×
Ad

ಮಹಿಳೆಯರಿಗಾಗಿ ಪ್ರಗತಿಪರ ನೀತಿಗಳ ಅಗತ್ಯ

Update: 2025-11-02 09:51 IST

ಮಹಿಳೆಯರು ದಶಕಗಳಿಂದ ಅಂತಹ ಯಾವುದೇ ಬೇಡಿಕೆಯಿಲ್ಲದೆ ಕೆಲಸ ಮಾಡುತ್ತಿರುವಾಗ, ಈಗ ನೀತಿಯ ಅಗತ್ಯವನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ವಾಸ್ತವವೆಂದರೆ ಮಹಿಳೆಯರು ಸವಾಲುಗಳನ್ನು ಲೆಕ್ಕಿಸದೆ ‘ಹೊಂದಿಕೊಳ್ಳಲು’ ಪ್ರಯತ್ನಿಸುತ್ತಾ ಸದ್ದಿಲ್ಲದೆ ಬಳಲುತ್ತಿದ್ದಾರೆ ಮತ್ತು ನಾಗರಿಕ ಸಮಾಜವಾಗಿ ನಾವು ಪಿತೃಪ್ರಭುತ್ವದ ಚಕ್ರವನ್ನು ಮುಂದುವರಿಸುತ್ತೇವೆಯೇ ಅಥವಾ ನಾವು ಯಥಾಸ್ಥಿತಿಯನ್ನು ಪ್ರಶ್ನಿಸಿ ನ್ಯಾಯಸಮ್ಮತ ಸಮಾಜದತ್ತ ಪ್ರಗತಿ ಸಾಧಿಸುತ್ತೇವೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು.

2025ರ ಅಕ್ಟೋಬರ್ 10 ರಂದು ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ವರ್ಷಕ್ಕೆ 12 ದಿನಗಳ ಮುಟ್ಟಿನ ರಜೆಯನ್ನು (ಪಾವತಿಸಿದ ರಜೆ) ಸಂಪುಟ ಅನುಮೋದಿಸುವ ಮೂಲಕ ಕರ್ನಾಟಕವು ಇತಿಹಾಸವನ್ನು ಸೃಷ್ಟಿಸಿದೆ. ಸಚಿವ ಸಂಪುಟದ ಈ ಅತ್ಯಂತ ಪ್ರಗತಿಪರ ಮತ್ತು ಪ್ರಬಲ ನಿರ್ಧಾರಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅವಿರತ ಪ್ರಯತ್ನವೇ ಕಾರಣವಾಗಿತ್ತು. ಜಗತ್ತು ಉದ್ಯೋಗಿಗಳಿಗೆ ಹೆಚ್ಚು ಪ್ರಗತಿಪರ ಮತ್ತು ಮಾನವೀಯ ನೀತಿಗಳತ್ತ ಸಾಗುತ್ತಿರುವ ಯುಗದಲ್ಲಿ ಕಾರ್ಪೊರೇಟ್ ಭಾರತವು ಕೆಲಸದ ಸಮಯವನ್ನು ಹೆಚ್ಚಿಸಲು ಒತ್ತಾಯಿಸುತ್ತಿದೆ, ಸಚಿವ ಸಂತೋಷ್ ಲಾಡ್ ಅವರ ಮುಟ್ಟಿನ ರಜೆಯ ನೀತಿಯನ್ನು ಜಾರಿಗೆ ತರುವ ಕ್ರಮವು ಮಹಿಳಾ ಉದ್ಯೋಗಿಗಳಿಗೆ ಸಹಾಯ ಮಾಡುವುದಲ್ಲದೆ, ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರಲ್ಲೂ ಕಾರ್ಮಿಕ ಪಡೆಯ ಮಾನವೀಕರಣದ ಪ್ರಮುಖ ಹೆಜ್ಜೆಯಾಗಿದೆ.

ಜಾಗತಿಕ ಸಂಖ್ಯೆಗಳಿಗೆ ಹೋಲಿಸಿದರೆ ಭಾರತದ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯು ಅತ್ಯಂತ ಕಡಿಮೆಯಾಗಿದೆ, ದುರದೃಷ್ಟವಶಾತ್ ಕಳೆದ 8ರಿಂದ 10 ವರ್ಷಗಳಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದೆ. ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ, ಆರ್ಥಿಕ, ನೇಮಕಾತಿ ಮಾದರಿಗಳು, ಮಹಿಳಾ ಪರ ನೀತಿಗಳ ಕೊರತೆ, ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆ, ಮಹಿಳಾ ಉದ್ಯೋಗವನ್ನು ಉತ್ತೇಜಿಸುವ ನೀತಿಗಳನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ ಇತ್ಯಾದಿಗಳು ಕಾರ್ಮಿಕ ಪಡೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಕುಸಿತಕ್ಕೆ ಹಲವಾರು ಕಾರಣಗಳಾಗಿವೆ.

ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಕಾರ್ಯಪಡೆಯನ್ನು ಪ್ರವೇಶಿಸುತ್ತಿರುವುದರಿಂದ, ಮಹಿಳೆಯರ ಜೈವಿಕ ಸವಾಲುಗಳನ್ನು ಮತ್ತು ಕಾರ್ಮಿಕ ಪಡೆಯಲ್ಲಿ ಮಹಿಳೆಯರನ್ನು ಉತ್ತೇಜಿಸಲು ಹೆಚ್ಚು ನ್ಯಾಯಸಮ್ಮತ, ಆರಾಮದಾಯಕ ಕೆಲಸದ ಪರಿಸ್ಥಿತಿಗಳು ಮತ್ತು ನೀತಿಗಳ ಅಗತ್ಯವನ್ನು ಅಂಗೀಕರಿಸುವುದು ಮುಖ್ಯವಾಗಿದೆ.

ಶೇ. 50ಕ್ಕಿಂತ ಹೆಚ್ಚು ಯುವತಿಯರು ಡಿಸ್ಟೆನೊರಿಯಾದಿಂದ (ಮುಟ್ಟಿನೊಂದಿಗೆ ಸಂಬಂಧಿಸಿದ ನೋವು) ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಮತ್ತು ವೈದ್ಯಕೀಯ ಸಂಶೋಧನೆಗಳು ಸಾಬೀತುಪಡಿಸುತ್ತವೆ. ಶೇ. 65ರಷ್ಟು ಕೆಲಸ ಮಾಡುವ ಮಹಿಳೆಯರು ತಮ್ಮ ಋತುಚಕ್ರದ 1-2 ದಿನಗಳಲ್ಲಿ ಅಸ್ವಸ್ಥತೆ ಮತ್ತು ಮಾನಸಿಕ ಒತ್ತಡವನ್ನು ಎದುರಿಸುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪುರುಷರು ಮತ್ತು ಮಹಿಳೆಯರ ನಡುವೆ ಜೈವಿಕ ವ್ಯತ್ಯಾಸಗಳಿವೆ, ಮುಟ್ಟಿನ ಅಸ್ವಸ್ಥತೆಯನ್ನು ಅನುಭವಿಸುತ್ತಿರುವ ಮಹಿಳೆಯರು ಮತ್ತು ಮುಟ್ಟಿನ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆಯರು (ಡಿಸ್ಟೆನೊರಿಯಾ, ಎಂಡೊಮೆಟ್ರಿಯೊಸಿಸ್, ಅಂಡಾಶಯದ ಚೀಲಗಳು ಮತ್ತು ಮನಸ್ಥಿತಿಯ ಅಸ್ವಸ್ಥತೆಗಳು ಸೇರಿದಂತೆ) ಮುಟ್ಟಿನ ರಜೆಯ ನೀತಿಯಿಂದ ಪ್ರಯೋಜನ ಪಡೆಯುತ್ತಾರೆ.

ಮುಟ್ಟಿನ ಸಮಸ್ಯೆಗಳಿಗೆ ಬಂದಾಗ ಪ್ರತೀ ಮಹಿಳೆಗೆ ಜೀವನದಲ್ಲಿ ವಿವಿಧ ಸಮಯಗಳಲ್ಲಿ ವಿಭಿನ್ನ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಹೆಚ್ಚಿನ ಮಹಿಳೆಯರನ್ನು ಮತ್ತು ಮುಖ್ಯವಾಗಿ ಧ್ವನಿಯಿಲ್ಲದವರನ್ನು ಒಳಗೊಳ್ಳುವ ಹೆಚ್ಚು ನ್ಯಾಯಯುತ ಮತ್ತು ಮಹಿಳಾ ಪರವಾದ ನೀತಿಗಳ ಅವಶ್ಯಕತೆಯಿದೆ, ಇದು ನಮ್ಮನ್ನು ಹೆಚ್ಚು ಲಿಂಗ ನ್ಯಾಯಯುತ ಮತ್ತು ಪ್ರಗತಿಪರ ರಾಜ್ಯ ಮತ್ತು ರಾಷ್ಟ್ರವನ್ನಾಗಿ ಮಾಡುತ್ತದೆ.

ಮುಟ್ಟಿನ ರಜೆಯ ನೀತಿ ಚರ್ಚೆಯ ಇತಿಹಾಸವು ಒಂದು ಶತಮಾನಕ್ಕೂ ಮೀರಿದೆ, ಇದನ್ನು 20ನೇ ಶತಮಾನದಲ್ಲಿ ರಶ್ಯದಲ್ಲಿ ಮೊದಲು ಜಾರಿಗೆ ತರಲಾಯಿತು, ಉದ್ಯೋಗದಾತರು ಮಹಿಳಾ ಉದ್ಯೋಗಿಗಳ ತಾರತಮ್ಯವನ್ನು ಉಲ್ಲೇಖಿಸಿ ಇದನ್ನು 1927ರಲ್ಲಿ ತೆಗೆದುಹಾಕಲಾಯಿತು. 1992ರಲ್ಲಿ ಬಿಹಾರ ಸರಕಾರವು ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 2 ದಿನಗಳ ವಿಶೇಷ ರಜೆಗೆ ಅವಕಾಶ ಮಾಡಿಕೊಟ್ಟಿತ್ತು. ಜನವರಿ 2023ರಲ್ಲಿ ಕೇರಳವು ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ನೀಡಿತು.

1947ರಲ್ಲಿ ಜಪಾನ್ ಮಹಿಳೆಯರಿಗೆ ಮೆನ್ಸುರಟಿಂಗ್ ರಜೆಯನ್ನು ಒದಗಿಸುವ ಕಾನೂನನ್ನು ಜಾರಿಗೆ ತಂದಿತ್ತು, ಆದರೆ ಲೇಬರ್ ಸ್ಟ್ಯಾಂಡರ್ಡ್ ಕಾನೂನಿನ 68ನೇ ವಿಧಿಯು ಇದನ್ನು ವೇತನ ಸಹಿತ ರಜೆ ಎಂದು ನಿರ್ದಿಷ್ಟಪಡಿಸುವುದಿಲ್ಲ. ಕಾರ್ಮಿಕ ಕಾಯ್ದೆ 2023ರ ಅಡಿಯಲ್ಲಿ, ಇಂಡೋನೇಶ್ಯದ 13ನೇ ವಿಧಿಯು ಮಹಿಳೆಯರಿಗೆ ತಿಂಗಳಿಗೆ 2 ದಿನಗಳ ರಜೆಯ ಹಕ್ಕನ್ನು ಹೊಂದಿದೆ. ಆದರೆ ಇವು ಹೆಚ್ಚುವರಿ ರಜೆಗಳಲ್ಲ.

ತೈವಾನ್‌ನ ಲಿಂಗ ಸಮಾನತೆ ಕಾಯ್ದೆಯಲ್ಲಿ 30 ದಿನಗಳ ಆರೋಗ್ಯ ಸಂಬಂಧಿತ ರಜೆಗೆ ವರ್ಷಕ್ಕೆ ಮೂರು ಹೆಚ್ಚುವರಿ ದಿನಗಳನ್ನು ನೀಡಲಾಗುತ್ತದೆ. 2023ರ ಫೆಬ್ರವರಿಯಲ್ಲಿ ಸ್ಪೇನ್ ತನ್ನ ಮಹಿಳಾ ಉದ್ಯೋಗಿಗಳಿಗೆ ಸಮಗ್ರ ಮುಟ್ಟಿನ ವೇತನ ಸಹಿತ ರಜೆಯ ನೀತಿಯನ್ನು ಜಾರಿಗೆ ತಂದ ಯುರೋಪಿನ ಮೊದಲ ದೇಶವಾಯಿತು. ಜಾಂಬಿಯಾದಲ್ಲಿ 2015ರಿಂದ ಮಹಿಳೆಯರು ತಾಯಿಯ ದಿನ ಎಂದು ಕರೆಯಲ್ಪಡುವ ತಿಂಗಳಲ್ಲಿ ಒಂದು ದಿನದ ರಜೆಗೆ ಅರ್ಹರಾಗಿದ್ದಾರೆ.

2023ರ ಜನವರಿಯಲ್ಲಿ, ಮಹಿಳಾ ವಿದ್ಯಾರ್ಥಿಗಳು ಮತ್ತು ದುಡಿಯುವ ಮಹಿಳೆಯರಿಗೆ ಮುಟ್ಟಿನ ರಜೆಯ ನೀತಿಯನ್ನು ರೂಪಿಸಲು ಎಲ್ಲಾ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಪಿಐಎಲ್‌ಗೆ ಪ್ರತಿಕ್ರಿಯೆಯಾಗಿ, ಫೆಬ್ರವರಿ 24ರಂದು ಸುಪ್ರೀಂ ಕೋರ್ಟ್ ಪಿಐಎಲ್ ಅನ್ನು ವಿಲೇವಾರಿ ಮಾಡಿತು.

ಅನೇಕ ದಶಕಗಳಿಂದ, ಸರಕಾರಗಳು, ಎನ್‌ಜಿಒಗಳು, ಸಂಸ್ಥೆಗಳು ಮುಟ್ಟಿನ ನೈರ್ಮಲ್ಯದ ಬಗ್ಗೆ ಅಭಿಯಾನಗಳು ಮತ್ತು ಶೈಕ್ಷಣಿಕ ಉಪಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಗಳನ್ನು ಮಾಡಿವೆ. ಪ್ರಯತ್ನಗಳ ಹೊರತಾಗಿಯೂ ಮುಟ್ಟಿನ ಬಗ್ಗೆ ಯಾವುದೇ ಚರ್ಚೆಯು ನಮ್ಮ ದೇಶದಲ್ಲಿ ಇನ್ನೂ ನಿಷಿದ್ಧವಾಗಿದೆ ಮತ್ತು ಹಲವಾರು ದಶಕಗಳಿಂದ ಮಹಿಳೆಯರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆಗಳ ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸುವ ನಿಷಿದ್ದ ಸ್ವಭಾವವು ಸಮಾಜದಲ್ಲಿ ಮುಂದುವರಿದಿದೆ.

ಮುಟ್ಟಿನ ರಜೆಯ ವಿರುದ್ಧ ವಾದವಿದೆ. ಇದನ್ನು ಅನುಷ್ಠಾನಗೊಳಿಸುವುದರಿಂದ ಖಾಸಗಿ ಕಂಪೆನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ನಿರುತ್ಸಾಹಗೊಳಿಸಬಹುದು. ಜಗತ್ತಿನಾದ್ಯಂತ ದೀರ್ಘಕಾಲದವರೆಗೆ ಸಂಸ್ಥೆಗಳು ತಮ್ಮ ಕಾರ್ಯಪಡೆಗೆ ಮಹಿಳೆಯರನ್ನು ನೇಮಿಸಿಕೊಳ್ಳುವುದನ್ನು ತಡೆಯಲು ನೆಪಗಳನ್ನು ಹುಡುಕುತ್ತಲೇ ಇರುತ್ತವೆ ಮತ್ತು ಮುಟ್ಟಿನ ರಜೆಯು ಇನ್ನೂ ಒಂದು ಕಾರಣವಾಗಬಹುದು.

ಮಹಿಳೆಯರು ದಶಕಗಳಿಂದ ಅಂತಹ ಯಾವುದೇ ಬೇಡಿಕೆಯಿಲ್ಲದೆ ಕೆಲಸ ಮಾಡುತ್ತಿರುವಾಗ, ಈಗ ನೀತಿಯ ಅಗತ್ಯವನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಆದರೆ ವಾಸ್ತವವೆಂದರೆ ಮಹಿಳೆಯರು ಸವಾಲುಗಳನ್ನು ಲೆಕ್ಕಿಸದೆ ‘ಹೊಂದಿಕೊಳ್ಳಲು’ ಪ್ರಯತ್ನಿಸುತ್ತಾ ಸದ್ದಿಲ್ಲದೆ ಬಳಲುತ್ತಿದ್ದಾರೆ ಮತ್ತು ನಾಗರಿಕ ಸಮಾಜವಾಗಿ ನಾವು ಪಿತೃಪ್ರಭುತ್ವದ ಚಕ್ರವನ್ನು ಮುಂದುವರಿಸುತ್ತೇವೆಯೇ ಅಥವಾ ನಾವು ಯಥಾಸ್ಥಿತಿಯನ್ನು ಪ್ರಶ್ನಿಸಿ ನ್ಯಾಯಸಮ್ಮತ ಸಮಾಜದತ್ತ ಪ್ರಗತಿ ಸಾಧಿಸುತ್ತೇವೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು.

ಆರ್ಥಿಕ ವಾದವೆಂದರೆ ಮುಟ್ಟಿನ ರಜೆಯು ವ್ಯವಹಾರಗಳಿಗೆ ಅಡ್ಡಿಯಾಗಬಹುದು ಮತ್ತು ಆರ್ಥಿಕ ಹೊರೆಯನ್ನು ಹೆಚ್ಚಿಸಬಹುದು, ಆದರೆ ಅಧ್ಯಯನಗಳು ಮಹಿಳಾ ಉದ್ಯೋಗಿಗಳ ಉತ್ಪಾದಕತೆಯು ಮುಟ್ಟಿನ ಕಾರಣದಿಂದಾಗಿ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಹೇಳುವಾಗ, ಮುಟ್ಟಿನ ರಜೆಯ ವಿರುದ್ಧದ ವಾದವು ಬಲ ಪಡೆಯುವುದಿಲ್ಲ. ಪಿಒಎಸ್‌ಎಚ್ (POSH) ಕಾಯ್ದೆಯನ್ನು ಜಾರಿಗೆ ತಂದಾಗ ಮತ್ತು ಹೆರಿಗೆ ರಜೆಯನ್ನು ಶಾಸನಬದ್ಧಗೊಳಿಸಿದಾಗ ಅದೇ ರೀತಿಯ ಆತಂಕ ಮತ್ತು ಕಾರಣಗಳನ್ನು ನೀಡಲಾಗಿತ್ತು.

ಅತ್ಯಂತ ಮುಖ್ಯವಾಗಿ, ನಮ್ಮ ಸಂವಿಧಾನದ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಲಿಂಗ ಸಮಾನತೆಯನ್ನು ಖಾತ್ರಿಪಡಿಸಿದ್ದಾರೆ, ಸಂವಿಧಾನದ 15 (3ನೇ ವಿಧಿಯು ‘ಯಾವುದೇ ರಾಜ್ಯವು ಮಹಿಳೆಯರು ಮತ್ತು ಮಕ್ಕಳಿಗಾಗಿ ಯಾವುದೇ ವಿಶೇಷ ನಿಬಂಧನೆಯನ್ನು ಮಾಡುವುದನ್ನು ತಡೆಯುವುದಿಲ್ಲ’ ಎಂದು ಹೇಳುತ್ತದೆ ಮತ್ತು ಸಂವಿಧಾನದ 42ನೇ ವಿಧಿಯು ’ರಾಜ್ಯವು ನ್ಯಾಯೋಚಿತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಮತ್ತು ಹೆರಿಗೆ ಪರಿಹಾರಕ್ಕಾಗಿ ಅವಕಾಶ ಕಲ್ಪಿಸುತ್ತದೆ’ ಎಂದು ಹೇಳುತ್ತದೆ.

ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮುಟ್ಟಿನ ರಜೆಯ ಬೇಡಿಕೆಯನ್ನು ಅಧ್ಯಯನ ಮಾಡಲು ಮತ್ತು ದುಡಿಯುವ ಮಹಿಳೆಯರ ಜೈವಿಕ ಅಗತ್ಯಗಳ ಬಗ್ಗೆ ಮಾನವೀಯ ದೃಷ್ಟಿಕೋನವನ್ನು ತೆಗೆದುಕೊಳ್ಳಲು ತಜ್ಞರ ಸಮಿತಿಯನ್ನು ರಚಿಸುವ ಕ್ರಮವು ಪ್ರತಿಯೊಬ್ಬರಿಗೂ ಉದ್ಯೋಗವನ್ನು ಮಾನವೀಯ ದೃಷ್ಟಿಯಿಂದ ನೋಡುವಲ್ಲಿ ಔನತ್ಯಕ್ಕೆ ಹೋಗುತ್ತದೆ. ಅನೇಕ ರಾಜ್ಯಗಳು ಈಗಾಗಲೇ ಮಹಿಳಾ ಸ್ನೇಹಿ ರಾಜ್ಯ ನೀತಿಗಳನ್ನು ಉತ್ತೇಜಿಸಲು ಕರ್ನಾಟಕ ಮಾದರಿಯ ಮುಟ್ಟಿನ ರಜೆಯ ನೀತಿಯನ್ನು ಪರಿಗಣಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕವಿತಾ ರೆಡ್ಡಿ

contributor

ಸದಸ್ಯರು, ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

Similar News