ಮನೆ ನಿರ್ಮಾಣಕ್ಕೆ ಸರಕಾರದಿಂದ ಅನುದಾನ ಕೊಡುವಂತೆ ಸಾರ್ವಜನಿಕರ ಮನವಿ
ಶಿಡ್ಲಘಟ್ಟ: ವಾಸ ಮಾಡುವುದಕ್ಕೆ ಒಂದು ಮನೆ ನಿರ್ಮಾಣ ಮಾಡಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಬಡವರ ಕನಸಾಗಿರುತ್ತದೆ. ಆದರೆ, 2021-22 ನೇ ಸಾಲಿನ ನಂತರ, ರಾಜ್ಯ ಸರಕಾರದಿಂದ ಗ್ರಾಮ ಪಂಚಾಯತ್‌ಗಳಿಗೆ ಒಂದೇ ಒಂದು ಮನೆಯ ನಿರ್ಮಾಣದ ಗುರಿಯನ್ನು ನೀಡದ ಕಾರಣ, ಮನೆಯ ನಿರ್ಮಾಣದ ಕನಸು ಹೊತ್ತುಕೊಂಡಿರುವ ಬಡವರ ಕನಸು, ಕನಸಾಗಿಯೇ ಉಳಿದಿದೆ.
ತಾಲೂಕಿನ ಜಂಗಮಕೋಟೆ ಹೋಬಳಿ ಮಳ್ಳೂರು ಗ್ರಾಮದಲ್ಲಿ, ಇಂದಿಗೂ ಬಹಳಷ್ಟು ಮಂದಿ ಜನರು, ಹೆಂಚಿನ ಮನೆಗಳು ಹಾಗೂ ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಂಡಿರುವ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ, ಜೀವನ ಮಾಡುತ್ತಿದ್ದಾರೆ.
ಹಳೇಯ ಸೀರೆಗಳನ್ನು, ಪರದೆಗಳಂತೆ ಸುತ್ತಲೂ ಕಟ್ಟಿಕೊಂಡು, ಸಿಮೆಂಟ್ ಶೀಟ್ ಗಳನ್ನು ಮೇಲ್ಛಾವಣಿಯನ್ನಾಗಿ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಮಳೆ ಬಂದರೆ, ಬೇರೆಲ್ಲಿಗೂ ಹೋಗುವುದಕ್ಕೆ ಸಾಧ್ಯವಾಗದೆ, ತಾತ್ಕಾಲಿಕವಾದ ಶೆಡ್‌ಗಳಲ್ಲಿ ಇರುವುದಕ್ಕೂ ಸಾಧ್ಯವಾಗದೆ, ಜನರು ಹೈರಾಣಾಗುತ್ತಿದ್ದಾರೆ. ಮಳೆ ಬಿದ್ದರೆ, ಶೆಡ್ ಗಳ ಸುತ್ತಲೂ ನೀರು ನಿಲ್ಲುತ್ತಿವೆ. ಲೇ ಔಟ್ ಗಳಲ್ಲಿನ ಮಳೆಯ ನೀರೆಲ್ಲೂ ಮನೆಗಳಿಗೆ ನುಗ್ಗುತ್ತಿವೆ. ಪರಿಶಿಷ್ಟ ಜಾತಿಯವರೇ ವಾಸವಾಗಿರುವ ಈ ಕಾಲನಿಯಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದರೂ ಇಲ್ಲಿನ ಜನರ ಪರಿಸ್ಥಿತಿಯನ್ನು ಕೇಳುವವರಿಲ್ಲ ಎಂದು ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಜಲಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಕೊಳಾಯಿಗಳನ್ನು ಅಳವಡಿಸುವುದಕ್ಕೆ ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಇದುವರೆಗೂ ಕೊಳಾಯಿಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆಗಳ ನಡುವೆ ಪೈಪ್‌ಗಳನ್ನು, ಎರಡು ಅಡಿಗಳಷ್ಟು ಉದ್ದ ಬಿಟ್ಟಿದ್ದು, ರಾತ್ರಿಯ ವೇಳೆ, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು, ಪೈಪ್‌ಗಳಿಂದಾಗಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಎರಡು ವರ್ಷಗಳಾದರೂ ಈ ಯೋಜನೆಯನ್ನು ಪೂರ್ಣಗೊಳಿಸದೆ, ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.
ಸ್ಥಳೀಯ ನಿವಾಸಿ ಮುನಿವೆಂಕಟರಾಮಪ್ಪ ಮಾತನಾಡಿ, ಶುದ್ಧಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿ, 8 ವರ್ಷಗಳು ಕಳೆದಿವೆ. ಇದುವರೆಗೂ ಅದರಲ್ಲಿ ಒಂದು ಬಿಂದಿಗೆ ನೀರು ಹಿಡಿಯುವುದಕ್ಕೆ ಸಾಧ್ಯವಾಗಿಲ್ಲ. ನಾವು ಕುಡಿಯುವ ನೀರಿಗಾಗಿ ಮುತ್ತೂರಿಗೆ ಹೋಗಬೇಕು, ಇಲ್ಲವೇ ದೇವನಹಳ್ಳಿ ತಾಲೂಕಿನ ಹರಳೂರು ನಾಗೇನಹಳ್ಳಿಗೆ ಹೋಗಿ ತರಬೇಕಾಗಿದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ನಮಗೆ ವಾರದಲ್ಲಿ ಎರಡು ಬಾರಿಯಾದರೂ ನೀರು ಪೂರೈಕೆ ಮಾಡಬೇಕು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಪಿಂಚಣಿ ಬರುತ್ತಿಲ್ಲ: ಮಳ್ಳೂರು ಗ್ರಾಮದ ಕಾಲನಿಯಲ್ಲಿ ಬಹಳಷ್ಟು ಮಂದಿ ವೃದ್ಧರಿಗೆ ಮಾಸಿಕ ಪಿಂಚಣಿ ಬರುತ್ತಿಲ್ಲ. ಅವರು, ಪ್ರತೀ ತಿಂಗಳು, ಬ್ಯಾಂಕಿಗೆ ಹೋಗಿ ವಾಪಸ್ ಬರುತ್ತಿದ್ದಾರೆ. ಪಿಂಚಣಿ ವಿಚಾರವಾಗಿ ಆಗಿರುವ ಸಮಸ್ಯೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬಗೆಹರಿಸಬೇಕು ಎಂದು ಸ್ಥಳೀಯ ನಿವಾಸಿ ನರೇಶ್ ಒತ್ತಾಯಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಅವರ ಬಳಿ ನೀರಿನ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಶೀಘ್ರವಾಗಿ ಶುದ್ಧಕುಡಿಯುವ ನೀರಿನ ಘಟಕವನ್ನು ಚಾಲನೆ ಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ.
-ಹೇಮಾವತಿ, ತಾಪಂ ಇಒ, ಶಿಡ್ಲಘಟ್ಟ
ಮಳ್ಳೂರಿನಲ್ಲಿ ಶುದ್ಧಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿರುವ ಜಾಗಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ವರದಿ ತರಿಸಿಕೊಂಡು ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಶುದ್ಧಕುಡಿಯುವ ನೀರಿನ ಘಟಕವನ್ನು ಶೀಘ್ರವಾಗಿ ಚಾಲನೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
-ಲೋಕೇಶ್, ಪ್ರಭಾರ ಎಇಇ, ಗ್ರಾಮೀಣ ಕುಡಿಯುವ ನೀರಿನ ವಿಭಾಗ, ಶಿಡ್ಲಘಟ್ಟ