕೋರಿ ಸಂಚು ಪ್ರಕರಣದಲ್ಲಿ ಜಗದೀಶ್ ಚಂದ್ರ ಚಟರ್ಜಿ ಜೊತೆ ಸಿನ್ಹಾ ಅವರ ಅಣ್ಣ ರಾಜ್ ಕುಮಾರ್ ಸಿನ್ಹಾ ಅವರಿಗೂ 10 ವರ್ಷಗಳ ಕಠಿಣ ಸಜೆ ಆಗಿತ್ತು.
ಪೊಲೀಸರ ಹಿಂಸೆಯಿಂದಾಗಿ ಸಿನ್ಹಾ ಅವರ ಸೋದರಿ ಖಿನ್ನತೆಗೆ ತುತ್ತಾಗಿದ್ದರು.
ಚಟರ್ಜಿ ಅವರ ಬಿಡುಗಡೆಯ ಯೋಜನೆಯ ಜವಾಬ್ದಾರಿಯನ್ನು ಸಂಘಟನೆ ಸಿನ್ಹಾ ಅವರಿಗೆ ವಹಿಸಿತು. ಆದರೆ ಆ ವೇಳೆಗಾಗಲೇ ಪೊಲೀಸರು ಸಿನ್ಹಾ ಅವರ ಬೆನ್ನು ಹತ್ತಿದ್ದರು. ರೈಲಿನಲ್ಲಿ ಪೊಲೀಸರು ಹಿಂಬಾಲಿಸುವುದನ್ನು ಕಂಡ ಸಿನ್ಹಾ ಮತ್ತು ಶಿವ ವರ್ಮಾ ಜೈಲಿನಿಂದ ಹಾರಿ ತಪ್ಪಿಸಿಕೊಂಡರು. ಆ ಕ್ಷಣದಿಂದ ತಲೆ ಮರೆಸಿ ಓಡಾಡುವುದು ಇಬ್ಬರಿಗೂ ಅನಿವಾರ್ಯವಾಯಿತು.
ಭಗತ್ ಸಿಂಗ್ ಮತ್ತು ಬಿ.ಕೆ. ದತ್ತ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಸಾಂಡರ್ಸ್ ಹತ್ಯೆಯಲ್ಲಿ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳ ಪಾತ್ರ ಪೊಲೀಸರಿಗೆ ಗೊತ್ತಾಯಿತು. 25 ಕ್ರಾಂತಿಕಾರಿಗಳಲ್ಲಿ 16 ಮಂದಿಯನ್ನು ಬಂಧಿಸಿದರೂ ಆಝಾದ್, ಸಿನ್ಹಾ, ಯಶ್‌ಪಾಲ್ ಮತ್ತಿತರರು ಇನ್ನೂ ಭೂಗತರಾಗಿದ್ದರು. ಇವರಲ್ಲಿ ಆಝಾದ್ ಪೊಲೀಸ್ ಗುಂಡು ಎದುರಿಸಿ ಹುತಾತ್ಮರಾದರೆ, ಉಳಿದವರನ್ನು ಪೊಲೀಸರು ವಿವಿಧ ತಾಣಗಳಿಂದ ಬಂಧಿಸಿದರು.
ಲಾಹೋರ್ ಜೈಲಿನಲ್ಲಿ ಭಗತ್ ಮತ್ತು ಆತನ ಸಂಗಾತಿಗಳು ನಡೆಸಿದ ಚಾರಿತ್ರಿಕ ಉಪವಾಸ ಸತ್ಯಾಗ್ರಹದಲ್ಲಿ ಸಿನ್ಹಾ, ಜೈದೇವ್ ಕಪೂರ್ ಮತ್ತಿತರರು ಭಾಗವಹಿಸಿದ್ದರು. ಈ ಸತ್ಯಾಗ್ರಹದಲ್ಲಿ ಜತಿನ್ ದಾಸ್ ಅಸುನೀಗಿದರು. ಸಾಯುವ ಕ್ಷಣದಲ್ಲಿ ಹಾಡು ಕೇಳಬೇಕು ಎಂದು ಜತಿನ್ ಹೇಳಿದಾಗ.. ಸಿನ್ಹಾ, ರಬೀಂದ್ರನಾಥ್ ಟಾಗೋರ್‌ರ ‘ಏಕ್ಲಾ ಚಲೋ ರೇ’ ಹಾಡಿದ್ದರು.
ಭಗತ್ ಸಿಂಗ್ ಪ್ರಕರಣದ ತೀರ್ಪನ್ನು ಹೇಗಾದರೂ ಮುಂದೂಡಬೇಕು ಎಂದು ಸಿನ್ಹಾ ಬಯಸಿದ್ದರು.
ಆದರೆ ಭಗತ್ ಸಿಂಗ್ ಮಾತ್ರ, ‘‘ನಾನು ಬದುಕಿದರೆ ಅದೊಂದು ದುರ್ಘಟನೆಯೇ ಸರಿ. ನಾನು ನಗುನಗುತ್ತಾ ಸತ್ತರೆ ಭಾರತದ ತಾಯಂದಿರು ತಮ್ಮ ಮಕ್ಕಳನ್ನು ನನ್ನ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಬಹುದು. ಈ ಅದಮ್ಯ ಹೋರಾಟಗಾರರ ಸಂಖ್ಯೆ ಅಸಂಖ್ಯವಾದಾಗ ಯಾವ ಸೈತಾನನ ಶಕ್ತಿಗೂ ಕ್ರಾಂತಿಯನ್ನು ತೆಯುವುದು ಸಾಧ್ಯವಿಲ್ಲ’’ ಎಂದಿದ್ದರು.
ಈ ಪ್ರಕರಣದಲ್ಲಿ ಸಿನ್ಹಾ ಅವರಿಗೆ ಜೀವಾವಧಿ ಶಿಕ್ಷೆಯಾಯಿತು.
ಸಿನ್ಹಾ ಅವರನ್ನು ಬ್ರಿಟಿಷ್ ಸರಕಾರ ಅಂಡಮಾನ್‌ಗೆ ರವಾನಿಸಿತು. ಅಲ್ಲಿ ಆಗಲೇ ಬಟುಕೇಶ್ವರ ದತ್ ಸಹಿತ ಇತರ ಕ್ರಾಂತಿಕಾರಿಗಳೂ ಇದ್ದರು.
ಅಂಡಮಾನ್ ಜೈಲಲ್ಲಿ ರಾಜಕಿಯ ಕೈದಿಗಳ ಅನುಕೂಲ ಸುಧಾರಣೆಗೆ ಸಿನ್ಹಾ ಸಹಿತ ಎಲ್ಲರೂ ಸಂಘಟಿತ ಉಪವಾಸ ಸತ್ಯಾಗ್ರಹ ಹೂಡಿದರು. ಈ ಸತ್ಯಾಗ್ರಹದಲ್ಲಿ ಕ್ರಾಂತಿಕಾರಿಗಳಾದ ಮಹಾವೀರ್ ಸಿಂಗ್, ಮೋಹಿತ್ ಮೈತ್ರ ಮತ್ತು ಮಾನ ಕೃಷ್ಣ ನಬದಾಸ್ ತೀರಿಕೊಂಡರು.
ಸತ್ಯಾಗ್ರಹಕ್ಕೆ ಮಣಿದ ಬ್ರಿಟಿಷ್ ಸರಕಾರ ಕೈದಿಗಳಿಗೆ ಮೂಲಭೂತ ಸೌಕರ್ಯ ಸಹಿತ ಓದಲು ಪುಸ್ತಕಗಳನ್ನೂ ನೀಡಿತು. ಪರಸ್ಪರ ಸಂವಾದಕ್ಕೂ ಅವಕಾಶ ಮಾಡಿಕೊಟ್ಟಿತು.
ಹೀಗೆ ಅಧ್ಯಯನ ಗುಂಪು ಹುಟ್ಟಿತು. ಸಿನ್ಹಾ ಮುಂತಾದವರು ಉಳಿದವರಿಗೆ, ವಸಾಹತುಶಾಹಿ, ಜಾಗತಿಕ ಚರಿತ್ರೆ ಭಾರತೀಯ ಸಮಾಜ ಹೀಗೆ ವಿವಿಧ ವಿಷಯಗಳ ಬಗ್ಗೆ ಪಾಠ ಮಾಡಿದ್ದರು.
1938ರಲ್ಲಿ ಸಿನ್ಹಾ ಅವರನ್ನು ಬ್ರಿಟಿಷ್ ಸರಕಾರ ಬಿಡುಗಡೆ ಮಾಡಿತು. ಆದರೆ ಅವರು ಮತ್ತೆ ರಾಜಕೀಯ ಹೋರಾಟಕ್ಕೆ ಧುಮುಕಿದ ಕಾರಣ, ಬಂಧನಕ್ಕೊಳಗಾಗಿ 1945ರಲ್ಲಿ ಬಿಡುಗಡೆ ಹೊಂದಿದರು. ಸಿನ್ಹಾ ಒಟ್ಟಾರೆಯಾಗಿ 17 ವರ್ಷ ಜೈಲಿನಲ್ಲಿದ್ದರು. ಲೆಕ್ಕ ಹಾಕಿ 1909ರಲ್ಲಿ ಹುಟ್ಟಿದ ಅವರು ರಾಜಕೀಯ ಪ್ರಜ್ಞೆ ಬೆಳೆದ ಕ್ಷಣದಿಂದ ಬಹುತೇಕ ಜೀವನ ಜೈಲಲ್ಲೇ ಕಳೆದಿದ್ದರು.
ಸ್ವಾತಂತ್ರ್ಯ ಬಂದ ಬಳಿಕ ಸಿನ್ಹಾ ಭಾರತದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದರು. ಆಂಧ್ರದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕುಟುಂಬದ ಶ್ರೀರಾಜ್ಯಂ ಅವರನ್ನು ವಿವಾಹವಾದರು. 1962ರಲ್ಲಿ ಕಾನ್ಪುರದಿಂದ ಶಾಸನ ಸಭೆಗೆ ಸ್ಪರ್ಧಿಸಿದ್ದ ಅವರಿಗೆ ಚುನಾವಣೆಯಲ್ಲಿ ಸೋಲುಂಟಾಯಿತು.
ಸಿನ್ಹಾ ಅವರು 1992ರಲ್ಲಿ ಪಾಟ್ನಾದಲ್ಲಿ ನಿಧನ ಹೊಂದಿದರು.
ಸಂಘಟನೆಯಲ್ಲಿದ್ದಾಗ ಸಿನ್ಹಾ ಅವರಿಗೆ ಸಿನೆಮಾ ನೋಡುವ ಹುಚ್ಚಿತ್ತು. ಪೊಲೀಸರು ಹೇಗೆ, ಎಲ್ಲಿ ಬಂಧಿಸಬಹುದು ಎಂದು ಕ್ರಾಂತಿಕಾರಿಗಳು ಪರಸ್ಪರ ಕಾಲೆಳೆಯುತ್ತಾ, ‘‘ಈ ಸಿನ್ಹಾ ಮಾತ್ರ ಥಿಯೇಟರಲ್ಲೇ ಅರೆಸ್ಟಾಗೋದು.. ಪೊಲೀಸರು ಬಂದರೆ, ಇರಿ.. ಸಿನೆಮಾ ಮುಗಿಯೋ ವರೆಗೂ!!’’ ಎಂದು ಗೇಲಿ ಮಾಡುತ್ತಿದ್ದರಂತೆ.
ಕ್ರಾಂತಿಯ ಸನ್ನದ್ಧತೆ, ಬಂಧನ, ಹಿಂಸೆ, ಸಾವಿನ ಖಚಿತತೆಯ ಮಧ್ಯೆಯೂ ಈ ತರುಣರು ತಮಾಷೆ, ಓದಿನ ಖುಷಿಗಳನ್ನು ಮೈಗೂಡಿಸಿಕೊಂಡಿದ್ದರು ಎಂಬ ಅಂಶ ಕಣ್ಣೀರು ತರಿಸುತ್ತದೆ.
ಒಮ್ಮೆಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್‌ಗೆ ಈ ಡಿಎನ್‌ಎ ಅರ್ಥವಾಗುವುದು ಸಾಧ್ಯವಿಲ್ಲ! ದುರಂತ ಎಂದರೆ ತಾನು ವ್ಯವಸ್ಥಿತವಾಗಿ ಕಟ್ಟಿದ ಕಥನಗಳಲ್ಲಿ ಈ ಎಲ್ಲಾ ಧೀರೋದಾತ್ತ ತರುಣರನ್ನು ಅದು ಅಳಿಸಿ ಹಾಕಿರುವುದು.
ಈಗ ಅದರ ನೆರೇಟಿವ್ ಬಲೆಗೆ ಬಿದ್ದಿರುವ ತರುಣರೂ ಸಾವರ್ಕರ್ ಅವರನ್ನು ಮಾತ್ರ ನೋಡುವಂತೆ ಮಾಡಿರುವುದು ಪರಮ ಘಾತುಕ ಸಂಗತಿ.
**
ಸಿನ್ಹಾ ಅವರ ಸೊಸೆ ಶಾಂತಾ ಸಿನ್ಹಾ ಮಕ್ಕಳ ಹಕ್ಕುಗಳ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಮಾಗ್ಸೇಸೆ ಪ್ರಶಸ್ತಿ ಪಡೆದವರು.
ಯೋಗೇಂದ್ರ ಶುಕ್ಲಾ
ಯೋಗೇಂದ್ರ ಶುಕ್ಲಾ ಅವರು 1896ರಲ್ಲಿ ಅಂದಿನ ಬೆಂಗಾಲ್ ಪ್ರೆಸಿಡೆನ್ಸಿಯ (ಇಂದಿನ ಬಿಹಾರದ ವೈಶಾಲಿ ಜಿಲ್ಲೆಯ ಜಲಾಲ್ ಪುರ್‌ನಲ್ಲಿ ಜನಿಸಿದರು. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ (ಊSಖಂ) ನ ಸ್ಥಾಪಕರಲ್ಲೊಬ್ಬರು. ಭಗತ್ ಸಿಂಗ್ ಮತ್ತಿತರ ಕ್ರಾಂತಿಕಾರಿಗಳ ಹಿರಿಯ ಮಾರ್ಗದರ್ಶಿ.
ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಚಂಪಾರಣ ಮತ್ತು ದರ್ಭಾಂಗಾಗಳಲ್ಲಿ ಹಲವಾರು ರಾಜಕೀಯ ಪ್ರೇರಿತ ಡಕಾಯಿತಿಗಳನ್ನು ಮಾಡಿದ್ದಕ್ಕೆ ಬ್ರಿಟಿಷ್ ಸರಕಾರ 1931ರಲ್ಲಿ ಅವರನ್ನು ಬಂಧಿಸಿತು. ತಿರ್ಹಟ್ ವಿದ್ರೋಹ ಪ್ರಕರಣ ಎಂದೇ ಈ ಪ್ರಕರಣ ಹೆಸರಾಯಿತು.
ಶುಕ್ಲಾ ಅವರ ಕ್ರಾಂತಿಕಾರಿ ತಂಡದ ಬೈಕುಂಠ ಶುಕ್ಲಾ( ಯೋಗೇಂದ್ರ ಶುಕ್ಲಾ ಅವರ ಸೋದರ ಸಂಬಂಧಿ) ಮತ್ತು ಚಂದ್ರಮ ಸಿಂಗ್ ಅವರು ಲಾಹೋರ್ ಪ್ರಕರಣದಲ್ಲಿ ಭಗತ್‌ಸಿಂಗ್ ವಿರುದ್ಧ ಅಪ್ರೂವರ್ ಆಗಿ ಸಾಕ್ಷಿ ಹೇಳಿ ದ್ರೋಹ ಬಗೆದಿದ್ದ ಫಣೀಂದ್ರನಾಥ ಘೋಷ್ ಅವರನ್ನು ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಬೈಕುಂಠ ಶುಕ್ಲಾ ಅವರನ್ನು ಗಲ್ಲಿಗೇರಿಸಲಾಯಿತು. ಆಗ ಬೈಕುಂಠ್ ವಯಸ್ಸು 28.
ಯೋಗೇಂದ್ರ ಶುಕ್ಲಾ ಅವರ ಸಂಘಟನೆಯನ್ನು ಕ್ರಿಮಿನಲ್ ಟ್ರೈಬ್ ಎಂದು ಬ್ರಿಟಿಷ್ ಸರಕಾರ ಘೋಷಿಸಿತ್ತು! ಹತ್ತಾರು ಕ್ರಾಂತಿಕಾರಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬ್ರಿಟಿಷ್ ಸರಕಾರ ಯೋಗೇಂದ್ರ ಶುಕ್ಲಾ ಅವರನ್ನು ಅಂಡಮಾನ್‌ನ ಜೈಲಿಗೆ ಕಳಿಸಿತು. ಅಂಡಮಾನ್ ಜೈಲಲ್ಲೂ ಶುಕ್ಲಾ ಅವರು ಸಹ ಕೈದಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
1938ರಲ್ಲಿ ಅವರನ್ನು ಹಜಾರಿ ಬಾಗ್ ಜೈಲಿಗೆ ಸ್ಥಳಾಂತರಿಸಲಾಯಿತು. ಅನತಿ ಕಾಲದಲ್ಲಿ ಅವರ ಬಿಡುಗಡೆಯೂ ಆಯಿತು. ಬಿಡುಗಡೆ ಆಗಿದ್ದೇ ಶುಕ್ಲಾ ಅವರು ಕಾರ್ಮಿಕ ಚಳವಳಿಗೆ ಧುಮುಕಿದರು. ಚಂಪಾರಣ್‌ನ ಸಕ್ಕರೆ ಕಾರ್ಖಾನೆ ಕಾರ್ಮಿಕರ ಚಳವಳಿಯ ನೇತೃತ್ವ ವಹಿಸಿದ್ದಕ್ಕಾಗಿ ಅವರನ್ನು ಮತ್ತೆ ಬ್ರಿಟಿಷ್ ಸರಕಾರ ಬಂಧಿಸಿ ಹಜಾರಿ ಬಾಗ್ ಜೈಲಿಗೆ ತಳ್ಳಿತು. ಬಿಡುಗಡೆ ಆದ ತಕ್ಷಣ ಅವರು ಅಖಿಲ ಭಾರತ ಕಿಸಾನ್ ಸಭಾದ ಕೇಂದ್ರ ಸಮಿತಿಯ ಸದಸ್ಯರಾದರು. ರೈತ ಚಳವಳಿಯ ನೇತೃತ್ವ ವಹಿಸಿದ್ದಕ್ಕೆ 1940ರಲ್ಲಿ ಮತ್ತೆ ಬ್ರಿಟಿಶ್ ಸರಕಾರ ಅವರನ್ನು ಬಂಧಿಸಿತು.
1942ರ ಕ್ವಿಟ್ ಇಂಡಿಯಾ ಚಳವಳಿಯ ಕಾರಣಕ್ಕೆ ಜಯಪ್ರಕಾಶ್ ನಾರಾಯಣ್ ಸಹಿತ ಸಾವಿರಾರು ನಾಯಕರು ಬಂಧನಕ್ಕೊಳಗಾಗಿದ್ದರು. ಜೆಪಿಯವರು ಹಜಾರಿ ಬಾಗ್ ಜೈಲಲ್ಲಿದ್ದರು. 1942ರ ನವೆಂಬರ್ 9. ದೀಪಾವಳಿ ಹಬ್ಬದ ದಿನ ಯೋಗೇಂದ್ರ ಶುಕ್ಲಾ ಅವರು, ಜೆಪಿ, ರಮಾನಂದನ್ ಮಿಶ್ರಾ, ಸೂರಜ್ ನಾರಾಯಣ್ ಸಿಂಗ್, ಗುಲಾಬ್ ಚಂದ್ ಗುಪ್ತಾ ಹಾಗೂ ಶಾಲಿಗ್ರಾಮ್ ಸಿಂಗ್ ಅವರ ಸಹಿತ ಜೈಲಿನ ಗೋಡೆ ಜಿಗಿದು ತಪ್ಪಿಸಿಕೊಂಡರು.
ಶುಕ್ಲಾ ಕ್ರಾಂತಿಕಾರಿ ಚಳವಳಿಯಲ್ಲಿ ಮಿಂದೆದ್ದ ಜೀವ. ಜೆಪಿಗೆ ಅದು ಹೊಸ ಅನುಭವ. ಗೋಡೆ ಹಾರುವಾಗ ಕಾಲು ಉಳುಕಿಸಿಕೊಂಡಿದ್ದ ಜೆಪಿಯವರನ್ನು ಶುಕ್ಲಾ ಮತ್ತು ಶಾಲಿಗ್ರಾಮ್ ಮುಂದಿನ 48 ಗಂಟೆ ಕಾಲ ಬೆನ್ನಲ್ಲಿ ಹೊತ್ತು ಸಾಗಿದ್ದರು. 124 ಕಿ.ಮೀ. ಹೀಗೆ ಪಯಣಿಸಿದ್ದರು! ಭಾರತದ ಸ್ವಾತಂತ್ರ್ಯ ಚಳವಳಿಯ ಮರೆಯಲಾರದ ಘಟನೆ ಇದು. 1942ರ ಡಿಸೆಂಬರಿನಲ್ಲಿ ಬ್ರಿಟಷ್ ಸರಕಾರ ಶುಕ್ಲಾ ಅವರನ್ನು ಬಂಧಿಸಿತು. ಒಟ್ಟಾರೆ 17 ವರ್ಷ ಕಾಲ ಶುಕ್ಲಾ ಜೈಲಿನಲ್ಲಿದ್ದರು. 1946ರ ಎಪ್ರಿಲ್‌ನಲ್ಲಿ ಶುಕ್ಲಾ ಅವರ ಬಿಡುಗಡೆಯಾಯಿತು. ಪ್ರಜಾ ಸೋಷಿಯಲಿಸ್ಟ್ ಪಕ್ಷದ ಸದಸ್ಯರಾಗಿದ್ದ ಶುಕ್ಲಾ 1958ರಲ್ಲಿ ಬಿಹಾರದ ವಿಧಾನ ಪರಿಷತ್ತಿಗೂ ಆಯ್ಕೆಯಾದರು. ಸುದೀರ್ಘ ಜೈಲುವಾಸ ಅವರ ಆರೋಗ್ಯವನ್ನು ಘಾಸಿಗೊಳಿಸಿತ್ತು. ಎಂದೂ ರಾಜಿ ಮಾಡಿಕೊಳ್ಳದ ಈ ಕ್ರಾಂತಿಕಾರಿ 1960ರ ನವೆಂಬರ್ 19ರಂದು ಕೊನೆ ಉಸಿರೆಳೆದರು