ಕಸ ಸಂಗ್ರಹಿಸಲು ಬಾರದ ವಾಹನ: ಸಾರ್ವಜನಿಕರ ಆರೋಪ
ಗುಡಿಬಂಡೆ: ಹಸಿ ಕಸ ಹಾಗೂ ಒಣ ಕಸ ಸಂಗ್ರಹ ಮಾಡುವ ವಾಹನವು ಹಂಪಸಂದ್ರ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ಗ್ರಾಮಗಳ ಕಸವನ್ನು ಸಂಗ್ರಹ ಮಾಡಿ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬುದು ಸಾರ್ವಜವಿಕರ ಆರೋಪವಾಗಿದೆ.
ಎಲ್ಲ ಗ್ರಾಮಗಳ ಮನೆಗಳ ಒಣ ಹಾಗೂ ಹಸಿ ಕಸವನ್ನು ಸಂಗ್ರಹ ಮಾಡಲು ಹಂಪಸಂದ್ರ ಪಂಚಾಯತ್‌ನ ಅನುದಾನದಲ್ಲಿ ಕಸ ಸಂಗ್ರಹ ವಾಹನವನ್ನು ಖರೀದಿ ಮಾಡಲಾಗಿದೆ. ಆದರೆ ಇತರ ಗ್ರಾಮಗಳ ಕಸ ಸಂಗ್ರಹಣೆಯಲ್ಲಿ ಅಧಿಕಾರಿಗಳು ಮುತವರ್ಜಿಯನ್ನು ವಹಿಸಿಲ್ಲ. ಇದರಿಂದಾಗಿ ಕಸ್ಸ ಎಲ್ಲೆಂದರಲ್ಲಿ ರಾಶಿ ಬೀಳುತ್ತಿದ್ದು, ಸ್ವಚ್ಛತೆ ಸಮಸ್ಯೆ ಎದುರಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಸಾರ್ವಜನಿಕರ ಬಳಕೆಗೆ ಇರುವಂತಹ ವಾಹನವನ್ನು ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಕಸ ಸಂಗ್ರಹ ಮಾಡದೇ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಸ ಸಂಗ್ರಹ ವಾಹನವು ಎಲ್ಲ ಗ್ರಾಮಗಳ ಕಸವನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ನಾಗಮಣಿ, ಇಒ ಗುಡಿಬಂಡೆ
ಕಸ ಸಂಗ್ರಹಕ್ಕೆ ಎರಡು ಬಕೆಟ್‌ಗಳನ್ನು ಪಂಚಾಯತ್‌ನಿಂದ ಕೊಟ್ಚಿದ್ದಾರೆ. ಆದರೆ ಅದರಲ್ಲಿ ಕಸ ಸಂಗ್ರಹ ಮಾಡಿಕೊಂಡು ನಾವು ಬೇರೆ ಕಡೆ ಕಸವನ್ನು ಹಾಕುವಂತಹ ಪರಿಸ್ಥಿತಿಗಳು ಇವೆ. ನಾವು ಈವರೆಗೂ ಕಸದ ವಾಹನವನ್ನು ನೋಡಲು ಸಾಧ್ಯವಾಗಿಲ್ಲ.
-ನಂಜುಂಡಪ್ಪ, ಸ್ಥಳೀಯ ನಿವಾಸಿ
ವಾಹನವನ್ನು ಖರೀದಿ ಮಾಡಿ ಒಂದು ವರ್ಷ ಕಳೆದಿದೆ. ಆ ವಾಹನವನ್ನು ಮಹಿಳಾ ಚಾಲಕರು ಚಲಾಯಿಸಬೇಕು ಎಂದು ಸರಕಾರದ ಆದೇಶವಿದೆ. ಚಾಲಕಿಯನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ಇನ್ನೂ ಪರಿಪೂರ್ಣವಾಗಿ ವಾಹನ ಚಾಲನೆ ಮಾಡಲು ಆಗುತ್ತಿಲ್ಲ. ಮತ್ತೊಮ್ಮೆ ಪರಿಶೀಲಿಸಿ ಎಲ್ಲ ಗ್ರಾಮಗಳ ಕಸ ಸಂಗ್ರಹಿಸಲು ಕ್ರಮವಹಿಸುತ್ತೇವೆ.
-ಶ್ರೀನಿವಾಸ್, ಪಿಡಿಒ ಹಂಪಸಂದ್ರ ಗ್ರಾಮ ಪಂಚಾಯತ್