×
Ad

‘ಆಪರೇಷನ್ ಸಿಂಧೂರ’: ಕಾರ್ಯಾಚರಣೆಯ ಸುತ್ತಮುತ್ತ..

Update: 2025-05-08 11:55 IST

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ದಿಟ್ಟ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದೊಳಗೆ ಭಯೋತ್ಪಾದಕರ 9 ನೆಲೆಗಳ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ‘ಆಪರೇಷನ್ ಸಿಂಧೂರ’ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಭಾರತ ಬುಧವಾರ ಮುಂಜಾನೆ ಹೇಳಿದೆ. ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸೇನೆಯ ಜೊತೆಗೆ ಇರುವುದಾಗಿ ಹೇಳಿದೆ.

ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ಕಾರ್ಯಾಚರಣೆ ನಡೆಸಿವೆ.

‘ಆಪರೇಷನ್ ಸಿಂಧೂರ’ ಎಂದು ಹೆಸರಿಸಲಾದ ಈ ಕಾರ್ಯಾಚರಣೆಯನ್ನು ಮೇ 7ರ ಮುಂಜಾನೆ ನಡೆಸಲಾಗಿದ್ದು, ಉಗ್ರರ ತರಬೇತಿ ಶಿಬಿರಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಲಾಗಿದೆ ಎಂದು ಭಾರತದ ರಕ್ಷಣಾ ಸಚಿವಾಲಯ ಅಧಿಕೃತವಾಗಿ ತಿಳಿಸಿದೆ.

ಈ ಕಾರ್ಯಾಚರಣೆಯ ಯಶಸ್ಸಿನ ನಂತರ, ಭಾರತೀಯ ಸೇನೆಯು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ‘‘ನ್ಯಾಯ ದೊರಕಿತು. ಜೈ ಹಿಂದ್!’’ ಎಂದು ಘೋಷಿಸಿದೆ.

ಇದರ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ‘ಭಾರತ್ ಮಾತಾ ಕಿ ಜೈ’ ಎಂದು ಎಕ್ಸ್ ನಲ್ಲಿ ಬರೆದು ದೇಶದ ಸಶಸ್ತ್ರ ಪಡೆಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಭಾರತೀಯ ಸೇನೆಯು ಪಾಕಿಸ್ತಾನದ ಒಂಭತ್ತು ನಿರ್ದಿಷ್ಟ ಸ್ಥಳಗಳನ್ನು ಗುರಿಯಾಗಿಸಿಕೊಂಡು ಯಶಸ್ವಿ ದಾಳಿಗಳನ್ನು ನಡೆಸಿದೆ.

ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯಲ್ಲಿ 26 ಅಮಾಯಕ ನಾಗರಿಕರು, ಬಹುತೇಕ ಪ್ರವಾಸಿಗರು ಹತರಾಗಿದ್ದರು. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬಾ (ಎಲ್‌ಇಟಿ) ಸಂಘಟನೆ ಹೊತ್ತುಕೊಂಡಿತ್ತು. ಆದರೆ ನಂತರ ಅದು ಹಿಂದೆ ಸರಿದಿತ್ತು.

ಇದಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ 80ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಭಾರತದ ಈ ಕ್ರಮವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತೀಯ ವಾಯುಪಡೆಯು ಅಂತರ್‌ರಾಷ್ಟ್ರೀಯ ಗಡಿಯುದ್ದಕ್ಕೂ ಮುರಿಡ್ಕೆ ಮತ್ತು ಬಹಾವಲ್ಪುರದಲ್ಲಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಮತ್ತು ಮುಝಪ್ಫರಾಬಾದ್‌ನಲ್ಲಿ ನಿಯಂತ್ರಣ ರೇಖೆಯುದ್ದಕ್ಕೂ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಆರೋಪಿಸಿದೆ.

ಈ ದಾಳಿಗಳಿಂದ ಸಾವುನೋವುಗಳು ಸಂಭವಿಸಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದ್ದು, ತಾನು ಆಯ್ಕೆ ಮಾಡಿದ ಸಮಯ ಮತ್ತು ಸ್ಥಳದಲ್ಲಿ ದಾಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲಿದೆ ಎಂದು ಹೇಳಿದೆ.

ಇದಲ್ಲದೆ, ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಝ್ ಷರೀಫ್ ಅವರು ಭಾರತ ಪಾಕಿಸ್ತಾನದೊಳಗೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ದಾಳಿಯನ್ನು ಪ್ರಚೋದನಕಾರಿ ಮತ್ತು ಸ್ಪಷ್ಟವಾದ ಯುದ್ಧ ಕೃತ್ಯ ಎಂದು ಬಣ್ಣಿಸಿದೆ.

ಒಟ್ಟಾರೆಯಾಗಿ ಪಾಕಿಸ್ತಾನದಲ್ಲಿ ಆರು ಸ್ಥಳಗಳಲ್ಲಿ 24 ಕಡೆಗಳಲ್ಲಿ ದಾಳಿ ನಡೆದಿದೆ. ಈ 24 ದಾಳಿಗಳಲ್ಲಿ ಎಂಟು ಪಾಕಿಸ್ತಾನಿಗಳು ಬಲಿಯಾಗಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ ಮತ್ತು ಇಬ್ಬರು ಕಾಣೆಯಾಗಿದ್ದಾರೆ, ಎಂದು ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಹೇಳಿದ್ದಾರೆ.

ಭಾರತದ ವಾಯು ದಾಳಿಯಲ್ಲಿ ತನ್ನ ಯಾವುದೇ ವಿಮಾನಗಳು ನಾಶವಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಬುಧವಾರ ಭಾರತದ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಮೂರು ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ಸ್ಥಳೀಯ ಸರಕಾರಿ ಮೂಲಗಳು ರಾಯ್ಟರ್ಸ್‌ಗೆ ತಿಳಿಸಿವೆ.

ಐದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರರು ರಾಯ್ಟರ್ಸ್‌ಗೆ ತಿಳಿಸಿದ್ದಾರೆ.

ಈ ವಾದವನ್ನು ಭಾರತ ಖಚಿತಪಡಿಸಿಲ್ಲ. 3 ರಫೇಲ್ ಜೆಟ್‌ಗಳು, ಒಂದು ಸುಖೋಯ್ Su-30 ಮತ್ತು ಒಂದು ಮಿಗ್-29 ಸೇರಿದಂತೆ ಐದು ಭಾರತೀಯ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಮಿಲಿಟರಿ ಹೇಳಿಕೊಂಡಿದೆ.

ಭಾರತದ ರಕ್ಷಣಾ ಸಚಿವಾಲಯವು ಈ ಕಾರ್ಯಾಚರಣೆಯ ಕುರಿತು ಸ್ಪಷ್ಟನೆ ನೀಡಿದ್ದು, ‘ಆಪರೇಷನ್ ಸಿಂಧೂರ’ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಲು ನಡೆಸಲಾಯಿತು ಎಂದು ತಿಳಿಸಿದೆ.

ಈ ಕಾರ್ಯಾಚರಣೆಯಲ್ಲಿ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ದಾಳಿಗಳು ನಿರ್ದಿಷ್ಟವಾಗಿ ಉಗ್ರರ ಶಿಬಿರಗಳು ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಮೂಲಸೌಕರ್ಯಗಳ ಮೇಲೆ ಕೇಂದ್ರೀಕೃತವಾಗಿದ್ದವು ಎಂದು ಅದು ಒತ್ತಿಹೇಳಿದೆ.

ಈ ಕಾರ್ಯಾಚರಣೆಯ ನಂತರ, ಪಾಕಿಸ್ತಾನದ ಸೇನೆಯು ಪೂಂಚ್ ಮತ್ತು ರಜೌರಿ ವಲಯಗಳಲ್ಲಿನ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಇರುವ ಮುಂಚೂಣಿ ಗ್ರಾಮಗಳ ಮೇಲೆ ಭಾರೀ ಶೆಲ್ ದಾಳಿ ನಡೆಸಿದೆ.

ಪೂಂಚ್‌ನ ಕೃಷ್ಣ ಘಾಟಿ, ಶಾಹ್‌ಪುರ ಮತ್ತು ಮಂಕೋಟ್ ಹಾಗೂ ರಜೌರಿ ಜಿಲ್ಲೆಯ ಲಾಮ, ಮಂಜಾಕೋಟ್ ಮತ್ತು ಗಂಭೀರ್ ಬ್ರಾಹ್ಮಣ ಪ್ರದೇಶಗಳಲ್ಲಿ ಶೆಲ್ ದಾಳಿ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಉತ್ತರ ಭಾರತದ ಕೆಲವು ಭಾಗಗಳಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಆಪರೇಷನ್ ಸಿಂಧೂರ’ ನಂತರ ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ನಡೆಸಿದ ಗುಂಡಿನ ದಾಳಿ ಮತ್ತು ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ.

ಪೂಂಚ್, ಕುಪ್ವಾರ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಪಾಕಿಸ್ತಾನದ ಮಾರ್ಟರ್ ಶೆಲ್ ದಾಳಿಯಿಂದ ಮನೆಗಳು ಮತ್ತು ಅಂಗಡಿಗಳು ಹಾನಿಗೊಳಗಾಗಿವೆ.

ಈ ಹಿನ್ನೆಲೆಯಲ್ಲಿ, ಶ್ರೀನಗರ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಗಡಿ ಅಥವಾ ನಿಯಂತ್ರಣ ರೇಖೆಯ ಸಮೀಪವಿರುವ ಜಿಲ್ಲೆಗಳಲ್ಲಿನ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಬುಧವಾರ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಕಾಶ್ಮೀರ ವಿಶ್ವವಿದ್ಯಾನಿಲಯ ಮುಂದೂಡಿದೆ.

ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (ಯುಎನ್‌ಎಸ್‌ಸಿ) ಭಾರತ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಕುರಿತು ಸಮಾಲೋಚನೆಗಳನ್ನು ನಡೆಸಿತ್ತು.

ಈ ಸಂದರ್ಭದಲ್ಲಿ, ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಮತ್ತು ಮಾತುಕತೆ ನಡೆಸಲು ಕರೆ ನೀಡಲಾಗಿತ್ತು.

15 ಸದಸ್ಯರ ಯುಎನ್‌ಎಸ್‌ಸಿ ಸಭೆಯ ನಂತರ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಿರಲಿಲ್ಲ.

ಬಹಾವಲ್ಪುರದಿಂದ ಕೋಟ್ಲಿವರೆಗಿನ ಸ್ಥಳಗಳನ್ನೇ ‘ಆಪರೇಷನ್ ಸಿಂಧೂರ’ನಲ್ಲಿ ಏಕೆ ಗುರಿಯಾಗಿಸ ಲಾಯಿತು?

ಕಾರ್ಯಾಚರಣೆಗಾಗಿ ಆಯ್ಕೆಮಾಡಲಾದ 9 ಸ್ಥಳಗಳು ಭಾರತದ ವಿರುದ್ಧ ನಿರ್ದೇಶಿಸಲಾದ ಪ್ರಮುಖ ಭಯೋತ್ಪಾದಕ ಸಂಚುಗಳಿಗೆ ಮತ್ತು ನುಸುಳುವಿಕೆ ಯತ್ನಗಳಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದವು.

1. ಬಹಾವಲ್ಪುರ: ಜೈಶೆ ಮುಹಮ್ಮದ್ ಮುಖ್ಯ ಕಚೇರಿ

ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿರುವ ಬಹಾವಲ್ಪುರವು ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು. ಮಸೂದ್ ಅಝರ್ ನೇತೃತ್ವದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ನ ಮುಖ್ಯ ಕಚೇರಿಯು ಈ ನಗರದಲ್ಲಿದೆ.

ಈ ಗುಂಪು 2001ರ ಸಂಸತ್ ದಾಳಿ ಮತ್ತು 2019ರ ಪುಲ್ವಾಮಾ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ಹಲವಾರು ಉನ್ನತ ಮಟ್ಟದ ದಾಳಿಗಳ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ ಅಥವಾ ಅವುಗಳಲ್ಲಿ ಭಾಗಿಯಾಗಿದೆ ಎಂದು ಶಂಕಿಸಲಾಗಿದೆ.

2. ಮುರೀದ್ಕೆ: ಲಷ್ಕರೆ ತಯ್ಯಿಬಾ ನೆಲೆ ಮತ್ತು ತರಬೇತಿ ಮೈದಾನ

ಲಾಹೋರ್‌ನಿಂದ ಸುಮಾರು 40 ಕಿಲೋಮೀಟರ್ ಉತ್ತರಕ್ಕೆ ಇರುವ ಮುರೀದ್ಕೆಯು ಲಷ್ಕರೆ ತಯ್ಯಿಬಾ ಮತ್ತು ಅದರ ದತ್ತಿ ವಿಭಾಗವಾದ ಜಮಾಅತುದ್ದಅವಾ ಅವರ ದೀರ್ಘಕಾಲದ ಕೇಂದ್ರ ನಗರವಾಗಿದೆ. 200 ಎಕರೆಗಳಿಗಿಂತಲೂ ಹೆಚ್ಚು ವಿಸ್ತಾರದಲ್ಲಿ ಹರಡಿರುವ ಮುರೀದ್ಕೆ ಭಯೋತ್ಪಾದಕ ಸೌಲಭ್ಯವು ತರಬೇತಿ ಪ್ರದೇಶಗಳು, ಸಿದ್ಧಾಂತ ಕೇಂದ್ರಗಳು ಮತ್ತು ಲಾಜಿಸ್ಟಿಕಲ್ ಬೆಂಬಲ ಮೂಲಸೌಕರ್ಯಗಳನ್ನು ಒಳಗೊಂಡಿದೆ. 2008ರ ಮುಂಬೈ ದಾಳಿ ಸೇರಿದಂತೆ ಹಲವಾರು ದಾಳಿಗಳನ್ನು ಎಲ್‌ಇಟಿ ಯೋಜಿಸಿದೆ ಎಂದು ಭಾರತ ಆರೋಪಿಸಿದೆ. 26/11ರ ದಾಳಿಕೋರರು ಇಲ್ಲಿಯೇ ತರಬೇತಿ ಪಡೆದವರು.

3. ಕೋಟ್ಲಿ: ಬಾಂಬರ್ ತರಬೇತಿ ಮತ್ತು ಭಯೋತ್ಪಾದಕ ದಾಳಿಗಾಗಿ ಉಡಾವಣಾ ನೆಲೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಕೋಟ್ಲಿಯನ್ನು ಆತ್ಮಹತ್ಯಾ ಬಾಂಬರ್‌ಗಳು ಮತ್ತು ಬಂಡುಕೋರರಿಗೆ ಪ್ರಮುಖ ತರಬೇತಿ ಮೈದಾನವೆಂದು ಭಾರತವು ಪದೇ ಪದೇ ಗುರುತಿಸಿದೆ. ಮೂಲಗಳ ಪ್ರಕಾರ, ಕೋಟ್ಲಿ ಸೌಲಭ್ಯವು ಯಾವುದೇ ಸಮಯದಲ್ಲಿ 50ಕ್ಕೂ ಹೆಚ್ಚು ತರಬೇತಿದಾರರನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ.

4. ಗುಲ್ಪರ್: ರಜೌರಿ ಮತ್ತು ಪೂಂಚ್‌ನಲ್ಲಿ ದಾಳಿಗಳಿಗೆ ಉಡಾವಣಾ ತಾಣ

ಗುಲ್ಪರ್ ಅನ್ನು 2023 ಮತ್ತು 2024ರಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಮತ್ತು ಪೂಂಚ್‌ಗೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಪದೇ ಪದೇ ಮುಂಚೂಣಿ ಉಡಾವಣಾ ತಾಣವಾಗಿ ಬಳಸಲಾಗಿದೆ ಎಂದು ನಂಬಲಾಗಿದೆ. ಮೂಲಗಳ ಪ್ರಕಾರ, ಈ ಸ್ಥಳವನ್ನು ಭಾರತೀಯ ಭದ್ರತಾ ಬೆಂಗಾವಲು ವಾಹನಗಳು ಮತ್ತು ಆ ಪ್ರದೇಶಗಳಲ್ಲಿನ ನಾಗರಿಕ ಗುರಿಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ವೇದಿಕೆಯಾಗಿ ಬಳಸಲಾಗುತ್ತಿತ್ತು.

5. ಸವಾಯಿ: ಕಾಶ್ಮೀರ ಕಣಿವೆಯ ದಾಳಿಗಳಿಗೆ ಸಂಬಂಧಿಸಿದ ಎಲ್‌ಇಟಿ ಶಿಬಿರ

ಸವಾಯಿ ಉತ್ತರ ಕಾಶ್ಮೀರದಲ್ಲಿ, ನಿರ್ದಿಷ್ಟವಾಗಿ ಸೋನಮಾರ್ಗ್, ಗುಲ್ಮಾರ್ಗ್ ಮತ್ತು ಪಹಲ್ಗಾಮ್‌ನಲ್ಲಿ ನಡೆದ ದಾಳಿಗಳಿಗೆ ಸಂಬಂಧ ಹೊಂದಿದೆ.

6. ಸರ್ಜಲ್ ಮತ್ತು ಬರ್ನಾಲಾ: ಒಳನುಗ್ಗುವ ಮಾರ್ಗಗಳು

ಅಂತರ್‌ರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಸರ್ಜಲ್ ಮತ್ತು ಬರ್ನಾಲಾ ಒಳನುಗ್ಗುವಿಕೆಯ ಗೇಟ್‌ವೇ ಪಾಯಿಂಟ್‌ಗಳೆಂದು ಪರಿಗಣಿಸಲಾಗಿದೆ.

7. ಮೆಹ್ಮೂನಾ: ಹಿಜ್ಬುಲ್ ಮುಜಾಹಿದೀನ್ ಉಪಸ್ಥಿತಿ

ಸಿಯಾಲ್‌ಕೋಟ್ ಬಳಿ ಇರುವ ಮೆಹ್ಮೂನಾ ಶಿಬಿರವನ್ನು ಕಾಶ್ಮೀರದಲ್ಲಿ ಐತಿಹಾಸಿಕವಾಗಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪಾದ ಹಿಜ್ಬುಲ್ ಮುಜಾಹಿದೀನ್ ಬಳಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗುಂಪು ಕ್ಷೀಣವಾಗಿದ್ದರೂ, ಭಾರತೀಯ ಅಧಿಕಾರಿಗಳು ಗಡಿಯಾಚೆಯಿಂದ, ವಿಶೇಷವಾಗಿ ಮೆಹ್ಮೂನಾದಂತಹ ಪ್ರದೇಶಗಳಿಂದ, ಸ್ಥಳೀಯ ಬೆಂಬಲ ಜಾಲಗಳು ಇನ್ನೂ ಹಾಗೇ ಉಳಿದಿರುವ ಕಾರಣದಿಂದ ತರಬೇತಿ ಮತ್ತು ನಿರ್ದೇಶನ ನೀಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಭಾರತ ಬುಧವಾರ ಗಂಟೆ 1:44ಕ್ಕೆ ದೂರ ವ್ಯಾಪ್ತಿಯ ಸ್ಟ್ಯಾಂಡ್‌ಆಫ್ ಶಸ್ತ್ರಾಸ್ತ್ರಗಳನ್ನು ಬಳಸಿ ನಿಖರ ದಾಳಿಗಳನ್ನು ಪ್ರಾರಂಭಿಸಿತು. ಈ ದಾಳಿಗಳನ್ನು ಸೇನೆ, ನೌಕಾಪಡೆ ಮತ್ತು ವಾಯುಸೇನೆ ಜಂಟಿಯಾಗಿ ಸಮನ್ವಯಗೊಳಿಸಿದವು. 1971ರ ಯುದ್ಧದ ನಂತರ ನಡೆದ ಮೊದಲ ತ್ರಿಸೇನಾ ಕಾರ್ಯಾಚರಣೆ ಇದಾಗಿದೆ.

ಕಾರ್ಯಾಚರಣೆಯ ನಂತರ, ಭಾರತವು ಪ್ರಮುಖ ಜಾಗತಿಕ ರಾಜಧಾನಿಗಳಿಗೆ ರಾಜತಾಂತ್ರಿಕ ಸಂಪರ್ಕವನ್ನು ಪ್ರಾರಂಭಿಸಿತು. ಮೂಲಗಳ ಪ್ರಕಾರ, ಭಾರತದ ಹಿರಿಯ ಅಧಿಕಾರಿಗಳು ಅಮೆರಿಕ, ಬ್ರಿಟನ್, ರಶ್ಯ, ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಈ ಬಗ್ಗೆ ಮಾಹಿತಿ ನೀಡಿದೆ.

ಗುರಿಯಾಗಿಸಲಾದ

ಒಂಭತ್ತು ಸ್ಥಳಗಳು

1. ಮರ್ಕಝ್ ಸುಬ್‌ಹಾನಲ್ಲಾ, ಬಹಾವಲ್ಪುರ್ - ಜೆಇಎಂ

2. ಮರ್ಕಝ್ ತಯ್ಯಿಬಾ, ಮುರಿಡ್ಕೆ -ಎಲ್‌ಇಟಿ

3. ಸರ್ಜಲ್, ತೆಹ್ರಾ ಕಲನ್-ಜೆಇಎಂ

4. ಮೆಹ್ಮೂನಾ ರೆಯಾ, ಸಿಯಾಲ್ಕೋಟ್ -ಎಚ್‌ಎಂ

5. ಮರ್ಕಝ್ ಅಹ್ಲೆ ಹದೀಸ್, ಬರ್ನಾಲಾ -ಎಲ್‌ಇಟಿ

6. ಮರ್ಕಝ್ ಅಬ್ಬಾಸ್, ಕೋಟ್ಲಿ- ಜೆಇಎಂ

7. ಮಸ್ಕರ್ ರಾಹೀಲ್ ಶಾಹಿದ್, ಕೋಟ್ಲಿ-ಎಚ್‌ಎಂ

8. ಶವಾಯಿ ನಲ್ಲಾ ಕ್ಯಾಂಪ್, ಮುಝಪ್ಫರಾಬಾದ್ - ಎಲ್‌ಇಟಿ

9. ಸೈಯಿದಿನಾ ಬಿಲಾಲ್ ಕ್ಯಾಂಪ್, ಮುಝಪ್ಫರಾಬಾದ್ - ಜೆಇಎಂ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಪಿ.ಎಚ್. ಅರುಣ್

contributor

Similar News