ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!: ಇವರಾರೂ ಕ್ಷಮೆಯಾಚಿಸಲಿಲ್ಲ!
ಅಂಡಮಾನ್ ಅಥವಾ ಕಾಲಾಪಾನಿ ಎಂದರೆ ಸಾವರ್ಕರ್ ಎಂಬ ಭ್ರಮೆಯನ್ನು ಆರೆಸ್ಸೆಸ್ ಸೃಷ್ಟಿಸಿದೆ. ಇದೇ ಶಿಕ್ಷೆ ಅನುಭವಿಸಿದ ಹತ್ತಾರು ಕ್ರಾಂತಿಕಾರಿಗಳ ನೆನಪು ಯಾರಿಗೂ ಇಲ್ಲ. ವಿಚಿತ್ರ ಎಂದರೆ ಅಂಡಮಾನ್ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿ ಗಳಲ್ಲಿ ಕ್ಷಮೆ ಯಾಚಿಸಿ ಹೊರಬಂದವರು ಇಬ್ಬರೇ! ಅವರು ಸಾವರ್ಕರ್ ಸಹೋದರರು!! ಉಳಿದವರು ಧೀರೋದಾತ್ತ ವಾಗಿ ಶಿಕ್ಷೆ ಅನುಭವಿಸಿದರು.
ಅಂಡಮಾನ್‌ನಲ್ಲಿ ರಾಜ್ಯವಾರು ಶಿಕ್ಷೆಗೊಳಗಾದ ಕ್ರಾಂತಿಕಾರಿಗಳು:
ಬಂಗಾಳ-398
ಪಂಜಾಬ್-95
ಮಹಾರಾಷ್ಟ್ರ- 03
ಬಿಹಾರ- 17
ಉತ್ತರಪ್ರದೇಶ- 18
ಅಂಡಮಾನ್‌ನಲ್ಲಿ ಶಿಕ್ಷೆಗೊಳಗಾದ ಅತೀ ಹೆಚ್ಚು ಕ್ರಾಂತಿಕಾರಿಗಳು ಬಂಗಾಳದವರು, ತದನಂತರ ಪಂಜಾಬ್. ಮಹಾರಾಷ್ಟ್ರದಿಂದ ಕೇವಲ ಮೂವರು. ಇವರಲ್ಲಿ ಇಬ್ಬರು ಸಾವರ್ಕರ್ ಸಹೋದರರು. ಇಬ್ಬರೂ ಕ್ಷಮಾ ದಾನ ಕೋರಿ ಪತ್ರ ಬರೆದು ಬಿಡುಗಡೆಗೊಂಡರು!! ಉಳಿದ ರಾಜ್ಯಗಳ ಕ್ರಾಂತಿಕಾರಿಗಳು ಯಾರೂ ಕ್ಷಮೆ ಯಾಚಿಸಲಿಲ್ಲ..
►ಹರೇಕೃಷ್ಣ ಕೋನಾರ್
ಹರೇ ಕೃಷ್ಣ ಕೋನಾರ್ ಆಗಸ್ಟ್ 5, 1915ರಂದು ಬಂಗಾಲದ ಮೇಲ್ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.
ಕಾಲೇಜು ಓದುತ್ತಿದ್ದಾಗ ಕ್ರಾಂತಿಕಾರಿ ಸಂಘಟನೆ ಜುಗಾಂತರ್ ಸೇರಿ, ಬೇರೆ ಬೇರೆ ಕ್ರಾಂತಿಕಾರಿ ಗುಂಪುಗಳಿಗೆ ಸರಬರಾಜು ಮಾಡಲು ಬಾಂಬು ತಯಾರಿಸುವ ಭೂಗತ ಕಾರ್ಯದಲ್ಲಿ ನಿರತರಾದರು. 1932ರಲ್ಲಿ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿತು.
ಕೋರ್ಟ್‌ನಲ್ಲಿ ನ್ಯಾಯಾಧೀಶರು, ‘‘ನಿಮ್ಮ ಈ ಚಟುವಟಿಕೆಗೆ ನಿಮಗೆ ನಾಚಿಕೆಯಾಗುವುದಿಲ್ಲವೇ?’’ ಎಂದು ಕೇಳಿದ್ದಕ್ಕೆ 17ರ ಹರೆಯದ ಕೋನಾರ್, ‘‘ನನ್ನ ಕೃತ್ಯದ ಬಗ್ಗೆ ನನಗೆ ಹೆಮ್ಮೆಯಿದೆ.ಅದರ ಪರಿಣಾಮಗಳನ್ನೂ ಹೆಮ್ಮೆಯಿಂದ ಸ್ವೀಕರಿಸುತ್ತೇನೆ’’ ಎಂದಿದ್ದರು. ಇದಾದ ಬಳಿಕ ಕೋರ್ಟು ಅವರನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಿ ಅಂಡಮಾನ್‌ಗೆ ರವಾನಿಸಿತು. ಅಂಡಮಾನ್‌ನ ಜೈಲು ಸೆಲ್ಲುಗಳ ಘೋರ ಪರಿಸ್ಥಿತಿ ವಿರುದ್ಧ ಕೋನಾರ್ ಸಹಿತ ಇತರ ಕೈದಿಗಳು 1933ರಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡರು. 46 ದಿನಗಳ ಸತ್ಯಾಗ್ರಹದ ಬಳಿಕ ಬ್ರಿಟಿಷ್ ಸರಕಾರ ಕೈದಿಗಳ ಕೊಠಡಿಗಳಿಗೆ ಬೆಳಕು, ಉತ್ತಮ ಊಟಗಳ ಸಹಿತ ಓದಲು ಪುಸ್ತಕಗಳಿಗೆ ಅವಕಾಶ ಬೇಕು, ಅಧ್ಯಯನ ಮತ್ತು.ಸಂವಾದಗಳಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳಿಗೆ ಮಣಿಯಿತು
ಈ ಅವಧಿಯಲ್ಲಿ ಕೋನಾರ್ ಅವರಿಗೆ ನಿರಂಜನ್ ಸೆನ್ ಗುಪ್ತಾ, ಗಣೇಶ ಘೋಶ್, ಶಚೀಂದ್ರನಾಥ್ ಸನ್ಯಾಲ್ ಮುಂತಾದ ಕ್ರಾಂತಿಕಾರಿಗಳ ಪರಿಚಯವಾಯಿತು. ಹಾಗೆಯೇ ಎಡಪಂಥದ ಅಧ್ಯಯನವೂ ಹೆಚ್ಚಿತು.
ಹರೇ ಕೃಷ್ಣಕೋನಾರ್ ಮತ್ತು ಶಿವ್ ವರ್ಮಾ ಅವರು ಅಂಡಮಾನ್‌ನಲ್ಲಿ ಕಮ್ಯುನಿಸ್ಟ್ ಕನ್ಸಾಲಿಡೇಶನ್ ಎಂಬ ಸ್ಟಡಿ ಸರ್ಕಲ್ ಆರಂಭಿಸಿದರು! ಇದರ ಸಂಪಾದಕೀಯ ಮಂಡಲಿಯಲ್ಲಿ ಬಿಜೊಯ್ ಕುಮಾರ್ ಸಿನ್ಹಾ, ಬಟುಕೇಶ್ವರ್ ದತ್ ಇದ್ದರು. ಈ ಅಧ್ಯಯನ ಬಳಗದ ಸದಸ್ಯ ಕೈದಿಗಳ ಸಂಖ್ಯೆ ಇನ್ನೂರಕ್ಕೂ ಮಿಕ್ಕಿ ಇತ್ತು. The Call ಎಂಬ ಮಾಸಿಕ ಮ್ಯಾಗಝೀನ್ ಕೂಡಾ ಪ್ರಕಟಿಸುತ್ತಿದ್ದರು. ಕೈಬರಹದ ಈ ಮ್ಯಾಗಝೀನ್ 150 ಪುಟ ಇರುತ್ತಿತ್ತು. ಹಲವರ ವಿಶ್ಲೇಷಣಾತ್ಮಕ ಲೇಖನಗಳು ಇದರಲ್ಲಿ ಇರುತ್ತಿತ್ತು.
ಎಲ್ಲಾ ರಾಜಕೀಯ ಕೈದಿಗಳನ್ನೂ ಸಮಾನವಾಗಿ ನೋಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಅಂಡಮಾನ್‌ನ 385 ಕೈದಿಗಳು 1937ರಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದರು
ಸುಭಾಶ್ ಚಂದ್ರಬೋಸ್, ಜವಾಹರ ಲಾಲ್ ನೆಹರೂ ಸಹಿತ ಹಲವಾರು ನಾಯಕರು ಈ ಕ್ರಾಂತಿಕಾರಿಗಳ ಬೇಡಿಕೆಯ ಪರವಾಗಿ ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹಾಕತೊಡಗಿದರು. ರವೀಂದ್ರನಾಥ್ ಟಾಗೋರ್ ಕೂಡಾ ಈ ಕೈದಿಗಳನ್ನು ಭಾರತದ ಜೈಲುಗಳಿಗೆ ಸ್ಥಳಾಂತರಿಸುವಂತೆ ಪತ್ರ ಬರೆದರು. ಗಾಂಧಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೋನಾರ್ ಅವರಿಗೆ ಪತ್ರ ಬರೆದು ‘‘ನಿಮ್ಮ ಬೇಡಿಕೆಗಳು ಈಡೇರುವಂತೆ ಪ್ರಯತ್ನಿಸಲು ನಾವಿದ್ದೇವೆ. ದಯವಿಟ್ಟು ಉಪವಾಸ ಸತ್ಯಾಗ್ರಹ ಕೈಬಿಡಿ’’ ಎಂದು ಕೋರಿಕೊಂಡರು. 36 ದಿನಗಳ ಉಪವಾಸ ಸತ್ಯಾಗ್ರಹದ ಬಳಿಕ ಕ್ರಾಂತಿಕಾರಿ ಕೈದಿಗಳು ತಮ್ಮ ಸತ್ಯಾಗ್ರಹ ನಿಲ್ಲಿಸಿದರು. 1938ರಲ್ಲಿ ಕೋನಾರ್ ಅವರನ್ನು ಬಿಡುಗಡೆಗೊಳಿಸಲಾಯಿತು. ಬಿಡುಗಡೆಯ ಬಳಿಕ ಅವರು ಎಂ.ಎನ್.ರಾಯ್ ಮತ್ತಿತರ ಎಡಪಂಥೀಯ ನಾಯಕರನ್ನು ಭೇಟಿ ಮಾಡಿದರು. ಕಮ್ಯುನಿಸ್ಟ್ ಪಕ್ಷ ಸೇರಿದ ಕೋನಾರ್ ಅವರು ಬಂಗಾಲದಲ್ಲಿ ರೈತ ಚಳವಳಿಯನ್ನು ಸಂಘಟಿಸತೊಡಗಿದರು. ಇದರ ಪರಿಣಾಮವಾಗಿ ಮತ್ತೆ ಬಂಧನಕ್ಕೊಳಗಾದರು. ಸ್ವಾತಂತ್ರ್ಯಾನಂತರ ಕಮ್ಯುನಿಸ್ಟ್ ಪಕ್ಷವು ನಿಷೇಧಕ್ಕೊಳಗಾದಾಗ ಅವರು 1952ರ ವರೆಗೆ ಭೂಗತರಾಗಿದ್ದರು. 1957ರಿಂದ ಸತತವಾಗಿ ಶಾಸನ ಸಭಾ ಸದಸ್ಯರಾಗಿದ್ದ ಕೋನಾರ್ ಬಂಗಾಳದ ಸಮ್ಮಿಶ್ರ ಸರಕಾರ ರಚನೆಯಾದಾಗ ( ಬಾಂಗ್ಲಾ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಮ್ಮಿಶ್ರ ಸರಕಾರ)ಅಜೊಯ್ ಮುಖರ್ಜಿ ಮುಖ್ಯಮಂತ್ರಿ, ಜ್ಯೋತಿ ಬಸು ಉಪಮುಖ್ಯಮಂತ್ರಿಯಾದರು. ಹರೇ ಕೃಷ್ಣ ಕೋನಾರ್ ಭೂಸುಧಾರಣೆ ಮತ್ತು ಕಂದಾಯ ಸಚಿವರಾದರು. ಭೂಸುಧಾರಣೆಯ ಶಿಲ್ಪಿ ಎಂದೇ ಕೋನಾರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಹತ್ತು ಲಕ್ಷ ಎಕರೆಗಳಷ್ಟು ಜಮೀನನ್ನು ಸರಕಾರ ವಶಪಡಿಸಿಕೊಂಡು ಬಡ, ಭೂಹೀನರಿಗೆ ಹಂಚಿತು.
1974 ಜುಲೈನಲ್ಲಿ ತಮ್ಮ 58ನೇ ವಯಸ್ಸಿನಲ್ಲಿ ಕೋನಾರ್ ಕ್ಯಾನ್ಸರ್ ಬಾಧೆಯಿಂದ ಕೊನೆಯುಸಿರೆಳೆದರು. ಅವರ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು. ಭಾರತದಲ್ಲಿ ಅತೀ ಹೆಚ್ಚು ಜನ ಭಾಗವಹಿಸಿದ್ದ ಅಂತಿಮ ಯಾತೆಗಳಲ್ಲೊಂದು ಎಂದೇ ಪರಿಗಣಿತವಾಗಿದೆ.
ಸಿಪಿಎಂ ಮುಖ್ಯ ಕಚೇರಿಯ ಅಖಿಲ ಭಾರತ ಕಿಸಾನ್ ಸಭಾದ ಕಚೇರಿಗೆ ಹರೇ ಕೃಷ್ಣ ಸ್ಮ ತಿ ಭವನ್ ಎಂದು ಹೆಸರಟ್ಟು ಅವರನ್ನು ಗೌರವಿಸಲಾಗಿದೆ.
ಅಂಡಮಾನ್‌ನಲ್ಲಿ ಸತ್ಯಾಗ್ರಹ ಮತ್ತು ಅಧ್ಯಯನ ಕೂಟದ ನೇತೃತ್ವ ವಹಿಸಿದ್ದಾಗ ಕೋನಾರ್ ಅವರ ವಯಸ್ಸು ಕೇವಲ 23 ಎಂಬುದನ್ನು ಮರೆಯಬಾರದು. ಅಂಡಮಾನಿಗೆ ರವಾನಿಸಲ್ಪಟ್ಟಾಗ ಅವರ ವಯಸ್ಸು 18.
►ತ್ರೈಲೋಕ್ಯನಾಥ್ ಚಕ್ರವರ್ತಿ
ಅಂಡಮಾನ್‌ನ ಜೈಲಿನ ಶಿಕ್ಷೆ ಸಹಿತ ತ್ರೈಲೋಕ್ಯನಾಥ್ ಚಕ್ರವರ್ತಿ 30 ವರ್ಷ ಜೈಲಿನಲ್ಲಿದ್ದರು. ಸಾವರ್ಕರ್ ಅವರ ಸಹಕೈದಿಯಾಗಿದ್ದ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ; ಅಷ್ಟೇಕೆ ಬಿಡುಗಡೆಯಾದ ಅನತಿ ಕಾಲದಲ್ಲಿ ಮತ್ತೆ ಹೋರಾಟಕ್ಕೆ ಧುಮುಕಿದ್ದರು! ಎಲ್ಲಿಯ ಸಾವರ್ಕರ್, ಎಲ್ಲಿಯ ಚಕ್ರವರ್ತಿ?
ತ್ರೈಲೋಕ್ಯನಾಥ್ ಚಕ್ರವರ್ತಿ ಆಗಸ್ಟ್ 2, 1889ರಂದು ಜನಿಸಿದರು..ಚಕ್ರವರ್ತಿಯವರು ಕ್ರಾಂತಿಕಾರಿ ಸಂಘಟನೆಯಾಗಿದ್ದ ಅನುಶೀಲನ್ ಸಮಿತಿಗೆ 1906ರಲ್ಲಿ ಸೇರ್ಪಡೆಯಾದರು. 1908ರಲ್ಲಿ ಬಂಧನಕ್ಕೊಳಗಾದ ಅವರು ಮತ್ತೆ 1912ರಲ್ಲಿ ಕೊಲೆ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾದರು. 1914ರಲ್ಲಿ ಬಾರಿಸಾಲ್ ಬಂಡಾಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚಕ್ರವರ್ತಿಯವರನ್ನು ಸೀದಾ ಅಂಡಮಾನ್ ಜೈಲಿಗೆ ಕಳಿಸಲಾಯಿತು. ಸಾವರ್ಕರ್ ಸಹೋದರರು ಆಗ ಚಕ್ರವರ್ತಿಯವರೊಂದಿಗೇ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ಅಂಡಮಾನ್‌ನ ಜೈಲು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಲು ಕೈದಿಗಳು ನಿರ್ಧರಿಸಿದಾಗ ಚಕ್ರವರ್ತಿ ಈ ಹೋರಾಟದಲ್ಲಿ ಭಾಗಿಯಾದರು. ಈ ಬಗ್ಗೆ ತಮ್ಮ ಆತ್ಮ ಚರಿತ್ರೆಯಲ್ಲಿ ಹೀಗೆ ಬರೆಯುತ್ತಾರೆ.
‘‘ಅಂಡಮಾನ್‌ನ ಜೈಲು ಕೈದಿಗಳಲ್ಲಿ ಮಂದಗಾಮಿ ಮತ್ತು ತೀವ್ರಗಾಮಿ ಎಂದು ಎರಡು ಗುಂಪುಗಳಿದ್ದವು. ಮಂದಗಾಮಿ ಗುಂಪಿನಲ್ಲಿ ಸಾವರ್ಕರ್ ಸಹೋದರರು ಮತ್ತು ಪುಲಿನ್ ಬಾಬು ಇದ್ದರು. ಅವರಿಗೆ ಜೈಲಿನಲ್ಲಿ ಒಂದಷ್ಟು ಸೌಲಭ್ಯಗಳು ದೊರಕಿದ್ದವು. ಅವರು ಜೈಲರ್ ಮತ್ತು ಸುಪರಿಂಟೆಂಡೆಂಟ್ ಅವರಿಗೆ ಹತ್ತಿರವಾಗಿದ್ದರು. ತಮಗೆ ದಕ್ಕಿರುವ ಸವಲತ್ತು ಕಳೆದುಕೊಳ್ಳಲೂ ಅವರಿಗೆ ಮನಸ್ಸಿರಲಿಲ್ಲ.
1922ರಲ್ಲಿ ಬಿಡುಗಡೆಯಾಗಿ ಮತ್ತೆ ಕ್ರಮೋಹನ್ರಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ 1924ರಲ್ಲಿ ಬಂಧಿತರಾಗಿ ಮಾಂಡಲೇ ಜೈಲು ಸೇರಿದರು. ಅಲ್ಲಿ ಅವರಿಗೆ ನೇತಾಜಿ ಅವರ ಪರಿಚಯವಾಯಿತು. 1928ರಲ್ಲಿ ಬಿಡುಗಡೆಯಾಗಿ ಮತ್ತೆ ಅವರು ಹಿಂದುಸ್ತಾನ್ ರಿಪಬ್ಲಿಕನ್ ಆರ್ಮಿಯನ್ನು ಸೇರಿದರು. ಮತ್ತೆ 1930ರಲ್ಲಿ ಜೈಲು ಸೇರಿದ ಅವರು 1938ರಲ್ಲಿ ಬಿಡುಗಡೆ ಹೊಂದಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹೋರಾಟ ಮಾಡಿದ್ದಕ್ಕಾಗಿ ಮತ್ತೆ ಬಂಧಿತರಾದ ಚಕ್ರವರ್ತಿ 1946ರಲ್ಲಿ ಬಿಡುಗಡೆ ಹೊಂದಿದರು. ಆ ಬಳಿಕ ಅವರು ನೌಖಾಲಿಯಲ್ಲಿ ಪುನರ್ವಸತಿ ಕಾರ್ಯದಲ್ಲಿ ತೊಡಗಿದರು.
ದೇಶ ವಿಭಜನೆಯ ಬಳಿಕ ಅಂದಿನ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾ ದೇಶ)ನೆಲೆಸಿದ ಚಕ್ರವರ್ತಿ ಪಾಕಿಸ್ತಾನ್ ಸೋಷಿಯಲಿಸ್ಟ್ ಪಕ್ಷ ಸ್ಥಾಪಿಸಿದರು. ಪಾಕಿಸ್ತಾನದ ಅಸೆಂಬ್ಲಿ ಸದಸ್ಯರಾಗಿಯೂ ಆಯ್ಕೆಯಾದರು. 1958ರಲ್ಲಿ ಸೇನಾಡಳಿತ ಅವರ ಎಲ್ಲಾ ಚಟುವಟಿಕೆಗಳಿಗೆ ನಿಷೇಧ ಹೇರಿತು. ಅನಾರೋಗ್ಯ ಬಾಧಿಸುತ್ತಿದ್ದ ಕಾರಣ ಅವರು ತಮ್ಮ ಕೊನೆಯ ವರುಷಗಳನ್ನು ತಮ್ಮ ಹುಟ್ಟೂರಿನಲ್ಲಿ ಕಳೆದರು.ಹೃದಯ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದ ಅವರನ್ನು ಹೆಚ್ಚಿನ ವೈದ್ಯಕೀಯ ಶುಶ್ರೂಷೆಗಾಗಿ 1970ರಲ್ಲಿ ದಿಲ್ಲಿಗೆ ಕರೆತರಲಾಯಿತು. ಅವರು ತಮ್ಮ ಹಿಂದಿನ ಕ್ರಾಂತಿಕಾರಿ ಸಹಯೋಗಿ ಸುರೇಂದ್ರ ನೋಹನ್ ಘೋಷ್ ಅವರ ನಿವಾಸದಲ್ಲಿ ಆಗಸ್ಟ್ 9, 1970ರಂದು ಕೊನೆ ಉಸಿರೆಳೆದರು
ಪ್ರಧಾನಿ ಇಂದಿರಾ ಗಾಂಧಿ ಸಹಿತ ದೇಶವೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿತು.
ತ್ರೈಲೋಕ್ಯನಾಥ ಚಕ್ರವರ್ತಿ ಮತ್ತು ಸಾವರ್ಕರ್ ಒಂದೇ ಸಮಯದಲ್ಲಿ ಅಂಡಮಾನ್ ಜೈಲಿನಲ್ಲಿದ್ದರು. ಗಣೇಶ್ ಸಾವರ್ಕರ್ ಅವರಿಗೆ ಬೆಂಗಾಲಿ ಕಲಿಸಿ ಅವರಿಂದ ತಾನು ಮರಾಠಿ ಕಲಿತಿದ್ದರು.
ಆದರೆ ಚಕ್ರವರ್ತಿ ಕ್ಷಮೆ ಕೋರಿ ಪತ್ರ ಬರೆಯಲಿಲ್ಲ. ಅಷ್ಟೇಕೆ ಪ್ರತೀ ಬಾರಿ ಬಿಡುಗಡೆಯಾದಾಗಲೂ ಮತ್ತೆ ಮತ್ತೆ ಸ್ವಾತಂತ್ರ್ಯ ಚಳವಳಿಗೆ ಧುಮುಕುತ್ತಿದ್ದರು.
ಎರಡನೇ ಮಹಾಯುದ್ಧದ ವೇಳೆಗೆ ದೊಡ್ಡ ಸಶಸ್ತ್ರ ಹೋರಾಟ ನಡೆಸಲು ನೇತಾಜಿಗೆ ಸಹಾಯ ಮಾಡುವ ಉದ್ದೇಶದಿಂದ ಚಕ್ರವರ್ತಿಯವರು ಹೆಡಗೇವಾರ್ ಮತ್ತು ಸಾವರ್ಕರ್ ಅವರನ್ನು ಸಂಪರ್ಕಿಸಿದ್ದರು. ಇಬ್ಬರಿಂದಲೂ ನಿರಾಕರಣೆಯ ಉತ್ತರ ಬಂದ ಕಾರಣ ನಿರಾಸೆಗೊಳಗಾಗಿದ್ದರು.
►ಭಗತ್ ಸಿಂಗ್ ಸಂಗಾತಿ ಶಿವ ವರ್ಮಾ
ಶಿವ ವರ್ಮಾ ಜನವರಿ 9, 1904ರಲ್ಲಿ ಇಂದಿನ ಉತ್ತರ ಪ್ರದೇಶದಲ್ಲಿ ಜನಿಸಿದರು. ತಮ್ಮ 17ನೇ ವಯಸ್ಸಿನಲ್ಲಿ ಅವರು ಅಸಹಕಾರ ಚಳವಳಿಯಲ್ಲಿ ಭಾವಹಿಸಿದರು. ಆ ಕಾಲಕ್ಕೆ ಕಾನ್ ಪುರ ಕ್ರಾಂತಿಕಾರಿಗಳ ತೊಟ್ಟಿಲಾಗಿತ್ತು. ಇಲ್ಲೇ ಶಚೀಂದ್ರನಾಥ್ ಸನ್ಯಾಲ್ ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‌ನ್ನು ಸ್ಥಾಪಿಸಿದ್ದರು. ಶಿವ ವರ್ಮಾ, ಜೈದೇವ್ ಕಪೂರ್ ಮತ್ತಿತರ ಯುವಕರು ಸಹಜವಾಗಿಯೇ ಈ ಸಂಘಟನೆ ಸೇರಿದ್ದರು. ಆ ವೇಳೆಗೆ ಶಿವ್ ವರ್ಮಾ ಕಾಲೇಜು ಓದುತ್ತಿದ್ದರು.
ವರ್ಮಾ ನಿಧಾನಕ್ಕೆ ಸಮಾಜವಾದದೆಡೆಗೆ ಆಕರ್ಷಿತರಾದರು. ಇನ್ನೊಬ್ಬ ಕ್ರಾಂತಿಕಾರಿ ರಾಧಾ ಮೋಹನ್ ಗೋಕುಲ್ ವರ್ಮಾ ಅವರ ಸೈದ್ಧಾಂತಿಕ ಗುರುವಾಗಿ ಪುಸ್ತಕಗಳನ್ನು ನೀಡಿ ಓದಿಸಿದರು. 1925ರಲ್ಲಿ ಚಂದ್ರಶೇಖರ್ ಆಝಾದ್ ಅವರನ್ನು ವರ್ಮಾ ಭೇಟಿಯಾದರು. 1927ರಲ್ಲಿ ಸಂಘಟನೆಯ ಕೆಲಸಕ್ಕಾಗಿ ಬಂದಿದ್ದ ಭಗತ್ ಸಿಂಗ್ ಅವರನ್ನೂ ವರ್ಮಾ ಭೇಟಿಯಾದರು. ಡಿಸೆಂಬರ್ 19ರಂದು ರಾಮಪ್ರಸಾದ್ ಬಿಸ್ಮಿಲ್ಲಾ ಅವರನ್ನು ಗಲ್ಲಿಗೆ ಹಾಕುವ ದಿನ ನಿಗದಿಯಾಗಿತ್ತು.ಅದರ ಮೊದಲು ಬಿಸ್ಮಿಲ್ಲಾ ಅವರನ್ನು ಭೇಟಿಯಾಗಲು ಅವರ ತಾಯಿಗೆ ಅವಕಾಶ ನೀಡಿದ್ದರು.
ಅವರ ತಾಯಿಯಲ್ಲಿ ತಾನೂ ಬಿಸ್ಮಿಲ್ಲಾರನ್ನು ಭೇಟಿಯಾಗಬೇಕೆಂದು ಗೋಗರೆದು ಆಕೆಯ ಸಂಬಂಧಿ ಎಂಬ ಸುಳ್ಳು ಹೆಸರಲ್ಲಿ ವರ್ಮಾ ಬಿಸ್ಮಿಲ್ಲಾರನ್ನು ಭೇಟಿಯಾಗಿ ಕ್ರಾಂತಿಯ ಚಟುವಟಿಕೆ ಬಗ್ಗೆ ಬಿಸ್ಮಿಲ್ಲಾಗೆ ವಿವರಿಸಿದ್ದರು. ಕ್ರಾಂತಿಯ ಚಟುವಟಿಕೆ ಮುಂದುವರಿಯಲಿದೆ ಎಂದು ಬಿಸ್ಮಿಲ್ಲಾಗೆ ಭರವಸೆ ನೀಡುವುದು ಈ ಭೇಟಿಯ ಉದ್ದೇಶವಾಗಿತ್ತು. ಇದರ ಭಾಗವಾಗಿಯೇ 1928ರಲ್ಲಿ ವರ್ಮಾ ಬಾಂಬು ತಯಾರಿಕಾ ತರಬೇತಿ ಪಡೆದರು. ಕಾಕೋರಿ ಸಂಚು ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕ್ರಾಂತಿಕಾರಿಗಳ ಬಿಡುಗಡೆಯ ಯತ್ನದಲ್ಲಿ ವರ್ಮಾ ಕಾರ್ಯಶೀಲರಾಗಿದ್ದಾಗ ಪೊಲೀಸರು ಬೆನ್ನು ಹತ್ತಿರುವ ಮಾಹಿತಿ ಬಂದು, ಅಲ್ಲಿಂದಾಚೆಗೆ ಭೂಗತರಾಗಿಯೇ ಕೆಲಸ ಮಾಡಬೇಕಾಗಿ ಬಂದಿತು.
ಸಂಸತ್ತಿಗೆ ಹುಸಿ ಬಾಂಬು ಎಸೆದು ಭಗತ್ ಸಿಂಗ್ ಮತ್ತು ದತ್ ಬಂಧನಕ್ಕೊಳಗಾದಾಗ ಚಂದ್ರಶೇಖರ್ ಆಝಾದ್, ವರ್ಮಾ ಸಹಿತ ಎಲ್ಲಾ ಕ್ರಾಂತಿಕಾರಿಗಳೂ ಚದುರಿ ಭೂಗತರಾದರು. ಸಹ್ರಾನ್ ಪುರದಲ್ಲಿ ಬಾಂಬು ತಯಾರಿಕಾ ಘಟಕವೊಂದನ್ನು ಸ್ಥಾಪಿಸಿ ಬಾಂಬು ತಯಾರಿಸುವ ಜವಾಬ್ದಾರಿ ವರ್ಮಾ ಅವರದ್ದಾಗಿತ್ತು. ತಮ್ಮ ಸಹಾನುವರ್ತಿಗಳಾಗಿದ್ದ ಗಯಾಪ್ರಸಾದ್ ಮತ್ತು ಜೈದೇವ್ ಕಪೂರ್ ಅವರೊಂದಿಗೆ ವೈದ್ಯಕೀಯ ಕ್ಲಿನಿಕ್ ಒಂದನ್ನು ಮರೆಮಾಚಲು ತೆರೆದು ಒಳಗೆ ಬಾಂಬು ತಯಾರಿಸುವುದು ಯೋಜನೆಯಾಗಿತ್ತು. 1929ರ ಮೇಯಲ್ಲಿ ಈ ಕ್ಲಿನಿಕ್‌ನ ಅಸಹಜ ಚಟುವಟಿಕೆ ಬಗ್ಗೆ ಗುಮಾನಿ ಬಂದು ಪೊಲೀಸ್ ದಾಳಿ ನಡೆದು ವರ್ಮಾ ಬಂಧಿತರಾದರು.
ವಿಚಿತ್ರ ಯೋಗಾಯೋಗವೆಂಬಂತೆ ಸ್ವಲ್ಪ ಕಾಲ HSRAಯ ಹಲವು ಕ್ರಾಂತಿಕಾರಿಗಳು ಲಾಹೋರ್ ಜೈಲಲ್ಲೇ ಇದ್ದರು! ಅಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಆರಂಭಿಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ವರ್ಮಾ ಮತ್ತಿತರರೂ ಭಾಗಿಯಾದರು. ಪೊಲೀಸರು ಒತ್ತಾಯಪೂರ್ವಕ ಆಹಾರ ತಿನ್ನಿಸಲು ನೋಡಿ ಜತಿನ್ ದಾಶ್ ಸತ್ತೇ ಹೋದರೆ ವರ್ಮಾ ಅವರ ಸ್ಥಿತಿ ದಾರುಣವಾಗಿತ್ತು.
ಲಾಹೋರ್ ಒಳಸಂಚು ಪ್ರಕರಣದ ತೀರ್ಪು ಅಕ್ಟೋಬರ್ 1930ಕ್ಕೆ ಪ್ರಕಟವಾಗಿ ವರ್ಮಾ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಜೈಲಿಲ್ಲಿದ್ದಾಗ ಯಾರೊ ಒಬ್ಬ ಪುಣ್ಯಾತ್ಮ ಜೈಲರ್ ವರ್ಮಾ ಅವರಿಗೆ ಭಗತ್ ಸಿಂಗ್ ಭೇಟಿಗೆ ಅವಕಾಶ ನೀಡಿದ್ದ.
ಈ ಅವಿಸ್ಮರಣೀಯ ಭೇಟಿಯಲ್ಲಿ ವರ್ಮಾ ಅವರ ಕಣ್ಣಾಲಿ ತುಂಬಿದಾಗ ಭಗತ್, ‘‘ಶಿವ,ಇದು ಭಾವುಕ ಆಗುವ ಸಮಯವಲ್ಲ, ಇನ್ನು ಕೆಲವೇ ದಿನಗಳಲ್ಲಿ ನನ್ನ ಕಷ್ಟಗಳೆಲ್ಲಾ ಮಾಯವಾಗುತ್ತವೆ. ಆದರೆ ನೀವೆಲ್ಲಾ ಕಠಿಣ ಹಾದಿ ಕ್ರಮಿಸಲು ಸಿದ್ಧರಾಗಬೇಕಿದೆ. ಯಾವ ಕಾರಣಕ್ಕೂ ದಣಿಯಬೇಡಿ; ಕೈ ಬಿಡಲು ನಿರ್ಧರಿಸಬೇಡಿ’’ ಎಂದು ಹೇಳಿದ್ದರು.
ವರ್ಮಾ ಅವರನ್ನು ಆಂಧ್ರಪ್ರದೇಶದ ರಾಜಮುಂದ್ರಿ ಜೈಲಲ್ಲಿಟ್ಟು ತರುವಾಯ ಅಂಡಮಾನ್‌ಗೆ ದಬ್ಬಲಾಯಿತು. ಅಂಡಮಾನ್‌ನಲ್ಲಿ ವರ್ಮಾ ಇತರ ಸಹಕೈದಿ ಕ್ರಾಂತಿಕಾರಿಗಳೊಂದಿಗೆ 1933ರಲ್ಲಿ ಕೈದಿಗಳ ಸ್ಥಿತಿಗತಿ ಸುಧಾರಣೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಈ ಸತ್ಯಾಗ್ರಹದಲ್ಲಿ ಮಹಾಬೀರ್ ಸಿಂಗ್, ಮೋಹಿತ್ ಮೈತ್ರ ಸಹಿತ ಕೆಲವು ಕ್ರಾಂತಿಕಾರಿಗಳು ಸಾವನ್ನಪ್ಪಿದರು. ಕೊನೆಗೂ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರಕಾರ ಕೈದಿಗಳಿಗೆ ಸೋಪು, ಹಾಸಿಗೆ , ಉತ್ತಮ ಊಟ ಸಹಿತ, ರಾಜಕೀಯ ಕೈದಿಗಳಿಗೆ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಪೂರೈಸಲು ಒಪ್ಪಿಕೊಂಡಿತು. ಹಾಗೆಯೇ ಕೈದಿಗಳು ಪರಸ್ಪರ ಭೇಟಿಯಗಲೂ ಅನುಮತಿ ನೀಡಿತು.
ಅಂಡಮಾನ್‌ನಲ್ಲಿ ಎಂಥಾ ಅಧ್ಯಯನ ಕೇಂಧ್ರ ಶುರುವಾಯಿತೆಂದರೆ ಹತ್ತಾರು ಕೈದಿಗಳು ಸೈದ್ಧಾಂತಿಕ ಚರ್ಚೆಯಲ್ಲಿ ಆಳವಾಗಿ ತೊಡಗಿದ್ದರು. 1937ರಲ್ಲಿ ಮತ್ತೆ ವರ್ಮಾ ಮತ್ತು ಹರೇ ಕೃಷ್ಣ ಕೋನಾರ್ ನೇತೃತ್ವದಲ್ಲಿ ಕ್ರಾಂತಿಕಾರಿಗಳು 37 ದಿನಗಳ ಉಪವಾಸ ಸತ್ಯಾಗ್ರಹ ಕೈಗೊಂಡರು. ಈ ಉಪವಾಸ ದೇಶದ ಗಮನ ಸೆಳೆದು, ಟಾಗೋರ್, ಗಾಂಧಿ ಮತ್ತಿತರ ನಾಯಕರು ಒತ್ತಡ ತಂದ ಪರಿಣಾಮವಾಗಿ ಅಂಡಮಾನ್ ಜೈಲನ್ನು 1938ರಲ್ಲಿ ಶಾಶ್ವತವಾಗಿ ಮುಚ್ಚಲಾಯಿತು. ವರ್ಮಾ ಅವರನ್ನು 1937ರಲ್ಲೇ ಭಾರತದ ಜೈಲಿಗೆ ಸ್ಥಳಾಂತರಗೊಳಿಸಿದರೂ ಅವರನ್ನು ಬಿಡುಗಡೆಗೊಳಿಸಿದ್ದು 1945ರಲ್ಲಿ.
1948ರಲ್ಲಿ ಉತ್ತರಪ್ರದೇಶದ ಕಮ್ಯುನಿಸ್ಟ್ ಪಕ್ಷದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ವರ್ಮಾ 1948, 1962, 1965ರಲ್ಲಿ ಕಾರ್ಮಿಕ ಹೋರಾಟಗಳ ಕಾರಣಕ್ಕೆ ಬಂಧನಕ್ಕೊಳಗಾದರು. 1971ರಲ್ಲಿ ಸಿಪಿಎಂ ಪಕ್ಷದ ವತಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ವರ್ಮಾ ಅವರು ಸಿಪಿಐ ಬೆಂಬಲಿತ ಅಭ್ಯರ್ಥಿಯಿಂದಲೇ ಸೋಲಪ್ಪಬೇಕಾಯಿತು. ಕಮ್ಯುನಿಸ್ಟ್ ಪಕ್ಷದ ಮುಖವಾಣಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ವರ್ಮಾ ಲಕ್ನೊದಲ್ಲಿ ಹುತಾತ್ಮರ ಸ್ಮಾರಕ ಮತ್ತು ಸ್ವಾತಂತ್ರ್ಯ ಹೋರಾಟ ಸಂಶೋಧನಾ ಕೇಂದ್ರದ ಟ್ರಸ್ಟಿಯಾಗಿದ್ದರು.
ವರ್ಮಾ 1997ರ ಜನವರಿ 10ರಂದು ಮೃತಪಟ್ಟರು.
►ಬಟುಕೇಶ್ವರ ದತ್
ಬಟುಕೇಶ್ವರ್ ದತ್-ಬಿ.ಕೆ.ದತ್- ನವೆಂಬರ್ 10, 1910ರಂದು ಪಶ್ಚಿಮ ಬಂಗಾಲದ ಪೂರ್ಬ ಬರ್ಧಮಾನ್ ಜಿಲ್ಲೆಯ ಖಂದಘೋಷ್ ಗ್ರಾಮದಲ್ಲಿ ಜನಿಸಿದರು. ಕಾನ್ಪುರ್ ಹೈಸ್ಕೂಲ್‌ನಲ್ಲಿ ಮೆಟ್ರಿಕ್ ಪೂರೈಸುವ ವೇಳೆಗೆ ಅವರಿಗೆ ಚಂದ್ರಶೇಖರ್ ಆಝಾದ್ ಪರಿಚಯವಾಗಿತ್ತು. ಅನತಿ ಕಾಲದಲ್ಲಿ ಅವರು ಭಗತ್ ಸಿಂಗ್‌ನ
ಆತ್ಮೀಯ ಕಾಮ್ರೇಡ್ ಆದರು. 1924ರಲ್ಲಿ ಕಾನ್ಪುರ ಪ್ರವಾಹಕ್ಕೀಡಾದಾಗ ಭಗತ್ ಮತ್ತು ದತ್ ಸ್ವಯಂಸೇವಕರಾಗಿ ಕೆಲಸ ಮಾಡಿದರು. ರಾತ್ರಿ ಲಾಟೀನ್ ಹಿಡಿದು ಗಂಗಾ ತಟದಲ್ಲಿ ಕಾವಲು ಕಾಯುತ್ತಾ ನದಿಗೆ ಆಕಸ್ಮಿಕವಾಗಿ ಇಳಿದವರನ್ನು ದಡಕ್ಕೆ ತರುವ, ಎಚ್ಚರಿಸುವ ಕೆಲಸ ಮಾಡಿದ್ದರು.
ಈ ಪ್ರಸಂಗ ಅವರ ಸ್ನೇಹವನ್ನು ಗಟ್ಟಿಗೊಳಿಸಿತು. ಭಗತ್‌ಗೆ ದತ್ತ ಬೆಂಗಾಲಿ ಕಲಿಸಿದ್ದಷ್ಟೇ ಅಲ್ಲ ಬಂಗಾಳದ ಕ್ರಾಂತಿಕಾರಿ ಕವಿ ಕಾಝಿ ನಸ್ರುಲ್ ಇಸ್ಲಾಮ್ ಅವರ ಕವಿತೆಗಳನ್ನೂ ಕಲಿಸಿದ್ದರು.
ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ (HSRA)ನ ಸಕ್ರಿಯ ಸದಸ್ಯರಾದ ದತ್ ಬಾಂಬು ತಯಾರಿಕೆಯಲ್ಲಿ ಪರಿಣಿತಿ ಹೊಂದಿದರು. ಸಂಘಟನೆಯ ಹಲವು ಕರಪತ್ರಗಳನ್ನೂ ದತ್ತ ಬರೆದಿದ್ದರು.
ಬ್ರಿಟಿಷ್ ಸರಕಾರ ಎರಡು ಕಠೋರ ಕಾನೂನು ತರುವ ಇರಾದೆ ಹೊಂದಿದ್ದು, ಒಂದಂತೂ ಯಾವುದೇ ಬಗೆಯ ಮುಷ್ಕರವನ್ನೂ ಸರಕಾರದ ವಿರುದ್ಧ ಬಂಡಾಯ ಎಂದು ಪರಿಗಣಿಸುವ ವ್ಯಾಖ್ಯೆ ಹೊಂದಿತ್ತು. ಸಂಸತ್ತಿನಲ್ಲಿ ಇದು ಮಂಡನೆಯಾಗಿ ಅಂಗೀಕಾರ ಆಗುವ ಸಾಧ್ಯತೆ ಇತ್ತು. ಇದನ್ನು ನಾಟಕೀಯವಾಗಿ ವಿರೊಧೀಸುವ ಮೂಲಕ ದೇಶದ ಗಮನ ಸೆಳೆಯಲು ಭಗತ್ ಮತ್ತು ಆತನ ಸಂಗಾತಿಗಳು ನಿರ್ಧರಿಸಿದ್ದರು. ಅಸೆಂಬ್ಲಿಗೆ ಹುಸಿಬಾಂಬು ಎಸೆದಿದ್ದು ಈ ಪ್ರಕಾರ.
1929ರಲ್ಲಿ ಭಗತ್ ಸಿಂಗ್, ಸುಖ್ ದೇವ ಮತ್ತು ದತ್ ಅಸೆಂಬ್ಲಿಯಲ್ಲಿ ಹುಸಿ ಬಾಂಬು ಎಸೆದು ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿ ಕರಪತ್ರ ಎಸೆದು ಬ್ರಿಟಿಷ್ ಸರಕಾರವನ್ನು ಬೆಚ್ಚಿ ಬೀಳಿಸಿದರಷ್ಟೇ.
ಈ ಪ್ರಕರಣದಲ್ಲಿ ಭಗತ್ ಸಿಂಗ್, ಸುಖ್ ದೇವ ಮತ್ತು ರಾಜಗುರು ನೇಣುಗಂಬಕ್ಕೇರಿದರೆ, ದತ್ ಅವರಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಅಂತೆಯೇ ಅವರನ್ನು ಅಂಡಮಾನ್ ಜೈಲಿಗೆ ಕಳಿಸಲಾಯಿತು.
ಅಂಡಮಾನ್‌ನಲ್ಲಿ ದತ್ತ ಪೂರ್ಣ ಸಮಾಜವಾದಿಯಾಗಿ ರೂಪಾಂತರ ಹೊಂದಿದರು. ಅಲ್ಲಿನ ಅಧ್ಯಯನ ಕೇಂದ್ರವನ್ನು (ಅದರ ಹೆಸರು- ಕಮ್ಯುನಿಸ್ಟ್ ಕ್ರೋಡೀಕರಣ- Communist Consolidation) ಸ್ಥಾಪಿಸುವುದರಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದರು. ಅಲ್ಲಿ ‘ಕರೆ’ (The Call) ಎಂಬ ಕೈಬರಹದ ಪತ್ರಿಕೆಯನ್ನೂ ದತ್ತ ಬರೆದರೆ, ಜಯದೇವ್ ಕಪೂರ್ ಅದರ ಸಂಪಾದಕರಾಗಿದ್ದರು.
ವಿಚಾರಣಾಧೀನ ಕೈದಿಗಳಾಗಿದ್ದಾಗಲೇ ರಾಜಕೀಯ ಕೈದಿಗಳ ಸ್ಥಿತಿಗತಿ ಸುಧಾರಿಸಬೇಕೆಂದು ಭಗತ್ ಸಿಂಗ್ ಮತ್ತು ಬಿ.ಕೆ. ದತ್ ಉಪವಾಸ ಸತ್ಯಾಗ್ರ ಹ ಕೈಗೊಂಡಿದ್ದರು. ಬಳಿಕ ಅಂಡಮಾನ್‌ಗೆ
ರವಾನಿಸಲ್ಪಟ್ಟರು. 1937ರಲ್ಲಿ ಅಂಡಮಾನ್‌ನಿಂದ ದಿಲ್ಲಿ ಜೈಲಿಗೆ ದತ್ ಅವರನ್ನು ಸ್ಥಳಾಂತರಿಸಲಾಯಿತು. ಅವರ ಆರೋಗ್ಯ ತೀವ್ರ ಹದಗೆಟ್ಟ ಕಾರಣ 1938ರಲ್ಲಿ ದತ್ ಅವರನ್ನು ಬ್ರಿಟಿಷ್ ಸರಕಾರ ಬಿಡುಗಡೆ ಮಾಡಿತು.
ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಎಚ್ಚರಿಕೆ ಸಹಿತ ದತ್ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆಗಲೇ ದತ್ ಕ್ಷಯರೋಗದಿಂದ ಬಳಲುತ್ತಿದ್ದರು. ಆದರೂ ಬಿ.ಕೆ. ದತ್ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದರು. ಈ ಕಾರಣಕ್ಕೆ ಮತ್ತೆ ಬ್ರಿಟಿಷ್ ಸರಕಾರ ದತ್ ಅವರನ್ನು ನಾಲ್ಕು ವರ್ಷ ಕಾಲ ಜೈಲಿಗೆ ತಳ್ಳಿತು. 1946ರಲ್ಲಿ ದತ್ ಜೈಲಿನಿಂದ ಬಿಡುಗಡೆ ಹೊಂದಿದರು.
ಸ್ವಾತಂತ್ರ್ಯಾನಂತರ ದತ್ ಜೀವನೋಪಾಯಕ್ಕೆ ಸಾರಿಗೆ ಏಜೆನ್ಸಿ ಇತ್ಯಾದಿ ಶುರು ಮಾಡಿದರೂ ಯಾವುದೂ ಕೈಗೆ ಹತ್ತಲಿಲ್ಲ. ಅವರ ಆರೋಗ್ಯ ಮತ್ತೆ ಮತ್ತೆ ಕೈಕೊಡುತ್ತಿತ್ತು.
1938ರಲ್ಲಿ ಉಳಿದ ಕ್ರಾಂತಿಕಾರಿಗಳೆಲ್ಲಾ ಒಗ್ಗೂಡಿ ಮೇ 1939ರಲ್ಲಿ ಉನಾವೋ ಜಿಲ್ಲೆಯ ಮುಕಾರ್ ನಲ್ಲಿ ಮೂರು ದಿನಗಳ ಚಾರಿತ್ರಿಕ ಸಮಾವೇಶ ಸಂಘಟಿಸಿದರು. ದೇಶದ ಬಹುತೇಕ ಕಮ್ಯುನಿಸ್ಟ್ ಕ್ರಾಂತಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ದತ್ ಈ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
1965ರಲ್ಲಿ ದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಿ.ಕೆ. ದತ್ ಕೊನೆ ಉಸಿರೆಳೆದರು.
ಅವರ ಕೊನೆ ದಿನಗಳ ಅನಾರೋಗ್ಯದ ಅವಧಿಯಲ್ಲಿ ಭಗತ್ ಸಿಂಗ್ ಅವರ ತಾಯಿ ಬಿ.ಕೆ. ದತ್ ಅವರ ಬಳಿ ಇರುತ್ತಿದ್ದರು.
ತಾನು ಸತ್ತಾಗ ತನ್ನನ್ನು ಭಗತ್ ಸಿಂಗ್ ಸಮಾಧಿಯ ಬಳಿ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ದತ್ ಕೋರಿಕೆಯಂತೆ ಭಗತ್ ಸಿಂಗ್ ಸಮಾಧಿಯ ಬಳಿಯೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ದಿಲ್ಲಿಯಿಂದ ಪಂಜಾಬಿನ ವರೆಗಿನ ದತ್ ಅವರ ಪಾರ್ಥಿವ ಶರೀರದ ಮೆರವಣಿಗೆ ಆ ಕಾಲದಲ್ಲಿ ಅತ್ಯಂತ ಹೆಚ್ಚು ಜನ ಭಾಗವಹಿಸಿದ್ದ ಮೆರವಣಿಗೆಯೆಂದೇ ಪರಿಗಣಿತವಾಗಿದೆ.
ಆಸ್ಪತ್ರೆಯಲ್ಲಿ ತನ್ನನ್ನು ಭೇಟಿ ಮಾಡಲು ಬಂದಿದ್ದ ಅಂದಿನ ರಾಷ್ಟ್ರಪತಿ ಮತ್ತು ಪ್ರಧಾನಿಯವರಲ್ಲಿ ಬಿ.ಕೆ.ದತ್, ‘‘ ನೀವು ಕ್ರಾಂತಿಕಾರಿಗಳೆಂದರೆ ಬಂದೂಕು ಹಿಡಿದವರೆಂದಷ್ಟೇ ಯೋಚಿಸುತ್ತೀರಿ. ಅವರು ಕನಸು ಕಂಡಿದ್ದ ಸಮಾಜದ ಚಿತ್ರವನ್ನೇ ಮರೆಯುತ್ತೀರಿ’’ ಎಂದಿದ್ದರು.