×
Ad

ಪೀಣ್ಯ ಕೊಳೆಗೇರಿ ನೆಲಸಮ: 60 ಕುಟುಂಬಗಳು ಬೀದಿಪಾಲು!

Update: 2025-01-23 11:52 IST

ಬೆಂಗಳೂರು: ಪೀಣ್ಯದ ಪ್ರಥಮ ದರ್ಜೆ ಕಾಲೇಜು ಪಕ್ಕದ ಅಕ್ಕಮಹಾದೇವಿ ಕೊಳೆಗೇರಿಯಲ್ಲಿ ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ 60 ಕುಟುಂಬಗಳು ಗುಡಿಸಲು ಹಾಕಿಕೊಂಡು ನೆಲೆಸಿದ್ದವು. ಎಲ್ಲರೂ ದಿನಗೂಲಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಸ್ಥಳೀಯ ಬಿಜೆಪಿ ಶಾಸಕ ಮುನಿರತ್ನ ನೇತೃತ್ವದಲ್ಲಿ ಸ್ಥಳಕ್ಕೆ ಬಂದಿದ್ದ ತಂಡವು ಜೆಸಿಬಿ ಯಂತ್ರ ಬಳಸಿ ಗುಡಿಸಲುಗಳನ್ನು ನೆಲಸಮಗೊಳಿಸಿದ್ದು, 300ಕ್ಕೂ ಅಧಿಕ ಮಂದಿ ಬೀದಿಗೆ ಬಿದ್ದಿದ್ದಾರೆ. ಗುಡಿಸಲುಗಳಲ್ಲಿ ಇಡಲಾಗಿದ್ದ ಸಾವಿರಾರು ರೂ. ನಗದು ಹಾಗೂ ಚಿನ್ನಾಭರಣ ಮಣ್ಣುಪಾಲಾಗಿದೆ. ಇಲ್ಲಿ ವಾಸಿಸುವ ಜನರ ಬದುಕು ಅತಂತ್ರವಾಗಿದೆ. ಈ ಕುರಿತು ಕೊಳೆಗೇರಿಯ ನೊಂದ ಸಂತ್ರಸ್ತರು ಪತ್ರಿಕೆಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

20 ವರ್ಷಗಳಿಂದ ಇಲ್ಲೇ ಇದ್ದೇವೆ

ನಾವು ಪಾಕಿಸ್ತಾನ, ಬಾಂಗ್ಲಾ ದೇಶದಿಂದ ಓಡಿ ಬಂದವರಲ್ಲ, ನಾವು ಇದೇ ರಾಜ್ಯದ ನಾನಾ ಜಿಲ್ಲೆಯವರು. 20 ವರ್ಷಗಳಿಂದ ಈ ಸ್ಲಂನಲ್ಲಿ ಹೊಟ್ಟೆಪಾಡಿಗಾಗಿ ಬಂದು ಜೀವನ ನಡೆಸುತ್ತಿದ್ದೇವೆ. ಯಾವುದೇ ಸೂಚನೆ ನೀಡದೇ ನಮ್ಮ ಎಲ್ಲಾ ಗುಡಿಸಲುಗಳನ್ನು ಧ್ವಂಸ ಮಾಡಿದ್ದಾರೆ. ತಲೆಯ ಮೇಲೆ ಸೂರಿಲ್ಲದೆ, ನೀರು, ಆಹಾರವಿಲ್ಲದೆ ನಮ್ಮನ್ನು ಬೀದಿಪಾಲು ಮಾಡಲಾಗಿದೆ ಎಂದು ಕೊಳೆಗೇರಿ ನಿವಾಸಿಗಳು ನೋವು ವ್ಯಕ್ತಪಡಿಸಿದ್ದಾರೆ.

ದುಡಿದ 60 ಸಾವಿರ ರೂ. ಮಣ್ಣುಪಾಲು!

ಇಲ್ಲಿರುವವರು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿಲ್ಲ, ನಾನು ದುಡಿದು ಕೂಡಿಟ್ಟು ಕೊಂಡಿದ್ದ ಸುಮಾರು 60ರಿಂದ 70 ಸಾವಿರ ಗಳಷ್ಟು ಹಣ ಮತ್ತು 5 ಗ್ರಾಂ ನಷ್ಟು ಚಿನ್ನ ಗುಡಿಸಲು ನೆಲಸಮ ಮಾಡುವ ಹೊತ್ತಲ್ಲಿ ಮಣ್ಣುಪಾಲಾಗಿದೆ. ನಾವೆಲ್ಲರೂ ಬದುಕುವ ಆಸೆಯನ್ನೇ ಕಳೆದುಕೊಂಡಿದ್ದೇವೆ ಎಂದು ನೊಂದ ಲಕ್ಷ್ಮಣ ಹೇಳುತ್ತಾರೆ.

ನಾವೂ ಹಿಂದೂಗಳೇ!

ಜೆಸಿಬಿಯಲ್ಲಿ ನಮ್ಮ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ಇಲ್ಲಿರುವವರೆಲ್ಲರೂ ಶಾಸಕ ಮುನಿರತ್ನ ಅವರಿಗೆ ಮತ ಹಾಕಿದ್ದಾರೆ. ‘ನಾವೂ ಹಿಂದೂಗಳೇ, ಬಿಜೆಪಿಯ ಶಾಸಕನೇ ನಮಗೆ ಈ ರೀತಿ ತೊಂದರೆ ಕೊಟ್ಟಿರುವುದು ಹೇಗೆ ಸರಿ? ಇದೇನಾ ಸಂಸ್ಕೃತಿ? ನಮಗೆ ಯಾವುದೇ ನೋಟಿಸ್ ಕೊಡದೇ ಖುದ್ದಾಗಿ ಜ.20ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶಾಸಕರೇ ಬಂದು ನಮ್ಮ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ನಮಗೆ ನ್ಯಾಯ ಒದಗಿಸಬೇಕು ಎಂದು ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.

ಗುಡಿಸಲಲ್ಲೇ ಬೆಳೆದ ಶಾಸಕ!

ಗಡಿಪಾರಾಗಿ ಚಿತ್ತೂರಿನಿಂದ ಬಂದ ಮುನಿರತ್ನ, ಅಂದು ಇಲ್ಲೇ ಗುಡಿಸಲಲ್ಲಿ ವಾಸವಾಗಿ ಬೆಳೆದವರು. ಈಗ ಗೂಂಡಾಗಿರಿ ಮಾಡುತ್ತಿದ್ದಾರೆ. ತಾನು ಬೆಳೆದ ಗುಡಿಸಲುಗಳ ಮೇಲೆಯೇ ಅವರು ಬುಲ್ಡೋಜರ್ ಹರಿಸಿದ್ದಾರೆ. ಈಗ ಬಡವರ ಮೇಲೆ ಅಧಿಕಾರ, ದರ್ಪ ತೋರಿಸುತ್ತಿದ್ದಾರೆ ಎಂದು ಸಂತ್ರಸ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ದಿನಕ್ಕೆ 200 ರೂ. ಕೂಲಿ

ಈ ಸ್ಲಂನಲ್ಲಿ ಇರುವವರು ಕೂಲಿ ಕಾರ್ಮಿಕರು. ಹಲವರು ಗಂಡಸರು 200 ರೂ.ಗೆ ಕೂಲಿ ಕೆಲಸ ಮಾಡು ವವರು. ಮಹಿಳೆಯರಲ್ಲಿ 100 ರೂ. ಪಡೆಯುವವರೂ ಇದ್ದಾರೆ. ಈ ಕಾಲದಲ್ಲಿ ಈ ಹಣ ಈ ದೊಡ್ಡ ನಗರದಲ್ಲಿ ಸಾಕಾಗುತ್ತಾ?, ಅದಕ್ಕೆ ನಾವು ಶಾಲೆಯ ರಜಾ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದೇವೆ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳುತ್ತಾಳೆ.

ಓಟು ಹಾಕಲೆಂದು ಈ ಜಾಗ ಕೊಟ್ರು!

ಯಾದಗಿರಿ, ಕಲಬುರಗಿ ಸಹಿತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಬಂದಿರುವ ನಮಗೆ ಇಲ್ಲಿನ ಮತದಾನದ ಹಕ್ಕು ಕೊಟ್ಟರು. ಮುನಿರತ್ನಗೆ ಓಟು ಹಾಕುವಂತೆ ಹೇಳಿದರು. ನಾವೆಲ್ಲರೂ ಆತನಿಗೆ ಓಟು ಹಾಕಿದ್ದೆವು. ಈಗ ಗುಡಿಸಲುಗಳನ್ನು ನೆಲಸಮ ಮಾಡಿ ನಮ್ಮನ್ನು ಓಡಿಸುತ್ತಿದ್ದಾರೆ.

ಕಾನೂನು ಎಲ್ಲಿದೆ? ನ್ಯಾಯ ಎಲ್ಲಿದೆ? ನಮಗೆ ಸರಕಾರ ಬದುಕಲು ಅನುವು ಮಾಡಿಕೊಡಬೇಕು ಎಂದು ಸಂತ್ರಸ್ತ ಮಹಿಳೆಯೊಬ್ಬರು ಆಗ್ರಹಿಸಿದರು.

ಕಾಲೇಜಿನಿಂದ ಬರುವಾಗ ನನ್ನ ಗುಡಿಸಲು ಧ್ವಂಸವಾಗಿತ್ತು!

ಕಾಲೇಜು ಮುಗಿಸಿಕೊಂಡು ಬರುವಾಗ ನನ್ನ ಗುಡಿಸಲು ಧ್ವಂಸವಾಗಿತ್ತು. ನನಗೆ ಗಾಬರಿಯಾಯಿತು. ನನ್ನ ತಂದೆ-ತಾಯಿ ಗಾರೆ ಕೆಲಸ ಮಾಡಿ ಕಾಲೇಜು ಫೀಸು ಕಟ್ಟುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ನಮ್ಮ ಗುಡಿಸಲುಗಳನ್ನು ನೆಲಸಮ ಮಾಡಿದ್ದಾರೆ. ನನ್ನಂತಹ ಅನೇಕ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ. ಬಟ್ಟೆ, ಪುಸ್ತಕ, ಬ್ಯಾಗ್‌ಗಳೆಲ್ಲವೂ ಮಣ್ಣಿನಡಿಯಲ್ಲಿ ಸೇರಿಕೊಂಡಿವೆ ಎಂದು ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಅಳಲು ತೋಡಿಕೊಂಡಿದ್ದಾಳೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಬ್ರಾಹಿಂ ಖಲೀಲ್ ಬನ್ನೂರು

contributor

Similar News