ರೈತರಿಗೆ ವರದಾನವಾಗಿರುವ ನರೇಗಾ ಯೋಜನೆ
ಬೀದರ್ : ನರೇಗಾ ಯೋಜನೆಯಡಿಯಲ್ಲಿ ಕೆಲವು ಗ್ರಾಮಗಳಲ್ಲಿ ಕೊರೆದಿರುವ ಬಾವಿಗಳಲ್ಲಿ ಸಮರ್ಪಕ ನೀರು ಲಭ್ಯವಾಗಿರುವುದರಿಂದ ಬೇಸಿಗೆ ಮುಗಿಯುವವರೆಗೂ ನೀರಿನ ಸಮಸ್ಯೆ ಇಲ್ಲದಿರುವುದು ಸೇರಿದಂತೆ ವಿವಿಧ ಕಾಮಗಾರಿಗಳಿಂದ ನರೇಗಾ ಯೋಜನೆ ರೈತರ ಪಾಲಿಗೆ ವರದಾನವಾಗಿದೆ.
ಔರಾದ್ ತಾಲೂಕಿನ ಏಕಂಬಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಮಾಲಪೂರ ಗ್ರಾಮದ ಆನಂದರಾವ್ ದಿಗಂಬರರಾವ್ ಎಂಬುವರ ತೆರೆದ ಬಾವಿಗೆ ಬೇಸಿಗೆಯಲ್ಲಿ ಕೃಷಿ ಭೂಮಿಗೆ ನಿರೀಕ್ಷೆ ಮೀರಿ ನೀರು ಸಂಗ್ರಹದಿಂದ ಇದು ಅವರ ಹರ್ಷಕ್ಕೆ ಕಾರಣವಾಗಿದೆ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇವರ ಪಾಲಿಗೆ ವರದಾನವಾಗಿದೆ. ಈ ನೀರಿನಿಂದ ಬಡವರ ಬಾದಾಮಿ ಶೇಂಗಾ ಬೆಳೆದು ಯಶಸ್ವಿಯಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಬಾವಿಗಳಲ್ಲಿ ಸಮರ್ಪಕ ನೀರು ಇರುವುದರಿಂದ ರೈತರು ಹಲವು ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ.
ಕೃಷಿ ಇಲಾಖೆಯಲ್ಲಿ ನರೇಗಾ ಯೋಜನೆ ಅನುಷ್ಠಾನಗೊಂಡಿದ್ದು, ಈ ಭಾಗದ ಹಲವು ರೈತರಿಗೆ ನೆರವಾಗಿದೆ. ತಮ್ಮ ಜಮೀನುಗಳಲ್ಲೇ ಕೆಲಸ ಮಾಡಿ, ಅಭಿವೃದ್ಧಿ ಮಾಡುವುದರಿಂದ ಕೂಲಿಯೂ ಸಿಗುತ್ತಿದೆ. ಜಮೀನು ಅಭಿವೃದ್ಧಿ ಆಗುತ್ತಿದೆ. ಹಾಗಾಗಿ ರೈತರು ಸ್ವಾವಲಂಬಿಗಳಾಗಿ ಬದುಕು ದಾರಿಯಾಗುತ್ತಿದೆ. ಔರಾದ್ ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಯುವಜನತೆಯನ್ನು ಸ್ವಾವಲಂಬಿಗಳಾಗಿ ಜೀವಿಸುವಂತೆ ಮಾಡಲು ಇಲಾಖೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಬರಡು ಭೂಮಿಯನ್ನು ಉತ್ಪಾದನಾ ಕೇಂದ್ರವನ್ನಾಗಿಸುವಲ್ಲಿ ಮಹಾತ್ಮ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ರೈತರಿಗೆ ವರದಾನವಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.
ಬಡವರಿಗೆ ನರೇಗಾ ಆಶ್ರಯ: ಜನ- ಜಾನುವಾರು, ಕೃಷಿಗೆ ನೀರಿನ ಸಮಸ್ಯೆ ನೀಗಿಸುವ ಜತೆಯಲ್ಲೇ ಅಂತರ್ಜಲ ವೃದ್ಧಿಗಾಗಿ ಸರಕಾರ ಕೈಗೊಂಡಿರುವ ‘ತೆರೆದ ಬಾವಿ’ ನಿರ್ಮಾಣ ಯೋಜನೆಗೆ ಬೇಡಿಕೆ ಹೆಚ್ಚಲಾರಂಭಿಸಿದೆ. ಈ ಯೋಜನೆ ಬಡವರಿಗೆ ಆಶ್ರಯವಾಗಿದ್ದು, ತಾಲೂಕಿನಲ್ಲಿ ಬಾವಿಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ತೆರೆದ ಬಾವಿ ನಿರ್ಮಾಣ ಮಾಡಿಕೊಳ್ಳಬೇಕು ಎಂದು ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.
ಗರ್ಭಿಣಿಯರಿಗೆ ರಿಯಾಯಿತಿ: ನರೇಗಾ ಯೋಜನೆ ಕಾಮಗಾರಿಗಳಲ್ಲಿ ಕೆಲಸ ಮಾಡುವ 6 ತಿಂಗಳು ತುಂಬಿದ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ನಿಗದಿತ ಕೂಲಿ ಪಡೆಯಲು, ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ. ಕೆಲಸದಲ್ಲಿ ರಿಯಾಯಿತಿ ನೀಡಲು ಆರೋಗ್ಯ ಇಲಾಖೆ ಕೊಡುವ ತಾಯಿ ಕಾರ್ಡ್‌ನ್ನು ಆಧಾರವಾಗಿ ಪರಿಗಣಿಸುವಂತೆ ಸರಕಾರ ಆದೇಶದಲ್ಲಿ ತಿಳಿಸಿದೆ ಎಂದು ಶಿವಕುಮಾರ ಘಾಟೆ ತಿಳಿಸಿದ್ದಾರೆ.
ಕೃ
ಷಿಯಿಂದ ಕೈ ಸುಟ್ಟುಕೊಂಡು ದಾರಿ ಕಾಣದೆ ಕಂಗಾಲಾಗಿದ್ದ ರೈತರಿಗೆ ನರೇಗಾ ಯೋಜನೆ ಆಶಾಕಿರಣವಾಗಿ ಪರಿಣಮಿಸಿದೆ. ಸಾಲಬಾಧೆ, ಬೆಳೆ ನಷ್ಟದಿಂದ ಮನನೊಂದು ಜೀವದ ಆಸೆ ತೊರೆಯುತ್ತಿರುವ ಹಲವು ರೈತರು ಆತ್ಮಹತ್ಯೆಯತ್ತ ಮುಖ ಮಾಡಿದ್ದಾರೆ. ಕೆಲ ರೈತರು ಪಟ್ಟಣಗಳತ್ತ ಗುಳೆ ಹೋಗುತ್ತಿದ್ದಾರೆ. ರೈತರ ಸಂಕಷ್ಟ ಅರಿತ ಸರಕಾರ, ವಿವಿಧ ಇಲಾಖೆಗಳಲ್ಲಿ ನರೇಗಾ ಕಾಮಗಾರಿಗಳನ್ನು ಸೃಜಿಸಿದೆ. ಇದು ರೈತರ ಪಾಲಿಗೆ ಲಾಭದಾಯಕವಾಗಿದೆ.
-ಶಿವಕುಮಾರ ಘಾಟೆ, ತಾಲೂಕು ನರೇಗಾ ಸಹಾಯಕ ನಿರ್ದೇಶಕ, ಔರಾದ್
ನ
ರೇಗಾ ಯೋಜನೆಯಡಿ ಜಮಲಾಪೂರ ಗ್ರಾಮದ ಆನಂದರಾವ್ ಅವರು ತೆರೆದ ಬಾವಿ ಕೊರೆದಿದ್ದಾರೆ. ಬಾವಿಯಲ್ಲಿ ಬೇಸಿಗೆಯಲ್ಲಿಯೂ ನೀರಿದ್ದು, ಶೇಂಗಾ ಬೆಳೆ ಬೆಳೆದಿದ್ದಾರೆ. ರೈತರು ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯಾಗಬೇಕು.
-ಮಾಣಿಕರಾವ ಪಾಟೀಲ್,
ತಾಪಂ ಇಒ, ಔರಾದ್