‘ಆರ್ಗಾನಿಕ್ ಬುದ್ಧಿಜೀವಿಯ ನೋಟ’ದ ಪಿಟ್ಕಾಯಣ
ಕೃತಿ ಪಿಟ್ಕಾಯಣ ಲೇಖಕರು: ರಾಜಾರಾಂ ತಲ್ಲೂರು ಮುಖಬೆಲೆ: 300 ಪ್ರಕಾಶಕರು: ಬಹುರೂಪಿ, ಆರ್.ಪಿ. ರೀಜೆನ್ಸಿ, ಎಫ್-1, 2ನೇ ಮಹಡಿ, 2ನೇ ಅಡ್ಡರಸ್ತೆ, ಪಿ ಆ್ಯಂಡ್ ಕಾಲನಿ, ಆರ್.ಟಿ. ನಗರ, ಬೆಂಗಳೂರು-560032. ಮೊ:7019182729
‘ಪಿಟ್ಕಾಯಣ’ ಈ ಕೃತಿಯು ಬಹು ಆಯಾಮಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಾಗೆಂದು ಅದು ಓದುಗರನ್ನು ಪರೀಕ್ಷಿಸುತ್ತದೆ ಎಂದೇನೂ ಅಲ್ಲ. ಬದಲಾಗಿ ಆಯಾ ವಯಸ್ಕರಿಗೆ ತಕ್ಕಂತೆ ಆಸಕ್ತಿಯಿಂದ ಸಲೀಸಾಗಿ ಓದಿಸಿಕೊಳ್ಳುತ್ತದೆ. ಈ ಕೃತಿಯ ಲೇಖನಗಳ ತಲೆಬರಹ ಓದುಗರನ್ನು ಕುತೂಹಲಿಗರನ್ನಾಗಿಸುವುದಲ್ಲದೆ, ಅವರಲ್ಲಿ ಬೆರಗನ್ನೂ ಉಂಟುಮಾಡುತ್ತವೆ. ಅಂತಹ ಕೆಲವನ್ನು ಇಲ್ಲಿ ಹೆಸರಿಸುವುದು ಸೂಕ್ತ-ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ; ವಿದ್ಯುತ್ ಖಾಸಗೀಕರಣಕ್ಕೆ ಗಂಟಲಲ್ಲಿ ಸಿಕ್ಕ ಮುಳ್ಳು; ಹೆದ್ದಾರಿ ಅಭಿವೃದ್ಧಿಯನ್ನು ‘ಹುಲಿ ಸವಾರಿ’ ಮಾಡಿಕೊಂಡಿರುವ ಗಡ್ಕರಿ ಸಾಹೇಬರು; ‘ಭಾರತ್ ನೆಟ್’-ಗೋಲಾಗದಿದ್ದದ್ದಕ್ಕೆ ಗೋಲ್‌ಪೋಸ್ಟ್ ಖಾಸಗೀಕರಣ?!; ಗಾಳಿ ಬಂದತ್ತ ತೂರಿಕೊಳ್ಳುವಾಗಲೂ ವಿಳಂಬ; ಕಳೆದುಕೊಂಡ ‘ಸೆಮಿಕಂಡಕ್ಟರ್’ ಅವಕಾಶಗಳು!; ಔಷಧಿ ರಂಗದಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸತೊಡಗಿರುವುದು!; ‘ನೆಟ್ ಝೀರೊ’: ಕುಂಟನ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು; ಡೇಟಾ ಮಾರುಕಟ್ಟೆಯ ಕೋಳಿ ಜಗಳ: ಮೂಡೀಸ್ v/s ಆಧಾರ್; ಮಾಹಿತಿ ಹಕ್ಕು ಕಾಯ್ದೆಗೆ ‘ದಯಾಮರಣ’ದ ಭಾಗ್ಯ: ಕರ್ನಾಟಕದ ಇSಅಔಒಗಳ ಹಲ್ಲುಗಳು ತೋರಿಸೋಕೆ ಬೇರೆ-ತಿನ್ನೋಕೆ ಬೇರೆ ಇವೆಯೆ?; ಪ್ರತೀ ಚುನಾವಣೆಯ ಸಂತೆಗೆ ಇವಿಎಂ ವಿವಾದದ ಮೂರು ಮೊಳ ಹಾಜರ್!; ಡಿಜಿಟಲ್ ಭಾರತ ಎಂಬುದು ಹಾವನ್ನು ಹೊಡೆದು ಹದ್ದಿಗೆ ಉಣ್ಣಿಸುವ ಆಟ ಆಗದಿರಲಿ; ಅರಸನ ಅದೃಶ್ಯ ಉಡುಪು ಮತ್ತು ಬಡತನ ನಿವಾರಣೆಯ ಸಮೀಕ್ಷೆ!; ಇಂಧನ: ಅಕ್ಕಿಯ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ; ಈ ಬಾರಿಯ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ; ವಿಕೆಟ್ ಇಲ್ಲದ ಕ್ರಿಕೆಟ್ ಆಟ!; ಕರಾವಳಿಯ ಅಗ್ನಿಕುಂಡ ದಲ್ಲಿನ್ನು ಖಾಸಗಿಯವರ ಮರ್ಜಿ- ISPಖಐ ಕಥೆ; ಟೋ(ಕೋ)ಲು ಕೊಟ್ಟು ಪೆಟ್ಟು ತಿನ್ನಿ!; ದುಡುಕ ಮನ್ನಿಸು ಪ್ರಭುವೆ...; ಸೂರ್ಯಂಗೇ ಟಾರ್ಚ್ ಹಿಡಿದ ‘ಡಿಯರ್ ಮೀಡಿಯಾ’... ಮುಂತಾದುವು.
ಬಿಸಿಲುಗುದುರೆ ಆಗಿಬಿಟ್ಟಿರುವ ‘ಹಠಾತ್ ಸಾವು’ ಅಧ್ಯಯನ ಫಲಿತಾಂಶ ಎನ್ನುವ ಲೇಖನವನ್ನು ಸ್ವಲ್ಪ ಗಮನಿಸೋಣ-ಕೋವಿಡ್ ಜಾಡ್ಯದಿಂದ ದಿಟವಾಗಿಯೂ ನಾವು, ಪಕ್ಕಾ ಸುಧಾರಿಸಿಕೊಂಡಿದ್ದೇವೆಯೇ?! ಇನ್ನೂ ಸಮಯ ಬೇಕಾಗಿದೆ. ಆದರೆ, ಕೋವಿಡ್ ಸನ್ನಿವೇಶದಲ್ಲಿ ಬಚ್ಚಿಟ್ಟ ಸಂಗತಿಗಳು ಮತ್ತಷ್ಟು ಹೊರಬರುತ್ತಲೇ ಇವೆ. ಆದರೆ, ಇದನ್ನು ಲೇಖಕರು ‘ಬಿಸಿಲುಗುದುರೆ’ ಎಂದಾಗ, ಕೋವಿಡ್ ಸಂದರ್ಭದ ‘ಹಠಾತ್ ಸಾವು’ ಕುರಿತ ಅಧ್ಯಯನ ಫಲಿತಾಂಶ ಏನನ್ನೂ ಸೂಚಿಸುತ್ತಿಲ್ಲ ಎನ್ನುವ ಸೂಚನೆಯನ್ನು ನೀಡುತ್ತಾರೆ. ಇತರ ಲೇಖನಗಳೂ ಸಹ ಅಂತಹ ಗಂಭೀರ ಸಂಗತಿಗಳ ಆಗರವೇ ಆಗಿವೆ.
ಅಂದರೆ ಒಂದು ಲೇಖನ, ಲೇಖನವಾಗಬೇಕಾದರೆ ಅದಕ್ಕೆ ಅಗತ್ಯವಾದ ಸಂಶೋಧನೆ ಬೇಕಾಗುತ್ತದೆ. ಇಲ್ಲವಾದರೆ ಅದು ಕೇವಲ ಹುಸಿಯಾಗಿಬಿಡುತ್ತದೆ. ಆದ್ದರಿಂದ ಈ ‘ಪಿಟ್ಕಾಯಣ’ ಪದವೇ ತಮಾಷೆಯಾಗಿದ್ದರೂ ಅದು, ಅಷ್ಟಕ್ಕೆ ನಿಲ್ಲುವುದಿಲ್ಲ; ಅದು ಸಂಶೋಧನೆಯನ್ನು ಅರಗಿಸಿಕೊಂಡು, ಸರಳವಾಗಿ ಓದಿಸಿಕೊಳ್ಳುತ್ತದೆ; ಅಲ್ಲಿ ಅಗತ್ಯವಾದ ಅಂಕಿ-ಅಂಶಗಳನ್ನು ಜತನದಿಂದ ಹೆಕ್ಕಿ ನೀಡುತ್ತದೆ, ಆ ಮೂಲಕ ನಮ್ಮನ್ನು ಮತ್ತಷ್ಟು ಚಿಂತನೆ, ಚರ್ಚೆಗೆ ತೊಡಗಿಸುತ್ತದೆ; ಅಂತಿಮವಾಗಿ ನಾವೇ ಒಂದು ನಿರ್ಣಯವನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ದಿಟವಾಗಿಯೂ ಇಲ್ಲಿನ ಬರಹದ ತಾಕತ್ತು!
ಇದರೊಡನೆ, ಜನ ಬಳಕೆಯ ದಿನನಿತ್ಯದ ನಾಣ್ಣುಡಿಗಳನ್ನು ಹೆಕ್ಕಿ, ಅವನ್ನು ಇವತ್ತಿನ ಕಾಲದ ಅತ್ಯಾಧುನಿಕ ಸನ್ನಿವೇಶದಲ್ಲಿ ಬಳಸಿಕೊಂಡು, ಅಲ್ಲೊಂದು ಭಿನ್ನವಾದ ಒಳನೋಟವನ್ನು ಇಲ್ಲಿನ ಬರಹ ನಮಗೆ ನೀಡುತ್ತದೆ; ಅಲ್ಲದೆ, ಅಲ್ಲಿ ನಡೆಯುವಂತಹ ಸಾಂಸ್ಕೃತಿಕ ರಾಜಕಾರಣವನ್ನು ಮತ್ತಷ್ಟು ಬಯಲುಗೊಳಿಸುತ್ತದೆ. ಉದಾಹರಣೆಗೆ, ಮೊದಲ ಲೇಖನದ ಕೊನೆಯಲ್ಲಿ ‘ಜನರ ಜೀವದೊಡನೆ ಚೆಲ್ಲಾಟ ನಡೆಯಕೂಡದು’ ಎನ್ನುವಾಗ, ಪ್ರಸಕ್ತ ಸರಕಾರ ಕೈಗೊಳ್ಳುವ ಆರೋಗ್ಯ-ನೀತಿಗಳು ಮಾರಕ ಪರಿಣಾಮಗಳನ್ನು ಒಳಗೊಂಡಿವೆ ಎನ್ನುವುದು ಓದುಗರಿಗೆ ಮನದಟ್ಟಾಗುತ್ತದೆ. ಹೀಗೆ ಲೇಖನವು ಪೌರತ್ವದ ನಡೆಯಾಗಿ ನಮ್ಮನ್ನು ಎಚ್ಚರಿಸುತ್ತದೆ. ಎರಡನೇ ಲೇಖನ, ದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಎನ್ನುವುದು ‘ಉದಾರೀಕರಣದ ಚಡಪಡಿಕೆ’ಯಾಗಿ, ದೇಶದ ಎಲ್ಲ ಹೆದ್ದಾರಿಗಳಿಗೆ ಟೋಲ್ ವಿಧಿಸುವುದನ್ನು ಅನಿವಾರ್ಯ ಮಾಡಿರುವುದು ಹೇಗೆ ಎನ್ನುವುದನ್ನು ಧ್ವನಿಸುತ್ತದೆ. ಹಾಗೆಯೇ, ಭಾರತದಲ್ಲಿ ಇಂಟರ್ನೆಟ್ ಎನ್ನುವುದೂ ಸಹ, ಗೋಲಾಗದಿದ್ದದ್ದಕ್ಕೆ ಗೋಲ್‌ಪೋಸ್ಟ್ ಖಾಸಗೀಕರಣವೇ ಮದ್ದು ಎಂದು ಹೇಳುವ ಮೂಲಕ ಪ್ರಜೆಯ ಒಳಿತನ್ನು ಖಾಸಗೀಕರಣ ಮರೆಮಾಚುವುದರತ್ತ ಬೊಟ್ಟು ಮಾಡುತ್ತದೆ. ಕೃತಿಯ ಮತ್ತೊಂದೆಡೆ ‘ಗೂಗಲ್’ ತನ್ನ ಏಕ ಸಾಮ್ರಾಜ್ಯವನ್ನು ನಿರೂಪಿಸಿರುವ ಬಗೆಯನ್ನು ಹೀಗೆ ವಿವರಿಸುತ್ತದೆ-‘‘ತನ್ನ ಸರ್ಚ್ ಇಂಜಿನ್ ‘ಗೂಗಲ್’ ಅನ್ನು ‘ನಾಮಪದ’ ಮಾತ್ರವಲ್ಲದೆ, ‘ಕ್ರಿಯಾಪದ’ವಾಗಿಯೂ ಮಾಡಿಕೊಂಡು, ಉಳಿದೆಲ್ಲ ಸ್ಪರ್ಧಿಗಳನ್ನು ಮೆಟ್ಟಿ ನಿಂತು ಶಕ್ತಿಶಾಲಿ ಬ್ರಾಂಡ್ ಸ್ಥಾಪಿಸಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಬದಲಾಗಿ, ಗೂಗಲ್‌ನಂತಹ ಕಾರ್ಪೊರೇಟ್ ಕಂಪೆನಿಗಳು ಸರಕಾರ ವಿಧಿಸುವ ಅಲ್ಪಮಟ್ಟದ ದಂಡವನ್ನು ಕಟ್ಟುತ್ತಾ, ಕೊನೆಗೆ ‘ದೇಶ ಕಾವಲಿಯಿಂದ ಬೆಂಕಿಗೆ ಬೀಳುವ ಸ್ಥಿತಿಯನ್ನು ತಂದೊಡ್ಡಬಲ್ಲದು’’ ಎನ್ನುವುದನ್ನು ಇಲ್ಲಿನ ಬರಹ ಸೂಚಿಸುತ್ತದೆ. ಇಂತಹ ಬಹು ಆಯಾಮಗಳ ಒಳನೋಟಗಳನ್ನು ಈ ಲೇಖನಗಳ ತಲೆಬರಹಗಳು ಸೂಸುತ್ತವೆ.
ಈ ಲೇಖನಗಳಲ್ಲಿನ ಪದ ಬಳಕೆ ಸೂಕ್ತವಾಗಿರುವುದರಲ್ಲಿ ಸ್ಥಳೀಯ ‘ನುಡಿವಲಯ’ದ ಕಸುವನ್ನು ಗಮನಿಸಬಹುದು. ಭ್ರಷ್ಟಾಚಾರದ ಕುರಿತು ಬರೆಯುವಾಗಲೂ ಲೇಖಕರು ರಾಜ್ಯ ಸರಕಾರಕ್ಕೆ ವಾರ್ನಿಂಗ್ ನೀಡಿರುವ ಮಾತುಗಳನ್ನು ಗಮನಿಸಿ, ‘‘ಗ್ಯಾರಂಟಿಗಳ ಪರ-ವಿರುದ್ಧ ‘ಉತ್ಪಾದಿತ ನೆರೇಟಿವ್‌ಗಳ’ ಅಬ್ಬರದಲ್ಲಿ ಸರಕಾರ ಒಂದು ಮಹತ್ವದ ‘ಸಹಜ’ ಸಂಗತಿಯನ್ನು ಮರೆತೇ ಬಿಟ್ಟಂತಿದೆ. ಸಕಾಲದಲ್ಲಿ ಎಚ್ಚೆತ್ತು ಅದನ್ನು ನೆನಪಿಸಿಕೊಳ್ಳದಿದ್ದರೆ ಮುಂಬರುವ ಲೋಕಸಭಾ ಚುನಾವಣೆಗಳ ವೇಳೆಗೆ ಅದು ಈ ಸರಕಾರಕ್ಕೆ ಕಹಿ ಕಷಾಯವಾಗಿ ಪರಿಣಮಿಸಲಿದೆ’’. ಇದನ್ನು ಪ್ರಸಕ್ತ ಸಿದ್ದರಾಮಯ್ಯನವರ ಸರಕಾರ ಅನುಭವಿಸಿದೆ, ಅನುಭವಿಸುತ್ತಿದೆ.
ಹಾಗೆಯೇ ಮತ್ತೊಂದು ಲೇಖನದಲ್ಲಿ, ‘ಮತದಾರರಲ್ಲಿ ಮೂಡುವ ಆಡಳಿತ ವಿರೋಧಿ’ ಅಲೆಗಳನ್ನು (ಂಟಿಣi iಟಿಛಿumbeಟಿಛಿಥಿ) ಹತ್ತಿಕ್ಕಲು, ಅವರ ಸಿಟ್ಟನ್ನು ತಣಿಸಲು ಮತ್ತು ಅವರ ಮುಂಗೈಗೆ-ಮತ್ತೊಂದು ಅವಧಿಗೆ-ಬೆಲ್ಲ ಸವರಲು ಪ್ರಯತ್ನಿಸುವುದು! ನೆಲದ ಕಾನೂನು, ದೇಶದ ಯಾವನೇ ಪ್ರಜೆಗೆ ನಿರ್ದಿಷ್ಟ ಅರ್ಹತೆಗಳಿದ್ದರೆ ಚುನಾವಣೆಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ. ಈ ಅವಕಾಶವನ್ನು ಕಾಯಾ, ವಾಚಾ, ಮನಸಾ ಬಳಸುವ ಬದಲು, ಏನಾದರೊಂದು ಕಥನ ಕಟ್ಟುವ ಮೂಲಕ ಚಾಪೆಯಡಿ, ರಂಗೋಲಿಯಡಿ ತೂರಿಯಾದರೂ ಚುನಾವಣೆ ಗೆಲ್ಲುವ ‘ಟೂಲ್’ ಆಗಿ ಬಳಸಿಕೊಳ್ಳುವುದು ಈಗೀಗ ಬಹಳ ಸಲೀಸಾಗಿ ನಡೆಯುತ್ತಿದೆ. ದೇಶದ ಸಾರ್ವಜನಿಕ ಬದುಕಿನ ನೈತಿಕ ಅಧಃಪತನದ ಆಳವನ್ನು ಅಳೆಯಲು ಈಗ ಇದೂ ಒಂದು ಮಾನದಂಡ. 2000ನೇ ಇಸವಿಯ ತನಕ ಎಲ್ಲೋ ಅಪರೂಪಕ್ಕೆ ಬಳಕೆ ಆಗುತ್ತಿದ್ದ ಈ ‘ಹೊಸಮುಖ್ ಭಾಯಿ’ ತಂತ್ರ, ಪರಿಣಾಮಕಾರಿ ಟೂಲ್ ಆಗಬಹುದು ಎಂದು ಖಚಿತವಾದದ್ದು 2002ರ ಗುಜರಾತ್ ಚುನಾವಣೆಗಳ ವೇಳೆ. ಅಂದು ಬಿಜೆಪಿ ಪೂರ್ಣಾವಧಿ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರು ಹಠಾತ್ತಾಗಿ ಆ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆಯಾದರು. ಇಲ್ಲಿರುವ ‘ಆ ವಿಚಾರದ’ ತೂಕವನ್ನು ತಗ್ಗಿಸುವ ಬದಲು, ಇಲ್ಲಿ ಬಳಸಿರುವ ನುಡಿಗಳು ಪರಿಚಿತ ನುಡಿಗಳೇ ಆದರೂ ಒಂದು ವಿದ್ಯಮಾನವನ್ನು ಕಟ್ಟುವ ಮತ್ತು ಸಮಾಜ ಬದಲಾಗುವ ದಿಕ್ಕನ್ನು ಆ ನುಡಿಗಳು ಹಿಡಿದಿಡುವ ಪರಿಣಾಮವನ್ನು ‘ನುಡಿವಲಯ’ ಎನ್ನಬಹುದು. ಇಂತಹ ನುಡಿವಲಯ ಇಲ್ಲವಾದರೆ ಬದಲಾವಣೆಯನ್ನು ಜನತಂತ್ರದಲ್ಲಿ ನೆಲೆಯೂರಿಸಲಾಗದು. ಆಗ ಜನರೂ ಸಹ ಬದಲಾವಣೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲೂ ಆಗದು. ಆದ್ದರಿಂದ ಎಲ್ಲಾ ಲೇಖನಗಳ ಅಂತಹ ವಿಶ್ಲೇಷಣೆಯನ್ನು ಇಲ್ಲಿ ಮಾಡದೆ, ಅದನ್ನು ಓದುಗರು ಮಾಡಲಿ.
ಇನ್ನು, ಈ ಕೃತಿಯ ತಾತ್ವಿಕ ಚಹರೆಯನ್ನು ಚರ್ಚಿಸುವುದಾದರೆ, ನನಗೆ, ಆಂಟೋನಿಯೋ ಗ್ರಾಮ್ಶಿ ಮಂಡಿಸುವ ಆರ್ಗಾನಿಕ್ ಬುದ್ಧಿಜೀವಿಯ ನೋಟ ಇಲ್ಲಿ ಕಂಡುಬರುತ್ತದೆ. ಅಂದರೆ, ಎಲ್ಲೂ ಅಬ್ಬರವಿಲ್ಲದೆ, ಹೇಳುವುದನ್ನು ಮರೆಮಾಚದೆ, ಸಲೀಸಾಗಿ ವಿಚಾರಗಳನ್ನು ಲೇಖಕರು ಮಂಡಿಸುತ್ತಾರೆ. ಇಲ್ಲಿ ಯಾರಿಗೂ ಅವಮಾನಿಸದೆ, ಬದಲಾವಣೆಯಲ್ಲಿ ಪಾಲ್ಗೊಳ್ಳುವ ಮಾದರಿಯೊಂದು ಕಂಡುಬರುತ್ತದೆ. ಈ ಮಾದರಿಯನ್ನು ಆಂಟೋನಿಯೋ ಗ್ರಾಮ್ಶಿ ‘ಮಂದಕ್ರಾಂತಿ’ ಎಂದು ಕರೆಯುತ್ತಾನೆ. ಅಂತಹ ಪಲ್ಲಟಗಳನ್ನು ಈ ಕೃತಿಯೂ ಸಹ ಪ್ರಚೋದಿಸುತ್ತದೆ. ಅಂದರೆ, ಪ್ರಜಾತಂತ್ರ ವ್ಯವಸ್ಥೆಯನ್ನು ನಂಬಿಸುವ ಸರಕಾರಗಳು, ಆಡಳಿತದಲ್ಲಿರುವ ಹುಳುಕುಗಳ ಬಗ್ಗೆ ಜನತಂತ್ರವನ್ನು ಎಚ್ಚರಿಸುವ ಮತ್ತು ದುಡಿಮೆಯ ಪ್ರತಿಫಲ ಕುರಿತ ಚರ್ಚೆಗಳು ಇಲ್ಲಿ ಮನನೀಯವಾದುವು.
ಆದ್ದರಿಂದಲೇ, ಈ ಪ್ರಕ್ರಿಯೆಯೇ ‘ಆರ್ಗಾನಿಕ್ ಬುದ್ಧಿಜೀವಿಯ ನೋಟ’ ಎಂದು ಗುರುತಿಸಿದ್ದು. ಇಂತಹ ಅಪ್ಪಟ ಮೆಲುಕುಗಳ ಚಿತ್ರಣವೇ ಈ ಪಿಟ್ಕಾಯಣ.