ಬೆಳಕಲ್ಲ, ದರ್ಶನವೂ ಅಲ್ಲ ಪುನರಾವರ್ತನ!
ಮೂರು ವರ್ಷಗಳ ಹಿಂದೆ ಕಾಂತಾರ ನೋಡಿ ಚಿತ್ರಮಂದಿರದಿಂದ ಹೊರ ಬಂದವರು ಅಚ್ಚರಿಯಲ್ಲಿ ಹೊರಬಂದು ಹೇಳಿದ್ದು ಒಂದೇ ಮಾತು, ರಿಷಬ್ ಮೈಮೇಲೆ ದೈವ ಬರುವ ಕ್ಲೈಮ್ಯಾಕ್ಸ್ ಸನ್ನಿವೇಶ ಕಂಡು ಮೈಯಲ್ಲಿ ರೋಮಾಂಚನವಾಯಿತು ಎನ್ನುವುದಾಗಿತ್ತು. ಈಗಲೂ ಮತ್ತೆ ಅದೇ ಮಾತು ಹೇಳುತ್ತಿದ್ದಾರೆ. ಹಾಗಾದರೆ ಅದರಾಚೆಗೆ ಈ ಚಿತ್ರದಲ್ಲಿ ಏನೂ ಇಲ್ಲವೇ?
ಗೆದ್ದ ಚಿತ್ರದ ಮತ್ತೊಂದು ಭಾಗ ತರಬೇಕು ಎನ್ನುವಾಗ ಪ್ರತೀ ನಿರ್ದೇಶಕರಿಗೂ ಕಾಡುವುದು ಇದೇನೇ. ಮೊದಲ ಚಿತ್ರಕ್ಕಿಂತ ಹೆಚ್ಚಾಗಿ ಏನೋ ಕೊಡಬೇಕು ಎನ್ನುವುದು. ಈ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಮೊದಲಿಗಿಂತ ದುಪ್ಪಟ್ಟೇ ಕೊಟ್ಟಿದ್ದಾರೆ. ಎರಡೆರಡು ‘ದರ್ಶನ’ಗಳು, ಐತಿಹಾಸಿಕ ಶೈಲಿಯ ಯುದ್ಧಗಳು, ಕಲಾವಿದರ ದಂಡು.. ಎಲ್ಲವೂ ಇವೆ. ಆದರೆ ಕಥೆ ಮೊದಲಿನಷ್ಟೇ ಗಟ್ಟಿಯಾಗಿದೆಯೇ ಅಂದರೆ ಇಲ್ಲ ಎಂದೇ ಹೇಳಬಹುದು.
ಸಿನೆಮಾದಲ್ಲಿ ಕಥೆಗಿಂತ ದೃಶ್ಯಗಳೇ ಹೆಚ್ಚು ಮಾತನಾಡಬೇಕು ಎನ್ನುವ ಕಲ್ಪನೆ ಇದೆ. ನಿರ್ದೇಶಕ ರಿಷಬ್ ಇಡೀ ಕಾಡನ್ನೇ ಮಾತನಾಡಿಸಿದ್ದಾರೆ. ರಿಷಬ್ ಆಪ್ತರೆಲ್ಲರೂ ಕಾಡಲ್ಲೇ ಇರುತ್ತಾರೆ. ಖುದ್ದು ರಿಷಬ್ ಕಾಡಲ್ಲಿ ಸಿಕ್ಕಿದ ಮಗು. ಈ ಮಗುವಿಗೆ ಬೆರ್ಮೆ ಎಂದು ಹೆಸರಿಟ್ಟು ಸಾಕುವ ಕಾಡಿನ ಮೂಲ ನಿವಾಸಿಗಳೇ ಈತನ ಕುಟುಂಬ. ಅಲ್ಲೊಂದು ದೇವರ ಕಲ್ಲು. ಅಲ್ಲೇ ಒಂದು ಈಶ್ವರನ ಹೂದೋಟ. ಈ ತೋಟದ ಮೇಲೆ ಕಣ್ಣಿಡುವ ಬಾಂಗ್ರಾ ರಾಜರ ಕಾಟ. ಬಾಂಗ್ರಾ ರಾಜರಿಗೆ ಹೆದರಿ ಕಾಡಲ್ಲೇ ಅಡಗಿರುವ ಮೂಲನಿವಾಸಿಗಳ ಮಧ್ಯದಿಂದ ಧೈರ್ಯದಿಂದ ಮುನ್ನುಗ್ಗಿ ಬರುವಾತನೇ ಬೆರ್ಮೆ.
ಬೆರ್ಮೆ ಎನ್ನುವ ಪಾತ್ರದಲ್ಲಿ ರಿಷಬ್ ಶೆಟ್ಟಿ ತಮ್ಮ ಎಂದಿನ ಶೈಲಿಯ ಅಭಿನಯ ನೀಡಿದ್ದಾರೆ. ಕಾಡಿನ ವೀರನಾಗಿ ಅವರ ಮೈಕಟ್ಟು, ಬಾಂಗ್ರಾದವರ ಮೇಲಿನ ಸಿಟ್ಟು, ಹೊಡೆದಾಟಗಳಲ್ಲಿ ಹಾಕುವ ಪಟ್ಟು ಎಲ್ಲವೂ ಆಕರ್ಷಕ. ಕನಕವತಿ ಮೇಲೆ ಆರಂಭದ ಭೀತಿ, ಕಣ್ಣೋಟದ ಪ್ರೀತಿ ಮತ್ತು ಬದಲಾಗುವ ರೀತಿಯೂ ಅಮೋಘ. ಅಂತ್ಯ ಊಹೆಗೆ ನಿಲುಕುವಂಥದ್ದೇ. ಆದರೆ ಅದನ್ನು ಕಟ್ಟಿಕೊಡುವಲ್ಲಿ ಅರವಿಂದ್ ಕಶ್ಯಪ್ ಛಾಯಾಗ್ರಹಣದ ವೈಖರಿ ಅದ್ಭುತ. ಮತ್ತೊಂದೆಡೆ ಮಾಯಕಾರ ಅಜ್ಜನಾಗಿಯೂ ರಿಷಬ್ ನಟಿಸಿದ್ದಾರೆ. ದ್ವಿಪಾತ್ರ ಮಾಡಿರುವ ಗುರುತೇ ಸಿಗದಂತೆ ವಿಭಿನ್ನವಾಗಿ ಕಾಣಿಸಿದ್ದಾರೆ.
ಮಧ್ಯಂತರದ ತನಕ ಮಹಾ ತಿರುವುಗಳೇನೂ ಇರದೆ ಸಾಗುವ ಸಿನೆಮಾ. ಇಂಟರ್ವೆಲ್ ಬಳಿಕ ಬಂದು ಕುಳಿತರೆ ಹಿಂದಿನ ಕಾಂತಾರದ ಕ್ಲೈಮ್ಯಾಕ್ಸ್ ದೃಶ್ಯ! ಈ ಬಾರಿ ಐದನೇ ಶತಮಾನದ ರೀತಿಯಲ್ಲಿ ಎನ್ನುವುದಷ್ಟೇ ವ್ಯತ್ಯಾಸ. ಹಾಗೆ ನೋಡಿದರೆ ಮಧ್ಯಂತರಕ್ಕೂ ಮೊದಲಿನ ಕಥೆ ಕೆಜಿಎಫ್ ವಶಪಡಿಸಲು ಒಬ್ಬನೇ ಮುನ್ನಗ್ಗುವ ರಾಕಿ ಭಾಯ್‌ನನ್ನು ಹೋಲುತ್ತದೆ. ಗುಲಾಮರನ್ನು ಬಿಡುಗಡೆಗೊಳಿಸಿ, ಮಾರುಕಟ್ಟೆ ವಶಪಡಿಸುವುದನ್ನೇ ಇಲ್ಲಿ ಪೌರಾಣಿಕ ಶೈಲಿಯಲ್ಲಿ ತೋರಿಸಲಾಗಿದೆ. ಇನ್ನು ರಾಜಕುಮಾರಿ ಕನಕವತಿಯ ಭೇಟಿ ಮತ್ತು ಕ್ಲೈಮ್ಯಾಕ್ಸ್ ಯುದ್ಧದ ರೀತಿಯನ್ನು ಕಂಡ ಎಲ್ಲರಿಗೂ ರಾಜಮೌಳಿಯ ಬಾಹುಬಲಿ ನೆನಪಾಗಿದೆ. ಕೊನೆಯಲ್ಲಿ ಗುಳಿಗನನ್ನು ಆವಾಹಿಸಿಕೊಂಡ ಬೆರ್ಮೆ ಅಕ್ಕ ಚಾವುಂಡಿ ಬರುತ್ತಾಳೆ ಎಂದಾಗ ಇನ್ನೇನು ಪುಷ್ಪದ ಗಂಗಮ್ಮನಂತೆ ಬದಲಾಗಬಹುದೇನೋ ಎನ್ನುವ ಆತಂಕವೂ ಇತ್ತು. ಆದರೆ ಅದೃಷ್ಟವಶಾತ್ ಅಂಥ ಪ್ರಮಾದಗಳಾಗಿಲ್ಲ.
ಕಳೆದ ಬಾರಿ ಒಂದಷ್ಟು ದೈವಾರಾಧಕರ ವಿರೋಧದ ನಡುವೆಯೇ ದೈವದ ಚಿತ್ರ ಮಾಡಿ ಗೆದ್ದಿದ್ದರು ರಿಷಬ್. ಈ ಬಾರಿ ರಿಷಬ್ ದೈವದ ವೇಷ ಕಟ್ಟಿ ದರ್ಶನ ಕೊಡುವ ದೃಶ್ಯಗಳಿಲ್ಲ. ಆದರೆ ಪೊಲೀಸ್ ಚಿತ್ರಗಳಲ್ಲೇ ಸಿಲುಕಿಕೊಂಡಿದ್ದ ಸಾಯಿಕುಮಾರ್‌ನಂತೆ ಮೈಮೇಲೆ ದೈವ ಬರಿಸಿಕೊಳ್ಳುವುದೇ ರಿಷಬ್ ವಿಶೇಷತೆಯಾಗಿ ಉಳಿಯಬಾರದು ಎನ್ನುವ ಕಳಕಳಿ ಸಿನಿಪ್ರಿಯರಲ್ಲೂ ಇದೆ. ರಿಷಬ್ ಕೂಡ ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಈ ಬಾರಿ ರಿಷಬ್ ಕಾಂತಾರದಲ್ಲಿ ದೈವದ ಇತಿಹಾಸ ಹೇಳುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಅದರಲ್ಲೂ ತುಳುನಾಡಿನ ಸೃಷ್ಟಿಕರ್ತ ಎನ್ನಲಾದ ಬೆರ್ಮೆರೆನ ಹೆಸರಿಟ್ಟುಕೊಂಡಿದ್ದು ಇನ್ನಷ್ಟು ಕುತೂಹಲ ಸೃಷ್ಟಿಸಿತ್ತು. ಆದರೆ ಆ ಬೆರ್ಮೆರೆಗೂ ಕಾಂತಾರದ ಈ ಬೆರ್ಮೆಗೂ ಸಂಬಂಧ ಇಲ್ಲ!
ಆದರೆ ರಿಷಬ್ ಒಂದಲ್ಲ ಒಂದು ರೀತಿಯಲ್ಲಿ ತುಳುನಾಡಿನ ಇತಿಹಾಸವನ್ನು ಹೇಳದೆಯೇ ಹೇಳಿದ್ದಾರೆ. ಅದೇನೆಂದರೆ ತುಳುನಾಡಿನ ಮೂಲ ನಿವಾಸಿಗಳು ಶಿವನ ಆರಾಧಕರು. ಅವರಿದ್ದ ಜಾಗ ಈಶ್ವರನ ಹೂದೋಟದಂತೆ ಇತ್ತು. ಅವರನ್ನು ಹೊರಗಿನಿಂದ ಬಂದ ಅರಸರು ಆಕ್ರಮಿಸಿ ಅವರ ನಂಬಿಕೆಯಲ್ಲಿ ಆಟವಾಡಿದ್ದಾಗಿ ತೋರಿಸಿದ್ದಾರೆ.
ಒಂದು ಹಂತಕ್ಕೆ ಇದನ್ನು ಒಪ್ಪಬಹುದೇನೋ. ಆದರೆ ಐದನೇ ಶತಮಾನದ ಕಥೆ ಹೇಳುತ್ತಾ ತುಳುನಾಡಿಗೆ ವ್ಯಾಪಾರಕ್ಕೆ ಬಂದ ಪೋರ್ಚುಗೀಸರನ್ನು, ಅರಬರನ್ನು ತೋರಿಸಲಾಗಿದೆ. ಇತಿಹಾಸದ ಪ್ರಕಾರ ಇವರು ಕರ್ನಾಟಕಕ್ಕೆ ಕಾಲಿಟ್ಟದ್ದೇ 14ನೇ ಶತಮಾನದ ಬಳಿಕ. ಮನೋರಂಜನೆ ನೀಡುವ ಚಿತ್ರದಲ್ಲಿ ಅಷ್ಟೆಲ್ಲ ಲಾಜಿಕ್ ಹುಡುಕುವ ಅಗತ್ಯವಿಲ್ಲ ಎನ್ನುತ್ತೀರ? ಹಾಗಾದರೆ ರಾಜರಿಂದ ಅಸ್ಪಶ್ಯರು ಎನಿಸಿಕೊಂಡು ತುಳಿಯಲ್ಪಟ್ಟವರ ನೇತಾರ ಎಂದು ಸಂಭ್ರಮಿಸೋಣವೇ? ಆದರೆ ಕಾಲ್ಪನಿಕ ಹೋರಾಟದ ಕಥೆಯಲ್ಲೂ ದೈವದ ವರ ಎನ್ನುವಂತೆ ಕಾಣಿಸಿದ ಅನಾಥ ಮಗುವೇ ಇವರಿಗೆ ನೇತೃತ್ವ ನೀಡಬೇಕೇ? ಮೂಲನಿವಾಸಿಗಳ ಕುಟುಂಬದಲ್ಲೇ ಹುಟ್ಟಿ ಬೆಳೆದು ನಾಯಕನಾಗಬಾರದೇ? ಹೀಗೆ ವಾದ ಮಾಡುತ್ತಾ ಹೋಗಬಹುದು.
ಇನ್ನು ದೈವದ ಶಕ್ತಿಯ ವಿಚಾರದಲ್ಲೂ ಒಂದಷ್ಟು ಗೊಂದಲಗಳು ಉಳಿದು ಬಿಡುತ್ತವೆ. ಬಾಲ್ಯದಿಂದಲೇ ಬೆರ್ಮನಿಗೆ ಮಾತ್ರ ಕಾಣಿಸುವ ಮಾಯಕಾರ ತಾತ ಯಾರು? ಗುಳಿಗನೇ? ಕೊರಗಜ್ಜನೇ? ಅಥವಾ ಬರಿಯ ಆತ್ಮವಷ್ಟೇನಾ ಎನ್ನುವ ಸಂದೇಹ ಮೂಡುತ್ತದೆ. ಪಾತ್ರಧಾರಿಗಳ ವಿಚಾರದಲ್ಲಿಯೂ ಗೊಂದಲಗಳಿವೆ. ನವೀನ್ ಡಿ. ಪಡೀಲ್ ಜೊತೆಗಿನ ದೃಶ್ಯಗಳಲ್ಲಿ ರಾಕೇಶ್ ಪೂಜಾರಿಯ ಪಾತ್ರ ಎಐಯಂತೆ ಕಾಣುತ್ತದೆ. ರಾಕೇಶ್ ಇಲ್ಲದ ದೃಶ್ಯಗಳಲ್ಲಿ ಕೆಲವೆಡೆ ಹಿನ್ನೆಲೆ ಧ್ವನಿಯ ಮೂಲಕ ನೀಡಿರುವ ಸಮರ್ಥನೆ, ರಾಕೇಶ್ ತಮ್ಮ ಪಾತ್ರವನ್ನು ಪೂರ್ತಿಗೊಳಿಸದೇ ಹೋಗಿಬಿಟ್ಟಿದ್ದಾರ ಎನ್ನುವ ಗೊಂದಲಕ್ಕೂ ಕಾರಣವಾಗಿದೆ.
ಆದರೆ ಇದ್ಯಾವುದೂ ಸಮಸ್ಯೆಯೇ ಅಲ್ಲ ಎನ್ನುವಂತೆ ಸಿನೆಮಾ ದಾಖಲೆಯ ಯಶಸ್ಸು ಮಾಡುತ್ತಿದೆ. ಜನತೆ ದೊಡ್ಡ ಪ್ರಮಾಣದಲ್ಲಿ ಸಂಭ್ರಮಾಚರಣೆ ನಡೆಸಬಹುದು. ಇನ್ನೊಂದು ರಾಷ್ಟ್ರ ಪ್ರಶಸ್ತಿಯೂ ಬರಬಹುದು. ಬಾಂಗ್ರಾದವರು ಕೂಡ ಮೂಲ ನಿವಾಸಿಗಳಿಂತ ಸಂಖ್ಯೆಯಲ್ಲಿ ಹೆಚ್ಚೇ ಇದ್ದರು ಎಂದು ತೋರಿಸಿದ ರಿಷಬ್‌ಗೆ ಇದನ್ನೆಲ್ಲ ವಿವರಿಸಬೇಕಾದ ಅಗತ್ಯವಿಲ್ಲ. ಈ ನಿರ್ದೇಶಕರಿಗೆ ಕಾಡಿನ ಮೇಲಿನ ಒಲವು ಇಂದು ನಿನ್ನೆಯದಲ್ಲ. ಮೊದಲ ಚಿತ್ರ ‘ರಿಕ್ಕಿ’ಯಲ್ಲೇ ‘‘ಕಾಡೇನು ನಿನ್ನಪ್ಪನ ಮನೆ ಆಸ್ತಿನಾ’’ ಎಂದು ಪ್ರಶ್ನಿಸಿದ್ದವರು ರಿಷಬ್. ಎಲ್ಲರೂ ಕಾಡಿನ ದರೋಡೆಯ ಚಿತ್ರ ಮಾಡಿದರೆ, ರಿಷಬ್ ಕಾಡು ಮತ್ತು ಜನರ ನಂಬಿಕೆಯನ್ನು ಸೇರಿಸಿ ಚಿತ್ರ ಮಾಡುತ್ತಿದ್ದಾರೆ. ದೈವದ ಬೆನ್ನುಬಿದ್ದ ರಿಷಬ್, ಪ್ರೇಕ್ಷಕರು ತನ್ನ ಮೇಲಿಟ್ಟ ನಂಬಿಕೆಯನ್ನು ಮರೆಯದಿದ್ದರೆ ಸಾಕು.