×
Ad

ಅಧಿಕಾರಿಗಳ ನಿರಾಸಕ್ತಿ: ಪ್ರಾರಂಭವಾಗದ ಮಹಿಳಾ ಪದವಿ ಪೂರ್ವ ಕಾಲೇಜು

ಕಟ್ಟಡ ಪೂರ್ಣಗೊಂಡು 8 ವರ್ಷವಾದರೂ ಇಲಾಖೆಗೆ ಹಸ್ತಾಂತರವಿಲ್ಲ

Update: 2025-09-09 10:11 IST

ರಾಯಚೂರು: ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಯ ಸುಧಾರಣೆಗಾಗಿ ನಗರದ ಆಶ್ರಯ ಕಾಲನಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಿರ್ಮಿಸಿದ ಮಹಿಳಾ ಪದವಿಪೂರ್ವ ಕಾಲೇಜು ಕಟ್ಟಡ ಅಧಿಕಾರಿಗಳ ನಿರಾಸಕ್ತಿಯಿಂದ ಹಸ್ತಾಂತರಗೊಂಡಿಲ್ಲ.

ರಾಯಚೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದು , ಇಲ್ಲಿನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಡತನ,ಅನಕ್ಷರತೆ ಹಾಗೂ ನಾನಾ ಕಾರಣಗಳಿಂದ ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂಬ ನಿಟ್ಟಿನಲ್ಲಿ 2014-15ನೇ ಸಾಲಿನಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ತನ್ವೀರ್ ಸೇಠ್ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಗರದ 8 ಕಡೆ ಜಾಗ ಗುರುತಿಸಿ ಶೈಕ್ಷಣಿಕ ಕಟ್ಟಡಗಳನ್ನು ನಿರ್ಮಿಸಿದ್ದರು. ಈ ಪೈಕಿ ನಗರದ ಆಶ್ರಯ ಕಾಲನಿ ಮಹಿಳಾ ಪದವಿ ಪೂರ್ವ ಕಾಲೇಜು ಕೂಡ ಒಂದಾಗಿದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗಾಗಿ ‘ಬಹು ವಲಯ ಅಭಿವೃದ್ಧಿ ಕಾರ್ಯಕ್ರಮ’ (ಎಂಎಸ್ ಡಿ) 84 ಲಕ್ಷ ರೂ. ವೆಚ್ಚದಲ್ಲಿ ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಗುತ್ತಿಗೆ ಸಂಸ್ಥೆಯಿಂದ ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಅಡಿಗಲ್ಲು ಹಾಕಲಾಗಿತ್ತು. ಇದು 2017ರಂದು ಪೂರ್ಣಗೊಂಡಿದೆ. ಆದರೆ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳ ನಿಷ್ಕಾಳಜಿಯಿಂದ ಇದುವರೆಗೆ ಇಲ್ಲಿ ಕಾಲೇಜು ಆರಂಭವಾಗಿಲ್ಲ.

ಮೂಲ ಮಾಲಕರ ನಿರ್ಲಕ್ಷ್ಯ ಅನ್ಯರ ಪಾಲಾದ ಕಟ್ಟಡ: ಮಹಿಳಾ ಕಾಲೇಜು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಸ್ತಿಯಾಗಿದ್ದರೂ, ಇಲ್ಲಿ ಕಾರ್ಯಾರಂಭವಾಗದ ಕಾರಣ ಈ ಕಟ್ಟಡದಲ್ಲಿ ಈಗ ಎಲ್‌ಬಿಎಸ್ ನಗರದ ಅಲ್ಲಮಪ್ರಭು ಕಾಲನಿಯ ಪ್ರೌಢಶಾಲೆಯ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಎಲ್‌ಬಿಎಸ್ ನಗರದಲ್ಲಿರುವ ಅಲ್ಲಮಪ್ರಭು ಕಾಲನಿಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿಗಳ ಕೊರತೆಯಿಂದಾಗಿ ಚಂದ್ರಬಂಡಾ ರಸ್ತೆಯ ಸಂತೋಷ ನಗರ ಲೇಔಟ್‌ನ ಸಿಎ ಸೈಟ್ ಪ್ರೌಢಶಾಲೆಗೆ ಮಂಜೂರು ಮಾಡಲಾಗಿತ್ತು. ಆದರೆ ಈ ಸೈಟ್‌ನ್ನು ಸ್ಥಳೀಯ ಕೆಲವರು ಸರಕಾರಿ ಶಾಲೆ ನಿರ್ಮಾಣಕ್ಕೆ ಅಡ್ಡಿ ಪಡಿಸಿ ಚಿಕ್ಕದಾದ ಶೆಡ್ ನಿರ್ಮಿಸಿಕೊಂಡು ದೇವಸ್ಥಾನದ ರೂಪ ನೀಡಿ ಒತ್ತುವರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಹೀಗಾಗಿ ತಾತ್ಕಾಲಿಕವಾಗಿ ಅಲ್ಲಮಪ್ರಭು ಪ್ರೌಢಶಾಲೆಯನ್ನು ಆಶ್ರಯ ಕಾಲನಿಯ ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ ಸ್ಥಳಾಂತರಗೊಳಿಸಿ ಭೋಧನೆ ಮಾಡಲಾಗುತ್ತಿದೆ.

ಶಿಕ್ಷಣ ಪ್ರೇಮಿಗಳ,ದಲಿತ,ಪ್ರಗತಿಪರ ಸಂಘಟನೆಗಳ ನಿರಂತರ ಹೋರಾಟದ ಪರಿಣಾಮ ಈಗ ಸಂತೋಷ ನಗರದಲ್ಲಿ ಪ್ರೌಢಶಾಲೆ ನಿರ್ಮಾಣ ಮಾಡಿದರೂ ಉದ್ಘಾಟಿಸದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಸಂಘಟನೆಗಳ ಮುಖಂಡರಿಂದ ಇತ್ತೀಚೆಗೆ ರಾಯಚೂರು ಪ್ರವಾಸದಲ್ಲಿದ್ದ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಆಶ್ರಯಕ್ಕಾಗಿ ನೀಡಿದ ಕಟ್ಟಡದಲ್ಲಿಯೇ ವಾಸಮಾಡುವಂತಾಗಿದೆ.

ಕಟ್ಟಡ ಪೂರ್ಣಗೊಂಡು 8 ವರ್ಷವಾದರೂ ಹಸ್ತಾಂತರವಿಲ್ಲ: ಕ್ಯಾಷುಟೆಕ್ ನಿರ್ಮಿತಿಕೇಂದ್ರ ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ 2016ರಲ್ಲಿ ಆರಂಭಿಸಿ 2017ರಲ್ಲಿ ಪೂರ್ಣಗೊಳಿಸಿದೆ. ಆದರೆ ಈ ಕಟ್ಟಡ ಇನ್ನೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರವಾಗಿಲ್ಲ. ಆಶ್ರಯ ಕಾಲೊನಿಯೂ ನಗರ ಪ್ರದೇಶದಿಂದ ಸುಮಾರು 6 ಕಿ.ಮೀ. ದೂರವಿದ್ದು ಬಡ, ಮಧ್ಯಮ, ಆಟೊ ಚಾಲಕರ, ದಿನಗೂಲಿ ಮಾಡುವವರೇ

ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು ಮಹಿಳಾ ಕಾಲೇಜು ಉದ್ಘಾಟನೆಯಾದರೆ ಅನುಕೂಲವಾಗಲಿದೆ. ಈಗ ಆಟೊ ಹಾಗೂ ಖಾಸಗಿ ಬಸ್‌ಗಳಲ್ಲಿ ನಗರಕ್ಕೆ ಹೋಗಿ ವಿದ್ಯಭ್ಯಾಸ ಮಾಡುತ್ತಿದ್ದು ಅನೇಕ ಪಾಲಕರು ಹೆಣ್ಣು ಮಕ್ಕಳಿಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯಸರಕಾರ ಶೈಕ್ಷಣಿಕ ಸುಧಾರಣೆಗ ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದರೂ ಅಧಿಕಾರಿಗಳ ನಿರಾಸಕ್ತಿಯಿಂದ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಆಶ್ರಯ ಕಾಲನಿಯಲ್ಲಿ ನಿರ್ಮಿಸಿದ ಮಹಿಳಾ ಪದವಿ ಪೂರ್ವ ಕಾಲೇಜು ನಮಗೆ ಹಸ್ತಾಂತರಿಸುವಂತೆ ಹಿರಿಯ ಅಧಿಕಾರಗಳ ಗಮನಕ್ಕೆ ತಂದು ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಬೋಧನೆ ಪ್ರಾರಂಭಿಸಲಾಗುವುದು.

-ಪ್ರವೀಣ್ ಕುಮಾರ್, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ರಾಯಚೂರು

ಮಾಜಿ ಸಚಿವ ತನ್ವೀರ್ ಸೇಠ್ ಅವರ ವಿಶೇಷ ಕಾಳಜಿಯಿಂದ ಅಲ್ಪಸಂಖ್ಯಾತರ ಮಹಿಳಾ ಪದವಿ ಪೂರ್ವ ಕಾಲೇಜು ನಿರ್ಮಾಣವಾಗಿದ್ದು, ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ನಡೆಸಲಾಗುವುದು.

-ಡಾ.ರಝಾಕ್ ಉಸ್ತಾದ್, ಮುಖಂಡ, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಾವಸಲಿ,ರಾಯಚೂರು

contributor

Similar News