×
Ad

ಜನಾಪೇಕ್ಷೆಯ ಫಾರ್ಮಸಿ ಸೇವೆ

ಇಂದು ವಿಶ್ವ ಫಾರ್ಮಾಸಿಸ್ಟ್ ದಿನ

Update: 2025-09-25 11:55 IST

ಫಾರ್ಮಸಿ ಸೇವೆ ಜಗತ್ತಿನ ಎಲ್ಲಾ ದೇಶಗಳಲ್ಲಿ ಲಭ್ಯವಾಗಬೇಕೆಂಬುದು ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆಯ ಪ್ರಮುಖ ಆಶಯವಾಗಿದೆ. ಸೆಪ್ಟಂಬರ್ 25ರಂದು ಈ ದಿನಾಚರಣೆ ನಡೆಯುತ್ತಿದೆೆ.

ಔಷಧ ವಿಜ್ಞಾನದ ಶಿಕ್ಷಣದಲ್ಲಿ ಪ್ರಪಂಚದ ಪ್ರಮುಖ ರಾಷ್ಟ್ರಗಳು ಮುಂಚೂಣಿಯಲ್ಲಿವೆ. ಫಾರ್ಮಸಿ ಪದವೀಧರರ ವೃತ್ತಿ ನಿಯೋಜನೆ ಮತ್ತು ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸುವಲ್ಲಿ ಹಲವಾರು ದೇಶಗಳು ಪ್ರಸಿದ್ಧವಾಗಿವೆ. ಫಾರ್ಮಸಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ, ಡಾಕ್ಟರೇಟ್ ಪಡೆದ ತಜ್ಞ ಫಾರ್ಮಾಸಿಸ್ಟ್‌ಗಳಿಗೆ ಹಲವು ದೇಶಗಳಲ್ಲಿ ಮನ್ನಣೆ ಇದೆ. ಫಾರ್ಮಾಸಿ ವಿಜ್ಞಾನದಲ್ಲಿ ಅತ್ಯುನ್ನತ ವಿದ್ಯಾರ್ಜನೆ ಮಾಡಿ ಔಷಧವಿಲ್ಲದ ಹತ್ತಾರು ಕಾಯಿಲೆಗಳಿಗೆ ಹೊಸಮದ್ದುಗಳನ್ನು ಸಂಶೋಧಿಸುವ ಘನಕಾರ್ಯದಲ್ಲಿ ತಜ್ಞ ಫಾರ್ಮಾಸಿಸ್ಟರು ಅನೇಕ ದೇಶಗಳಲ್ಲಿ ಕ್ರಿಯಾಶೀಲರು. ಔಷಧ ತಯಾರಿಕೆಯ ಕೈಗಾರಿಕೆಗಳಲ್ಲಿಯೂ ಇವರು ಯೋಜನಾ ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ಸರಕಾರಿ, ಖಾಸಗಿ ಆಸ್ಪತ್ರೆಗಳ ಫಾರ್ಮಸಿ ಸೇವೆಗಳು, ಔಷಧ ಅಂಗಡಿಗಳಲ್ಲಿ ಸೇವೆ ಇತ್ಯಾದಿ ಇವರ ಕಾರ್ಯವ್ಯಾಪ್ತಿ ವಿಸ್ತಾರವಾಗಿದೆ.

ಸುಸಜ್ಜಿತ ಫಾರ್ಮಸಿಗಳು, ಜನತೆ ಮತ್ತು ಫಾರ್ಮಾಸಿಸ್ಟರು

ಔಷಧೋದ್ಯಮ ವಿಶ್ವವಿಸ್ತಾರಗೊಂಡು ಅಸಂಖ್ಯಾತ ಔಷಧಗಳು ಫಾರ್ಮಸಿಯ ಸಂಗ್ರಹದಲ್ಲಿ ಇರುತ್ತವೆ. ಶಿಸ್ತುಬದ್ಧವಾಗಿ, ನಾಮ ಸೂಚಕವಾಗಿ ಅನುಕ್ರಮವಾಗಿ ಮದ್ದುಗಳನ್ನು ಸೂಕ್ತಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಕೌಶಲದಾಯಕ ನಿರ್ವಹಣೆಯ ಕೆಲಸ. ವೈದ್ಯರ ಸಲಹಾ ಚೀಟಿಗೆ ತಕ್ಕಂತೆ ರೋಗಿಗಳಿಗೆ, ಗ್ರಾಹಕರಿಗೆ ಸಾಂದರ್ಭಿಕವಾಗಿ ಒದಗಿಸುವುದು, ವಿತರಣೆ ಮಾಡುವುದು, ರೋಗಿಗಳಿಗೆ ಅಥವಾ ಅವರ ಕಡೆಯವರಿಗೆ ಔಷಧ ಸೇವನಾ ಕ್ರಮಗಳನ್ನು ತಿಳಿಸುವುದು, ಔಷಧಗಳ ಜೀವಿತಾವಧಿ ಪರಿಶೀಲನೆ, ವಿತರಣೆಯ ಮೊದಲೇ ಇಬ್ಬರು ಫಾರ್ಮಾಸಿಸ್ಟರು ಔಷಧಗಳನ್ನು ಪುನರ್ ಪರಿಶೀಲಿಸುವುದು ಅವರ ಕರ್ತವ್ಯವಾಗಿದೆ.

ಗುಣಮಟ್ಟ, ಔಷಧ ದರ ನಿಯಂತ್ರಣ

ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಔಷಧೀಯ ಕಾನೂನು ಅಸ್ತಿತ್ವದಲ್ಲಿದ್ದು ಗುಣಮಟ್ಟ ಕಾಪಾಡಲು ಪ್ರತ್ಯೇಕ ಸಮಿತಿಗಳಿರುತ್ತವೆ. ನ್ಯಾಯಯುತ ದರದಲ್ಲಿ ಔಷಧಗಳು ಮಾರುಕಟ್ಟೆ ಪ್ರವೇಶಿಸಬೇಕು ಎಂದು ಔಷಧದ ನಿಯಂತ್ರಣ ಮಂಡಳಿ ಸೂಚಿಸುತ್ತದೆ. ಈ ವಿಭಾಗಗಳಲ್ಲಿಯೂ ಫಾರ್ಮಾಸಿಸ್ಟರು ನಿರ್ದೇಶಿತ ಸ್ಥಾನದಲ್ಲಿರುತ್ತಾರೆ.

ಅಂತರ್‌ರಾಷ್ಟ್ರೀಯ ಫಾರ್ಮಸಿ ಫೆಡರೇಶನ್‌ನ ನಿರ್ದೇಶನದಂತೆ ವಿಶ್ವ ಫಾರ್ಮಾಸಿಸ್ಟರ ದಿನವನ್ನು ಸೆಪ್ಟಂಬರ್ 25 ಎಂದು ನಿರ್ಣಯಿಸಿ 2009ರಿಂದ ಆಚರಿಸಲಾಗುತ್ತಿದೆ. ಈ ವರ್ಷದ ದಿನಾಚರಣೆಯ ಘೋಷ ವಾಕ್ಯದಂತೆ ಆರೋಗ್ಯದ ಬಗ್ಗೆ ಚಿಂತಿಸುವುದು ಮತ್ತು ಫಾರ್ಮಾಸಿಸ್ಟರ ಬಗ್ಗೆ ಯೋಚಿಸುವುದು ಔಚಿತ್ಯದಾಯಕ.

ಪ್ರಸ್ತುತ ಜನಾಪೇಕ್ಷೆಯ ವೈವಿಧ್ಯಗಳು

ನಿರಂತರ ಸೇವನೆಯ ಔಷಧಗಳ ಅಗತ್ಯವಿದ್ದಾಗ ಜನರು ದೀರ್ಘಾವಧಿಯ ಮದ್ದುಗಳನ್ನು ಅಪೇಕ್ಷಿಸುವುದು ಸಹಜ. ಕೆಲವೊಮ್ಮೆ ಅನಿವಾಸಿ ಭಾರತೀಯರಿಗೆ, ಉದ್ಯೋಗ ನಿಮಿತ್ತ ವಿದೇಶದಲ್ಲಿರುವವರಿಗೆ ವೈದ್ಯರು ನಿರ್ದೇಶಿಸಿದ ಔಷಧಗಳು ಶೀಘ್ರ ಲಭ್ಯತೆಯಲ್ಲಿ ಬೇಕಾಗುತ್ತದೆ. ಅಂತಹ ಗ್ರಾಹಕರಿಗೆ, ರೋಗಿಗಳಿಗೆ ತಕ್ಷಣಕ್ಕೆ ಔಷಧ ಪೂರೈಸಲು ಕ್ರಮಕೈಗೊಳ್ಳುವುದು ಅವಶ್ಯಕ. ಅಲ್ಲದೆ ವ್ಯಾಪಕ ಬಳಕೆಯ ರಕ್ತದೊತ್ತಡ, ಮಧುಮೇಹ, ಗ್ಯಾಸ್ಟ್ರಿಕ್, ನರರೋಗ ಇತ್ಯಾದಿ ವಿಭಾಗಗಳ ಔಷಧಿಗಳನ್ನು ಸದಾ ಲಭ್ಯವಾಗಿಸುವುದು ಅವಶ್ಯಕವಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಲ್.ಎನ್. ಭಟ್ ಮಳಿ

contributor

ಹಿರಿಯ ಫಾರ್ಮಸಿಸ್ಟ್, ಎಸ್‌ಸಿಎಸ್ ಆಸ್ಪತ್ರೆ ಮಂಗಳೂರು

Similar News